ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.
ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ ಶ್ರೀಗುರುಚರಣಕೆ....

ಶ್ರದ್ಧಾಸುಮ ಶ್ರೀಗುರುಚರಣಕೆ….

ಶ್ರದ್ಧಾಸುಮ 10:

ಬ್ರಹ್ಮೈಕ್ಯ ಪೂಜ್ಯಗುರುವರ್ಯರು
-ನಾನು ದರ್ಶನ ಮಾಡಿದಂತೆ

                                   ಈಶ್ವರ್ ಭಟ್-ಕಜೆ

ತಿಳಿಗಾಳಿಗೆ ಪಟಪಟನೆ ಹಾರುತ್ತಿದ್ದ ಕಾಷಾಯವಸ್ತ್ರ: ಮಟ್ಟಸ ಎತ್ತರದ ದಿವ್ಯಕಾಯ, ಮಂದಹಾಸದ ಮೊಗದ ಮೇಲೆ ತೆಳುವಾಗಿ ಬೆಳೆದಿದ್ದ   ಗಡ್ಡಮೀಸೆ;  ಅಗ್ನಿಪುರುಷನೇ ಮೈವೆತ್ತು  ಬಂದು ನಿಂತಂತಹ ಭಂಗಿ; ಉದಯ ಸೂರ್ಯನಿಗೆ ಮೊಗ ಮಾಡಿ ನಿಂತ ಪ್ರತಿಸೂರ್ಯ. ಹೌದು ! ಶಿರಬಾಗಿತ್ತು… ಮನಸ್ಸು ಒಲಿದಿತ್ತು. “ಶ್ರೀ ಶಂಕರ ಸ್ವರೂಪಾಯ ಕಾಮಿತಾರ್ಥ ಪ್ರದಾಯಿನೇ | ಗುರುವೇ ರಾಘವೇಂದ್ರಾಯ ಭಾರತೀಯತಯೇ  ನಮಃ ||”… ಎಂದು ಉಲಿದಿತ್ತು.

1956 ಆ ಶುಭದಿನವನ್ನು ಸ್ಮರಿಸಿದರೆ ಇಂದಿಗೂ ಮೈಮನಸ್ಸು ಪುಳಕಿತಗೊಳ್ಳುತ್ತದೆ. ವಿದ್ವಾಂಸರಿಗೆ ಗೌರವಕೊಡುವ ಸಂಸ್ಕಾರ ಎಳವೆಯಲ್ಲೇ ಅಡಕವಾಗಿದ್ದ ನನಗೆ, ವೇದಜ್ಞರೂ, ಪ್ರಕಾಂಡ ಪಂಡಿತರೂ, ಸಂಸ್ಕೃತಜ್ಞರೂ ಆಗಿದ್ದ ಬ್ರಹ್ಮಶ್ರೀ ಪುರೋಹಿತ ಶಂಕರನಾರಾಯಣ ಭಟ್ಟರ ಮೇಲೆ ವಿಶೇಷ ಗೌರವವಿತ್ತು. ಮಠ, ಗುರುಗಳ ಬಗ್ಗೆ ಏನೇನೂ ತಿಳಿಯದ ಯುವಕನಾದ ನನಗೆ ನಮ್ಮ ಗುರುಗಳಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳ ಬಗ್ಗೆ ತಿಳಿಸಿ, ಮೇಲೆ ತಿಳಿಸಿದ 1956 ರ ಆ ಶುಭದಿನ ನನಗೆ ಗುರುಗಳ ದರುಶನ ಮಾಡಿಸಿದರು. ಆ ಪುಳಕಿತ ದಿನದಿಂದ ಶ್ರೀಗುರುಗಳು ಬ್ರಹ್ಮೈಕ್ಯರಾಗುವವರೆಗೂ ಅವರ ನಿಕಟ ಸಂಪರ್ಕ ನನ್ನ ಪಾಲಿಗೆ ಒದಗಿಬಂದುದು ನನ್ನ ಬದುಕಿಗೆ ಧನ್ಯತೆಯನ್ನು ತಂದಿದೆ.

ಸುವರ್ಣಮಂಟಪದಲ್ಲಿ ಚಂದ್ರಮೌಳೀಶ್ವರ ದೇವರ ಪೂಜಾನಿರತವಾಗಿರುವ ಶ್ರೀಗುರುಗಳ ವರ್ಣಚಿತ್ರ ಮಂಗಳೂರು ಹೋಬಳಿಯ ಹೆಚ್ಚಿನ ಮನೆಗಳಲ್ಲಿ ಇಂದಿಗೂ ಕಾಣಬಹುದು. ಬಂಟ್ವಾಳ ತಾಲೂಕಿನ ಕೆದಿಲದ ಬಡೆಕ್ಕಿಲ ಪಂಡಿತ ಈಶ್ವರ ಭಟ್ಟರಲ್ಲಿ ಗುರುಗಳು ಮೊಕ್ಕಾಂಮಾಡಿದ್ದರು. ಒಂದು ದಿನ ಪೂಜಾವೇಳೆಯಲ್ಲಿ ಹವ್ಯಾಸಿ ಭಾವಚಿತ್ರಗಾರನಾಗಿದ್ದ ನಾನು ಅಲ್ಲಿ ಕ್ಲಿಕ್ಕಿಸಿದ ಆ ಭಾವಚಿತ್ರವು ಗುರುಗಳ ಮೆಚ್ಚುಗೆಗೆ ಪಾತ್ರವಾದ್ದರಿಂದ, ಎಲ್ಲರ ಮನೆಗಳಲ್ಲಿ ಇರುವಂತಾದುದು ನನಗೊಂದು ಸ್ಮರಣೀಯ ಅನುಗ್ರಹ !

ಆಗ ಕೆದಿಲದಲ್ಲಿ ವೇ. ಮೂ. ಚ. ಮೂ. ಈಶ್ವರ ಶಾಸ್ತ್ರಿಗಳು ನಡೆಸುತ್ತಿದ್ದ ಸ್ವಾಧ್ಯಾಯ ಮಂಡಳಿಯ ಸಂಸ್ಕೃತ ಪರೀಕ್ಷೆಗಳ ಪ್ರಮಾಣಪತ್ರ ವಿತರಣಾ ಸಮಾರಂಭ ಶ್ರೀಗಳವರ ಘನಸಾನ್ನಿಧ್ಯದಲ್ಲಿ ನಡೆಯಿತು. ಆ ಸಂದರ್ಭಕ್ಕಾಗಿಯೇ ಶ್ರೀ ಬಡೆಕ್ಕಿಲ ಸಾಹುಕಾರ್ ವೆಂಕಟರಮಣ ಭಟ್ಟರು ರಚಿಸಿದ ಪ್ರಾರ್ಥನಾಗೀತೆ “ಸ್ವಾಮಿ ಶ್ರೀ ಗುರುರಾಘವೇಂದ್ರ ತೇ ನಮಾಮಿ ಪಾದಾಂಬುಜಯುಗಕೆ ಯತೀಂದ್ರ…”-ಅರ್ಥಪೂರ್ಣವಾಗಿತ್ತು. ಮಂಗಳೂರು ಹೋಬಳಿಗೆ ಒಂದು ಪೂರ್ಣ ಪ್ರಮಾಣದ ಮಠ ಆಗಬೇಕೆಂಬುದು ಶ್ರೀ ಗುರುಗಳ ಒಂದು ಸಂಕಲ್ಪವಾಗಿತ್ತು. ಅದ್ವಿತೀಯ ತಪೋಧನರಾದ ಶ್ರೀಗುರುಗಳ ನಿಜಾರ್ಥದಲ್ಲಿ ವಿಶ್ವಾಮಿತ್ರರೇ ಹೌದು ! ಕಲ್ಲರಳಿ ಹೂವಾದುದು; ಬಂಜರು ನೆಲದಲ್ಲಿ ಹಸಿರ ಬಸಿರ ಹೊಮ್ಮಿಸಿದುದಕ್ಕೆ ಜ್ವಲಂತ ಸಾಕ್ಷಿ-ಇಂದುತಲೆ ಎತ್ತಿ  ನಿಂತಿರುವ ಮಾಣಿಮಠ. ಶ್ರೀರಾಮನ ಅಸೀಮ ಪೂಜಕರಾದ ಗುರುಗಳಿಗೆ ಮಾಣಿ-ನೇರಳಕಟ್ಟೆ ಸಮೀಪದ ಆ ನೆಲದಲ್ಲಿ ಕಂಡದು “ರಾಮದಾಸ”ನ ಸಾನ್ನಿಧ್ಯ !!

ಮಂಗಳೂರಿನಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದ ನೇರಳಕಟ್ಟೆಯ ಶ್ರೀ ಬಿ.ಆರ್. ಕಾಮತರು ಕೆಲವೇ ದಿನಗಳ ಹಿಂದೆ ಗುರುಗಳ ಗಮನ ಸೆಳೆದ ಆ ಸ್ಥಳವನ್ನು ಖರೀದಿಸಿದ್ದು ತಿಳಿದು; ಅವರನ್ನು ಭೇಟಿಗಾಗಿ ಆಹ್ವಾನಿಸಲಾಯಿತು. ತಾನು ಬೇಕೆಂದು ಖರೀದಿಸಿದ್ದರೂ ಶ್ರೀಗುರುಗಳು ಅಪೇಕ್ಷಿಸಿದ್ದಾರೆಂದು ತಿಳಿದಾಕ್ಷಣ ಕಾಮತರು ತಾವು ಖರೀದಿಸಿದ ಮೌಲ್ಯಕ್ಕೇ ಅದನ್ನು ಸಂಸ್ಥಾನಕ್ಕೆ ಬಿಟ್ಟುಕೊಡುವ ಉದಾರತೆಯನ್ನು ತೋರಿದರು. ತಾನು ನೀಡುತ್ತಿರುವ ಸ್ಥಳದಲ್ಲಿ ಶ್ರೀಮಠದ ಸ್ಥಾಪನೆಯಾಗಿ, ದೇವತಾಸಾನ್ನಿಧ್ಯ ಉಂಟಾಗಿ; ಭಕ್ತಜನರು ಬಂದು ಹೋಗುವಂತಾಗುವುದು ತನ್ನ ಸೌಭಾಗ್ಯವೆಂದು ತಿಳಿದ ಶ್ರದ್ಧಾವಂತರು ಶ್ರೀ ಬಿ. ಆರ್. ಕಾಮತರು.

 ಶ್ರೀಗುರುಗಳು ವಾಸ್ತು ವಿಚಾರದಲ್ಲೂ ವಿಶೇಷ ಪಾಂಡಿತ್ಯ ಹೊಂದಿದ್ದರು. ಅವರ ನೇತೃತ್ವದಲ್ಲಿ ಕಟ್ಟಡ ಸಮಿತಿ ರಚಿಸಿ, ಮಠದ ನಿರ್ಮಾಣಕಾರ್ಯ ಸಾಗಿತು. ಮಠದ ಗರ್ಭಗುಡಿಯ ಶಿಲಾನ್ಯಾಸ ಸಂದರ್ಭದಲ್ಲಿ ಸುವರ್ಣನವರತ್ನಾದಿಗಳನ್ನಲ್ಲದೆ  ತಾಮ್ರದ ಫಲಕದಲ್ಲಿ ಸಮಸ್ತ ಋಷಿಮುನಿಗಳನ್ನು, ದೇವತೆಗಳನ್ನು ಸ್ತುತಿಸುವ ಸಂಸ್ಕೃತ ಶ್ಲೋಕವನ್ನು ಬರೆಸಿ; ಪ್ರತಿಷ್ಠಾದಿನಾದಿಗಳನ್ನು ಬರೆಸಿ ಅಲ್ಲಿ ಸ್ಥಾಪಿಸಿದ್ದಾರೆ. ಆಗ ದಿ|| ಶ್ರೀ ಕೈಂತಜೆ ರಾಮಭಟ್ಟರಲ್ಲಿ ಮೊಕ್ಕಾಂ ಮಾಡಿ ದಿನಕ್ಕೆ ಎರಡು ಬಾರಿ ಆಗಮಿಸಿ ಕಟ್ಟಡದ ರಚನೆಯ ಕಾರ್ಯದಲ್ಲಿ ಮಾರ್ಗದರ್ಶನ ನೀಡುತ್ತಿದ್ದರು. ಅಂತಹದೇ ಒಂದು ಸಂದರ್ಭದಲ್ಲಿ ನಮ್ಮ ಮನೆಗೂ ಗುರುಗಳು ಆಗಮಿಸಿ, 4 ದಿನ ಮೊಕ್ಕಾಂ ಮಾಡಿದ್ದು; ಅವರ ಸೇವೆಗೆ ಅವಕಾಶ ಮಾಡಿಕೊಟ್ಟರು.  1972   ರ ಫೆಬ್ರವರಿಯ ಶುಭದಿನದಲ್ಲಿ ಶ್ರೀ ಶ್ರೀಗಳವರ ದಿವ್ಯ ಉಪಸ್ಥಿತಿಯಲ್ಲಿ; ಅವರ ಸಮರ್ಥ ನಿರ್ದೇಶನದಲ್ಲಿ ಮಠದ ಪ್ರಾರಂಭೋತ್ಸವವು ವಿಜೃಂಭಣೆಯಿಂದ  ನೆರವೇರಿತು.

ಶ್ರೀಗಳವರ ಮೊಕ್ಕಾಂ ಅಥವಾ ಕಾರ್ಯಕ್ರಮ ಮಂಗಳೂರು ಹೋಬಳಿಯಲ್ಲಿ ಎಲ್ಲಿಯೇ ಇರಲಿ ಅಲ್ಲಿಗೆ ನಾನು ಹಾಜರಾಗುತ್ತಿದ್ದೆ. ದೂರದ ನೀರ್ಚಾಲು, ಕೋಳ್ಯೂರು, ಎಡನೀರು, ಪೆರ್ಲ, ಬದಿಯಡ್ಕಗಳ ಮೊಕ್ಕಾಂಗೆ ಹೋಗಿ ರಾತ್ರೋರಾತ್ರಿ ಹಿಂದಿರುಗಿದ ಅನೇಕ ಸಂದರ್ಭಗಳಿವೆ. ಅವರದು ಅಯಸ್ಕಾಂತದಂತಹ ವ್ಯಕ್ತಿತ್ವ. ಒಮ್ಮೆ ಅವರ ಸಂಪರ್ಕಕ್ಕೆ ಬಂದವರು ಅವರ ಅಪಾರ ಪಾಂಡಿತ್ಯ,ತಪಸ್ಸು, ಅನುಷ್ಠಾನ, ಶಿಷ್ಯವಾತ್ಸಲ್ಯಕ್ಕೆ ಮಾರು ಹೋಗುತ್ತಿದ್ದರು. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ….” ಎಂಬ ದಾಸರ ಹಾಡು ನೆನಪಾಗುತ್ತದೆ.

 ಭಗವಂತನ ದಿವ್ಯ ಸಾಕ್ಷಾತ್ಕಾರವನ್ನು ಅಂತಃಚಕ್ಷುವಿನಲ್ಲಿ ಕಂಡ ಶ್ರೀಗುರುಗಳ ಭೌತಿಕ ಶರೀರದ ಚಕ್ಷುಗಳೂ ಅಷ್ಟೇ ಸೂಕ್ಷ್ಮ, ಚುರುಕು, ಶಿಷ್ಯಸಮುದಾಯವನ್ನು ಬಿಡುಗಣ್ಣರಂತೇ ಗಮನಿಸುತ್ತಿದ್ದ, ಅಂತರಂಗವನ್ನು ಬಗೆದು ಬಸಿದು ನೋಡುತ್ತಿದ್ದ ಶ್ರೀಚರಣರು ಬ್ರಹ್ಮೈಕ್ಯರಾಗುವವರೆಗೂ ಅಂದರೆ ತಮ್ಮ ಎಪ್ಪತ್ತೈದನೆಯ ವಯಸ್ಸಿನವರೆಗೂ ಕನ್ನಡಕ ಧರಿಸಿದವರಲ್ಲವೆಂದರೆ ಯಾರೂ ನಂಬಲಾರರು. ಆದರಿದು  ಸೂರ್ಯ ಬೆಳಕಿನಷ್ಟೇ ಸತ್ಯ ! ದೂರವಾಣಿ ಸೌಲಭ್ಯ ಮಠಕ್ಕಿದ್ದರೂ ಒಂದು ದಿನವೂ ಅದನ್ನು ನೇರವಾಗಿ ಉಪಯೋಗಿಸಿದವರಲ್ಲ. ಪರಿಚಾರಕರಿಂದ ಸಂದೇಶ ಪಡೆದು ಅವರ ಮೂಲಕವೇ ಉತ್ತರ ನೀಡುತ್ತಿದ್ದರು.

  ಬೇರೆ ಬೇರೆ ಕಡೆಗಳಲ್ಲಿ ಜೀರ್ಣಾವಸ್ಥೆಹೊಂದಿದ್ದ ಹಲವಾರು ಮಠ ಮಂದಿರಗಳ “ಕಾಯಕಲ್ಪ” ಶ್ರೀಗುರುಗಳು ಮಾಡಿದ್ದಾರೆ. ಮಂಗಳೂರು ಹೋಬಳಿಯ ಮೇಲೆ ವಿಶೇಷವಾದ ವಾತ್ಸಲ್ಯ ಅವರಿಗಿತ್ತು. ಅವರು ಅಸ್ತಂಗತರಾಗುವ ಮೊದಲು ಕೆಲವು ಕಾಲ ದೇಹಾರೋಗ್ಯ ಚೆನ್ನಾಗಿಲ್ಲದೇ ಇದ್ದಾಗಲೂ ಮಾಣಿಮಠಕ್ಕೆ ಒಮ್ಮೆ ಬಂದುಹೋಗುವ ಇಚ್ಛೆ ಇದೆಯೆಂದು ತಿಳಿಸಿದ್ದರು. ಅದಕ್ಕಾಗಿಯೇ ಮಾಣಿಮಠದಲ್ಲಿ ಶ್ರೀಗುರುಗಳಿಗೆ ಮಾಳಿಗೆಯಿಂದ ಕೆಳ ಅಂತಸ್ಥಿಗೆ ಬಂದು ಹೋಗಲು ಕಷ್ಟವಾಗುವುದರಿಂದ, ಎಲ್ಲ ವ್ಯವಸ್ಥೆಗಳೂ ವಿಶ್ರಾಂತಿ ಕೊಠಡಿಯ ಒತ್ತಿನಲ್ಲೇ ಇರಬೇಕೆಂದು ಇಚ್ಛಿಸಿ ಶಿಷ್ಯ ಪಡೀಲು ರಾಮಕೃಷ್ಣಭಟ್ಟರ ಮೂಲಕ ಬೇಕಾದ ವ್ಯವಸ್ಥೆಯನ್ನು ಮಾಡಿಸಿದ್ದರು. ಪೆರಾಜೆಯ ಮಾಣಿಮಠಕ್ಕೆ ಬೆಳ್ಳಿಹಬ್ಬವೂ; ಮಠದ ಶ್ರೀರಾಮ ಸಂಸ್ಕೃತ ವೇದಪಾಠಶಾಲೆಗೆ ದಶಮಾನವೂ ಕೂಡಿ ಬಂದಾಗ ಸಡಗರದಿಂದ ಶ್ರೀಗುರುಗಳ ಹಾಗೂ ಕಿರಿಯ ಶ್ರೀಗಳವರ ಉಪಸ್ಥಿತಿಯಲ್ಲಿ ಆಚರಿಸಬೇಕಂದು ಈ ಪ್ರಾಂತದ ಶಿಷ್ಯಜನರು ಅಭಿಪ್ರಾಯಪಟ್ಟರು. ಅದರಂತೆ ಗಿರಿನಗರದಲ್ಲಿದ್ದ ಶ್ರೀಗಳಲ್ಲಿ ಅರಿಕೆ ಮಾಡಿಕೊಳ್ಳುವುದಕ್ಕೆ ಹೋಗಿದ್ದವರಲ್ಲಿ ನಾನೂ ಒಬ್ಬ. ಆಗ ಮಾಣಿಮಠಕ್ಕೆ ಬರುವುದಕ್ಕೆ ತಮಗಿರುವ ಒಲವನ್ನು ವ್ಯಕ್ತಪಡಿಸಿ; ಕಾರ್ಯಕ್ರಮವನ್ನು ನಿಗದಿತ ಸಮಯಕ್ಕಿಂತ ಕೆಲವು ಕಾಲ ಮುಂದೂಡಿದರೆ, ತನ್ನ ದೇಹಸ್ಥಿತಿ ಸುಧಾರಿಸಿ ತಾನು ಬರಬಹುದೆಂದು ಅಭಿಪ್ರಾಯಪಟ್ಟರು. ಆ ಅನಾರೋಗ್ಯದಲ್ಲೂ ಮಾಣಿಮಠಕ್ಕೆ ಬರುವ ಇಚ್ಛೆ ಪ್ರಕಟಿಸಿದ್ದರೆಂದರೆ ಅವರಿಗಿರುವ ವಾತ್ಸಲ್ಯದ ಅರಿವು ಉಂಟಾದೀತು. ಶಿಷ್ಯರೆಲ್ಲ ಸುಖಿಗಳಾಗಬೇಕು-ಸ್ವಾವಲಂಬಿಗಳಾಗಬೇಕೆಂದು ಅವರು ಆಶಿಸುತ್ತಿದ್ದರು. ಅವರ ಭೇಟಿ, ಅನುಗ್ರಹ, ಆಶೀರ್ವಾದಗಳಿಂದ ಸಮಾಜ ಅಭಿವೃದ್ಧಿ ಆಗಿದ್ದೂ ಹೌದು! ಅವರು ನೀಡುತ್ತಿದ್ದ ಮಂತ್ರಾಕ್ಷತೆ ನಿಜ ಅರ್ಥದಲ್ಲಿ “ಮಂತ್ರ ಅಕ್ಷತೆ“ಯೇ ಆಗಿ ಪರಿಣಾಮ ಬೀರುತ್ತಿತ್ತು. “ನೀನೊಲಿದರೆ ಕೊರಡು ಕೊನರುವುದಯ್ಯಾ…” ಎಂಬಂತೆ ಗುರುಗಳ ಪಾದಸ್ಪರ್ಶ ಆದಲ್ಲೆಲ್ಲ ಅಭಿವೃದ್ಧಿ ಆಗಿರುವುದನ್ನು ನಾನು ಹತ್ತಿರದಿಂದ ನೋಡಿಬಲ್ಲೆ.

    ಮಾಣಿಯ ಪೆರಾಜೆ ಮಠದಲ್ಲಿ ನಡೆದ ಶ್ರೀಗಳವರ ಷಷ್ಯ್ಟಬ್ದ ಸಮಾರಂಭವು ಒಂದು ಚಿರಸ್ಮರಣೀಯ ಅನುಭವ ! ಹವ್ಯಕ ಸಮಾಜದ ಉತ್ಸವದ ರೀತಿಯಲ್ಲಿ ನಡೆದ ಆ ಸಮಾರಂಭದಲ್ಲಿ ಶ್ರೀಮಠದ ಹಸ್ತಿದಂತ ಸಿಂಹಾಸನ ಪ್ರದರ್ಶನ; ಶ್ರೀಗಳವರ ಕಿರೀಟಧಾರಣೆ; ಅಡ್ಡಪಲ್ಲಕ್ಕಿ ಉತ್ಸವ -ಹೀಗೆ ಎಲ್ಲವೂ ವೈಭವದಿಂದ ನಡೆಯಿತು. ಕೆಟ್ಟವಿಚಾರ, ಕೆಟ್ಟಪ್ರಚಾರದ ಬಗ್ಗೆ ಗುರುಗಳು “ವಜ್ರಾದಪಿ ಕಠೋರಾಣಿ…” ಎಂಬಂತೆ ವರ್ತಿಸುತ್ತಾರೆ. ಆದರೆ ತನ್ನ ಶಿಷ್ಯರ ಬಗ್ಗೆ ಅವರು “ಮೃದೂನಿ ಕುಸುಮಾದಪಿ…” ಆಗಿದ್ದರು. ನಮ್ಮ ಈಗಿನ  “ಕೇದಾರ” ಮನೆಯ ನಿರ್ಮಾಣದ ಆರಂಭಕ್ಕೆ ಮೊದಲು ಸ್ಥಳಕ್ಕೆ ಆಗಮಿಸಿದ ಗುರುಗಳು ತಮ್ಮ ಪಾದಸ್ಪರ್ಶ, ಮಂತ್ರಾಕ್ಷತೆಗಳಿಂದ ಈ ಸ್ಥಳವನ್ನು ಪಾವನಗೊಳಿಸಿದರು. ಮನೆಯ ಪ್ರವೇಶೋತ್ಸವಕ್ಕೆ ಮೊದಲು ಮಾಣಿಮಠದಿಂದ ಸಂಜೆ ಹೊತ್ತು ದಯಮಾಡಿಸಿ, ಪ್ರತೀ ಕೊಠಡಿ, ಕೊಠಡಿಗೂ ಪಾದಸ್ಪರ್ಶ ಮಾಡಿ, ಆಶೀರ್ವದಿಸಿ, ಮನೆಯನ್ನು ಪಾವನಗೊಳಿಸಿದರು. ಮನೆಯ ಗೃಹಪ್ರವೇಶ ಸಮಾರಂಭ ನಿಶ್ಚಿತಗೊಂಡದ್ದು, ಎರಡು ದಿನಕ್ಕೆ ಮೊದಲು ವೃದ್ಧಿಸೂತಕದಿಂದಾಗಿ ಮುಂದೂಡುವಂತಾಯಿತು. ಆಗ ಶ್ರೀಗಳು ನಿಟ್ಟೂರಲ್ಲಿ ಮೊಕ್ಕಾಂ ಮಾಡಿದ್ದರು. ಅಲ್ಲಿಂದ ನಮ್ಮಲ್ಲಿಗೆ ಖುದ್ದಾಗಿ ಒಬ್ಬ ರಾಯಭಾರಿಯನ್ನು ಕಳುಹಿಸಿ ಗೃಹಪ್ರವೇಶಕ್ಕೆ ಮುಂದಿನ ದಿನ ಅವರಾಗಿಯೇ ನಿಶ್ಚಯಮಾಡಿ, ತುರ್ತುಭೇಟಿಗೆ ಆದೇಶವಿತ್ತಿದ್ದರು. ಕಾನೂನು ಪದವಿ ಹೊಂದಿದ್ದರೂ; ವಕೀಲ ವೃತ್ತಿಯಿಂದ ವಿಮುಖನಾಗಿದ್ದ ನನ್ನ ದ್ವಿತೀಯ ಪುತ್ರನನ್ನು ಗಿರಿನಗರಕ್ಕೆ ಬರಹೇಳಿ, ಅವನಲ್ಲಿ ಭರವಸೆ ಮೂಡಿಸಿ, ಆಶೀರ್ವದಿಸಿ; ವಕೀಲವೃತ್ತಿ ಕೈಗೊಳ್ಳುವಂತೆ ಅಪ್ಪಣೆ ನೀಡಿದರು … ಇದನ್ನೆಲ್ಲ ನೆನಪಿಸಿಕೊಂಡರೆ “ಮೃದೂನಿ ಕುಸುಮಾದಪಿ…” ಮಾತಿಗೆ ಹೆಚ್ಚಿನ ವ್ಯಾಖ್ಯಾನ ಮಾಡಿದಂತಾಗುತ್ತದೆ.

“ಕೆರೆಯ ನೀರನು ಕೆರೆಗೆ ಚೆಲ್ಲಿ…” ಎಂಬಂತೆ ಅವರೊಬ್ಬರು ಪ್ರಚಾರ ಬಯಸದ, ಗುಪ್ತದಾನಿಗಳಾಗಿದ್ದರು. ಮಣ್ಣ ಬಸಿರಿನಿಂದ ನೀರುಂಡ ಕಲ್ಪವೃಕ್ಷ ಸಿಹಿಯಾದ ಎಳೆನೀರನ್ನು ನಮಗೆ ಮರಳಿ ನೀಡುತ್ತದೆ. ಒಣಹುಲ್ಲನ್ನು, ಕಹಿಸೊಪ್ಪನ್ನು ಮೇದ ಆಕಳು ಅಮೃತ ಸಮಾನವಾದ ಮಧುರವಾದ ಹಾಲನ್ನು ನೀಡುತ್ತದೆ. ಕಡಲ ಉಪ್ಪು ನೀರಿನಿಂದ ಪುಷ್ಟಿಯಾದ ಮೇಘಗಳು ಸಿಹಿನೀರಿ ವೃಷ್ಟಿಗರೆದಂತೆ; ಸಮಾಜದಿಂದ ಸಂಗ್ರಹವಾದ ಹಣವನ್ನು ಸಮಾಜದ ಏಳಿಗೆಗೆ, ವಿದ್ವಾಂಸರ, ಪ್ರತಿಭಾನ್ವಿತರ ಪುರಸ್ಕಾರಕ್ಕೆ ಧಾರಾಳವಾಗಿ ವಿನಿಯೋಗಿಸಿದ್ದಾರೆ. ಹಲವಾರು ಸಂಘ ಸಂಸ್ಥೆಗಳಿಗೆ ಸ್ವರ್ಣ ಮಂತ್ರಾಕ್ಷತೆ ನೀಡಿ ಹರಸಿದ್ದಾರೆ. ಇತ್ತೀಚೆಗಿನ ಪವಾಡ ಸದೃಶ ಘಟನೆಯೊಂದು ಶ್ರೀಗುರುಗಳ ಮಹಿಮೆಗೆ ಹಿಡಿದ ಕನ್ನಡಿ ! ಬ್ರಹ್ಮೈಕ್ಯರಾದ ಗುರುಗಳ ಸಮಾಧಿಸ್ಥಳದಲ್ಲಿ; ಗಿರಿನಗರದಲ್ಲಿ ನಿರ್ಮಾಣಗೊಳ್ಳಲಿರುವ ಮಂದಿರದ ಶಂಕುಸ್ಥಾಪನೆಯ ಮಂಗಲ ಸುಮುಹೂರ್ತ. ಪೂಜಾವಿಧಿಗಳು ಪೂರ್ಣಗೊಂಡು ಮಂತ್ರಾಕ್ಷತೆಯ ಶುಭಗಳಿಗೆ ಶಿಷ್ಯಪರಿವಾರದ ಜೈ ಜೈಕಾರದ ದುಂದುಭಿ; ಆ ಶುಭಗಳಿಗೆ, ಆ ಸುವರ್ಣಗಳಿಗೆ ಶುಭ್ರ ನೀಲಿ ಆಗಸದಿಂದ ದೇವತೆಗಳೇ ಸಂತಸಗೊಂಡು ಪುಷ್ಪವೃಷ್ಟಿಗರೆದಂತೆ, ನಾಲ್ಕು ಪಟಪಟನೆ ಉದುರಿದ ನೀರ ಹನಿಗಳು ! ಆ ಪರಿಸರದಲ್ಲಿ ಅಂದಿನವರೆಗೂ ಕಂಡುಬರದಿದ್ದ ಗರುಡ ಪಕ್ಷಿಯೊಂದು ಗುರುಗಳ ಸಮಾಧಿಗೆ ಮೂರು ಭಾರೀ ಪ್ರದಕ್ಷಿಣಾಕಾರವಾಗಿ ಸುತ್ತು ಬಂದು ಅಗೋಚರವಾಯ್ತು !  ಆ ಕ್ಷಣದಲ್ಲಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು, ನಮ್ಮ ಇಂದಿನ ಗುರುಗಳು ಉದ್ಗರಿಸಿದ್ದು ಹೀಗೆ-“ಅದೋ, ಗರುಡವಾಹನನೇ ಬಂದ” !!

   ಬ್ರಹ್ಮೈಕ್ಯರಾದ ಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳು ತಪೋನಿಷ್ಠರೂ, ಅನುಷ್ಠಾನಪರರೂ, ಪ್ರಕಾಂಡ ಪಂಡಿತರೂ; ಮಹಾನ್ ಸಂಘಟಕರೂ, ಶಿಷ್ಯವಾತ್ಸಲ್ಯನಿರತರೂ; ವ್ಯಾವಹಾರಿಕ ರಾಜಕೀಯ ವಿಚಾರಗಳಲ್ಲಿ ಪರಿಣತರೂ ಆಗಿದ್ದು; ಅವರ ಜೀವಿತ ಕಾಲ ಹವ್ಯಕಸಮಾಜದ “ಸ್ವರ್ಣಯುಗ”!!!

            ನಮೋಸ್ತು ರಾಘವೇಂದ್ರಾಯ ಭಾರತೀ ನಾಮಭೂಷಿಣೇ
            ಅದ್ವೈತಾನಂದ ಪೂರ್ಣಾಯ ಗುರವೇ ಬ್ರಹ್ಮರೂಪಿಣೇ ||

                  || ಓಂ ಶಾಂತಿಃ ||        

*~*

Facebook Comments