ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.

ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಜ್ಞಾನಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಜ್ಞಾನಸುಮ 20:

           ಪೂರ್ವಮೀಮಾಂಸಾ ದರ್ಶನ

                                     ಡಾ॥ ಸುಬ್ರಾಯ ವಿ.ಭಟ್ಟ, ಶೃಂಗೇರಿ

ಭಾರತೀಯ ಸನಾತನ ಸಂಸ್ಕೃತಿಯ ಮೂಲಾಧಾರವೇ ವೇದಗಳು. ಇದನ್ನೇ “ವೇದಾತ್ ಶಾಸ್ತ್ರಂ ಪರಂ ನಾಸ್ತಿ”ಎಂಬ ಋಷಿ ವಾಣಿಯು ಘೋಷಿಸುತ್ತದೆ. ವಾಸ್ತವಿಕವಾಗಿ ‘ಶಾಸ್ತ್ರ’ ಶಬ್ದವು ವೇದಕ್ಕೇ ಸೀಮಿತವಾಗಿದೆ. ವೇದ ಮೂಲಕವಾಗಿಯೇ ಬೇರೆಡೆ ತೋರಿಬರುವ ‘ಶಾಸ್ತ್ರವೆಂಬ’ಪ್ರತೀತಿ. ಇದನ್ನೇ ಆಚಾರ್ಯ ಕುಮಾರಿಲ ಭಟ್ಟಪಾದರು ಶಾಸ್ತ್ರ ಲಕ್ಷಣವನ್ನು ತಿಳಿಸುತ್ತಾ-

“ಪ್ರವೃತ್ತಿರ್ವಾ ನಿವೃತ್ತಿರ್ವಾ ನಿತ್ಯೇನ ಕೃತಕೇನವಾ।
ಪುಂಸಾಂ ಯೇನೋಪದಿಶ್ಯೇತ ತಛ್ಭಾಸ್ತ್ರಮಭಿಧೀಯತೇ॥

ಎಂಬುದಾಗಿ ಸೂಕ್ಷ್ಮವಾಗಿ ತಿಳಿಸಿದ್ದಾರೆ. ಸುಖಪ್ರಾಪ್ತಿ ಮತ್ತು ದುಃಖ ನಿವಾರಣೆಗಳ ಅಲೌಕಿಕ ಮಾರ್ಗವನ್ನು ತಿಳಿಸಿಕೊಡುವುದೇ ವೇದ. ಪ್ರತ್ಯಕ್ಷ ಪ್ರಮಾಣದಿಂದಾಗಲೀ ಅನುಮಾನದಿಂದಾಗಲೀ ಯಾವ ಮಾರ್ಗೋಪಾಯವು (ಇಷ್ಟಪ್ರಾಪ್ತಿ ಮತ್ತು ಅನಿಷ್ಟ ನಿವಾರಣೆಗೆ)ನಮಗೆ ತಿಳಿಯುವದಿಲ್ಲವೋ ಅದನ್ನೇ ವೇದವು ತಿಳಿಸುವುದರಿಂದ ‘ಶಾಸ್ತ್ರ’ಎಂಬುದು ವೇದಕ್ಕೇ ಪ್ರಧಾನವಾಗಿ ಅನ್ವರ್ಥಕವಾಗಿದೆ. ಪರಮಪುರುಷಾರ್ಥವಾದ ಮೋಕ್ಷೋಪಾಯ ಬೋಧಕವೂ ವೇದವೇ ಆಗಿದೆ. ಭಾರತೀಯ ಆಸ್ತಿಕ ದರ್ಶನಗಳೆಲ್ಲ ವೇದವು ಸಾರಸಂಗ್ರಹ ರೂಪವೇ ಸರಿ.

ಭಾರತೀಯ ದರ್ಶನಗಳಲ್ಲಿ “ಪೂರ್ವಮೀಮಾಂಸಾ” ದರ್ಶನವು ಒಂದು ವಿಶಿಷ್ಟ ಸ್ಥಾನವನ್ನು ಹೊಂದಿದೆ. ತನ್ನದೇ ಆದ ದಾರ್ಶನಿಕ ಸಿದ್ಧಾಂತಗಳನ್ನು ಒಳಗೊಂಡು, ಪ್ರಮಾಣ ಮತ್ತು ಪ್ರಮೇಯ ವಿಷಯಗಳಲ್ಲೂ ಸಹ ಸ್ವತಂತ್ರವಾದ ನಿಲುವನ್ನು ಹೊಂದಿದೆ. ಭಾರತೀಯ ದರ್ಶನಗಳಲ್ಲಿ ಪ್ರಧಾನವಾಗಿ ಆಸ್ತಿಕ ದರ್ಶನಗಳು ಮತ್ತು ನಾಸ್ತಿಕದರ್ಶನಗಳು ಎಂಬ ಎರಡು ವಿಭಾಗಗಳು ತೋರಿಬರುತ್ತವೆ. ವೇದಪ್ರಾಮಾಣ್ಯ (ಅಸ್ತಿತ್ವ) ಅಂಗೀಕರಿಸಿರುವ ದರ್ಶನಗಳನ್ನು ‘ಆಸ್ತಿಕ’ದರ್ಶನಗಳು ಎಂದು ಕರೆದಿದ್ದಾರೆ. ಅಂದರೆ ಇಹಲೋಕದ ಜೊತೆಗೆ ಪರಲೋಕವೂ ಇದೆ ಎಂಬುದು ಇಲ್ಲಿಯ ತೀರ್ಮಾನ. ಇಂದ್ರಿಯಗಳಿಗೆ ಅತೀತವಾದ, ಈ ಜಗತ್ತನ್ನು ನಿಯಂತ್ರಿಸುವ ಒಂದು ಶಕ್ತಿ ಇದೆ ಎಂಬುದು ಇಲ್ಲಿಯ ಪರಾಮರ್ಶೆ.

ಸಾಂಖ್ಯ-ಯೋಗ, ನ್ಯಾಯ-ವೈಶೇಷಿಕ, ಪೂರ್ವ-ಮೀಮಾಂಸೆ-ಉತ್ತರಮಾಮಾಂಸಾ(ವೇದಾಂತ) ಎಂಬ ಆಸ್ತಿಕ ಷಡ್ಡರ್ಶನಗಳಲ್ಲಿ ಪರಿಪೂರ್ಣವಾಗಿ ವೇದವಿಮರ್ಶೆಗೆಂದೇ ಹೊರಟಿರುವದು ಪೂರ್ಣಮೀಮಾಂಸಾ ದರ್ಶನ. ವೇದವಿಹಿತ ಯಾಗಾದಿ ಕರ್ಮಗಳ ಸೂಕ್ಷ್ಮವಾದ ವಿವೇಚನೆಯ ಜೊತೆಗೆ ಜೀವ, ಜಗತ್ತು, ಪರಮಾತ್ಮ, ಮೋಕ್ಷ ಮೊದಲಾದ ಆಧ್ಯಾತ್ಮಿಕ ಚಿಂತನೆ ನಡೆಸಿರುವುದರಿಂದ ಇದು ‘ದರ್ಶನ’ಸ್ಥಾನವನ್ನು ಪಡೆದಿದೆ.

ವೇದಾರ್ಥ ವಿಚಾರ ರೂಪವಾದ ಈ ಮೀಮಾಂಸಾಶಾಸ್ತ್ರವು ಧರ್ಮಾಧರ್ಮ ನಿರೂಪಣೆಗಾಗಿಯೇ ಹೊರಟಿರುವದರಿಂದ “ಪೂಜ್ಯ ವಿಚಾರಃ’ ಎಂಬುದಾಗಿ ಕರೆಸಿಕೊಂಡಿದೆ. ಶಾಸ್ತ್ರ ಪ್ರವರ್ತಕರಾದ ಜೈಮಿನಿ ಮಹರ್ಷಿಗಳು ಶಾಸ್ತ್ರಾರಂಭಸೂತ್ರದಲ್ಲಿ ಧರ್ಮಾಧರ್ಮ ವಿಮರ್ಶೆ ಮಾಡುವುದಾಗಿ ಪ್ರತಿಜ್ಞೆ ಮಾಡಿ, ಎರಡನೇ ಸೂತ್ರದಲ್ಲಿ “ಚೋದನಾಲಕ್ಷಣೋsರ್ಥೋ ಧರ್ಮಃ” (ಪೂ.ಮೀ.ಸೂ.೧-೧-೨) ಎಂಬುದಾಗಿ ವೇದದಿಂದ ಹೇಳಲ್ಪಟ್ಟ ಸ್ವರ್ಗಾದಿ ಶ್ರೇಯಸ್ಸಾಧನಗಳಾದ ಯಾಗಾದಿಗಳನ್ನೇ ಧರ್ಮವೆಂದು ಹೇಳಿದ್ದಾರೆ. ವೇದಮಾತೆಯು “ಯಜ್ಞೇನ ಯಜ್ಞಮಯಜಂತ ದೇವಾಃ, ತಾನಿಧರ್ಮಾಣಿ” ಎಂದು ವೇದವಿಹಿತ ಯಾಗಾದಿಗಳನ್ನೇ ಧರ್ಮವೆಂದು ತಿಳಿಸಿದೆ.

ಪೂರ್ವಮೀಮಾಂಸಾ ಶಾಸ್ತ್ರದ ಸೂತ್ರಕಾರರಾದ ಜೈಮಿನಿ ಮಹರ್ಷಿಗಳು ಹನ್ನೆರಡು ಅಧ್ಯಾಯಗಳಲ್ಲಿ ಈ ಶಾಸ್ತ್ರದ ಪ್ರಮೇಯವನ್ನು ನಿರೂಪಿಸಿದ್ದಾರೆ. ಈ ಹನ್ನೆರಡು ಅಧ್ಯಾಯಗಳಲ್ಲಿ ಧರ್ಮಪ್ರಮಾಣಗಳು, ಕರ್ಮಭೇದ, ಯಾಗಾದಿಗಳ ಅಂಗಾಂಗಿ ಭಾವಗಳು, ಕ್ರತ್ವರ್ಥ-ಪುರುಷಾರ್ಥ ವಿಚಾರ, ಅನುಷ್ಠಾನಕ್ರಮ, ಯಾಗಾದಿಗಳ ಅಧಿಕಾರಿನಿರ್ಣಯ, ಸಾಮಾನ್ಯ ಅತಿದೇಶ, ವಿಶೇಷ ಅತಿದೇಶ, ದೇವತಾದಿ ಶಬ್ದಗಳ ಊಹ, ಬಾಧ,  ತಂತ್ರ, ಪ್ರಸಂಗ ಹೀಗೆ ಕ್ರಮವಾಗಿ ವಿಷಯಗಳು ನಿರೂಪಿತವಾಗಿವೆ.

ಈ ದರ್ಶನದಲ್ಲಿ ವೇದವು ಅಪೌರುಷೇಯ ಹಾಗೂ ನಿತ್ಯ. ರಾಮಾಯಣ, ಭಾರತಾದಿಗಳಂತೆ ಯಾವೊಬ್ಬ ವ್ಯಕ್ತಿಯಿಂದ ರಚಿತವಾದದ್ದಲ್ಲ. ಅನಾದಿಯಾಗಿ ಬಂದಿದೆ. ಜೊತೆಗೆ ಸ್ವತಃ ಪ್ರಮಾಣ ರೂಪವಾಗಿದೆ. ವೇದ ತಿಳಿಸಿದ ಅರ್ಥಕ್ಕೆ ಪ್ರಾಮಾಣ್ಯ ಹೇಳಲು ಬೇರೆ ಪ್ರಮಾಣದ ಅಪೇಕ್ಷೆ ಇಲ್ಲ. ಅದೇ ಸ್ವತಃ ಪ್ರಮಾಣ ವೇದವಾಕ್ಯಗಳು, ಯಾಗಕ್ಕೂ ಸ್ವರ್ಗಕ್ಕೂ ಸಾಧ್ಯ- ಸಾಧನರೂಪ ಸಂಬಂಧವನ್ನು ತಿಳಿಸುತ್ತಿವೆ. ಯಾಗವು ಸ್ವರ್ಗಸಾಧನ ಎಂಬುದು ವೇದದಿಂದ ಮಾತ್ರ ತಿಳಿದುಬರುತ್ತದೆ. ಯಾಗಾದಿರೂಪ ಧರ್ಮದಲ್ಲಿ ವೇದ ಮಾತ್ರ ಪ್ರಮಾಣವೇ ವಿನಃ ಪ್ರತ್ಯಕ್ಷಾದಿಗಳಲ್ಲ. ವೇದವು ಅಪೌರುಷೇಯವಾಗಿರುವುದರಿಂದ ಪುರುಷದೋಷಗಳು ಅಲ್ಲಿ ಸೇರುವಂತಿಲ್ಲ. ಧರ್ಮದ ಫಲವು ಭವಿಷ್ಯತ್ಕಾಲಿಕವಾಗಿರುವುದರಿಂದ ಅಲ್ಲಿ ಪ್ರತ್ಯಕ್ಷವು ಪ್ರಮಾಣವಾಗುವಂತಿಲ್ಲ. ಹಾಗಾಗಿಯೇ ಅನುಮಾದಿಗಳು ಧರ್ಮಪ್ರಮಾಣವಾಗಲಾರವು.

ವೇದವು ವಿಧಿ, ಮಂತ್ರ, ನಾಮಧೇಯ ನಿಷೇಧ, ಅರ್ಥವಾದ- ಎಂಬುದಾಗಿ ಐದು ವಿಭಾಗವನ್ನು ಹೊಂದಿದ್ದು, ಇವುಗಳಲ್ಲಿ ವಿಧಿಯೇ ಪ್ರಧಾನವಾಗಿದೆ. ಉಳಿದೆಲ್ಲ ವಿಭಾಗಗಳು ವಿಧಿ ಮೂಲಕವಾಗಿಯೇ ಧರ್ಮ ಪ್ರಮಾಣವಾಗವವು. ವಿಧಿಯು ಅಜ್ಞಾತ ಮತ್ತು ಅಬಾಧಿತವಾದ ಅಂಶವನ್ನು ತಿಳಿಸುವದರಿಂದ ಪ್ರಮಾಣಬದ್ಧವಾಗಿದೆ.

ಯಾಗಾದಿಕರ್ಮಗಳನ್ನು ಅರ್ಥಸ್ಮರಣಪೂರ್ವಕವಾಗಿ ವಿಧಿವತ್ತಾಗಿ ಅನುಷ್ಠಾನ ಮಾಡಿದಾಗ ಅದರಿಂದ ‘ಅಪೂರ್ವ’ಹುಟ್ಟುತ್ತದೆ. ಈ ಅಪೂರ್ವವು ಕಾಲಾಂತರ, ದೇಹಾಂತರ, ದೇಶಾಂತರ, ಭಾವಿಯಾದ ಸ್ವರ್ಗಾದಿ ಫಲವನ್ನು ಉಂಟುಮಾಡಿ ನಾಶಹೊಂದುತ್ತದೆ.

ಇಲ್ಲಿಯ ಇನ್ನೊಂದು ವಿಶೇಷತೆ ಎಂದರೆ-ಇಲ್ಲಿ ಶಬ್ದವೇ ದೇವತೆ. “ಅಗ್ನಯೇ ಸ್ವಾಹಾ”ಎಂಬ ಮಂತ್ರದಿಂದ ಹೋಮವನ್ನು ಮಾಡಬೇಕಾದರೆ ‘ಅಗ್ನಿ’ ಎಂಬ ಆನುಪೂರ್ವಿ ಶಬ್ದ ಸ್ವರೂಪವೇ ಇಲ್ಲಿ ದೇವತೆ. ಪುರಾಣಾದಿಗಳಲ್ಲಿ ಮತ್ತು ಆಗಮನಗಳಲ್ಲಿ ತಿಳಿಸಿದಂತೆ ದೇವತೆಗಳ ವಿಗ್ರಹವನ್ನು ಅಂಗೀಕರಿಸುವುದಿಲ್ಲ. ವಿಗ್ರಹಗಳು ಪುರುಷರಿಂದ ನಿರ್ಮಿತವಾದುದರಿಂದ ಅನಿತ್ಯರೂಪ ಅರ್ಥಬೋಧಕಗಳಾಗಿ ವೇದಗಳೂ ಅನಿತ್ಯವಾದೀತೆಂದು ಶಬ್ದವೇ ದೇವತೆ ಎಂಬುದಾಗಿ ಅಂಗೀಕರಿಸಲ್ಪಟ್ಟಿದೆ. ಇಲ್ಲಿ ಶಬ್ದವು ನಿತ್ಯ ಮತ್ತು ದ್ರವ್ಯ ಹಾಗೂ ವ್ಯಾಪಕ(ವಿಭು).

ಈ ದರ್ಶನದಲ್ಲಿ ಪ್ರಮೇಯ ನಿರೂಪಣೆಗೆ ಅನುಗುಣವಾಗಿ ಪ್ರತ್ಯಕ್ಷ, ಅನುಮಾನ, ಉಪಮಾನ, ಶಬ್ದ, ಅರ್ಥಾಪತ್ತಿ ಮತ್ತು ಅನುಪಲಬ್ಧಿ ಎಂಬ ಆರು ಪ್ರಮಾಣಗಳು ಅಂಗೀಕೃತವಾಗಿದೆ. ಜೈಮಿನಿ ಮಹರ್ಷಿಗಳ ಸೂತ್ರಕ್ಕೆ ಶಬರ ಸ್ವಾಮಿಗಳು ಭಾಷ್ಯವನ್ನು ರಚಿಸಿದರು. ಈ ಭಾಷ್ಯಕ್ಕೆ ಭಟ್ಟ ಕುಮಾರಿಲರು ವಾರ್ತಿಕವನ್ನು ರಚಿಸಿದರು. ಹಾಗೂ ಪ್ರಭಾಕರ ಮಿತ್ರರು ‘ಬೃಹತೀ’ ಎಂಬ ವ್ಯಾಖ್ಯಾನವನ್ನು ಬರೆದರು. ಇಲ್ಲಿಂದಲೇ ಮೀಮಾಂಸಾ ಶಾಸ್ತ್ರದಲ್ಲಿ ಭಾಟ್ಟ ಮತ್ತು ಪ್ರಾಭಾಕರ ಎಂಬ ಪ್ರಧಾನವಾದ ಎರಡು ಸಿದ್ಧಾಂತಗಳು ಆರಂಭವಾದವು. ಮುಂದೆ ಪ್ರಾಭಾಕರ ಸಿದ್ಧಾಂತವನ್ನು ಬಹಳವಾಗಿ ಯುಕ್ತಿಪೂರ್ವಕವಾಗಿ ಭಾಟ್ಟ ಮತದಲ್ಲಿ ಖಂಡಿಸಿರುವುದರಿಂದ ಭಾಟ್ಟ ಮೀಮಾಂಸಕ ಸಿದ್ಧಾಂತವೇ ಯುಕ್ತಿಯುಕ್ತವೂ, ಲೋಕೋಪಯುಕ್ತವೂ ಆಗಿ ಪ್ರಸಿದ್ಧಿಯನ್ನು ಹೊಂದಿದೆ. ಆಚಾರ್ಯ ಭಗವತ್ಪಾದರೂ “ವ್ಯವಹಾರೇ ಭಾಟ್ಟನಯಾಃ” ಎಂಬುದಾಗಿ ಪ್ರಮಾಣಾದಿ ಸಿದ್ಧಾಂತಗಳಲ್ಲಿ ಭಾಟ್ಟಮೀಮಾಂಸಾ ತಂತ್ರವನ್ನೇ ಅನುಸರಿಸುತ್ತಾರೆ.

ಈ ಸಿದ್ಧಾಂತದಲ್ಲಿ ಐದು ಪದಾರ್ಥಗಳು ಹನ್ನೊಂದು ದ್ರವ್ಯಗಳೂ ಅಂಗೀಕರಿಸಲ್ಪಟ್ಟಿವೆ. ಇಲ್ಲಿ ಪ್ರಪಂಚವು ಸತ್ಯ ಹಾಗೂ ಅನಾದಿ “ನಕದಾಪ್ಯನೀದೃಶಂ ಜಗತ್” ಅಂದರೆ ಎಲ್ಲಾ ಕಾಲದಲ್ಲೂ ಈ ಪ್ರಪಂಚ ಹೀಗೆಯೇ ಇತ್ತು ಎಂಬುದು ಇಲ್ಲಿಯ ಸಿದ್ಧಾಂತ. ವರ್ಣರೂಪವಾದ ಶಬ್ದವು ನಿತ್ಯ. ಅರ್ಥವೂ ನಿತ್ಯ ಮತ್ತು ಅವೆರಡರ ಸಂಬಂಧವೂ ನಿತ್ಯ.

ವೇದವಾಕ್ಯಗಳಲ್ಲಿ ಯಥಾಶ್ರುತವಾದ ಅರ್ಥಕ್ಕಿಂತ ಭಿನ್ನವಾಗಿ ವೇದ-ತಾತ್ಪರ್ಯರೂಪವಾದ ಅರ್ಥವು ಬೇರೆಯೇ ಇದೆ ಎಂದು ಈ ಶಾಸ್ತ್ರದ ಸಿದ್ಧಾಂತವಾಗಿದ್ದು ಈ ತಾತ್ಪರ್ಯವು ಕರ್ಮಪರವಾಗಿದೆ ಎಂದು ತಿಳಿಸಿದೆ. ಯಜ್ಞ ಯಾಗಾದಿ ಶ್ರಾತ ಕರ್ಮಾನುಷ್ಠಾನದ ಸ್ವರೂಪ ನಿರ್ಣಯ ಆಗಬೇಕಾದದ್ದು ಮೀಮಾಂಸಾ ಶಾಸ್ತ್ರದಿಂದ. ವೇದ ಭಾಷ್ಯಾದಿಗಳಿಂದ ಯಥಾಶ್ರುತವಾದ ಅರ್ಥ ತಿಳಿದರೂ ವೇದಾರ್ಥ ನಿರ್ಣಯವು ಮೀಮಾಂಸಾ ನ್ಯಾಯಗಳಿಂದಲೇ ಸಾಧ್ಯ. ಇಲ್ಲಿ ಒಂದೊಂದು ಅಧಿಕರಣದಲ್ಲಿ ಒಂದೊಂದು ನ್ಯಾಯ ಸಿದ್ಧವಾಗುವುದರಿಂದ ಇದಕ್ಕೆ “ನ್ಯಾಯಸಹಸ್ರೀ” ಎಂಬ ಹೆಸರೂ ಸಾರ್ಥಕವಾಗಿ ಬಳಕೆಯಲ್ಲಿದೆ.

ಇಲ್ಲಿ ಮೋಕ್ಷ ಸ್ವರೂಪ ಮತ್ತು ಮೋಕ್ಷ ಸಾಧನವನ್ನೂ ವಿವೇಚಿಸಿದ್ದಾರೆ.“ಜ್ಞಾನಾದೇವಹಿ ಕೈವಲ್ಯಂ” ಎಂಬಂತೆ ಮೋಕ್ಷಕ್ಕೆ ತತ್ತ್ವಜ್ಞಾನದ ಅಪೇಕ್ಷೆ ಇದೆ. ಆದರೆ ನಿಷಿದ್ಧ ಮತ್ತು ಕಾಮ್ಯಕರ್ಮಗಳನ್ನು ತ್ಯಜಿಸಿ ಮುಂದಿನ ಜನ್ಮಕ್ಕೆ ಕಾರಣವಾದ ಕರ್ಮಗಳನ್ನು ಪೂರ್ತಿಯಾಗಿ ಬಿಟ್ಟು, ಪ್ರಾರಬ್ಧ ಕರ್ಮಫಲವನ್ನು ಅನುಭವಿಸಿ ನಿತ್ಯ ಮತ್ತು ನೈಮಿತ್ತಿಕ ಕರ್ಮಗಳಿಂದ ಪಾಪಕ್ಷಯ ರೂಪವಾದ ಚಿತ್ತಶುದ್ಧಿಯನ್ನು ಹೊಂದಿ ವೇದಾಂತದಲ್ಲಿ ತಿಳಿಸಿದ ಮಾರ್ಗದಿಂದ ನಿತ್ಯಾನಂದ ಸ್ವರೂಪವಾದ ಮುಕ್ತಿಯನ್ನು ಪಡೆಯಬಹುದು ಎಂಬುದು ಇವರ ಸಿದ್ಧಾಂತ. ಒಟ್ಟಿನಲ್ಲಿ ವೇದ ಪ್ರಾಮಾಣ್ಯ ಸ್ಥಾಪನೆಗಾಗಿಯೇ ಹೊರಟ ಈ ಮೀಮಾಂಸಾ ದರ್ಶನವು ಜೀವನ ಹಾಗೂ ಅನುಷ್ಠಾನದಲ್ಲಿ ನಿಯಮ, ವ್ರತ, ಕಟ್ಟಳೆಗಳನ್ನು ಸ್ಪಷ್ಟವಾಗಿ ತಿಳಿಸಿದೆ. ನಾಸ್ತಿಕ ಮತಗಳ ಪ್ರಾಬಲ್ಯದ ಪರಾಕಾಷ್ಠೆಯ ಸಂದರ್ಭದಲ್ಲಿ ವೇದ ಪ್ರಾಮಾಣ್ಯವನ್ನು ಸ್ಥಾಪಿಸಿ ತನ್ಮೂಲಕ ಧರ್ಮ-ಅಧರ್ಮಗಳ ಸ್ವರೂಪವನ್ನು ತಿಳಿಸಿ ಜನರನ್ನು ಆ ಮಾರ್ಗದಲ್ಲಿ ಪ್ರವರ್ತಿಸುವಂತೆ ಮಾಡಿ ಸನಾತನ ಸಂಸ್ಕೃತಿಯ ಪ್ರವಾಹವು ಅವಿಚ್ಛಿನ್ನವಾಗಿ ಮುಂದುವರೆದು ಬರುವಲ್ಲಿ ಮೀಮಾಂಸಾ-ದರ್ಶನವು ಪ್ರಮುಖ ಪಾತ್ರವಹಿಸಿದೆ.

 ॥ ಇತಿ  ಶಮ್ ॥

~*~

Facebook Comments