ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 35:

ಶಿಕ್ಷಾ       

       ವಿದ್ವಾನ್ ಉಮಾಕಾಂತ ಭಟ್ಟ

೧.  ಶಿಕ್ಷಾ : ವೇದಾಂಗ
ವೇದಗಳು ವಿಶ್ವದ ಜ್ಞಾನನಿಧಿ. ಇವುಗಳಲ್ಲಿ ಏನಿವೆ ಏನಿಲ್ಲ ಎಂದು ನಿರ್ಣಯಿಸುವುದು ಸುಲಭವಲ್ಲ. ಪ್ರಾಚೀನ ಮಹರ್ಷಿಗಳ ನಿಸರ್ಗಶೋಧನೆಯಲ್ಲಿ ಹೊಳೆದು ಬಂದ ಸಕಲ ವಿಷಯಗಳೂ ವೇದವಾಙ್ಮಯದಲ್ಲಿ ಮೈದಳೆದಿವೆ. ಐಹಿಕ-ವಾರತ್ರಿಕ, ಲೌಕಿಕ – ಅಲೌಕಿಕ ಜೀವನಗಳ ಸಮಗ್ರ ಪರಿಚಯವನ್ನು ಇವು ಕೊಡುತ್ತವೆ. ಭೌತಿಕ ಜೀವನಕ್ಕಿಂತ, ಆತ್ಮಜೀವನದ ಸೊಬಗನ್ನು ಬಣ್ಣಿಸುವ ಸಾಹಿತ್ಯವಿದ್ದರೆ ಈ ಪ್ರಪಂಚದಲ್ಲಿ ವೇದವೊಂದೇ. ವೇದಮಾತೆಯೇ ತಿಳಿಸುವಂತೆ ಸಾ ಹಿ ಶ್ರೀರಮೃತಾ ಸತಾಂ – ಸಜ್ಜನರ ಅಮೃತಮಯವಾದ ಸಂಪತ್ತು ವೇದ.

ವೇದರಾಶಿಯು ಅನಂತವಾದುದು. ಸಾವಿರಾರು ಶಾಖೆಗಳಲ್ಲಿ ತನ್ನನ್ನು ಹರಡಿಕೊಂಡು ವಿಶಾಲವಾಗಿ ಹಬ್ಬಿರುವ ಸಾಹಿತ್ಯ ಹಂದರವಿದು. ಭರದ್ವಾಜರು ದೇವೇಂದ್ರನಿಂದ ನಾಲ್ಕು ಪುರುಷಾಯುಷ್ಯಗಳನ್ನು ವರವಾಗಿ ಪಡೆದು ಅಧ್ಯಯನವನ್ನು ಮುಂದುವರಿಸಿದ್ದರು. ಪಡೆದದ್ದು ನಾಲ್ಕು ಪರ್ವತಗಳಿಂದ ನಾಲ್ಕು ಹಿಡಿಗಳಷ್ಟು ಮಾತ್ರ ಎಂಬ ಕಥೆಯ ಮೂಲಕ ಶ್ರುತಿಯು ತನ್ನ ವೈಶಾಲ್ಯ ಮತ್ತು ಗಾಢತೆಯನ್ನು ಪರಿಚಯಿಸಿಕೊಡುತ್ತದೆ. ಇಂಥ ವೇದವಾಙ್ಮಯವನ್ನು ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ ಎಂಬ ನಾಲ್ಕು ಪ್ರಕಾರಗಳಲ್ಲಿ ಅಧ್ಯಯನ ಮಾಡಬಹುದಾಗಿದೆ.

ವೇದದ ಅಂಗಗಳು ಆರು. ಶಿಕ್ಷಾ, ಕಲ್ಪ, ವ್ಯಾಕರಣ, ಛಂದಸ್, ನಿರುಕ್ತ ಮತ್ತು ಜ್ಯೋತಿಷ್ಯ. ಮನುಷ್ಯನ ದೇಹವು ಕಣ್ಣು, ಕಿವಿ, ಕೈ, ಕಾಲು ಮೊದಲಾದ ಅನೇಕ ಅಂಗೋಪಾಂಗಗಳಿಂದ ಹೇಗೆ ರಚಿಸಲ್ಪಟ್ಟು, ಅವುಗಳಿಂದ ಪ್ರತಿಯೊಂದು ಚಟುವಟಿಕೆಯಲ್ಲಿಯೂ ಉಪಕಾರವನ್ನು ಪಡೆಯುತ್ತದೆಯೋ, ಹಾಗೆ ವೇದವು ಶಿಕ್ಷಾ, ಕಲ್ಪ ಮುಂತಾದ ಅಂಗಗಳಿಂದ ಕೂಡಿದ್ದು ಅವುಗಳಿಂದ ಉಪಕಾರವನ್ನು ಹೊಂದಿಯೆ ಸಕಲ ಜೀವಿಗಳಿಗೆ ಅನುಗ್ರಾಹಕವಾದ ವಾಙ್ಮಯವಾಗಿದೆ. ವೇದ ಅಂಗಿ-ಉಪಕಾರ್ಯ. ಶಿಕ್ಷಾದಿಗಳು ಅಂಗಗಳು- ಉಪಕಾರಕಗಳು. ಆದುದರಿಂದ ಅವುಗಳ ಸಂಬಂಧ ಅಂಗಾಂಗಿಭಾವ-ಉಪಕಾರ್ಯೋಪಕಾರಕ ಭಾವ. ಈ ಸಂಬಂಧವನ್ನು ರೂಪಕವಿಧಾನದಿಂದ ಪ್ರಾಚೀನರು ಹೀಗೆ ಚಿತ್ರಿಸಿದ್ದಾರೆ.

ಛಂದಃ ಪಾದೌ ತು ವೇದಸ್ಯ ಹಸ್ತೌ ಕಲ್ಪೋsಥ ಕಥ್ಯತೇ |
ಜ್ಯೋತಿಷಾಮಯನಂ ನೇತ್ರಂ ನಿರುಕ್ತಂ ಶ್ರೋತ್ರಮುಚ್ಯತೇ ||೧||

ಶಿಕ್ಷಾ ಘ್ರಾಣಂ ತು ವೇದಸ್ಯ ಮುಖಂ ವ್ಯಾಕರಣಂ ಸ್ಮೃತಮ್ |
ತಸ್ಮಾತ್ಸಾಂಗಮಧೀತೈವ ಬ್ರಹ್ಮಲೋಕೇ ಮಹೀಯತೇ ||೨||

ದೇಹಕ್ಕೂ, ದೇಹಿಗೂ ಕೈಗಳು ಮಾಡುವ ಉಪಕಾರವನ್ನು ಕಾಲ್ಗಳು ಮಾಡಲಾರವು. ಹಾಗೆಯೆ ಕಾಲುಗಳಿಂದ ಸಿಗುವ ಸಹಕಾರ ಕೈಗಳಿಂದ ಸಾಧ್ಯವಿಲ್ಲ. ಕಂಗಳು ಉಪಕರಿಸುವ ಬಗೆ ಬೇರೆ. ಕಿವಿಗಳಿಂದ ದೊರೆಯುವ ಸಹಾಯ ಇನ್ನೊಂದು ರೀತಿಯದು. ವಿವಿಧ ಅವಯವಗಳ ಮತ್ತು ಇಂದ್ರಿಯಗಳ ಉಪಯೋಗ ಪ್ರತ್ಯೇಕ ಪ್ರತ್ಯೇಕವಾಗಿದ್ದರೂ ಅಂಗಿಗೆ ಅವು ಅನಿವಾರ್ಯ. ಒಂದರಿಂದ ಇನ್ನೊಂದು ಗತಾರ್ಥವಲ್ಲ. ಹೀಗೆಯೇ ವೇದ ವೇದಾಂಗಗಳ ಸಂಬಂಧವೂ ಗಾಢವಾಗಿ ಬೆಸೆದುಕೊಂಡಿದೆ. ವೇದವಾಙ್ಮಯದ ಒಳಹೊಕ್ಕು ಕಂಡವರಿಗೆ ಈ ಸಂಬಂಧದ ಗಾಢತೆ ಗೋಚರಿಸದೆ ಇರದು. ವೇದಪುರುಷನ ಘ್ರಾಣ (ಮೂಗು) ಶಿಕ್ಷಾ. ಉಸಿರಾಟಕ್ಕೆ ಮೂಗು ಬೇಕು. ಪಸರಿಸುವ ಪರಿಮಳವನ್ನು ಸೇವಿಸಲು ಮೂಗು ಬೇಕು. ಹಾಗೆ ವೇದಪುರುಷನ ಬಾಳಾಟಕ್ಕೆ ಅನಿವಾರ್ಯವಾದ ಉಸಿರಾಟಕ್ಕೆ ಊಟೆಯಾಗಿದೆ ಶಿಕ್ಷಾಶಾಸ್ತ್ರ. ತೈತ್ತೀರಿಯದಲ್ಲಿ ಹೀಗೆ ಹೇಳಿದೆ.

ಅಥ ಶಿಕ್ಷಾಂ ವ್ಯಾಖ್ಯಾಸ್ಯಾಮಃ |ವರ್ಣಃ ಸ್ವರಃ | ಮಾತ್ರಾ ಬಲಂ | ಸಾಮ ಸಂತಾನಃ …… ಇತ್ಯುಕ್ತಃ ಶೀಕ್ಷಾಧ್ಯಾಯಃ ||

ಹೀಗೆ ಶಿಕ್ಷಾ ವೇದ ಘಟಕವೂ, ವೇದಾಂಗವು ಆಗಿದೆ.

೨.  ಶಿಕ್ಷಾಶಬ್ದಾರ್ಥ
“ಶಿಕ್ಷವಿದ್ಯೋಪಾದನೇ” ಎಂಬ ಧಾತುವಿನಿಂದ ಶಿಕ್ಷಾಪದವು ನಿಷ್ಪನ್ನವಾಗಿದೆ. ವಿದ್ಯೋಪಾದಾನ ವಿದ್ಯೆಯನ್ನು ಪಡೆಯುವುದು. ವಿದ್ಯೆಯನ್ನು ಸಮೀಪದಿಂದ ತೆಗೆದುಕೊಳ್ಳುವುದು. ವಿದ್ಯೆಯ ಆದಾನ ಪ್ರದಾನಗಳು ಗುರುವಿನ ಸನಿಹದಲ್ಲಿ ನಡೆಯಬೇಕಿದ್ದರೆ ಉಚ್ಚಾರಣೆಯಿಂದ ಉಚ್ಚಾರಣೆಯ ಮೂಲಕ. ಈ ಸಂಗತಿಯಿಂದ ಪ್ರಾಯಶಃ ಶಿಕ್ಷಾ ಶಬ್ದವನ್ನು ಉಚ್ಚಾರಣೆಯ ವಿಧಿವಿಧಾನ ಎಂಬ ಅರ್ಥದಲ್ಲಿ ಬಳಸಿರಬಹುದು.

ಶಿಕ್ಷಾ ಎಂದರೆ ವರ್ಣೋಚ್ಚಾರಣ ವಿಧಿ. ಆದುದರಿಂದ  ಪಾಣಿನೀಯ ಶಿಕ್ಷಾಗ್ರಂಥದಲ್ಲಿ ಪ್ರತಿಜ್ಞಾವಾಕ್ಯವನ್ನು ಹೀಗೆ ರಚಿಸಲಾಗಿದೆ.

ಪ್ರಸಿದ್ಧಮಪಿ ಶಬ್ದಾರ್ಥಮವಿಜ್ಞಾತಮಬುದ್ಧಿಭಿಃ |
ಪುನರ್ವ್ಯಕ್ತೀಕರಿಷ್ಯಾಮಿ ವಾಚಉಚ್ಚಾರಣೇ ವಿಧಿಮ್ ||

ವಾಗುಚ್ಚಾರಣ ವಿಧಿ ಎಂದರೆ ವರ್ಣೋಚ್ಚಾರಣ ಪ್ರಕಾರ ಎಂದರ್ಥ. ಶಿಕ್ಷೆ ಎಂಬ ಪದದಿಂದ ದಂಡನೆ ಎಂಬ ಅರ್ಥವನ್ನು ತಿಳಿಸಲಾಗುವುದು. ಇದು ಪ್ರಾದೇಶಿಕ ಭಾಷೆಗಳಲ್ಲಿ ಹೆಚ್ಚು ರೂಢವಾಗಿದೆ.

೩. ಶಿಕ್ಷಾಶಾಸ್ತ್ರದ ವಿಷಯ
‘ಶಿಕ್ಷಾ ವರ್ಣೋಚ್ಚಾರಣವಿಧಿಃ’ ಎಂದು ಹೇಳಿದೆಯಷ್ಟೆ. ಈ ವಿವರಣೆಯಲ್ಲಿ  1.ವರ್ಣ 2.ಉಚ್ಚಾರಣೆ 3.ಅದರ ಪ್ರಕ್ರಿಯೆ ಎಂಬ ಮೂರು ಪ್ರಧಾನವಾದ ಅಂಶಗಳಿವೆ. ವರ್ಣವೆಂದರೇನು ? ಅದರ ಲಕ್ಷಣಗಳೇನು ? ಅದು ಎಷ್ಟು ವಿಧವಾಗಿದೆ. ಭಾಷೆಯಲ್ಲಿ ಅದರ ಉಪಯೋಗ ಹೇಗೆ ? ಇತ್ಯಾದಿ ಮೊದಲನೆ ಅಂಶಕ್ಕೆ ಸಂಬಂಧಿಸಿದ ಜಿಜ್ಞಾಸೆಯಾದರೆ, ಉಚ್ಚಾರಣೆ ಎಂದರೆ ವರ್ಣಗಳ ಉತ್ಪತ್ತಿಯೇ ಅಥವಾ ಅಭಿವ್ಯಕ್ತಿಯೇ ? ಎಂಬುದು ಎರಡನೆ ಅಂಶಕ್ಕೆ ಸಂಬಂಧಿಸಿದ ಚರ್ಚೆ. ಉಚ್ಚಾರಣೆ ಪ್ರಕ್ರಿಯೆ ಹೇಗೆ ? ಸ್ಥಾನಕರಣ ಪ್ರಯತ್ನಗಳ ಮಹತ್ವ ಉಚ್ಚಾರಣೆಯಲ್ಲಿ ಎಷ್ಟಿದೆ ? ಪಾಠಗುಣಗಳು ಯಾವುವು? ಪಾಠದೋಷಗಳು ಯಾವುವು, ಎಷ್ಟು ? ಅವುಗಳ ನಿವಾರಣೆಗೆ  ಉಪಾಯಗಳೇನು ಇತ್ಯಾದಿ ಪ್ರಶ್ನೆಗಳನ್ನು ಮೂರನೆಯ ಅಂಶದಲ್ಲಿ ಉತ್ತರಿಸಲಾಗುವುದು. ಹೀಗೆ ವರ್ಣಗಳು ಮತ್ತು ಅವುಗಳ ಕ್ರಮಬದ್ಧವಾದ ಉಚ್ಚಾರಣೆ ಈ ಶಾಸ್ತ್ರದ ವಿಷಯವಾಗಿದೆ.

೪.  ವರ್ಣವೆಂದರೇನು ?
ವರ್ಣ ಎಂಬುದು ನಾನಾ ಅರ್ಥಗಳನ್ನು ತಿಳಿಸುವ ಪದ. ಬ್ರಾಹ್ಮಣ ಮುಂತಾದ ಸಾಮಾಜಿಕ ವರ್ಗವನ್ನು ಈ ಪದವು ಸಂಕೇತಿಸುತ್ತದೆ. ವರ್ಣಶಬ್ದಕ್ಕೆ ಬಣ್ಣ ಎಂಬ ಅರ್ಥವಂತೂ ಪ್ರಸಿದ್ಧವಾಗಿದೆ. ಈ ಶಾಸ್ತ್ರದ ಸೀಮೆಯಲ್ಲಿ ಭಾಷಿಕ ಶಬ್ದದ ಮೂಲರೂಪವನ್ನು ವರ್ಣಪದವು ಬೋಧಿಸುತ್ತದೆ. ವರ್ಣ ವಿಸ್ತಾರೇ ಎಂಬ ಧಾತುವಿನಿಂದ ಈ ಶಬ್ದವು ನಿಷ್ಪನ್ನವಾಗಿರುವುದರಿಂದ ವರ್ಣಶಬ್ದದಿಂದ ಶಬ್ದದ ಮೂಲ ಘಟಕವನ್ನು ತಿಳಿಸುವುದು ಸಹಜವಾಗಿದೆ. ವಕ್ತಾ ತನ್ನ ಆಶಯವನ್ನು ಯಾವುದರಿಂದ ವರ್ಣಿಸುತ್ತಾನೋ, ಬಣ್ಣಿಸುತ್ತಾನೋ, ಹೊರಗಿಟ್ಟು ವಿಸ್ತರಿಸುತ್ತಾನೋ, ಅದೇ ವರ್ಣ. ಹೀಗೆ ಧ್ವನ್ಯಂಗಗಳ ಮೂಲಕ (ವಕ್ತಾ ಆಶಯವನ್ನು ಹೊರಗೆಡಗುವಾಗ ) ಪ್ರಕಟಗೊಂಡ ಶಬ್ದದ ಮೂಲರೂಪವನ್ನು ವರ್ಣವೆಂದು ಶಾಸ್ತ್ರಕಾರರು ಗುರುತಿಸುತ್ತಾರೆ. ವರ್ಣಪದದ ವ್ಯುತ್ಪತ್ತಿ ಮತ್ತು ಪ್ರಯೋಗಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಭಾಷೆಯ ಉತ್ಪತ್ತಿ, ಸ್ವರೂಪ ಹಾಗೂ ಪ್ರಯೋಜನಗಳನ್ನು ಚೆನ್ನಾಗಿ ಅಧ್ಯಯನ ಮಾಡಬಹುದಾಗಿದೆ.

ವರ್ಣಗಳೆಷ್ಟು ?

ಬೇರೆ ಬೇರೆ ಭಾಷೆಗಳಲ್ಲಿ ಬೇರೆ ಬೇರೆ ಸಂಖ್ಯೆಯ ವರ್ಣಗಳನ್ನು ಭಾಷಾ ವಿಜ್ಞಾನಿಗಳು ಗುರುತಿಸಿದ್ದಾರೆ. ಶಿಕ್ಷಾಶಾಸ್ತ್ರವು ನಿರೂಪಿಸುವಂತೆ ವೈದಿಕ ಮತ್ತು ಲೌಕಿಕ ಮುಖಗಳಿಂದ ಸಂಸ್ಕೃತ ಭಾಷೆಯಲ್ಲಿ ಅರವತ್ತನಾಲ್ಕು (೬೪) ವರ್ಣಗಳಿವೆ. ಕೆಲವರ ಅಭಿಪ್ರಾಯದಂತೆ ಅವುಗಳ ಸಂಖ್ಯೆ ಅರವತ್ತಮೂರು (೬೩).

“ತ್ರಿಷಷ್ಟಿಃ ಚತುಷ್ಪಷ್ಟಿರ್ವಾ ವರ್ಣಾಃ ಶಂಭುಮತೇ ಮತಾಃ |”

ವರ್ಣಗಳು ಅರವತ್ತನಾಲ್ಕು. ಸ್ವರಗಳು ಇಪ್ಪತ್ತೆರಡು, ವರ್ಗೀಯ ವ್ಯಂಜನಗಳು. ಇಪ್ಪತ್ತೈದು, ಅವರ್ಗೀಯ ವ್ಯಂಜನಗಳು ಎಂಟು, ಯಮವರ್ಣಗಳು ನಾಲ್ಕು, ಅನುಸ್ವಾರ ವಿಸರ್ಗಗಳು ಎರಡು, ಉಪಧ್ಯಾನೀಯ ಹಾಗೂ ಜಿಹ್ವಾಮೂಲೀಯಗಳು ಎರಡು, ಹೀಗೆ ಅರವತ್ಮೂರು. ಅನುಸ್ವಾರದಲ್ಲಿ ಎರಡು ಪ್ರಬೇಧಗಳನ್ನು ಕಲ್ಪಿಸಿ ಒಟ್ಟು ಅರವತ್ತನಾಲ್ಕು ವರ್ಣಗಳು ಎಂದು ಪಾಣಿನೀಯ ಶಿಕ್ಷೆಯಲ್ಲಿ ವಿಸ್ತಾರವಾದ ವಿವರಣೆಯಿದೆ.

ಈ ವರ್ಣಗಳನ್ನು ಉದಾತ್ತಾದಿ ಸ್ವರಗಳಿಂದ, ಏಕಮಾತ್ರಾದಿ ಕಾಲದಿಂದ, ಕಂಠಾದಿ ಸ್ಥಾನಗಳಿಂದ, ಸ್ಪೃಷ್ಟಾದಿ ಆಭ್ಯಂತರ ಪ್ರಯತ್ನಗಳಿಂದ ಮತ್ತು ಬಾಹ್ಯ ಪ್ರಯತ್ನಗಳಿಂದ ಐದು ಪ್ರಭೇದಗಳಲ್ಲಿ ವರ್ಗೀಕರಿಸುತ್ತಾರೆ.

ವರ್ಣೋಚ್ಚಾರಣೆಯೆಂದರೇನು ?

ವರ್ಣವೆಂದರೆ ಶಬ್ದವೆ. ಶಬ್ದ ನಿತ್ಯ ದ್ರವ್ಯ. ಇದಕ್ಕೆ ಉತ್ಪತ್ತಿ ವಿನಾಶಗಳಿಲ್ಲ. ಎಂದು ಕೆಲವರ ಮತ. ಶಬ್ದವು ಅನಿತ್ಯವಾದ ಆಕಾಶ ಗುಣ ಎಂದು ಕೆಲವು ದಾರ್ಶನಿಕರ ಅಭಿಪ್ರಾಯ. ಶಬ್ದನಿತ್ಯತ್ವವಾದಿಗಳ ದೃಷ್ಟಿಯಲ್ಲಿ ವರ್ಣೋಚ್ಚಾರಣೆ ಎಂದರೆ ಸೂಕ್ಷ್ಮವಾಗಿರುವ ವರ್ಣಗಳು ಅಭಿವ್ಯಕ್ತವಾಗುವ – ಕಿವಿಗೆ ಕೇಳಿ ಬರುವಂತೆ ಪ್ರಕಟಗೊಳ್ಳುವ ಪ್ರಕ್ರಿಯೆ. ಶಬ್ದ ಅನಿತ್ಯತ್ವವಾದಿಗಳ ಅಭಿಮತದಂತೆ ಅದು ವರ್ಣಗಳು ಹೊಸದಾಗಿ ಹುಟ್ಟಿಕೊಳ್ಳುವ ಪ್ರಕ್ರಿಯೆಯಾಗಿದೆ. ಈ ಎರಡು ದಾರ್ಶನಿಕ ಅಭಿಪ್ರಾಯಗಳಿಗೆ ವಿರೋಧವಿಲ್ಲದಂತೆ ವರ್ಣೋಚ್ಚಾರಣೆಯ ಪ್ರಕ್ರಿಯೆಯನ್ನು ಪಾಣಿನೀಯ ಶಿಕ್ಷಾಗ್ರಂಥವು ಅತ್ಯಂತ ಸುಂದರವಾಗಿ, ಅತ್ಯಂತ ಗಾಢವಾಗಿ ನಿರೂಪಿಸುತ್ತಿದೆ.

ಆತ್ಮಾ ಬುದ್ಥ್ಯಾ ಸಮೇತ್ಯರ್ಥಾನ್ ಮನೋ ಯುಂಕ್ತೇ ವಿವಕ್ಷಯಾ |
ಮನಃ ಕಾಯಾಗ್ನಿಮಾಹಂತಿ ಸ ಪ್ರೇರಯತಿ ಮಾರುತಮ್ ||೬||

ಸೋದಿರ್ಣೋ ಮೂರ್ಧ್ನ್ಯಭಿಹತೋ ವಕ್ತ್ರಮಾಪದ್ಯ ಮಾರುತಃ |
ವರ್ಣಾನ್ ಜನಯತೇ ತೇಷಾಂ ವಿಭಾಗಃ ಪಂಚಧಾ ಸ್ಮೃತಃ ||೬||

“ತನ್ನ ಬುದ್ಧಿಯಿಂದ ವಸ್ತುವನ್ನು ಗ್ರಹಿಸಿ, ಅದನ್ನು ಇನ್ನೊಬ್ಬನಿಗೆ ಹೇಳುವ ಹಂಬಲದಿಂದ ವಕ್ತೃವು ಮನಸ್ಸನ್ನು ಪ್ರೇರೇಪಿಸುತ್ತಾನೆ. ಹೀಗೆ ಆತ್ಮಪ್ರೇರಿತವಾದ ಮನಸ್ಸು ಜಠರಾಗ್ನಿಯನ್ನು ಎಚ್ಚರಿಸುತ್ತದೆ. ಅದು ಅಲ್ಲಿರುವ (ಪ್ರಾಣ) ವಾಯುವನ್ನು ಪ್ರಬೋಧಗೊಳಿಸುತ್ತದೆ. ಮೇಲ್ಮುಖವಾಗಿ ಹೊರಟ ವಾಯುವು ಮೂರ್ಧ ಸ್ಥಾನದಲ್ಲಿ ಬಡಿಯಲ್ಪಟ್ಟು ಮುಖಕ್ಕೆ ಬಂದು ವರ್ಣಗಳನ್ನು ಉತ್ಪತ್ತಿ ಮಾಡುತ್ತದೆ.”

ವರ್ಣಾಭಿವ್ಯಕಿಯ ಈ ಪ್ರಕ್ರಿಯೆಯು ಕ್ರಮವಾಗಿ,ಸುಂದರವಾಗಿ ವರ್ಣಿಸಲ್ಪಟ್ಟಿದ್ದರೂ ಇದನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲಾರೆವು. ಯೋಗಶಾಸ್ತ್ರದ ಪರಿಚಯ ಮತ್ತು ಅನುಭವಗಳಿದ್ದರೆ ಈ ಮಾತುಗಳು ದಿಗ್ದರ್ಶನ ಮಾಡಬಲ್ಲವು. ವೈಜ್ಞಾನಿಕ ಪ್ರಯೋಗಗಳಿಂದ ಇದನ್ನು ಪರೀಕ್ಷೆ ಮಾಡಿ ಒಪ್ಪಿಕೊಳ್ಳಬೇಕಾದ ಅಗತ್ಯವಿದೆ.

ಸ್ಥಾನ,ಕರಣ, ಪ್ರಯತ್ನಗಳು ಯಾವುವು ?

ವರ್ಣಗಳು ಪ್ರಕಟಗೊಳ್ಳುವ ಸ್ಥಳವನ್ನು “ಸ್ಥಾನ” ಎಂದು ಹೆಸರಿಸುತ್ತಾರೆ. ವರ್ಣೋತ್ಪತ್ತಿಯ ಸ್ಥಾನಗಳು ಎಂಟು. ಅವು ಉರಸ್ (ಹೊಟ್ಟೆ), ಕಂಠ, ಮೂರ್ಧಾ, ಜಿಹ್ವಾಮೂಲ (ಕಿರುನಾಲಗೆ), ದಂತ, ನಾಸಿಕಾ, ಓಷ್ಠ (ತುಟಿ) ಮತ್ತು ತಾಲು (ದಂತಮೂಲ).

  ಅಷ್ಟೌ ಸ್ಥಾನಾನಿ ವರ್ಣಾನಾಮುರಃ ಕಂಠಃ ಶಿರಸ್ತಥಾ |
ಜಿಹ್ವಾಮೂಲಂ ಚ ದಂತಾಶ್ಚ ನಾಸಿಕೋಷ್ಠೌ ಚ ತಾಲು ಚ ||

ಈ ಎಂಟು ಸ್ಥಾನಗಳಿಂದ ಹಿಂದೆ ತಿಳಿಸಿದ ಅರವತ್ತು ನಾಲ್ಕು ವರ್ಣಗಳೂ ಅಭಿವ್ಯಕ್ತವಾಗುತ್ತವೆ. ಕರಣ ಎಂದರೆ ಅಂತಃಕರಣ ಅಥವಾ ಆಭ್ಯಂತರ ಯತ್ನ. ಇದು ನಾಲ್ಕು ವಿಧವಾಗಿದ್ದು, ವರ್ಣೋತ್ಪತ್ತಿಯ ಕೊಂಚ ಮೊದಲು (ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ತಿಳಿಯುವುದು) ಕಾರ್ಯವನ್ನು ಎಸಗುತ್ತದೆ. ಸ್ಪೃಷ್ಟ, ಈಷತ್ ಸ್ಪೃಷ್ಟ, ವಿವೃತ ಮತ್ತು ಸಂವೃತ ಇವು ನಾಲ್ಕು ಬಗೆಗಳು.

ಪ್ರಯತ್ನ ಎಂದರೆ ಬಾಹ್ಯಯತ್ನಗಳು. ಇವು ಧ್ವನ್ಯಂಗಗಳಲ್ಲಿ ಹೊರಮುಖವಾಗಿ ಕಾಣಿಸಿಕೊಳ್ಳುವಂಥವು. ಇವು ಹನ್ನೊಂದು ವಿಧವಾಗಿವೆ. ಇವು ವಿಹಾರ, ಸಂವಾರ, ಶ್ವಾಸ, ನಾದ, ಘೋಷ, ಅಘೋಷ, ಅಲ್ಪಪ್ರಾಣ, ಮಹಾಪ್ರಾಣ, ಉದಾತ್ತ, ಅನುದಾತ್ತ ಮತ್ತು ಸ್ವರಿತ.

ವರ್ಣೋಚ್ಚಾರಣೆಯಲ್ಲಿ ಗುಣದೋಷಗಳು ಯಾವುವು?

ವರ್ಣೋಚ್ಚಾರಣೆಯಲ್ಲಿ ಸಂಭವಿಸುವ ದೋಷಗಳನ್ನು ನಿವಾರಿಸಿ ಗುಣಗಳನ್ನು ಆಧಾನ ಮಾಡುವುದೇ ಶಿಕ್ಷಾಶಾಸ್ತ್ರದ ಪ್ರಧಾನ ಉದ್ದೇಶವಾಗಿದೆ. ಪ್ರಗೀತ, ಶೈಘ್ರ್ಯ, ಶಿರಃಕಂಪಾದಿ ಚೇಷ್ಟೆ, ಅಲ್ಪಕಂಠ, ಕಾಕಸ್ವರ, ಶಿರಸಿಗತ ಮುಂತಾದ ಅನೇಕ ದೋಷಗಳು ಸಂಭವಿಸುತ್ತವೆ. ಅವುಗಳನ್ನು ಯತ್ನಪೂರ್ವಕವಾಗಿ ನಿವಾರಿಸಬೇಕು. ಮಾಧುರ್ಯ, ಅಕ್ಷರವ್ಯಕ್ತಿ, ಸ್ಫುಟತ್ವ, ಧೈರ್ಯ, ಲಯಸಾಮರ್ಥ್ಯ ಮುಂತಾದ ಪಾಠಗುಣಗಳನ್ನು ಸಂಪಾದಿಸಿಕೊಳ್ಳಬೇಕು.

ವರ್ಣೋಚ್ಚಾರಣೆಯನ್ನು ಮಾಡುವಾಗ ತೆಗೆದುಕೊಳ್ಳಬೇಕಾದ ಜಾಗೃತಿಯ ಬಗ್ಗೆ ಶಾಸ್ತ್ರವು ಸೊಗಸಾದ ದೃಷ್ಟಾಂತವನ್ನು ಹೀಗೆ ನೀಡಿದೆ.

ವ್ಯಾಘ್ರೀ ಯಥಾ ಹರೇತ್ಪುತ್ರಾನ್ ದಂಷ್ಟ್ರಾಭ್ಯಾಂ ನ ಚ ಪೀಡಯೇತ್ |
ಭೀತಾ ಪತನಭೇದಾಭ್ಯಾಂ ತದ್ವದ್ವರ್ಣಾನ್ ಪ್ರಯೋಜಯೇತ್ ||

ಹೆಣ್ಣು ಹುಲಿಯು ತನ್ನ ಮರಿಗಳನ್ನು ಬಾಯಲ್ಲಿ ಕಚ್ಚಿಕೊಂಡು ಸ್ಥಳದಿಂದ ಸ್ಥಳಕ್ಕೆ ಸಾಗಿಸುತ್ತದೆ. ಹಲ್ಲನ್ನು ಮೃದುವಾಗಿ ನಾಟಿಸಿದರೆ ಮರಿಯು ಬೀಳುವ ಭಯ. ಬಲವಾಗಿ ಕಚ್ಚಿಹಿಡಿದರೆ ಗಾಯವಾಗುವ ಹೆದರಿಕೆ. ಆದರೂ ಹುಲಿಯು ನೈಸರ್ಗಿಕವಾದ ವಿವೇಚನೆಯಿಂದ ಮರಿಗಳನ್ನು ಹಲ್ಲುಗಳಲ್ಲಿ ಕಚ್ಚಿಹಿಡಿದುಕೊಂಡೇ ಸಾಗಿಸುತ್ತದೆ. ಇದರಂತೆ ವರ್ಣಗಳನ್ನು ಉಚ್ಚರಿಸಬೇಕು, ಎಚ್ಚರಿಕೆಯಿಂದ.

ಶಿಕ್ಷಾಶಾಸ್ತ್ರದ ಈ ಮುತುವರ್ಜಿ ಬೆರಗುಗೊಳಿಸುವಂಥಹುದು.

  ೬. ವರ್ಣೋಚ್ಚಾರಣೆ ಕೆಲವು ಸಮಸ್ಯೆಗಳು

ಶಿಕ್ಷಾಗ್ರಂಥಗಳು ಹಾಗೂ ಪ್ರಾತಿಶಾಖ್ಯಗಳು ಸಂಸ್ಕೃತಭಾಷೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ಉಚ್ಚಾರಣ ಸಂಪ್ರದಾಯವು ಅವಿಚ್ಛಿನ್ನವಾಗಿ ನಮ್ಮ ದೇಶದಲ್ಲಿ ಮುಂದುವರಿದುಕೊಂಡು ಬಂದಿದೆ. ಆದರೂ ಸಂಸ್ಕೃತ ಭಾಷೆಯ ಮಾದರಿ ಉಚ್ಚಾರಣೆ ಯಾವುದು ಎಂದು ಗುರುತಿಸುವುದು ಅತ್ಯಂತ ಕಷ್ಟದ ಸಂಗತಿ. ಎಲ್ಲರ ಮೇಲೂ ಪ್ರಾದೇಶಿಕ ಮಾತೃಭಾಷೆಗಳ ಪ್ರಭಾವ ಗಹನವಾಗಿ ಬಿದ್ದಿರುತ್ತದೆ. ಅದನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ಶತಮಾನಗಳಷ್ಟು ಪ್ರಾಚೀನವಾದುದು. ರಾಜಶೇಖರನೆ ಸ್ವತಃ (೧೦ನೇ ಶತಮಾನ ) ಬೇರೆ ಬೇರೆ ಪ್ರದೇಶಗಳ ಜನರು ಸಂಸ್ಕೃತವನ್ನು ಉಚ್ಚರಿಸುವ ಭಂಗಿಗಳನ್ನು ಉಪಹಾಸ್ಯ ಮಾಡಿ ವಿಮರ್ಶೆ ಮಾಡಿದ್ದಾನೆ. ನಮ್ಮ ರಾಷ್ಟ್ರದಲ್ಲಿ ಈ ದೃಷ್ಟಿಯಿಂದ ಸಂಸ್ಕೃತ ಭಾಷೆಯ ಸಮಗ್ರವಾದ ಆದರ್ಶ ಉಚ್ಚಾರಣೆಯ ಬಗ್ಗೆ ಚಿಂತನ ಮಂಥನಗಳು ಜರುಗಿಸಲ್ಪಡಬೇಕಾಗಿವೆ.

೬.ಉಪಸಂಹಾರ

ಶಿಕ್ಷಾಶಾಸ್ತ್ರದ ಸೀಮೆಯಲ್ಲಿ ಸಂಶೋಧನಾತ್ಮಕವಾದ ಅಧ್ಯಯನವನ್ನು ಕೈಗೆತ್ತಿಕೊಳ್ಳಲು ಹಲವು ಅವಕಾಶಗಳು ತೆರೆದುಕೊಂಡಿವೆ. ಆದುದರಿಂದ ಭಾಷಾವಿಜ್ಞಾನಿಗಳೂ, ಶಿಕ್ಷಾ ಪ್ರಾತಿಶಾಖ್ಯ ಪಂಡಿತರೂ, ವಿಜ್ಞಾನಿಗಳೂ ಒಂದೆಡೆ ಸೇರಿ ವಿಚಾರ ವಿಮರ್ಶೆಗಳಿಂದ ನೂರಾರು ವರ್ಷಗಳ ಕಾಲ ಚಿಂತಕರನ್ನು ಕಾಡುತ್ತಿರುವ ಮೂಲಭೂತ ಪ್ರಶ್ನೆಗಳನ್ನು ಹಿಂಜಲು ಪ್ರಯತ್ನಿಸುವುದು ವರ್ತಮಾನದ ಆವಶ್ಯಕತೆ ಎಂಬುದು ಸ್ಫುಟವಾದ ಸಂಗತಿ. ಈ ದೃಷ್ಟಿಯಿಂದ ಚಿಂತನ ಮಂಥನಗಳು ಹೆಚ್ಚಿ ಕಾಲದ ಕರೆ ಸಾರ್ಥಕವಾಗಲಿ ಎಂದು ಹಾರೈಸುತ್ತೇನೆ.

               *************************

Facebook Comments