ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.
ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ ಶ್ರೀಗುರುಚರಣಕೆ....

ಶ್ರದ್ಧಾಸುಮ ಶ್ರೀಗುರುಚರಣಕೆ….

ಶ್ರದ್ಧಾಸುಮ 6:

ಆಶ್ರಿತ ಪಾರಿಜಾತ ಶ್ರೀಗುರುವರ್ಯರು

ಡಾ|| ಗಣಪತಿ ಭಟ್ಟ,ಕವಲಕ್ಕಿ

“ಆಚಾರ್ಯಂ ಪರಮಾಚಾರ್ಯಂ ಶಂಕರಂ ಲೋಕಶಂಕರಂ |
ಪೂಜ್ಯಂ ಸರ್ವೇಷ್ಟದಂ ನಿತ್ಯಂ ಸದ್ಗುರುಂ ಪ್ರಣತೋsಸ್ಮ್ಯಹಂ ||
“ನಿತ್ಯಾನಂದಾಯ ಗುರವೇ ಶಿಷ್ಯಸಂಸಾರಹಾರಿಣೇ |
ಭಕ್ತಕಾರ್ಯೈಕದೇಹಾಯ ನಮಸ್ತೇ ಚಿತ್ಸದಾತ್ಮನೇ ||”

 “ಜಂತೂನಾಂ ನರಜನ್ಮ ದುರ್ಲಭಮ್’ ಎಂಬ ಶ್ರೀ ಶಂಕರ ಭಗವತ್ಪಾದರ ಉಕ್ತಿಯಂತೆ ‘ಮಾನುಷೋ ದೇಹಃ ದುರ್ಲಭಃ’ ಪ್ರಪಂಚದಲ್ಲಿ ಜೀವಕೋಟಿಯು ತಮ್ಮ ತಮ್ಮ ಕರ್ಮಾನುಸಾರವಾಗಿ ನಾನಾ ಯೋನಿಗಳಲ್ಲಿ ಜನ್ಮತಾಳುತ್ತವೆ. ಆದರೆ ಅವುಗಳಲ್ಲಿ ಮಾನವನಾಗಿ ಹುಟ್ಟುವುದು ಒಂದು ಪರಮ ಸೌಭಾಗ್ಯ. ಮಾನವನಾಗಿ ಹುಟ್ಟಿ ಆ ಜನ್ಮದಲ್ಲಿ ಸತತ ಸಾಧನೆಗೈದು ದುರ್ಲಭವಾದ ಪರಮಾತ್ಮನ ಅನುಗ್ರಹಕ್ಕೆ ಯೋಗ್ಯನಾಗಲು ಸುಕೃತಮಾತ್ರದಿಂದ ಸಾಧ್ಯ. ಕ್ರಿಮಿ ಕೀಟಗಳೇ ಮೊದಲಾದ ಹೀನ ಯೋನಿಯಲ್ಲಿ ಜನಿಸಿದ ಜೀವನು ದುಃಖ ಪರಂಪರೆಗೆ ಸಿಲುಕಿ ನರಳುತ್ತಾನೆ. ಮಾನವ ಜನ್ಮದಲ್ಲಿ ಬಂದಿರುವವನಿಗೆ ಇರುವ ಸೌಕರ್ಯಗಳು ಬೇರಾವ ಜನ್ಮದಲ್ಲೂ ಇರಲು ಸಾಧ್ಯವಾಗದು.

ಸೂಕ್ಷ್ಮವಾಗಿ ಅವಲೋಕಿಸಿದರೆ ಪರಮಪುರುಷಾರ್ಥವಾದ ಮೋಕ್ಷವನ್ನು ಸಾಧಿಸಿಕೊಳ್ಳಲು ಮಾನವಜನ್ಮ ಮಾತ್ರ ಜೀವಿಗೆ ಸುವರ್ಣಾವಕಾಶ. ಪಶು-ಪಕ್ಷಿ ಗಳಿಗಿಂತಲೂ ಭಿನ್ನವಾದ ಸದಸದ್ ವಿವೇಕ ಅಂದರೆ ಈ ಕಾರ್ಯ ಒಳ್ಳೆಯದು, ಈ ಕಾರ್ಯ ಕೆಟ್ಟದ್ದು ಎಂದು ವಿವೇಚಿಸಿ ನಡೆಯುವ ಶಕ್ತಿ ಮಾನವನಿಗೆ ಪ್ರಾಪ್ತವಾಗಿದೆ. ವಿವೇಕಿಯಾದವನು ತನ್ನ ಜೀವನದ ಸಾಫಲ್ಯಕ್ಕಾಗಿ ಸದ್ಗುರುಗಳನ್ನಾಶ್ರಯಿಸಿ ಆ ಗುರುಗಳ ಉಪದೇಶಾಮೃತವನ್ನು ಪಡೆದು ಪರಮಾತ್ಮನ ಪದತಲವನ್ನು ಪ್ರಾಪ್ತಿಸಿಕೊಳ್ಳುತ್ತಾನೆ. “ಮಾನವನು ಯಾವಾಗಲೂ ‘ಸುಖಮೇವ ಮೇ ಸ್ಯಾತ್ ದುಃಖಂ ಮನಾಗಪಿ ಮಾಭೂತ್” ಅಂದರೆ ನನಗೆ ಸದಾ ಶಾಶ್ವತವಾದ ಸುಖವೇ ಉಂಟಾಗಲಿ ಲೇಶಮಾತ್ರವೂ ದುಃಖವು ಆಗದಿರಲಿ ಎಂದು ಚಿಂತಿಸುತ್ತಾನೆ. ಆದರೂ ಸುಖದೊಂದಿಗೆ ದುಃಖವು ಪುನಃ ಪುನಃ ಬರುತ್ತಲೇ ಇರುತ್ತದೆ. ಮಾನವನು ಶಾಶ್ವತ ಸುಖವನ್ನು ಪಡೆಯಬೇಕಾದರೆ ಶಾಸ್ತ್ರ ಬೋಧಿತವಾದ ತತ್ತ್ವವಿಮರ್ಶೆ ಮಾಡಲೇಬೇಕು. ಶ್ರವಣ ಮನನ ನಿದಿಧ್ಯಾಸನಕ್ಕಾಗಿ ಸದ್ಗುರುವನ್ನರಸಲೇಬೇಕು, ಆಶ್ರಯಿಸಲೇಬೇಕು. ಶಾಶ್ವತವಾದ ಪರಮಾತ್ಮನ ಪ್ರಾಪ್ತಿಗಾಗಿ ಗುರುದ್ವಾರದ ಮೂಲಕವೇ ಹೋಗಬೇಕು. ಅಜ್ಞಾನಾಂಧಕಾರವನ್ನು ಹೋಗಲಾಡಿಸಿ ತತ್ತ್ವೋಪದೇಶವನ್ನು ಮಾಡಿ ಪ್ರಖರ ಬೆಳಕಿನತ್ತ ಅಮೃತತ್ತ್ವದೆಡೆಗೆ ಮಾರ್ಗದರ್ಶನ ಮಾಡುತ್ತಾರೆ ಆ ಗುರುವರರು.  ಗುರುಪೀಠದಲ್ಲಿ ವಿರಾಜಮಾನರಾದ ಯತಿಶ್ರೇಷ್ಠರು ಲೋಕದ ಸಮಸ್ತ ಸುಖೋಪಭೋಗಗಳನ್ನು ತೊರೆದು ಶಿಷ್ಯಜನರ, ಭಕ್ತಕೋಟಿಯ ಉದ್ಧಾರಕ್ಕಾಗಿ, ಲೋಕಕಲ್ಯಾಣಕ್ಕಾಗಿ ದೃಢ ಸಂಕಲ್ಪ ಮಾಡಿ ಪ್ರತಿನಿತ್ಯ ಮಂಗಳಶಾಸನ ಮಾಡುತ್ತಾರೆ ದೇವಪೂಜೆಗೈಯ್ಯುತ್ತಾರೆ. ತಮ್ಮ ಬಳಿ ಸಾರಿ ಬಂದ ಸರ್ವರನ್ನು ಉಪದೇಶಾಮೃತಗಳಿಂದ ಉದ್ಧರಿಸುತ್ತಾರೆ. ಇದಕ್ಕಾಗಿಯೇ ಗುರುಮೂರ್ತಿಗಳ ಗುರುಪೀಠಗಳ ಅತ್ಯಾವಶ್ಯಕತೆ ಮಾನವನಿಗೆ. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಸದ್ಗುರುವನ್ನಾಶ್ರಯಿಸದ ಹೊರತು ಮುಕ್ತಿ ದೊರಕಲಾರದೆಂದು ದಾಸವರೇಣ್ಯರು ಸಾರಿ ಸಾರಿ ಹೇಳಿದ್ದಾರೆ.

ಪ್ರಕೃತ-ನಮ್ಮ ಗುರುವರ್ಯರಾದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು ಆಶ್ರಿತ ಭಕ್ತ ಜನಕೋಟಿಗೆ ಕಲ್ಪವೃಕ್ಷ ಪಾರಿಜಾತ ದೇವವೃಕ್ಷೋಪಾದಿಯಲ್ಲಿ ಕೀರ್ತಿಕಾಯದಲ್ಲಿದ್ದು ಇಂದಿಗೂ ನಮ್ಮೆಲ್ಲರನ್ನು ಅನುಗ್ರಹಿಸುತ್ತಿರುವುದು ಸರ್ವಜನವೇದ್ಯವಾಗಿರುತ್ತದೆ. ಪಾಂಚಭೌತಿಕವಾಗಿ ನಮ್ಮನ್ನಗಲಿದರೂ ನಮ್ಮೆಲ್ಲರ ಮನೆ-ಮನೆ ಮನದಾಳದಲ್ಲಿ ಕರುಣಾಸಮುದ್ರರಾದ, ವಿದ್ಯಾಸಾಗರರಾದ ಜ್ಞಾನವರೇಣ್ಯ – ಗುರುವರೇಣ್ಯರ ಸ್ಮರಣೆ ಹಚ್ಚ ಹಸಿರಾಗಿ ನಿಂತಿರುತ್ತದೆ.

ದೇವೇಂದ್ರನ ಉದ್ಯಾನವನವಾದ ನಂದನವನದಲ್ಲಿ ಮಂದಾರ ಪಾರಿಜಾತ ಸಂತಾನ ಕಲ್ಪವೃಕ್ಷ ಹರಿಚಂದನಗಳೆಂಬ ಪಂಚದೇವ ವೃಕ್ಷಗಳು ಪ್ರಸಿದ್ಧವಾಗಿವೆ. ಇವುಗಳು ಅಮೃತ ಮಂಥನದ ಕಾಲದಲ್ಲಿ ಸಮುದ್ರದಿಂದ ಹುಟ್ಟಿ ಬಂದವುಗಳು. ಈ ವೃಕ್ಷಗಳನ್ನಾಶ್ರಯಿಸಿ ಅನನ್ಯ ಭಕ್ತಿಯಿಂದ ಕೋರಿಕೊಂಡ ಕೋರಿಕೆಗಳು ಸಿದ್ಧಿಸುತ್ತವೆಂಬ ಪ್ರತೀತಿ ಇದೆ.

       “ತತೋsಭವತ್ ಪಾರಿಜಾತಃ ಸುರಲೋಕವಿಭೂಷಣಂ” ಎಂಬ ಭಾಗವತೋಕ್ತಿಯಂತೆ ಸುರಲೋಕಕ್ಕೆ ಪಾರಿಜಾತವು ಭೂಷಣವಾದರೆ, ಈ ಪುಣ್ಯ ಭುವಿಯಲ್ಲಿ ಜನಿಸಿದ ಶ್ರೀಮದ್ರಾಘವೇಂದ್ರ ಭಾರತೀ ಗುರುವರ್ಯರು ಆಶ್ರಯಿಸಿ ಭಜಿಸಿದ ಭಕ್ತ-ಭಾವುಕ ಜನರನ್ನುದ್ಧರಿಸಿ, ಭೂಲೋಕಕ್ಕೆ ಭೂಷಣರಾದವರು.

ಕಲ್ಪವೃಕ್ಷ, ಕಾಮಧೇನು, ಚಿಂತಾಮಣಿ ಇವೆಲ್ಲವೂ ಚಿಂತಿಸಿದ ಸರ್ವಕಾಮನೆಗಳನ್ನು ಪೂರೈಸುತ್ತವೆಯೆಂಬುದು ಕವಿಕಲ್ಪನೆಗಳೆಂದು ಹೇಳಿದರೂ ಆಸ್ತಿಕರಾದ ನಾವು ಒಪ್ಪಬೇಕಾಗುತ್ತದೆ. ಈ ಗುರುವರೇಣ್ಯರ ವಿಷಯದಲ್ಲಿ ಹಾಗಲ್ಲ. ಈ ಗುರುವರರನ್ನು ಸಮಾಶ್ರಯಿಸಿ ನಂಬಿದವರೆಲ್ಲರೂ ನಾನಾ ವಿಧವಾದ ಸುಖ-ಸೌಭಾಗ್ಯಗಳನ್ನು ಪಡೆದುಕೊಂಡದ್ದು ಪ್ರತ್ಯಕ್ಷ ಸಿದ್ಧವಾಗಿದೆ. ಗುರುಗಳನ್ನು ನಂಬಿ ನಡೆದವರು ಇದೇ ಬೇಕೆಂದು ಕೋರದಿದ್ದರೂ ಕರುಣೆಯಿಂದ ಅನುಗ್ರಹಿಸಿ ಉದ್ಧರಿಸುತ್ತಾರೆ. ಇದು ಗುರುಗಳಲ್ಲಿರುವ ವಿಶೇಷ ಗುಣವಾಗಿತ್ತು. ಇಲ್ಲಿ ಕವಿ ಕಲ್ಪನೆಗಾಗಲಿ, ಅನುಮಾನ ಪ್ರಮಾಣಕ್ಕಾಗಲಿ ಅವಕಾಶವಿಲ್ಲ. ಆದ್ದರಿಂದ ನಮ್ಮ ಗುರುವರೇಣ್ಯರಿಗೆ ಯಾವ ಉಪಮಾನಗಳೂ ಬೇಕಿಲ್ಲ. ಉದಾತ್ತ ಚರಿತೆಯಿಂದಾಗಿ ಶ್ರೀಮದ್ರಾಘವೇಂದ್ರ ಭಾರತೀ ಸ್ವಾಮಿಗಳವರಿಗೆ ಶ್ರೀಮದ್ ರಾಘವೇಂದ್ರ ಭಾರತೀ ಸ್ವಾಮಿಗಳೇ ಸಾಟಿ ಎನ್ನಬಹುದು.

ಗಗನಂ ಗಗನಾಕಾರಂ ಸಾಗರಃ ಸಾಗರೋಪಮಃ |
ರಾಮರಾವಣಯೋರ್ಯುದ್ಧಂ ರಾಮರಾವಣಯೋರಿವ ||

ಎಂಬಂತೆ ಹೇಗೆ ಆಕಾಶಕ್ಕೆ ಬೇರೆ ಹೋಲಿಕೆ ಇಲ್ಲವೋ, ಸಮುದ್ರಕ್ಕೆ ಸಮುದ್ರವೇ ಉಪಮಾನವೋ ಮತ್ತು ರಾಮ-ರಾವಣರ ಭೀಕರ ಯುದ್ಧಕ್ಕೆ ರಾಮ-ರಾವಣರ ಭೀಕರ ಯುದ್ಧವೇ ಸರಿಸಮಾನವೋ, ಅದರಂತೆ ವಿದ್ಯಾತಪೋ ಮಹಿಮೆ ಗರಿಮೆಗಳಲ್ಲಿ ಹಿರಿಯರಾದ ಗುರುಗಳಿಗಿಂತ ಹಿರಿಯರು ಮತ್ತೊಬ್ಬರಿಲ್ಲವೆಂದರೆ ಅತಿಶಯೋಕ್ತಿಯಾಗಲಾರದು.

ಈ ಗುರುವರೇಣ್ಯರ ಮೇರುತುಲ್ಯ ವ್ಯಕ್ತಿತ್ವ, ಅಸಾಮಾನ್ಯ ಪಾಂಡಿತ್ಯ ಸೂಜಿಗಲ್ಲಿನಂತೆ ಅವರ ಸಾನ್ನಿಧ್ಯಕ್ಕೆ ನನ್ನನ್ನಾಕರ್ಷಿಸಿತು. ಗುರುಗಳೇ ಇರಲಿ ಯಾ ದೇವರೇ ಇರಲಿ ಅವರು ದೊಡ್ಡವರೆಂಬ ಸಾಮಾನ್ಯ ಜ್ಞಾನ ಮಾತ್ರ ಆತ್ಮೋದ್ಧಾರಕ್ಕೆ ಹೇತುವಾಗಲಾರದು. ಅವರಲ್ಲಿರುವ ಮಹಿಮಾ ವಿಶೇಷ ಗುಣಗಳನ್ನು ಆಳವಾಗಿ ಅರಿಯುವುದರಿಂದಲೇ ಆ ಗುರು-ದೇವರಲ್ಲಿ ಇತೋಪ್ಯತಿಶಯವಾದ ಭಕ್ತಿ-ಭಾವ ವೃದ್ಧಿಗೊಳ್ಳುತ್ತದೆ. ಪುರುಷೋತ್ತಮನಾದ ದೇವದೇವನಿಗೆ ಸಹಸ್ರ ಶೀರ್ಷಗಳು ಸಹಸ್ರಾಕ್ಷಗಳೆಂಬುದು ಪ್ರಸಿದ್ಧಿ. ಪರಿಪೂರ್ಣ ಭಕ್ತಿಯುತರಿಗೆ ಅವುಗಳಲ್ಲಿ ಒಂದಂಶ ಅಥವಾ ಯೋಗಿ ಜನರಿಗೆ ಸಂಪೂರ್ಣ ವಿರಾಡ್ರೂಪ ದರ್ಶನವಾದೀತು. ಹೀಗೆ ಗುರುಗಳನ್ನಾಶ್ರಯಿಸಿ ಭಕ್ತಿಯಿಂದ ಭಜಿಸಿದವರಿಗೆ ಗುರುಗಳ ಸರ್ವತೋಮುಖದ ಸಂದರ್ಶನವಾದೀತು. ಈ ಶ್ರೀ ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು ಜ್ಞಾನ ಸ್ವರೂಪದ ರೂಪದಲ್ಲಿ ನನಗೆ ಸಂದರ್ಶನ ನೀಡಿದರು. ಸಂದರ್ಭ ಹೀಗೆ – 1986ನೇ ಇಸವಿಯಲ್ಲಿ ಸಿರ್ಸಿ ತಾಲೂಕು ಗಡಿಮನೆಯಲ್ಲಿ ನಡೆದ ಸರಳ ಸಂಸ್ಕೃತ ಸಂಭಾಷಣಾ ಪ್ರಶಿಕ್ಷಣ ವರ್ಗದ ಸಮಾರೋಪ ಕಾರ್ಯಕ್ರಮಕ್ಕೆ ಸಂಸ್ಕೃತಜ್ಞರ ಪ್ರಾರ್ಥನೆಯ ಮೇರೆಗೆ ಆಶೀರ್ವಾದ ನೀಡಲು ಆಗಮಿಸಿದ್ದರು. ಅಂದು ತುಂಬಿದ ಸಭೆಯಲ್ಲಿ ಗಂಗಾಪ್ರವಾಹದಂತೆ ಗುರುಮುಖಾರವಿಂದದಿಂದ ಹೊರಹೊಮ್ಮುತ್ತಿರುವ ದೇವವಾಣಿ ಗುರುವಾಣಿಯನ್ನಾಲಿಸಿ ಬೆಕ್ಕಸಬೆರಗಾದೆ. ಅಭೂತಪೂರ್ವ ಪ್ರವಚನವನ್ನು ಕೇಳಿದ ನನಗೆ ಇಂತಹ ಪರಿಪೂರ್ಣ ಪಾಂಡಿತ್ಯದಿಂದ ಕೂಡಿದ ಗುರುಗಳನ್ನು ಪಡೆದ ನಾನೇ ಧನ್ಯ. ಹವ್ಯಕರು ನಾವೆಲ್ಲ ಧನ್ಯರು ಎಂದು ಮನದುಂಬಿ ಅಭಿವಂದಿಸಿದೆ, ಅಭಿನಂದಿಸಿದೆ. ವಾಕ್ ಪತಿಗಳಾದ ರಘುಪತಿ ಆರಾಧಕರಾದ ಸುಮತೀಂದ್ರರಾದ ರಾಘವೇಂದ್ರ ಯತೀಂದ್ರರನ್ನು.

 ಪ್ರಥಮ ಸಂದರ್ಶನದಿಂದಲೇ ಆನಂದಗೊಂಡ ನನಗೆ ಪುನಃ ಈ ಸದ್ಗುರು ಪೂಜ್ಯರ ಸಾನ್ನಿಧ್ಯದ-ಸಾಮೀಪ್ಯವನ್ನು ಪಡೆಯಲೇಬೇಕೆಂಬ ಉತ್ಕಟೇಚ್ಛೆ ಪ್ರಜ್ವಲಗೊಂಡಿತು. ಅದರಂತೆ ಒಂದು ದಿನ ತೀರ್ಥಹಳ್ಳಿಯಲ್ಲಿರುವ ನಮ್ಮ ರಾಮಚಂದ್ರಾಪುರ ಮಠಕ್ಕೆ ತೆರಳಿದೆನು. ಶ್ರೀಮಠದ ವಿದ್ವಾಂಸರಾದ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿಗಳವರ ಸಹಾಯದಿಂದ ಧರ್ಮಪೀಠಾಲಂಕೃತರಾದ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರ ಚರಣಾರವಿಂದಗಳಲ್ಲಿ ಫಲ-ಪುಷ್ಪಗಳನ್ನು ಸಮರ್ಪಿಸಿ ಸಾಷ್ಟಾಂಗವೆರಗಿದೆನು. ಸಂಸ್ಕೃತದಲ್ಲೇ ಸಂಭಾಷಣೆ ಸುಮಾರು ಮೂರು ತಾಸುಗಳ ದೀರ್ಘಕಾಲ ನಡೆಯಿತು. ಮೊಟ್ಟ ಮೊದಲನೆಯದಾಗಿ ನಾನು ಹವ್ಯಕ ಜನಾಂಗದಲ್ಲಿ ಜನಿಸಿ ಹವ್ಯಕ ಪೀಠ-ಪೀಠಾಧೀಶ್ವರರನ್ನು ಕುರಿತು ವಿಳಂಬವಾಗಿ ಅರ್ಥ ಮಾಡಿಕೊಂಡಿದ್ದಕ್ಕಾಗಿ ಪುನಃ ಪುನಃ ಪದತಲಕ್ಕೆರಗಿ ಕ್ಷಮೆಯಾಚಿಸಿದೆನು. ಅಂದು ಗುರುಗಳ ವಾತ್ಸಲ್ಯಪೂರ್ಣವಾದ ನುಡಿಮುತ್ತುಗಳು ಅವರಿಗೆ ತಮ್ಮ ಶಿಷ್ಯ ಜನರ ಬಗ್ಗೆ ಇರುವ ಪ್ರೇಮಭಾವವನ್ನು ನೋಡಿ ಆನಂದಾಶ್ರು ನನ್ನ ನೇತ್ರಗಳಿಂದ ನನಗರಿವಿಲ್ಲದಂತೆ ಜಾರಿದವು. ಪರವೂರು-ಪರರಾಜ್ಯಗಳಲ್ಲಿದ್ದರೂ ಸದಾಚಾರರಾಗಿದ್ದು ತಮ್ಮ-ತಮ್ಮ ಕಾರ್ಯಕ್ಷೇತ್ರದಲ್ಲಿ ಸಾಧನೆಗೈದರೆ ನಮಗೆ ಆನಂದವಾಗುತ್ತದೆಂದೂ, ಹೆಮ್ಮೆಯ ವಿಷಯವೆಂದು ಅಂದು ಗುರುವರರು ನುಡಿದದ್ದನ್ನು ಇಂದಿಗೂ ಸ್ಮರಿಸಿಕೊಳ್ಳುತ್ತೇನೆ. ಅತಿ ಶೀಘ್ರದಲ್ಲಿ ಸಂದರ್ಶನ ಪಡೆದು ಹಿಂದಿರುಗಬೇಕೆಂದು ಹಂಬಲಿಸಿ ಹೋದ ನಾನು ನನಗರಿವಿಲ್ಲದಂತೆ ಗುರುಪ್ರೇಮಪಾಶದಲ್ಲಿ ಬದ್ಧನಾಗಿ ಮೂರು ದಿನಗಳ ಕಾಲ ಶ್ರೀ ಸೀತಾರಾಮ-ಚಂದ್ರಮೌಳೀಶ್ವರ ದಿವ್ಯ ಸನ್ನಿಧಿಯಲ್ಲಿ ಗುರುವರೇಣ್ಯರ ವಾಗ್ಝರಿ ಶಾಸ್ತ್ರವಾದಸರಣಿ ಶ್ರವಣದಲ್ಲಿ ತನ್ಮಯನಾದೆನು. ಶ್ರೀ ಗುರುಪ್ರಣೀತವಾದ “ಆತ್ಮವಿದ್ಯಾಖ್ಯಾಯಿಕಾ” ಗ್ರಂಥವನ್ನು ಪಠಿಸಿ ಆನಂದಿಸಿದೆನು. ನಾನು ಕೇಳಿದ ಅನೇಕ ಸಂದೇಹ ಪ್ರಶ್ನೆಗಳಿಗೆ ಸಮರ್ಪಕವಾಗಿ ತಿಳಿ-ತಿಳಿಯಾಗಿ ತಿಳಿಯುವಂತೆ ತಿಳಿಸಿದರು. ಅಂದಿನಿಂದ ಇಂದಿನವರೆಗೂ ಹವ್ಯಕ ಪೀಠ-ಪೀಠಾಧೀಶ್ವರರ ಬಗ್ಗೆ ಇಮ್ಮಡಿಯಾದ ಭಕ್ತಿ-ಭಾವ ನನಗೆ ಬೆಳೆದು ಬಂದಿದೆ.

ನಮ್ಮ ಈ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಸಂಸ್ಥಾನ ಶ್ರೀ ರಾಮಚಂದ್ರಾಪುರ ಮಠದ ಅವಿಚ್ಛಿನ್ನ ಪೀಠ ಪರಂಪರೆಯಲ್ಲಿ ಬಂದವರು ಒಬ್ಬರಿಗಿಂತಲೂ ಮತ್ತೊಬ್ಬ ಗುರುಗಳು ತಪೋ-ವಿದ್ಯಾ-ಮಹಿಮಾನ್ವಿತರಾಗಿದ್ದರೆಂಬುದು ಚರಿತ್ರೆಯನ್ನು ಓದಿದಾಗ ಸುಸ್ಪಷ್ಟವಾಗುತ್ತದೆ. ನಮ್ಮ ಈ ಗುರುಗಳ ಗುರುಗಳಾದ ಶ್ರೀಮದ್ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರು ಪರ್ವತದಲ್ಲಿ ಘೋರವಾದ ತಪಸ್ಸನ್ನಾಚರಿಸಿ ಪುನಃ ದರ್ಶನ ಶಕ್ತಿಯನ್ನು ಪಡೆದಿದ್ದರೆಂಬ ವಿಷಯವನ್ನು ತಿಳಿದಾಗ ಮೈರೋಮಾಂಚನಗೊಳ್ಳುತ್ತದೆ. ಜಗದ್ಗುರು ಶಂಕರಾಚಾರ್ಯ ಪೀಠದಲ್ಲಿ ಮಂಡಿಸಿದವರೆಲ್ಲರೂ ಅಸಾಮಾನ್ಯ ತಪಸ್ವಿಗಳು. ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು ಯಾವುದೇ ಕಾರ್ಯವನ್ನು ಮಾಡಬೇಕಿದ್ದರೂ ಸಾಧಕ-ಬಾಧಕಗಳನ್ನು ಆಳವಾಗಿ ವಿಮರ್ಶಿಸಿ ಕಾರ್ಯಗತಗೊಳಿಸುತ್ತಿದ್ದರು. ಅದರಲ್ಲೊಂದು ಮುಖ್ಯ ಕಾರ್ಯವೇನೆಂದರೆ – ತಮ್ಮ ಅವಿಚ್ಛಿನ್ನ ಪರಂಪರೆ ಮುಂದುವರಿಯಬೇಕೆಂಬ ಸದುದ್ದೇಶ, ತನ್ಮೂಲಕ ಶಿಷ್ಯ ಭಕ್ತವೃಂದಕ್ಕೆ ಸನ್ಮಂಗಳವುಂಟಾಗಲೆಂಬ ಮಹದಾಶಯದಿಂದ ತಮ್ಮ ಉತ್ತರಾಧಿಕಾರಿಗಳನ್ನಾಗಿ ಧರ್ಮಪೀಠದಲ್ಲಿ ಕುಳ್ಳಿರಿಸಿದ ಅಭೂತಪೂರ್ವ ವ್ಯಕ್ತಿತ್ವವುಳ್ಳ, ಜ್ಞಾನಪೂರ್ಣರಾದ ಶ್ರೀಮದ್ ರಾಘವೇಶ್ವರ ಭಾರತೀ ಸ್ವಾಮಿಗಳವರೇ ನಮಗೆ ಪ್ರತ್ಯಕ್ಷ ಸಾಕ್ಷಿಯಾಗಿ ನಿಂತಿರುತ್ತಾರೆ.

 ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರನ್ನು ಆಶ್ರಯಿಸಿ ತಮ್ಮ-ತಮ್ಮ ಅಭಿಷ್ಟಗಳನ್ನು ಪೂರೈಸಿಕೊಂಡ ಭಕ್ತರು ಲಕ್ಷೋಪಲಕ್ಷ ಸಂಖ್ಯೆಯಲ್ಲಿರುತ್ತಾರೆ. ಇಂಥ ಕರುಣಾಕರರಾದ ಗುರುಗಳ ಮಹಿಮಾ-ಗರಿಮೆಯನ್ನು ವರ್ಣಿಸಲು ಅಲ್ಪಮತಿಯಾದ ನನ್ನಿಂದ ಅಸಾಧ್ಯವೇ ಸರಿ. ಆದರೂ “ಮನೋವಿಶುದ್ಧೈ ಚರಿತಾನುವಾದಃ” ಎಂಬಂತೆ ನಾನು ಇನ್ನೂ ಪವಿತ್ರನಾಗಬೇಕು ಗುರುಕೃಪೆಯಿಂದ ಇತೋಪ್ಯತಿಶಯವಾದ ಸೌಭಾಗ್ಯವನ್ನು ಪಡೆಯಬೇಕೆಂಬ ಸಂಕಲ್ಪದಿಂದ ಮತ್ತು ನಾನು ಇಂದು ಅನುಭವಿಸುತ್ತಿರುವ ಸುಖಕ್ಕೆ ಮೂಲ ಕಾರಣೀಭೂತರಾದ ಗುರುವರರನ್ನು ಸ್ಮರಿಸುವುದು ನನ್ನ ಕರ್ತವ್ಯವಾದ್ದರಿಂದಲೂ ಲೇಖಿಸಲು ಸಂತೋಷದಿಂದ ಸಾಹಸ ಮಾಡಿದ್ದೇನೆ. “ಕೃತೇ ಚ ಪ್ರತಿಕರ್ತವ್ಯಂ ಏಷ ಧರ್ಮಃ ಸನಾತನಃ” ಎಂಬುದು ಆಯೋಕ್ತೀಯಷ್ಟೆ? ಬೆಂಗಳೂರು ಗಿರಿನಗರದ ವಿದ್ಯಾಮಂದಿರದಲ್ಲಿರುವ ಸಮಯದಲ್ಲಿ ಗುರುವರೇಣ್ಯರು ನನ್ನ ಸಂಶೋಧನ ಪ್ರಬಂಧವನ್ನು ಸಂಪೂರ್ಣವಾಗಿ ಓದಿ ಸಂತಸದಿಂದ ಸುವರ್ಣಮಂತ್ರಾಕ್ಷತೆಯನ್ನು ಅನುಗ್ರಹಿಸಿ ನಂತರ ಬೆಂಗಳೂರಿನಿಂದ ತಿರುಪತಿಗೆ ರಾತ್ರಿ ಪ್ರಯಾಣಗೊಳಿಸಿದೆ. ಕೋಲಾರ ಸಮೀಪದಲ್ಲಿ ಬಸ್ಸು ಅಪಘಾತಕ್ಕೊಳಗಾಯಿತು. ಕೆಲವರ ಮುಖಗಳು ಹೋದರೆ ಇನ್ನೂ ಕೆಲವರ ಕೈಕಾಲುಗಳು ಮುರಿದೇ ಹೋದವು. ಬಸ್ಸಿನಲ್ಲಿ ಹಾಹಾಕಾರವೇ ಎದ್ದಿತು. ಆದರೆ ನನಗೆ ಕಿಂಚಿತ್ತೂ ಗಾಯವು ಕೂಡ ಆಗದೆ ಇದ್ದದ್ದು ನನಗೂ ಮತ್ತು ಅಲ್ಲಿದ್ದವರೆಲ್ಲರಿಗೂ ಆಶ್ಚರ್ಯವನ್ನುಂಟುಮಾಡಿತ್ತು.ಇದಕ್ಕೆ ಕಾರಣ ಸದ್ಗುರು ಕರಕಮಲದಿಂದ ನನಗೆ ಪ್ರಾಪ್ತವಾದ ಆಶೀರ್ಮಂತ್ರಾಕ್ಷತೆಯ ಬಲದ ಫಲವಲ್ಲದೇ ಮತ್ತೇನು. ಅದಕ್ಕಾಗಿಯೇ ಹಿರಿಯರು  ಗುರುಪಾದೋದಕಕ್ಕೂ, ಫಲಮಂತ್ರಾಕ್ಷತೆಗೂ ಅತ್ಯಂತ ಮಹತ್ತ್ವ ನೀಡಿರುತ್ತಾರಷ್ಟೆ? ಗುರುವಿನ ಪರಮಾನುಗ್ರಹದಿಂದ ಮೂಕನು ವಾಚಾಳಿಯಾಗುತ್ತಾನೆ. ದರಿದ್ರನು ಶ್ರೀಮಂತನಾಗುತ್ತಾನೆ. “ಗುರುಪ್ರಸಾದೋ ಬಲವಾನ್”, “ನ ಗುರೋರಧಿಕಂ” ಇತ್ಯಾದಿಯಾಗಿ ಗುರುಮಹಿಮೆಯನ್ನು ವರ್ಣಿಸಿದ್ದಾರೆ, ಕೊಂಡಾಡಿದ್ದಾರೆ ಪ್ರಾಜ್ಞರು.

             || ಶ್ರೀ ಸದ್ಗುರು ಚರಣಾರವಿಂದಾರ್ಪಣಮಸ್ತು ||

~*~

Facebook Comments Box