ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 27:

ಷಣ್ಮತ ಸ್ಥಾಪನೆ

           ಶ್ರೀ ಖಂಡಿಗೆ ಶಾಮ ಭಟ್ಟ

ಶ್ರುತಿಸ್ಮೃತಿಪುರಾಣಾನಾಮಾಲಯಂ ಕರುಣಾಲಯಂ |
ನಮಾಮಿ ಭಗವತ್ಪಾದಂ ಶಂಕರಂ ಲೋಕಶಂಕರಮ್  ||

ವೇದಶಾಸ್ತ್ರಪುರಾಣಾದಿಗಳ ಪ್ರಚಾರದಲ್ಲಿ ಅಗ್ರಪಂಕ್ತಿಯಲ್ಲಿದ್ದ ಕೇರಳದ ಮಧ್ಯದಲ್ಲಿ, ಪೂರ್ಣಾನದಿಯ ತೀರದಲ್ಲಿ ಧರ್ಮಾಚಾರನಿರತರಾದ ಶಿವಗುರು ಆರ್ಯಾಂಬೆಯರ ಮಗನಾಗಿ ಜನಿಸಿದ ಶ್ರೀ ಶಂಕರರೇ ಮುಂದೆ ಭಗವಾನ್ ಶ್ರೀ ಶಂಕರಾಚಾರ್ಯರಾಗಿ, ಷಣ್ಮತಸ್ಥಾಪನಾಚಾರ್ಯರಾಗಿ ಬೆಳೆದು ಕೇರಳಕ್ಕೂ ಭಾರತಕ್ಕೂ ಖ್ಯಾತಿಯನ್ನು ತಂದವರು. ಬಾಲ್ಯದಲ್ಲೇ ಗುರುಕುಲ ವಿದ್ಯಾಭ್ಯಾಸವನ್ನು ಪ್ರಾರಂಭಿಸಿ ವೇದಶಾಸ್ತ್ರಪುರಾಣಾದಿಗಳನ್ನು ಅಭ್ಯಸಿಸಿಕೊಂಡರು. ತನ್ನ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ಉಪನೀತರಾದ ಶ್ರೀ ಶಂಕರರು ಪೂರ್ಣಾನದಿಯಲ್ಲಿ ಸ್ನಾನ ಮಾಡುವಾಗ ತಮ್ಮ ಕಾಲನ್ನು ಹಿಡಿದ ಮೊಸಳೆಯಿಂದ ಮುಕ್ತರಾಗಲು ತಾಯಿಯನ್ನು ಕರೆದು ಅವಳ ಸಮ್ಮತಿಯನ್ನು ಪಡೆದು ಸಂನ್ಯಾಸವನ್ನು ಸ್ವೀಕರಿಸಿದರು.

ಸ್ವತಃ ವಿರಕ್ತಪ್ರಕೃತಿಯ ಶ್ರೀ ಶಂಕರರು ಮುಂದೆ ತಾಯಿಯ ಒಪ್ಪಿಗೆಯನ್ನು ಪಡೆದು ಗುರುವನ್ನರಸಿಕೊಂಡು ಉತ್ತರಕ್ಕೆ ಪ್ರಯಾಣ ಮಾಡಿದರು. ನರ್ಮದಾ ತೀರದಲ್ಲಿ ತಪೋನಿರತರಾಗಿದ್ದ ಗೋವಿಂದ ಭಗವತ್ಪಾದರ ಶಿಷ್ಯತ್ವವನ್ನು ಪಡೆದು ಅವರಿಂದ ಕ್ರಮಪ್ರಕಾರ ಸಂನ್ಯಾಸವನ್ನು ಸ್ವೀಕರಿಸಿ ಮಹಾವಾಕ್ಯಗಳ ಉಪದೇಶವನ್ನು ಹೊಂದಿ ಶ್ರೀ ಶಂಕರಾಚಾರ್ಯರೆಂಬ ನಾಮಧೇಯವನ್ನು ಪಡೆದರು. ನಾಲ್ಕು ವರ್ಷಗಳ ಕಾಲ ಗೋವಿಂದ ಭಗವತ್ಪಾದರ ಸಾನ್ನಿಧ್ಯದಲ್ಲಿದ್ದು ಆಳವಾದ ವ್ಯಾಸಂಗವನ್ನು ಗೈದ ಶ್ರೀ ಶಂಕರಾಚಾರ್ಯರು ಗುರುಗಳ ಸಮ್ಮತಿಯನ್ನು ಪಡೆದು ಉತ್ತರದ ಬದರಿಕಾಶ್ರಮದಲ್ಲಿ ಶ್ರೀ ಗೋವಿಂದ ಭಗವತ್ಪಾದರ ಗುರುಗಳಾದ ಗೌಡಪಾದಾಚಾರ್ಯರನ್ನು ಸಂದರ್ಶಿಸಿ ಅವರ ಆಶೀರ್ವಾದವನ್ನು ಪಡೆದರು.  ಬದರಿಕಾಶ್ರಮದಲ್ಲೇ ಭಗವಾನ್ ವ್ಯಾಸಮಹರ್ಷಿಗಳನ್ನು ಭೇಟಿ ಮಾಡಿ ಅವರಿಂದಲೂ ಆಶೀರ್ವಾದವನ್ನು ಪಡೆದು ಕಾಶಿಗೆ ತೆರಳಿದರು. ಶ್ರೀ ವ್ಯಾಸಮಹರ್ಷಿಗಳ ಆದೇಶದಂತೆ ಪ್ರಸ್ಥಾನತ್ರಯಗಳಾದ ಉಪನಿಷತ್, ಭಗವದ್ಗೀತೆ ಹಾಗೂ ಬ್ರಹ್ಮಸೂತ್ರಗಳಿಗೆ ತಮ್ಮದೇ ಆದ ಪ್ರಸನ್ನಗಂಭೀರ ಶೈಲಿಯಲ್ಲಿ ಭಾಷ್ಯಗಳನ್ನು ರಚಿಸಿದರು. ಶ್ರೀ ವಿಷ್ಣುಸಹಸ್ರನಾಮಕ್ಕೂ ಭಾಷ್ಯವನ್ನು ಬರೆದರು. ಬ್ರಹ್ಮಸೂತ್ರಭಾಷ್ಯವನ್ನು ಅವಲೋಕಿಸಿದ ಭಗವಾನ್ ವ್ಯಾಸರು ಕೃತಿಯ ಗುಣಾತಿಶಯದಿಂದ ಸಂತುಷ್ಟರಾಗಿ ಶ್ರೀ ಶಂಕರಾಚಾರ್ಯರ ಆಯುಷ್ಯವನ್ನು ಹದಿನಾರರಿಂದ ಮೂವತ್ತೆರಡಕ್ಕೆ ಏರಿಸಿದರು. ಆ ಸಮಯದಲ್ಲಿ ಭಾರತದಲ್ಲಿ ಕ್ಷೀಣದಶೆಯಲ್ಲಿದ್ದ ವೈದಿಕ ಧರ್ಮವನ್ನು ಪ್ರಚಾರ ಮಾಡಿ ಅದ್ವೈತಮತವನ್ನು ಸ್ಥಾಪಿಸುವಂತೆ ಶ್ರೀ ಶಂಕರಾಚಾರ್ಯರನ್ನು ಆದೇಶಿಸಿದರು.

ಆಗಿನ ಕಾಲದ ಭಾರತದ ಪರಿಸ್ಥಿತಿ ಧಾರ್ಮಿಕವಾಗಿ, ಸಾಮಾಜಿಕವಾಗಿ ಸುಸ್ಥಿತಿಯಲ್ಲಿರಲಿಲ್ಲ. ವಿವಿದ ದೇವತೆಗಳ ಆರಾಧನೆ ನಡೆಯುತ್ತಿದ್ದರೂ ಅವು ಶಾಸ್ತ್ರವಿಧಿಯಂತೆ ಆಗುತ್ತಿರಲಿಲ್ಲ. ಶಿವ, ವಿಷ್ಣು, ದುರ್ಗೆ ಯಾವುದೇ ದೇವತೆಯಿರಲಿ, ಒಂದೊಂದು ಜನಾಂಗದವರು ಒಂದೊಂದು ಹೆಸರಿನಿಂದ ಪೂಜಿಸುತ್ತಿದ್ದರು. ಧರ್ಮಾಧರ್ಮ ಭಕ್ಷ್ಯಾಭಕ್ಷ್ಯಗಳನ್ನು ಗಮನಿಸುತ್ತಿರಲಿಲ್ಲ….. ಮುದ್ರಾಧಾರಣೆ, ವಾಮಾಚಾರ, ಹಿಂಸಾಚಾರ ತುಂಬಿತ್ತು. ಪಂಗಡಗಳಲ್ಲಿ ಪರಸ್ಪರ ದ್ವೇಷಾಸೂಯೆಗಳು ಕಾಣುತ್ತಿದ್ದವು.  ದೇಶದ ಉದ್ದಗಲಕ್ಕಿದ್ದ ದೇವಾಲಯಗಳಲ್ಲಿಯೂ ಪೂಜೆ ಪುರಸ್ಕಾರಗಳು ಶಾಸ್ತ್ರವಿಧಿಯಂತೆ ನೆರವೇರುತ್ತಿರಲಿಲ್ಲ. ಬ್ರಾಹ್ಮಣರು ಸದಾಚಾರನಿರತರಾಗಿರಲಿಲ್ಲ. ಅರಿಷಡ್ವರ್ಗಗಳು ಜನರನ್ನು ಬಾಧಿಸುತ್ತಿದ್ದವು.

    ವೈದಿಕ ಧರ್ಮದ ಪುನರುದ್ಧಾರಕ್ಕಾಗಿ ಜನರು ಸ್ವಧರ್ಮಕರ್ಮನಿರತರಾಗಿ ಉತ್ತಮ ಜೀವನವನ್ನು ನಡೆಸುವಂತೆಸಗಲು ಶ್ರೀಮದಾಚಾರ್ಯರು ಭಾರತದ ಉದ್ದಗಲಕ್ಕೂ ಸಂಚರಿಸುವುದೆಂದು ಸಂಕಲ್ಪಿಸಿ, ಕಾರ್ಯಪ್ರವೃತ್ತರಾದರು. ಪ್ರಯಾಣಕಾಲದಲ್ಲಿ ಪರಮಮೀಮಾಂಸಕನೂ, ಬೌದ್ಧರನ್ನು ತನ್ನ ಅಸಾಮಾನ್ಯ ಪಾಂಡಿತ್ಯದಿಂದ, ವಾದಸಾಮರ್ಥ್ಯದಿಂದ ಸೋಲಿಸಿದ ಕುಮಾರಿಲಭಟ್ಟರನ್ನು ಸಂದರ್ಶಿಸಿ ವೇದಾಂತ ಸಿದ್ಧಾಂತವನ್ನರುಹಿ ಅವರ ಸೂಚನೆಯಂತೆ ಮಾಹಿಷ್ಮತಿಯಲ್ಲಿದ್ದ ವೇದವಿದ್ವಾಂಸರೂ, ಪೂರ್ವಮೀಮಾಂಸಕರೂ ‘ಕರ್ಮಭ್ಯ ಏವ ಮುಕ್ತಿರಿಷ್ಟಾ’ ಎಂದು ದೃಢವಾಗಿ ನಂಬಿದವರೂ ಆಗಿದ್ದ ಮಂಡನಮಿಶ್ರರನ್ನು ಭೇಟಿ ಮಾಡಿ ತನ್ನ ಅಸದೃಶವಾದ ವಾದಕೌಶಲ್ಯದಿಂದ ಮಿಶ್ರರನ್ನು ಅದ್ವೈತಿಯನ್ನಾಗಿ ಪರಿವರ್ತಿಸಿ, ತನ್ನ ಶಿಷ್ಯನನ್ನಾಗಿ ಸ್ವೀಕರಿಸಿದರು.

ತಮ್ಮ ಹಲವಾರು ಶಿಷ್ಯರೊಂದಿಗೆ ಪ್ರಯಾಣವನ್ನು ಮುಂದುವರಿಸುತ್ತಾ ದೇಶದ ಉದ್ದಗಲಕ್ಕಿದ್ದ ಹಲವಾರು ದೇವಸ್ಥಾನಗಳನ್ನೂ, ತೀರ್ಥಸ್ಥಳಗಳನ್ನೂ ಸಂದರ್ಶಿಸಿದರು. ಪುಣ್ಯಸ್ಥಳಗಳ ಪರಿಸರದಲ್ಲಿ ಮಾರ್ಗದಲ್ಲಿ ಸಂಧಿಸಿದ ಆಶಾಸ್ತ್ರೀಯ ಆಚಾರಗಳನ್ನನುಸರಿಸುವ ಜನರೊಡನೆ ವಿಚಾರವಿನಿಮಯವನ್ನು ಮಾಡಿ ವೈದಿಕ ಧರ್ಮವನ್ನು ಅನುಸರಿಸುವಂತೆ ಪ್ರೇರೇಪಿಸಿದರು. ಘೋರ, ಕ್ರೂರ ಕಾಪಾಲಿಕರನ್ನು ಶಾಂತಿ ಖಡ್ಗವನ್ನು ಧರಿಸಿದ ಭಗವಾನ್ ಆಚಾರ್ಯರು ಸರಿದಾರಿಗೆ ತಂದರು. ವೈಖಾನಸ ಪಾಂಚರಾತ್ರ ಮೊದಲಾದ ಶಾಸ್ತ್ರಗಳನ್ನನುಸರಿಸುವ ತಾಂತ್ರಿಕರನ್ನು ವೈದಿಕಮತಾವಲಂಬಿಗಳಾಗುವಂತೆ ಮಾಡಿದರು. ಉತ್ತರ ಭಾರತದ ತಕ್ಷಶಿಲಾ, ನಾಲಂದ, ಗಯಾ ಇತ್ಯಾದಿ ಸ್ಥಳಗಳಲ್ಲಿ, ಬುದ್ಧಮತಾವಲಂಬಿಗಳಿದ್ದರೂ ಈ ಶಂಕರರು ಬುದ್ಧನನ್ನು ಶ್ರೀ ಕೃಷ್ಣನ ದಶಾವತಾರಗಳಲ್ಲಿ ಸೇರಿಸಿದುದರಿಂದ ಬೌದ್ಧರು ವೈದಿಕ ಮತವನ್ನು ವಿರೋಧಿಸಲಿಲ್ಲ.

ನೂರಾರು ಸಂಪ್ರದಾಯಗಳ ಆಚಾರಗಳ ಪ್ರಭಾವದಿಂದ ಹಿಂದುಗಳಲ್ಲಿ ಉಂಟಾಗಿದ್ದ ಒಡಕುಗಳನ್ನು ನೀಗಿ ಅವರಲ್ಲಿ ಐಕ್ಯಮತ್ಯವನ್ನು ತರುವ ಉದ್ದೇಶದಿಂದ ಶ್ರೀಶಂಕರಾಚಾರ್ಯರು ಜನರು ಅನುಸರಿಸಿ ಬರುವ ಮತಗಳಲ್ಲಿ ಸೌರ, ಗಾಣಪತ್ಯ, ಶಾಕ್ತ, ಶೈವ, ವೈಷ್ಣವ ಹಾಗೂ ಕೌಮಾರ ಈ ಆರು ಮತಗಳು ಮುಖ್ಯವಾದವುಗಳು ಎಂಬುದನ್ನು ವಿಶದಪಡಿಸಿದರು. ಅವರ ಪೂಜಾವಿಧಾನಗಳಲ್ಲಿರುವ ನ್ಯೂನಾತಿರೇಕಗಳನ್ನು ಸರಿಪಡಿಸಿ, ಅರ್ಚನೆಗಳು ವಿಧಿಪ್ರಕಾರವಾಗಿ ನಡೆಯುವಂತೆ ವ್ಯವಸ್ಥೆಗೊಳಿಸಿದರು. ಇಂತಹ ಶ್ರೇಷ್ಠತಮವಾದ ಕಾರ್ಯವನ್ನೆಸಗಿದುದರಿಂದ ಶ್ರೀಶಂಕರಾಚಾರ್ಯರಿಗೆ ಷಣ್ಮತಸ್ಥಾಪನಾಚಾರ್ಯರು ಎಂಬ ಬಿರುದು ಲಭಿಸಿತು.

ಪ್ರತಿಯೊಬ್ಬ ಅದ್ವೈತ ಮತಾವಲಂಬಿಯೂ ದೈವಯಜ್ಞ, ಬ್ರಹ್ಮಯಜ್ಞ, ಪಿತೃಯಜ್ಞ, ಮನುಷ್ಯಯಜ್ಞ, ಭೂತಯಜ್ಞ ಎಂಬ ಪಂಚಮಹಾಯಜ್ಞಗಳನ್ನೂ, ಸೂರ್ಯ, ಗಣಪತಿ, ಅಂಬಿಕಾ, ಶಿವ, ವಿಷ್ಣು ಎಂಬ ಪಂಚದೇವತಾಪೂಜೆ, ಅಂದರೆ ಪಂಚಾಯತನ ಪೂಜೆಯನ್ನು ದಿನವೂ ಆಚರಿಸುವಂತೆ ಬೋಧಿಸಿದರು.

ಈ ಪದ್ಧತಿಯು ಜನಪ್ರಿಯವಾಯಿತು. ಜನರಲ್ಲಿ ಸಾಮರಸ್ಯವುಂಟಾಯಿತು. ವೈದಿಕ ಮತವು ಪುನರಪಿ ಉಜ್ವಲವಾಗಿ ಬೆಳಗಿತು. ಈ ಸುಸ್ಥಿತಿ ಶಾಶ್ವತವಾಗಿ ನೆಲೆಸುವಂತೆಸಗಲು ಭಗವಾನ್ ಶ್ರೀಶಂಕರಾಚಾರ್ಯರು ದೇಶದ ನಾಲ್ಕು ದಿಕ್ಕುಗಳಲ್ಲಿ ಮಹಿಮಾನ್ವಿತ ಮಠಗಳನ್ನು ಸ್ಥಾಪಿಸಿದರು. ಹಲವಾರು ಅನುಪಮ ಕೃತಿಗಳನ್ನು ರಚಿಸಿ ಜನರು ಭಗವತ್ತತ್ತ್ವವನ್ನು ತಿಳಿಯುವುದಕ್ಕೆ ದಾರಿ ತೋರಿಸಿದರು.

 ಶ್ರೀಮಜ್ಜಗದ್ಗುರು ಶಂಕರಾಚಾರ್ಯರ ಹಿರಿಯ ಪರಂಪರೆಗೆ ಸೇರಿದ ನಮ್ಮ ಶ್ರೀರಾಮಚಂದ್ರಾಪುರಮಠದ ಕೀರ್ತಿಯು ಚಿರಮಭಿವರ್ಧತಾಮ್.

~*~

Facebook Comments