LIVE Channel

ಇತ್ತೀಚಿನ ಪ್ರತಿಕ್ರಿಯೆಗಳು

Newsletter

ಲೋಕದ ಮೊದಲ ಕಲಾವಿದ ಪರಶಿವ – ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಮಹಾಸ್ವಾಮಿಗಳು.

Author: ; Published On: ಬುಧವಾರ, ಫೆಬ್ರವರಿ 22nd, 2012;

Switch to language: ಕನ್ನಡ | English | हिंदी         Shortlink:

ಗೋಕರ್ಣ.೨೨ ಶೂನ್ಯವಾದ ಭಿತ್ತಿಯಲ್ಲಿ ಶೂನ್ಯದಕುಂಚದಿಂದಲೇ ಈ ಜಗತ್ತಿನ ರೂಪ, ಆಕೃತಿಗಳನ್ನು ವಿರಚಿಸಿದ ಸೃಷ್ಟಿಯ ಆದಿಕಲಾವಿದ ಪರಶಿವ. ಅವನು ಕೇವಲ ಕಲಾವಿದ ಮಾತ್ರವಲ್ಲ. ಕಲಾಧರನೂ ಹೌದು. ಅವನ ಅನುಗ್ರಹದಿಂದಲೇ ಇಂದು ಲೋಕದ ಕಲಾಪ್ರಪಂಚವು ಉಳಿದು ಬೆಳೆದು ಬರುತ್ತಿದೆ. ಬದುಕಿಗೆ ಸಂತೋಷವನ್ನು ನೀಡುವಕಲೆಗಳೆಲ್ಲವೂ ಭಗವಂತನ ಆರಾಧನೆಯ ಸಾಧನಗಳೇ. ಲೋಕಪ್ರಸಿದ್ಧವಾದ ಯಕ್ಷಗಾನ ಕಲಾ ಪ್ರಪಂಚಕ್ಕೆ  ಮೊಟ್ಟಮೊದಲ “ಪದ್ಮಶ್ರೀ” ಪ್ರಶಸ್ತಿಯನ್ನು ತಂದುಕೊಡುವ ಮೂಲಕ ಈ ಕಲೆಯ ಮಹತ್ವವನ್ನು ಜಗದಗಲಕ್ಕೆ ವಿಸ್ತರಿಸಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಕಲಾಸಕ್ತಿ ಅನ್ಯಾದೃಶ. ಇಂತಹ ಕಲಾವಿದ ನೂರು ಕಾಲ ಸುಖವಾಗಿದ್ದು ಸಮಾಜವನ್ನು ಸಮೃದ್ಧಗೊಳಿಸಲಿ ಎಂದು ಪರಮಪೂಜ್ಯ ಶ್ರೀ ಶ್ರೀಮದ್ರಾಘವೇಶ್ವರ ಭಾರತೀ ಶ್ರೀಗಳು ಹೇಳಿದ್ದಾರೆ.

ಇಂದು ಗೋಕರ್ಣದ ಸಾಗರತೀರದಲ್ಲಿನ “ರಾಮಕಥಾ” ವೇದಿಕೆಯಲ್ಲಿ ಶ್ರೀ ಮಹಾಬಲೇಶ್ವರನ ಅನುಗ್ರಹರೂಪವಾಗಿ  ಪ್ರತಿವರ್ಷ ನೀಡಲಾಗುವ “ಸಾರ್ವಭೌಮ” ಪ್ರಶಸ್ತಿಯನ್ನು ಶ್ರೀ ಚಿಟ್ಟಾಣಿ ರಾಮಚಂದ್ರಹೆಗಡೆಯವರಿಗೆ ಅನುಗ್ರಹಿಸಿ ಮಾತನಾಡುತ್ತಿದ್ದ ಪೂಜ್ಯಶ್ರೀಗಳು ಚಿಟ್ಟಾಣಿಯವರ ಗುರುಭಕ್ತಿ, ಈ ಇಳಿವಯಸ್ಸಿನಲ್ಲಿಯೂ ನಿರಂತರವಾಗಿ ಕೊಂಚವೂ ಅನಾದರವನ್ನು ತೋರದೆ ಕಲಾಸೇವೆಗೈಯ್ಯುತ್ತಿರುವ ಅವರ ಅನ್ಯಾದೃಶ ಬದ್ಧತೆಯನ್ನೂ ಪ್ರಶಂಸಿದರು.

ಸಮ್ಮಾನಕ್ಕೆ ಉತ್ತರಿಸಿ ಮಾತನಾಡಿದ ಶ್ರೀಚಿಟ್ಟಾಣಿಯವರು ಇಂದು ಗುರುದೇವರಿಂದ ಸಾಕ್ಷಾತ್ತಾಗಿ ಪರಶಿವನ ಅನುಗ್ರಹರೂಪವಾದ “ಸಾರ್ವಭೌಮ” ಪ್ರಶಸ್ತಿ ದೊರೆತಿದೆ. ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇರೆ ಯಾವುದೂ ಇಲ್ಲ. ಎಂದು ಹೇಳಿ ತನ್ನ ಈ ಸಾಧನೆಗೆ ಅಭಿಮಾನಿಗಳ ಪ್ರೇರಣೆ ಕಾರಣ ಹಾಗೆಯೆ ತನ್ನ ಅನುಪಸ್ಥಿತಿಯಲ್ಲಿಯೂ ಕುಟುಂಬದ ಜವಾಬ್ದಾರಿಯನ್ನು ಹೊತ್ತು ತನ್ನ ಹೊಣೆಯನ್ನು ಹಗುರಗೊಳಿಸಿದ ತನ್ನ ಶ್ರೀಮತಿಯವರ ಸಹಕಾರವೂ ಕಾರಣ ಎಂದು ನುಡಿದರು. ಶ್ರೀ ನಿಸರಾಣಿ ರಾಮಚಂದ್ರ  ಸಮ್ಮಾನಿತರ ಪರಿಚಯ ಮಾಡಿದರು.ಶ್ರೀ ಜಿ.ಕೆ ಹೆಗಡೆ ಸಭಾಪೂಜೆಯನ್ನು ನೆರವೇರಿಸಿದರು.

ಇದೇ ಸಂದರ್ಭದಲ್ಲಿ ಮಹಾಶಿವರಾತ್ರಿಯ ಕಾಲದಲ್ಲಿ ನಿರಂತರವಾಗಿ “ಅಮೃತಾನ್ನ” ಪ್ರಸಾದಭೋಜನದ ವ್ಯವಸ್ಥೆಗೆ ಉದಾರ ದಾನ ನೀಡಿದ ಶ್ರೀ ಚಿಂತಾಮಣಿ ಗಾಯತ್ರಿಯವರನ್ನೂ ಶ್ರೀಗಳು ಸಮ್ಮಾನಿಸಿ ಆಶೀರ್ವದಿಸಿದರು. ಕವಲಕ್ಕಿಯ ಚಿತ್ರಭಾರತೀ ವತಿಯಿಂದ ಪ್ರೊ.ಕೆ.ವಿ.ಹೆಗಡೆ ಯವರ ನೂತನ ಪದ್ಯಸಂಗ್ರಹದ ಸಿ.ಡಿ ಯು ಲೋಕಾರ್ಪಣೆಗೊಂಡಿತು. “ಸಂಕಲ್ಪ” ಸಂಸ್ಥೆಯ  ಶ್ರೀ ಪ್ರಮೋದ ಹೆಗಡೆ, ಡಾ.ವಿ.ಆರ. ಮಲ್ಲನ್ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇಂದು ಮಹಾಬಲೇಶ್ವರ ದೇವರ ರಥೋತ್ಸವವೂ ನಡೆಯಿತು.

 

Leave a Reply

Highslide for Wordpress Plugin