ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 26:

ಆಚಾರಹೀನನಾದವನನ್ನು ವೇದಗಳು ಪವಿತ್ರಗೊಳಿಸುವುದಿಲ್ಲ
(ಆಚಾರಹೀನಂ ನ ಪುನಂತಿ ವೇದಾಃ)

ವಿದ್ವಾನ್ ಎನ್.ಎಸ್. ರಾಮಭದ್ರಾಚಾರ್ಯ

ಈ ವಾಕ್ಯದಲ್ಲಿ ಶ್ರುತವಾಗುವ ಎಲ್ಲ ಶಬ್ಧಗಳ ಅರ್ಥಶೋಧನೆಯನ್ನು ಮಾಡಿದರೆ ಮಾತ್ರ ಅವು ವಕ್ತೃವಿನ ತಾತ್ಪರ್ಯವನ್ನು ತಿಳಿಸಿಕೊಡಲು ಸಮರ್ಥವಾಗುತ್ತವೆ. ವೇದಗಳು ಎಂದರೆ ಋಕ್, ಯಜುಸ್, ಸಾಮ ಮತ್ತು ಅಥರ್ವಣ ಎಂಬ ಅವಾಂತರ ಬೇಧಗಳನ್ನು ಹೊಂದಿ ನಿಶ್ಚಿತವಾದ ಸ್ವರೂಪವನ್ನುಳ್ಳವುಗಳು. ಅಂತಹ ವೇದಗಳು ಶಬ್ದರಾಶಿಗೆ ನೆಲೆಯಾದ ಆಕಾಶಮಂಡಲದಲ್ಲಾಗಲೀ, ಯೋಗಿಗಳ ದಹರವೆಂಬ ಹೃದಯಸ್ಥಾನದಲ್ಲಾಗಲೀ, ಸಾಮಾನ್ಯರೂಪವಾಗಿ ಅಧ್ಯಯನ ಮಾಡುವವರ ನಾಲಿಗೆಯ ಅಗ್ರಭಾಗದಲ್ಲಾಗಲೀ ವಿಜೃಂಭಿಸುವುದರಿಂದ ಮಾತ್ರವೇ ಯಾರೋ ಕೆಲವರನ್ನಾಗಲಿ ಅಥವಾ ಎಲ್ಲರನ್ನಾಗಲಿ ಪವಿತ್ರಾತ್ಮರನ್ನಾಗಿ ಮಾಡಲು ಸಮರ್ಥವಾಗುವುದಿಲ್ಲ. ಆದರೆ ವೇದಗಳನ್ನು ವಿಧಿವತ್ತಾಗಿ ಅಧ್ಯಯನ ಮಾಡುವುದರ ಮೂಲಕ ಆನುಪೂರ್ವಿಯನ್ನು ಧಾರಣ ಮಾಡುವುದರಿಂದ, ಆಗಾಗ್ಗೆ ಜಪ-ಅಧ್ಯಯನ-ಪಾರಾಯಣಾದಿಗಳಿಂದ, ವೇದದಲ್ಲಿ ಉಕ್ತವಾದ ಕರ್ಮಗಳನ್ನು ಸರಿಯಾದ ಸಾಧನಗಳಿಂದ ಅನುಷ್ಠಾನ ಮಾಡುವುದರಿಂದ, ವೇದದ ಅರ್ಥಗಳನ್ನು ಯೋಗ್ಯರಾದ ಅಧಿಕಾರಿಗಳಿಗೆ ಉಪದೇಶಪೂರ್ವಕವಾಗಿ ತಿಳಿಸಿಕೊಡುವುದರಿಂದ, ಸ್ವತಃ ಶಬ್ದಬ್ರಹ್ಮರೂಪವಾಗಿರುವ ವೇದಗಳಲ್ಲಿ ತಮ್ಮ ಆತ್ಮವನ್ನು ಸಮರ್ಪಣೆ ಮಾಡಿಕೊಂಡು ತಾವು ಅದರಲ್ಲೇ ಮಗ್ನವಾಗುವುದರಿಂದ – ಹೀಗೆ ಈ ರೀತಿಯ ಪ್ರಕಾರಗಳಲ್ಲಿ ಯಾವುದಾದರೂ ಒಂದು ಪ್ರಕ್ರಿಯೆಯನ್ನೋ ಅಥವಾ ಸಮಸ್ತಪ್ರಕ್ರಿಯೆಯನ್ನೂ  ಯಥಾಯೋಗ್ಯವಾಗಿ ಆಶ್ರಯಿಸಿದರೆ ಮಾತ್ರ ವೇದಗಳು ಇಂತಹ ಆಚಾರವಂತರನ್ನು ಪವಿತ್ರಗೊಳಿಸುತ್ತದೆ ಎಂಬುದಾಗಿ ನಾವು ಭಾವಿಸುತ್ತೇವೆ. ಆ- ಅಂದರೆ ಸಂಪೂರ್ಣವಾಗಿ  ಚಾರಃ – ಸಂಚಾರ ಮಾಡುವುದು ಎಂಬುದಾಗಿ ಶಬ್ದದ  ಅರ್ಥವನ್ನು ಚಿಂತನೆ ಮಾಡಿದರೆ ಉಕ್ತವಾದ ಸಂಪೂರ್ಣ ಅರ್ಥವು ಆಚಾರ ಶಬ್ದದಿಂದ ಬೋಧಿತವಾಗುತ್ತದೆ.

  ಉತ್ತಮ ವೈದ್ಯನು ಪ್ರಯೋಗಿಸಿದ ಔಷಧಗಳು ರೋಗಿಗಳಲ್ಲಿ ಫಲಕಾರಿಯಾಗಲೂ ನಿಯಮಬದ್ಧವಾದ ಸೇವನೆ, ಸರಿಯಾದ ಅನುಪಾನ, ಸರಿಯಾದ ಪಥ್ಯವನ್ನು ಪಾಲಿಸುವ ರೀತಿ, ಅಚಲವೂ ದೃಢವೂ ಆದ ಭಾವನೆ-ಎಂದು ಮುಂತಾದ ಆಚಾರಗಳನ್ನು ಪಾಲಿಸಿದರೆ ಮಾತ್ರ ಆ ಔಷಧಗಳು ವ್ಯಾಧಿಯನ್ನು ಶಮನಗೊಳಿಸಲು ಸಮರ್ಥವಾಗುತ್ತದೆ. ಅಂತಹ ಔಷಧಗಳನ್ನು ರೋಗಿಯ ಬಳಿಯಲ್ಲಿ ಕೇವಲ ಚೀಲದಲ್ಲಿ ಹಾಕಿಡುವುದರಿಂದ ಏನೂ ಪ್ರಯೋಜನವಾಗುವುದಿಲ್ಲ.

ಆದುದರಿಂದಲೇ ಶಾಸ್ತ್ರಕಾರರು, “ಶಾಸ್ತ್ರದ ಫಲವು ಪ್ರಯೋಗಾನುಷ್ಠಾನವನ್ನು ಮಾಡುವವನಿಗೆ ಮಾತ್ರ ಉಂಟಾಗುತ್ತದೆ”ಎಂದು ಹೇಳುತ್ತಾರೆ. ಪ್ರಯೋಗವೆಂಬುದೂ ಆಚಾರದ ಪರ್ಯಾಯವೇ ಆಗಿದೆ. ಪ್ರಯೋಗ ಮಾಡುವವನು ಎಂದರೆ ಶಾಸ್ತ್ರಾರ್ಥವನ್ನು ತನ್ನಲ್ಲಿ ಉತ್ತಮವಾಗಿ ಯೋಜಿಸಿಕೊಳ್ಳುವವನು ಎಂಬುದಾಗಿ ಅರ್ಥ. ಅಂತಹ ಉತ್ತಮವಾದ ಶಾಸ್ತ್ರಾರ್ಥದ ಯೋಗದಿಂದ ಫಲದ ಯೋಗವು ಅಂದರೆ ಫಲ ಸಿದ್ಧಿಯು ಉಂಟಾಗುತ್ತದೆ. ಇಲ್ಲದಿದ್ದರೆ, ಕಾರ್ಯ-ಕಾರಣಗಳು ಒಂದೆಡೆ ಸೇರಿ ಹೊಂದುವುದಿಲ್ಲವಾದ್ದರಿಂದ ಅಸಾಂಗತ್ಯವೇ ಉಂಟಾಗುತ್ತದೆ. “ವಿಷವನ್ನು (ಜಲವನ್ನು) ಮೋಡಗಳು ಕುಡಿದವು; ಆದರೆ ವಿರಹಿಣೀ ಸ್ತ್ರೀಯರು ಮೂರ್ಛೆಹೊಂದಿದರು”ಎನ್ನುವಂತೆ ಆಗುತ್ತದೆ. ಎಲ್ಲ ಶಾಸ್ತ್ರಗಳೂ ಪ್ರಕೃತಿ ನಿಯಮವನ್ನು ಅನುಸರಿಸುವವರನ್ನೇ ರಕ್ಷಿಸುತ್ತವೆ. ಅಂತಹ ನಿಯಮದ ಅನುಸರಣೆಯನ್ನೇ ತಮ್ಮ ವ್ಯಾಪಾರವನ್ನಾಗಿ (ಕಾರ್ಯವನ್ನಾಗಿ) ಹೊಂದಿ ಶಾಸ್ತ್ರಗಳು ಅಂತಹ ಆಚಾರಶೀಲರಲ್ಲೇ ವ್ಯಾಪಿಸುತ್ತವೆ ಅಂದರೆ, ಫಲಕಾರಿಯಾಗುತ್ತವೆ. ಆದುದರಿಂದ ಆಚಾರವು ಶಾಸ್ತ್ರಾರ್ಥದ ವ್ಯಾಪಾರ ಅಂದರೆ ಕಾರ್ಯರೂಪವಾಗಿಯೂ ಆಗುತ್ತದೆ. ಧರ್ಮಶಾಸ್ತ್ರಕಾರರು ಆಚಾರ ಶಬ್ದವನ್ನು ಹೀಗೆ ನಿರ್ವಚನ ಮಾಡಿದ್ದಾರೆ:

“ಪಂಚೇಂದ್ರಿಯಸ್ಯ ದೇಹಸ್ಯ  ಬುದ್ಧೇಶ್ಛ ಮನಸಸ್ತಥಾ|
ದ್ರವ್ಯದೇಶಕ್ರಿಯಾಣಾಂ ಚ ಶುದ್ಧಿರಾಚರ ಇಷ್ಟತೇ|”

(ಪಂಚೇಂದ್ರಿಯಗಳು, ದೇಹ, ಬುದ್ಧಿ, ಮನಸ್ಸು, ದ್ರವ್ಯ, ದೇಶ, ಕ್ರಿಯೆ – ಇವುಗಳ ಶುದ್ಧಿಯೇ ಆಚಾರವೆಂಬುದಾಗಿ ಸಮ್ಮತವು.)

  ನಮ್ಮ ದೇಹವು ಐದು ಜ್ಞಾನೇಂದ್ರೀಯಗಳು ಹಾಗೂ  ಐದು ಕರ್ಮೇಂದ್ರಿಯಗಳಿಗೆ ಆಶ್ರಯವಾಗಿ ದೇಹಿಗೆ ಉಪಕಾರವಾಗಿದೆ. ಶಬ್ದ ಮೊದಲಾದ ಐದು ವಿಷಯಗಳ ಗ್ರಹಣವಾಗಲಿ, ವಚನ, ಆದಾನ ಮುಂತಾದ ಕ್ರಿಯೆಯಾಗಲಿ ಇಲ್ಲದಿದ್ದರೆ ಜೀವಾತ್ಮನ ಪ್ರವೃತ್ತಿ-ನಿವೃತ್ತಿಗಳು ಉಂಟಾಗುವುದಿಲ್ಲ. ಹೀಗೆ ಆಯಾ ಇಂದ್ರಿಯಗಳಿಂದ ದೇಹವು ಉಪಕರಿಸಲ್ಪಡುತ್ತದೆ. ಅಂತಹ ದೇಹವು “ನಾನು ಸ್ಥೂಲನು, ನಾನು ಎತ್ತರದವನು, ನಾನು ಕಪ್ಪಾದವನು, ನಾನು ತರುಣನು, ನಾನು ರೋಗರಹಿತನು, ನಾನು ವಾಗ್ಮಿಯು”-ಎಂದು ಮುಂತಾದ ನಾನಾರೂಪವಾದ ಅಭಿಮಾನಗಳಿಗೆ ಆಸ್ಪದವಾಗಿದೆ. ಅಂತಹ ದೇಹದಲ್ಲಿ ದೇಹಿಯಾಗಿರುವ ಜೀವನಿಗೆ ಸಮಸ್ತವಾದ ಆಂತರಿಕ ಮತ್ತು ಬಾಹ್ಯವಾದ  ವ್ಯವಹಾರಗಳಿಗೆ ಮೂಲಕಾರಣವಾಗಿರುವುದು ಚಿತ್ತ-ಮನಸ್ಸು- ಅಹಂಕಾರ -ಬುದ್ಧಿ ಎಂದು ಕರೆಯಲ್ಪಡುವ ಅಂತಃಕರಣ ಚತುಷ್ಟಯವು. ಕಣ್ಣು ಮೊದಲಾದುವು ದೇಹಿಯಾದವನಿಗೆ ಬಾಹ್ಯ ವಿಷಯಗಳನ್ನು ಗ್ರಹಿಸಲು ಸಾಧನವಾಗಿರುವುದರಿಂದ ಬಹಿಃಕರಣಗಳೆನಿಸುವಂತೆಯೇ ಆತ್ಮನಿಗೆ ಅಂತರಂಗದ ವ್ಯವಹಾರಗಳಿಗೆ ಸಾಧನಗಳಾಗಿರುವುದರಿಂದ ಚಿತ್ತ, ಮನಸ್ಸು, ಅಹಂಕಾರ ಮತ್ತು ಬುದ್ಧಿಗಳು ಅಂತಃಕರಣಗಳೆನಿಸುತ್ತವೆ. ಚಿತ್ತವು ವಿಷಯಗಳ ಆಲೋಚನ ಕಾರ್ಯದಲ್ಲಿಯೂ ಮನಸ್ಸು ಸಂಕಲ್ಪ-ವಿಕಲ್ಪಗಳಲ್ಲಿಯೂ ಅಹಂಕಾರವು “ನಾನು, ನನ್ನದು”ಎಂಬ ಅಭಿಮಾನದಲ್ಲಿಯೂ ಬುದ್ಧಿಯು “ಇದು ಹೀಗೆಯೇ” ಎಂಬ ನಿಶ್ಚಯರೂಪವಾದ ಅಧ್ಯವಸಾಯದಲ್ಲಿಯೂ – ಹೀಗೆ ದೇಹಿಯ ಅಂತರಂಗ ಕ್ರಿಯೆಗಳಲ್ಲಿ ಕರಣಗಳಾಗಿವೆ. ಹಾಗೆಯೇ ದೇಹಿಯಾದವನು ದೇಹ ಮತ್ತು ಇಂದ್ರಿಯಗಳಿಂದ ಅನ್ನ-ನೀರು ರೂಪವಾದ ಮೊಸರು, ಜೇನುತುಪ್ಪ, ತುಪ್ಪ ಮುಂತಾದ ದ್ರವ್ಯ ಪದಾರ್ಥಗಳನ್ನು ಉಪಯೋಗಿಸುತ್ತಾನೆ. ಅನುಷ್ಠಾನ- ಭೋಜನ-ಶಯನ-ಕೂಡುವಿಕೆ ಮುಂತಾದ ಕ್ರಿಯೆಗಳಿಗೆ ಆಧಾರವಾಗಿರುವ ಮನೆ, ಮಠ ಮುಂತಾದ ದೇಶಭಾಗಗಳನ್ನೂ ಅಪೇಕ್ಷಿಸುತ್ತಾನೆ. ವಾಗಿಂದ್ರಿಯ, ಕೈ, ಕಾಲು-ಮುಂತಾದವುಗಳಿಂದ ಕ್ರಿಯಾಕಲಾಪಗಳನ್ನು ನೆರವೇರಿಸಿ ದೇಹಿಯು ಜೀವನಯಾತ್ರೆಯನ್ನು ನಿರ್ವಹಿಸುತ್ತಾನೆ. ಈ ಕರ್ಮಕಲಾಪಗಳೆಲ್ಲವೂ ಶುದ್ಧವಾಗಿಯೂ ಅಶುದ್ಧವಾಗಿಯೂ ಇರಬಲ್ಲವುಗಳಾಗಿವೆ. ಉಪನಿಷತ್ತಿನಲ್ಲಿ ಹೀಗೆ ಹೇಳಲಾಗಿದೆ:

“ಆದ ಕಾರಣ, ಘ್ರಾಣೇಂದ್ರಿಯದಿಂದ ಸುಗಂಧವುಳ್ಳದ್ದನ್ನೂ ದುರ್ಗಂಧವುಳ್ಳದ್ದನ್ನೂ- ಎರಡನ್ನೂ ಆಘ್ರಾಣಿಸುತ್ತಾನೆ. ಏಕೆಂದರೆ ಇದು ಪಾಪ (ದೋಷ)ದಿಂದ ಯುಕ್ತವಾಗಿದೆ. ವಾಗಿಂದ್ರಿಯದಿಂದ ಸತ್ಯ ಮತ್ತು ಅನೃತ-ಎರಡನ್ನೂ ನುಡಿಯುತ್ತಾನೆ. ಏಕೆಂದರೆ ಇದೂ ಪಾಪದಿಂದ ಯುಕ್ತವಾಗಿದೆ. ಕಣ್ಣಿನಿಂದ ನೋಡಬಹುದಾದುದು ಮತ್ತು ನೋಡಬಾರದುದು- ಎರಡನ್ನೂ ನೋಡುತ್ತಾನೆ. ಕಿವಿಯಿಂದ ಕೇಳಬಹುದಾದುದು ಮತ್ತು ಕೇಳಬಾರದುದು -ಎರಡನ್ನೂ ಕೇಳುತ್ತಾನೆ. ಮನಸ್ಸಿನಿಂದ ಸಂಕಲ್ಪಿಸಬಹುದಾದುದು ಮತ್ತು ಸಂಕಲ್ಪ ಮಾಡಬಾರದುದು -ಎರಡನ್ನೂ ಸಂಕಲ್ಪಿಸುತ್ತಾನೆ. ಇತ್ಯಾದಿ.”

ಅಂತಃಕರಣಸಹಿತವಾದ ಎಲ್ಲ ಕರ್ಮಜ್ಞಾನೇಂದ್ರಿಯಗಳೂ ಆಸುರವಾದ ವ್ಯಾಪಾರದಿಂದಾಗಿ (ದುಷ್ಟಕರ್ಮಾಚರಣೆಯಿಂದಾಗಿ) ಮತ್ತೆ ಮತ್ತೆ ಅಶುಚಿಯಾಗುತ್ತಲೇ ಇರುತ್ತವೆ. ಆದುದರಿಂದ ವಿದ್ವಾಂಸನೂ ವಿವೇಕಿಯೂ ಆದ ಪುರುಷನು ಅವುಗಳಿಗೆ ಶುದ್ದತೆಯನ್ನುಂಟುಮಾಡಬೇಕಾದುದು ಕರ್ತವ್ಯವಾಗುತ್ತದೆ. ಆದುದರಿಂದ ಪುರುಷನು ಸದಾ ಜಾಗರೂಕನಾಗಿದ್ದು ಇಂದ್ರಿಯ ಮನಸ್ಸುಗಳೆಲ್ಲವನ್ನೂ ಶುದ್ದಿಮಾಡುವ ಆಚಾರವನ್ನು ಪ್ರಮಾದವಿಲ್ಲದೆ ಪಾಲಿಸಬೇಕು. ಭಗವಾನ್ ವ್ಯಾಸರು “ಆಚಾರಪ್ರಭವೋ ಧರ್ಮಃ” ಎಂಬುದಾಗಿ ಆಚಾರದಿಂದ ಧರ್ಮವು ಉಂಟಾಗುತ್ತದೆಯೆಂದು ಹೇಳುತ್ತಾರೆ. ಆಚಾರದಿಂದ ಸಂಪಾದಿಸಿದ ಧರ್ಮವು “ಧರ್ಮೋ ರಕ್ಷತಿ ರಕ್ಷಿತಃ-(ರಕ್ಷಿತವಾದ ಧರ್ಮವು ರಕ್ಷಣೆಯನ್ನು ಮಾಡುತ್ತದೆ)” ಎಂಬ ನ್ಯಾಯಕ್ಕನುಸಾರವಾಗಿ ಆತ್ಮರಕ್ಷಣೆಗಾಗಿ ಸದಾ ರಕ್ಷಿಸಲ್ಪಡಬೇಕು. ಧರ್ಮವನ್ನು ನಾವು ಕಾಪಾಡದಿದ್ದರೆ ನಮ್ಮಿಂದಲೇ ಹತವಾದ ಧರ್ಮವು ನಮ್ಮನ್ನು ಅವಶ್ಯವಾಗಿ ಕೊಲ್ಲುವುದು. “ಮಾ ನೋ ಧರ್ಮೋ ಹತೋsವಧೀತ್”(ನಮ್ಮಿಂದ ಹತವಾಗಿ ಧರ್ಮವು ನಮ್ಮನ್ನು ನಾಶಮಾಡುವಂತಾಗಬಾರದು) ಎಂಬುದಾಗಿ ಈ ವಿಷಯವನ್ನೇ ಶಾಸ್ತ್ರವು ಜ್ಞಾಪಿಸುತ್ತದೆ.

ಅಂತೆಯೇ ಆಧ್ಯಾತ್ಮಿಕ, ಆಧಿದೈವಿಕ ಮತ್ತು ಆಧಿಭೌತಿಕವೆಂಬ ಮೂರು ಕ್ಷೇತ್ರಗಳಲ್ಲಿ ಸೇರಿಕೊಂಡು ದೇವತೆಗಳ ಸಮೇತವಾಗಿ ಪೃಥಿವಿಯಿಂದಾರಂಭಿಸಿ ಪರಮಾತ್ಮಪರ್ಯಂತವಾಗಿ ಸಮಸ್ತ ತತ್ತ್ವಗಳಲ್ಲೂ ಜೀವಾತ್ಮನಿಗೆ ವಿಶಿಷ್ಟವಾದ ಆಂತರಂಗಿಕ ಸಂಚಾರವೂ ಇರುತ್ತದೆ. ಆ ರೀತಿಯ ಸಂಚಾರವೇ ತೀರ್ಥಕ್ಷೇತ್ರ ಯಾತ್ರಾರೂಪವಾಗಿ ಆಗುತ್ತದೆ. “ಯಾತ್ರಯಾ ಶುದ್ದಿಮಾಪ್ನೋತಿ-(ಯಾತ್ರೆಯಿಂದ ಪುರುಷನು ಶುದ್ಧಿಹೊಂದುತ್ತಾನೆ)” ಎಂಬುದಾಗಿ ಈ ವಿಷಯವು ಭಾರತಭೂಮಿಯಲ್ಲಿ ಎಲ್ಲರಿಗೂ ತಿಳಿದುದೇ ಆಗಿದೆ. ಯಾನ ಅಂದರೆ ಪ್ರಯಾಣ ಮತ್ತು ತ್ರಾಣ ಅಂದರೆ ರಕ್ಷಣೆ ಇವೆರಡೂ ಆಗುವುದರಿಂದ ಯಾತ್ರೆಯೆನಿಸುತ್ತದೆ. ಅಂದರೆ ಪ್ರಯಾಣ ಮಾಡುವವನನ್ನು ರಕ್ಷಿಸುವುದರಿಂದ ಯಾತ್ರಾ ಎಂಬುದಾಗಿ ಯಾತ್ರಾ ಶಬ್ದದ ನಿರ್ವಚನವನ್ನು ತಿಳಿಸುತ್ತಾರೆ. “ದೇಹೋ ದೇವಾಲಯಃ ಪ್ರೋಕ್ತಃ, ದೇಹೇ ದೇವೋ ನಿರಂಜನಃ-(ದೇಹವೇ ದೇವಾಲಯವೆಂದು ಉಕ್ತವಾಗಿದೆ; ಈ ದೇಹದಲ್ಲಿ ನಿರಂಜನನಾದ ದೇವನು ಇದ್ದಾನೆ)” ಎಂದು ಹೇಳುವಂತೆ ದೇವಾಲಯಗಳಿಗೂ ತೀರ್ಥಕ್ಷೇತ್ರಗಳಿಗೂ ಈ ದೇಹವು ನೆಲೆಯಾಗಿದೆ. ಇದೇ ರೀತಿಯಾಗಿ-

   “ಮಹಾಮುನಿಯೇ! ಬಾಹ್ಯವಾದ ತೀರ್ಥಕ್ಕಿಂತಲೂ ಅಂತಸ್ತೀರ್ಥವು ಶ್ರೇಷ್ಠವಾದುದು. ಆತ್ಮತೀರ್ಥವೇ ಮಹಾತೀರ್ಥವು. ಇತರ ತೀರ್ಥವೆಲ್ಲವೂ ನಿರರ್ಥಕವಾದುದು. ಆತ್ಮತೀರ್ಥವನ್ನು ಬಿಟ್ಟು ಬಾಹ್ಯ ತೀರ್ಥಗಳಿಗೆ ಯಾತ್ರೆ ಮಾಡುವವನು ಕೈಯಲ್ಲೇ ಇರುವ ಮಹಾರತ್ನವನ್ನು ಬಿಟ್ಟು ಗಾಜನ್ನು ಹುಡುಕಿಕೊಂಡು ಹೊರಟವನಂತಾಗುತ್ತಾನೆ. ಶ್ರೀಪರ್ವತವು ಶಿರಸ್ಸಿನ ಸ್ಥಾನದಲ್ಲಿದೆ. ಕೇದಾರವು ಲಲಾಟ ಪ್ರದೇಶದಲ್ಲಿದೆ. ವಾರಾಣಸೀ ಮಹಾಕ್ಷೇತ್ರವು ಹುಬ್ಬುಗಳು ಮತ್ತು ಮೂಗು ಸೇರುವ ಸಂಗಮ ಸ್ಥಾನದಲ್ಲಿ ಇದೆ. ಕುರುಕ್ಷೇತ್ರವು ಕುಚ ಸ್ಥಾನದಲ್ಲಿ ಇದೆ. ಪ್ರಯಾಗವು ಹೃದಯಕಮಲದಲ್ಲಿ ಇದೆ. ಚಿದಂಬರವು ಹೃದಯ ಮಧ್ಯದಲ್ಲಿ ಇದೆ. ಮೂಲಾಧಾರ ಸ್ಥಾನದಲ್ಲಿ ಕಮಲಾಲಯವು (ಸಮುದ್ರತೀರ್ಥವು) ಇದೆ”ಎಂದು ಮುಂತಾಗಿ ಅಂತರ್ಯಾತ್ರಿಕರು ವರ್ಣಿಸುತ್ತಾರೆ. ಮತ್ತು-
“ಮೂಲಾಧಾರದ ಪಶ್ಚಿಮ ಭಾಗದಲ್ಲಿ ತ್ರಿವೇಣೀ ಸಂಗಮವು ಆಗುವುದು. ಅಲ್ಲಿ ಸ್ನಾನ ಮಾಡಿ ಮತ್ತು ತೀರ್ಥಪ್ರಾಶನ ಮಾಡಿ ನರನು ಪಾಪದಿಂದ ಮುಕ್ತನಾಗುತ್ತಾನೆ”ಎಂಬುದಾಗಿ ಅಂತರ್ಯಾತ್ರೆಯಿಂದ ಪಾಪವಿಮೋಕ ರೂಪವಾದ ಪವಿತ್ರತೆಯನ್ನೂ ತಿಳಿಸುತ್ತಾರೆ. ಅಂತಹ ಅಂತಃಸಂಚಾರರೂಪವಾದ ಆಚಾರವು ಶುದ್ಧಿಯನ್ನು ಹೊಂದಲು ಆವಶ್ಯಕವೆಂಬುದಾಗಿ ಆಗಮಗಳು ಪ್ರೇರಿಸುತ್ತವೆ. “ಬ್ರಹ್ಮಸ್ವಯಂಭ್ವಭ್ಯಾನರ್ಷತ್”ಎಂಬುದಾಗಿ ವೇದದಲ್ಲೇ ಪ್ರತಿಪಾದಿತವಾಗಿರುವ ರೀತಿಯಂತೆ ಆದ್ಯರಾದ ಋಷಿಗಳ ಸತ್ತ್ವಮಯವಾದ ಹೃದಯದಲ್ಲಿ ಈ  ವೇದಗಳು ಅವಿರ್ಭೂತವಾದವು. ಇಂತಹ ವೇದಗಳು ಚೆನ್ನಾಗಿ ಅಧ್ಯಯನ ಮಾಡುವವರ ಸಮಗ್ರ ದೇಹವನ್ನೂ ವ್ಯಾಪಿಸಿ ಬ್ರಹ್ಮಮಯವನ್ನಾಗಿ ಮಾಡುತ್ತವೆ. ಅದಕ್ಕಾಗಿಯೇ ಬ್ರಹ್ಮಚರ್ಯವನ್ನು ಆಶ್ರಯಿಸಬೇಕು. ಸ್ವಯಂ ಬ್ರಹ್ಮದಲ್ಲಿ ಸಂಚರಿಸುವವನಾಗಿ ತನ್ನ ಸಮಸ್ತ ಅಂಗೋಪಾಂಗಗಳಲ್ಲಿಯೂ ಬ್ರಹ್ಮದ ಸಂಚಾರಕ್ಕೆ ಅವಕಾಶವನ್ನುಂಟುಮಾಡಿಕೊಡುವವನೇ ಬ್ರಹ್ಮಚಾರಿಯಾಗುತ್ತಾನೆ. ಬ್ರಹ್ಮಚರ್ಯದಿಂದ ಪವಿತ್ರಾತ್ಮರಾದವರು ಅನೇಕ ವಿಧವಾದ ಸುಖಗಳನ್ನು ಅನುಭವಿಸಿ “ಬಹವೋ ಜ್ಞಾನತಪಸಾ ಪೂತಾಃ ಮದ್ಭಾವಮಾಗತಾಃ” ಎಂಬ ಭಗವಂತನ ವಚನದಂತೆ ಬ್ರಹ್ಮಭಾವವನ್ನು ಹೊಂದಿದವರಾಗಿ ಪರಮಪುರುಷನ ಅಂತಃಸೌಖ್ಯದೊಡನೆ ಸರ್ವಾತ್ಮಭಾವವನ್ನು ಹೊಂದಿದವರಾಗಿ ಆಗುತ್ತಾರೆ.

                                 ||ಇತಿಶಮ್||

(ಮೂಲ ಸಂಸ್ಕೃತ ಲೇಖನದ ಕನ್ನಡ ಅನುವಾದ : ವಿದ್ವಾನ್ ಶ್ರೀ ಶೇಷಾಚಲ ಶರ್ಮಾ)

Facebook Comments Box