ದಿನಾಂಕ 25.10.2015 ರಂದು ಬೆಂಗಳೂರು ಗಿರಿನಗರ ಶ್ರೀರಾಮಾಶ್ರಮದಲ್ಲಿ ನಡೆದ ಬೆಂಗಳೂರು ಹವ್ಯಕ ಮಂಡಲದ ಸಭೆಯಲ್ಲಿ ಈ ಕೆಳಗಿನಂತೆ ಖಂಡನಾ ನಿರ್ಣಯವನ್ನು ದಾಖಲಿಸಲಾಯಿತು. ಸಭೆಯ ಅಧ್ಯಕ್ಷತೆಯನ್ನು ಗೋಪಾಲಕೃಷ್ಣ ಹೆಗಡೆ ಹುಕ್ಲಮಕ್ಕಿ ವಹಿಸಿದ್ದು,ಮಂಡಲದ ಎಲ್ಲಾ 13 ವಲಯಗಳ ಪದಾಧಿಕಾರಿಗಳು ಮತ್ತು ವಲಯಗಳ ಪ್ರತಿನಿಧಿಗಳು ಹಾಜರಿದ್ದರು.

ಶ್ರೀ ಎಂ.ಎನ್. ಭಟ್ಟ ಮದ್ಗುಣಿ ಮತ್ತು ಶ್ರೀ ಸಿಎಚ್.ಎಸ್ಸ್. ಭಟ್ಟ ಅವರು ದಿನಾಂಕ 24.10.2015 ರಂದು ಸಮಾನ ಮನಸ್ಕ ವೇದಿಕೆಯ ಅಡಿಯಲ್ಲಿ ಪತ್ರಿಕಾ ಸಭೆಯನ್ನು ಕರೆದು ಶ್ರೀಮಠದ ಕುರಿತು ಇಲ್ಲ ಸಲ್ಲದ ಆರೋಪಗಳನ್ನು ಮಾಡಿರುತ್ತಾರೆ. ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ನೈತಿಕತೆ ಪ್ರಶ್ನಿಸಿ, ಅವರು ಪೀಠದಲ್ಲಿರಲು ಅರ್ಹರಲ್ಲ ಮತ್ತು ಮಹಿಳೆಯರಿಗೆ ಏಕಾಂತ ದರ್ಶನ ಇದ್ದು, ಇದಕ್ಕಾಗಿಯೇ ಮಹಿಳೆಯರು ಬಹು ಸಂಖ್ಯೆಯಲ್ಲಿ ಶ್ರೀಮಠಕ್ಕೆ ಬರುತ್ತಾರೆ, ಇದು ಈಗಲೂ ಎಲ್ಲ ಮಹಿಳೆಯರಿಗೂ ಅಪಾಯಕಾರಿ ಎಂಬಿತ್ಯಾದಿ ಹೇಳಿಕೆಗಳನ್ನು ನೀಡಿರುತ್ತಾರೆ. ಅವರ ಹೇಳಿಕೆಗಳು ಪೂರ್ಣವಾಗಿ ಅಸತ್ಯವಾಗಿದ್ದು, ಸಭೆಯು ಅವರ ಈ ನಡವಳಿಕೆಯನ್ನು ತೀವ್ರವಾಗಿ ಖಂಡಿಸುತ್ತದೆ. ಈ ಇಬ್ಬರು ಬಹಳ ಕಾಲದಿಂದ ಶ್ರೀಮಠದ ಸಂಘಟನೆ ಮತ್ತು ಆಡಳಿತದಲ್ಲಿ ತಮ್ಮನ್ನು ತೊಡಗಿಸಿಕೊಂಡು ನಿರ್ವಹಿಸಿದವರಾಗಿದ್ದು, ಕಾಲಕ್ರಮದಲ್ಲಿ ಗೋಸುಂಬೆಯಂತೆ ಬಣ್ಣ ಬದಲಾಯಿಸುತ್ತಿರುವುದು ಸರಿಯಲ್ಲ. ಎಂ.ಎನ್.ಭಟ್ಟ ಮದ್ಗುಣಿಯವರು ಸಿ.ಐ.ಡಿ. ವಿಚಾರಣೆಯಲ್ಲಿ ಶ್ರೀಮಠದಲ್ಲಿ ಏಕಾಂತವೆಂಬುದಿಲ್ಲ ಎಂಬುದಾಗಿ ಹೇಳಿಕೆಯನ್ನು ನೀಡಿದ್ದು ಈಗ ಮಾಧ್ಯಮಗಳಲ್ಲಿ ತದ್ವಿರುದ್ಧ ಹೇಳಿಕೆಯನ್ನು ನೀಡುತ್ತಿರುವುದು ಸಮಾಜಕ್ಕೆ ಆಘಾತವನ್ನು ತಂದಿದೆ. ಈ ಮೇಲೆ ಉಲ್ಲೇಖಿಸಿರುವ ಹೇಳಿಕೆಗಳು ಮಹಿಳಾ ಸಮುದಾಯಕ್ಕೇ ಅತ್ಯಂತ ಅವಹೇಳನಕಾರಿಯಾಗಿದ್ದು, ಇದನ್ನು ಮಹಿಳಾ ಶಿಷ್ಯ-ಭಕ್ತರು ಖಂಡಿಸಿರುವುದನ್ನು ಸಭೆಯು ದಾಖಲಿಸಿರುತ್ತದೆ.

ಆದ್ದರಿಂದ ಇವರಿಬ್ಬರು ಮಾಧ್ಯಮಗಳಿಗೆ ನೀಡಿದ ಹೇಳಿಕೆಗಳನ್ನು ಖಂಡಿಸಿ,ಬೆಂಗಳೂರು ಮಂಡಲದ ವತಿಯಿಂದ ಖಂಡನಾ ನಿರ್ಣಯ ಕೈಗೊಳ್ಳಲಾಯಿತು ಎಂದು ಜಿ.ಜಿ.ಹೆಗಡೆ ತಲೆಕೇರಿ ಕಾರ್ಯದರ್ಶಿ ಬೆಂಗಳೂರು ಹವ್ಯಕ ಮಂಡಲ ತಿಳಿಸಿದ್ದಾರೆ.

Facebook Comments Box