ಗೋಕರ್ಣ. ಫೆ 27. ಒಳ್ಳೆಯವರಿಗೆ ಇದು ಕಾಲವಲ್ಲ ಎಂಬ ಮಾತು ಈಕಾಲದಲ್ಲಿ ಪ್ರಸಿದ್ಧ. ಆದರೆ ಈ ವಿಷಯವೇ ಸತ್ಯವಲ್ಲ, ಯಾಕೆಂದರೆ ಲೋಕದಲ್ಲಿ ಒಳಿತಿಗೆ ಒಳ್ಳೆಯವರಿಗೆ ಎಲ್ಲಕಾಲದಲ್ಲಿಯೂ ಪ್ರಾಶಸ್ತ್ಯವಿದ್ದೇ ಇದೆ.ಒಮ್ಮೆ ಸಜ್ಜನರಿಗೆ ಸಾತ್ವಿಕರಿಗೆ ಸ್ಥಾನವಿಲ್ಲವಾಗಿದ್ದರೆ ಪ್ರಪಂಚ ಇಂದು ನಾವು ಕಾಣುವಸ್ಥಿತಿಯಲ್ಲಿರುತ್ತಿರಲಿಲ್ಲ.ಒಳಿತಿಗೆ ಸಾರ್ವಕಾಲಿಕಪ್ರಸ್ತುತತೆಯಿದೆ ಎಂದಿ ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ. ಇಂದು ಗೋಕರ್ಣದ ಸಾಗರತೀರದ ಮಹರ್ಷಿದೈವರಾತವೇದಿಕೆಯಲ್ಲಿ ಶಿವರಾತ್ರಿಯ ಪುಣ್ಯಕಾಲದ ಧರ್ಮಸಭೆಯಲ್ಲಿ ದಿವ್ಯಸಾನ್ನಿಧ್ಯವನ್ನು ಅನುಗ್ರಹಿಸಿ ನಾಡಿನ ಪ್ರಸಿದ್ಧ ಸಹಕಾರಿಧುರೀಣ ರಾಜಕೀಯನೇತಾರ ಶ್ರೀ ರಾಮಚಂದ್ರ ಸೀತಾರಾಮ ಭಾಗವತ ಅವರಿಗೆ ಶ್ರೀಕ್ಷೇತ್ರಾಧೀಶನಾದ ಮಹಾಬಲೇಶ್ವರ ಅನುಗ್ರಹರೂಪವಾಗಿ “ಸಾರ್ವಭೌಮ” ಪ್ರಶಸ್ತಿಯನ್ನಿತ್ತು ಸಮ್ಮಾನಿಸಿ ಆಶೀರ್ವಚನವನ್ನು ನೀಡುತ್ತಿದ್ದ ಪೂಜ್ಯಶ್ರೀಗಳು ಪರಮಸಾತ್ವಿಕರೂ ಅಜಾತಶತ್ರುಗಳೂ ಆದ ಭಾಗವತರ ಸಾಮಾಜಿಕಸೇವೆ ಅತ್ಯಂತ ಸ್ತುತ್ಯರ್ಹ.ಈಗಾಗಲೇ ಅನೇಕಪ್ರಶಸ್ತಿಗಳು ಅವರನ್ನು ಹುಡುಕಿಕೊಂಡುಬಂದಿವೆ. ನೈಜಾರ್ಥದಲ್ಲಿ ಸಾರ್ಥಕತೆಯನ್ನು ಹೊಂದಿವೆ.ಇಂದಿಗೂ ಚೈತನ್ಯದಚಿಲುಮೆಯಾಗಿ ಸಾಮಾಜಿಕಸೇವೆಯಲ್ಲಿಯೇ ತಮ್ಮ ಬದುಕಿನ ಸಾರ್ಥಕ್ಯವನ್ನು ಕಾಣುತ್ತಿರುವ ಭಾಗವತರು ಇನ್ನೂ ಹೆಚ್ಚಿನ ಸೇವೆಯನ್ನು ಮಾಡುವಂತಾಗಲೆಂದು ಆಶಿಸಿದ ಶ್ರೀಗಳು ಶ್ರೀಮಠಕ್ಕೆ ಹಿಂದಿನ ಪೂರ್ವಾಚಾರ್ಯರಿಗೆ ಅತ್ಯಂತಸಮೀಪದಲ್ಲಿದ್ದು ತಲೆಮಾರುಗಳಿಂದಲೂ ಶ್ರೀಮಠದ ಪೀಠಾಧಿಪತಿಗಳ ಸೇವೆಮಾಡಿದ ಭಾಗವತರ ಹಾಗೂ ಅವರ ಪೂರ್ವಜರ ಸೇವಾಮನೋಭಾವವನ್ನೂ ಗುರುಭಕ್ತಿಯನ್ನೂ ಧರ್ಮಪರಾಯಣತೆಯನ್ನೂ ಪ್ರಶಂಸಿಸಿ ಭಾಗವತ ದಂಪತಿಗಳಿಗೆ ಆಯುರಾರೋಗ್ಯಬಾಗ್ಯವು ಲಭಿಸಲೆಂದು ಹಾರೈಸಿದರು.

 “ಸಾರ್ವಭೌಮ ವಿದ್ಯಾನಿಧಿ” ಯ ಘೋಷಣೆ

 ಇದೇ ಸಂದರ್ಭದಲ್ಲಿ ಪೂಜ್ಯಶ್ರೀಗಳು ಶ್ರೀದೇವಾಲಯದಿಂದ ಮುಂದಿನ ವರ್ಷದಿಂದ ಅರ್ಹವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶಕ್ಕಾಗಿ ಶ್ರೀದೇವಾಲಯದ ವತಿಯಿಂದ ಸಾರ್ವಭೌಮವಿದ್ಯಾನಿಧಿಯಿಂದ ಸೂಕ್ತವಾದ ಆರ್ಥಿಕವಾದ ಸಹಾಯವನ್ನು ನೀಡುವುದಾಗಿ ಘೋಷಿಸಿದರು. ಈ ಯೋಜನೆಗೆ ಹೊರರಾಜ್ಯದ ಅನೇಕಶಿಷ್ಯರು ತಮ್ಮ ಸಹಕಾರವನ್ನು ಘೋಷಿಸಿದ್ದು ನಾಡಿನ ಹಲವು ವಿದ್ಯಾಭಿಮಾನಿಗಳೂ ತಮ್ಮ ನೆರವನ್ನು ನೀಡುವುದಾಗಿ ಹೇಳಿದ್ದಾರೆಂದೂ ನುಡಿದು ಸಾಮಾಜಿಕವಾಗಿ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಸಮಾಜದ ಎಲ್ಲ ಅಂಗಗಳೂ ಔನ್ನತ್ಯಕ್ಕೇರಬೇಕೆಂಬುದೇ ತಮ್ಮ ಆಶಯವಾಗಿದೆಯೆಂದೂ ಸ್ಪಷ್ಟಪಡಿಸಿದರು. ಸಮ್ಮಾನವನ್ನು ಸ್ವೀಕರಿಸಿ ಮಾತಾಡಿದ ಶ್ರೀ ಭಾಗವತರು ಇದು ಪರಮಪವಿತ್ರವಾದ ಶ್ರೀಮಠದಿಂದ ಶ್ರೀಗುರುಗಳ ಮೂಲಕ ಅನುಗ್ರಹರೂಪವಾಗಿ ಬಂದ ಭಗವಂತನ ಪ್ರಸಾದ ಎಂದು ಭಾವಿಸಿ ಸಮ್ಮಾನವನ್ನು ಸ್ವೀಕರಿಸಿದ್ದಾಗಿ ಹೇಳಿದರು. ಕಾರ್ಯಕ್ರಮದ ಪ್ರಾರಂಭದಲ್ಲಿ ಶಂಖನಾದ, ಧ್ವಜಾರೋಹಣ ನಡೆದ ನಂತರ ಶಿವರಾತ್ರಿ ಉತ್ಸವ ಸಮಿತಿಯ ಅಧ್ಯಕ್ಷ ಡಾ. ವಿ. ಆರ್. ಮಲ್ಲನ್, ಶ್ರೀ ಮಹೇಶ ಶೆಟ್ಟಿ, ಡಾ. ಶೀಲಾ ಹೊಸ್ಮನೆ ದೇವಾಲಯದ ಆಡಳಿತ ಕಾರ್ಯದರ್ಶಿ ಶ್ರೀ ಜಿ.ಕೆ. ಹೆಗಡೆ ಮೊದಲಾದ ಗಣ್ಯರು ಶ್ರೀಗಳಿಗೆ ಫಲಮರ್ಪಣೆ ಮಾಡಿದರು. ಈ ಸಂದರ್ಭದಲ್ಲಿ ಕಾರವಾರದ ಬಿಎಸ್ಎನ್ ಎಲ್ ನಮಹಾಪ್ರಬಂಧಕ ಶ್ರೀ ಕೃಷ್ಣ ಶರ್ಮಾ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ಶ್ರೀ ನಿಸರಾಣಿ ರಾಮಚಂದ್ರ ಹೆಗಡೆಯವರು ಸಮ್ಮಾನಿತರ ಪರಿಚಯರೂಪವಾಗಿ ಶುಭಾಶಂಸನೆಯನ್ನು ಮಾಡಿದರು. ಶ್ರೀ ಆರ್.ಡಿ. ಶಾಸ್ತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು.

ಭಾವಚಿತ್ರಗಳು:

Facebook Comments Box