ಮಾತೃ ಸ್ವರೂಪಿಗೆ ಮನದ ನಮನಗಳು…
ಮಾತೃ ಸ್ವರೂಪಿ  ಶ್ರೀ ಗುರುಗಳ ಚರಣ ಕಮಲಗಳಲ್ಲಿ ಮನಸಾ ನಮನಗಳು.
ಹರೇರಾಮದ ಸಮ್ಮುಖದಲ್ಲಿ, ಸಂಸ್ಥಾನದ ಸಮ್ಮುಖದಲ್ಲಿ, ಓದುವ ಸಮಸ್ತ ಬಾಂಧವರಿಗೆ ನನ್ನ ಪ್ರಣಾಮಗಳು.

ಇಲ್ಲಿ ಬರೆಯಲು ಸಿಗುತ್ತಿರುವುದು ನನ್ನ ಪೂರ್ವಜನ್ಮ  ಸುಕೃತ ಎಂದು ನಾನು ತಿಳಿದಿದ್ದೇನೆ.
ಇದು ನನ್ನ ಮನದ ನಮನಗಳು… ದಾರಿ ತೋರಿದ, ದಾರಿ ತೋರುತ್ತಿರುವ, ಸದಾ ಅನುಗ್ರಹಿಸುತ್ತಿರುವ ಶ್ರೀ ಗುರುಗಳ ಚರಣಕಮಲಗಳಿಗೆ..
ಪ್ರೋತ್ಸಾಹಿಸುವ ಸಕಲ ಬಂಧುಗಳು.. ಪ್ರೇರೇಪಿಸುವ ನನ್ನ ತಮ್ಮಂದಿರಾದ ಮಹೇಶ ಮತ್ತು ಪ್ರವೀಣರಿಗೆ ..

ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ |
ಯತ್ರೈತಾಸ್ತು ನ ಪೂಜ್ಯಂತೆ ಸರ್ವಾಸ್ತತ್ರಾ ಫಲಾಃ ಕ್ರಿಯಾಃ ||

ಎಂಬ ನುಡಿಯಂತೆ,ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ಸಂತುಷ್ಟರಾಗುತ್ತಾರೆ. ಎಲ್ಲಿ ಸ್ತ್ರೀಯರನ್ನು ಅಪಮಾನಿಸಲಾಗುತ್ತದೆಯೋ ಅಲ್ಲಿ ಮಾಡಿದ ಕಾರ್ಯಗಳು ವಿಫಲವಾಗುತ್ತವೆ. ಇದು ನಮ್ಮ ದೇಶದಲ್ಲಿ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ.

ವೇದಗಳ ಕಾಲದಿಂದಲೂ ಸ್ತ್ರೀ ಮನೆಯ ಕೇಂದ್ರ ಬಿಂದು ಎಂದೇ ಗುರುತಿಸಿಕೊಂಡವಳು. ಹಿಂದಿನ ಕಾಲದಲ್ಲಿ ಮೈತ್ರೇಯಿ, ಗಾರ್ಗಿಯಂತಹ ವೀರ ಮಹಿಳಾ ಮಣಿಗಳು ಮಹಿಳೆಯರಿಗೆ ಮಾದರಿಯಾಗಿ ನಿಂತಿದ್ದಾರೆ..
ತೊಟ್ಟಿಲು ತೂಗುವ ಕೈ ದೇಶವನ್ನಾಳೀತು ಎಂಬ ಗಾದೆಯಂತೆ ತಮಗೆ ದೊರಕಿದ ಸಂದರ್ಭದಲ್ಲಿ ಸ್ತ್ರೀ ಎಲ್ಲಾ ಎಡರು ತೊಡರುಗಳನ್ನು ಮೀರಿ ನಿಂತು ಪುರುಷರಿಗೆ ಸರಿಸಾಟಿ ನಿಂತ ಉದಾಹರಣೆಗಳು ಇವೆ.
ಸ್ತ್ರೀ ಮಾನಸಿಕವಾಗಿ ಪ್ರಬಲಳು. ಎಲ್ಲಾ ಪರಿಸ್ಥಿತಿಯನ್ನೂ ಸರಿದೂಗಿಸಿಕೊಂಡು ಹೋಗುವ ನೈಪುಣ್ಯ ಅವಳಲ್ಲಿದೆ. ಎಲ್ಲಾ ಸಂದರ್ಭದಲ್ಲಿ ಅವಳದನ್ನು ತೋರ್ಪಡಿಸದಿದ್ದರೂ, ಸಮಯ ಬಂದಾಗ ತನ್ನ ಚಾಕಚಕ್ಯತೆ ಮೆರೆಯುತ್ತಾಳೆ. ಇಂದಿನ ಕಾಲದಲ್ಲಿ ಸ್ತ್ರೀ ಕಾಲಿಡದ ವ್ಯವಸ್ಥೆ ಇಲ್ಲ. ಎಲ್ಲಾ ವ್ಯವಸ್ಥೆಯಲ್ಲಿ, ಎಲ್ಲಾ ಪದವಿಯಲ್ಲಿ  ಮಹಿಳೆ ಸಮರ್ಪಕವಾಗಿ ಶೋಭಿಸುತ್ತಿದ್ದಾಳೆ.

ಇದು ನಮ್ಮ ದೇಶದಲ್ಲಿ  ಮಹಿಳೆಯ ಸ್ಥಾನ ಆದರೆ,  ನಮ್ಮಲ್ಲಿ, ನಮ್ಮ ಸಮಾಜದಲ್ಲಿ  ಅನೇಕ ಮಹಿಳೆಯರ ಪ್ರಾಮುಖ್ಯತೆ  ಕಡಿಮೆಯಾಗಿ ಮನೆಯ ಅಡಿಗೆ ಕೋಣೆಗೆ ಮಾತ್ರ ಸೀಮಿತ ಆಗಿತ್ತು. ಹೊರಗಿನ ಪ್ರಪಂಚ ಜ್ಞಾನ ಹೆಚ್ಚಿಲ್ಲದೆ, ತನ್ನ ಮನೆ, ಮಕ್ಕಳು, ಕುಟುಂಬ ಎಂದು ನಾಲ್ಕು ಗೋಡೆಗಳ ಮಧ್ಯೆ ತನ್ನ ಬದುಕನ್ನು ಕಳೆಯುತ್ತಿದ್ದಳು. ಅದರಲ್ಲೇ ಸಂತೋಷಿಸುತ್ತಿದ್ದಳು ಕೂಡಾ.  ತನ್ನ ಮನೆಯ ಆಸುಪಾಸು ನಾಲ್ಕು ಮನೆ ಬಿಟ್ಟರೆ ಅವಳಿಗೆ ಬೇರೆ ಊರಿನ ಜನರ ಪರಿಚಯ ಇರಲಿಲ್ಲ. ತಮ್ಮ ಸಂಬಂಧಿಕರ ಮನೆ ಬಿಟ್ಟು ಬೇರೆ ಹೋಗುವ ಪರಿಪಾಠವೂ ಇರಲಿಲ್ಲ.
ಆಗ ಆ ಸಮಯಕ್ಕೆ ಕತ್ತಲು ಕಳೆದು ಸೂರ್ಯ ಉದಯಿಸುವಂತೆ ಶ್ರೀ ಗುರುಗಳ ಆಗಮನ. ಒಂದು ಸಮಾಜ ಉದ್ಧಾರ  ಆಗಬೇಕಾದರೆ, ಒಂದು ಮನೆ ಬೆಳಗಬೇಕಾದರೆ  ಆ ಮನೆಯ ಸ್ತ್ರೀ ಬೆಳಗಬೇಕೆನ್ನುವ ಶಾಶ್ವತ ಸತ್ಯವನ್ನು ಮನಗಂಡು, ಎಲ್ಲಾ ಮಹಿಳೆಯರನ್ನು ಒಗ್ಗೂಡಿಸಿ, ಮಾತೃ ಸಂಘಟನೆ ಮಾಡಿದರು. ಕುಂಕುಮಾರ್ಚನೆಯ ಮೂಲಕ ದೇವೀ ಶಕ್ತಿಯನ್ನು ನಮ್ಮಲ್ಲಿ ಜಾಗೃತಗೊಳಿಸಿ, ಮನೆಮಂದಿ ಎಲ್ಲರೂ ಎದ್ದೇಳುವಂತೆ  ಮಾಡಿದರು. ಒಂದು ಘಟಕದಿಂದ ಪ್ರಾರಂಭವಾದ ಸಂಘಟನೆ ಈಗ ‘ವಲಯದವು ನಮ್ಮವ್ವು ‘ ಎಂದು ಆಗಿದೆ ಇನ್ನು ಮುಂದೆ ‘ಎಲ್ಲೋರು ನಮ್ಮವ್ವು’ ಆಗುತ್ತದೆ ಎಂಬ ಭರವಸೆ ನನ್ನದು. ಹಿಂದೆ, ಗ್ರಾಮದ ಯಾವುದೇ ಮನೆಗಳಲ್ಲಿ, ಯಾವುದೇ ಕಾರ್ಯಕ್ರಮ ಇದ್ದರೂ, ಮನೆಯ ಗಂಡು ಮಕ್ಕಳು ಮಾತ್ರವೇ ಕಾರ್ಯಕ್ರಮಗಳಿಗೆ ಹೋಗಿ ಬರುತ್ತಿದ್ದರು. ಗ್ರಾಮದಲ್ಲಿರುವ ಹೆಣ್ಣು ಮಕ್ಕಳಿಗೆ ಒಬ್ಬರಿಗೊಬ್ಬರ ಪರಿಚಯ ಇರಲಿಲ್ಲ. ಈಗ ಏನೇ ಕಾರ್ಯಕ್ರಮ ನಡೆದರೂ, ಮೊದಲಿಗೆ ಒಂದು ಕುಂಕುಮಾರ್ಚನೆ ಮಾಡುವುದು ರೂಢಿಯಾಗಿದೆ.. ಅದು ಮಾತ್ರ ಅಲ್ಲ ಇನ್ನೊಬ್ಬರ ಕಷ್ಟ, ಸುಖಗಳನ್ನು ಅರಿತು ಸಹಾಯ ಮಾಡುವಂತಾಗಿದೆ. ಇದೆಲ್ಲವೂ ಶ್ರೀ ಗುರುಗಳ ಮಹಾನ್ ಚಿಂತನೆಯಿಂದ ಮಾತ್ರ ಸಾಧ್ಯ ಅಲ್ಲವೇ? ಕಳೆದು ಹೋಗಿದ್ದ, ಕುಂದಿ ಹೋಗಿದ್ದ  ಮಹಿಳೆಯ ಸ್ಥಾನಮಾನವನ್ನು ಪುನಃ ಅವಳಲ್ಲಿ, ಅವಳಿಂದಲೇ ಪ್ರಜ್ವಲಿಸುವಂತೆ ಮಾಡಿದವರು ಸಂಸ್ಥಾನ.. ಮನೆ ಮನೆಗಳಲ್ಲಿ ಇಂದು ದೇವರ ದೀಪ ಹೊತ್ತಿಗೆ ಸರಿ ಉರಿಯುತ್ತಿದ್ದರೆ, ಮನೆಯ ಸಂಸ್ಕಾರಗಳು ಕ್ರಮಪ್ರಕಾರವಾಗಿ ನಡೆಯುತ್ತಿದ್ದರೆ ಅದಕ್ಕೆ ಕಾರಣ  ಶ್ರೀಗಳು.. ಇದು ನಮ್ಮ ಪೂರ್ವ ಜನ್ಮದ ಪುಣ್ಯವೇ ಅಲ್ಲವೇ..?

ಎರಡು- ಮೂರು ವರ್ಷ ಕೆಳಗೆ, ಬೆಂಗಳೂರಿನ ಶ್ರೀಮತಿ ಪ್ರಮೀಳಾ ಮುರಳಿಧರ್ ಇವರು ನಮಗೆಲ್ಲಾ ಶ್ರೀ ಸೌಂದರ್ಯ ಲಹರಿ ಸ್ತೋತ್ರವನ್ನು ಕಲಿಸಿದರು.. ನಮಗೆಲ್ಲಾ ಶ್ಲೋಕವೂ, ಅದರ ಅರ್ಥವೂ ಮನದಟ್ಟು ಮಾಡಿಸಿ, ನಾವು ನಿತ್ಯ ಪಠಣ ಮಾಡುವಂತೆ ಪ್ರೇರೇಪಿಸಿದರು.. ಆಗ ಅದರ ಸಮಾಪನವನ್ನು ಹೊಸನಗರದಲ್ಲಿ ನಮ್ಮ ಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸುಮಾರು ಒಂದು ಸಾವಿರ ಮಹಿಳೆಯರು ತಾವೇ ಸ್ವತಃ ಎಲ್ಲಾ ವ್ಯವಸ್ಥೆಯನ್ನೂ ಮಾಡಿಕೊಂಡು ಬಂದುದನ್ನು ನೋಡಿ ಸಂಸ್ಥಾನ ನಿಜಕ್ಕೂ ಖುಷಿ ಪಟ್ಟರು ಅನ್ನಿಸಿತು. ಮಹಿಳಾ ಸಂಘಟನೆ ಮಾಡಿದ್ದುದರ ಸಾರ್ಥಕತೆ ಅಂದು ಕಂಡರೋ ಎಂದು ಅನಿಸಿತು.

ಮನೆಯ ಗೃಹಲಕ್ಷ್ಮಿ ಎಂದು ಮಹಿಳೆಯನ್ನು ಹೇಳಿ ಗೋಮಾತೆಯನ್ನು ವಿಶ್ವದಲಕ್ಷ್ಮಿ ಎಂದು ಜಗತ್ತಿಗೆ ತೋರಿಸಿಕೊಟ್ಟವರು ಶ್ರೀ ಗುರುಗಳು. ಗೋಮಾತೆ ವಿಶ್ವಮಾತೆ, ಸಾಕ್ಷಾತ್ ಲಕ್ಷ್ಮಿಯೇ ಎಂದು ಉದಾಹರಿಸಿ ತೋರಿಸಿದವರು.
ಸಮಾಜದಲ್ಲಿ  ಹೀನಾಯ ಸ್ಥಿತಿಯಲ್ಲಿದ್ದ  ಗೋಮಾತೆಯನ್ನು ಅದಕ್ಕೆ ಸಲ್ಲಬೇಕಾದ ಸ್ಥಾನ ಸಿಗಲು ಮಾಡಿದ ಹೋರಾಟ, ಪಟ್ಟ ಪಾಡು ಎಲ್ಲರಿಗೂ ತಿಳಿದಿರುವುದೇ..  ಈಗ ಜಗತ್ತು ಎದ್ದೇಳುತ್ತಿದೆ.. ಒಂದು ದಿನ ಮನೆಯ ಕೇಂದ್ರ ಸ್ಥಾನವನ್ನು ಗೋಮಾತೆ ಅಲಂಕರಿಸುವ ದಿನ ದೂರವಿಲ್ಲ. ಅಂಥಾ ದಿನ ಬೇಗ ಬರಲಿ. ಇಂಥಾ ಗುರುಗಳನ್ನು ಪಡೆದ ನಾವು ಧನ್ಯರೆ!!!

ಮಹಿಳೆಗೆ ತನ್ನದೇ ಆದ ಕಟ್ಟುಪಾಡು ಇದೆ..
ಆ ಕಟ್ಟುಪಾಡನ್ನು ಎಲ್ಲಾ ಮಹಿಳೆಯೂ ಗೌರವಿಸುತ್ತಾಳೆ. ಮಠದ ಪರಿವಾರವಾಗಿ ಮಹಿಳೆ ಇರಲು ಸಾಧ್ಯವಿಲ್ಲ.. ಆದರೆ, ಪೀಠದ ಮೇಲೆ, ಶ್ರೀ ಗುರುಗಳ ಮೇಲೆ, ಮಠದ ಎಲ್ಲಾ ವ್ಯವಸ್ಥೆಯ ಬಗ್ಗೆ ಗೌರವ, ಭಕ್ತಿ, ವಿಶ್ವಾಸ ಅದು ಪುರುಷರಿಗೆ ಸಮನಾಗಿಯೇ ಇದೆ. ಶ್ರೀ ಪರಿವಾರವನ್ನು ತಮ್ಮ ಪರಿವಾರದಂತೆ ಎಲ್ಲರೂ  ಕಾಣುತ್ತಾರೆ. ಮಹಿಳೆ, ತಾನು ಮಾಡುವ ಎಲ್ಲಾ ಕೆಲಸದಲ್ಲಿಯೂ ದೈವತ್ವವನ್ನು ಕಾಣುವವಳು.  ಅದು ಮನೆ ಕೆಲಸ ಆಗಿರಬಹುದು, ಅಡುಗೆ ಆಗಿರಬಹುದು ಅಥವಾ ಮಠದ ಕೆಲಸ ಆಗಿರಬಹುದು. ತಾನು ಮಾಡುವ ಕೆಲಸವನ್ನು ದೇವರಿಗೆ ಸಮರ್ಪಣೆ ಮಾಡುವುದೇ ಅವಳ ದೊಡ್ಡ ಗುಣ.. ಅದಕ್ಕಾಗಿಯೇ ಅವಳನ್ನು ಸ್ತ್ರೀ ಎನ್ನುವುದು ಅಲ್ಲವೇ?

ಭೂಮಿಯಲ್ಲಿರುವ ಸಕಲ ಜೀವ,ಚರಾಚರ ವಸ್ತುಗಳಿಗೆ ಹೇಗೆ ಸೂರ್ಯ ಒಂದೇ ಹಾಗೆ ತನ್ನ ಬೆಳಕು, ಶಾಖ ಕೊಟ್ಟು ಭೂಮಿಯ ಎಲ್ಲಾ ಆಗು ಹೋಗುಗಳಿಗೆ ಕಾರಣನಾಗುತ್ತಾನೋ.., ಹಾಗೆಯೇ ಶ್ರೀ ಗುರುಗಳು ನಮ್ಮೆಲ್ಲರಿಗೂ, ದೊಡ್ಡ, ಸಣ್ಣ,ಸ್ತ್ರೀ, ಪುರುಷ, ಶ್ರೀಮಂತ, ಬಡವ  ಎಂಬ ತಾರತಮ್ಯ ಇಲ್ಲದೆ ಅವರ ಸಂಪೂರ್ಣ ಆಶೀರ್ವಾದ, ಪ್ರೀತಿಯನ್ನು ಹರಿಸಿ ನಮ್ಮನ್ನು ಪಾವನರಾಗಿಸುತ್ತಾರೆ. ಸೂರ್ಯ ಹೇಗೆ ಎಲ್ಲಾ ಕಡೆ ಎಷ್ಟು ಸಣ್ಣ ಮಾಡಿನ ತೂತಾಗಲಿ, ನದಿ, ಗುಡ್ಡ ಸಾಗರವಾಗಲೀ ಅಥವಾ ಎಷ್ಟೇ ಆಳದ ಕಂದಕದ ಒಳಗೆ ಆದರೂ ತನ್ನ ಕಿರಣಗಳನ್ನು ತನ್ನಿಂದಾದಷ್ಟು ದೂರ ಹಾಯಿಸುತ್ತಾನೆ. ಹಾಗೆಯೇ ಶ್ರೀ ಗುರುಗಳು, ಅವರ ಶ್ರಮ ಮೀರಿ  ನಮ್ಮೊಳಗೇ ಜ್ಞಾನದ ಬೆಳಕು ಹರಿಸಲು ನಾನಾ ವಿಧದಲ್ಲಿ ಪ್ರಯತ್ನಿಸುತ್ತಾರೆ. ಸೂರ್ಯನಿಂದ  ಉಪಯೋಗ ಪಡೆಯುವವರು ಎಲ್ಲಾ ರೀತಿಯಲ್ಲೂ ಸಮಯಕ್ಕೆ ಸರಿಯಾಗಿ ತಮಗೆ ಬೇಕಾದಂತೆ ಸದುಪಯೋಗ ಪಡೆದು ಜೀವನ ನಡೆಸುತ್ತಾರೆ. ಮನೆಯ ಒಳಗೆ, ಭೂಮಿಯ ಒಳಗೆ ಹೋಗಿ ಕುಳಿತರೆ ನಮಗೆ ಸೂರ್ಯ ಸಿಗಲಾರ.  ಹಾಗೆಯೇ, ಶ್ರೀ ಗುರುಗಳ ಅಮೃತಧಾರೆಯ ಪ್ರವಾಹದೊಂದಿಗೆ ನಾವು ಸೇರಿಕೊಂಡರೆ ನಮ್ಮ ಜೀವನ ಸಾರ್ಥಕವಾಗಬಹುದು. ನಮ್ಮ ಸುತ್ತ ಅಹಂಕಾರದ ಗೋಡೆಯನ್ನು ನಿರ್ಮಿಸಿ, ಮೂಢತೆಯ ಮಾಡು ಹೊದ್ದು ಇರುವ ಜನರಿಗೆ ಶ್ರೀ ಗುರುಗಳ ಜ್ಞಾನದ ಬೆಳಕು, ಪ್ರೀತಿ ಸಿಗಲಾರದು. ಸೂರ್ಯನ ಬೆಳಕನ್ನು ಪಡೆಯುವಲ್ಲಿ ಯಾವ ರೀತಿ ಸ್ಪರ್ಧೆ, ಮತ್ಸರ ಇರುವುದಿಲ್ಲವೋ,ಹಾಗೆಯೇ ಶ್ರೀ ಗುರುಗಳ ಪ್ರೀತಿ, ಆಶೀರ್ವಾದ ಪಡೆಯಲು ಸ್ಪರ್ಧೆ, ಮತ್ಸರ ನಮ್ಮೊಳಗೇ ಇರಬಾರದು. ನಾವು ಮಾಡುವ ಕಾರ್ಯಕ್ಕನುಗುಣವಾಗಿ ನಮಗೆ ಬೇಕಾದ ರೀತಿಯಲ್ಲಿ ಶ್ರೀ ಗುರುಗಳ ಅನುಗ್ರಹ ಸಿಗುತ್ತದೆ. ಇನ್ನೊಬ್ಬರ ಗುರುಭಕ್ತಿಯನ್ನು ಸಂಶಯಿಸಿದವರಿಗೆ ಅವರೆಷ್ಟೇ ಪುಣ್ಯ ಕಾರ್ಯ ಮಾಡಿದರೂ ಅದರ ಫಲ ದೊರೆಯದೇನೋ  ಎಂದು ನನ್ನ ಅನಿಸಿಕೆ.

ಊರಿನ ಎಲ್ಲಾ ಮನೆಗಳನ್ನು ಹೂಗಳ ರೂಪದಲ್ಲಿ, ಸಂಸ್ಥಾನ, ತಮ್ಮ ಮಾತೃತ್ವದ ದಾರದಲ್ಲಿ ಪೋಣಿಸಿ, ಮಠದ ಸುತ್ತಲೂ ಅಲಂಕರಿಸಿಕೊಂಡಿದ್ದಾರೆ. ಇವು ಶಾಶ್ವತ ಹೂಗಳು. ಬಾಡುವುದಿಲ್ಲ. ಮುರುಟಿ ಹೋಗುವುದಿಲ್ಲ. ಎಲ್ಲಿಯಾದರೂ ಕೆಲವೆಡೆ ಹುಳ ಹುಪ್ಪಟಿಗಳಿಂದಾಗಿ ಕೆಲವು ಹೂಗಳು ತಮ್ಮ ಚಂದವನ್ನು ಕಳೆದುಕೊಳ್ಳಬಹುದು ಆದರೆ ಅದು ಅಲಂಕರಿಸಿರುವ ಮಠಕ್ಕೆ ಯಾವ ತೊಂದರೆಯೂ ಬಾರದು. ಎಲ್ಲಿಯಾದರೂ ತೊಂದರೆ, ಕುಂದು ಬಂದಾಗ ಉಳಿದ ಅರಳಿರುವ ಹೂಗಳು ಆ ಕೊರತೆಯನ್ನು ಮರೆ ಮಾಡುತ್ತವೆ.
ಮಠ ಶೋಭಿಸುತ್ತದೆ… ಶೋಭಿಸುತ್ತಲೇ ಇರುತ್ತದೆ..!!

ಸಂಘಟನೆ ಮನುಷ್ಯನನ್ನು ಬೆಳೆಸುತ್ತದೆ.. ನಾವೂ ಬೆಳೆಯೋಣ ಇನ್ನೊಬ್ಬರನ್ನೂ ಬೆಳೆಸೋಣ ಅಲ್ಲವೇ?
|| ಹರೇ ರಾಮ.. ||

ಶ್ರೀದೇವಿ ವಿಶ್ವನಾಥ್,
ಗೌರೀಕೃಪಾ – ಕಾನಾವು.

ಶ್ರೀಮತಿ ಶ್ರೀದೇವಿ ವಿಶ್ವನಾಥ್ ಅವರು ಪುತ್ತೂರಿನ ಪ್ರಸಿದ್ಧ ನೇತ್ರತಜ್ಞ ಶ್ರೀಯುತ ಡಾ. ಕಾನಾವು ವಿಶ್ವನಾಥ ಭಟ್ ಇವರ ಧರ್ಮಪತ್ನಿ. ಸುಸಂಸ್ಕೃತ ಮನೆಯ ಗೃಹಿಣಿಯಾಗಿ, ಇಬ್ಬರು ಸತ್ಪುತ್ರರ ಪ್ರೀತಿಯ ಅಮ್ಮನಾಗಿ, ವಿದ್ಯಾ ಪೋಷಕರಾಗಿ, ಸ್ವತಃ ಕೃಷಿಕರಾಗಿ, ಹಲವಾರು ಸಂಘಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು ತಮ್ಮ ಸಮಯವನ್ನು ವಿನಿಯೋಗಿಸಿಕೊಂಡಿದ್ದಾರೆ. ಶಾಲಾಭಿವೃದ್ಧಿ ಸಮಿತಿಗಳಲ್ಲಿ ಜವಾಬ್ದಾರಿಯುತ ಸ್ಥಾನಗಳನ್ನು ನಿರ್ವಹಿಸಿ ಶಿಕ್ಷಣತಜ್ಞೆಯಾಗಿ ಗುರುತಿಸಲ್ಪಡುತ್ತಾರೆ. ಸಂಸ್ಕೃತ ಭಾಷೆಯ ಬಗೆಗೆ ವಿಶೇಷ ಒಲವು ಹೊಂದಿರುವುದರಿಂದ ಪ್ರಸ್ತುತ ಸಂಸ್ಕೃತ ಅಧ್ಯಯನ ಮಾಡುತ್ತಿದ್ದಾರೆ. ಆರಂಭದಿಂದಲೂ ಶ್ರೀಮಠದ ಎಲ್ಲಾ ಕಾರ್ಯಯೋಜನೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಶ್ರೀಮಠದ ಮಾತೃಶಾಖೆಯ ಪುತ್ತೂರುವಲಯ ಪ್ರಧಾನರಾಗಿ ಶ್ರೀಕಾರ್ಯವನ್ನು ನೆರವೇರಿಸುತ್ತಿದ್ದಾರೆ. ಶ್ರೀಮತಿ ಶ್ರೀದೇವಿ ವಿಶ್ವನಾಥರ ಕುಟುಂಬಕ್ಕೆ ಶ್ರೀರಾಮನು ಆಯುರಾರೋಗ್ಯವನ್ನು ಕೊಟ್ಟು ಹರಸಲಿ ಎಂಬುದು ನಮ್ಮ ಹಾರಯಿಕೆ.
– ಸಂ

Facebook Comments