ಶ್ರೀ ರಾಘವಂ ದಶರಥಾತ್ಮಜಂ ಅಪ್ರಮೇಯಂ |
ಸೀತಾಪತಿಂ ರಘುಕುಲಾನ್ವಯ ರತ್ನದೀಪಂ
ಆಜಾನುಬಾಹುಂ ಅರವಿಂದದಲಾಯತಾಕ್ಷಂ
ರಾಮಂ ನಿಶಾಚರ ವಿನಾಶಕರಂ ನಮಾಮಿ ||
ಪೂಜ್ಯ ಶ್ರೀಗುರುಗಳ ಚರಣಾರವಿಂದಗಳಿಗೆ ಪ್ರಣಾಮಗಳು
ಶ್ರೀಗುರುಗಳ ಅಂತರ್ಜಾಲ ತಾಣದ ಸಮ್ಮುಖ ಅಂಕಣದಲ್ಲಿ ಪ್ರತಿಯೊಬ್ಬ ಕಾರ್ಯಕರ್ತನೂ ಬರೆಯಬೇಕು. . . .
ಆ ರೀತಿಯಿಂದ ಶ್ರೀಗುರುಗಳ ಸಮ್ಮುಖಕ್ಕೆ ಪ್ರತಿಯೊಬ್ಬನೂ ಬರಬೇಕು. . . .
ಇದು ಶ್ರೀಶ್ರೀಗಳವರು ನಮಗೆಲ್ಲಾ ನೀಡಿದ ಅವಕಾಶ. ಈ ಅವಕಾಶದ ಮೂಲಕ ಸೇವೆ ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ ಕೂಡಾ ಹೌದು, ಅವಕಾಶಗಳು ಬರುವುದು ಕೆಲವೊಮ್ಮೆ ಮಾತ್ರವಲ್ಲವೇ? ಅದನ್ನು ಸರಿಯಾಗಿ ಬಳಸಬೇಕು. ಸಾಮಾನ್ಯ ಶಿಷ್ಯನಿಗೂ ಬರೆಯುವ ಸದಾವಕಾಶ ದೊರೆತಿರುವುದು ಸಂತಸಕರ ವಿಷಯ.
ಸೇವೆಯೆಂಬುದು ಮನುಷ್ಯನ ಜನ್ಮ ಜನ್ಮದ ಋಣಗಳನ್ನು ತೀರಿಸಲು ದೊರೆತ ಅವಕಾಶ. ಇದರ ಮೂಲಕ ಜೀವನವನ್ನು ಉತ್ತಮ ಪಡಿಸುವುದು ನಮ್ಮ ಕರ್ತವ್ಯ. ಇದಕ್ಕೆ ಗುರುವಿನ ಅನುಗ್ರಹ, ಮಾರ್ಗದರ್ಶನಬೇಕು.
ಮುಜುಂಗಾವು, ಕಾಸರಗೋಡು ಜಿಲ್ಲೆಯಲ್ಲಿ ಬರುವ ಒಂದು ಪ್ರದೇಶ. ಶ್ರೀಗುರುಗಳೇ ಅನ್ನುವಂತೆ ಇದು ದೇವಾಲಯ, ವಿದ್ಯಾಲಯ, ವೈದ್ಯಾಲಯ ಗಳ ಸಂಗಮ ಸ್ಥಳ. ಇಲ್ಲಿ ಶ್ರೀಗುರುಗಳ ಸೇವಾಯೋಜನೆಗಳಲ್ಲಿ ಒಳಗೊಂಡ ವಿದ್ಯಾಲಯ ಮತ್ತು ವೈದ್ಯಾಲಯಗಳು ಕಾರ್ಯಾಚರಿಸುತ್ತಿವೆ. ೨೦೦೩ನೇ ಇಸವಿ ಶ್ರೀಗುರುಗಳು ಮುಜುಂಗಾವಿಗೆ ಆಗಮಿಸಿದ ಸಂದರ್ಭ. ಏಕಾದಶಿ, ಶ್ರೀಗುರುಗಳು ಮೌನವ್ರತದಲ್ಲಿದ್ದ ದಿನ. ಶ್ರೀಯುತ ಕೆ.ಪಿ. ಯವರು ಶ್ರೀ ಗುರುಗಳಿಗೆ ನನ್ನ ಬಗ್ಗೆ ಹೇಳಿದ್ದಲ್ಲದೆ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದಲ್ಲಿ ಸೇವೆ ಸಲ್ಲಿಸುವಂತೆ ಕೇಳಿಕೊಂಡಾಗ, ಶ್ರೀಗಳು ಹಸನ್ಮುಖರಾಗಿ ಚಿನ್ಮುದ್ರೆಯನ್ನಷ್ಟೇ ತೋರಿಸಿ, ನನಗೆ ಈ ವಿದ್ಯಾಲಯದಲ್ಲಿ ಸೇವೆ ಸಲ್ಲಿಸುವ ಅವಕಾಶವನ್ನಿತ್ತು ಆಶೀರ್ವದಿಸಿದರು. ಅಂದಿನಿಂದ ಇಂದಿನವರೆಗೆ ಸುಮಾರು ೮ ವರ್ಷಗಳ ಸೇವೆಯಲ್ಲಿ ಯಾವುದೇ ಕಷ್ಟಕರ ಪರಿಸ್ಥಿತಿಯೇ ಇರಲಿ ಶ್ರೀಗುರುಗಳನ್ನು ನೆನೆದರೆ ಮಾತ್ರ ಸಾಕು ನನ್ನೆದುರಿದ್ದ ಅಡೆತಡೆಗಳು ನಿವಾರಣೆಯಾಗುತ್ತಾ ಬರುವುದನ್ನು ಗಮನಿಸುತ್ತಿದ್ದೇನೆ. ಇದೀಗ ವಿದ್ಯಾಲಯ ೯ನೇ ತರಗತಿಯ ಹಂತದಲ್ಲಿದೆ. ಮುಂದಿನ ವರ್ಷ ೧೦ನೆಯ ತರಗತಿಯತ್ತ ಸಾಗುವುದು.
(ಮಾಹಿತಿಗಾಗಿ ಸಂದರ್ಶಿಸಿ http://mujungavu.blogspot.com/)
ವಿದ್ಯಾಲಯದ ಬೆಳವಣಿಗೆಗೆ ಶ್ರೀ ಶ್ರೀಗಳವರ ನಿರಂತರ ಮಾರ್ಗದರ್ಶನ ಹಾಗೂ ಅನುಗ್ರಹವಿದೆ. ಸಂಸ್ಕಾರ, ಸಂಸ್ಕೃತಿಯನ್ನು ಉಳಿಸಿಕೊಂಡು ಆಧುನಿಕ ಶಿಕ್ಷಣ ನೀಡುವ ಕಿರುಪ್ರಯತ್ನಕ್ಕೆ ತಮ್ಮೆಲ್ಲರ ಪೂರ್ಣ ಸಹಾಯ ಸಹಕಾರ ಅತೀ ಅಗತ್ಯ. ಶ್ರೀಶ್ರೀಗಳವರ ಪ್ರೇರಣೆ, ಸಂಕಲ್ಪಕ್ಕೆ ಶಿಷ್ಯರಾದ ನಾವೆಲ್ಲರೂ ತಮ್ಮ ತಮ್ಮ ಅಮೂಲ್ಯ ಸಮಯವನ್ನು ನೀಡಿ ಉದ್ದೇಶ ಸಾಫಲ್ಯಕ್ಕೆ ಪ್ರಯತ್ನಿಸೋಣ.
ಗುರುಸೇವೆಯ ಅವಕಾಶಗಳು ಎಲ್ಲರಿಗೂ ಯಾವತ್ತೂ ಸಿಗುವುದಿಲ್ಲ. ಶ್ರೀಗುರುಗಳೆನ್ನುವಂತೆ ಗುರುಋಣದ ಸ್ವಲ್ಪ ಭಾಗವನ್ನಾದರೂ ಈ ಸೇವೆಯಿಂದ ಕಳೆದುಕೊಳ್ಳಬಹುದಂತೆ. ಇಂತಹ ಸೇವೆಗಳಲ್ಲಿಯ ಅನುಭವಗಳೇ ಒಂದು ರೋಮಾಂಚನ.
ಸಾಮಾನ್ಯ ವಿಶ್ವವಿದ್ಯಾಲಯಗಳಲ್ಲಿಯೂ ದೊರಕದ ವಿಶೇಷ ಅನುಭವ ಇಲ್ಲಿರುತ್ತದೆ. ಅಡಿಗಡಿಗೆ ಬಂದೆರಗುವ ಸವಾಲುಗಳು ಈ ಸೇವಾ ವೃತ್ತಿಯಲ್ಲಿ ಸರ್ವೇಸಾಮಾನ್ಯ. ಈ ಎಲ್ಲಾ ಸಂದರ್ಭಗಳಲ್ಲಿ ನಮ್ಮಲ್ಲಿರಬೇಕಾದುದು ಶ್ರೀಪೀಠದ ಮೇಲೆ ಅನನ್ಯ ಭಕ್ತಿ ಮತ್ತು ಪ್ರೀತಿ. ಸಂಸ್ಥೆಯಲ್ಲಿ ಆರ್ಥಿಕ ಅವಶ್ಯಕತೆಗಳು ಬರುವುದು ಸಾಮಾನ್ಯ. ಎಷ್ಟೋ ಸಂದರ್ಭಗಳಲ್ಲಿ ಶ್ರೀಶ್ರೀಗಳವರನ್ನು ಮನಸಾ ಪ್ರಾರ್ಥಿಸಿಕೊಂಡಾಗ ಅವಶ್ಯಕತೆಗಳು ಪೂರ್ಣಗೊಂಡ ನಿದರ್ಶನಗಳಿವೆ.
ಇತ್ತೀಚೆಗೆ ಅಧ್ಯಾಪಕರ ಮತ್ತು ಶ್ರೀಗುರುಗಳ ಭೇಟಿಯ ಸಂದರ್ಭವನ್ನು ಖಂಡಿತ ನೆನಪಿಸಬೇಕಾಗುತ್ತದೆ. ನಮ್ಮ ವಿದ್ಯಾಲಯದಲ್ಲಿ ನಾನೊಬ್ಬನೇ ಅಧ್ಯಾಪಕ ಮತ್ತೆಲ್ಲರೂ ಅಧ್ಯಾಪಿಕೆಯರು. ಭೇಟಿಯ ಸಂದರ್ಭ ಶ್ರೀಗುರುಗಳಿಗೆ ಎಲ್ಲರನ್ನೂ ಪರಿಚಯಿಸುವಾಗ ಅವರು ಎರಡೆರಡು ಸಲ ಕೇಳಿದರು : ಶ್ಯಾಮಾ, ನೀನು ಒಬ್ಬನೇ ಹೇಗೆ ನಿಭಾಯಿಸ್ತಾ ಇದ್ದೀಯ ? ಭೇಟಿ ನಡೆದು ಎರಡು ದಿನಗಳು ಕಳೆದಿರಲಿಲ್ಲ, ನಮ್ಮ ವಿದ್ಯಾಲಯಕ್ಕೆ ಚಿತ್ರಕಲಾ ವಿಭಾಗಕ್ಕೆ ಅಧ್ಯಾಪಕರೊಬ್ಬರು ಸೇವಾ ರೂಪದಲ್ಲಿ ಆಗಮಿಸಿದ್ದು ನನಗೆ ಸಹಕಾರಿಯಾಗಿ ಕೆಲಸಗಳ ಜವಾಬ್ದಾರಿಯನ್ನೂ ವಹಿಸಿದರು. ಪರಮ ಪೂಜ್ಯರ ಸಂಕಲ್ಪಕ್ಕೆ ಇದಕ್ಕಿಂತ ಬೇರೇನು ನಿದರ್ಶನ ಬೇಕು ?
ನನ್ನ ಮತ್ತು ಶ್ರೀಮಠದ ಸಂಪರ್ಕ ಹಳೆಯದೆಂದೇ ಹೇಳಬೇಕು. ೧೯೮೩ರಲ್ಲಿ ನನ್ನ ಅಜ್ಜನ (ವೇ| ಮೂ| ಕೇಶವ ಭಟ್ಟ ಕೋಣಮ್ಮೆ) ಮನೆಗೆ ಹಿರಿಯ ಗುರುಗಳು ಚಿತ್ತೈಸಿದ್ದು, ನಾನಾಗ ಬಹುಶ: ೧೦ ವರ್ಷದ ಒಳಗಿನ ಹುಡುಗ. ಬಟ್ಟೆ ಉಡಲು ತಿಳಿಯದಿದ್ದರೂ ಬಟ್ಟೆ ಉಟ್ಟು ಓಡಾಡಲು ಕಲಿತದ್ದು ಈ ಸಂದರ್ಭದಲ್ಲಿ. ಮಂತ್ರಾಕ್ಷತೆಯ ಸಂದರ್ಭ ನನ್ನನ್ನೂ ಕರೆದು ಫಲವನ್ನಿತ್ತು ಆಶೀರ್ವದಿಸಿದ್ದೂ ಒಂದು ಅವಿಸ್ಮರಣೀಯ ಅನುಭವ. ಮುಂದೆ ಗಿರಿನಗರದಲ್ಲಿ ಸಂಪನ್ನಗೊಂಡ ಶ್ರೀಗುರುಗಳ ಶಿಷ್ಯ ಸ್ವೀಕಾರ ಸಂದರ್ಭದಲ್ಲಿ ನಾನು ಮತ್ತು ನನ್ನ ತಮ್ಮ ಭಾಗಿಯಾಗಿದ್ದೆವು. ಇಂತಹ ಅಪರೂಪದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಗುರು ಅನುಗ್ರಹದಿಂದಲೇ ದೊರಕಿತ್ತು ಎಂದು ಭಾವಿಸುತ್ತೇನೆ. ನನ್ನ ಹಿರಿಯ ಅಜ್ಜ ಕೋಣಮ್ಮೆ ಅವಧಾನಿ ಮಹಾಲಿಂಗ ಭಟ್ಟರು ಜೀವನದ ಶ್ರೇಷ್ಠ ಆಶ್ರಮವಾದ ‘ಸನ್ಯಾಸ ಆಶ್ರಮ’ವನ್ನು ಪಡೆದವರು. ಅದು ಶ್ರೀರಾಮಚಂದ್ರಾಪುರಮಠದ ಶ್ರೀ ಶ್ರೀ ರಾಘವೆಂದ್ರಭಾರತೀ ಮಹಾಸ್ವಾಮಿಗಳವರಲ್ಲೇ. ಈ ಎಲ್ಲಾ ಆಶೀರ್ವಾದಗಳ ಸತ್ಪರಿಣಾಮವೂ ನನ್ನ ಮೇಲಾಗಿದೆ ಎಂದು ನಂಬಿದ್ದೇನೆ.
ಶ್ರೀಗುರುಗಳ ಪ್ರೀತಿ ಅನನ್ಯ. ಶ್ರೀಶ್ರೀಗಳವರ ಸಂಪರ್ಕಕ್ಕೆ ಬಂದ ಪ್ರತಿಯೊಬ್ಬನಿಗೂ ಈ ಅನುಭವದ ಅರಿವಾಗಿರಬಹುದು. ನನ್ನ ಅಜ್ಜನಮನೆಗೆ ೨೦೦೩ರಲ್ಲಿ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಚಿತ್ತೈಸಿದ ಸಂದರ್ಭ ನಾನು ಸೋದರಮಾವ ಕೋಣಮ್ಮೆ ವೇ| ಮೂ| ಮಹಾದೇವ ಭಟ್ಟರೊಂದಿಗೆ ಪೂರ್ವಭಾವೀ ಸಿದ್ಧತಾ ಕೆಲಸಗಳಲ್ಲಿ ತೊಡಗಿಸಿಕೊಂಡು ಸಕಲ ವ್ಯವಸ್ಥೆಯಲ್ಲಿ ಸಹಕರಿಸಿದ್ದೆ. ಈ ವಿಚಾರವನ್ನು ಮಾವ ಶ್ರೀ ಶ್ರೀಗಳವರ ಗಮನಕ್ಕೆ ತಂದಿದ್ದರಂತೆ. ಮಂತ್ರಾಕ್ಷತೆಯ ಸಂದರ್ಭದಲ್ಲಿ ಶ್ರೀಗುರುಗಳು ನನ್ನನ್ನು ಕರೆದು ಮಂತ್ರಾಕ್ಷತೆಯೊಂದಿಗೆ ಒಂದು ಪಾತ್ರೆಯ ತುಂಬಾ ವಿಶೇಷ ಹಣ್ಣುಗಳನ್ನು ನನಗಿತ್ತು ‘ದರ್ಭೆಯವರು ತುಂಬಾ ಕೆಲಸ ಮಾಡಿದ್ದೀರಂತೆ ಒಳ್ಳೆಯದಾಗಲಿ’ ಎಂದು ಹರಸಿದರು. ಮುಂದಿನ ದಿನಗಳಲ್ಲಿ ಅವರು ನೀಡಿದ ಫಲಗಳಂತೆ ನನ್ನ ಜೀವನದಲ್ಲಿ ಉತ್ತಮ ಫಲಗಳನ್ನೇ ಅನುಭವಿಸುತ್ತಿದ್ದೇನೆ ಎಂಬುದನ್ನು ತಿಳಿಸಲು ಸಂತೋಷವಾಗುತ್ತಿದೆ.
ಹೌದು, ನನ್ನ ತವರೂರು ಪುತ್ತೂರು ತಾಲೂಕಿನ ಪುಟ್ಟ ಹಳ್ಳಿಯಾದ ಕುಞಿಮಲೆ ದರ್ಭೆ. ಇಲ್ಲೊಂದು ವಿದ್ಯಾಲಯವಿದೆ. ಇದು ಶ್ರೀಗುರುಗಳ ಮಾರ್ಗದರ್ಶನದಲ್ಲೇ ಸಾಗುತ್ತಿದೆ. ಇದರ ೨೦೦೧ ಸಾಲಿನ ಆಡಳಿತ ಮಂಡಳಿ ಸದಸ್ಯನಾಗಿಯೂ ನಾನು ಸೇವೆ ಕೈಗೊಂಡಿದ್ದೆ. ಈ ಸಂದರ್ಭದಲ್ಲಿ ಶ್ರೀಗುರುಗಳನ್ನು ಕೆಲವೊಂದು ಬಾರಿ ಭೇಟಿಯಾದದ್ದಿದೆ. ಆದುದರಿಂದಲೇ ಶ್ರೀ ಶ್ರೀಗಳು ನನ್ನನ್ನು ಗುರುತಿಸುವುದು ದರ್ಭೆಯವನೆಂದೇ.
ಶ್ರೀಗುರುಗಳ ಸಂಕಲ್ಪ ಶಕ್ತಿ ಅನನ್ಯ, ಅವರ ಪ್ರೀತಿ ನಮ್ಮೆಲ್ಲರ ಮೇಲಿದ್ದು ಶ್ರೀಗುರುಗಳು ತೋರಿದ ದಾರಿಯಲ್ಲಿ ಮುಂದುವರಿಯೋಣ. ಗುರಿಯನ್ನು ಮುಂದಿಟ್ಟುಕೊಂಡು ಗುರುವನ್ನು ಜತೆಯಲ್ಲಿಟ್ಟುಕೊಂಡು ಮುಂದುವರಿದರೆ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಲ್ಲವೇ? ಯಾವುದೇ ಸಂದರ್ಭವಿರಲಿ ಶ್ರೀಗುರುಗಳನ್ನು ಭೇಟಿಯಾಗಬೇಕೆಂದೇನಿಲ್ಲ, ನಾವೆಲ್ಲಿದ್ದೇವೆಯೋ ಅಲ್ಲಿಂದಲೇ ಪ್ರಾರ್ಥಿಸುವ ಮೂಲಕ ನಾವು ಕಷ್ಟದಿಂದ, ದು:ಖದಿಂದ ಪಾರಾಗಬಹುದು. ಇದನ್ನು ತಿಳಿದವರು ಅನ್ನುವುದು, ‘ಗುರೋಸ್ತು ಮೌನಂ ವ್ಯಾಖ್ಯಾನಂ ಶಿಷ್ಯಾಸ್ತು ಛಿನ್ನ ಸಂಶಯ:’ ಇದನ್ನೇ ಅನ್ನುವುದು ಗುರುಕರುಣೆ ಅಥವಾ ಗುರುಕೃಪೆ ಎಂದು ಅಲ್ಲವೇ? ಶ್ರೀಗುರುಗಳ ಸೇವಾ ಯೋಜನೆಗಳಲ್ಲಿ ಭಾಗಿಯಾಗೋಣ. ಗುರುಕೃಪೆಯಲ್ಲಿ ಮಿಂದು ಪುನೀತರಾಗೋಣ.
|| ಹರೇ ರಾಮ ||
ದರ್ಭೆ ಶ್ಯಾಮ ಭಟ್ಟರ ಶ್ರೀಮಠದೊಂದಿಗಿನ ಮಧುರ ನೆನಪುಗಳು.
ಪರಿಚಯ
ಶ್ರೀಮತಿ ಲಕ್ಷ್ಮೀ ಅಮ್ಮ ಮತ್ತು ಶ್ರೀಯುತ ಸುಬ್ರಾಯ ಭಟ್ಟ ದಂಪತಿಗಳ ಮೊದಲ ಪುತ್ರರಾದ ಶ್ರೀಯುತರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಪುತ್ತೂರು ತಾಲೂಕು ದರ್ಭೆಯ ಕುಞಮಲೆ ಶಾಲೆಯಲ್ಲಿ
ಪೂರೈಸಿ, ಪ್ರೌಢ ಶಿಕ್ಷಣವನ್ನು ಪಾಣಾಜೆಯ ಸುಬೋಧ ಪ್ರೌಢಶಾಲೆಯಲ್ಲಿ ಪಡೆದ ಇವರು ಕಾಸರಗೋಡು ಸರಕಾರಿ ಕಾಲೇಜಿನಲ್ಲಿ ಮುಂದಿನ ವಿದ್ಯಾಭ್ಯಾಸವನ್ನು ಪೂರೈಸಿ ಪದವಿಯನ್ನು ಪಡೆದಿರುತ್ತಾರೆ, ಮೈಸೂರು ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಪದವಿಯನ್ನೂ ತಮ್ಮದಾಗಿಸಿಕೊಂಡ ಇವರು ಇಲೆಕ್ಟ್ರಾನಿಕ್ಸ್ ಡಿಪ್ಲೊಮಾ ಪದವೀಧರರೂ ಹೌದು. ಪ್ರಸಿದ್ಧ ಚೌರ್ಕಾಡು ಮನೆತನಕ್ಕೆ ಸೇರಿದ ಇವರು ೧೯೯೯ರಿಂದಲೇ ಶ್ರಿಮಠದ ವಿವಿಧ ಯೋಜನೆ ಮತ್ತು ಕಾರ್ಯಕ್ರಮದಲ್ಲಿ ಸಕ್ರಿಯ ಕಾರ್ಯಕರ್ತರಾಗಿ ದುಡಿದಿದ್ದು ೨೦೦೨ರಿಂದ ಶ್ರೀಗುರುಗಳ ಕನಸಿನ ಕೂಸಾದ ಗಡಿನಾಡಿನಲ್ಲಿರುವ ಮುಜುಂಗಾವು ಶ್ರೀಭಾರತೀ ವಿದ್ಯಾಪೀಠದ ಪ್ರಧಾನಾಚಾರ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರಿಗೆ ಶ್ರೀಕರಾರ್ಚಿತ ದೇವತಾನುಗ್ರಹ ಹಾಗೂ ಶ್ರೀಗುರುಗಳ ಆಶೀರ್ವಾದ ಯಾವತ್ತೂ ಇರಲಿ ಎಂದು ಹಾರೈಕೆ.
November 16, 2010 at 3:47 PM
ಹರೆರಾಮ
November 16, 2010 at 4:14 PM
Hare Raama
Saamanya Vishwavidhyanilayadalli dorakada vishesha anubhava illiruttade ennuva maatu… noorakke nooru satya.. padagalalli helalu sadyavagadastu sundara dinagalannu.. shree mattada vidya samsteyalli. kaledu banda vidhyartini naanu…
November 16, 2010 at 4:58 PM
ಹರೆರಾಮ್
November 17, 2010 at 1:19 AM
ಹರೇ ರಾಮ !
ಅನುಭವದ ಸುರುಳಿ ಚೆನ್ನಾಗಿ ಅಭಿವ್ಯಕ್ತಿಗೊಂಡಿದೆ.
ಬರೆಯಲು ಪ್ರೋತ್ಸಾಹಿಸಿದುದಕ್ಕೆ ವಿಶೇಷ ಧನ್ಯವಾದಗಳು.
ಧೈರ್ಯದ ಕೊರತೆಯಿಂದ ಸ್ವಲ್ಪ starting trouble ಅಷ್ಟೇ..
November 17, 2010 at 8:15 AM
ಕೆಲವರ ದುಡಿಮೆಯಿ೦ದ ಇಡೀ ಸ೦ಸಾರವೆ ನಡೆಯುವ೦ತೆ…
ಕೆಲವರ ಸಮಾಜ ಸೇವೆಯಿ೦ದ ಇಡೀ ಸಮಾಜವೆ ನಡೆಯುತ್ತಿದೆ..
.
ಸ೦ಸ್ಕೃತಿಯಿಲ್ಲದ ರಾಜ್ಯ ರಾಕ್ಷಸರನ್ನು ನಿರ್ಮಿಸುತ್ತದೆ. ಸ೦ಸ್ಕೃತಿಯಿಲ್ಲದಿದ್ದರೆ, ನಾವೆಲ್ಲ ಪ್ರಾಣಿಗಳಲ್ಲ, ರಾಕ್ಷಸರಾಗುತ್ತೇವೆ, ಏಕೆ೦ದರೆ ಪ್ರಾಣಿಗಳಲ್ಲಿ ಅದ್ಭುತವಾದ ಸ೦ಸ್ಕೃತಿ + ಸ೦ಸ್ಕಾರ ಇದೆ.
.
ವಿದ್ಯಾಲಯ, ವಿದ್ಯೆ ಆಲಯ ಸ೦ಗಮ. ಮೆದುಳಿಲ್ಲದ ಮನುಷ್ಯನನ್ನು ಕಲ್ಪಿಸಿಕೊಳ್ಳಲು ಸಾಧ್ಯವೆ… ಹಾಗೆಯೆ ವಿದ್ಯೆಯಿಲ್ಲದ..?
ಆಲಯದ ಶಾ೦ತತೆ, ಘ೦ಟೆಯ ಶಬ್ಧ ಅದು ನಿನಾದ, ಅಲ್ಲೊ೦ದು ಶಾ೦ತತೆ ಪ್ರಶಾ೦ತತೆ ಪ್ರಸನ್ನತೆ..
ಹೊರ ಪ್ರಪ೦ಚವೆ ಆಗಲಿ, ಒಳ ಪ್ರಪ೦ಚವೆ ಆಗಲಿ, ಕಲಿಯುವಿಕೆ ಅನುಕ್ಷಣದ ಕಲಿಯುವಿಕೆ ಎಲ್ಲವನ್ನೂ ಗಳಿಸುವ೦ತೆ ಜಯಿಸುವ೦ತೆ ಮಾಡುತ್ತದೆ.
ವಿದ್ಯೆಯನ್ನು ಧಾರೆಯೆರೆಯುವುದಕ್ಕಾಗಿ ವಿದ್ಯೆಯನ್ನು ಸ್ವೀಕರಿಸುವುದಕ್ಕಾಗಿ ಸದಾ ಹಪಹಪಿಸುವ ಗುರುಶಿಷ್ಯರಿ೦ದ ಈ ಲೋಕ ಸು೦ದರ, ಕೆ೦ಪು ಕೆ೦ಪು ಪುಷ್ಪಗಳ ಸಮರ್ಪಣೆ ದೇವಿಗೆ ಧಿವಿಗೆ ಭುವಿಗೆ..
ಈ ದಾನ ಸ್ವೀಕಾರ ಪೂರ್ಣ ನಿ೦ತ ದಿನ, ಕೆ೦ಪು ಕೆ೦ಪು ರಕ್ತಗಳ ಚೆಲ್ಲಾಟ ಎಲ್ಲೆಲ್ಲೂ, ಕೇವಲ ದೇಹಕ್ಕಾಗಿ ಕೇವಲ ಸ್ವಾರ್ಥಕ್ಕಾಗಿ ಬದುಕುವ ಬಯಕೆ ಎಲ್ಲರಲ್ಲೂ ಮೂಡಿದರೆ ಅಲ್ಲಿ ರಕ್ತವಲ್ಲದೆ ಬೇರೇನು ಕಾಣಲು ಸಾಧ್ಯ.
.
ಶ್ರೀ ಗುರುಭ್ಯೋ ನಮಃ
November 17, 2010 at 8:18 AM
ಅಹುದು ಗುರುಕೃಪೆಗೆ ಪಾತ್ರರಾಗೋಣ..
ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ..
ತ೦ದೆತಾಯಿಗುರು – ಇವರ ಹಾರೈಕೆ ಆಶೀರ್ವಾದ ಉನ್ನತ ಏಳಿಗೆಗಳ ದಯಪಾಲಿಸುತ್ತದೆ. ತನ್ನದೆನ್ನುವ ಭಾವ ಅಪಾರವಾಗಿ ಇವರಿಗಲ್ಲದೆ ಬೇರೆ ಯಾರಿಗೆ ಇರಲು ಸಾಧ್ಯ?
.
ಶ್ರೀ ಗುರುಭ್ಯೋ ನಮಃ
November 18, 2010 at 7:53 AM
One of the relevant reading I feel. Don’t miss it, Happy Reading.. and learning.. and teaching.. and reading, never ending cycle… but but practicing and preaching are different I think…
.
http://hareraama.in/articles/srimukha/teacher-vs-guru-manager-vs-leader-is-an-evolution-and-growth/
.
Shri Gurubhyo Namaha
November 18, 2010 at 8:03 AM
“Shravana, Manana, Nidhidhyasana, Dhyana”… – Bhagavadgite.. What is the Chapter number and Shloka… anybody, any idea…?
November 20, 2010 at 10:56 AM
ಶ್ರವಣ ,ಮನನ ನಿಧಿಧ್ಯಾಸನ ಅಧ್ಯಯನದ ವಿವಿಧ ಮಜಲುಗಳು.ದ್ಯಾನ ನಿಧಿಧ್ಯಾಸನದಲ್ಲಡಕವಾಗಿರುವ ಅದರ ಮುಂದಿನ ಹಂತ.
ಭವದ್ಗೀತೆಯಲ್ಲಿ ಇದೇ ವಿಚಾರಗಳ ವಿವರ ಲಭ್ಯ ಹೊರತು ಶ್ಲೋಕವಿಲ್ಲವೆಂದು ನನ್ನ ನೆನಪು.
ಹಾಂ ! ಬೃಹದಾರಣ್ಯಕ ಉಪನಿಷತ್ತಿನಲ್ಲಿ ಇದೆಯಂತೆ.
November 20, 2010 at 11:08 PM
ಪಂಚ ಕೋಶಗಳ ಬಗ್ಗೆ ನಾವು ತಿಳ್ದಿದ್ದೇವೆ.
ಶ್ರವಣವು ಅನ್ನಮಯ ಕೋಶವಾದ ಶ್ರವಣೇಂದ್ರಿಯ ಕಿವಿಗಳ ಮೂಲಕ.
ಮನನ ಮನೋಮಯ ಕೋಶಕ್ಕೆ ಸಂಬಂಧಿಸಿದ ಮನಸ್ಸಲ್ಲಾದರೆ
ನಿಧಿಧ್ಯಾಸನ ವಿಜ್ಞಾನಮಯಕೋಶದ ವ್ಯಾಪ್ತಿಯದ್ದು, ಮತ್ತು
ಧ್ಯಾನ ಎಲ್ಲಕ್ಕೂ ಮೀರಿದ ಆನಂದಮಯ ಕೋಶದಲ್ಲಾಗುವಂತಹದ್ದು (ಸಂಗ್ರಹ)
November 18, 2010 at 10:18 PM
“ಕೆಲವರು ತಾವು ಏನೋ ಕಲಿಯಬಹುದು ಆದರೆ ಬೇರೆಯವರಿಗೆ ಕಲಿಸೋದು ಕಡಿಮೆ”
ಆದರೆ ಶ್ಯಾಮಣ್ಣ ತಾವು ಬೆಳೆಯುವುದರೊಂದಿಗೆ ಅದೆಷ್ಟೋ ಜನರನ್ನ ಸನ್ಮಾರ್ಗದಲ್ಲಿ ನಡೆಸ್ತಾ ….
….ತಮ್ಮ ಜೀವನದ ಸಾರ್ಥಕ್ಯ ಕಾಣುತ್ತಿದ್ದಾರೆ.
ಶಾಲೆಯ ಜವಾಬ್ದಾರಿಯ ಜೊತೆ ಜ್ಯೋತಿಷ್ಯ , ಅಧ್ಯಾತ್ಮ ದ ಬಗೆಗಿನ ಕಾರ್ಯಗಳು ತಮ್ಮ ಬಹುಮುಖ ಪ್ರತಿಭೆಯನ್ನು ತೋರಿಸುತ್ತದೆ.
ಒಂದು ಸಣ್ಣ ಊರಲ್ಲಿ ಶಾಲೆಯನ್ನ ಮುನ್ನೆಡೆಸುವುದು ಮತ್ತು ಪ್ರತಿ ದಿನ ಹೊಸ ಹೊಸ ಸಮಸ್ಯೆಗಳು ……..ಎದುರಿಸುವುದು ಸಾಮಾನ್ಯವಲ್ಲ
ಇವರಿಗೆ ಗುರುಕೃಪೆ ಸದಾ ಇರಲಿ ಅಂತ ಹಾರೈಸೋಣ
November 20, 2010 at 8:12 PM
ಜಗವೇ ಒ೦ದು ಪಾಠಶಾಲೆ.. ನಿತ್ಯ ಕಲಿಕೆ..
ಜೀವ ಮತ್ತು ಜೀವನವಿರುವುದೆ ಕಲಿಯುವಿಕೆಗಾಗಿ..
ಸ೦ಸಾರಿಯಿ೦ದ ಸನ್ಯಾಸಿಯವರೆಗೆ, ಭೋಗಿಯಿ೦ದ ಯೋಗಿಯವರೆಗೆ, ಸಾಮಾನ್ಯನಿ೦ದ ಮಹಾತ್ಮನವರೆಗೆ, ಸರ್ವರಿಗೂ ಉಣಬಡಿಸಲು ಭೂತಾಯಿ ಪ್ರಕೃತಿಮಾತೆ ಬಗೆಬಗೆಯ ಅನ್ನಗಳ ತನ್ನಲಿರಿಸಿಕೊ೦ಡಿರುವಳು.. ಅಷ್ಟಿಲ್ಲದೆ, ಈ ಪವಿತ್ರ ಭೂಮಿಯನ್ನು ಹಿರಿಯರು ಹೀಗೆ ಹೊಗಳಿಹರೆ..
http://hareraama.in/blog/vishwa-vyavasthe-jeeva-sootra/
.
ಜಗದಾತ್ಮ ರಾಮ, ಜಗದ್ಗುರು ಕೃಷ್ಣ, ಜಗದೀಶ ಈಶ
November 24, 2010 at 5:28 PM
ಹರೇ ರಾಮ, ಗಡಿನಾಡಿನಲ್ಲಿ ಕನ್ನಡದ ಕಂಪನ್ನು ಉಲಿಸುವ ನಿಟ್ಟಿನಲ್ಲಿ ಶಕ್ತಿಮೀರಿ ದುಡಿಯುತ್ತಿರುವ ಶಾಮಣ್ಣನಿಗೆ ನನ್ನದೊಂದು ಪ್ರೀತಿಯ ನಮಸ್ಕಾರ. ಶಾಮಣ್ಣನನ್ನು ನಾನು ಹತ್ತಿರದಿಂದ ಬಲ್ಲೆ. ಅವರು ಇಲ್ಲಿ ಹೇಳಿಕೊಂಡದ್ದಕ್ಕಿಂತಲೂ ಹೆಚ್ಚಿನದ್ದನ್ನು ಸಾಧಿಸಿದ್ದಾರೆ. ಮುಜುಂಗಾವು ಶೀಭಾರತೀ ವಿದ್ಯಾಪೀಠದ ಬೆಳವಣಿಗೆಯಲ್ಲಿ ಅವರ ಪ್ರಯತ್ನ ಎಲ್ಲ ಶ್ರೀ ಕಾರ್ಯಕರ್ತರಿಗೆ ಮಾದರಿ.
November 28, 2010 at 11:32 AM
ಹರೇರಾಮ
ಶ್ಯಾಮಣ್ಣ
August 7, 2013 at 2:45 PM
ಪ್ರೀತಿಯ ಶ್ಯಾಮಣ್ಣ ವಿದ್ಯಾಪೀಠದ ಬೆಳವಣಿಗೆಯ ಹಾದಿಯಲ್ಲಿ ಪರಿಶ್ರಮ ಪಟ್ಟದ್ದನ್ನು ಕಣ್ಣಾರೆ ಬಲ್ಲೆ.. ನಂಬಿಕೆ ವಿಶ್ವಾಸ ಪ್ರೀತಿಯಿಂದ ನಮ್ಮ ಮನಸ್ಸನ್ನು ಗೆದ್ದ ಶ್ಯಾಮಣ್ಣ ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸಲಿ