ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಮನೆ-ಮನೆಗೆ ಬಂದ ಶಂಕರಾಚಾರ್ಯರೂಪ!

ಮನೆ-ಮನೆಗೆ ಬಂದ ಶಂಕರಾಚಾರ್ಯರೂಪ!

ಜ್ಞಾನಸುಮ 15:

ಆದಿ ಜಗದ್ಗುರು ಶ್ರೀ ಶಂಕರಾಚಾರ್ಯರ ತತ್ತ್ವಗಳು

ವಿದ್ವಾನ್ ತಾಳ್ತಜೆ ಕೃಷ್ಣ ಭಟ್ಟ

ಈ ಲೇಖನದ ಮುಖ್ಯ ವಿಷಯಗಳು ಆಚಾರ್ಯರ ತತ್ತ್ವಗಳನ್ನು ವಿವರಿಸುವುದಾಗಿದೆ. ಅದ್ವೈತಸಿದ್ದಾಂತವೇ ಶಂಕರಾಚಾರ್ಯರ ಪ್ರತಿಪಾದಿತ ತತ್ತ್ವವಾಗಿದೆ. ಇದನ್ನು ತಿಳಿಯುವಂತೆ ವಿವರಿಸುವುದು ಅಷ್ಟು ಸುಲಭವೇನೂ ಅಲ್ಲ. ಅವರ ಸಿದ್ದಾಂತದ ಮೂಲ ಮಂತ್ರವು ಪ್ರಸಿದ್ದವಾಗಿದೆ-

“ಬ್ರಹ್ಮ ಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಂ”

ಬ್ರಹ್ಮವೊಂದೇ ಸತ್ಯವಾದದ್ದು, ಜಗತ್ತೆಂಬುದು ಮಿಥ್ಯವಾದದ್ದು, ಜೀವನು ಬ್ರಹ್ಮನೇ, ಜೀವನು ಬ್ರಹ್ಮನಿಂದ ಬೇರೆಯಲ್ಲ. ಅದ್ವೈತ ವೇದಾಂತದ ಸಾರವು ಈ ನಾಲ್ಕು ಸಂಗತಿಗಳಲ್ಲಿ ಅಡಗಿದೆ. ಆತ್ಮನ ಸಿದ್ಧತ್ವ-ಪರಮಾರ್ಥರೂಪೀ ಬ್ರಹ್ಮನ ಏಕತೆ, ಜಗತ್ತಿನ ಅನೇಕ ತೆರನಾದ ಮಾಯಿಕತೆ, ಇವುಗಳ ವಿವರವೇ ಅದ್ವೈತದ ಮೂಲವಾಗಿದೆ. ಜಗತ್ತು ಅನುಭವಗಮ್ಯ. ಅನುಭವದ ಆಧಾರದಲ್ಲಿ ಜಗತ್ತಿನ ವ್ಯವಹಾರಗಳು ಪ್ರವಹಿಸುತ್ತದೆ. ಆತ್ಮನ ಸತ್ಯತ್ವವು ಅನುಭವದ  ಆಧಾರದ ಮೇಲೆ ಇರುತ್ತದೆ. ಜ್ಞಾತರೂಪದಲ್ಲಿ ಆತ್ಮನ ಉಪಲಬ್ಧಿಯನ್ನು ತೋರಿಸಲಿಕ್ಕಾಗುವುದಿಲ್ಲ. ವಿಷಯದ ರೂಪದಿಂದ ಇದನ್ನು ತಿಳಿಸಲಾಗುತ್ತದೆ. ಪ್ರತಿಯೊಂದು ಅನುಭವ ಪ್ರಕ್ರಿಯೆಗಳಲ್ಲಿಯೂ ಅನುಭವ ಕರ್ತೃವಿಗೆ ತನ್ನ ಅನುಭವ ಅವಶ್ಯವಾಗಿ ಆಗುತ್ತದೆ. ಆತ್ಮನು ಪ್ರಮಾಣ ಇತ್ಯಾದಿ ವ್ಯವಹಾರಗಳಿಗೆ ಆಶ್ರಯನು. ಈ ವ್ಯವಹಾರಗಳು ಆಗಂತುಕಗಳು. ಆತ್ಮನು ಮೊದಲೇ ಇದ್ದ ವಸ್ತು. ಆಗತವಸ್ತುಗಳಲ್ಲಿ ಬದಲಾವಣೆ ಸಾಧ್ಯವಲ್ಲದೆ, ಮೂಲವಸ್ತುವಿನಲ್ಲಿ ಅಲ್ಲ. ಉಷ್ಣತ್ವವನ್ನು ಅಗ್ನಿಯ ಮೂಲಕ ನಿರಾಕರಿಸಲಾಗುವುದಿಲ್ಲ. ಜ್ಞಾತವ್ಯದಲ್ಲಿ ಅನ್ಯಥಾ ಭಾವವು ಸಾಧ್ಯವಲ್ಲದೆ ಜ್ಞಾತನಲ್ಲಿ ಅಲ್ಲ. ‘ಈ ಸಮಯವನ್ನು ನಾನು ತಿಳಿದಿರುತ್ತೇನೆ. (ವರ್ತಮಾನ) ಅತೀತವನ್ನು ನಾನು ತಿಳಿದಿದ್ದೆ. ಮತ್ತು ಆಗಾಮಿ ವಸ್ತುವನ್ನು ನಾನು ತಿಳಿಯುತ್ತೇನೆ. ಈ ಅನುಭವ ಪರಂಪರೆಗಳಲ್ಲಿ ಜ್ಞಾತವಾಗುವ ವಸ್ತುವಿನ ಪರಿವರ್ತನೆಯೇ ನಮಗೆ ಗೋಚರವಾಗುತ್ತದೆ. ಜ್ಞಾತೃವಿನ ಸ್ವರೂಪವು ಎಂದೂ ಬದಲಾಗುವುದಿಲ್ಲ. ಏಕೆಂದರೆ ಅವನು ಸರ್ವದಾ ತನ್ನ ರೂಪದಲ್ಲಿಯೇ ನಿರೂಪಿತನಾಗಿರುತ್ತಾನೆ. ಆತ್ಮನ ಅಸ್ತಿತ್ವ ವಿಷಯದಲ್ಲಿ ಯಾರಿಗೂ ಸಂದೇಹವಿರುವುದಿಲ್ಲ. ಆತ್ಮನ ಅಸ್ತಿತ್ವವು ಪ್ರಸಿದ್ದವಿಲ್ಲದಿದ್ದಲ್ಲಿ ಸರ್ವರೂ ತಮ್ಮ ಅಸ್ತಿತ್ವದಲ್ಲಿ ನಂಬಿಕೆ ತಾಳುತ್ತಿರಲಿಲ್ಲ. ಆದರೆ ಲೋಕದಲ್ಲಿ ಹೀಗೆ ಆಗಲ್ಲಿಲ್ಲ ಆದ್ದರಿಂದ ಆತ್ಮನ ಅಸ್ತಿತ್ವವು ಸ್ಪಷ್ಟವಾಗಿ ಪ್ರಾಮಾಣಿಕವಾಗುತ್ತದೆ. ಈ ಆತ್ಮಾಸ್ತಿತ್ವದ ವಿಷಯದಲ್ಲಿ ಯಾರೂ ಸಂದೇಹಪಡಲು ಕಾರಣವಿಲ್ಲ. ಇದುವೇ ಉಪನಿಷತ್ತುಗಳು ಹೇಳಿದ ತತ್ವವಾಗಿದೆ. ಸೂರ್ಯನಿಂದ ಜಗತ್ತಿಗೆ ಬೆಳಕು ಸಿಗುತ್ತದೆ. ಆದರೆ ಆ ಸೂರ್ಯನಿಗೆ ಆ ಬೆಳಕನ್ನು ಕೊಟ್ಟವರಾರು? ಹೀಗೆ ಕಾರಣಗಳಿಂದ ಪ್ರಮಾಣಸಿದ್ದಿಗೆ ಕಾರಣಭೂತನಾದ ಆತ್ಮನು ಯಾವ ಪ್ರಮಾಣದ ಮೂಲಕ ಸಿದ್ದನಾಗುತ್ತಾನೆ. ಆತ್ಮನ ಸತ್ಯತ್ವವು ಸ್ವಯಂಸಿದ್ದವಾದದ್ದು- ‘ಸರ್ವೋ ಹಿ ಆತ್ಮಾಸ್ತಿತ್ವಂ ಪ್ರತ್ಯೇತಿ ನ ನಾಹಮಸ್ಮೀತಿ=(ಶಂ.ಭಾ)  ಅಂತೂ ವೇದಾಂತದ ನಿರ್ದುಷ್ಟ ಸಿದ್ಧಾಂತದಂತೆ ಜಗತ್ತಿನಲ್ಲಿ ತ್ರಿಕಾಲಗಳಲ್ಲಿಯೂ ಯಾವುದೇ ವಸ್ತುವು ಆತ್ಮನಿಂದ ಬೇರೆಯಾಗಿ ಇರಲು ಸಾಧ್ಯವಿಲ್ಲ. ನಾಮರೂಪವಾದ ಪದಾರ್ಥಗಳು ವಿಭಿನ್ನವಾಗಿ ತೋರಿದರು ಅವುಗಳ ಮೂಲರೂಪವಾದ ಆತ್ಮವು ಒಂದೇ ಇರುತ್ತದೆ. ಆತ್ಮವು ಮೂಲರೂಪದಲ್ಲಿಯೇ ಇದ್ದು ಅದರ ಬಾಹ್ಯ ರೂಪವು ವಿಕಾರವನ್ನು ತಾಳುತ್ತದೆ. ಕರ್ಮಾಕರ್ಮರೂಪಗಳು  ಅದೇ ಆಗಿವೆ. ಆದ್ದರಿಂದ ಈ ಜಗತ್ತಿನಲ್ಲಿ ಕೇವಲ ಒಂದೇ ಸತ್ತೆ ಲಕ್ಷಿತವೆಂದು ಶ್ರೀ ಶಂಕರರ ಮತವಾಗಿದೆ. ಅದು ಅಖಂಡವಾಗಿದೆ. ಅದನ್ನು ತುಂಡು ತುಂಡು ಮಾಡಲಾಗುವುದಿಲ್ಲ. ವಿಷಯ ಮತ್ತು ವಿಷಯಭೇದಗಳು ವ್ಯವಹಾರಕ್ಕಾಗಿ ಕಲ್ಪಿತವಾದವುಗಳು. ಒಟ್ಟಾರೆ ಹೇಳುವುದಾದರೆ ಜಗತ್ತಿನ ಆಂತರ್ಯದಲ್ಲಿ ನಿರ್ವಿಕಾರವಾದ ಏಕಮಾತ್ರಸತ್ತೆಯು ಅಖಂಡವಾಗಿದೆ. ಈ ಸದ್ವಸ್ತುವೇ ನಾನಾ ರೂಪಗಳಿಂದ ನಮ್ಮ ದೃಷ್ಟಿಗೆ ಕಾಣುತ್ತವೆ. ಯಾವುದು ಘಟವೆಂದು ಕರೆಯಲ್ಪಡುತ್ತದೆ ಅದು ನಿಜವಾಗಿ ಈ ಸತ್ಯದ ಉನ್ಮೇಷ. ಅದರಿಂದ ಸ್ವತಂತ್ರವಾದ ವಸ್ತುವೇ ಇರುವುದಿಲ್ಲ. ಇದೇ ಶಂಕರರ ಅದ್ವೈತ ವೇದಾಂತದ ತತ್ವ.

ಬ್ರಹ್ಮ
ಬ್ರಹ್ಮವು ನಿರ್ವಿಕಲ್ಪ, ನಿರುಪಾಧಿಕ ಮತ್ತು ನಿರ್ವಿಕಾರವಾದ ಸತ್ತೆಯಾಗಿದೆ. ಉಪನಿಷತ್ತು ಬ್ರಹ್ಮವನ್ನು ನಿರ್ಗುಣ ಮತ್ತು ಸಗುಣವೆಂದು ಎರಡು ರೂಪಗಳಲ್ಲಿ ವರ್ಣಿಸಿದೆ. ಆಚಾರ್ಯರ ಅಭಿಪ್ರಾಯದಲ್ಲಿ ನಿರ್ಗುಣ ಬ್ರಹ್ಮವೇ ಉಪನಿಷತ್ತುಗಳ ಪ್ರತಿಪಾದ್ಯ ವಿಷಯ. ಪಾರಮಾರ್ಥಿಕವಾದದ್ದು ನಿರ್ಗುಣವೇ. ಬ್ರಹ್ಮವು ಜಗತ್ತಿಗೆ ಸಮಾನವಾಗಿ ಮಾಯಾವಿಶಿಷ್ಟವಾಗಿ ಮಾಯಿಕ ತತ್ವವನ್ನು ಧಾರಣೆ ಮಾಡುತ್ತದೆ. ಆಚಾರ್ಯರು ಬ್ರಹ್ಮನ ವಾಸ್ತವರೂಪದ ನಿರ್ಣಯವನ್ನು ಮಾಡಲು ಎರಡು ರೂಪದ ಲಕ್ಷಣಗಳನ್ನು ಸ್ವೀಕರಿಸಿದ್ದಾರೆ. ಸ್ವರೂಪ ಲಕ್ಷಣ, ತಟಸ್ಥ ಲಕ್ಷಣ – ಪದಾರ್ಥದ ಸತ್ಯವಾದ ತಾತ್ವಿಕವಾದ ಪರಿಚಯವನ್ನು ಕೊಡುವುದು ಸ್ವರೂಪ ಲಕ್ಷಣ. ಕೆಲವು ಕಾಲ ಮಾತ್ರ ಪ್ರಾಪ್ತವಾಗುವ ಆಗಂತುಕ ಗುಣಗಳನ್ನು ನಿರ್ದೇಶಿಸುವುದು ತಟಸ್ಥ ಲಕ್ಷಣ. ಲೌಕಿಕ ಉದಾಹರಣೆಯಾಗಿ ಹೇಳುವುದಾದರೆ -ಒಬ್ಬ ಬ್ರಾಹ್ಮಣನು ನಾಟಕದಲ್ಲಿ ಕ್ಷತ್ರಿಯರಾಜನಾಗಿ ಶತ್ರುಗಳನ್ನು ಜಯಿಸಿ, ವಿಜಯ ಗಳಿಸಿ, ಪ್ರಜೆಗಳಿಗೆ ಕ್ಷೇಮವನ್ನುಂಟುಮಾಡಿ ಅವರ ಪ್ರೀತಿಯನ್ನು ಗಳಿಸುತ್ತಾನೆ. ಆದರೆ   ಬ್ರಾಹ್ಮಣನ ನಿಜಸ್ವರೂಪವನ್ನು ಹೇಳುವಲ್ಲಿ ಅವನಲ್ಲಿ ರಾಜನ ಒಳ್ಳೆಯ ಗುಣಗಳನ್ನು ಆರೋಪಿಸಲಾಗುವುದಿಲ್ಲ. ಅವನ ರಾಜತ್ವವು ನಾಟಕದಲ್ಲಿ ಮಾತ್ರವಾದುದರಿಂದ ಅವನನ್ನು ಕ್ಷತ್ರಿಯ ರಾಜನೆಂದು ತಿಳಿಯುವುದು ತಟಸ್ಥ ಲಕ್ಷಣವಾಗುತ್ತದೆ.

ಬ್ರಾಹ್ಮಣ ಎಂದು ತಿಳಿಯುವುದು ಸ್ವರೂಪ ಲಕ್ಷಣವಾಗುತ್ತದೆ. ಬ್ರಹ್ಮನು ಜಗತ್ತಿನ ಉತ್ಪತ್ತಿ, ಸ್ಥಿತಿ ಮತ್ತು ಲಯಗಳಿಗೆ ಕಾರಣನು ಎಂದು ತಿಳಿಯುವುದು. ಆಗಂತುಕ ಗುಣಗಳ ಸಮಾವೇಶದಿಂದಲಾಗಿ ಆಗಿದೆ. ಬ್ರಹ್ಮನಿಗೆ ಇದು ತಟಸ್ಥ ಲಕ್ಷಣವೆನಿಸುತ್ತದೆ. ಸತ್ಯಂ ಜ್ಞಾನಂ ಅನಂತಂ ಬ್ರಹ್ಮ (ತೈತ್ತ.2.1.1) ಮತ್ತು ವಿಜ್ಞಾನಮಾನಂದಂ ಬ್ರಹ್ಮ (ಬೃಹ.). ಇವು ಬ್ರಹ್ಮನ ಸ್ವರೂಪಪ್ರತಿಪಾದಕಗಳಾದ ಲಕ್ಷಣ. ಆಚಾರ್ಯರು ಇಲ್ಲಿ ಬಹಳ ಮಾರ್ಮಿಕವಾಗಿ ವಿವೇಚಿಸಿದ್ದಾರೆ. ಸತ್ಯ ಜ್ಞಾನ ಮತ್ತು ಅನಂತ ಇವು ಒಂದೇ ವಿಭಕ್ತಿಯಲ್ಲಿರುವುದರಿಂದ ಇವು ಬ್ರಹ್ಮ ಶಬ್ದದ   ವಿಶೇಷಣಗಳೆಂದು ಪ್ರತೀತವಾಗುತ್ತದೆ. ಬ್ರಹ್ಮ ವಿಶೇಷ್ಯ ಮತ್ತು ಸತ್ಯಾದಿಗಳು ವಿಶೇಷಣಗಳು. ಏಕಜಾತೀಯವಾದ ಅನೇಕ ವಿಶೇಷಣಗಳಿಂದ ಯುಕ್ತವಾದ ಅನೇಕ ದ್ರವ್ಯಗಳು ಇದ್ದಾಗಲೇ ವಿಶೇಷಣ ಸಾರ್ಥಕ್ಯವಿರುವುದು. ಬ್ರಹ್ಮನು ಏಕಮಾತ್ರ ಅದ್ವಿತೀಯನಾದುದರಿಂದ ಈ ವಿಶೇಷಣಗಳು ಹೊಂದಿಕೆಯಾಗವು. ಆಚಾರ್ಯರ ಅಭಿಪ್ರಾಯದಂತೆ ಇವು ಲಕ್ಷಣಾರ್ಥಗಳಾಗಿವೆ. ವಿಶೇಷಣ ಮತ್ತು ಲಕ್ಷಣಗಳಲ್ಲಿ ವ್ಯತ್ಯಾಸವಿದೆ.   ವಿಶೇಷಣವು ವಿಶೇಷ್ಯವನ್ನು ತನ್ನ ಸಜಾತೀಯವಾದ ಪದಾರ್ಥಗಳಿಂದ ಬೇರೆ ಮಾಡುತ್ತದೆ. ಆದರೆ ಲಕ್ಷಣವು ಅದನ್ನು ಎಲ್ಲದರಿಂದಲೂ ಬೇರೆ ಮಾಡುತ್ತದೆ. ಬ್ರಹ್ಮನು ಒಂದೇ ಆಗಿರುವುದರಿಂದ ಸತ್ಯಂ ಜ್ಞಾನಂ ಇವುಗಳು ಬ್ರಹ್ಮನ ಲಕ್ಷಣಗಳಾಗುವವೇ ಹೊರತು ವಿಶೇಷಣಗಳಾಗುವುದಿಲ್ಲ. ಸತ್ಯ ಶಬ್ಧ ಅರ್ಥವು ತನ್ನ ನಿಶ್ಚಿತರೂಪದಿಂದ ಎಂದೂ ಬದಲಾಗುವುದಿಲ್ಲ. ಜ್ಞಾನವೆಂದರೆ ತಿಳುವಳಿಕೆ. ಯಾವ ವಸ್ತುವು ಬೇರೆ ಯಾವುದರಿಂದಲೂ ವಿಭಕ್ತವಾಗುವುದಿಲ್ಲವೋ ಅದು ಅನಂತ. ಬ್ರಹ್ಮನನ್ನು ಜ್ಞಾನದ ಕರ್ತಾ ಎಂದು ಅಂಗೀಕರಿಸಿದರೆ ಅವನನ್ನು ಜ್ಞೇಯ ಮತ್ತು ಜ್ಞಾನ ಎಂದು ವಿಭಾಗಿಸಿ ಹೇಳಬೇಕಾಗುತ್ತದೆ. ಆದ್ದರಿಂದ ಬ್ರಹ್ಮವು ಜ್ಞಾನವೇ, ಜ್ಞಾನದ ಕರ್ತಾ ಅಲ್ಲ. ಬ್ರಹ್ಮನು ಜಗತ್ತಿಗೆ ಕಾರಣನು ಮತ್ತು ಪದಾರ್ಥಾಂತರಗಳಿಂದ ಅವಿಭಕ್ತನಾಗಿದ್ದಾನೆ. ಸತ್, ಚಿತ್, ಆನಂದಸ್ವರೂಪಿಯಾಗಿದ್ದಾನೆ. ಇದೇ ಬ್ರಹ್ಮನ ಸ್ವರೂಪಲಕ್ಷಣ. ಆದರೆ ಮಾಯೆಯಿಂದ ಆವೃತನಾದರೆ ಸಗುಣಸ್ವರೂಪವನ್ನು ತಾಳುತ್ತಾನೆ. ಈ ಜಗತ್ತಿನ ಸೃಷ್ಟಿ, ಸ್ಥಿತಿ, ಲಯಗಳಿಗೆ ಕಾರಣನಾಗಿ ಅಪರಬ್ರಹ್ಮ ಇಲ್ಲವೆ ಈಶ್ವರನೆಂದು ಕರೆಯಲ್ಪಡುತ್ತಾನೆ.

ಶಂಕರಾಚಾರ್ಯರ ಅಭಿಪ್ರಾಯದಲ್ಲಿ ಬ್ರಹ್ಮನು ಸಜಾತೀಯ, ವಿಜಾತೀಯ ಮತ್ತು ಸ್ವಗತ ಎಂಬ ಮೂರು ಭೇದಗಳೂ ಇಲ್ಲದವನಾಗಿದ್ದಾನೆ. ನಿರ್ವಿಶೇಷ ನಿರ್ಲಕ್ಷಣವಾದ ಬ್ರಹ್ಮನಿಂದ ಸಲಕ್ಷಣರೂಪದ ಜಗತ್ತಿನ ಉತ್ಪತ್ತಿ ಏಕಾಯಿತು? ಏಕಮಾತ್ರನಾದ ಬ್ರಹ್ಮನಿಂದ ನಾನಾತ್ಮಕವಾದ ಜಗತ್ತು ಹೇಗಾಯಿತು? ಈ ಪ್ರಶ್ನೆಗಳ ಯಥಾರ್ಥ ಉತ್ತರಕ್ಕಾಗಿ ಮಾಯೆಯ ಸ್ವರೂಪದ ತಿಳುವಳಿಕೆಯನ್ನು ಪಡೆಯಬೇಕು.

ಮಾಯೆ
ಶಂಕರಾಚಾರ್ಯರು ಮಾಯಾ ಮತ್ತು ಅವಿದ್ಯಾ ಶಬ್ದಗಳನ್ನು ಸಮಾನವಾದ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಪರಮೇಶ್ವರನ ಬೀಜಶಕ್ತಿಯ ಹೆಸರು ಮಾಯಾ ಎಂದು. ಮಾಯಾರಹಿತನಾದಾಗ ಪರಮೇಶ್ವರನಲ್ಲಿ ಪ್ರವೃತ್ತಿಯುಂಟಾಗುವುದಿಲ್ಲ. ಆಗ ಸೃಷ್ಟಿಯನ್ನು ಮಾಡುವುದಿಲ್ಲ. ಈ ಅವಿದ್ಯಾತ್ಮಕವಾದ ಬೀಜಶಕ್ತಿಯನ್ನೇ ‘ಅವ್ಯಕ್ತ’ವೆಂದು ಕರೆಯಲಾಗಿದೆ. ಇದು ಪರಮೇಶ್ವರನಲ್ಲಿ ಆಶ್ರಿತವಾಗಿರುವ ಮಹಾಸುಪ್ತಿರೂಪಿಣಿಯಾಗಿದೆ. ಅಗ್ನಿಯಿಂದ ಬೇರೆಯಾಗದ ದಾಹಶಕ್ತಿಗೆ ಅನುರೂಪವಾಗಿ ಮಾಯೆಯು ಬ್ರಹ್ಮನ ಅನ್ವರ್ಥಭೂತವಾದ ಶಕ್ತಿ. ತ್ರಿಗುಣಾತ್ಮಕವಾದ ಮಾಯೆಯು ಜ್ಞಾನವಿರೋಧಿಯಾದ ಭಾವರೂಪವಾಗಿದೆ. ಮಾಯೆಯು ಸದ್ ರೂಪ ಅಸದ್ ರೂಪವೆರಡನ್ನೂ ಮೀರಿದೆ. ಅದನ್ನು ವರ್ಣಿಸಲು ಸಾಧ್ಯವಿಲ್ಲದುದರಿಂದ ಅನಿರ್ವಚನೀಯವೆನ್ನುತ್ತಾರೆ. ಶಂಕರಾಚಾರ್ಯರು ಮಾಯೆಯ ಕುರಿತು – “ಮಾಯೆಯು ಪರಮಾತ್ಮನ ಅವ್ಯಕ್ತ ಶಕ್ತಿ. ಅದಕ್ಕೆ ಆದಿಯಿಲ್ಲ. ಗುಣತ್ರಯದಿಂದ ಅವಿದ್ಯೆ. ಅವರ ಕಾರ್ಯದಿಂದ ಅದು ತಿಳಿಯಲ್ಪಡುತ್ತದೆ. ಅದು ಜಗತ್ತನ್ನು ಸೃಷ್ಟಿಸುತ್ತದೆ.

ಮಾಯೆಗೆ ಎರಡು ಶಕ್ತಿಗಳಿವೆ. ಆವರಣ ಮತ್ತು ವಿಕ್ಷೇಪ. ಇದರಿಂದ ಬ್ರಹ್ಮನ ಅಮೃತವಾದ ವಾಸ್ತವರೂಪವು ಅದರಲ್ಲಿ ಅವಸ್ಥಾರೂಪವಾದ ಜಗತ್ತಿನ ಪ್ರತೀತಿಯು ಉದಯವಾಗುತ್ತದೆ. ಲೌಕಿಕ ಭ್ರಾಂತಿಗಳಲ್ಲಿಯೂ ಪ್ರತಿಯೊಬ್ಬ ವಿಚಾರಶೀಲಪುರುಷನಿಗೂ ಈ ಎರಡು ಶಕ್ತಿಗಳ ಅನುಭವವಾಗುತ್ತದೆ. ಅಧಿಷ್ಟಾನದ ಸತ್ಯಸ್ವರೂಪವು ಆವೃತವಾಗದಿದ್ದರೆ ಭ್ರಾಂತಿಯ ಉದಯವಾಗುವುದಿಲ್ಲ. ಭ್ರಮೋತ್ಪಾದಕವಾದ ಮಾಯೆಯೇ ಇದಕ್ಕೆ ಕಾರಣ. ಒಂದು ಸಣ್ಣ ವಸ್ತುವು ದರ್ಶಕನ ಕಣ್ಣುಗಳಿಗೆ ಅಡ್ಡವಾದರೆ, ಅನೇಕ ಯೋಜನ ವಿಸ್ತಾರವಾದ ಆ ದಿವ್ಯ ಮಂಡಲವನ್ನೂ ಮರೆ ಮಾಡುವುದೋ ಹಾಗೆ ಅಜ್ಞಾನವು ಅನುಭವ ಕರ್ತೃಗಳ ಬುದ್ಧಿಯನ್ನು ಆವರಿಸಿ ಅನವಚ್ಛಿನ್ನ, ಅಸಂಸಾರೀ ಆತ್ಮನನ್ನು ಮುಚ್ಚುತ್ತದೆ.  ಇದುವೇ ಆವರಣ ಶಕ್ತಿ. ಇದು ಶರೀರದಲ್ಲಿ ಒಳಗಡೆ ದೃಷ್ಟಿ ಮತ್ತು ದೃಶ್ಯ ಮತ್ತು ಶರೀರದ ಹೊರಗಡೆ ಬ್ರಹ್ಮ ಮತ್ತು ಸೃಷ್ಟಿಯ ಭೇದವನ್ನು ಆವರಿಸುತ್ತದೆ.

ಈಶ್ವರ
ಉಪಾಸನೆಗಾಗಿ ನಿರ್ವಿಶೇಷ ಬ್ರಹ್ಮನು ಸವಿಶೇಷರೂಪವನ್ನು ಧರಿಸುತ್ತಾನೆ. ವಸ್ತುತಃ ಬ್ರಹ್ಮನು ಪ್ರದೇಶವಂತನಲ್ಲ. ಉಪಾಧಿವಿಶೇಷಗಳ ಸಂಬಂಧವಿರುವುದರಿಂದ ಭಿನ್ನಭಿನ್ನ ಪ್ರದೇಶಗಳಲ್ಲಿರುವನೆಂದು ಸ್ವೀಕರಿಸಲಾಗಿದೆ. ಆದ್ದರಿಂದ ಉಪನಿಷತ್ತುಗಳಲ್ಲಿ ಬ್ರಹ್ಮನ ಉಪಾಸನೆಯು ಸೂರ್ಯನಲ್ಲಿಯೂ, ಕಣ್ಣುಗಳಲ್ಲಿಯೂ, ಹೃದಯದಲ್ಲಿಯೂ ಹೇಳಲಾಗಿದೆ. ಈ ಉಭಯ ಪ್ರಕಾರಗಳಾದ ಬ್ರಹ್ಮನ ಜ್ಞಾನ ಮತ್ತು ಉಪಾಸನೆಗಳ ಫಲವೂ ಭಿನ್ನಗಳೇ ಆಗಿವೆ. ಎಲ್ಲಿ ನಿರ್ವಿಶೇಷ ಬ್ರಹ್ಮನನ್ನು ಆತ್ಮರೂಪವೆಂದು ಹೇಳಿದೆಯೋ ಅಲ್ಲಿ ಏಕತ್ವರೂಪವಾದ ಮೋಕ್ಷವೇ ಫಲವಾಗಿದೆ. ಆದರೆ ಎಲ್ಲಿ  ವಿಗ್ರಹಗಳ ಉಪಾಸನೆಯ ಪ್ರಸಂಗಬರುವುದೋ ಅಲ್ಲಿ ಸಂಸಾರಗೋಚರವಾದ ಫಲವು ಭಿನ್ನ ಭಿನ್ನವಾದ ಉಪಾಸ್ಯ ಉಪಾಸಕ ಭೇದದ ದೃಷ್ಟಿಯಿಂದ ಕಲ್ಪಿತಗಳಾಗಿವೆ. ಆದ್ದರಿಂದ ಈಶ್ವರ ಮತ್ತು ಜೀವ ಎರಡೂ ಮಾಯೆಯಿಂದ ಕೂಡಿದುವು. ಪಂಚದಶೀಕಾರರು ಅಂದಿದ್ದಾರೆ-

ಮಾಯಾಖ್ಯಾಯಾಃ ಕಾಮಧೇನೋಃ ವತ್ಸೌ ಜೀವೇಶ್ವರಾವುಭೌ।
ಯಥೇಚ್ಛಂ ಪಿಬತಾಂ ದ್ವೈತಂ ತತ್ವಮದ್ವೈತಮೇವ ಹಿ ॥

(ಪಂಚದಶೀ-6-236)

ಜೀವ:
ಅಂತಃಕರಣದಲ್ಲಿ ಸೇರಿರುವ ಚೈತನ್ಯವೇ ಜೀವವೆನ್ನುವುದಾಗಿದೆ. ಶರೀರ ಮತ್ತು ಇಂದ್ರಿಯಗಳ ಮೇಲೆ ಶಾಸನ ಮಾಡುವ ಮತ್ತು ಕರ್ಮಫಲವನ್ನನುಭವಿಸುವ ಆತ್ಮನೇ  ಜೀವವೆಂದು ಆಚಾರ್ಯರ ಮತ. ಆತ್ಮನನ್ನು ನಿತ್ಯ, ಶುದ್ಧ, ಬುದ್ಧ, ಮುಕ್ತಸ್ವಭಾವದವನೆಂದು ಹೇಳುತ್ತಾರೆ. ಶರೀರ ಇತ್ಯಾದಿಗಳ ಉಪಾಧಿಗಳು. ಉತ್ಪನ್ನವಾಗುತ್ತವೆಯಲ್ಲದೆ. ಆತ್ಮನು ಉತ್ಪತ್ತಿಯಾಗುವುದಿಲ್ಲ. ಶಂಕರಾಚಾರ್ಯರ ಮತದಲ್ಲಿ ಆತ್ಮನು ನಿತ್ಯವಾದುದರಿಂದ ಉತ್ಪನ್ನವಾಗುವುದಿಲ್ಲ. ಅದ್ವೈತ ವೇದಾಂತದ ಅನುಸಾರವಾಗಿ ಪರಬ್ರಹ್ಮ ಮತ್ತು ಆತ್ಮ ಎರಡೂ ಅಭಿನ್ನ. ಬಾಹ್ಯ ಮತ್ತು ಅಂತರಂಗ ಎಂದು ಜೀವನ ವ್ಯಕ್ತಿಗಳು ಎರಡು. ಬಹಿರ್ಮುಖವಾದಾಗ ವಿಷಯಗಳನ್ನು ಪ್ರಕಾಶಿಸುತ್ತಾನೆ. ಅಂತರ್ಮುಖನಾದಾಗ ಅಹಂಕಾರವನ್ನು ಪ್ರಕಟಪಡಿಸುತ್ತಾನೆ. ನೃತ್ಯಶಾಲೆಯಲ್ಲಿ ದೀಪವು ಸೂತ್ರಧಾರ ಸಭ್ಯರು ಮತ್ತು ನರ್ತಕಿ ಇವರುಗಳನ್ನು ಒಂದೇ ಸಮನಾಗಿ ಪ್ರಕಾಶಪಡಿಸುತ್ತದೆ. ಇವರ ಅಭಾವವಾದಾಗ ಸ್ವತಃ ಪ್ರಕಾಶಿಸುತ್ತದೆ. ಈ ರೀತಿ ಆತ್ಮನು ಅಹಂಕಾರ ಬುದ್ಧಿ, ವಿಷಯ ಇವುಗಳನ್ನು ಪ್ರಕಾಶಿಸುತ್ತಾನೆ. ಬುದ್ಧಿಯು ಚಂಚಲವಾಗಿದೆ. ಇದರ ಸಂಯೋಗದಿಂದ ಜೀವನು ಚಂಚಲನೆಂದು ಪ್ರತೀತವಾಗುತ್ತದೆ.  ವಾಸ್ತವವಾಗಿ ಜೀವನು ನಿತ್ಯ ಮತ್ತು ಶಾಂತನಾಗಿದ್ದಾನೆ. ವ್ಯಷ್ಟಿ ಮತ್ತು ಸಮಷ್ಟಿಗಳಲ್ಲಿ ಜೀವನಿಗೆ ಅಂತರವಿಲ್ಲವೆಂದು ಅದ್ವೈತ ವೇದಾಂತದ ಮೂಲ ಸಿದ್ದಾಂತ. ವ್ಯಷ್ಟಿ ಎಂದರೆ ವ್ಯಕ್ತಿ ಶರೀರವೆಂದೂ ಸಮಷ್ಟಿ ಎಂದರೆ ಸಮೂಹ ರೂಪಾತ್ಮಕವಾದ ಜಗತ್ತು ಎಂದು ಅರ್ಥ ವೇದಾಂತದ ಪ್ರಕಾರ ಸ್ಥೂಲ, ಸೂಕ್ಷ್ಮ ಮತ್ತು ಕಾರಣ ಎಂದು ಮೂರುಪ್ರಕಾರಗಳಾದ ಶರೀರವನ್ನು ಹೇಳಲಾಗಿದೆ. ಇವುಗಳಿಗೆ ಅಭಿಮಾನಿಯಾದ ಜೀವವನ್ನು ಮೂರು ವಿಧಗಳಾಗಿ ವ್ಯವಹರಿಸಲಾಗಿದೆ. ಸ್ಥೂಲ ಶರೀರದ ಅಭಿಮಾನಿ “ವಿಶ್ವ” ಎಂದೂ ಸೂಕ್ಷ್ಮ ಶರೀರದ ಅಭಿಮಾನಿ ತೈಜಸ ಎಂದೂ ಕಾರಣ ಶರೀರದ ಅಭಿಮಾನಿ ಪ್ರಾಜ್ಞ ಎಂದೂ ಹೆಸರಿಸಲಾಗಿದೆ. ಇದು ವ್ಯಷ್ಟಿಗೆ ಸಂಬಂಧಿಸಿದ್ದು. ಸಮಷ್ಟಿಯಲ್ಲಿಯೂ ಸಮಷ್ಟಿಗೆ ಅಭಿಮಾನಿಯಾದ ಚೈತನ್ಯವನ್ನು ಕ್ರಮವಾಗಿ ವಿರಾಟ್ (ವೈಶ್ವಾನರ) ಸೂತ್ರಾತ್ಮಾ (ಹಿರಣ್ಯಗರ್ಭ) ಮತ್ತು ಈಶ್ವರ ಎಂದು ಕರೆಯುತ್ತಾರೆ. ವ್ಯಷ್ಟಿ ಮತ್ತು ಸಮಷ್ಟಿಗೆ ಅಭಿಮಾನಿಯಾದ ಚೈತನ್ಯವು ನಿಶ್ಚಯವಾಗಿಯೂ ಅಭಿನ್ನ. ಆತ್ಮನೂ ಈ ಮೂರು ಶರೀರದಿಂದಲೂ ಸ್ವತಂತ್ರನು.

ಜೀವ ಮತ್ತು ಈಶ್ವರರೊಳಗೆ ಅಂಶ ಅಂಶೀ ಕಲ್ಪನೆಯನ್ನು ಅದ್ವೈತವಾದವು ಮಾಡಿದೆ. ಆದ್ದರಿಂದ ಇಡಿಯಾದ ಜೀವವು ಅಗ್ನಿಯಂತೆ ದಾಹಕವಾಗಿದ್ದರೂ ಪರಿಮಿತವಾದ ಶಕ್ತಿಯುಳ್ಳದ್ದಾಗಿ ಅದು ಬ್ರಹ್ಮ ಇಲ್ಲವೆ ಈಶ್ವರನಂತೆ ಸೃಷ್ಟಿಯ ಕಾರ್ಯವನ್ನು ಮಾಡಲಾರದು. ಆಚಾರ್ಯರು ಹೀಗೆ ಹೇಳುತ್ತಾರೆ. ಇವುಗಳಲ್ಲಿ ಸಮಾನಧರ್ಮಗಳು ವಿದ್ಯಮಾನವಾಗಿದ್ದರೂ ಅವಿದ್ಯಾದಿವ್ಯವಧಾನದಿಂದ ತಿರೋಹಿತವಾಗಿದೆ. ಈಶ್ವರನನ್ನು ಧ್ಯಾನ ಮಾಡುವುದರಿಂದ ಸಾಧಕರಲ್ಲಿ ಅಲೌಕಿಕ ಶಕ್ತಿಗಳು ಪ್ರಾಪ್ತವಾಗುತ್ತವೆ. ಆದರಿಂದ ಅವರು ಹೊಸ ಸೃಷ್ಟಿಯನ್ನು ಮಾಡಲು ಸಮರ್ಥರಾಗುತ್ತಾರೆ. ತಿರೋಹಿತವಾದ ಶಕ್ತಿಯು ಉದಯವಾಗುವುದೇ ಜಪ, ತಪ ಮತ್ತು ಯೋಗಗಳ ಫಲ. ಈಶ್ವರನ ಸ್ವರೂಪದ ಅಜ್ಞಾನದಿಂದ ಜೀವನಿಗೆ ಬಂಧನವಾಗುತ್ತದೆ. ಅವನ ಜ್ಞಾನದಿಂದ ಮೋಕ್ಷವಾಗುತ್ತದೆ. ಶಂಕರಾಚಾರ್ಯರ ಸಿದ್ಧಾಂತದಂತೆ ಈ ಜಗತ್ತು ವ್ಯಾವಹಾರಿಕ ಸತ್ಯವಾಗಿದೆ. ಪಾರಮಾರ್ಥಿಕವಾಗಿ ಸರ್ವವೂ ಬ್ರಹ್ಮವಾಗಿರುವುದರಿಂದ ಬೇರೊಂದು ಜೀವ, ಜಗತ್ತುಗಳ ಚರ್ಚೆಗಳು ಬರುವುದಿಲ್ಲ.

॥ ಇತಿ ಶಂ ॥

 ~*~

Facebook Comments