ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 23:

ವೈಶೇಷಿಕದರ್ಶನ

                                      ವಿದ್ವಾನ್ ಟಿ.ಪಿ.ಭಟ್ಟ

ಇಹಪರಗಳನ್ನು ಸಮೀಕ್ಷಿಸಿ ಒಟ್ಟಂದದಲ್ಲಿ ಧರ್ಮವಾಗಿಸಿ ಪೂರ್ಣಜೀವನಕ್ಕೆ ಎಡೆ ಮಾಡಿದ ಮಹಾತ್ಮನೇ ಕಣಾದ. ಅವನ ಚಿಂತನೆಯ ಫಲವೇ ವೈಶೇಷಿಕದರ್ಶನ. ಇಂದಿನ ವಸ್ತು ವಿಜ್ಞಾನ ಪ್ರಗತಿಗಿಂತ 2500 ವರ್ಷಗಳಿಗಿಂತ ಹಿಂದೆ, ಬುದ್ಧನಿಗಿಂತ ಮೊದಲೇ ದರ್ಶನವಾದ ತಥ್ಯ. ಅದು ಪರಮಾಣುವಾದವಾದರೂ ಭಗವಂತನನ್ನು ಕೈಬಿಡದ ಅಪ್ಪಟ ಭಾರತೀಯ ತತ್ತ್ವಜ್ಞಾನ. ಧರ್ಮವೆಂದರೆ ಬರೇ ಆಚಾರ ವಿಚಾರಗಳ ಸಂತೆಯಲ್ಲ. ವರ್ಣಾಶ್ರಮವ್ಯವಸ್ಥೆಯ ಪರಿವಿಡಿಯೂ ಅಲ್ಲ. ಧರ್ಮವೆಂದರೆ ಪರಿಪೂರ್ಣವಾದ ಬದುಕಿನ ಎಲ್ಲ ಸ್ತರದ ನೋಟ, ಹಿನ್ನೋಟ, ಮುನ್ನೋಟಗಳ ಸಂಗತವಾದ ಸಮನ್ವಯ. “ಯತೋsಭ್ಯುದಯನಿಶ್ಶ್ರೇಯಸಸಿದ್ಧಿಃ ಸ ಧರ್ಮಃ” ಎಂಬುದು ಕಣಾದರ ಚಿಂತನೆಯ ಪೂರ್ಣಫಲ. ಭೌತವಸ್ತುಗಳ ಕುರಿತ ಜಿಜ್ಞಾಸೆ ಇಂದಿನ ವಿಜ್ಞಾನದ ಪ್ರಥಮ ಆದ್ಯತೆ. ಹೊಸ ಹೊಸ ಅನ್ವೇಷಣೆಗಳ ತಾಯಿ. ವಸ್ತುವಿಜ್ಞಾನವನ್ನು ಕುರಿತು ನಮ್ಮವಾದ ತಮೋವಾದವೇನೂ ಅಲ್ಲ. ನಮ್ಮೆಲ್ಲ ತತ್ತ್ವಶಾಸ್ತ್ರಗಳೂ ಜಗತ್ತಿನ ಕಾರಣದ ಕುರಿತು ತಮ್ಮ ಅನಿಸಿಕೆಗಳನ್ನು ಸಾರಿವೆ. ಭಗವಂತನನ್ನು ಕುರಿತು ವಿವೇಚಿಸುವಾಗಿ ಜಗತ್ತಿಗೆ ಹೇಗೆ ಅವನು ಕಾರಣ ಎಂಬುದು ಬಹು ಮುಖ್ಯ ವಿವೇಚನೆಯಾಗಿ ಸಲ್ಲುತ್ತದೆ. ಕಣಾದರ ಮೂಲ ಹೆಸರು ಕಶ್ಯಪ, ಕಾಶ್ಯಪ ಯಾವುದೇ ಇರಲಿ, ‘ಕಣಾದ’ ಎಂಬುದಂತೂ ಪರಮಾಣುಗಳ ಮೂಲಕ ಭೌತವಸ್ತುಗಳ ಮೂಲ ವಿವೇಚನೆಯತ್ತ ಸಾಗುತ್ತದೆ ಎಂಬುದು ನಿರ್ವಿವಾದ. ಆದುದರಿಂದಲೇ ‘ಕಣಾದ’ ಪದಕ್ಕೆ ಅನ್ವರ್ಥಕತೆ ಇದೆ. ಇಂದಿನ ಭೌತ ವಿವೇಚನೆಗಳು ಅಸಾಧ್ಯಗಳನ್ನೇ ಸಾಧ್ಯವಾಗಿಸಿಯೂ ಭಗವಂತನನ್ನು ಕಳೆದುಕೊಂಡಿವೆ. ಕಣಾದರೂ ಹಾಗೆ ಭಗವಂತನನ್ನು ಕಳೆದುಕೊಂಡರೆ? ಖಂಡಿತ ಇಲ್ಲ. ಕಾಣದ ಭಗವಂತನನ್ನೂ ಕಣ-ಕಣಗಳ ಸಂಗದಲ್ಲಿ ಬೆಸೆದುಬಿಟ್ಟರು.

ಆಸ್ತಿಕದರ್ಶನಗಳಲ್ಲಿ ಬಹು ಮುಖ್ಯವಾದ ಕಣಾದ ಚಿಂತನೆಗಳು ನಿರೀಶ್ವರವಾದವಾಗಿ ಕಂಡಿದ್ದೂ ಇದೆ. “ಅಥಾತೋ ಧರ್ಮಂ ವ್ಯಾಖ್ಯಾಸ್ಯಾಮಃ” ಎಂದೇ ಆರಂಭಗೊಳ್ಳುವ ಈ ದರ್ಶನ ನಿರೀಶ್ವರವೆ? ಹಾಗೆನ್ನುವವರು ದರ್ಶನವ್ಯವಸಾಯಿಗಳಂತೂ ಅಲ್ಲವೇ ಅಲ್ಲ. “ತದ್ವಚನಾದಾಮ್ನಾಯಸ್ಯ”ಎನ್ನುವ ದೃಢ ನಂಬಿಕೆಯ ಕಣಾದ ಹಾಗೆ ಚಿಂತಿಸಲು ಸಾಧ್ಯವೇ ಇಲ್ಲ. ಪ್ರಸಿದ್ಧಭಾಷ್ಯವಾದ ‘ಪದಾರ್ಥಧರ್ಮಸಂಗ್ರಹ’ವು “ಪ್ರಣಮ್ಯ ಹೇತುಮೀಶ್ವರಂ“ಎಂದೇ ಪ್ರಾರಂಭವಾಗುತ್ತದೆ. ಅಂತೆಯೇ ಮತ್ತೊಂದು ಮಹತ್ತ್ವದ ತಪ್ಪು ಗ್ರಹಿಕೆಯೆಂದರೆ ‘ಅಭ್ಯುದಯ’ಎಂಬ ಪದಕ್ಕೆ ಐಹಿಕ ಸಮೃದ್ಧಿ ಎನ್ನುವುದು. ಒಂದು ಭಾಷ್ಯವು ಅಭ್ಯುದಯವೆಂದರೆ ಸ್ವರ್ಗಾದಿಗಳು ಎಂದರೆ ಮತ್ತೆಲ್ಲ ಪ್ರಧಾನಭಾಷ್ಯ ಮತ್ತು ಟೀಕೆಗಳು ಅಭ್ಯುದಯ ಪದಕ್ಕೆ ‘ತತ್ತ್ವಜ್ಞಾನ’ಎಂಬ ಅರ್ಥವನ್ನೇ ಸಮರ್ಥಿಸುತ್ತವೆ.

ಮೋಕ್ಷಕ್ಕೆ ತತ್ತ್ವಜ್ಞಾನ ಕಾರಣವೆಂಬುದು ನಿರ್ವಿವಾದ. ಇದು ಸಂನಿಪತ್ಯೋಪಕಾರಕ. ಆರಾದುಪಕಾರಕ ಎಂಬರ್ಥದಲ್ಲಿ ನಿಷ್ಕಾಮ ಕರ್ಮವೂ ಆಗಬಹುದಾಗಿದೆ. ಇದು ಈ ದರ್ಶನದ ತಿರುಳು ಎಂದರೂ ಅತಿಶಯವಲ್ಲ. ಮೇಲುನೋಟಕ್ಕೆ ಪದಾರ್ಥಗಳ ವಿಭಾಗ ಮತ್ತು ಅವುಗಳ ಕೂಲಂಕಷ ವಿಮರ್ಶೆ ಈ ದರ್ಶನದಲ್ಲಿ ಇದ್ದುದರಿಂದ ಭೌತ ಚಿಂತನೆಗಳಾಗಿ ಕಾಣುತ್ತವೆ. ಭಗವಂತನನ್ನು ಹೊರತಾಗಿಸಿ ಕೇವಲ ಪದಾರ್ಥವಿಜ್ಞಾನವು ಇಲ್ಲಿ ಸಲ್ಲದು. ದ್ರವ್ಯಗುಣಕರ್ಮಸಾಮಾನ್ಯ ವಿಶೇಷಸಮವಾಯಗಳು ಮತ್ತು ವೈಧರ್ಮ್ಯದಿಂದ ಅಭಾವ ಒಟ್ಟು ಏಳು ಪದಾರ್ಥಗಳ ತತ್ತ್ವಜ್ಞಾನವೂ ಮೋಕ್ಷಕ್ಕೆ ಕಾರಣ ಎನ್ನುವುದೇ ಕಣಾದನ ಉಪದೇಶ. ಪದಾರ್ಥಗಳ ತತ್ತ್ವವಿಮರ್ಶೆ, ಶ್ರವಣ, ಮನನ, ನಿದಿಧ್ಯಾಸನ, ಸಾಕ್ಷಾತ್ಕಾರಗಳ ಮೂಲಕ ಸಾಗಬೇಕೆಂಬುದೇ ಆಶಯ. ವೈಶೇಷಿಕದರ್ಶನವು ಪದಾರ್ಥ(ವಸ್ತು) ತತ್ತ್ವಗಳ ಮೂಲಕ ಜಗತ್ತನ್ನು (ಉಪೇಕ್ಷಿಸದೆ)ಇಟ್ಟುಕೊಂಡೇ ಚಿಂತನೆಯನ್ನು ಮುಂದುವರಿಸುತ್ತದೆ. ಈ ದರ್ಶನವು ಇಂದೂ ಪ್ರಸ್ತುತವಾಗಿರಲು ಇದು ಮುಖ್ಯ ಕಾರಣವಾಗಿದೆ. ಆತ್ಮನಲ್ಲಿ ಅದೃಷ್ಟ ನಾಶವಾದಾಗ ಮಾತ್ರ ಕರ್ಮಚಕ್ರದ ಗತಿಯು ನಾಶವಾಗಿ ಶರೀರ ಸಂಬಂಧ ಕಳಚುತ್ತದೆ. ಇದರೊಡನೆ ಜನನ-ಮರಣ ಪರಂಪರೆ ನಿಲ್ಲುತ್ತದೆ. ಪರಮದುಃಖವಾದ (ಕರ್ಮಚಕ್ರದ ಗತಿ) ಶರೀರದ ಅಂತ್ಯದವರೆಗೂ ಆತ್ಯಂತಿಕ ದುಃಖನಿವೃತ್ತಿ ಆಗಲಾರದು.ಆತ್ಯಂತಿಕ ದುಃಖನಿವೃತ್ತಿ ಎಂಬರ್ಥದ ಮೋಕ್ಷಸ್ವರೂಪವು ನ್ಯಾಯವೈಶೇಷಿಕಗಳಿಗೆರಡಕ್ಕೂ ಸಮಾನವಾಗಿರುತ್ತದೆ.

“ಸಾಧರ್ಮ್ಯ -ವೈಧರ್ಮ್ಯಾಭ್ಯಾಂ ನಿಃಶ್ರೇಯಸಾಧಿಗಮಃ”ಎಂಬುದು ಪದಾರ್ಥಗಳ ಅವಧಾರಣೆಗೆ ಮುಖ್ಯವೆನಿಸಿದರೂ, ನಿತ್ಯನಾದ ಆತ್ಮನ ಸ್ವಸ್ವರೂಪಾನುಭವಕ್ಕಾಗಿ ಅವಶ್ಯವಾಗಿರುತ್ತದೆ. ಆತ್ಮ ಆತ್ಮೇತರ ವಸ್ತುಗಳ ಸಂಬಂಧ ವ್ಯವಸ್ಥೆ ಇರುವುದೇ ಗುಣ, ಕರ್ಮಗಳಿಗಾಗಿ. ಅಷ್ಟೇ ಅಲ್ಲ, ‘ಸಮಾನಂ ಸಾಧರ್ಮ್ಯಯೋಗಃ’ಎಂಬ ಸಾಮಾನ್ಯದ ವ್ಯವಸ್ಥೆ ಸಂಸಾರದ ಪ್ರಕ್ರಿಯೆಗಳಲ್ಲಿ ಎಷ್ಟು ಅವಶ್ಯವೋ ಆತ್ಮೋದ್ಧಾರಕ್ಕೂ ಅವಶ್ಯವಾದುದು ಎಂಬುದು ಕಣಾದರ ಆಶಯ. ಅಂತೆಯೇ ವೈಧರ್ಮ್ಯವ್ಯವಸ್ಥೆ, ನಿತ್ಯಸಂಬಂಧ (ಸಮವಾಯ)ಗಳೂ ಇಹಪರಗಳಲ್ಲಿ ಅತ್ಯಾವಶ್ಯಕವಾದವುಗಳಾಗಿವೆ. ವೈಶೇಷಿಕದರ್ಶನವು ವಸ್ತುಮೂಲದ ಪರಮಾಣುವಿನವರೆಗೆ ಮಾತ್ರ ಸಾಗುತ್ತದೆಯೆಂಬುದು ಅಪ್ರಬುದ್ಧ ಹೇಳಿಕೆ. ಅದು ಸತ್ಯದ ತಿರುಳನ್ನು ಭೇದಿಸುವುದಿಲ್ಲ. ಸತ್ಯವಿಷಯವೆಂದರೆ ಲೌಕಿಕ ವಸ್ತು ಮೂಲಗಳ ಉಪೇಕ್ಷೆಯೂ ಅಲ್ಲ, ಭಗವಂತನನ್ನು ಕಳೆದುಕೊಳ್ಳುವುದೂ ಅಲ್ಲ. ಅದು ಇವೆರಡನ್ನೂ ಬೆಸೆಯುವುದಾಗಿದೆ ಎಂಬ ಸತ್ಯವನ್ನು ಅರಿತರೆ ಸಾಕು. ಎಲ್ಲ ದರ್ಶನಗಳೂ ಜಗತ್ತಿಗೆ ಕಾರಣವಾದ ಪರಮಾಣುವನ್ನು (ಅವರವರ ವಿವೇಚನೆಯಂತೆ) ಒಪ್ಪುತ್ತಾರೆ. ಅಣುವಿನ ಕಾರ್ಯ ಜಗತ್ತು ಎನ್ನುತ್ತಾರೆ ಕೂಡ.

ಈ ಜಿಜ್ಞಾಸೆಯ ಇನ್ನೊಂದು ಹೆಸರೇ ಕಾರಣತಾವಾದ. ಕೆಲವು ಬಾಲಿಶವಾದಿಗಳು ಪರಮಾಣುವಿನ ಕಾರ್ಯರೂಪತೆಯನ್ನು ಒಪ್ಪಲಾರರು. ನಿತ್ಯವಾದ ಪರಮಾಣುಗಳಿಂದ ನಾನಾ ವಿಧ ಕಾರ್ಯಗಳು ಹೇಗೆ? ಎಂಬುದೇ ಈ ಆಶಂಕೆಯ ಮೂಲ. ಅದಕ್ಕೆ ಉತ್ತರವಿಷ್ಟೆ:  ಕಾರಣವಾದ ಪರಮಾಣುಗಳು ಕಾರ್ಯರೂಪದ ವಸ್ತುಗಳಾಗುವಾಗ ಒಂದೇ ತೆರನಾಗಿರಬೇಕೆಂಬುದರಲ್ಲಿ ಯಾವ ಅರ್ಥವೂ ಇಲ್ಲ. ಇಂದಿನ ವಿಜ್ಞಾನ ಆವಿಷ್ಕರಿಸುವ ಒಂದು ದೃಷ್ಟಾಂತ ಇಲ್ಲಿದೆ. H2O ಇದರ ಕಾರ್ಯರೂಪ ನೀರಲ್ಲವೇ? ಬೌದ್ಧವಾದದ ವಿವರಣೆ ಗಮನಿಸೋಣ. ಕಾರಣಗಳು (ಪರಮಾಣು) ಕಾರ್ಯರೂಪಕ್ಕೆ ಬಂದಾಗ ಪ್ರತ್ಯೇಕ ಅಸ್ತಿತ್ತ್ವವನ್ನು ಹೊಂದುತ್ತವೆಯೆಂಬ ಕಣಾದ ಸಿದ್ಧಾಂತವನ್ನು ಅವರು ಒಪ್ಪಲಾರರು. ಅವರ ವಿವೇಚನೆಯ ಪ್ರಕಾರ ಕಾರ್ಯಕ್ಕೆ ಅಸ್ತಿತ್ತ್ವವೇ ಇಲ್ಲ. ಹಾಗಾದರೆ ಕಾರಣದ ಪರಿಣಾಮವೇ? ಅದು (ಪರಮಾಣು)ಅದೂ ಅಲ್ಲ. ಅದು ಕಾರಣ ‘ಸಂಪಾತ’ ಮಾತ್ರವಾಗಿದೆ. ಇದು ಅವರ ಶೂನ್ಯವಾದಕ್ಕೆ ಪೋಷಣೆಯೂ ಅಹುದು. ಈ ಕಾರಣಗಳ ಸಂಘಟನೆಗೆ (ಕಾರ್ಯ) ಕರ್ಮವೇ ಜವಾಬ್ದಾರವಾಗಿದೆ. ಅಂದರೆ ಬೌದ್ಧಚಿಂತನೆಗಳಂತೆ ಅಲ್ಲಿ ದೇವರ ಅವಶ್ಯಕತೆ ಬರುವುದಿಲ್ಲ. ಜೈನರ ಚಿಂತನೆಯಂತೆ -ಕಾರ್ಯಗಳು’ಪುಗ್ಗಲ'(ಪುದ್ಗಲ)ಗಳು. ಅವು ಕಾರಣದ ಪರಿಣಾಮ ಮಾತ್ರವೇ ಹೊರತು ಪ್ರತ್ಯೇಕ ಅಸ್ತಿತ್ತ್ವವುಳ್ಳ ಕಾರ್ಯವಲ್ಲ. ಕಣಾದರು ಕಾರ್ಯವನ್ನು ಕಾರಣಗಳಿಗಿಂತ ಪ್ರತ್ಯೇಕ ಅಸ್ತಿತ್ತ್ವ ಉಳ್ಳವುಗಳೆಂದು ಪರಿಗಣಿಸುತ್ತಾರೆ. ಇಂದಿನ ವಿಜ್ಞಾನವೂ ಕೂಡ ಇದನ್ನೇ ಅನುಮೋದಿಸುತ್ತದೆ. ಇದಕ್ಕೆ ಜೈನ ಚಿಂತನೆಯಲ್ಲಿ ಮೂರು ವಿಧ ಉತ್ತರಗಳು. ಒಂದು ಭಿನ್ನ, ಇನ್ನೊಂದು ಅಭಿನ್ನ, ಮತ್ತೊಂದು ಭಿನ್ನಾಭಿನ್ನ. ಪೂರ್ವಮೀಮಾಂಸಾಶಾಸ್ತ್ರವು ಕಾರ್ಯವನ್ನು ಕಾರಣವಾದ ಪರಮಾಣುವಿನಿಂದ ಭಿನ್ನ ಎಂದು ಒಪ್ಪುತ್ತದೆ. ಆದರೆ ಜವಾಬ್ದಾರಿ ಬಂದಾಗ ಅದು ‘ಕರ್ಮನಿಯಮಿತ’ಅಂದರೆ ಭಗವಂತನು ಸೃಷ್ಟಿಯಲ್ಲಿ ನಿಯಾಮಕನಲ್ಲ. ಕಣಾದರು ಮಾತ್ರ ಭಗವಂತನಿಗೆ ದೃಢವಾದ ಪೀಠವನ್ನು ನಿರ್ಮಿಸುತ್ತಾರೆ. ಅಂದರೆ ನಮ್ಮ ಬದುಕು ಬಗೆಗಳಿಗೆ ಮೀರಿದಂತೆ ಕಂಡುಬಂದರೂ, ನಿಜಕ್ಕೂ ಭಗವಂತನು ನಿಯಾಮಕ. ಪಂಚಭೂತಾತ್ಮಕವಾಗಿ, ನಾನಾರೂಪವ್ಯತ್ಯಾಸಗಳಿಂದ ಭಿನ್ನ ಕಾರ್ಯಗಳಾಗಿ ಕಂಡುಬಂದರೂ ಕಾರ್ಯರೂಪದ ಈ ಪ್ರಪಂಚಕ್ಕೆ ಭಗವಂತನೇ ನಿಯಾಮಕ. ಕರ್ಮದ ಸಹಕಾರವಿದ್ದರೂ ಈಶ್ವರ ನಿಯಮಿತವಾದುದೇ ಪ್ರಪಂಚ. ವೈಶೇಷಿಕ ದರ್ಶನ ಮೇಲುನೋಟಕ್ಕೆ ಪರಮಾಣು ಸಿದ್ಧಾಂತದಂತೆ ಕಂಡುಬಂದರೂ ಆಸ್ತಿಕ ದರ್ಶನವಾಗುವ ಎಲ್ಲರಿಗೆ ಸಲ್ಲುವ ಹಿನ್ನೆಲೆಯಿದು. “ಅಂತ್ಯಾವಯವ”ಅಂದರೆ ಅರ್ಥವಾಗಲಿಕ್ಕಿಲ್ಲ. ಎಲ್ಲ ರೀತಿಯಿಂದಲೂ ಇಂದ್ರಿಯಾತೀತವಾದ ಹಾಗೂ ಸೂಕ್ಷ್ಮ ನಿರವಯವ ವಸ್ತು ಪರಮಾಣು ಎಂದೆನಿಸಿಕೊಳ್ಳುತ್ತದೆ. ಇವುಗಳ ಪರಸ್ಪರ ಸಂಬಂಧದಲ್ಲಿ ವಸ್ತುವಿನ ಪ್ರಥಮೋತ್ಪತ್ತಿ. ಇದರಲ್ಲಿ ವಿಶೇಷವನ್ನು ಅಂಗೀಕರಿಸಿರುವುದರಿಂದ ಈ ದರ್ಶನ ‘ವೈಶೇಷಿಕ’ ಎನಿಸಿಕೊಳ್ಳುತ್ತದೆ. ಎರಡು ಪರಮಾಣುಗಳ  ಮೊತ್ತ ‘ದ್ವ್ಯಣುಕ’. ಮೂರು ದ್ವ್ಯಣುಕಗಳೇ ತ್ರ್ಯಣುಕ. ಅದೃಷ್ಟವು ಪ್ರಧಾನ ಪ್ರಕರ್ಷವಾದುದರಿಂದ ಜಗತ್ತಿಗೆ ಭಗವಂತನ ನಿಯಾಮಕತ್ವವಿದೆ. “ರಾಗಾದಿನಿವೃತ್ತೌ,ನಿವೃತ್ತಿಲಕ್ಷಣಃ”ಎಂಬಂತೆ ನಿವೃತ್ತಿಯುಂಟಾಗುತ್ತದೆ. ಕಣಾದ ಹೇಳಿದ ಪದಾರ್ಥ ತತ್ತ್ವಜ್ಞಾನವು ಪ್ರವೃತ್ತಿ, ನಿವೃತ್ತಿ ಎರಡರಲ್ಲಿಯೂ ಉಪಯೋಗವಾಗುತ್ತದೆ. ವಸ್ತುಲಕ್ಷಣವಾದ ಪ್ರಪಂಚಭಾವದ ನಿವಾರಣೆಗೂ ಕಾರಣವಾಗಿ ಗಮನ ಸೆಳೆಯುತ್ತದೆ. ಆದುದರಿಂದಲೇ ‘ತದಾನಿರೋಧಾತ್ ನಿರ್ಬೀಜಸ್ಯ ಆತ್ಮನಃ…ಮೋಕ್ಷಃ”ಎಂಬ ವಾಕ್ಯ ಇಂದಿಗೂ ಪ್ರಜ್ಞಾವಂತರಿಗೆ ಆಪ್ಯಾಯಮಾನವಾದುದು. ಕಣಾದರ ನೈಜಕಾಳಜಿ ಇರುವುದು “ಯತೋ ಅಭ್ಯುದಯ ನಿಃಶ್ರೇಯಸಸಿದ್ಧಿಃಸ ಧರ್ಮಃ”ಎನ್ನುವ ಧರ್ಮ ಪರಿಕಲ್ಪನೆಯಲ್ಲಿ. ಉದಯನಾಚಾರ್ಯರ ‘ಕಿರಣಾವಲಿ’ಮತ್ತು ‘ಉಪಸ್ಕರಗಳು’ನಿರ್ದೇಶಿಸುವಂತೆ ತತ್ತ್ವಜ್ಞಾನಪೂರ್ವಕ ಮೋಕ್ಷವೇ ಧರ್ಮ. ಮೊದಲ ಸೂತ್ರವೇ ಮೋಕ್ಷಮಾರ್ಗವನ್ನು ತೆರೆದಿಡುತ್ತದೆ.

ವೈಶೇಷಿಕದರ್ಶನದಲ್ಲಿ ‘ಶಬ್ದಸ್ತು ಸಮಾನಾಂತರಂ” ಎಂಬ ಸಿದ್ಧಾಂತವಿದೆ. ಶಬ್ದವೊಂದು ಪ್ರತ್ಯೇಕ ಪ್ರಮಾಣವಲ್ಲವೆಂದರೂ,“ತದ್ವಚನಾತ್ ಆಮ್ನಾಯಸ್ಯ”ಎಂಬ ಮುಕ್ತಾಯವು ಶ್ರುತಿ ಮಾತ್ರ ಪ್ರಾಮಾಣಿಕ ಅಂದರೆ ನಿರ್ದುಷ್ಟನಾದ ಭಗವಂತನ ವಾಣಿ ಎಂಬ ಅರ್ಥವಿದೆ. ಅದಕ್ಕೆ ಒಂದು ಪ್ರತ್ಯೇಕ ಪ್ರಮಾಣತ್ವ ಬೇಕಿಲ್ಲ ಎಂಬುದೇ ಸಾರಾಂಶ. ಮೂಲಭೂತ ಪರಮಾಣುಗಳ ಕಲ್ಪನೆ, ಅವುಗಳ ಸೃಷ್ಟಿ ಪ್ರಕಾರದಲ್ಲಿ ಭಗವಂತನ ಪಾತ್ರ ಮತ್ತು ಪರಿಪೂರ್ಣವಾದ ಧರ್ಮದ ಕಲ್ಪನೆಗಳಿಂದಾಗಿ ಈ ವಿಜ್ಞಾನಯುಗದಲ್ಲಿಯೂ ವೈಶೇಷಿಕ ದರ್ಶನ ವಿಚಾರವಂತರ ಆಸಕ್ತಿಯ ಕೇಂದ್ರವಾಗಿದೆ. ಸುಖ-ದುಖಃ, ಹುಟ್ಟು-ಸಾವುಗಳ, ಈ ಸಂಸಾರ ಚಕ್ರದಲ್ಲಿಯೂ ಪರಮ ಆಸ್ತಿಕ ವಿಮರ್ಶೆಯಾಗಿ ಕಣ-ಕಣಗಳಲ್ಲಿಯೂ ಭಗವಂತನನ್ನು ಬೆಸೆದ ಈ ಸತ್ಯಕ್ಕೆ ನಮನ.

|| ಯಸ್ಯ ನ ಸ್ಖಲಿತಾ ಬುದ್ಧಿಃ ತಃ ವೈ ವೈಶೇಷಿಕಂ ವಿದುಃ ||

~*~

Facebook Comments