ಗಣೇಶಚತುರ್ಥಿ – 05.09.2016
ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರ ಗೋಚಾತುರ್ಮಾಸ್ಯದ ಶುಭಸಂದರ್ಭದಲ್ಲಿ ಗಣೇಶಚತುರ್ಥಿಯ ನಿಮಿತ್ತ ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಶಾಖಾಮಠದಲ್ಲಿ ವಿಶೇಷ ಕಾರ್ಯಕ್ರಮಗಳು ನಡೆದವು. ಸಂಪೂರ್ಣವಾಗಿ ಗೋಮಯವನ್ನು ಮಾತ್ರ ಬಳಸಿ ತಯಾರಿಸಲಾದ ವಿಶಿಷ್ಟ ಗಣಪತಿಗೆ ಪ್ರಾಣ ಪ್ರತಿಷ್ಠೆ, ಪೂಜ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳಿಂದ ಗೋ-ಗಣಪತಿಗೆ ವಿಶೇಷ ಪೂಜೆ ನೆರವೇರಿತು. ಗಣೇಶಚತುರ್ಥಿಯ ಅಂಗವಾಗಿ ಮಹಾಗಣಪತಿ ಹವನ, ಕ್ಷಿಪ್ರಗಣಪತಿ ಹವನ, ಸಹಸ್ರ ಅಪ್ಪ(ಅಪೂಪ) ಸೇವೆ, ಸಹಸ್ರದೂರ್ವಾಚನೆ, ಅಥರ್ವಶೀರ್ಷ ಪಾರಾಯಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನವಾದವು.
“ಸಂಗೀತ – ಸಂದೇಶ” ಎಂಬ ವಿಶಿಷ್ಟ ಸಭಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿದ ಶ್ರೀಗಳು, ವಿವಿಧ ಪುರಾಣಗಳಲ್ಲಿ ಗಣಪತಿಯ ಜನನಕ್ಕೆ ಸಂಬಂಧಿಸಿ ಇರುವ ವಿಷಯಗಳನ್ನು ಉಲ್ಲೇಖಿಸಿ ಮಾತನಾಡಿ, ಗಣಪತಿ ಹಾಗೂ ಸ್ಕಂದನ ಮಧ್ಯೆ ಎಲ್ಲ ತೀರ್ಥಗಳ ಸಂದರ್ಶನದ ಸ್ಪರ್ಧೆ ಏರ್ಪಟ್ಟಿತು. ಆಗ ಸ್ಕಂದ ತೀರ್ಥಗಳ ಸಂದರ್ಶನಕ್ಕೆ ಹೊರಟ,ಆದರೆ ಗಣಪತಿ ತಂದೆ ತಾಯಿಯರಲ್ಲೇ ಎಲ್ಲಾ ಪುಣ್ಯತೀರ್ಥ ಗಳನ್ನು ಭಾವಿಸಿ ಅವರಿಗೇ ಪ್ರದಕ್ಷಿಣೆ ಮಾಡಿದ. ಈ ಮೂಲಕ ಗಣಪತಿ ಜಗತ್ತಿಗೆ ನೀಡಿದ ಸಂದೇಶ ತಂದೆತಾಯಿಯರಲ್ಲಿ ದೇವರನ್ನು ಕಾಣಬೇಕು, ತಂದೆ ತಾಯಿಗಳನ್ನು ಚನ್ನಾಗಿ ನೋಡಿಕೊಳ್ಳದೇ, ಬೇರೆ ಏನೇ ಒಳ್ಳೆಯ ಕಾರ್ಯಗಳನ್ನು ಮಾಡಿದರೂ ಅದು ನಿಷ್ಪ್ರಯೋಜಕ ಎಂದರು.
ಪೂಜಿಸುವ ಗಣಪತಿಗೆ ವಿಷ ಹಚ್ಚಿದರೆ, ಗಣಪತಿಯಾದರೂ ಅಮೃತವನ್ನು ಹೇಗೆ ಕೊಡಲು ಸಾಧ್ಯ ಎಂದ ಶ್ರೀಗಳು, ರಾಸಯನಿಕಯುಕ್ತವಾದ, ಜಲಚರಗಳಿಗೆ ಮಾರಕವಾದ ವಸ್ತುಗಳನ್ನು ಗಣಪತಿಯ ತಯಾರಿಕೆಯಲ್ಲಿ ಬಳಸಬಾರದು, ಹಾಗೆಯೇ ಗಣಪತಿಯ ಆರಾಧನೆಯ ಹೆಸರಿನಲ್ಲಿ ಕರ್ಕಶ ಸಂಗೀತ, ಎಲ್ಲೆಂದರಲ್ಲಿ ಗಣೇಶನನ್ನು ಕೂರಿಸುವುದು, ಗಣಪತಿ ಕೂರಿಸಿ ಚಂದಾ ಎತ್ತುವುದು ಸಲ್ಲ ಎಂದು ಅಭಿಪ್ರಾಯಪಟ್ಟರು.
“ಸಂಗೀತ – ಸಂದೇಶ” ಕಾರ್ಯಕ್ರಮದಲ್ಲಿ ಶ್ರೀಗಳು ಗಣಪತಿಯ ಕುರಿತು ಮಾತನಾಡಿದರೆ, ಅಮೃತವರ್ಷಿಣಿ ಸಂಗೀತ ಶಾಲೆಯ ವಿದುಷಿ ಜಯಲಕ್ಷ್ಮಿ ಹಾಗೂ ವಿದ್ಯಾರ್ಥಿಗಳಿಂದ ಗಣಪತಿಗೆ ಸಂಬಂಧಿತ ಗಾಯನ ನಡೆಯಿತು. ಸಭಾಕಾರ್ಯಕ್ರಮದಲ್ಲಿ ಶ್ರೀಭಾರತೀ ಪ್ರಕಾಶನವು ಹೊರತಂದ ಗೋಕಥಾ ಹಾಗೂ ಸಾಧನಾ ಪಂಚಕ ದೃಶ್ಯಮುದ್ರಿಕೆಗಳು ಲೋಕಾರ್ಪಿತವಾದವು. ಕಲಾರಾಮ ವೇದಿಕೆಯಲ್ಲಿ ನೃತ್ಯಕಲಾ ಅಕಾಡೆಮಿಯ ಅಧ್ಯಕ್ಷರಾದ ಗಂಗಮ್ಮಾ ಕೇಶವಮೂರ್ತಿ ಇವರಿಂದ ಗಮಕ ಹಾಗೂ ಶ್ರೀದೇವಿ ಬಡಜ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.
ಸಂಪೂರ್ಣವಾಗಿ ಗೋಮಯವನ್ನು ಮಾತ್ರ ಬಳಸಿ, ನೈಸರ್ಗಿಕವಾದ ಕೇಸರಿ, ಸುಣ್ಣ ಹಾಗೂ ಶುದ್ಧ ಅರಿಸಿಣ – ಕುಂಕುಮ ಮುಂತಾದ ಬಣ್ಣಗಳನ್ನು ಮಾತ್ರ ಉಪಯೋಗಿಸಿದ ಗಣಪತಿಯನ್ನು ಪೂಜಿಸುವ ಮೂಲಕ ಶ್ರೀರಾಮಚಂದ್ರಾಪುರಮಠವು ಗೋಜಾಗೃತಿ ಹಾಗೂ ಪರಿಸರಪ್ರಜ್ಞೆಯ ಸಂದೇಶವನ್ನು ನಾಡಿಗೆ ನೀಡಿತು.

06.09.2016 ರ ಕಾರ್ಯಕ್ರಮ:
ಬೆಳಗ್ಗೆ 7.00 : ಕಾಮಧೇನು ಹವನ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಮದ್ಯಾಹ್ನ 12.00 : ಫಲಸಮರ್ಪಣೆ, ಮಂತ್ರಾಕ್ಷತೆ ಅನುಗ್ರಹ
ಅಪರಾಹ್ನ 3.00 :
ಗೋಸಂದೇಶ : ಗುಣವಂತೇಶ್ವರ ಭಟ್
ಲೋಕಾರ್ಪಣೆ : ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ : ಭಾಜನರು – ಗುಣವಂತೇಶ್ವರ ಭಟ್
ಸಂತ ಸಂದೇಶ : ಪರಮ ಪೂಜ್ಯ ರಾಜಶೇಖರ ಶಿವಾಚಾರ್ಯ ಸ್ವಾಮಿಜಿ, ಅಕ್ಕಲಕೋಟೆ, ಮಹಾರಾಷ್ಟ್ರ
ಸಂತ ಉಪಸ್ಥಿತಿ: ಪರಮ ಪೂಜ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಜಿ, ಮಹಾರಾಷ್ಟ್ರ
ಪರಮ ಪೂಜ್ಯ ಶಿವಾನಂದ ಶಿವಾಚಾರ್ಯ ಸ್ವಾಮಿಜಿ, ಮಹಾರಾಷ್ಟ್ರ
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ: 5.00 : ಕಲಾರಾಮ : ಜೆಡ್ಡು ರಾಮಚಂದ್ರ ಭಟ್ – ಗಾಯನ
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

Facebook Comments