ಸುತನೊಬ್ಬನನ್ನು ಸಂತ ಅಥವಾ ಸೈನಿಕನನ್ನಾಗಿಸಿ : ರಾಘವೇಶ್ವರಶ್ರೀ ಕರೆ

ಬೆಂಗಳೂರು : ಸಂತರು ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ನಿಶ್ಶಬ್ದದ ಆಂದೋಲನ ನಡೆಸಿ, ದೇಶ ಪ್ರೇಮವನ್ನು ತೋರುತ್ತಾರೆ. ಸೈನಿಕರು ಹೋರಾಡಿ ದೇಶ ಪ್ರೇಮ ಮೆರೆಯುತ್ತಾರೆ. ಆದುದರಿಂದ ದೇಶಕ್ಕಾಗಿ ಪ್ರತಿ ಮನೆಯಲ್ಲಿ ಜನಿಸಿದ ಒಬ್ಬನನ್ನು ಸಂತ ಅಥವಾ ಸೈನಿಕನನ್ನಾಗಿಸಿ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಕರೆ ನೀಡಿದರು.

ಅವರು ಸೋಮವಾರ ಶ್ರೀಗಳ ಗೋಚಾತುರ್ಮಾಸ್ಯದ ಅಂಗವಾಗಿ ಶ್ರೀರಾಮಚಂದ್ರಾಪುರದ ಬೆಂಗಳೂರು ಶಾಖೆ ಶ್ರೀರಾಮಾಶ್ರಮದ ಒಡಲು ಸಭಾಂಗಣದ ಮಡಿಲು ವೇದಿಕೆಯಲ್ಲಿ ಏರ್ಪಡಿಸಿದ ಗೋ ಕಥೆಯಲ್ಲಿ ಸ್ವಾತಂತ್ರ್ಯ ಸಂದೇಶ ನೀಡಿದರು.

ದೇವರ ಅವತಾರಗಳೇ ಇಲ್ಲದಾಗ ಗೋವುಗಳ ರೂಪದಲ್ಲಿ ದೇವರ ಸಂಚಾರ ಸನ್ನಿಹಿತವಾಗಿದೆ. ದೇವರ ಅವತಾರಗಳಿಗೆ ಪರ್ಯಾಯವಾಗಿ ಗೋವು ಎಂದೇ ನಂಬಲಾಗಿದೆ. ಗೋವು ನಿತ್ಯ ಸತ್ಯಾವತಾರ. ಪರ್ಷಿಯನ್ನರು, ಗ್ರೀಕರು, ಅರಬರು, ಫ್ರೆಂಚರು, ಪೋರ್ಚುಗೀಸರು ಡಚ್ಚರು ಈ ಮಣ್ಣಿನವರಲ್ಲ. ವೇದಗಳಲ್ಲಿ ಗೋವುಗಳಲ್ಲಿ ನಂಬಿಕೆಯಿದ್ದವರಲ್ಲ. ಆದರೂ ಸಂಕಟ ಬಂದಿರಲಿಲ್ಲ. ಪರಕೀಯರ ಪಾದಾಘಾತದಿಂದ ಗೋ ಸಂಸ್ಕೃತಿಗೆ ಕಂಟಕ ಆರಂಭವಾಯಿತು. ಬ್ರಿಟಿಷರಿಗೆ ಭಾರತವನ್ನು ಪ್ರವೇಶಿಸಿ, ಚಿರಕಾಲ ಸಮಗ್ರ ಭಾರತವನ್ನು ಆಳಬೇಕೆಂಬ ಮನಸ್ಸಿತ್ತು. ಅವರಿಗೆ ಸಂಸ್ಕೃತಿ ಭಾರತದ ಶಕ್ತಿ ಎಂದು ತಿಳಿದಿತ್ತು. ಸಂಸ್ಕೃತಿಯ ತಳಹದಿ ಗೋವು, ಗೋವುಗಳ ನಾಶದಿಂದ ಸಂಸ್ಕೃತಿ ನಾಶವಾಗುತ್ತದೆ ಎಂಬ ಅರಿವಿದ್ದ ಅವರು ಅದಕ್ಕೆ ಮರ್ಮಾಘಾತ ನೀಡಲು ಆರಂಭಿಸಿದರು. ಅದಕ್ಕಾಗಿ 18ನೇ ಶತಮಾನದಲ್ಲಿ ಮಾಂಸಕ್ಕಾಗಿ ಗೋವುಗಳನ್ನು ಕತ್ತರಿಸಲು ನಿರ್ಣಯ ಕೈಗೊಂಡ ಬ್ರಿಟಿಷರು ದೇಶದಲ್ಲಿ 350 ಕಸಾಯಿಖಾನೆಗಳನ್ನು ಆರಂಭಿಸಿದರು. ಅಂತಹ ಕಸಾಯಿಖಾನೆಗಳು ಇಂದು ದೇಶದೆಲ್ಲೆಡೆ ಮರಿಯಿಟ್ಟು ಅಸಂಖ್ಯವಾಗಿವೆ. 1910ರಿಂದ 1940ರ ತನಕ 10 ಕೋಟಿ ಗೋವುಗಳನ್ನು ಕೊಲ್ಲಲಾಯಿತು ಎಂದು ಆಧಾರ ಸಹಿತ ವಿವರಿಸಿದರು.

ಆಗ ಭಾರತೀಯರು ಎಚ್ಚರವಾದರು. ಗೋವುಗಳ ಹತ್ಯೆಯನ್ನು ಭಾರತೀಯರು ವಿರೋಧಿಸಿದರು. ಭಾರತ ಸ್ವರೂಪ ಸಿದ್ಧವಾಗಲು ಗೋವು ಕಾರಣವಾಯಿತು. ಈ ನಡುವೆ ಭಾರತೀಯ ಸೈನಿಕರನ್ನು ಮತಾಂತರ ಮಾಡುವ ಪ್ರಯತ್ನ ನಡೆಯಿತು. ಗೋವು ಮತ್ತುಧರ್ಮ ಬ್ರಿಟಿಷರ ಟಾರ್ಗೆಟ್ ಎಂದು ತಿಳಿದ ಆಗ ಸಂತರು ಸೈನಿಕರನ್ನು ಎಚ್ಚರಿಸಿದರು. ಗಡಿಗಳಿಂದ ದೇಶ ನಿಶ್ಚಯವಾಗುವುದಲ್ಲ, ಧರ್ಮ ಮತ್ತು ಸಂಸ್ಕೃತಿಯಿಂದ ಎಂದು ಅರಿವು ನೀಡಿದರು. ಈ ನಡುವೆ ಬ್ರಿಟಿಷರು ಗೋವಿನ ಕೊಬ್ಬನ್ನು ಆಧರಿಸಿ ಸಿಡಿಮದ್ದು ಕಂಡುಹಿಡಿದು ಭಾರತೀಯರು ಆ ಬಂದೂಕನ್ನು ಬಳಸುವಂತೆ ಮಾಡಿದರು. ಆಗ ಸಿಡಿದೆದ್ದ ಮಂಗಲ್ ಪಾಂಡೆ ಬ್ರಿಟಿಷರ ವಿರುದ್ಧ ಮೊದಲ ರಣಕಹಳೆಯನ್ನೂದಿದ. ಸ್ವಾತಂತ್ರ್ಯದ ಕೆಚ್ಚನ್ನು ಭಾರತೀಯರ ನಾಡಿ ನಾಡಿಯಲ್ಲಿ ಎಬ್ಬಿಸಿದ ಆತನ ಬಲಿದಾನ ಶ್ರೇಷ್ಠ. ಅದೇ ರೀತಿ ಆತನ ಭಾವವೂ ಶ್ರೇಷ್ಠ ಎಂದು ವಿಶ್ಲೇಷಿಸಿದರು.

1917ರಲ್ಲಿ ಗಾಂಧೀಜಿಯವರ ಅಂಕಿ ಅಂಶಗಳ ಪ್ರಕಾರ ವರ್ಷಕ್ಕೆ 1.10 ಲಕ್ಷ ಗೋವುಗಳನ್ನು ಕೊಲ್ಲಲಾಗುತ್ತಿತ್ತು. ಗೋರಕ್ಷೆಯ ಹೇಳಿಕೆಗೆ ಬದ್ಧರಾಗಿದ್ದ ಅವರು ಅದನ್ನು ತಾನು ಪೂಜಿಸುತ್ತೇನೆ ಎಂದು 1927ರಲ್ಲಿ ಮತ್ತೆ ಗುಡುಗಿದ್ದರು. ಅವರ ಹತ್ಯೆಯ ಬಳಿಕ ಗೋರಕ್ಷೆಯ ಚಿಂತನೆಯ ಹತ್ಯೆಯೂ ಆಗಿದೆ ಎಂದು ಶ್ರೀಗಳು ವಿಷಾದಿಸಿದರು.

ಗೋ ಕಥೆ ಮನೋರಂಜನೆಗಾಗಿಯಲ್ಲ. ಅದು ಪ್ರೇರಣೆಗಾಗಿ. ಶಾಶ್ವತ ಆನಂದಕ್ಕಾಗಿ. ಗೋವಿಗಾಗಿ ಸಂಘಟಿತರಾಗಬೇಕು. ಸರಕಾರ ಮಾಡಲಿ, ಅವರು ಮಾಡಲಿ ಎಂದು ಕಾಯುವ ಕಾಲ ಇದಲ್ಲ. ಗೋವಿಗಾಗಿ ಸಂಘಟಿತರಾಗೋಣ. ನಿಜವಾದ ಸ್ವಾತಂತ್ರ್ಯ ಸಂಗ್ರಾಮ ಇನ್ನು ನಡೆಯಬೇಕಾಗಿದೆ. ಕೆಂಪುಕೋಟೆಯ ಧ್ವಜದಲ್ಲಿ ಗೋವು ಹಾರಾಡುವ ಕಾಲ ಬರಲಿದೆ. ಗೋ ಮಾಂಸ ತಿಂದು ಸಮರ್ಥಿಸುವ ಬುದ್ಧಿಜೀವಿಗಳಿಗೆ ಗೋವಿನಿಂದಲೇ ದೇಶದ ಸ್ವಾತಂತ್ರ್ಯ ಸಂಗ್ರಾಮ ಆರಂಭವಾಗಿರುವ ಸತ್ಯ ಗೊತ್ತಿಲ್ಲವಲ್ಲ ಎಂದು ಶ್ರೀಗಳು ಹೇಳಿದರು.

ಪ್ರವಚನ, ಕಥನ, ಗಾಯನ, ರೂಪಕಗಳನ್ನೊಳಗೊಂಡ ಈ ಗೋಕಥೆಯಲ್ಲಿ ಸಂದರ್ಭಕ್ಕೆ ಹೊಂದುವ ಚಿತ್ರಗಳನ್ನು ನೀರ್ನಳ್ಳಿ ಗಣಪತಿ ಅವರು ಮನಮೋಹಕವಾಗಿ ಚಿತ್ರಿಸಿದರು. ಡಾ| ಗಜಾನನ ಶರ್ಮ ಅವರ ಸಾಹಿತ್ಯ ಸಹಕಾರ, ಗಾಯನದಲಿ ಚಂದ್ರಶೇಖರ ಕೆದಿಲಾಯ, ಶ್ರೀಪಾದ ಭಟ್, ಸತ್ಯಜಿತ್ಜೈನ್ ಕೊಲ್ಕೋತಾ, ಶಂಕರಿ ಮೂರ್ತಿ ಬಾಳಿಲ, ಟಿ.ವಿ.ಗಿರಿ, ದೀಪಿಕಾ ಭಟ್, ಶ್ರದ್ಧಾ, ದುರ್ಗಾಗಣೇಶ್ ಹಾಗೂ ಸಂಗೀತ ವಾದ್ಯಗಳಲ್ಲಿ ಪ್ರಜ್ಞಾನಲೀಲಾಶುಕ ಉಪಾಧ್ಯಾಯ, ಗಣೇಶ್ಕೆ.ಎಸ್., ಗಣೇಶ್ಗುಂಡ್ಕಲ್ ಮೊದಲಾದವರು ಭಾಗವಹಿಸಿದ್ದರು. ಅನಂತರ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಸಾರಥ್ಯದಲ್ಲಿ ಮೂಡಿಬಂದ ರೂಪಕ ಜನರ ಮನತಟ್ಟಿತು. ಸಾವಿರಾರು ಜನರು ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಗೋಕಥೆಯ ನಂತರ ಶ್ರೀಗಳು ಹಾಗೂ ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು, ಗೋಕುಲಕ್ಕೆ ಒಳಿತಾಗಲೆಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಇದಕ್ಕೂ ಮೊದಲು ಮಧ್ಯಾಹ್ನ ನಡೆದ ಸಭೆಯಲ್ಲಿ ಶ್ರೀಭಾರತೀಪ್ರಕಾಶನವು ಹೊರತಂದಿರುವ ವಿಚಾರ-ವಿಹಾರ ಎಂಬ ಪುಸ್ತಕವನ್ನು ಪೂಜ್ಯ ಶ್ರೀಗಳು ಹಾಗೂ ಸಾಧನಾಪಂಚಕ ದೃಶ್ಯಮುದ್ರಿಕೆಯನ್ನು ವಾಗ್ಮಿ ನಿಕೇತ್ರಾಜ್ ಮೌರ್ಯ ಮತ್ತು ಶ್ರೀಕೃಷ್ಣ ಉಪಾಧ್ಯಾಯ ಅವರು ಲೋಕಾರ್ಪಣೆಗೊಳಿಸಿದರು. ಸರ್ವ ಸೇವೆ ನೆರವೇರಿಸಿದ ಸಾಮಾಜಿಕ ಜಾಲತಾಣಿಗರ ಬಳಗವು ಮತ್ತು ಗೋಕಥಾ ಪ್ರಾಯೋಜಕತ್ವವನ್ನು ವಹಿಸಿತ್ತು. ಶ್ರೀಮಠದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಶ್ರೀ ಸೂಕ್ತ ಜಪ, ಶ್ರೀ ಸೂಕ್ತ ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ ನಡೆಯಿತು.

ಇಂದಿನ ಕಾರ್ಯಕ್ರಮ (16.08.2016):
ಬೆಳಗ್ಗೆ 7.00 : ಕಾಮಧೇನು ಹವನ, ಶ್ರೀದುರ್ಗಾ ತ್ರಿಕಾಲ ಪೂಜೆ
ಬೆಳಗ್ಗೆ 9.00 : ಕುಂಕುಮಾರ್ಚನೆ
ಬೆಳಗ್ಗೆ 10.00 : ಶ್ರೀಕರಾರ್ಚಿತದೇವತಾಪೂಜೆ
ಬೆಳಗ್ಗೆ 11.30 : ಆದಿತ್ಯಹೃದಯ ಪಠಣ
ಅಪರಾಹ್ನ 3.30 :
ಗೋಸಂದೇಶ : ಕ. ದಾ. ಕೃಷ್ಣರಾಜ ಅರಸ್
ಲೋಕಾರ್ಪಣೆ : ನಂದಿಕೇಶ್ವರ – ಪುಸ್ತಕ : ಲೇಖಕಿ – ಮನೋರಮಾ ಬಿ. ಎನ್.
ಸಾಧನಾಪಂಚಕ ಪ್ರವಚನಮಾಲಿಕೆ – ದೃಶ್ಯಮುದ್ರಿಕೆ
ಗೋಸೇವಾಪುರಸ್ಕಾರ : ಭಾಜನರು – ಕ. ದಾ. ಕೃಷ್ಣರಾಜ ಅರಸ್
ಸಂತ ಸಂದೇಶ : ಸಂತ ಅಸಂಗ ಸಾಹೇಬ, ಕಬೀರ್ ಪಂಥ, ಶ್ರೀ ಸದ್ಗುರು ಸೇವಾಶ್ರಮ,
ಲಿಖಿಮ್ ಪುರ್, ಉತ್ತರಪ್ರದೇಶ
ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳವರಿಂದ ಚಾತುರ್ಮಾಸ್ಯ ಸಂದೇಶ
ಸಂಜೆ: 5.00 : ಕಲಾರಾಮ : ಹಿಂದೂಸ್ಥಾನಿ ಗಾಯನ – ಕುಮಾರಿ ಅಶ್ವಿನೀ ಭಟ್
ಹಾರ್ಮೋನಿಯಂ- ಹರೀಶ ಭಟ್
ತಬಲ – ರಾಘವೇಂದ್ರ ಹೆಬ್ಬಾರ್
ಸೂರ್ಯಾಸ್ತ ಸಮಯಕ್ಕೆ ಶ್ರೀಕರಾರ್ಚಿತದೇವತಾಪೂಜೆ
ರಾತ್ರಿ 8.00 : ಶ್ರೀಸಂಸ್ಥಾನದವರಿಂದ ‘ಸಾಧನಾಪಂಚಕ’ ಪ್ರವಚನ

Facebook Comments