ಧರ್ಮ ಮತ್ತು ರಾಜಕೀಯ ಸಮಾಜದ 2 ಚಕ್ರಗಳು –
ಬಜಕೂಡ್ಲು ಗೋಶಾಲೆಯ ಗೋಪಾಷ್ಟಮೀ ಕಾರ್ಯಕ್ರಮದಲ್ಲಿ ಕುಂಟಾರು ರವೀಶ ತಂತ್ರಿಗಳು

ಬಜಕೂಡ್ಲು 19-11-2015 : ಪ್ರಪಂಚದ 2 ಚಕ್ರಗಳಾದ ಧರ್ಮ ಮತ್ತು ರಾಜಕೀಯವನ್ನು ಸಮಾನಂತರವಾಗಿ ತೊಡಗಿಸಿಕೊಂಡಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಕುಂಟಾರು ರವೀಶ ತಂತ್ರಿ ಅಭಿಪ್ರಾಯಪಟ್ಟರು.
ಅವರು ಗುರುವಾರ ಸಂಜೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ದಿವ್ಯ ದಿಗ್ದರ್ಶನದಲ್ಲಿರುವ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ನಡೆದ ಗೋಪಾಷ್ಟಮೀ ಕಾರ್ಯಕ್ರಮ ಹಾಗೂ ತ್ರಿಸ್ತರ ಪಂಚಾಯತು ಚುನಾವಣೆಯಲ್ಲಿ ಆಯ್ಕೆಯಾದ ಗೋಶಾಲೆಯ ಅಭಿವೃದ್ಧಿಗೆ ಸಹಕರಿಸಿದ ವಿಜೇತ ಅಭ್ಯರ್ಥಿಗಳ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು.  ನಿರಂತರ ಹೋರಾಟ ಎಲ್ಲಿ ನಡೆಯುತ್ತದೋ ಅಲ್ಲಲ್ಲಿ ಸತ್ಪ್ರಜೆ ರೂಪುಗೊಳ್ಳುತ್ತಾನೆ. ಬಜಕೂಡ್ಲು ಗೋಶಾಲೆಯು ಗೋವಿನ ಮುಖಾಂತರ ಸಮಾಜದ ಪರಿವರ್ತನೆಗೆ ತೊಡಗಿಸಿಕೊಂಡಿದೆ. ಸಮಾಜ ಮುಖಿಯಾಗಿ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರನ್ನು ಗೌರವಿಸುವುದು ಅತೀ ಮುಖ್ಯ. ಎಲ್ಲರೂ ಸಮಾಜ ಮುಖಿಯಾದ ಕಾರ್ಯಗಳಲ್ಲಿ ಭಾಗವಹಿಸಿ ಊರಿನ ಉದ್ಧಾರಕ್ಕೆ ಶ್ರಮಿಸಬೇಕು ಎಂದರು.
ಮುಳ್ಳೇರಿಯ ಹವ್ಯಕ ಮಂಡಲಾಧ್ಯಕ್ಷ ಬಿ.ಜಿ.ರಾಮ ಭಟ್ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ದೇಶೀಯ ಗೋತಳಿಯ ಉತ್ಪನ್ನಗಳನ್ನು ಬಳಸುವ ಮೂಲಕವೂ ಗೋವಿನ ರಕ್ಷಣೆಗೆ ಕೈಜೋಡಿಸಿದಂತಾಗುತ್ತದೆ ಎಂದರು. ಮಾತೆ, ಗೋಮಾತೆ, ಭೂಮಾತೆಗೆ ರಕ್ಷಣೆಯನ್ನು ನೀಡಿದರೆ ಮಾತ್ರ ಸಮಾಜ ಉತ್ತಮವಾಗುವುದು ಎಂದರು. ಗೋಶಾಲೆಗೆ ಯಾವುದೇ ಪಕ್ಷವಿಲ್ಲ. ಗೋಶಾಲೆಗೆ ಎಲ್ಲಾಪಕ್ಷದವರ ಸಹಕಾರವೂ ಬೇಕು ಎಂದರು.
ಗೋಕರ್ಣಮಂಡಲಾಧ್ಯಕ್ಷ ಡಾ| ವೈ.ವಿ. ಕೃಷ್ಣಮೂರ್ತಿ ಅವರು ತ್ರಿಸ್ತರ ಪಂಚಾಯತು ಚುನಾವಣೆಯಲ್ಲಿ ವಿಜೇತರಾದ ಗೋಶಾಲೆಗೆ ಸರ್ವಸಹಕಾರವನ್ನು ನೀಡಿದ ಎಣ್ಮಕಜೆ ಪಂ. ಅಧ್ಯಕ್ಷೆ ರೂಪವಾಣಿ ಆರ್ ಭಟ್, ಜಿಲ್ಲಾಪಂಚಾಯತು ಸದಸ್ಯೆ ಪುಷ್ಪಾ ಆಮೆಕ್ಕಳ, ಕುಂಬಳೆ ಡಿವಿಶನ್ ಬ್ಲೋಕ್ ಪಂ. ಸದಸ್ಯ ಸತ್ಯಶಂಕರ ಭಟ್ ಹಿಳ್ಳೆಮನೆ, ಪಂಚಾಯತು ಸದಸ್ಯರುಗಳಾದ ಆಯಿಶಾ ಪೆರ್ಲ, ಉದಯ ಚೆಟ್ಟಿಯಾರ್, ಸಿದ್ದೀಕ್, ಸತೀಶ್ ಕುಲಾಲ್ ಹಾಗೂ ಬಾಲಪ್ರತಿಭೆ ಮಾನಸ ಮುಣ್ಚಿಕ್ಕಾನ ಮುಂತಾದವರನ್ನು ಗೌರವಿಸಿದರು.

ಗೋಶಾಲೆಯ ಧಾರ್ಮಿಕ ವಿಭಾಗದ ನೇತೃತ್ವ ವಹಿಸಿದ ಕೇಶವ ಪ್ರಸಾದ ಕೂಟೇಲು ಅವರು ಸ್ವಾಗತಿಸಿ ಅಧ್ಯಾಪಕ ಶ್ರೀಧರ ಭಟ್ ಪೆರ್ಲ ಧನ್ಯವಾದವನ್ನಿತ್ತರು. ಕು| ಮಾನಸ ಗೋವಿನ ಹಾಡನ್ನು ಹಾಡಿ ಸಭಿಕರ ಮನಸೂರೆಗೈದಳು. ನಿವೃತ್ತ ಅಧ್ಯಾಪಕ ಶಂಕರ ಪ್ರಸಾದ ಕುಂಚಿನಡ್ಕ ಕಾರ್ಯಕ್ರಮ ನಿರೂಪಣೆ ಮಾಡಿದರು.
ಸಂಜೆ 7 ಘಂಟೆಗೆ ಗೋಶಾಲೆಯಲ್ಲಿ ಸಹಸ್ರ ದೀಪೋತ್ಸವ ಜರಗಿತು. ಭಗವಾನ್ ಶ್ರೀಕೃಷ್ಣನು ಗೋವರ್ಧನಗಿರಿಯನ್ನೆತ್ತಿ ಗೋಪಾಲಕರನ್ನು ಹಾಗೂ ಗೋವನ್ನು ರಕ್ಷಿಸಿದ ಪುಣ್ಯ ದಿನವಾದ ಗೋಪಾಷ್ಟಮಿಯಂದು ಗೋಮಯದಿಂದ ತಯಾರಿಸಿದ ಗೋವರ್ಧನ ಗಿರಿಯಲ್ಲಿ ಶ್ರೀಕೃಷ್ಣನನ್ನು ಪೂಜಿಸಲಾಯಿತು.

ಊರ ಪರವೂರ ಅನೇಕರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಚಿತ್ರ, ವರದಿ: ಶ್ಯಾಮಪ್ರಸಾದ ಸರಳಿ, ಅಶ್ವಿನಿ ಸ್ಟುಡಿಯೋ ಬದಿಯಡ್ಕ.

~
ಗೋವಿಂದ ಭಟ್ ಬಳ್ಳಮೂಲೆ,
ಪ್ರಸಾರ – ಮುಳ್ಳೇರ್ಯ ಮಂಡಲ

Facebook Comments