ಲೋಕದೊಳಿತಿಗೆ ವೇದ ಪಾರಾಯಣ

13661972_867430833388009_8498696787527102879_o

ಸನಾತನ ಆರ್ಯ ವೈದಿಕ ಪರಂಪರೆಯ ಅಡಿಪಾಯವೆಂದರೆ ವೇದಗಳೇ ಆಗಿವೆ. ಭಾರತ ದೇಶಕ್ಕೆ ಇಂದು ಪ್ರಪಂಚದಾದ್ಯಂತ ಗೌರವ ದೊರಕುತ್ತಿದೆಯೆಂದರೆ ಅದಕ್ಕೆ ಮೂಲ ಕಾರಣ ಭಾರತದ ಆತ್ಮವಾಗಿರುವ ವೇದಗಳೇ ಆಗಿವೆ. ವೇದಗಳು ಪ್ರಪಂಚದಲ್ಲಿರುವ ಎಲ್ಲಾ ಜನರಿಗೂ ಮಂಗಲವನ್ನು ಬಯಸುವುದಾಗಿದೆ. ಶಂನೋ ಅಸ್ತು ದ್ವಿಪದೇ ಶಂಚತುಷ್ಪದೇ ಎಂಬುದಾಗಿ ಎರಡು ಕಾಲಿರುವ ಮತ್ತು ನಾಲ್ಕು ಕಾಲಿರುವ ಎಲ್ಲಾ ಜೀವಿಗಳಿಗೂ ಅದು ಮಂಗಲವನ್ನು ಬಯಸುತ್ತದೆ. ಪ್ರಪಂಚದ ಇನ್ನಾವ ದೇಶದಲ್ಲೂ ಇಷ್ಟೊಂದು ವೈಶಿಷ್ಟ್ಯ ಪೂರ್ಣವಾದ ಸಾಹಿತ್ಯವನ್ನು ಕಾಣಲಾರೆವು. ಇದು ಅಪೌರುಷೇಯವಾದ ಸಾಹಿತ್ಯವಾಗಿದೆ. ವೇದಗಳನ್ನು ಯಾರೂ ರಚನೆ ಮಾಡಿದ್ದಲ್ಲ. ಸೃಷ್ಟಿಯ ಆರಂಭದಲ್ಲಿ ಭಗವಂತನ ನಿಃಶ್ವಾಸರೂಪದಲ್ಲಿ ಹೊರಹೊಮ್ಮಿದ ಪವಿತ್ರವಾದ ಸಾಹಿತ್ಯವಾಗಿದೆ. ಮಹರ್ಷಿಗಳು ತಮ್ಮ ತಪೋ ಭೂಮಿಕೆಯಲ್ಲಿ ಸಾಕ್ಷಾತ್ಕರಿಸಿಕೊಂಡವು. ಆದ್ದರಿಂದಲೇ ಅವರನ್ನು ಮಂತ್ರದ್ರಷ್ಟಾರರು ಎಂದು ಕರೆಯುತ್ತೇವೆ. ವೇದಗಳಿಗೆ ಶೋಧಕತ್ವ ಹಾಗೂ ಪಾವಕತ್ವ ಎಂಬ ಎರಡು ಶಕ್ತಿಗಳಿಗೆ. ನಮ್ಮಲ್ಲಿರುವ ದುರ್ಗುಣಗಳನ್ನು ದೂರಗೊಳಿಸಿ ಜನ್ಮಸಾರ್ಥಕ್ಯಕ್ಕೆ ಬೇಕಾದ ಅಂಶಗಳನ್ನು ಮಾತ್ರ ಉಳಿಸುವ ಶಕ್ತಿಗೆ ಶೋಧಕತ್ವ ಎಂದು ಹೆಸರು. ಹಾಗೆಯೇ ನಮ್ಮನ್ನು ಪವಿತ್ರಗೊಳಿಸುವ ಶಕ್ತಿಯೂ ವೇದಗಳಿಗಿವೆ. ಆದ್ದರಿಂದಲೇ ಅನಾದಿ ಕಾಲದಿಂದ ಇಂದಿನ ತನಕ ವೇದ ತನ್ನತನವನ್ನು ಉಳಿಸಿಕೊಂಡಿವೆ. ಕಾಶ್ಮೀರದಲ್ಲಿನ ವೇದ ಹಾಗೂ ಕನ್ಯಾಕುಮಾರಿಯಲ್ಲಿನ ವೇದ ಎರಡೂ ಕಡೆ ಇರುವ ವೇದಗಳೂ ಒಂದೇ ಆಗಿವೆ. ಅಲ್ಲಿ ಯಾವ ವ್ಯತ್ಯಾಸವೂ ಇಲ್ಲ. ಇದು ಗುರುವಿನಿಂದ ಶಿಷ್ಯನಿಗೆ ಶಿಷ್ಯನಿಂದ ಅವನ ಶಿಷ್ಯನಿಗೆ ಹೀಗೆ ಪರಂಪರೆಯಿಂದ ಬಂದದ್ದಾಗಿದೆ. ಹಿಂದೆ ಗುರುಕುಲಗಳಲ್ಲಿ ಈ ಪರಂಪರೆ ಇತ್ತು. ಆದರೆ ಬರಬರುತ್ತಾ ಕಾಲವಿಪರ್ಯಾಸದಿಂದಲೋ ಅಥವಾ ಜನರ ಅಸಡ್ಡೆತನದಿಂದಲೋ ತಿಳಿಯದು ವೇದಾಧ್ಯಯನ ಪರಂಪರೆ ಕ್ಷೀಣಿಸತೊಡಗಿತು. ನೂರಾರು ಶಾಖೆಗಳಿದ್ದ  ವೇದದ ಅನೇಕ ಶಾಖೆಗಳು ಇಂದು ಲುಪ್ತವಾಗಿವೆ. ಆದರೆ ಉಳಿದಿರುವಂಥಹ ಕೆಲವು ಭಾಗಗಳನ್ನಾದರೂ ಉಳಿಸಿ ಮುಂದಿನ ಪೀಳಿಗೆಗೆ ನೀಡುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ.

ವೇದದ ರಕ್ಷಣೆಯೆಂದರೆ ಅಧ್ಯಯನ ಅಧ್ಯಾಪನಗಳಿಂದ ಮಾತ್ರ ಸಾಧ್ಯ. ಆದ್ದರಿಂದ ವೇದಾಧ್ಯಯನ ಮಾಡಿದವರಿಗೆ ಸಮಾಜ ಪಾರಾಯಣಕ್ಕೆ ಅವಕಾಶವನ್ನೊದಗಿಸಿಕೊಟ್ಟಾಗ ಮಾತ್ರ ವೇದದ ರಕ್ಷಣೆ ಸಾಧ್ಯ. ಇದರ ರಕ್ಷಣೆ ಸಮಾಜದ ಹೊಣೆಗಾರಿಕೆಯೂ ಹೌ ದು. ಹಿಂದೆ ರಾಜಾಶ್ರಯವಿದ್ದ ಸಂದರ್ಭದಲ್ಲಿ ಮಹಾರಾಜರು ವೇದದ ರಕ್ಷಣೆಗಾಗಿ ನಾನಾ ಯೊಜನೆಗಳನ್ನು ಹಮ್ಮಿಕೊಳ್ಳುತ್ತಿದ್ದರು. ಆದರೆ ಬರಬರುತ್ತಾ ಅದು ಕಡಿಮೆಯಾಗುತ್ತಾ ಬಂದಿದೆ. ಆಗ ಮಠಗಳು ಇದರ ಹೊಣೆಗಾರಿಕೆಯನ್ನು ಹೊತ್ತುಕೊಂಡು ರಕ್ಷಣೆಗೆ ಮುಂದಾದವು. ಯಾರು ಚೆನ್ನಾಗಿ ಅಧ್ಯಯನ ಮಾಡಿರುತ್ತಾರೋ ಅವರನ್ನು ಗುರುತಿಸಿ ಗೌರವಿಸಿ ಅವರಿಗೆ ಪ್ರೋತ್ಸಾಹಿಸುವ ಕಾರ್ಯವನ್ನು ಮಾಡಲಾರಂಭಿಸಿದರು. ಪ್ರಕೃತದಲ್ಲಿ ರಾಮಚಂದ್ರಾಪುರ ಮಠಾಧೀಶರಾದ ಪೂಜ್ಯ ರಾಘವೇಶ್ವರಭಾರತೀ ಮಹಾಸ್ವಾಮಿಗಳು ತಮ್ಮ ಗೋಚಾತುರ್ಮಾಸ್ಯದ ಸಂದರ್ಭದಲ್ಲಿ ಕರ್ನಾಟದ ಮೂರ್ಧನ್ಯ ವೇದ ವಿದ್ವಾಂಸರನ್ನು ಆಹ್ವಾನಿಸಿ ಲೋಕದೊಳಿತಿಗಾಗಿ ವೇದಪಾರಾಯಣ ಸಪ್ತಾಹವನ್ನು ಆಯೋಜಿಸಿದ್ದಾರೆ. ವೇದಮೂರ್ತಿ ಪಳ್ಳತ್ತಡ್ಕ ಶಂಕರನಾರಾಯಣ ಭಟ್ಟ ಘನಪಾಠಿಗಳ ಅಧ್ಯಕ್ಷತೆಯಲ್ಲಿ ಸಮಸ್ತ ಕನ್ನಡಿಗರ ಕ್ಷೇಮಕ್ಕಾಗಿ ಆಯೋಜಿಸಿದ ಈ ಕಾರ್ಯಕ್ರಮ ೩೧-೦೭-೨೦೧೬ ರಂದು ಮುಕ್ತಾಯಗೊಂಡಿತು.ಒಟ್ಟಾರೆ ಸುಮಾರು ೮ ಜನ ಘನಪಾಠಿಗಳು ಹಾಗೂ ಸುಮಾರು ೫೦ ಜನ ವೈದಿಕರು ಭಾಗವಹಿಸಿದ್ದಾರೆ.

 

 

 

Facebook Comments