ಪ್ರತಿಯೊಂದು ಜೀವಿಯು ಆತ್ಮಗೌರವದೊಂದಿಗೆ ಬಾಳುವ ಅವಕಾಶವಿರುವ ಆಡಳಿತವೇ ರಾಮರಾಜ್ಯ. ಆಧುನಿಕ ಗ್ರಾಮಗಳು ಸ್ವಾವಲಂಬೀ ಸುಖೀ ಗ್ರಾಮಗಳು ಮತ್ತು ಪಟ್ಟಣನಗರಗಳು ನೆಮ್ಮದಿಯ ತಾಣಗಳು ಆಗುಳಿಯಬೇಕಾದರೆ ಶ್ರೀರಾಮನ ಆದರ್ಶಗಳು ಹಾಗೂ ರಾಮರಾಜ್ಯದ ಕಲ್ಪನೆಯು ಅನುಷ್ಠಾನಗೊಳ್ಳಬೇಕಾಗುತ್ತದೆ. ಹಿಂದೆ ಗ್ರಾಮಗಳಲ್ಲಿ ಹಲವು ಬಗೆಯ ಕೃಷಿಕಾರ್ಯಗಳು, ಕೌಶಲಗಳು, ಇದ್ದವು. ಹಳ್ಳಿಯ ಹೊಲ, ಗದ್ದೆ, ಕಾಡುಗಳು, ಜಾನುವಾರುಗಳಿಗೆ ಸಮೃದ್ಧಮೇವನ್ನು ಒದಗಿಸಿಕೊಡುತ್ತಿದ್ದವು. ಗ್ರಾಮೀಣರ ಬದುಕು ಸ್ವಾಭಿಮಾನದ ಸ್ವಾವಲಂಬನದ ಸಹಕಾರದ ಪ್ರತೀಕವಾಗಿತ್ತು. ಇಂದು ಪರಿಸ್ಥಿತಿಯು ಪೂರ್ಣ ಬದಲಾಗಿದೆ. ಕೃಷಿ ಹೈನುಗಾರಿಕೆಗಳು ವಾಣಿಜ್ಯ ಸ್ವರೂಪವನ್ನು ಪಡೆದಿವೆ. ಕೈಗಾರಿಕೆಯ ಕ್ರಾಂತಿಯ ಮತ್ತು ವೈಜ್ಞಾನಿಕ ಸಂಶೋಧನೆಗಳ ಪರಿಣಾಮವಾಗಿ ಗ್ರಾಮೀಣಜೀವನವು ನಗರಾವಲಂಬಿಯಾಗಿದೆ. ತಾವು ಉಣ್ಣುವುದನ್ನು ತಾವೇ ಉತ್ತಿ ಬಿತ್ತಿ ಬೆಳಯುತ್ತಿದ್ದ ಕೃಷಿಕರು ಬಿತ್ತನೆಯ ಬೀಜಕ್ಕೂ ನಗರದ ಅಂಗಡಿಗಳ ಕಡೆ ನೋಡುವಂತಾಗಿದೆ. ಮಣ್ಣಿನ ಮಕ್ಕಳ, ಜಾನುವಾರುಗಳ ಮೌಲ್ಯಗಳು ಮತ್ತು ಗ್ರಾಮೀಣ ಸೊಗಡು ಅಪಾಯದ ಅಂಚಿನಲ್ಲಿವೆ. ಇನ್ನು ನಗರವಾಸಿಗಳ ಜೀವನವು ಯಾಂತ್ರಿಕವೂ ವಿಷಪೂರಿತವೂ ಆಗಿದೆ. ಉಸಿರಾಡುವಗಾಳಿ, ಕುಡಿಯುವನೀರು, ಉಣ್ಣುವ ಆಹಾರ ಎಲ್ಲವೂ ನಿಧಾನವಿಷವಾಗಿದೆ. ಮಧ್ಯವರ್ತಿಗಳ ಅತಿಯಾಸೆಯಿಂದಾಗಿ ಕಲುಷಿತ ಕಲಬೆರಕೆ ವಸ್ತುಗಳೂ ದುಬಾರಿಯಾಗಿವೆ. ಸಣ್ಣ ಆದಾಯದ ಸಂಸ್ಕಾರಯುತ ಕುಟುಂಬಗಳ ಜೀವನನಿರ್ವಹಣೆಯೇ ಹೋರಾಟವಾಗಿದೆ. ಕೃಷಿಕನು ಪ್ರಕೃತಿಮಾತೆಯ ಸೇವಕ. ಕೃಷಿಸೇವೆ ಇತರ ಎಲ್ಲಾ ಸೇವೆಗಳಿಗಿಂತ ಶ್ರೇಷ್ಠ ಮತ್ತು ಗೌರವಯುತ ಎಂಬ ಭಾವನೆ ಭಾರತೀಯರಲ್ಲಿ ಇನ್ನೂ ಅಳಿದಿಲ್ಲ. ಒಕ್ಕಲಿಗನೊಕ್ಕದಿರೆ ಬಿಕ್ಕುವುದು ಜಗವೆಲ್ಲ ಎಂಬ ನಾಣ್ಣುಡಿಯು ನೇಗಿಲಾಶ್ರಯದಲ್ಲಿ ನಮ್ಮ ನಾಗರಿಕತೆಯು ಬದುಕಿತ್ತು ಎಂಬ ಸತ್ಯದರ್ಶನವನ್ನು ಮಾಡಿಸುತ್ತದೆ. ಪ್ರಕೃತಿಯೊಂದಿಗೆ ಸಾಮರಸ್ಯದಲ್ಲಿ ಬದುಕುವ ಕಾಲವು ಕಳೆದುಹೋಗಿ ವಿರಸದೊಂದಿಗೆ ಜೀವನ್ಮರಣದ ಸ್ಥಿತಿಗೆ ಬಂದ ಈ ಕಾಲಘಟ್ಟದಲ್ಲಿ ನಾವು ಎಚ್ಚತ್ತುಕೊಳ್ಳದಿದ್ದರೆ ಅಪಾಯ ತಪ್ಪಿದ್ದಲ್ಲ. ಒಟ್ಟಿನಲ್ಲಿ ಹಳ್ಳಿಮತ್ತು ನಗರದ ಬದುಕಿನ ನಡುವೆ ಕಂದರವುಂಟಾಗಿದೆ. ಈ ಬದುಕಿನ ಬಾಂಧವ್ಯವನ್ನು ಬೆಸೆಯುವ ಸೇತು ನಿರ್ಮಾಣವಾಗಬೇಕಿದೆ.
ಆ ನಿಟ್ಟಿನಲ್ಲಿ ಪರಿಹಾರೋಪಾಯಗಳನ್ನು ಯೋಚಿಸಿ ರೂಪಿಸಿದ ಯೋಜನೆಯೇ ಈ ಗ್ರಾಮರಾಜ್ಯ. ಗ್ರಾಮಗಳಲ್ಲಿ ಬೆಳೆದ ದವಸಧಾನ್ಯಗಳು, ಹಣ್ಣುತರಕಾರಿಗಳು, ಇವೆಲ್ಲ ವಾಣಿಜ್ಯೀಕರಣದಿಂದ ನಗರವನ್ನು ಸೇರುತ್ತವೆ. ನಗರದ ಸಿದ್ಧಾಹಾರಗಳು ಝಂಕ್‌ ತಿನಿಸುಗಳು ಗ್ರಾಮಕ್ಕೆ ಬರುತ್ತವೆ.
ಈ ಎರಡೂ ಸಂದರ್ಭಗಳಲ್ಲಿ ಮುಗ್ಧಗ್ರಾಹಕರ ಶೋಷಣೆಯು ನಡೆಯುತ್ತದೆ. ನಮ್ಮ ಪಕ್ಕದ ಮನೆಯ ಕೊಟ್ಟಿಗೆಯಲ್ಲಿ ಆಕಳು ಹೈನಾದರೂ ನಮ್ಮ ಮನೆಗೆ ಪ್ಯಾಕೆಟ್ ಹಾಲು ಬರುತ್ತದೆ.
ಈ ಎಲ್ಲ ವಿಪರ್ಯಾಸಗಳನ್ನು ಹೋಗಲಾಡಿಸಿ ಗ್ರಾಮೀಣರ ಬದುಕನ್ನು ಹಸಿರಾಗಿಸುವುದು, ನಾಗರಿಕರ ಜೀವನವನ್ನು ಹಸನಾಗಿಸುವದು ಈ ಗ್ರಾಮರಾಜ್ಯಯೋಜನೆಯ ಮೂಲೋದ್ದೇಶ.

ಯೋಜನೆಯ ಸ್ವರೂಪ :

 •   ಪ್ರತಿಕುಟುಂಬವೂ ಆರಂಭಿಕ ಸದಸ್ಯವನ್ನು ಹೊಂದಬೇಕು.
 • ಪ್ರತಿತಿಂಗಳು ಕುಟುಂಬಕ್ಕೆ ಬೇಕಾಗುವ ಆಹಾರ-ದಿನಸಿಗಳ ಪಟ್ಟಿಯಲ್ಲಿ ಗುರುತಿಸಿ ಹಣನೀಡುವುದು.
 • ಎರಡು ದಿನಗಳಲ್ಲಿ ಬಯಸಿದ ವಸ್ತುಗಳನ್ನು ಮನೆಯಲ್ಲಿಯೇ ಪಡೆಯುವುದು.
 • ಗ್ರಾಮಗಳಲ್ಲಿ ಬೆಳೆದ ಕೃಷ್ಯುತ್ಪನ್ನಗಳ ಸಕಾಲದಲ್ಲಿ, ಸರಿಯಾದಮೌಲ್ಯಕ್ಕೆ ವಿಕ್ರಯ.

ಯೋಜನೆಯ ಉದ್ದೇಶ :

 • ಕೃಷಿ ಮತ್ತು ಕೃಷ್ಯವಲಂಬಿತ ಉದ್ಯೋಗಗಳನ್ನು ಪ್ರೋತ್ಸಾಹಿಸುವುದು.
 • ಗ್ರಾಹಕವಸ್ತುಗಳ ಸಂಗ್ರಹ ಮತ್ತು ವಿಲೇವಾರಿ.
 • ಗವ್ಯೋತ್ಪನ್ನಗಳ ಸಂಗ್ರಹ ಮತ್ತು ವಿಲೇವಾರಿ.
 • ಕೃಷಿಕರ್ಮ ತರಬೇತಿ, ಮತ್ತು ಪರಿಣಿತ ಕರ್ಮಚಾರಿಗಳ ಸೌಲಭ್ಯ.
 • ಭಾರತೀಯಗೋತಳಿಗಳನ್ನು ಅಭಿವೃದ್ಧಿಪಡಿಸುವುದು.
 • ಸಾವಯವ ಕೃಷಿಪದ್ಧತಿಯ ಅಳವಡಿಕೆ ಪ್ರೋತ್ಸಾಹ.
 • ವಿವಿಧ ಕೌಶಲಗಳ ತರಬೇತು ಮತ್ತು ಸಮೂಹವಿಮಾ ಯೋಜನೆ.
 • ಗೃಹೋಪಯೋಗಿ ವಸ್ತುಗಳ ಮೌಲ್ಯವರ್ಧನೆ ಮತ್ತು ಮಾರಾಟ.
 • ಸೌರಶಕ್ತಿ, ಮರುಬಳಕೆಯ ಇಂಧನ ಯೋಜನೆ, ಗೋಬರ್ ಅನಿಲ, ಕಿರುವಿದ್ಯುದುತ್ಪಾದನೆಯ ಪ್ರೋತ್ಸಾಹ,
 • ಗ್ರಾಮೀಣ ಕುಟುಂಬಗಳ ಸರ್ವವಿಧ ಅಗತ್ಯಗಳನ್ನು ಪೂರೈಸುವುದು.
 • ಕೃಷಿತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು.
 • ಗೃಹೋಪಯೋಗಿ ವಸ್ತುಗಳ ಸಮರ್ಪಕ ಬಳಕೆಯ ಕುರಿತು ಮಹಿಳೆಯರಿಗೆ ತರಬೇತಿ.
 • ಗ್ರಾಮ್ಯೋತ್ಪನ್ನಗಳ ಮೌಲ್ಯವರ್ಧನೆ ಮತ್ತು ಮಾರಾಟವ್ಯವಸ್ಥೆ ಕಲ್ಪಿಸುವುದು.
 • ವಲಯ/ಮಂಡಲಸೂಚಿತ ಸ್ವಸಹಾಯಗುಂಪುಗಳಿಗೆ ಯೋಜನೆಯ ಅನುಷ್ಠಾನಕ್ಕೆ ಆರ್ಥಿಕ ಸಹಾಯ.
 • ಯೋಜನೆಯ ಉದ್ದೇಶ ಸಾಫಲ್ಯಕ್ಕಾಗಿ ದೇಶವಿದೇಶದ ವಿಶ್ವವಿದ್ಯಾಲಯಗಳ, ಸಂಘಸಂಸ್ಥೆಗಳ ಜೊತೆಗೆ ತರಬೇತಿ ಮತ್ತು ಕಾರ್ಯಕ್ರಮಗಳ ವಿನಿಮಯ.
 • ಪಟ್ಟಣ-ನಗರವಾಸಿಗಳಿಗೆ ಸೂಕ್ತಬೆಲೆಗೆ, ಸರಿಯಾದ ಮಾಪನದ, ಯೋಗ್ಯ ಕೃಷಿ ಹಾಗೂ ಕೃಷಿಯೇತರ ಉತ್ಪಾದನೆಗಳನ್ನು ಒದಗಿಸುವುದು.
 • ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸುವುದು.
 • ಸಮಾಜದ ಗ್ರಾಹಕರಮೇಲಿನ ದೌರ್ಜನ್ಯ ನಿವಾರಣೆ.
 • ಸಮಾಜಬಂಧುಗಳ ಸರಕು ಸಾಗಣೆ ಮತ್ತು ಪ್ರಯಾಣವೆಚ್ಚ ಕಡಿಮೆಗೊಳಿಸುವುದು.

ಸದಸ್ಯರಿಗೆ ಯೋಜನೆಯ ಪ್ರಯೋಜನಗಳು :

 • ಅಗತ್ಯವಸ್ತುಗಳನ್ನು ಮನೆಯಲ್ಲಿಯೇ ಪಡೆಯುವ ಸೌಕರ್ಯ.
 • ಆಹಾರದಿನಸಿ ಖರೀದಿಯಲ್ಲಿ ೧೫-೨೦% ಹಣದ ಉಳಿತಾಯ.
 • ಸಕಾಲದಲ್ಲಿ, ಸರಿಯಾದವಸ್ತುಗಳು, ಸಮರ್ಪಕತೂಕ ಅಳತೆಯಲ್ಲಿ, ಯೋಗ್ಯಬೆಲೆಗೆ ಕ್ರಯ ವಿಕ್ರಯ.
 • ಹಳ್ಳಿಗಳ ವೃದ್ಧರು ನಿಶ್ಚಿಂತೆಯಿಂದ ಕುಟುಂಬನಿರ್ವಹಿಸಬಹುದು.
 • ಸಣ್ಣಪುಟ್ಟ ಹಿಡುವಳಿ ರೈತರಿಗೆ ಪಟ್ಟಣದ ತಿರುಗಾಟವ್ಯಯದಿಂದ ಮುಕ್ತಿ.
 • ನಗರದ ಗ್ರಾಹಕರಿಗೆ ಗ್ರಾಮೋತ್ಪನ್ನಗಳು ಮತ್ತು ಶುದ್ಧ ಆಹಾರವಸ್ತುಗಳ ಪ್ರಾಪ್ತಿ.
 • ಗೃಹೋದ್ಯಮದಿಂದ ಮಹಿಳೆಯರಿಗೆ ಅಗತ್ಯ ಆದಾಯ.
Facebook Comments Box