ಖಡ್ಗಕ್ಕೆ ಆಗದಿರುವುದನ್ನು ಕರುಣೆ ಮಾಡಬಲ್ಲದು – ಗೋಕಥಾದಲ್ಲಿ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಸಂದೇಶ

ಬೆಂಗಳೂರು : ಖಡ್ಗಕ್ಕೆ ಆಗದಿರುವುದನ್ನು ಕರುಣೆ ಮಾಡಬಲ್ಲದು, ಸತ್ಯ ಹೇಳುವುದನ್ನೊಂದು ಕಲಿತರೆ, ಮತ್ತೆಲ್ಲಾ ಗುಣಗಳೂ ತಾನಾಗಿಯೇ ಬಂದು ಸೇರುತ್ತದೆ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ನುಡಿದರು.

ಗೋಚಾತುರ್ಮಾಸ್ಯದ ಅಂಗವಾಗಿ ಶ್ರೀರಾಮಚಂದ್ರಾಪುರದ ಬೆಂಗಳೂರು ಶಾಖಾಮಠದಲ್ಲಿ ಸಂಪನ್ನವಾದ ಗೋಕಥಾದಲ್ಲಿ ಪುಣ್ಯಕೋಟಿಯ ಕಥೆಯನ್ನು ನಿರೂಪಿಸಿದ ಶ್ರೀಗಳು, ಪುಣ್ಯಕೋಟಿಯ ಕಥೆಯನ್ನು ನಾವು ಎಲ್ಲರೂ ಹಲವುಬಾರಿ ಕೇಳಿರಬಹುದು. ಆದರೆ, ಪುಣ್ಯಕೋಟಿಯ ಕಥೆಯಲ್ಲಿ ಹೆಜ್ಜೆ ಹೆಜ್ಜೆಗೂ ಜೀವನಕ್ಕೆ ಬೇಕಾಗುವ ಪಾಠವಿದೆ, ಅವುಗಳನ್ನು ತಿಳಿಯಲು ಇಂದಿನ ಗೋಕಥೆ ಎಂದು ಹೇಳಿದರು.

ಹಿಂದೆ ಗೋವನ್ನು ಕೇವಲ ಒಂದು ಪ್ರಾಣಿಯಾಗಿ, ವಸ್ತುವಾಗಿ ಕಾಣುತ್ತಿರಲಿಲ್ಲ, ಗೋವುಗಳಿಗೂ ಪ್ರೀತಿಯಿಂದ ಹೆಸರನ್ನು ಇಟ್ಟು ತಮ್ಮ ಕುಟುಂಬದ ಸದಸ್ಯರಲ್ಲೊಬ್ಬರಾಗಿ ಕಾಣಲಾಗುತ್ತಿತ್ತು. ಆದರೆ ಇಂದು ಕನಿಷ್ಟಪಕ್ಷ ಪಠ್ಯದಲ್ಲೂ ಗೋವನ್ನು ಅರಿಯುವ ಅವಕಾಶ ನಮ್ಮ ಮಕ್ಕಳಿಗೆ ಇಲ್ಲವಾಗಿದೆ ಎಂದು ವಿಷಾದವ್ಯಕ್ತಪಡಿಸಿದರು.ತ್ಯಾಗ ತಾಯಿಗೆ ಸಹಜ, ಅಂತೆಯೇ ಗೋಮಾತೆಗು ತ್ಯಾಗ ಸಹಜ. ಆದರೆ, ಗೋವಿನ ಸಂಘದಿಂದ ದುರುಳ ವ್ಯಾಘ್ರವೂ ತ್ಯಾಗಮನೋಭಾವವನ್ನು ಹೊಂದಿದ್ದು ವಿಶೇಷವೆನಿಸುತ್ತದೆ. ಕ್ರೂರಿಯ ಒಳಗೂ ಕಾರುಣ್ಯ ಇರಬಹುದು. ಹಾಗಾಗಿ ಯಾರಿಗೂ ಕೆಟ್ಟವರೆಂಬ ಹಣೆಪಟ್ಟಿ ಕಟ್ಟಬಾರದು ಎಂಬ ಕಿವಿಮಾತನ್ನು ಹೇಳಿದರು. ಪುಣ್ಯಕೋಟಿ ಹಾಗೂ ಪುಣ್ಯಕೋಟಿಯ ಸತ್ಯಸಂಧತೆಗೆ ಶರಣಾದ ವ್ಯಾಘ್ರದ ಘಟನೆಯನ್ನು ಶ್ರೀಮಠದ ಆವೀರ್ಭಾವಕ್ಕೆ ಹೋಲಿಸಿದ ಶ್ರೀಗಳು, ತಬ್ಬಲಿ ಜಿಂಕೆಗೆ ಹೆಬ್ಬುಲಿ ಹಾಲುಣಿಸಿದ ಸ್ಥಳದಲ್ಲಿ ಶ್ರೀಶಂಕರಾಚಾರ್ಯರು ಶ್ರೀರಾಮಚಂದ್ರಾಪುರಮಠವನ್ನು ಸ್ಥಾಪಿಸಿದರು ಎಂಬುದನ್ನು ನೆನಪಿಸಿದರು.

‘ಮೆರೆಯುತಿಹ ಕರ್ನಾಟ ದೇಶದೊಳು’ ಎಂದು ಜಾನಪದ ಗೀತೆಯಲ್ಲಿ ಹೇಳಿರುವಂತೆ ಗೋವು ನಲಿಯುವ ನಾಡಾಗಿದ್ದ ನಮ್ಮ ನಾಡಿನಲ್ಲಿ,ಇಂದು ಗೋವುಗಳು ಕ್ಷೇಮವಾಗಿಲ್ಲ. ಪುಣ್ಯಕೋಟಿಯ ಕಥೆಯಲ್ಲಿ ಬರುವ ಹುಲಿಯಿಂದ ಸರ್ಕಾರಗಳು ಪಾಠಕಲಿಯಲಿ. ಗೋಸಂತತಿ ಬೆಳೆಯಲಿ, ಜೊತೆಗೆ ಪುಣ್ಯಕೋಟಿಯ ಕಥೆಯಲ್ಲಿ ಬರುವ ಅರ್ಭುದದಂತಹ ಹುಲಿಗಳ ಸಂಕುಲವೂ ಉಳಿಯಲಿ ಎಂದು ಆಶಂಸಿಸಿದರು.

ಪ್ರವಚನ, ಕಥನ, ಗಾಯನ, ರೂಪಕಗಳನ್ನೊಳಗೊಂಡ ಈ ಗೋಕಥೆಯಲ್ಲಿ ಸಂದರ್ಭಕ್ಕೆ ಹೊಂದುವ ಚಿತ್ರಗಳನ್ನು ಅಶೋಕ ಸಿದ್ಧನಕೈ ಹಾಗೂ ಗೋಪಿನಾಥ ಸಾಗರ ಅವರು ಮನಮೋಹಕವಾಗಿ ಚಿತ್ರಿಸಿದರು. ಡಾ| ಗಜಾನನ ಶರ್ಮ ಅವರ ಸಾಹಿತ್ಯ ಸಹಕಾರ, ಗಾಯನದಲ್ಲಿ ಶ್ರೀಪಾದ ಭಟ್, ಶಂಕರಿ ಮೂರ್ತಿ ಬಾಳಿಲ, ಟಿ.ವಿ. ಗಿರಿ, ಸತ್ಯಜಿತ್ ಜೈನ್ ಕೊಲ್ಕೋತಾ, ದೀಪಿಕಾ ಭಟ್, ಹಾಗೂ ಸಂಗೀತ ವಾದ್ಯಗಳಲ್ಲಿ ಪ್ರಜ್ಞಾನಲೀಲಾಶುಕ ಉಪಾಧ್ಯಾಯ, ಗಣೇಶ್ ಕೆ.ಎಸ್., ಗಣೇಶ್ ಗುಂಡ್ಕಲ್ ಮೊದಲಾದವರು ಭಾಗವಹಿಸಿದ್ದರು. ಅನಂತರ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರ ಸಾರಥ್ಯದಲ್ಲಿ ಮೂಡಿಬಂದ ಪುಣ್ಯಕೋಟಿ ರೂಪಕ ಜನರ ಮನತಟ್ಟಿತು.  ಸಾವಿರಾರು ಜನರು ಈ ಅಪರೂಪದ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಗೋಕಥೆಯ ನಂತರ ಶ್ರೀಗಳು ಹಾಗೂ ಗೋವಿನ ಸಮ್ಮುಖದಲ್ಲಿ ಸೇರಿದ ಸಾವಿರಾರು ಜನರು ಗೋರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಂಡರು, ಗೋಕುಲಕ್ಕೆ ಒಳಿತಾಗಲೆಂಬ ಸಾಮೂಹಿಕ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.

ಹಾಲಕ್ಕಿ ಸಮಾಜದವರಿಂದ ಪಾದುಕಾಪೂಜೆ ನಡೆಯಿತು. ಮಧ್ಯಾಹ್ನ ನಡೆದ ಸಭೆಯಲ್ಲಿ ಶ್ರೀಭಾರತೀಪ್ರಕಾಶನವು ಹೊರತಂದಿರುವ ಸಾಧನಾಪಂಚಕ ದೃಶ್ಯಮುದ್ರಿಕೆ ಹಾಗೂ ಶ್ರೀವಿಶ್ವಕೋಶ ವಿಭಾಗದ ಮೊದಲ ಕೃತಿ, ಶ್ರೀಸಂಸ್ಥಾನದವರ ನುಡಿಮುತ್ತುಗಳ ಸಂಗ್ರಹ ರೂಪದ ‘ನಡೆಗೊಂದು ನುಡಿ’ ಪುಸ್ತಕವನ್ನು ಪೂಜ್ಯ ಶ್ರೀಗಳು ಲೋಕಾರ್ಪಣೆಗೊಳಿಸಿದರು. ಪುಸ್ತಕದ ಲೇಖಕರಾದ ರವೀಂದ್ರ ಭಟ್ ಸೂರಿ ಅವರು ಶ್ರೀಗಳಿಂದ ಆಶೀರ್ವಾದ ಪಡೆದರು. ಗೋಕಥಾ ಪ್ರಾಯೋಜಕರಾದ ಪೀಣ್ಯದ ಅಂಬಾ ಇಂಡಸ್ಟ್ರೀಸ್ ನ ಮಾಲಿಕರಾದ ಎಂ ಎ ಸುಬ್ಬರಾವ್ ಕುಟುಂಬದವರು, ಹಾಲಕ್ಕಿ ಸಮಾಜದ ಭಕ್ತರು, ಮೈಸೂರು ಹಾಗೂ ದಾವಣಗೆರೆ ವಲಯ ವ್ಯಾಪ್ತಿಯ ಶಿಷ್ಯರು, ಶ್ರೀಮಠದ ಪದಾಧಿಕಾರಿಗಳು, ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಶ್ರೀಕರಾರ್ಚಿತ ಪೂಜೆ, ಕಾಮಧೇನು ಹವನ, ಶ್ರೀ ಸೂಕ್ತ ಜಪ, ಶ್ರೀ ಸೂಕ್ತ ಹವನ, ಮಾತೆಯರಿಂದ ಕುಂಕುಮಾರ್ಚನೆ, ಆದಿತ್ಯಹೃದಯ ಪಠಣ ನಡೆಯಿತು.

  • ಪುಣ್ಯಕೋಟಿಯ ಕಥೆಯಲ್ಲಿ ಬರುವ ಹುಲಿಯಿಂದ ಸರ್ಕಾರಗಳು ಪಾಠಕಲಿಯಲಿ.
  • ಸತ್ಯ ಹೇಳುವುದನ್ನೊಂದು ಕಲಿತರೆ, ಮತ್ತೆಲ್ಲಾ ಗುಣಗಳೂ ತಾನಾಗಿಯೇ ಬಂದು ಸೇರುತ್ತದೆ
  • ಹಾಲಕ್ಕಿ ಸಮಾಜದವರಿಂದ ಪಾದುಕಾಪೂಜೆ ನಡೆಯಿತು.
  • ಶ್ರೀಸಂಸ್ಥಾನದವರ ನುಡಿಮುತ್ತುಗಳ ಸಂಗ್ರಹರೂಪದ ‘ನಡೆಗೊಂದು ನುಡಿ’ ಪುಸ್ತಕ ಲೋಕಾರ್ಪಣೆ
Facebook Comments