–  ಶ್ರೀ ಗಣಪತಿ ಭಟ್ ಜಟ್ಟಿಮನೆ

ನನ್ನ ಜೀವನದ ಪ್ರತಿ ಹೆಜ್ಜೆಯೂ ಗುರುಬಲ, ದೇವರ ಕೃಪೆಯಿಂದ ಸಾಗಿ ಬಂದಿದೆಯೇ ವಿನಃ ಸಂಸಾರದ ಆರ್ಥಿಕ ಬಲದಿಂದಲ್ಲ, ಸ್ನೇಹಿತರ ಸಲಹೆಗಳು ಬಂದಿದೆಯಾದರೂ ಅದನ್ನು ಕಾರ್ಯರೂಪಕ್ಕೆ ತರಲು ಗುರುಪ್ರೇರಣೆಯೆ ಸಹಕಾರಿಯಾಯ್ತು ಎಂಬುದು ಖಚಿತವಾಗಿದೆ.

ಎಲ್.ಐ.ಸಿ. ಏಜೆನ್ಸಿಯನ್ನು ಪಡೆದುಕೊಂಡು ಸಮಾಜಸೇವೆ ಎಂಬ ಭಾವನೆಯಲ್ಲಿ ಕೆಲಸ ಮಾಡುತ್ತಿದ್ದೆ.  ಈ ರೀತಿಯಲ್ಲಿ ಸಮಾಜ ಮುಖಿಯಾದ ನಾನು ೨೦-೦೪-೨೦೦೧ರಲ್ಲಿ ಶ್ರೀಶ್ರೀಗಳು ನಮ್ಮೂರಿಗೆ ಬಂದಾಗ ಅಲ್ಲಿಗೆ ಹೋಗಿದ್ದೆ. ಶ್ರೀಯುತ ಲಕ್ಷ್ಮೀನರಸಿಂಹ ಭಟ್ರು, ದೊಡ್ಲೆಪಾಲ್ ಚಂದ್ರಣ್ಣ, ಇವರುಗಳ ಮುಂದಾಳತ್ವದಲ್ಲಿ ಶ್ರೀಗಳವರನ್ನು ಬರಮಾಡಿಕೊಂಡಿದ್ದೆವು. ಆಗ ನಾನು ಶ್ರೀಗಳ ನಿಕಟ ಸಂಪರ್ಕದಲ್ಲಿದ್ದ ಕಾಲವಲ್ಲ. ಅಂದಿನ ಸಭೆಯಲ್ಲಿ ಶ್ರೀಗುರುಗಳು ಸಮಾಜ ಸಂಘಟನೆಯ ದೃಷ್ಟಿಯಿಂದ ಸೀಮಾ ಪರಿಷತ್ ರಚನೆಯಾಗಬೇಕೆಂದು ತಿಳಿಸಿದ್ದರು. ಸೀಮಾಪರಿಷತ್ ರಚನೆಯ ಸಂದರ್ಭದಲ್ಲಿ ನನ್ನನ್ನು ಕಬ್ಬಿನಾಡು ಸೀಮಾಪರಿಷತ್ತಿನ ಸಹಕಾರ್ಯದರ್ಶಿಯಾಗಿ ನೇಮಕ ಮಾಡಿದರು. ಮುಂದೆ ನಾನು ಸಭೆಯಲ್ಲಿ ಭಾಗವಹಿಸಿದರೂ ಪರಿಷತ್‌ನ ಬಗ್ಗೆ ಮಾಹಿತಿಯ ಕೊರತೆಯಿಂದಲೋ ಅಥವಾ ನನ್ನ ಅನುಭವಗಳು ಪರಿಷತ್‌ನ ಸಭೆಗೆ ಉಪಯುಕ್ತವಾಗಿರಲಿಲ್ಲವೋ ಗೊತ್ತಿಲ್ಲ ಅಲ್ಲಿ ನನ್ನ ಪಾಲಿಗೆ ಕೆಲಸವಿರಲಿಲ್ಲ. ಹಾಗಾಗಿ ಮುಂದಿನ ಸಭೆಗಳಿಗೆ ಹೋಗಿರಲಿಲ್ಲ.

೨೦೦೨ನೇ ಇಸವಿಯಲ್ಲಿ ಪ್ರಧಾನಮಠದಲ್ಲಿ ನಡೆದ ಶ್ರೀಗುರುಗಳ ಚಾತುರ್ಮಾಸ್ಯದ ಸಂದರ್ಭದಲ್ಲಿ ಹೊರೆಕಾಣಿಕೆ (ಸುವಸ್ತು) ಸಂಗ್ರಹ ಮಾಡಿ ಸಮರ್ಪಣೆ ಮಾಡಬಹುದು ಎಂದು ಚಾತುರ್ಮಾಸ್ಯ ಆಹ್ವಾನ ಪತ್ರಿಕೆಯಲ್ಲಿ ಇದ್ದುದನ್ನು ಕಂಡು ನಾನು ಅಂದು ಕಬ್ಬಿನಾಡು ಸೀಮಾ ಅಧ್ಯಕ್ಷರಲ್ಲಿ ‘ಹೊರೆಕಾಣಿಕೆ ಸಂಗ್ರಹಕ್ಕೆ ವಾಹನ ತೆಗೆದುಕೊಂಡು ಹೋಗುತ್ತೇನೆ, ಪರಿಷತ್‌ನ ಅನುಮತಿಬೇಕು’ ಎಂದು ಕೇಳಿದಾಗ, ಅವರು ಅನುಮತಿಕೊಟ್ಟು, ಸಂಗ್ರಹ ಸುಲಭವಿಲ್ಲ ಎಂದು ಹೇಳಿದರು. ಆಗ ‘ಸಂಗ್ರಹ ಉತ್ತಮವಾದರೆ ಬಾಡಿಗೆ ಕೊಡಿ, ಅದಿಲ್ಲವಾದರೆ ಸ್ವತಃ ನಾನೇ ಅದರ ವೆಚ್ಚ ಭರಿಸುತ್ತೇನೆ’ ಎಂದು ಶ್ರೀಗುರುಗಳನ್ನು ಮನಸಾ ಪ್ರಾರ್ಥಿಸಿಕೊಂಡು ಸಂಗ್ರಹಕ್ಕೆ ಹೊರಟೆ. ಸೀಮೆಯ ಅರ್ಧ ಭಾಗದ ಶಿಷ್ಯ ಸಮಾಜದ ಮನೆಗಳಿಗೆ ಹೋದಾಗ ಉತ್ತಮ ಪ್ರತಿಕ್ರಿಯೆ ದೊರಕಿತು. ನಮ್ಮ ಸೀಮೆಯಲ್ಲಿ ಹೊರೆಕಾಣಿಕೆ ಎಂಬುದು ಹೇಗೆ ಅಂತ ಗೊತ್ತಿರದ ಆ ಕಾಲದಲ್ಲಿ ಸುಮಾರು ೧೫ ರಿಂದ ೨೦ ಕ್ವಿಂಟಾಲ್ ಹೊರೆ ಕಾಣಿಕೆ ಸಂಗ್ರಹವಾಯಿತು. ಅದೆಲ್ಲವನ್ನು ಶ್ರೀಮಠಕ್ಕೆ ತೆಗೆದುಕೊಂಡು ಹೋಗಿ, ಒಂದು ಕಡೆ ಜೋಡಿಸಿ ಇಟ್ಟು, ಶ್ರೀಗಳವರಲ್ಲಿ ವಿಷಯವನ್ನು ಬಿನ್ನವಿಸಿ ಸ್ಥಳಕ್ಕೆ ಕರೆದುಕೊಂಡು ಹೋಗಿ ತೋರಿಸಿದಾಗ, ಅವರಿಗೆ ಆನಂದವಾಗಿ ಅಂದು ಉಗ್ರಾಣದ ವ್ಯವಸ್ಥಾಪಕರನ್ನು ಕರೆದು ಶ್ರೀಗಳು ‘ಈ ಹೊರೆಕಾಣಿಕೆ ನೋಡಿದೆಯೆಲ್ಲಾ ಎಲ್ಲಾ ಸುವಸ್ತುಗಳು ಇಲ್ಲಿವೆ. ತರಕಾರಿ, ಧವಸ ಧಾನ್ಯ, ಗಿಡಗಳು ಗೋವಿನ ಮೇವು, ಆಹಾರ ವಸ್ತುಗಳು ಎಲ್ಲವೂ ಇದೆ. ಅದಕ್ಕಿಂತ ಹೆಚ್ಚಾಗಿ ಈಗ ಜೋಡಿಸಿಟ್ಟ ವೈಖರಿ ನಮಗೆ ಆನಂದವಾಗಿದೆ. ಎಲ್ಲಾ ಸೀಮೆಗೂ ತಿಳಿಸು.’ ಎಂದು ಅಪ್ಪಣೆ ಇತ್ತರು.

ನಾನು ಒಮ್ಮೆ ವಿದ್ಯುತ್ ಸಂಪರ್ಕದಿಂದ ಸಾವು ಬದುಕಿನ ಸ್ಥಿತಿಯಲ್ಲಿದ್ದ ಸಂದರ್ಭದಲ್ಲಿ  ವೈದ್ಯರು- ‘ಘಟನೆ ನಿಮ್ಮ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿದೆ. ನೀವು ಸ್ವಲ್ಪ ದಿನ ಸಂಸಾರ ಜಂಜಾಟಗಳಿಂದ ದೂರವಿದ್ದು ರಿಲ್ಯಾಕ್ಸ್ ಆಗಿ’ ಎಂದು ಸಲಹೆ ನೀಡಿದರು. ಆಗ ನಾನು ಶ್ರೀಗಳು ಇದ್ದಲ್ಲಿಗೆ ಹೋಗುವದೇ ನನಗೆ ಪರಿಹಾರವೆಂದು (೨೦೦೩ರಲ್ಲಿ) ತಿಳಿದು ದೂರದ ಕಾಸರಗೋಡಿನ ಗೋಳಿತ್ತಡ್ಕದಲ್ಲಿ ಶ್ರೀಗಳು ಇದ್ದರೆಂದು ತಿಳಿದು ಅಲ್ಲಿಗೆ ಹೋದೆ. ಶ್ರೀಗಳ ಭೇಟಿಯ ಸಂದರ್ಭದಲ್ಲಿ ನನ್ನನ್ನು ಪರಿಚಯಿಸಿಕೊಳ್ಳುವುದು ಹೇಗೆಂದು ಚಿಂತಿಸುತ್ತಾ ಕುಳಿತ ನನ್ನನ್ನು ಶ್ರೀಗಳೇ ಹೆಸರು ಕರೆದು ಏನು ಬಹಳ ದೂರ ಬಂದಿದ್ದಿಯಲ್ಲಾ ಎಂದು ಕೇಳಿದರು. ಆಗ ನನ್ನ ಜೀವನ ಸಾರ್ಥಕ ಎಂದು ತಿಳಿದೆ. ರಾತ್ರಿ ಶ್ರೀರಾಮದೇವರ ಪೂಜೆ ಮುಗಿಸಿ ೧೨ ಘಂಟೆಗೆ ನನಗೆ ಊರಿಗೆ ಬರಲು ಅನುಮತಿ ದೊರೆಯಿತು. ಅನಾರೋಗ್ಯದ ಕಾರಣದಿಂದ ನನ್ನ ಹೆಂಡತಿಗೆ ನನ್ನನ್ನು ಹೊರಗಡೆ ವ್ಯವಹಾರಕ್ಕೆ ಕಳುಹಿಸಲು ಆತಂಕವಿತ್ತು. ಆ ವಿಚಾರವನ್ನು ಶ್ರೀಗಳವರಲ್ಲಿ ನನ್ನ ಮಡದಿ ನೀವೇದಿಸಿಕೊಂಡಾಗ ಶ್ರೀಗಳು – ‘ಅವನ ಪ್ರಾಣವನ್ನು ನಿನ್ನಲ್ಲಿ ಕಾಯಲು ಸಾಧ್ಯವಾ?’ ಎಂದರು. ಆಗ ಮೌನ ವಹಿಸಿದ ನನ್ನ ಮಡದಿಗೆ – ‘ಗಣಪತಿಯನ್ನು ನಾವು ನೋಡಿಕೋಳ್ಳುತ್ತೇವೆ. ಅವನನ್ನು ಓಡಾಡಲು ಬಿಡು’ ಎಂದರು. ನಾನು ಅನುಭವಿಸುವ ಯಾತನೆಯನ್ನು ಶ್ರೀಗಳವರಲ್ಲಿ ಹೇಳಿಕೊಂಡಾಗ ಇನ್ನು ಮುಂದೆ ನಾವು ನೋಡಿಕೊಳ್ಳುತ್ತೇವೆ ಎಂದು ಹೇಳಿ ಅಲ್ಲೆ ಇರುವ ಜ್ಯೋತಿಷಿಗಳಿಗೆ ನನ್ನ ಜಾತಕ ನೋಡಲು ಸೂಚಿಸಿದರು. ಜ್ಯೋತಿಷಿಗಳು ಜಾತಕ ನೊಡಿದಾಕ್ಷಣ ಕೆಲ ದಿನಗಳ ಹಿಂದೆ ನನಗೆ ಅನುಭವಕ್ಕೆ ಬಂದ ಅವಘಡದ ವಿಷಯವನ್ನು ತಿಳಿಸಿದರು. ಈ ಅವಘಡದಲ್ಲಿ ಜೀವ ಉಳಿದಿದ್ದು ಶ್ರೀಗುರು ಅನುಗ್ರಹದಿಂದ ಮಾತ್ರ ಇಲ್ಲದಿದ್ದರೆ ಜೀವಕ್ಕೆ ಕಷ್ಟವಿತ್ತು ಎಂದು ಹೇಳಿದರು. ನಂತರ ಅವರೇ ಗುರುಗಳಿಗೆ ವಿಷಯ ತಿಳಿಸಿದರು. ಶ್ರೀಗಳು ಆಗ – ‘ನನ್ನ ಒಳ್ಳೆಯ ಶಿಷ್ಯಂದಿರಿಗೆ ದೇವರು ಒಳ್ಳೆಯದನ್ನೇ ಮಾಡುತ್ತಾನೆ. ಇನ್ನು ಹೆಚ್ಚು ಸೇವೆ ಮಾಡು’ ಎಂದರು.

ಅಲ್ಲಿಂದ ೬ ತಿಂಗಳ ನಂತರ ನಮ್ಮ ಕಬ್ಬಿನಾಡುಸೀಮೆಗೆ ಶ್ರೀಗಳು ಬಂದಾಗ ಪರಿಷತ್ತು ಪುನರ್ರಚನೆಯ ಸಂದರ್ಭ. ನನಗೆ ಸೀಮಾ ಅಧ್ಯಕ್ಷನಾಗಿ ಕೆಲಸ ಮಾಡುವ ಸಾಮರ್ಥ್ಯವಿದೆ ಎಂದು ಸೀಮೆ ಅಭಿಪ್ರಾಯ ಪಟ್ಟಿತು. ಆದರೆ ನಾನು ಈ ವಿಚಾರದಲ್ಲಿ ಸಣ್ಣವನೆಂದು ಹೇಳಿ ನನ್ನಿಂದ ಆಗದ ಕೆಲಸವೆಂದು ಶ್ರೀಗಳಲ್ಲಿ ವಿನಂತಿಸಿದೆ. ಆಗ ಹಿಂದೆ ವಿದ್ಯುತ್ ಸಂಪರ್ಕ ತಾಗಿ ವಿಚಲಿತನಾದಾಗ ತಮ್ಮನ್ನು ಭೇಟಿಯಾದದ್ದು ಮತ್ತು ಶ್ರೀಗುರುಗಳ ಆಶೀರ್ವಾದದಿಂದ ಚೇತರಿಸಿದ ವಿಚಾರ ಸಭೆಗೆ ತಿಳಿಸಿದರು. ಆದ್ದರಿಂದ ಶ್ರೀಗಳು ಹೇಳಿದ್ದನ್ನು ಮಾಡಬೇಕಾದ್ದು ನನ್ನ ಹೊಣೆ ಎಂದು ಅರಿತು ಕರ್ತವ್ಯ ವಹಿಸಿಕೊಂಡೆ. ಅಂದಿನಿಂದ ಜೀವನದ ದಿಕ್ಕೂ ಬದಲಾಯಿತು. ಸೀಮೆಯಲ್ಲಿ ಗುರುತರವಾದ ಅನೇಕ ಸಮಸ್ಯೆಗಳು ಬಂದಾಗಲೂ ಶ್ರೀಗಳವರ ಅನುಗ್ರಹ ಬಲದಿಂದ ಪರಿಹಾರವಾಗಿದೆ.

೨೦೦೫ನೇ ಇಸವಿಯಲ್ಲಿ ಶ್ರೀರಾಮೋತ್ಸವದ ಸಂದರ್ಭದಲ್ಲಿ ಶ್ರೀಗಳವರು ಅಖಂಡ ರಾಮತಾರಕ ಭಜನೆ ಆಗಿದ್ದರೆ ಸಂತೋಷವಾಗುತ್ತದೆ ಎಂದು ಅಭಿಪ್ರಾಯ ಪಟ್ಟಾಗ ತುಂಬಿದ ಸಭೆಯಲ್ಲಿ ಶ್ರೀಗಳವರ ಅಪೇಕ್ಷೆಯನ್ನು ನಡೆಸಿಕೊಡುವುದು ಶಿಷ್ಯರಾದ ನಮ್ಮ ಹೊಣೆ ಎಂದು ಭಾವಿಸಿ ನಾವು ನಡೆಸಿಕೊಡುತ್ತೇವೆಂದು ಹೇಳಿ ಸೀಮೆಯ ಪರವಾಗಿ ಮಂತ್ರಾಕ್ಷತೆ ಪಡೆದೆವು. ಶ್ರೀಮಠದಲ್ಲಿ ೧೩ ದಿನಗಳ ಅಹೋರಾತ್ರಿಯ ಅಖಂಡ ಶ್ರೀರಾಮತಾರಕ ಭಜನೆ ಪ್ರಾರಂಭಿಸಿದೆವು. ನನ್ನೊಂದಿಗೆ ಆಗ ಬೆನ್ನೆಲುಬಾಗಿ ನಿಂತವರು ಸಳ್ಳೇಮನೆ ಅಚ್ಚುತಣ್ಣ (ಶ್ರೀ ಲಕ್ಷ್ಮೀನಾರಾಯುಣ), ತೌಡುಗೊಳ್ಳಿ ಶ್ರೀ ಶಂಕರನಾರಾಯಣ, ನನ್ನ ತಮ್ಮ ಶ್ರೀ ವೆಂಕಟರಮಣ, ಹಾಗೂ ಶಂಕರನಾರಾಯಣನ ತಂಗಿಯ ಮಕ್ಕಳಾದ ವಿಷ್ಣು, ಶ್ರೀಹರಿ ಬಾಣಿಗ, ಅಲ್ಲದೆ ಶಿರಸಿಯ ವಿದ್ಯಾರ್ಥಿಗಳು. ಭಜನೆಗೆ ಹಗಲಲ್ಲಿ ಭಕ್ತಜನ ಬಂದು ಸಹಕರಿಸಿದರಾದರೂ ರಾತ್ರಿ ನಾವುಗಳೇ ಭಜನೆ ಮಾಡಿದೆವು. ನಮ್ಮ ಶ್ರದ್ಧೆ ಕಂಡು ಶ್ರೀಗಳಿಗೆ ಅತ್ಯಂತ  ಆನಂದವಾಯಿತು. ಶ್ರೀಗಳ ಸಂಕಲ್ಪದಂತೆ ನಂತರ ನಡೆದ ಶ್ರೀರಾಮಾಯಣ ಮಹಾಸತ್ರ, ಶತಕೋಟಿ ಕುಂಕುಮಾರ್ಚನೆ ಸಮಾರೋಪ, ವಿಶ್ವ ಗೋ ಸಮ್ಮೇಳನದಲ್ಲಿ ಕೂಡಾ ಅಖಂಡ ಭಜನೆಗಳು ನಡೆದುವು.

ಕಬ್ಬಿನಾಡು ಸೀಮಾ ಕಾರ್ಯಕರ್ತರ ಮೂಲಕ ೨೦೦೪ರಲ್ಲಿ ಶ್ರೀಮಠದಲ್ಲಿ ಸುಮಾರು ೪೦೦ ಆಳು ಕೆಲಸವನ್ನು ಸೇವಾರೂಪದಲ್ಲಿ ಶ್ರಮಾದಾನ ಮಾಡಿ ಶ್ರೀಗುರುಗಳ ಕಲ್ಪನೆಯ ನಕ್ಷತ್ರವನ ನಿರ್ಮಾಣ ಮಾಡಿದ ಸಂದರ್ಭವನ್ನು ನೆನಪಿಸುವಾಗ ಮೈ ರೋಮಾಂಚನವಾಗುತ್ತದೆ.

ಸೀಮಾ ಪರಿಷತ್ತು ಆರ್ಥಿಕವಾಗಿ ಸದೃಢವಾಗಿಲ್ಲದ ಸಮಯ ಚಾತುರ್ಮಾಸ್ಯಲ್ಲಿ ಶ್ರೀಗುರುಗಳಿಗೆ ಸೀಮಾಭಿಕ್ಷೆ ನೆರವೇರಿಸಬೇಕಾದ ಸಂದರ್ಭದಲ್ಲಿ ಸಂಗ್ರಹಕ್ಕಾಗಿ ವಿಶೇಷ ಕಲಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಗುರುಕೃಪೆಯಿಂದ  ಚಾತುರ್ಮಾಸ್ಯ ಸೇವೆ ಸಮರ್ಪಣೆಯೊಂದಿಗೆ ಶ್ರೀಮಠದ ಮಹತ್ವಾಕಾಂಕ್ಷಿ ಕಾಮದುಘಾ ಯೋಜನೆಗೆ ಕೂಡಾ ವಿಶೇಷ ಸಮರ್ಪಣೆ ಮಾಡುವಂಥ ಬಲ ಬಂದಿರುವುದು ಚಿತ್ತಭಿತ್ತಿಯಲ್ಲಿ ಮಾಸದೆ ಉಳಿಯುವ ಘಟನೆ ಮತ್ತು ಸೀಮೆಯ ಎಲ್ಲರಿಗೂ ಆನಂದವಾದ ವಿಚಾರವಾಗಿದೆ.

ಗುರುಕುಲದಲ್ಲಿ ಶಾಶ್ವತ ಸಭಾಭವನವನ್ನು ನಿರ್ಮಿಸುವ ಹೊಣೆಗಾರಿಕೆಯನ್ನು ನಿರ್ವಹಣಾ ಸಮಿತಿಗೆ ನೀಡಿದ್ದ ಸಂದರ್ಭದಲ್ಲಿ ಆರ್ಥಿಕ ಕೊರತೆಯ ನಡುವೆಯೇ ಅಲ್ಪಕಾಲದಲ್ಲಿ ಸಭಾಭವನದ ಕಾಮಗಾರಿ ಪೂರ್ಣಗೊಂಡಿದ್ದು ಕೂಡಾ ಶ್ರೀಗುರುಗಳ ಮಹಿಮೆಗೆ ಇನ್ನೊಂದು ಉದಾಹರಣೆಯಾಗಿದೆ. ನನ್ನ ಪ್ರತಿಯೊಂದು ಅನುಭವಗಳಿಂದಲೂ ನಾನು ಅರಿತುಕೊಂಡಿದ್ದು ಅಂದರೆ ಶ್ರೀಗಳು ಅನುಗ್ರಹಿಸಿ ಜವಾಬ್ದಾರಿ ನೀಡಿದ ಎಲ್ಲ ಕಾರ್ಯವು ಸುಲಲಿತವಾಗಿ ನಡೆಯುತ್ತದೆ ಎನ್ನುವುದು.

ಗುರಿಯೆಡೆಗೆ ನಡೆಯಿಸುವುದು ಶ್ರೀಗುರುವೇ….. ಆ ಗುರುವಿಗಿದೋ ಕೋಟಿ ನಮನಗಳು

ಗುರುಕೃಪೆಯಿರಲಿ ನಿರಂತರಾ…..

ಪರಿಚಯ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮತ್ತಿಕೈ ಗ್ರಾಮದ (ಕಬ್ಬಿನಾಡು ಸೀಮೆ) ಜಟ್ಟಿಮನೆ ಶ್ರೀಮತಿ ಪಾರ್ವತಮ್ಮ ಮತ್ತು ಶ್ರೀ ವಿಘ್ನೇಶ್ವರಯ್ಯ ದಂಪತಿಗಳಿಗೆ ದ್ವೀತಿಯ ಪುತ್ರನಾಗಿ ೧೯೬೧ ರಂದು ಜನಿಸಿದ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಹೊಸನಗರ ತಾಲೂಕಿನ ಮತ್ತೀಕೈ ಶಾಲೆಯಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಕೊಲ್ಲೂರು ಪ್ರೌಢಶಾಲೆಯಲ್ಲಿ ಪಡೆದ ನಂತರ ಜೀವನ ಹೋರಾಟದಲ್ಲಿ ವಿವಿಧ ಕಡೆಗಳಲ್ಲಿ ದುಡಿದು ೧೯೮೪ರಲ್ಲಿ ಸ್ವಂತ ವ್ಯಾಪಾರನ್ನು ಸ್ವಂತ ಊರು ಸಂಪೆಕಟ್ಟಯಲ್ಲಿ ಪ್ರಾರಂಭಿಸಿದರು. ಕಟ್ಟಿನಹೊಳೆ ಗ್ರಾಮದ ಶ್ರೀಮತಿ ಸುಬ್ಬಮ್ಮ ಮತ್ತು ಶ್ರೀ ವಿನಾಯಕ ಗಜಾನನ ಭಟ್ ದಂಪತಿಗಳ ಪುತ್ರಿಯಾದ ಯಶೋಧಾ ಇವರನ್ನು ೧೯೯೨ರಲ್ಲಿ ವಿವಾಹವಾಗುವುದರೊಂದಿಗೆ ಗೃಹಸ್ಥ ಜೀವನಕ್ಕೆ ಕಾಲಿರಿಸಿದರು.

ಕಬ್ಬಿನಾಡು ಸೀಮೆಯ ಅಧ್ಯಕ್ಷರಾಗಿ, ಗುರುಕುಲ ನಿರ್ವಹಣಾ ಸಮಿತಿಯ ಅಧ್ಯಕ್ಷರಾಗಿ ಹಾಗೂ ಪ್ರಮುಖ ಸಮಾರಂಭಗಳಲ್ಲಿ ನಿರಂತರ ಭಜನಾ ವ್ಯವಸ್ಥೆಯ ಸಂಯೋಜಕರಾಗಿ ವಿಶೇಷ ಕೊಡುಗೆ ನೀಡಿರುವಂತಹ ಶ್ರೀಯುತರು ಪ್ರಸ್ತುತ ರಾಮಚಂದ್ರಾಪುರ ಮಂಡಲದ ಅಧ್ಯಕ್ಷರಾಗಿ ಶ್ರೀಗುರುಸೇವೆಯಲ್ಲಿ ನಿರತರಾಗಿರುತ್ತಾರೆ. ಇವರಿಗೂ ಕುಟುಂಬಕ್ಕೂ ಶ್ರೀಗುರುದೇವತಾನುಗ್ರಹ ಸದಾ ಇರಲೆಂದು ಹಾರೈಕೆ.

Facebook Comments