ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ಸಂಕಲ್ಪಿಸಿರುವ ವಿಷ್ಣುಗುಪ್ತ ವಿಶ್ವವಿದ್ಯಾಪೀಠಕ್ಕಾಗಿಯೇ ಸಮರ್ಪಿತವಾಗಿರುವ ಧಾರಾ~ರಾಮಾಯಣದ ಸಾರಾಂಶ:

ನಮ್ಮದೇ ವಸ್ತುಗಳಾದರೂ ನಾವು ಉಪಯೋಗಿಸಿದಾಗ ಒಂದಷ್ಟು ಪುಣ್ಯ ಖರ್ಚಾಗ್ತದೆಯಂತೆ. ನಮ್ಮ ವಸ್ತುಗಳನ್ನು ನಾವು ತ್ಯಾಗ ಮಾಡಿದಾಗ ಪುಣ್ಯ ಬರ್ತದೆ. ಬಳಸಿದಾಗ, ಸುಖ ಪಟ್ಟಾಗ ಆ ಪುಣ್ಯ ಖರ್ಚಾಗ್ತದೆ.
ಹೀಗಿರುವಾಗ ನಮ್ಮದಲ್ಲದ ವಸ್ತುವನ್ನು ನಾವು ತಂದು ಉಪಯೋಗಿಸಲಿಕ್ಕೆ ಮುಂದಾದರೆ ಪಾಪ ಬರ್ತದೆ.

ಮೂರು ದಾರಿಗಳು, ನಮ್ಮದೇ ವಸ್ತುವನ್ನು ನಾವು ಬಳಸಿದರೆ ಪುಣ್ಯವ್ಯಯ. ತ್ಯಾಗ ಮಾಡಿದರೆ ಪುಣ್ಯ ಪ್ರಾಪ್ತಿ.
ಅನ್ಯರ ವಸ್ತುಗಳನ್ನ ತಂದು ಬಳಸಿದರೆ ಪಾಪ ಪ್ರಾಪ್ತಿ. ಈ ಮೂರನೆಯ ದಾರಿಯಲ್ಲಿದ್ದಾನೆ ರಾವಣ. ಸೀತೆ ಅವನವಳಲ್ಲ. ರಾಮನಿಗೆ ಸೇರಿದವಳು. ರಾವಣ ಯಾವ ಕಾರ್ಯಕ್ಕೆ ಹೊರಟಿದಾನೋ ಅದಕ್ಕೆ ಧರ್ಮದ ಒಪ್ಪಿಗೆಯೂ ಇಲ್ಲ, ರಾಮನ ಒಪ್ಪಿಗೆಯೂ ಇಲ್ಲ, ಸೀತೆಯ ಒಪ್ಪಿಗೆಯೂ ಇಲ್ಲ. ಹೀಗಿರುವಾಗ ಒಂದು ಅಕಾರ್ಯಕ್ಕೆ ಮುಂದಾಗಿ ತದನುಗುಣವಾದ ಒಂದು ಮಾತನ್ನ ಸೀತೆಯಲ್ಲಿ ಆಡ್ತಾನೆ.

ವಾಲ್ಮೀಕಿಗಳು ಹೀಗೆ ಶುರು ಮಾಡ್ತಾರೆ. ಆ ಪತಿವ್ರತೆಗೆ, ತಪಸ್ವಿನಿಗೆ ರಾವಣನಾಡಿದ ಮಾತುಗಳು. ಯಾವ ಸಂತೋಷವೂ ಇಲ್ಲ. ದೈನ್ಯವಿದೆ. ರಾವಣನ ಪ್ರಕಾರ ಮಧುರವಾದ ವಾಕ್ಯಗಳು ಅವು. ರಾವಣನ ದುರ್ಭಾವ ವಾಕ್ಯರೂಪವನ್ನು ತಾಳಿದೆ. ಏನಪ್ಪಾ ಅದು ಅಂದ್ರೆ ನನ್ನನ್ನು ಕಂಡೊಡನೆ ಏಕೆ ನಿನ್ನನ್ನೇ ನೀನು ಮುಚ್ಚಿಕೊಳ್ಳುವೆ? ನಿನಗೇನು ಭಯ? ನೇರವಾಗಿ ಹೇಳಿದ. ಹೇ ವಿಶಾಲನೇತ್ರೆಯೇ ನಾನು ನಿನ್ನನ್ನು ಕಾಮಿಸುವೆ. ಪ್ರಿಯೇ ನನ್ನನ್ನು ನೀನು ಆದರಿಸು. ಸ್ವೀಕರಿಸು. ಯಾಕೆಂದರೆ ನೀನು ಸರ್ವಾಂಗ ಗುಣ ಸಂಪನ್ನೆ. ಸರ್ವಲೋಕ ಮನೋಹರೆ. ಭಯವಾ ಸೀತೆ ನಿನಗೆ? ಭಯಪಡಬೇಡ. ಯಾಕೆಂದರೆ ಇಲ್ಲಿ ಯಾರೂ ಮನುಷ್ಯರಿಲ್ಲ ನೋಡು. ರಾಕ್ಷಸಲೂ ಇಲ್ಲ. ನನ್ನಿಂದಲೇ ಭಯವಾ ನಿನಗೆ? ಬೇಡ, ಬಿಟ್ಟುಬಿಡು. ನನ್ನ ಕುರಿತು ನೀನು ಭಯಪಡಬೇಕಾಗಿಲ್ಲ. ಧರ್ಮಕ್ಕೆ ಭಯಪಡುವೆಯಾದರೆ ಅದು ಅಗತ್ಯವಿಲ್ಲ. ನಾನೇನು ಮಾಡ್ತಾ ಇದ್ದೇನೋ ಅದು ನನಗೆ ಸ್ವಧರ್ಮ. ನನಗೆ ಮಾತ್ರವಲ್ಲ. ರಾಕ್ಷಸರಿಗೆಲ್ಲ ಸ್ವಧರ್ಮ ಇದು. ವಂಚನೆಯಿಂದಲೋ, ಬಲಾತ್ಕಾರದಿಂದಲೋ ಪರಸ್ತ್ರೀಯರನ್ನು ಎತ್ತಿಕೊಂಡು ಬರುವಂಥದ್ದು, ಅವರನ್ನು ಹೊಂದುವಂಥದ್ದು ರಾಕ್ಷಸರಿಗೆ ಸ್ವಧರ್ಮ. ಇಷ್ಟಾದರೂ ಕೂಡ ನನ್ನ ಔದಾರ್ಯ ಏನು? ನಿನ್ನಲ್ಲಿ ಕಾಮನೆ ಇಲ್ಲದಿರುವ ಕಾರಣ ನಿನ್ನನ್ನು ಮುಟ್ಟುವುದಿಲ್ಲ. ಎಲ್ಲಿಯವರೆಗೆ ನಿನ್ನಲ್ಲಿ ಕಾಮನೆ ಉಂಟಾಗುವುದಿಲ್ಲವೋ ಅಲ್ಲಿಯವರೆಗೆ ನಿನ್ನನ್ನು ಮುಟ್ಟುವುದಿಲ್ಲ. ನನ್ನಲ್ಲಿ ಕಾಮದ ಎಷ್ಟು ತೀವ್ರಾಪೇಕ್ಷೆ ಉಂಟಾದರೂ ನಾನು ನಿನ್ನನ್ನು ಮುಟ್ಟುವುದಿಲ್ಲ. ಎಲ್ಲಿಯವರೆಗೆ ನೀನು ಸಮ್ಮತಿಸುವುದಿಲ್ಲವೋ ಅಲ್ಲಿಯವರೆಗೆ ನಿನ್ನನ್ನು ಮುಟ್ಟುವುದಿಲ್ಲ. ಔದಾರ್ಯವಲ್ಲ ಇದು. ರಾವಣನಿಗೆ ಶಾಪವಿದೆ. ತಲೆ ಏಳು ಚೂರಾಗಲಿ ಅಂತ. ಒಪ್ಪಿಗೆಯಿಲ್ಲದೇ ಸ್ತ್ರೀಯನ್ನು ಮುಟ್ಟಿದರೆ ತಲೆ ಏಳು ಚೂರಾಗ್ತದೆ ಅಂತ. ಮತ್ತೆ ಹೇಳ್ತಾನೆ. ಹೇ ಪ್ರಿಯೆ ಏನೂ ಭಯಪಡಬೇಡ. ನನ್ನಲ್ಲಿ ವಿಶ್ವಾಸವಿಡು. ನನ್ನಲ್ಲಿ ಪ್ರಣಯವನ್ನು ಮಾಡು. ನಿಜವಾಗಿ ನನ್ನಲ್ಲಿ ಪ್ರಣಯವನ್ನು ಮಾಡು. ಹೀಗೆ ಶೋಕ ಪಡಬೇಡ. ಪಾಪವಿಲ್ಲದೇ ಭಯಪಡಬೇಡ. ಇದೆಲ್ಲ ಸರಿಯಿಲ್ಲ ನೀನು ಮಾಡ್ತಿರುವಂಥದ್ದು. ಸರಿಯಾಗಿ ಜಡೆ ಬಿಡಿಸಿಲ್ಲ, ಎಂತಹಾ ರತ್ನಪೀಠಗಳಿವೆ ಅಶೋಕವನದಲ್ಲಿ ಅದನ್ನು ಬಿಟ್ಟು ನೆಲದಲ್ಲಿ ಮಲಗುವುದು, ನೆಲದಲ್ಲಿ ಕೂರುವುದು, ಚಿಂತಿಸುವುದು, ಮಲಿನ ವಸ್ತ್ರಧಾರಣೆ. ಎಂತೆಂತಹ ಭಕ್ಷ್ಯಭೋಜ್ಯಗಳು ನಿನ್ನನ್ನ ಕಾಯ್ತಾ ಇದಾವೆ, ಸುಮ್ಮಸುಮ್ಮನೆ ಉಪವಾಸ ಯಾಕೆ ಮಾಡ್ಬೇಕು? ಇದೆಲ್ಲ ನಿನಗೆ ತಕ್ಕುದಲ್ಲ. ತಕ್ಕುದು ಯಾವುದು? ಚಿತ್ರವಿಚಿತ್ರವಾದ ಮಾಲೆಗಳು, ಚಂದನ ಮೊದಲಾದಂತಹ ಪರಿಮಳ ದ್ರವ್ಯಗಳು, ದಿವ್ಯವಾದ ವಸ್ತ್ರಗಳು ಮತ್ತು ಆಭರಣಗಳು, ಇವೆಲ್ಲವನ್ನೂ ಸ್ವೀಕಾರ ಮಾಡಬೇಕು ನೀನು. ಮಾತ್ರವಲ್ಲ ನಮ್ಮಲ್ಲಿ ಬೇಕಾದಷ್ಟು ಪಾನಗಳಿವೆ ಸ್ವೀಕರಿಸು. ಎಂತೆತಹ ಮಂಚಗಳಿವೆ ಆಸನಗಳಿವೆ ಉಪಯೋಗಿಸು. ಗೀತ, ನೃತ್ಯ, ವಾದ್ಯ, ಇವೆಲ್ಲವೂ ನನ್ನನ್ನು ಹೊಂದಿದರೆ ನಿನಗೆ ಸಿಗ್ತವೆ. ನೀನು ಸ್ತ್ರೀರತ್ನ. ಯಾವುದೋ ಕಳಪೆ ಹೆಣ್ಣಲ್ಲ. ಸ್ತ್ರೀ ಜಾತಿಯಲ್ಲೆ ಶ್ರೇಷ್ಠವಾಗಿರುವಂಥವಳು ನೀನು. ಹಾಗಾಗಿ ನೀನು ಹೀಗಿರಬಾರದು. ಉತ್ಕೃಷ್ಟವಾದ ಆಭರಣಗಳನ್ನು ಹಾಕಿಕೊಳ್ಳಬೇಕು. ಇಂತಹ ಚೆಂದದ ರೂಪವುಳ್ಳ ನೀನು ಹೀಗಿರುವುದು ಸರಿಯಲ್ಲ. ನನ್ನಾಶ್ರಯಕ್ಕೆ ಬಂದ ಮೇಲೆ ನೀನು ಹೀಗಿರುವುದು ಸರಿಯಲ್ಲ.

ಒಂದು ದೊಡ್ಡ ಉಪದೇಶವನ್ನು ಮಾಡ್ತಾನೆ ರಾವಣ. ಈಗ ನಿನ್ನಲ್ಲಿರುವಂತಹ ಈ ಯೌವ್ವನವು ಕಳೆದು ಹೋಗಿಬಿಡ್ತದೆ. ಆಮೇಲೆ ನೀನು ಅತ್ತು ಪ್ರಯೋಜನವಿಲ್ಲ. ಛೇ! ರಾವಣ ಬಂದಿದ್ದ. ನಾನು ತಿರಸ್ಕರಿಸಿಬಿಟ್ನಲ್ಲ ಅವನನ್ನ ಎಂದು ನಾಳೆ ಪಶ್ಚಾತ್ತಾಪ ಪಡುವಂತೆ ಆಗಿಬಿಡ್ತದೆ. ಹಾಗಾಗಿ ಯೌವ್ವನವನ್ನು ಸುಮ್ಮನೆ ವ್ಯರ್ಥ ಮಾಡಿಕೊಳ್ಳಬೇಡ ಎಂದು ಹೇಳಿ ಅವಳ ರೂಪವನ್ನು ಕುರಿತು ಒಂದು ಸ್ತುತಿ ಮಾಡ್ತಾನೆ. ನಿನ್ನನ್ನು ಸೃಷ್ಟಿ ಮಾಡಿದ ಮೇಲೆ ಸೃಷ್ಟಿಕರ್ತ ವಿಶ್ರಾಂತಿ ತಗೊಂಡ್ಬಿಟ್ಟ. ಸೃಷ್ಟಿಕರ್ತನ ಸಕಲ ಕೌಶಲವೂ ನಿನ್ನ ಸೃಷ್ಟಿಯಲ್ಲಿದೆ. ಹಾಗಾಗಿ ನಿನ್ನ ರೂಪಕ್ಕೆ ಹೋಲಿಕೆ ಈ ಬ್ರಹ್ಮಾಂಡದಲ್ಲಿ ಬೇರೆ ಇಲ್ಲ. ಇನ್ನೊಂದು ಮಾತನ್ನ ಹೇಳ್ತಾನೆ. ನಿನ್ನನ್ನು ಕಂಡರೆ ಬ್ರಹ್ಮನೂ ಸುಮ್ಮನಿರಲಾರ. ಇನ್ನೊಂದು ಅಸಭ್ಯ ಮಾತನ್ನ ಹೇಳ್ತಾನೆ. ಈ ನಿನ್ನ ಪೂರ್ಣ ಸ್ವರೂಪದಲ್ಲಿ ದೃಷ್ಟಿ ಎಲ್ಲಿ ಹೋದರೂ ಕೂಡ ಅಲ್ಲಿ ನಿಬದ್ಧವಾಗ್ತದೆ. ಅಂತಹ ಒಂದು ಸರ್ವಾಂಗ ಸೌಂದರ್ಯ, ಸರ್ವಾಂಶ ಸೌಂದರ್ಯ ನಿನ್ನಲ್ಲಿದೆ. ಹಾಗಾಗಿ ಮೈಥಿಲಿ ನನ್ನ ಭಾರ್ಯೆಯಾಗು. ಈ ರಾಮ ಬೇಕು, ರಾವಣ ಬೇಡ ಎಂಬ ಮೋಹವನ್ನು ಬಿಡು. ದೊಡ್ಡ ಸಂಖ್ಯೆಯಲ್ಲಿರುವ ನನ್ನ ಉತ್ತಮ ಸ್ತ್ರೀಯರಿಗೆ ಅಗ್ರ ಮಹಿಷಿಯಾಗು.

ಪ್ರಪಂಚದಲ್ಲಿರುವ ಸರ್ವೋತ್ಕೃಷ್ಟ ವಸ್ತುಗಳೆಲ್ಲ ನನ್ನಲ್ಲಿದೆ. ದಿಗ್ವಿಜಯ ಮಾಡಿ ಜಗತ್ತಿನಲ್ಲಿರುವ ಉತ್ತಮೋತ್ತಮ ರತ್ನಗಳನ್ನ ನಾನು ಬಲಾತ್ಕಾರ ಮಾಡಿ ತಂದು ಇಲ್ಲಿಟ್ಟುಕೊಂಡಿದೇನೆ. ಅದೆಲ್ಲ ನಿನ್ನದು. ಈ ಲಂಕಾ ರಾಜ್ಯವೂ ನಿನ್ನದು. ನಾನೂ ನಿನಗೆ ಸೇರಿದವನು. ಇದಿಷ್ಟಕ್ಕೂ ನಿನ್ನದೇ ಅಧಿಪತ್ಯ. ಆಮೇಲೆ ಇನ್ನೊಂದು ವಿಶೇಷವಾದ ಪ್ರಸ್ತಾವನೆಯನ್ನು ಮಾಡ್ತಿದಾನೆ ರಾವಣ. ನೀನು ನನ್ನನ್ನು ಒಪ್ಪುವುದಾದರೆ ನಾನು ಇನ್ನೊಮ್ಮೆ ಜಗತ್ತನ್ನು ದಿಗ್ವಿಜಯ ಮಾಡಿ ಗೆದ್ದ ನಗರಗಳನ್ನು ನಾನು ಜನಕನಿಗೆ ಕೊಟ್ಟುಬಿಡ್ತೇನೆ. ಇಡೀ ಭೂಮಂಡಲವನ್ನು ಗೆದ್ದು ಜನಕನಿಗೆ ಕೊಟ್ಟುಬಿಡ್ತೇನೆ. ನಿನಗಾಗಿ. ಅದು ಹೇಗೆ ಸಾಧ್ಯ ಅಂತ ಯೋಚನೆ ಮಾಡ್ಬೇಡ. ನನಗೆ ಸಮಬಲರಾದವರು ಯಾರೂ ಇಲ್ಲ ಪ್ರಪಂಚದಲ್ಲಿ. ನೋಡು ನನ್ನ ಮಹಾವೀರತ್ವವನ್ನು. ಯುದ್ಧದಲ್ಲಿ ಪ್ರತಿಧ್ವನಿಯಿಲ್ಲ ಎಂಬ ನನ್ನ ಅಪ್ರತಿಮ ವೀರತ್ವವನ್ನು ಅವಲೋಕಿಸು. ಯುದ್ಧದಲ್ಲಿ ಎಷ್ಟು ಬಾರಿ ನಾನು ಸುರಾಸುರರನ್ನು ಸೋಲಿಸಿದೆನೋ… ನನ್ನೆದುರು ನಿಲ್ಲಲಾರದವರು, ದಿಕ್ಕುಗೆಟ್ಟು ಓಡಿದವರು. ಹಾಗಾಗಿ ಇವತ್ತು ಒಳ್ಳೆಯ ಮುಹೂರ್ತವಿದೆ. ಹಾಗಾಗಿ ನೀನು ಅಲಂಕಾರ ಮಾಡಿಕೋ ನಿನ್ನಿಷ್ಟದಿಂದ. ಉತ್ತಮವಾದ ಆಭರಣಗಳನ್ನು ಹಾಕಿಕೋ. ಆ ನಿನ್ನ ಅಲಂಕೃತ ರೂಪವನ್ನು ನೋಡಬೇಕು. ಬೇಕಾದ ಭೋಗವನ್ನು ಭೋಗಿಸು. ಮನಬಂದಂತೆ ಕುಡಿ, ರಮಿಸು. ದಶಕಂಠನ ಜೀವನವೆಲ್ಲ ಈ ನಾಲ್ಕರಲ್ಲಿದೆ, ಮನಬಂದಂತೆ ತಿನ್ನು, ಕುಡಿ, ರಮಿಸು. ಹೇಗೆ? ಅಂದ್ರೆ ಮನಬಂದಂತೆ. ಯಾವುದನ್ನು ತಿನ್ನಬಾರದೋ ಅದನ್ನೂ ತಿನ್ನು, ಯಾವುದನ್ನು ಕುಡೀಬಾರದೋ ಅದನ್ನೂ ಕುಡಿ, ಹೇಗೆ ರಮಿಸಬಾರದೋ ಹಾಗೆಯೂ ರಮಿಸು ಅಂತ. ಇನ್ನು ಯಾರು ಯಾರಿಗೆ ಏನನ್ನು ಬೇಕಾದ್ರೂ ಕೊಟ್ಟುಬಿಡ್ಲಿ, ರಾವಣನಿಗೆ ಪೂರ್ಣ ಸ್ವಾತಂತ್ರ್ಯ. ಭೂಮಿ ಕೊಡಬೇಕೋ? ಭೂಮಿ ಕೊಡು. ರತ್ನ ಕೊಡಬೇಕೋ? ರತ್ನ ಕೊಡು. ಸಂಪತ್ತು ಕೊಡಬೇಕೋ? ಸಂಪತ್ತೂ ಕೊಡು. ಇದೆಲ್ಲ ರಾಜ್ಯದ‌ ಕ್ಷೇಮಕ್ಕಿರೋದಿಲ್ಲ, ರಾವಣನ ಭೋಗಕ್ಕೆ ಇರೋದು ಎಲ್ಲವೂ ಕೂಡ. ಬೊಕ್ಕಸವಿರೋದು ರಾಜ್ಯದ ಹಿತಕ್ಕೋಸ್ಕರ. ಆದರೆ ಇಲ್ಲಿ ದಿಕ್ಕುತಪ್ಪಿದೆ.

‘ನನ್ನಲ್ಲಿ‌ ರಮಿಸು. ಮಾತ್ರವಲ್ಲ, ನನ್ನ ಮೇಲೆ ಅಧಿಕಾರ ವಾಣಿಯಿಂದ ಆಜ್ಞೆ ಮಾಡು, ಅದನ್ನು ಮಾಡ್ತೇನೆ ನಾನು. ನೀನು ಏನು ಮಾಡು ಅಂದ್ರೂ ಮಾಡ್ತೇನೆ’ ಎನ್ನುವ ಸ್ಥಿತಿಯಲ್ಲಿದ್ದಾನೆ ರಾವಣ. ಮಾತ್ರವಲ್ಲ,”ನಿನ್ನ ನೆಂಟರಿಷ್ಟರು ಯಾರಿದ್ದಾರೆ, ಅವರೆಲ್ಲರ ಪಟ್ಟಿ ಕೊಡು. ಅವರಿಗೆಲ್ಲ ಬೇಕು ಬೇಕಾದ್ದನ್ನು ಕೊಟ್ಟುಬಿಡ್ತೇನೆ. ನನ್ನ ಅನುಗ್ರಹದಿಂದ ನಿನ್ನ ಬಂಧು-ಬಾಂಧವರೆಲ್ಲ ಸುಖಿಸಲಿ, ಸಮೃದ್ಧಿಯನ್ನು ಹೊಂದಲಿ. ನನ್ನ ಸಮೃದ್ಧಿಯನ್ನು ನೋಡು. ಕಾಣ್ತಾ ಇಲ್ಲ ನಿನಗೆ! ಎಂಥಾ ಸಮೃದ್ಧಿ ಇದೆ ನನ್ನಲ್ಲಿ! ಆ ರಾಮನನ್ನು ತಗೊಂಡು ಏನು ಮಾಡ್ತಿ? ನೀನು ಸೌಭಾಗ್ಯವತಿ. ಅವನೋ? ನಾರುಬಟ್ಟೆಯನ್ನು ಉಟ್ಟವನು, ರಾಜ್ಯ, ಸಂಪತ್ತು ಕಳೆದುಕೊಂಡವನು, ವನವಾಸಿ. ದಿನ ಬೆಳಗಾದರೆ ವ್ರತವಂತೆ ಅವನದು! ನೆಲದಲ್ಲಿ ಮಲಗುವವನು. ಬದುಕಿದ್ದಾನೋ ಇಲ್ಲವೋ! ನನಗೇನೋ ಸಂಶಯ. ಹೇ ವೈದೇಹಿ, ನಾವು ರಾಕ್ಷಸರು ನಿನ್ನನ್ನು ಸುತ್ತುವರೆದ ಮೇಲೆ ನೀನು ರಾಮನಿಗೆ ನೋಡಲೂ ಸಿಗಲಾರೆ. ನನ್ನ ಕೈಯಿಂದ ರಾಮನು ನಿನ್ನನ್ನು ಮರಳಿ ಪಡೆದುಕೊಳ್ಳುವುದು ಅಸಂಭವ. ನೀನು ರಾಮನ ಆಶೆಯನ್ನು ಬಿಟ್ಟೇಬಿಡು.” ಒಂದಷ್ಟು ಸ್ತುತಿ‌ ಮಾಡ್ತಾನೆ. ಮತ್ತೆ ‘ನನ್ನ ಮನಸ್ಸನ್ನು ನೀನು ಅಪಹರಿಸ್ತಾ ಇದ್ದೀಯೇ, ಹೇಗೆ ಅಂದರೆ ಗರುಡನು ಹಾವನ್ನು‌ ಕದ್ದೊಯ್ದಂತೆ!!’

ರಾಕ್ಷಸ ಎಂದಿದ್ದರೂ ರಾಕ್ಷಸನೇ. ‘ನೀನು ಉಟ್ಟ ಕೌಷೇಯ (ರೇಷ್ಮೆ ಬಟ್ಟೆ) ಮಾಸಿ‌ ಹೋಗಿದೆ. ನೀನು ಕೃಶಳಾಗಿ ಹೋಗಿದ್ದೀಯೆ. ಯಾವ ಅಲಂಕಾರವನ್ನೂ ಮಾಡಿಕೊಂಡಿಲ್ಲ ನೀನು. ಹೀಗಿದ್ದರೂ ಕೂಡ ನಿನ್ನನ್ನು ನೋಡಿದರೆ ಸಾಕು, ನನ್ನ‌ ಏಳು ಸಾವಿರ‌ ಪತ್ನಿಯರಲ್ಲಿ ಯಾರೂ ಕೂಡ ಬೇಡ ಅಂತ ಆಗಿ ಬಿಡ್ತಾರೆ. ನಿನ್ನನ್ನು ನೋಡಿದ ಮೇಲೆ ಅವರಲ್ಲಿ‌ ನನಗೆ ಸಂತೋಷವಿಲ್ಲ…’

ಹೀಗಿರಬಾರದು ಮನುಷ್ಯ. ಇಂಥವರಿಗೆ ಇನ್ನೊಬ್ಬರ ಮನಸ್ಸು, ಸುಖ-ದುಃಖದ ಪ್ರಜ್ಞೆ ಇರೋದಿಲ್ಲ.

‘ಹಾಗಾಗಿ, ಆ ಎಳೂ ಸಾವಿರ ಸ್ತ್ರೀಯರನ್ನು ನಿನ್ನ ದಾಸಿಯರಾಗಿ ಮಾಡ್ತೇನೆ. ನಿನ್ನನ್ನು ಅವರೆಲ್ಲರ ಒಡತಿಯನ್ನಾಗಿ ಮಾಡ್ತೇನೆ. ನಿನ್ನ ಸೇವೆ ಮಾಡ್ತಾರವರು, ನಿನ್ನ ಪರಿಚರ್ಯೆ ಮಾಡ್ತಾರೆ. ಸೀತೆ, ಕುಬೇರನಲ್ಲಿ ಯಾವ ರತ್ನಗಳು, ಧನಗಳು ಇವೆಯೋ ಅವೆಲ್ಲ ನನ್ನಲ್ಲಿಯೂ ಕೂಡ ಇವೆ. ಅವೆಲ್ಲ ಮತ್ತು ‘ನಾನು’ ನಿನ್ನವರಾಗ್ತೇವೆ. ಎಲ್ಲವನ್ನೂ ಕೂಡ ಭೋಗಿಸು. ‘ರಾಮ ರಾಮ ರಾಮ’ ಅಂತ ಹೇಳ್ಬೇಡ. ರಾಮ ನನ್ನ ಸಮಾನನಲ್ಲ. ತಪಸ್ಸಿನಲ್ಲಿ ರಾಮ ನನಗೆ ಸಮಾನನೇ? ಅಲ್ಲ. ಬಲದಲ್ಲಿ ರಾಮ ನನಗೆ ಸಮಾನನೇ? ಅಲ್ಲ. ವಿಕ್ರಮದಲ್ಲಿ?‌ ಧನದಲ್ಲಿ? ತೇಜಸ್ಸಿನಲ್ಲಿ? ಯಶಸ್ಸಿನಲ್ಲಿ? ಯಾವುದರಲ್ಲಿಯೂ ‘ರಾಮ ನನಗೆ ಸಮಾನನಲ್ಲ’. ಕೊನೆಯಲ್ಲಿ ರಾವಣ ಸೀತೆಗೆ ಹೇಳಿದ್ದೇನು ಅಂತಂದ್ರೆ, ಒಂದು ‘ಕುಡಿ’. ಕುಡಿಸಬೇಕು‌ ಅನ್ನುವ ಆಸೆ ಇದೆ ಅವನಿಗೆ. ವಿಹರಿಸು, ರಮಿಸು, ಖುಷಿಪಡು, ಮೋಜು ಮಾಡು, ಭೋಗಿಸು, ದೊಡ್ಡ ಧನರಾಶಿ; ಬೇಡ, ಭೂಮಿಯನ್ನೇ ನಿನಗೆ ಕೊಟ್ಟು ಬಿಡ್ತೇನೆ. ನನ್ನನ್ನು ಪ್ರೀತಿ ಮಾಡು. ಹಾಗೇ, ನೀನು ನನ್ನನ್ನು ಲಾಲಿಸುವಾಗ ನಿನ್ನ‌ ಬಂಧು ಬಾಂಧವರನ್ನೆಲ್ಲ ಲಾಲಿಸಿ ಪಾಲಿಸಿ ಮಾಡ್ತೇನೆ. ಹಾಗೆಯೇ ಕಾನನಗಳಲ್ಲಿ ನಾನು-ನೀನು ವಿಹರಿಸೋಣ. ನೀನು ಕನಕ ಲಂಕೆಯ ಒಡತಿಯಾಗಿ ಬರಬೇಕು’ ಇಷ್ಟು ಅಸಂಬದ್ಧ ಪ್ರಲಾಪವನ್ನು ರಾವಣ ಮಾಡ್ತಾನೆ ಸೀತೆಯ ಮುಂದೆ.

ಸೀತೆ ಆ ಮಾತುಗಳನ್ನು ಕೇಳಿಸಿಕೊಂಡಳು. ಬೇರೆ ದಾರಿಯಿಲ್ಲ. ಆರ್ಥತೆ ಆವರಿಸಿತು ಅವಳನ್ನು. ಅವಳು ಪ್ರತ್ಯುತ್ತರವನ್ನು ಕೊಡ್ತಾಳೆ. ಸ್ವರದಲ್ಲಿ ದೈನ್ಯವಿತ್ತು. ಮಾತು ಮೆಲ್ಲಮೆಲ್ಲನೆ ಬರ್ತಾ ಇತ್ತು.‌ ಯಾಕೆಂದ್ರೆ ಒಂದು, ಊಟ ಇಲ್ಲ. ದುಃಖ ಇದೆ ತುಂಬಾ. ಚಿಂತೆ ಇದೆ, ಕಳವಳ ಇದೆ. ಇದೆಲ್ಲ ಸೇರಿದೆ. ಉತ್ಸಾಹ ಅಂತೂ ಇಲ್ಲವೇ ಇಲ್ಲ.
ಮಾತಿನ ಜೊತೆಯಲ್ಲಿ ಅಳುವೂ ಬಂತು.‌ ನಡುಗುತ್ತಾ ಇದ್ದಳು. ಆದರೂ ಮಾತನಾಡುವಾಗ ತನ್ನ ಮನಸ್ಸಿನಲ್ಲಿ ಕೇವಲ ಪತಿ ರಾಮನನ್ನೇ ನಿಲ್ಲಿಸಿಕೊಂಡಿದ್ದಳು.

ಮಾತನಾಡುವುದಕ್ಕಿಂತ ಮುನ್ನ ಒಂದು ಪ್ರಕ್ರಿಯೆಯನ್ನು ಮಾಡ್ತಾಳೆ. ಒಂದು‌ ಹುಲ್ಲುಕಡ್ಡಿಯನ್ನು ಮುಂದಿಟ್ಟು ಅದನ್ನು ನೋಡಿ ಮಾತಾಡ್ತಾಳೆ. ಯಾಕೆ ಅಂದರೆ, ಒಂದು ಕಾರಣ ‘ನೀನು ತೃಣ ಸಮಾನ’ ಅಂತ. ಇನ್ನೊಂದು, ‘ಪರಪುರುಷ, ಅದರಲ್ಲಿಯೂ ಕಾಮಿಯೊಂದಿಗೆ ನೇರವಾಗಿ ಮಾತನಾಡುವುದಿಲ್ಲ’ ಅಂತ. ಅವಳ‌ ಶೌರ್ಯ ಇಲ್ಲಿದೆ.‌ ಶೀಲ ಶೌರ್ಯ ಅದು. ಮಾತುಗಳು ತುಂಬ ಒಳ್ಳೆಯ, ಧರ್ಮ‌ ತುಂಬಿದ ಮಾತುಗಳು. ಮೊದಲು ಮಾತೇನು? ‘ಹಿಂದಿರುಗಿಸು ಮನಸ್ಸನ್ನು ನನ್ನಿಂದ’. ಎರಡನೇ ಮಾತು, ‘ಆ ಮನಸ್ಸನ್ನು ನಿನ್ನ ಹೆಂಡತಿಯರಲ್ಲಿ‌ ಇಡು’. ನನ್ನನ್ನು ಹೊಂದುವುದು ಆಮೇಲೆ. ನನ್ನನ್ನು ಬಯಸುವುದು‌ ಕೂಡ ತಪ್ಪು ನೀನು. ಪಾಪಿಗೆ ಶ್ರೇಷ್ಠ ಸಿದ್ಧಿ ಲಭಿಸದು. ನಾನು ಇಂಥಾ ಕಾರ್ಯವನ್ನು ಮಾಡಬಾರದು‌. ನಾನು ಏಕಪತ್ನೀ. ಒಬ್ಬನಿಗೇ ಪತ್ನಿ ನಾನು, ಇನ್ನೊಬನಿಗಲ್ಲ. ನನ್ನ ನಿಷ್ಠೆ ಒಬ್ಬನಿಗೇ, ಅದು ರಾಮನಿಗೆ ಮಾತ್ರ. ರಾಮನಿಗೂ ನಾನೊಬ್ಬಳೇ‌ ಪತ್ನಿ.‌ ಇನ್ನೊಬ್ಬಳಲ್ಲಿ‌ ಎಂದೂ ಮನಸಿಡದ ರಾಮ, ಹಾಗಾಗಿ ಆ ನಿಷ್ಠೆಗೆ ಪ್ರತಿನಿಷ್ಠೆ ತೋರದೆ‌ ಇದ್ದರೆ ನಾನು ಪತಿತಳಾಗ್ತೇನೆ. ಹಾಗಾಗಿ ಅದನ್ನು ಮಾಡಬಾರದು ನಾನು. ಮತ್ತೆ, ನಾನು ಚಂದ್ರಕುಲದಲ್ಲಿ ಹುಟ್ಟಿ ಸೂರ್ಯಕುಲವನ್ನು ಸೇರಿದವಳು, ಇಂಥಾ ಪಾಪದ ಕೆಲಸ ಮಾಡ್ತಾಳಾ?‌ ಮಾಡ್ಬೇಕಾ? ಇಲ್ಲ.’

ಇಷ್ಟು ಮಾತನ್ನು ಹೇಳುವಾಗ ಹುಲ್ಲುಕಡ್ಡಿಯ ಮುಂದೆ, ಅದರಾಚೆಗೆ ‌ರಾವಣ ಇದ್ದಿದ್ದು. ಇಷ್ಟು ಮಾತು ಆಡಿದ ಕೂಡಲೇ ಹಿಂದಿರುಗಿದಳಂತೆ‌ ಸೀತೆ. ರಾವಣನಿಗೆ‌ ಬೆನ್ನು ಮಾಡಿದಳು. ಯಾಕೆ? ಈ ಪಾಪಿಯನ್ನು ನೋಡುವುದು ತರವಲ್ಲ. ಈ ಪಾಪಿ ಎನ್ನನ್ನು ನೋಡುವುದೂ ತರವಲ್ಲ ಎನ್ನುವ ಭಾವದಲ್ಲಿ. ವಾವನ ದೃಷ್ಟಿ ಎಷ್ಟು ಮಾತ್ರಕ್ಕೂ ಸಹ್ಯವಲ್ಲ ಎನ್ನುವುದು ಗೊತ್ತಾಗ್ತದೆ. ‘ರಾವಣ, ನಾನು ನಿನಗೆ ಸತಿಯಲ್ಲ. ನಾನು ಪರ ಸ್ತ್ರೀ. ಯಾವುದು ಧರ್ಮವೋ ಅದನ್ನು ಮಾಡು. ರಾಮನ‌ ವ್ರತವನ್ನು ನಿಂದಿಸಿದೆಯಲ್ಲ, ನಿನಗೂ ವ್ರತ ಬೇಕು. ಹಾಗಾಗಿ, ಒಂದು ಚೌಕಟ್ಟಿನಲ್ಲಿ ಬದುಕು. ನಿಯಮ ಹಾಕಿಕೊ ಬದುಕಿಗೆ. ನಿನ್ನ ಹೆಂಡತಿಯರಿಗೆ ಹೀಗೆ ಆದರೆ ನೀನು ಒಪ್ತಿದ್ದೆಯಾ? ಒಂದು ವೇಳೆ ಮಂಡೋದರಿಯನ್ನು ಯಾರಾದರೂ ಎಳೆದುಕೊಂಡು ಹೋದರೆ ನೀನು ಒಪ್ಪುತಿದ್ದೆಯಾ ಅದನ್ನು? ಮಂಡೋದರಿಯು ತನ್ನ ಪತಿ ರಾವಣನಿಗೇ ಸಲ್ಲಬೇಕು ಎನ್ನುವ ನಿಯಮ ಏನಿದೆಯೋ ಅದೇ ಬರಲಿ ಇಲ್ಲಿಯೂ ಕೂಡ.

ನಿನ್ನ ಹೆಂಡತಿಗೆ ಒಂದು ನ್ಯಾಯ ಇನ್ನೊಬ್ಬರ ಹೆಂಡತಿಗೆ ಇನ್ನೊಂದು ನ್ಯಾಯವಿಲ್ಲ. ತನ್ನ ಸತಿಯ ಶೀಲವನ್ನು ರಕ್ಷಣೆ ಮಾಡಿದಂತೆ ಇನ್ನೊಬ್ಬರ ಸತಿಯ ಶೀಲವನ್ನೂ ರಕ್ಷಣೆ ಮಾಡುವುದು ಧರ್ಮ. ಇದೇ ಮಾತನ್ನು ಜಟಾಯುವು ಹೇಳಿದ್ದ ರಾವಣನಿಗೆ. ಯಾರು ತಮ್ಮಂತೆ ಪರರನ್ನು ನೋಡುತ್ತಾರೋ ಅವರಿಗೆ ಮಾತ್ರ ಕಣ್ಣು ಇರುವುದು. ನಿನ್ನ ಸತಿಯರು ಹೇಗಿರಬೇಕೆಂದು ಬಯಸುತ್ತೀಯೋ ಹಾಗೆಯೇ ಇನ್ನೊಬ್ಬರ ಸತಿಯೂ ಕೂಡ ಇರಬೇಕೆಂಬ ತೀರ್ಮಾನಕ್ಕೆ ಬರಬೇಕು ನೀನು. ಇನ್ನೊಂದು ಬುದ್ಧಿಮಾತನ್ನು ಹೇಳುತ್ತಾಳೆ. ತನ್ನ ವಸ್ತುಗಳಲ್ಲಿ ಯಾರಿಗೆ ಸಂತುಷ್ಟಿ ಇಲ್ಲವೋ, ಪರರ ವಸ್ತುಗಳನ್ನು ಬಯಸುತ್ತಾನೋ ಅವನು ಪತನವನ್ನು ಹೊಂದುತ್ತಾನೆ. ಚಲಿತೇಂದ್ರಿಯನಾಗಿರುವವನು, ಪರರ ಸತಿಯರನ್ನು ಬಯಸುವವನು ಆ ಸತಿಯರಿಂದಲೇ ನಾಶವನ್ನು ಹೊಂದುತ್ತಾನೆ. ಲಂಕೆಯಲ್ಲಿ ಯಾರೂ ಒಳ್ಳೆಯವರಿಲ್ಲವೇ? ಅಥವಾ ಆ ಸತ್ಪುರುಷರ ಮಾತನ್ನು ನೀನು ಅನುಸರಿಸುತ್ತಿಲ್ಲವೇ? ನಿನ್ನ ಬುದ್ಧಿ ನೋಡಿದರೆ ಸತ್ಪುರುಷರ ಪಥದಲ್ಲಿ ನೀನಿಲ್ಲವೆಂಬುದು ಸ್ಪಷ್ಟ. ಅಥವಾ ಅವರು ನಿನಗೆ ಒಳ್ಳೆಯ ಮಾತನ್ನು ಹೇಳಿಯೂ ನೀನು ಕೇಳುತ್ತಿಲ್ಲ. ಇದು ನಿಜ. ವಿಭೀಷಣ ಪ್ರತಿದಿನವೂ ಹೇಳುತ್ತಿದ್ದಾನೆ. ಇದು ಸರಿಯಲ್ಲ ಎಂದು. ಕೈಕಸೆ ಹೇಳುತ್ತಿದ್ದಾಳೆ. ಅಲ್ಲಿ ಒಳ್ಳೆಯ ಮಾತುಗಳನ್ನು ಹೇಳುವವರಿದ್ದರು. ಸತ್ಯವಂಥರು ಪಥ್ಯವಾದ ಮಾತುಗಳನ್ನು ಹೇಳಿದರೆ, ಅದನ್ನು ಕೇಳದಿದ್ದರೆ ರಾಕ್ಷಸರೆಲ್ಲರ ನಾಶ ಮುಂದೆ ಕಾದಿದೆ. ಲಂಕೆಗೆ ವಿಪತ್ತು ಕಾದಿದೆ. ಒಂದು ರಾಜನೀತಿಯನ್ನು ಹೇಳುತ್ತಾಳೆ. ರಾಜನು ಸಂಯಮವಂತನಾಗದೇ ಇದ್ದಾಗ ಅಂತಹ ರಾಜನನ್ನು ಹೊಂದಿದ ರಾಷ್ಟ್ರಗಳು ನಾಶಹೊಂದುತ್ತಾವೆ. ಲಂಕೆಗೆ ಆ ಯೋಗ ಕಾದಿದೆ. ನಿನ್ನೊಬ್ಬನ ಕಾರಣದಿಂದ ರತ್ನಸಂಕುಲವಾದ ಲಂಕೆ ನಾಶವಾಗುತ್ತದೆ. ಆ ದಿನ ಬಹಳ ದೂರವಿಲ್ಲ. ದೀರ್ಘದರ್ಶಿಯಲ್ಲದೇ ಸ್ವಯಂಕೃತ ಅಪರಾಧಗಳನ್ನು ಮಾಡಿದವರು ನಾಶವನ್ನು ಹೊಂದಿದಾಗ ಎಲ್ಲರೂ ಸಂತೋಷಪಡುತ್ತಾರೆ. ಅಂತಹ ಸಾವನ್ನು ಹೊಂದಬಾರದು. ನಿನ್ನಿಂದ ಅನ್ಯಾಯಕ್ಕೊಳಪಟ್ಟವರು ಆ ದಿನ ಬಂತು ಕಷ್ಟ ಇವನಿಗೂ ದೇವರು ದೊಡ್ಡವನೆಂದು ಸಂಭ್ರಮಿಸುತ್ತಾರೆ. ಹಾಲು ಕುಡಿಯುತ್ತಾರೆ. ಭ್ರಮೆ ಬಿಡು. ಈ ಐಶ್ವರ್ಯದಿಂದ ನನ್ನನ್ನು ಲೋಭಗೊಳಿಸಲು ಸಾಧ್ಯವಿಲ್ಲ.

ನಾನು ರಾಮನಿಂದ ಬೇರೆಯಲ್ಲ. ಬೇರೆಯಾಗುವುದೂ ಇಲ್ಲ. ಸೂರ್ಯನೂ ಸೂರ್ಯಪ್ರಭೆಯೂ ಹೇಗೋ ನಾವೂ ಹಾಗೇ. ರಾಮನು ಸೂರ್ಯನಾದರೆ ನಾನು ಪ್ರಭೆ. ಸೂರ್ಯನಿಂದ ಪ್ರಭೆ ಬೇರೆಯಾಗುವುದಿಲ್ಲ. ರಾಮನ ಭುಜದ ಮೇಲಿಟ್ಟ ತಲೆಯನ್ನು ತೆತ್ತೇನು ಆದರೆ ಇನ್ನೊಬ್ಬರ ಭುಜದ ಮೇಲೆ ಇಡಲಾರೆ. ನಾನು ರಾಮನಿಗೆ ಧರ್ಮಪತ್ನಿ. ಅವನಿಗೆ ಮಾತ್ರವೇ ಧರ್ಮಪತ್ನಿ. ಇನ್ಯಾರಿಗೂ ಅಲ್ಲ. ನಿನಗೆ ನನ್ನನ್ನು ಸಂತೋಷಪಡಿಸುವುದೇ ಉದ್ದೇಶವಾದರೆ ನನ್ನನ್ನು ರಾಮನೊಡನೆ ಸೇರಿಸು. ನಿನಗೆ ರಾಜನೀತಿಯ ಗಂಧವಾದರೂ ಇದ್ದರೆ ರಾಮನನ್ನು ಮಿತ್ರನನ್ನಾಗಿ ಮಾಡಿಕೋ. ಆಗ ನೀನು ಸಾಯುವುದು ತಪ್ಪುತ್ತದೆ. ರಾಮ ಸ್ವೀಕರಿಸಿಯಾನೇ ಎಂಬ ಚಿಂತೆ ಬೇಡ. ಅವನು ಶರಣಾಗತವತ್ಸಲ. ನೀನು ಹೋಗಿ ಶರಣಾದರೆ ಅವನು ಅನುಗ್ರಹಿಸುತ್ತಾನೆ. ನೀನು ಬದುಕಬೇಕೆಂದರೆ ನನ್ನನ್ನು ರಾಮನಿಗೆ ಒಪ್ಪಿಸಿ ಶರಣಾಗು. ಇಲ್ಲವಾದರೆ ಸಾವು ಕಾದಿದೆ. ಇಂದ್ರನ ವಜ್ರಾಯುಧದಿಂದ ಕೂಡಾ ಬದುಕಬಹುದು. ಅಂತಕನಿಂದ ಬಹುಕಾಲ ದೂರ ಉಳಿಯಬಹುದು ಆದರೆ ರಾಮ ಬಿಡಲಾರ. ನಿನ್ನಂಥ ದುಷ್ಟನನ್ನು ಬಿಡಲಾರ. ನೀನು ನನ್ನನ್ನು ಬಿಡದಿದ್ದರೆ ಕೆಲವೇ ಸಮಯದಲ್ಲಿ ರಾಮನ ಘೋರವಾದ ಧನುಸ್ಸಿನ ಠೇಂಕಾರವನ್ನು ಕೇಳುತ್ತೀಯೆ. ಅಲ್ಪ ಕಾಲದಲ್ಲಿ ರಾಮ-ಲಕ್ಷ್ಮಣರ ಹೆಸರು ಬರೆದ ಬಾಣಗಳನ್ನು ಲಂಕೆಯಲ್ಲಿ ಕಾಣುತ್ತೀಯೆ. ಆ ಕಾಲದಲ್ಲಿಯೂ ಲಿಪಿಯಿತ್ತು. ಅಂತಹ ಬಾಣಗಳು ಲಂಕೆಯ ಗೋಪುರಗಳನ್ನು ಕೆಡಹುವುದನ್ನು ಕಾಣುತ್ತೀಯೆ. ಲಂಕೆಯಲ್ಲಿ ಇನ್ಯಾರೂ ಸಂಚಾರ ಮಾಡಲು ಸಾಧ್ಯವಿಲ್ಲ. ಆ ಬಾಣಗಳು ಸಂಚರಿಸುತ್ತಿರುತ್ತವೆ. ರಾಕ್ಷಸರನ್ನು ಕೊಂದು ಕೆಡಗುತ್ತಾ ಆ ಬಾಣಗಳು ಸಂಚರಿಸುತ್ತಿರುತ್ತಾವೆ. ನೀನು ಹೇಳಿದ ಹಾಗೆ ಗರುಡ ಸರ್ಪವನ್ನು ಅಪಹರಿಸಿದಂತೆ ಹೌದು. ಆದರೆ ರಾಮನೆಂಬ ಮಹಾಗರುಡ ರಾಕ್ಷಸೇಂದ್ರ ಸರ್ಪವನ್ನು ಅಪಹರಿಸಿಕೊಂಡು ಹೋಗುತ್ತದೆ. ಅಲ್ಲಿಗೆ ಸಲ್ಲುವ ಉದಾಹರಣೆ ಅದು. ನಿನ್ನ ಸಾಧನೆಯೇನು? ಜನಸ್ಥಾನದಲ್ಲಿ 14,000 ರಾಕ್ಷಸರನ್ನು ರಾಮನು ಕೊಂದಮೇಲೆ ಅಶಕ್ತನಂತೆ ಅವರಿಬ್ಬರೂ ಇಲ್ಲದ ಆಶ್ರಮವನ್ನು ಪ್ರವೇಶಿಸಿ ಕಳ್ಳನಂತೆ ನನ್ನನ್ನು ಕದ್ದೊಯ್ದೆಯಲ್ಲ, ಅವರ ಗಂಧವನ್ನು ಆಘ್ರಾಣಿಸಿದರೆ ನೀನು ಅಲ್ಲಿರುತ್ತಿರಲಿಲ್ಲ. ಹುಲಿಯ ಗಂಧ ಬರುವಲ್ಲಿ ನಾಯಿಗಳು ಇರುವುದಿಲ್ಲ. ಇದು ಆಗಿನ ಕಥೆ. ಮುಂದೆಯಾದರೂ ಕೂಡಾ ರಾಮ-ಲಕ್ಷ್ಮಣರು ಲಂಕೆಗೆ ಬಂದರೆ ನೀನು ಅವರೆದುರು ನಿಲ್ಲಲು ಸಾಧ್ಯವಿಲ್ಲ. ಬೇಸಿಗೆಯ ಸೂರ್ಯನು ಸರೋವರದ ನೀರನ್ನು ಕುಡಿದು ಒಣಗಿಸುವಂತೆಯೇ ರಾಘವನು ನಿನ್ನ ಪ್ರಾಣವನ್ನು ಹೀರಿಯಾನು. ಬೇಕಾದರೆ ಕೈಲಾಸಪರ್ವತಕ್ಕೆ ಓಡು. ಎಲ್ಲಾದರೂ ಅಡಗು. ರಾಮನ ಬಾಣದಿಂದ ನೀನು ತಪ್ಪಿಸಿಕೊಳ್ಳಲಾರೆ. ಸಿಡಿಲು ಮಹಾವೃಕ್ಷವನ್ನು ಬುಡಮೇಲು ಮಾಡುವಂತೆ ರಾಮನ ಬಾಣಗಳು ನಿನ್ನನ್ನು ಸರ್ವನಾಶ ಮಾಡಿಯಾವು ಎಂಬ ಸೀತೆಯ ಮಾತುಗಳು ರಾವಣನಿಗೆ ಒರಟಾದವು.

ಆಗ ಅವನು ಸೀತೆಗೆ ಅಪ್ರಿಯವಾದ ಮಾತುಗಳನ್ನಾಡಿದ. ಲೋಕದ ಎಲ್ಲಾ ಸ್ತ್ರೀಯರು ಅವರನ್ನು ಹೊಗಳಿದರೆ, ಸಂತೈಸಿದರೆ ಆ ಪುರುಷನನ್ನು ಪ್ರೀತಿಸುತ್ತಾರೆ. ಆದರೆ ನಾನು ನಿನಗೆ ಎಷ್ಟೆಷ್ಟು ಪ್ರಿಯ ವಚನಗಳನ್ನಾಡುತ್ತೇನೋ ಅಷ್ಟು ಕೆಟ್ಟ ಮಾತುಗಳನ್ನು ನೀನು ನನಗಾಡುತ್ತೀಯೆ. ನನ್ನನ್ನು ಅವಮಾನ ಮಾಡುತ್ತೀಯೆ. ಲೋಕದಲ್ಲಿಲ್ಲದ ಪರಿಯಿದು. ಸೀತೆಯು ಲೋಕದ ಎಲ್ಲಾ ಹೆಂಗಸರಂತೆ ಅಲ್ಲ. ಸಾಮಾನ್ಯವಾಗಿ ಹೊಗಳಿದಾಗ ಅನೇಕರು ಮರುಳಾಗುತ್ತಾರೆ. ನೀನು ನನ್ನನ್ನು ಹೊಗಳಿದಷ್ಟೂ ತಿರಸ್ಕರಿಸುತ್ತಿದ್ದೀಯೆ. ನನ್ನಲ್ಲಿ ಕಾಮ-ಕ್ರೋಧಗಳೆರಡೂ ಎದ್ದು ಬರುತ್ತಿವೆ. ಕ್ರೋಧವು ನಿನ್ನನ್ನು ಕೊಲ್ಲು ಎಂದರೆ ಕಾಮವು ಆ ಕ್ರೋಧವನ್ನು ನಿಯಂತ್ರಿಸುತ್ತಿದೆ. ಕಾಮವೆಂದರೆ ವಾಮ. ಏಕೆಂದರೆ ಯಾರಲ್ಲಿ ಕಾಮ ಉಂಟಾಗುವುದು ಅವರಲ್ಲಿ ಪ್ರೀತಿ ಬರುತ್ತದೆ. ಹಾಗಾಗಿ ಅವರಿಗೆ ಕೆಟ್ಟದ್ದನ್ನು ಮಾಡಲು ಆಗುವುದಿಲ್ಲ. ಈ ಕಾರಣಕ್ಕಾಗಿ ನಾನು ನಿನ್ನನ್ನು ಕೊಲ್ಲುತ್ತಿಲ್ಲ. ಅಲ್ಲದಿದ್ದರೆ ನೀನು ವಧೆಗೆ ಅರ್ಹಳು. ನೀನು ಸುಳ್ಳೇ ವ್ರತ ಮಾಡುತ್ತಿದ್ದೀಯೆ. ನೀನಾಡಿದ ಒಂದೊಂದು ಮಾತಿಗೂ ನಿನ್ನನ್ನು ಕೊಲ್ಲಬೇಕು. ಕಾಮ ನನ್ನನ್ನು ಅಡ್ಡೈಸುತ್ತಿರುವುದರಿಂದ ನಾನು ಹಾಗೆ ಮಾಡುವುದಿಲ್ಲ ಎಂದು ಸಿಟ್ಟಿನಿಂದ ಉರಿದು ಸೀತೆಗೆ ಹೇಳಿದ. ನಾನು ನಿನಗೆ ಒಂದು ವರ್ಷ ಅವಧಿ ಕೊಟ್ಟಿದ್ದೆ. ಹತ್ತು ತಿಂಗಳು ಕಳೆದಿದೆ. ಇನ್ನೆರಡು ತಿಂಗಳಲ್ಲಿ ನೀನು ನನ್ನನ್ನು ಪತಿಯಾಗಿ ಒಪ್ಪದಿದ್ದರೆ 366ನೇ ದಿನದ ಬೆಳಗಿನ ತಿಂಡಿಯ ತರಕಾರಿ ನೀನು. ತಯಾರಿರು. ಸೀತೆಯಂಥಾ ಸೀತೆಗೆ ಹೀಗೆಲ್ಲಾ ಹೇಳುತ್ತಿದ್ದಾನೆ. ಶೂರ್ಪನಖಿಯೂ ಅಷ್ಟೇ. ನೀನೇ ನನ್ನ ವಲ್ಲಭ ಎಂದಳು. ಒಪ್ಪದಿದ್ದಾಗ ರಾಮನು ಬದುಕಿರುವಾಗಲೇ ಅವನ ಬಿಸಿರಕ್ತವನ್ನು ಕುಡಿಯಬೇಕು ಎಂದು ಖರನಲ್ಲಿ ಕೇಳಿದಳು. ಆ ತಂಗಿಗೆ ಈ ಅಣ್ಣ ಸರಿಯಾಗಿದ್ದಾನೆ. ನಿಜವಾದ ಪ್ರೀತಿ ಹೇಗಿರುತ್ತದೆ ಎಂದರೆ ಅವರು ಚೆನ್ನಾಗಿರಲಿ ಎಂದು ಬಯಸಬೇಕು. ಅವರು ನಮ್ಮೊಟ್ಟಿಗಿರಲಿ ಅಥವಾ ಇಲ್ಲದಿರಲಿ ಚೆನ್ನಾಗಿರಲಿ ಎಂದು ಬಯಸಬೇಕು. ಹಾಗೆ ಬಯಸದಿದ್ದಾಗ ಅದು ಪ್ರೀತಿಯಲ್ಲ. ಕೊಲೆ ಪ್ರೀತಿ ಅದು. ದೆವ್ವವು ಯಾರನ್ನಾದರೂ ಪ್ರೀತಿಸಿದರೆ ಅವನೂ ದೆವ್ವವಾಗುತ್ತಾನೆ. ಹಾಗೆ ಇದು. ಪ್ರೀತಿಯಲ್ಲ ಭೀತಿ.

ಈ ಪ್ರೀತಿ ತೆಗೆದುಕೊಂಡು ಮಾಡೋದಾದರೂ ಏನು…? ಇಲ್ಲೊಂದು ಸ್ವಾರಸ್ಯ ನಡೆಯಿತು. ರಾವಣನು ಸೀತೆಯನ್ನು ಹೀಗೆ ಬೈದು, ಭಂಗಿಸುವಾಗ ಸಾಕ್ಷಿಗಳಾಗಿದ್ದವರು ಯಾರು…? ರಾವಣನ ಸತಿಯರು ಅಂದರೆ ದೇವಗಂಧರ್ವಕನ್ಯೆಯರು, ಯಕ್ಷಸತಿಯರು ಎಲ್ಲ ಬಂದಿದ್ದರು, ಅವರು ನೋಡ್ತಾ ಇದ್ದಾರೆ ರಾವಣನ ಕ್ರೌರ್ಯ ಹಾಗೂ ಸೀತೆಯ ಶೌರ್ಯವನ್ನು. ಅವರಿಗೂ ನೋವಾಯಿತು, ಬೇಜಾರಾಯಿತು. ಆ ಸತಿಯರು, ಸೀತೆಯನ್ನು ಸಂತೈಸಿದರು. ಕೆಲವರು ತುಟಿಯಿಂದ, ಕಣ್ಣಿಂದ, ಹುಬ್ಬಿಂದ ಸೀತೆಯನ್ನು ಸಂತೈಸಿದರು. ರಾಮಾಯಣದ ಒಂದು ಸುಂದರಭಾಗ. ದೇವಗಂಧರ್ವ ಕನ್ಯೆಯರಲ್ಲಿ ದೇವತ್ವ ಇದೆ. ಅನಿವಾರ್ಯದಿಂದ ಅಲ್ಲಿದಾರೆ, ರಾವಣನನ್ನೊಪ್ಪಿ ಅಲ್ಲ. ಅವರಿಗೆ ಸರಿ ಅಲ್ಲ ಅನ್ನಿಸಿದೆ. ಹಾಗಾಗಿ ಸೀತೆಯ ದುಃಖದಲ್ಲಿ ಆ ದೇವಗಂಧರ್ವ ಕನ್ಯೆಯರು ದುಃಖ ಪಡ್ತಾರೆ. ಸೀತೆಯನ್ನು ಸಂತೈಸಿದರು. ಸೀತೆಯೂ ಗಮನಿಸಿದಳು. ಧೈರ್ಯಬಂತು ಸೀತೆಗೆ. ಸಮಾಧಾನವಾಯಿತು. ಅಂತೂ ತನಗೂ ಯಾರಾದರೂ ಇದಾರಲ್ಲ ಎಂಬ ಭಾವ ಬಂತು ಸೀತೆಗೆ. ಗಮನಿಸಿ, ರಾಕ್ಷಸಿಯರ ಪೈಕಿಯಲ್ಲಿ ಒಂದಿಬ್ಬರು ಸೀತೆಯ ಪರವಾಗಿದ್ದರು. ಸೀತೆಗೆ ಧೈರ್ಯಬಂತು. ದುಡ್ಡಿನ, ಬಾಹುಬಲದ ಶೌರ್ಯವಲ್ಲ, ಶೀಲಶೌರ್ಯ.

ನಂತರ ರಾವಣನಿಗೆ ಮರುತ್ತರ ಕೊಟ್ಟಳು, “ನಿನಗೆ ಒಳ್ಳೆಯ ಬುದ್ಧಿಯನ್ನು ಹೇಳುವವರು ಯಾರೂ ಇಲ್ಲವಾ? ನಿನ್ನು ಪಾಪ ಕಾರ್ಯಗಳನ್ನು ಕಳೆಯುವವರು ಯಾರೂ ಇಲ್ವಾ? ಧರ್ಮಾತ್ಮ ರಾಮನ ಪತ್ನಿ ನಾನು. ನನ್ನಂಥವಳನ್ನು ರಾಮನು ಬಿಟ್ಟರೆ ಬೇರಾರೂ ಮನಸಿಂದ ಕೂಡ ಬಯಸೋದಿಲ್ಲ. ರಾಕ್ಷಸಾಧಮ ನೀನು. ರಾಮನೇನು ನೀನೇನು? ಅವನ ಮುಂದೆ ಮೊಲ ನೀನು. ನೀಚ ನೀನು. ಇಕ್ಷ್ವಾಕು ಕುಲನಂದನನ ನಿಂದಿಸ್ತೀಯಾ ನೀನು, ಅವನ ಕಣ್ಮುಂದೆ ನಿಲ್ಲುವ ಎದೆಗಾರಿಕೆ ಇಲ್ಲ..! ಹೇಡಿ. ರಾಮನನ್ನು ನಿಂದಿಸಲು ನಿನಗೇನು ಅಂತಸ್ತಿದೆ. ಈ ನಿನ್ನ ಕ್ರೂರ ಕಣ್ಣುಗಳು ವಿರೂಪ ನನ್ನನ್ನು ನೋಡಿದೆಯಲ್ಲಾ… ಏ ಅನಾರ್ಯ ಯಾಕೆ ನೀನು ಭೂಮಿಯಲ್ಲಿ ಬಿದ್ದು ಹೋಗಲಿಲ್ಲ.. ಧರ್ಮಾತ್ಮನ ರಾಮನ ಪತ್ನಿ ದಶರಥನ ಸೊಸೆಯ ಬಗ್ಗೆ ಏನೆಲ್ಲ ಅಶ್ಲೀಲವಾಗಿ ಮಾತನಾಡಿದೆಯಲ್ಲ, ಯಾಕೆ ನಿನ್ನ ನಾಲಿಗೆ ಸೀಳಿಹೋಗಲಿಲ್ಲ ಎಂದು ಸೀತೆ ರಾವಣನಿಗೆ ಮರುತ್ತರವನ್ನು ಕೊಟ್ಟು, ನಿನ್ನನ್ನು ಸುಟ್ಟು ಹಾಕುವ ತಪಸ್ಸು ನನ್ನಲ್ಲಿ ಇದೆ, ಆದರೆ ನನ್ನ ತಪಸ್ಸು ಕೂಡ ರಾಮನ ಸ್ವತ್ತು, ರಾಮನು ಹೇಳುವವರೆಗೆ ನಾನು ಈ ಕೆಲಸವನ್ನು ಮಾಡುವುದಿಲ್ಲ ಮತ್ತು ತಪಸ್ಸಿನ ಪಾಲನೆಯ ಧರ್ಮದ ಪ್ರಕಾರ ಶಾಪವನ್ನು ಕೊಡಬಾರದು ಎಂದು ಹೇಳಿದಳು. ನನ್ನನ್ನು ಅಪಹಾರ ಮಾಡಲು ನಿನ್ನಿಂದ ಸಾಧ್ಯವಿರಲಿಲ್ಲ, ಸಾವು ನಿನಗೆ ಕಾದಿದ್ದರಿಂದ ನನ್ನನ್ನು ಅಪಹಾರ ಮಾಡಿದೆ ಎಂದು ರಾವಣನಿಗೆ ಹೇಳಿದಳು. ಹೇಡಿ! ವೈಶ್ರವಣನ ತಮ್ಮನಾಗಿಯು, ಸೇನೆಯಿದ್ದರು, ಅಷ್ಟೆಲ್ಲ ಶಕ್ತಿಯಿದ್ದರೂ ಏಕೆ ನೀನು ಕಳ್ಳನಾದೆ ..? ಪರಸತಿಯನ್ನು ಕದಿಯುವ ಕಳ್ಳ ಹೇಗಾದೆ.? ಎಂದು ಸೀತೆಯು ರಾವಣನನ್ನು ಜಾಡಿಸಿದಳು.

ಸೀತೆಯ ಮಾತನ್ನು ಕೇಳಿದ ರಾವಣನು ಏನು ಮಾಡಲಾರದೆ ತನ್ನ ಅಗಲವಾದ ಕಣ್ಣುಗಳಿಂದ ಅವಳನ್ನೇ ನೋಡಿದನು. ದೊಡ್ಡ ಆಕಾರ, ಉಬ್ಬಿದ ಬುಜಗಳು, ದೊಡ್ಡ ತಲೆ, ಬೆಂಕಿಯಂತೆ ಇರುವ ನಾಲಿಗೆ ಮತ್ತು ಕಣ್ಣುಗಳು ರಾವಣನ ಆ ಕ್ಷಣದ ಲಕ್ಷಣಗಳಾಗಿದ್ದವು. ರಾವಣನು ಸಿಟ್ಟಿನಿಂದ ನಡುಗುತ್ತಿರುವಾಗ ಕಿರೀಟದ ತುದಿಯು ಕುಣಿಯುತ್ತಿತ್ತು. ಕೆಂಪುಮಾಲೆ, ಕಿರೀಟ, ಅಂಗದ, ಕೇಯೂರ ಮುಂತಾದ ಸರ್ವಾಲಂಕಾರ ಭೂಷಿತನಾದ ರಾವಣನು ಸಮುದ್ರ ಮಥನ ಸಂದರ್ಭದಲ್ಲಿನ ಮಂದರ ಪರ್ವತದಂತೆ ಕಾಣುತ್ತಿದ್ದನು. ರಾವಣನ ಎರಡು ಬುಜಗಳು ಮಂದರ ಪರ್ವತದ ಶಿಖರದಂತೆ ಕಾಣುತ್ತಿತ್ತು. ರಾವಣನ ಎರಡು ಕುಂಡಲಗಳು ಬೆಟ್ಟದ ಇಕ್ಕೆಲಗಳಲ್ಲಿ ಹೂಬಿಟ್ಟ ಅಶೋಕ ವೃಕ್ಷಗಳಂತೆ ಕಾಣುತ್ತಿತ್ತು. ಬಹಳ ಹೂಮಾಲೆಗಳಿಂದ ಅಲಂಕರಿಸಲ್ಪಟ್ಟ ಸ್ಮಶಾನದಂತೆ ರಾವಣನು ಕಾಣುತ್ತಿದ್ದನು ಎಂದು ವಾಲ್ಮೀಕಿಗಳು ವರ್ಣಿಸಿದ್ದಾರೆ. ಸ್ಮಶಾನದ ಮಧ್ಯೆ ಇರುವ ಗುಡಿಯನ್ನು ಎಷ್ಟೇ ಚೆಂದ ಅಲಂಕಾರ ಮಾಡಿದರೂ ಅದು ಭಯಂಕರವಾಗಿ ಕಾಣುತ್ತದೆ ಹೊರತು ಮಂಗಲಕರವಾಗಿ ಕಾಣಲಾರದು. ಹಾಗೆಯೇ ರಾವಣನು ಧರಿಸಿದ ಅಭರಣಗಳೆಲ್ಲವೂ ಸ್ಮಶಾನದಂತೆ ಕಂಡವು. ರಾವಣನು ಸಿಟ್ಟು ತಡೆಯಲಾರದೆ ದೀರ್ಘ ಉಸಿರನ್ನು ಬಿಡುತ್ತಿದ್ದನು. ಆ ನೀತಿಗೆಟ್ಟ, ಸ್ವಲ್ಪವು ಬುದ್ದಿ ಮತ್ತು ಸಂಪತ್ತಿಲ್ಲದ ರಾಮನ ಹಿಂದೆ ಇರಲು ಬಯಸುವೆಯಾ.? ಈಗ ನಿನ್ನನ್ನು ಕೊಂದೆ ಬಿಡುತ್ತೇನೆ ಎಂದು ಸೀತೆಯ ಮುಂದೆ ಘರ್ಜಿಸಿದನು. ರಾವಣನು ಸೀತೆಯನ್ನು ಕೊಲ್ಲುವುದಕ್ಕೆ ಮುಂದಾದರೂ ಕೊಲ್ಲುವುದಿಲ್ಲ ಎಂದು ವಿಭೀಷಣನು ಹೇಳಿದ್ದನು. ನಂತರ ರಾವಣನು ಒಂದು ಕಣ್ಣಿನ, ಒಂದು ಕಿವಿಯ, ತಲೆ ಮುಚ್ಚಿದ, ಎತ್ತಿನ ಕಿವಿಯ, ಆನೆಯ ಕಿವಿಯ, ಜೋತಾಡುವ ಕಿವಿಯವಳು, ಕಿವಿಯೇ ಇಲ್ಲದವಳು, ಆನೆ ಕಾಲಿನವಳು, ಕುದುರೆ ಕಾಲಿನವಳು, ಗೋರಸುಳ್ಳ ಕಾಲಿನವಳು, ಪಾದದಲ್ಲಿ ಜಡೆಯುಳ್ಳವಳು, ಒಂದೇ ಕಾಲುಳ್ಳವಳು, ದೊಡ್ಡ ಕಾಲಿನವಳು, ಕಾಲೇ ಇರದವಳು, ದೊಡ್ಡ ಕುತ್ತಿಗೆಯವಳು, ದೊಡ್ಡ ತಲೆಯವಳು, ದೊಡ್ಡ ಕಣ್ಣುಳ್ಳವಳು, ದೊಡ್ಡ ತಲೆಯುಳ್ಳವಳು, ಊದ್ದ ನಾಳಿಗೆಯವಳು, ಮೂಗಿಲ್ಲದೆ ಇರುವವಳು, ಚಿನ್ನದ ಮುಖವುಳ್ಳವಳು, ಹಂದಿ ಮುಖವುಳ್ಳವಳು ಇಂತಹ ವಿಚಿತ್ರ ರಾಕ್ಷಸಿಯರಿಗೆ ರಾವಣನು ಬಹುಬೇಗ ಸೀತೆ ನನ್ನ ವಶವಾಗುವಂತೆ ಮಾಡಿ ಎಂದು ಅಪ್ಪಣೆ ಮಾಡಿದನು.
ಒಬ್ಬೊಬ್ಬರು ಸೇರಿದರೆ ಈ ಕೆಲಸ ಆಗುವುದಿಲ್ಲ, ಎಲ್ಲರೂ ಸೇರಿ ಮಾಡಿ ಎಂದು ರಾವಣನು ಹೇಳುತ್ತಾನೆ. ಸಾಮ–ಗಾನ–ಬೇಧ ಎಲ್ಲವನ್ನು ಅನುಸರಿಸಿ ಸೀತೆಯು ತನ್ನ ವಶವಾಗುವಂತೆ ಮಾಡಲು ಹೇಳುತ್ತಾನೆ. ಮೊದಲು ಪ್ರೀತಿಯಿಂದ ಹೇಳಿ, ಕೇಳದಿದ್ದರೆ ಬೆದರಿಸಿ, ಆಗಲೂ ಕೇಳದೆ ಇದ್ದರೆ ದಂಡ ಪ್ರಯೋಗ ಮಾಡಿಯಾದರೂ ನನ್ನ ಪತ್ನಿಯಾಗುವಂತೆ ಮಾಡಿ ಎಂದು ರಾವಣನು ರಾಕ್ಷಸಿಯರಿಗೆ ಹೇಳಿದನು. ಆದರೂ ಸಮಾಧಾನ ಆಗದಿದ್ದಾಗ ರಾವಣನು ಸೀತೆಯನ್ನು ಬೈಯುತ್ತಲೇ ನಿಂತಿದ್ದನು. ಆಗ ರಾವಣನಲ್ಲಿ ಕಾಮ ಮತ್ತು ಕ್ರೋಧಗಳೆರಡು ಸೇರಿದ್ದವು. ಸೀತೆಯು ಲಂಕೆಯಲ್ಲಿರುವ ಅಶೋಕಾವನದಲ್ಲಿ ರಾವಣನ ವಶದಲ್ಲೇ ಇದ್ದರೂ ಏನು ಮಾಡಲಾಗಲಿಲ್ಲ. ಸೀತೆ ರಾವಣನನ್ನು ಪರಾಭವಗೊಳಿಸಿದ ರೀತಿ ಅದ್ಭುತವಾಗಿತ್ತು. ರಾವಣನನ್ನು ರಾಮನು ಸೋಲಿಸುವ ಮೊದಲೇ ಸೀತೆಯು ಸೋಲಿಸಿದ್ದಳು. ಒಂದು ಗೆರೆಯಿಂದ ಕೂಡ ಸೀತೆಯು ರಾವಣನೆಡೆಗೆ ಹೋಗಲಿಲ್ಲ. ಸೀತೆಯ ಚಿಂತೆ ಹಿಡಿದು ರಾವಣನೇ ಕೃಶನಾದ ಎಂದು ಯುದ್ಧಕಾಂಡದಲ್ಲಿ ವಾಲ್ಮೀಕಿಗಳು ವರ್ಣಿಸಿದ್ದಾರೆ. ಹೀಗೆ ಸೀತೆಯನ್ನು ರಾವಣನು ಗದರಿಸುತ್ತಿರುವಾಗ ಅವನ ಪತ್ನಿಯಲ್ಲೊಬ್ಬಳಾದ ಮತ್ತು ಅತಿಕಾಯನ ತಾಯಿಯಾದ ದಾನ್ಯಮಾಲಿನಿ ಇದ್ದಕ್ಕಿದ್ದ ಹಾಗೆ ಮುಂದೆ ಬಂದು ಸೀತೆ ಮಾಸಿ ಹೋಗಿದ್ದಾಳೆ, ಅವಳದ್ದು ಮನುಷ್ಯ ಜಾತಿ, ನಮ್ಮ ಜಾತಿ ಕೂಡ ಅಲ್ಲ, ದೈನ್ಯ ತಾಳಿದ ಅವಳು ಯಾಕೆ ..? ನಮ್ಮೊಡನೆ ವಿಹರಿಸು ಎಂದು ರಾವಣನಿಗೆ ಹೇಳಿದಳು. ನಿನ್ನ ದಿವ್ಯಾಭರಣಗಳನ್ನು ಮತ್ತು ಸಂಪತ್ತುಗಳನ್ನು ಅನುಭವಿಸುವ ಯೋಗ ಇವಳಿಗಿಲ್ಲ, ಅವಳನ್ನು ಬಿಡು, ಕಾಮವಿಲ್ಲದವರನ್ನು ಕಾಮಿಸಲು ಹೊರಟಾಗ ದುಃಖವೇ ಫಲವಾಗುತ್ತದೆ ಎಂದು ಹೇಳಿದಳು. ಎಷ್ಟೇ ಹೇಳಿದರೂ ರಾವಣ ಕೇಳದಿದ್ದಾಗ ದಾನ್ಯಮಾಲಿನಿಗೆ ಸಹಿಸಲಾಗಲಿಲ್ಲ. ನಂತರ ಮಂದೋದರಿ ಬಂದು ರಾವಣನಿಗೆ ಬುದ್ದಿ ಹೇಳಿದಳು. ರಾವಣನು ಹಿಂದುರಿಗಿ ಹೋಗುವಾಗ ದೊಡ್ಡ ಅಟ್ಟಹಾಸದಿಂದ ನಕ್ಕಿದನು. ರಾವಣನು ಮನೆಗೆ ಹೋಗುವಾಗ ಅಶೋಕಾವನ ಮಾತ್ರ ಅಲ್ಲ, ಭೂಮಿಯೇ ಕಂಪಿಸಿದಂತೆ ಕಾಣುತಿತ್ತು. ಸೂರ್ಯನ ಪ್ರಭೆಯಿರುವ ಮನೆಯನ್ನು ರಾವಣನು ಹೊಕ್ಕಾಗ ಅವನ ಹಿಂದೆ ದೇವ ಕನ್ಯೆಯರು, ಗಂಧರ್ವ ಕನ್ಯೆಯರು ರಾವಣನ ಜೊತೆಯಲ್ಲಿ ಮನೆಯನ್ನು ಪ್ರವೇಶ ಮಾಡಿದರು. ರಾವಣನನ್ನು ಕಂಡರೆ ಜಿಗುಪ್ಸೆ ಪಡುವ ಸೀತೆಯನ್ನು ಅಷ್ಟೆಲ್ಲ ಪೀಡೆ ಕೊಟ್ಟರು ಏನು ಮಾಡಲಾಗದೆ ರಾವಣನು ಹಿಂದುರಿಗಿದ ಮೇಲೆ ರಾಕ್ಷಸಿಯರು ಸೀತೆಯನ್ನು ಮುತ್ತಿದರು.

ಮುಂದೇನಾಯಿತು …? ಎಂಬುದನ್ನು ಶ್ರೀಸಂಸ್ಥಾನದವರ ಮುಂದಿನ ಪ್ರವಚನದಲ್ಲಿ ಕೇಳೋಣ.

ಪ್ರವಚನವನ್ನು ಇಲ್ಲಿ ಕೇಳಿರಿ:


 

ಪ್ರವಚನವನ್ನು ನೋಡಲು:

Facebook Comments