ಯಾವ ಮಹಾಮಹಿಮನ ಕೃಪೆಯು ನನ್ನ ಬದುಕಿನ ಎಲ್ಲ ಅಂಗಗಳಲ್ಲಿ ವ್ಯಾಪಿಸಿದೆಯೋ,
ಯಾವ ಮಮತಾಮಯಿಯ ಕರುಣೆಯು ವಿಧಿಯಾಟದ ಸುಳಿಯಲ್ಲಿ ಕಳೆದು ಹೋಗುತ್ತಿದ್ದ ಬದುಕನ್ನು ಮೇಲೆತ್ತಿ, ಉದಾತ್ತವಾದುದನ್ನು ಕಿಂಚಿತ್ತಾದರೂ ಅರ್ಥೈಸಿಕೊಳ್ಳಲು ನನ್ನನ್ನು ಪ್ರೇರಿಸಿದೆಯೋ,ಅಂತಹ ಮಹಾತ್ಮನ ಕುರಿತಾಗಿ ನನ್ನ ಕೆಲವು ಭಾವನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತಿದ್ದೇನೆ.
ಕುರುಡನು ಆನೆಯ ಬಗ್ಗೆ ವರ್ಣಿಸ ಹೊರಟಂತೆ ನಾನೆಷ್ಟೇ ಹೇಳಿದರೂ ಅದು ಆ ವಿರಾಟ್ ವ್ಯಕ್ತಿತ್ವದ ಕಿಂಚಿನ್ಮಾತ್ರವನ್ನೂ ಹೇಳಿದಂತಾಗದೆಂದು ನನಗೆ ಅರಿವಿದೆ.ಆದರೂ ನಾನನುಭವಿಸಿದ ದಿವ್ಯ ಸಾನ್ನಿಧ್ಯ ಸುಖವನ್ನು ನಿಮ್ಮೊಂದಿಗೆ ಹೇಳಿಕೊಳ್ಳುವಾಸೆ.

ಯಾವುದೋ ಒಂದು ಸಮಸ್ಯೆಯು ಬದುಕಿನ ನೆಮ್ಮದಿಯರಮನೆಗೆ ಕೊಳ್ಳಿಯಿಟ್ಟಾಗ ಪರಿಹಾರ ಹುಡುಕಿಕೊಂಡು ಶ್ರೀಸಂಸ್ಥಾನದ ಭೇಟಿಗಾಗಿ ಹೋದೆ.
ಅಂದು ಇಟ್ಟ ಹೆಜ್ಜೆ ಜೀವನದ ದಿಕ್ಕನ್ನೇ ಬದಲಾಯಿಸಬಹುದೆಂಬ ಕಲ್ಪನೆ ಕೂಡಾ ನನಗಿರಲಿಲ್ಲ…!
ಸಮಸ್ಯೆಯ ಮೂಲವನ್ನರಸಲು ಹೊರಟು, ಬದುಕಿನ ಮೂಲವನ್ನೇ ಅರಸಲು ಮನಮಾಡುವುದಕ್ಕೆ ಪ್ರೇರಕವಾದ ದಿವ್ಯಕೃಪೆಯೊಂದು ಬದುಕಿನಲ್ಲಾಯಿತು.
ಪ್ರಾರಂಭದಲ್ಲಿ ಧರ್ಮಪೀಠದ ಗುರುವಾಗಿ ಕಂಡವರು ಕೆಲವು ಕಾಲದಲ್ಲೇ ಪೂಜ್ಯರಾಗಿ ತೋರಿಬಂದರು.ಮತ್ತೆ ಜೀವನದ ಗುರಿ ತೋರಿಸಿದ ಪರಮ ಗುರುವಾದರು.

ಮೊದಲೊಂದೆರಡು ಬಾರಿ ಗುರುಗಳನ್ನು ಅಕ್ಕಪಕ್ಕದ ಮನೆಗೆ, ದೇವಸ್ಥಾನಕ್ಕೆ ಬಂದಾಗ ನೋಡಿದ್ದೆ ಅಷ್ಟೇ.ಆದರೂ ಗುರುಗಳನ್ನು ನೋಡಲೆಂದೇ ಎಲ್ಲಿಗೂ ಹೋಗಿರಲಿಲ್ಲ.
ನಾನು ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಶ್ರೀಸಂಸ್ಥಾನ ಮೈಸೂರಿನಲ್ಲಿಯೇ ಮೊಕ್ಕಾಂ ಇದ್ದಾರೆಂದು ತಿಳಿದುಬಂತು.’ಹೋಗಿ ಆಶೀರ್ವಾದ ತೆಗೆದುಕೊಂಡು ಬಾ’ ಎಂದರು ಮನೆಯಲ್ಲಿ.ಸರಿ ಎಂದು ಹೊರಟೆ.
ಶ್ರೀಗಳವರ ಮೊಕ್ಕಾಮಿನ ಸ್ಥಳವನ್ನು ತಲುಪಿ ಶ್ರೀಕರಾರ್ಚಿತ ಶ್ರೀರಾಮದೇವರಿಗೆ ನಮಸ್ಕರಿಸಿದೆ.ಅದಾಗಲೇ ಎಲ್ಲರೂ ಗುರುಗಳ ಬರುವನ್ನು ಕಾತರದಿಂದ ಕಾಯುತ್ತಾ ಇದ್ದರು.ಅವರ ಮಧ್ಯದಲ್ಲಿ ನಾನೂ ಕುಳಿತೆ.ಸುಮ್ಮನೆ ಕಾಯುತ್ತಾ ಕುಳಿತೆ. ನನ್ನಲ್ಲಿ ಯಾವ ನಿರೀಕ್ಷೆಗಳೂ ಇರಲಿಲ್ಲ.
ಹೇಳಿಕೊಳ್ಳುವಂತಹ ಯಾವ ಭಕ್ತಿ-ಭಾವಗಳೂ ಆ ಹೊತ್ತು ಮೂಡಿದ್ದುದು ಇಂದು ನೆನಪಾಗುವುದಿಲ್ಲ.ನೋಡು-ನೋಡುತ್ತಿರುವಂತೆಯೇ ಗುರುಗಳು  ಶ್ರೀಪರಿವಾರದೊಂದಿಗೆ ಪೀಠಕ್ಕೆ ಬಿಜಯಂಗೈದರು.ಪರಾಕು- ಜೈಕಾರಗಳಾದವು. ಇದನ್ನೆಲ್ಲ ಒಂದೆರಡು ಬಾರಿ ನೋಡಿದ್ದೆನಾದರೂ ಅಂದು ಹೊಸತೆನಿಸಿತು.
ಸಂಸ್ಥಾನ ದಿವ್ಯ ಮಂದಹಾಸದೊಂದಿಗೆ ಸಮಸ್ತ ಸಭೆಯನ್ನೊಮ್ಮೆ ನಿರುಕಿಸಿದರು.ದೃಷ್ಟಿ ನನ್ನ ಮೇಲೂ ಹಾದು ಹೋಯಿತು. ಏನಿತ್ತು ಅದರಲ್ಲಿ?
ನನ್ನ ಹೊರಮನಸ್ಸಿಗೆ ಅದು ತಿಳಿಯದು, ಆದರೆ ಆಂತರ್ಯವು ಮಾತ್ರ ಬದುಕಿನಲ್ಲಿ ಹಿಂದೆಂದೂ ಕಂಡರಿಯದಂತ ಭಾವೋದ್ವೇಗದ ಮಹಾಪೂರವೊಂದಕ್ಕೆ ಆ ಕ್ಷಣದಲ್ಲಿ ಪಕ್ಕಾಗಿ ಹೋಯಿತು.
ಯಾವ ಕಾರಣಕ್ಕೆ ಎಂಬುದು ತಿಳಿಯದೆಯೇ ಕಣ್ಣುಗಳು ಹನಿಗೂಡತೊಡಗಿದವು.ಒಂದು ಹನಿ ಕಣ್ಣಂಚನ್ನು ದಾಟುವುದೇ ತಡ, ಅದಕ್ಕಾಗಿ ಅದೆಷ್ಟೋ ಕಾಲದಿಂದ ಕಾದಿದ್ದವೋ ಎಂಬಂತೆ ಮತ್ತಷ್ಟು ಹನಿಗಳು ಮೊದಲ ಹನಿಯನ್ನು ಹಿಂಬಾಲಿಸಿದವು.ನನಗಾದುದಾದರೂ ಏನು?
ಕೆಲವು ಕ್ಷಣಗಳಲ್ಲಿಯೇ ನಾನು ನನ್ನೆಲ್ಲ ಪ್ರಯತ್ನವನ್ನು ಮೀರಿ , ಹೃದಯದಲ್ಲಿ ಮಡುಗಟ್ಟಿದ ಅವ್ಯಕ್ತ ದುಃಖ ಪರಂಪರೆಯೆಲ್ಲವನ್ನೂ ಒಮ್ಮೆಲೇ ಬೋರ್ಗರೆದು  ಬಸಿದುಕೊಳ್ಳಲು ಹೊರಟಿದ್ದೆನೇನೋ ಎಂಬಂತೆ  ಸಶಬ್ದವಾಗಿಯೇ ಬಿಕ್ಕಿ ಬಿಕ್ಕಿ ಅಳತೊಡಗಿದೆ.
ಎಲ್ಲರೂ ಪ್ರಶ್ನಾರ್ಥಕವಾಗಿ ನನ್ನನ್ನೇ ನೋಡುತ್ತಿದ್ದಾರೆಂದು ತಿಳಿದರೂ, ಪಕ್ಕದಲ್ಲಿದ್ದವರು ಏನೇ ಸಮಾಧಾನ ಹೇಳಿದರೂ ನನಗೆ ಮಾತ್ರ  ಅದೇಕೋ ಅಳು ನಿಲ್ಲಿಸಲಾಗಲೇ ಇಲ್ಲ.
ನಾನು ಅಳಲು ಕಾರಣ ಸಮಾಧಾನ ಹೇಳುತ್ತಿದ್ದ ಉಳಿದವರಿಗೆ ತಿಳಿಯದಿರುವುದು ಸಹಜ.ಆದರೆ ವಿಚಿತ್ರವೆಂದರೆ, ಅದು ಖುದ್ದು ನನಗೇ ತಿಳಿದಿರಲಿಲ್ಲ…! ಆದರೆ ಸರ್ವಭಾವಗ್ರಾಹಿಗಳಾದ ಗುರುಗಳಿಗೆ ಅದೇನು ತಿಳಿಯಿತೋ ಕಾಣೆ. ನನ್ನನ್ನು ಬಳಿ ಕರೆದರು – “ನಾವಿದ್ಯ ಪುಟೀ, ನೀ ಎಂತಕೆ ಅಳ್ತೆ…?” ಎಂದರು.ಅವ್ಯಕ್ತ ದುಃಖಕ್ಕೆ ಸಾಂತ್ವನವು ಪರೋಕ್ಷವಾಗಿಯೇ ದೊರೆಯಿತು.ನಿಜಕ್ಕೂ ಅದೊಂದು ಮಾತಿಗಿರಲಿ, ಮನಸ್ಸಿಗೂ ನಿಲುಕದ ದಿವ್ಯಾನುಭವ…!
ಅದಾಗಿ ಹಲ ವರ್ಷಗಳೇ ಕಳೆದರೂ ಕೂಡ ಅಂದು ನಾನು ಅತ್ತದ್ದೇಕೆಂದು ಇಂದಿಗೂ ನನಗೆ ಸೋಜಿಗ..! ಈಗ ಯೋಚನೆ ಮಾಡಿದಾಗ ಕೆಲವೊಮ್ಮೆ ಅನ್ನಿಸುತ್ತದೆ ‘ಅದು ನನ್ನ ಜನ್ಮ-ಜನ್ಮಾಂತರಗಳ ಪಾಪ ಕಳೆಯುವ, ದಾರಿ ತೋರುವ, ಗುರು ಸಿಕ್ಕಿದ್ದಾರೆಂದು ತಿಳಿದ ಒಳಮನಸ್ಸು ಹರಿಸಿದ ಆನಂದ ಬಾಷ್ಪವಾಗಿತ್ತೇ..?’ಎಂದು.

ಅದಾಗಿ ಕೆಲದಿನಗಳಲ್ಲಿ ನಾನೊಂದು ಸಮಸ್ಯೆಗೆ ಸಿಲುಕಿಕೊಂಡೆ.ತಿಳಿದವರನ್ನು ವಿಚಾರಿಸಿದಾಗ ಅದು ಮನುಷ್ಯ ಪ್ರಯತ್ನದಿಂದ ಪರಿಹರಿಸಲಾಗದ ಸಮಸ್ಯೆಯೆಂದು ತಿಳಿದು ದಿಙ್ಮೂಢಳಾದೆ.ಏನೂ ಮಾಡಲು ತೋಚದೆ ನಾನೂ ಮನೆಯ ಎಲ್ಲರೂ ಕೈಚಲ್ಲಿ ಕುಳಿತಿದ್ದಾಗ ನನಗೆ ಗುರುಗಳನ್ನು ಮೊದಲ ಭಾರಿ ಭೇಟಿ ಮಾಡಿದಾಗ ಆದ ಅನುಭೂತಿಯು ನೆನಪಿಗೆ ಬಂತು. ಅಂದು ದೊರೆತ ಸಾಂತ್ವನ, ಹೃದಯಕ್ಕುಂಟಾದ ಅಪೂರ್ವ ಶಾಂತಿ ರಕ್ಷಿಸುವವರಿದ್ದಾರೆಂಬ ಭಾವದಿಂದ ಬದುಕಿನಲ್ಲಿ ಉಂಟಾದ ಭದ್ರತೆ ಇವೆಲ್ಲವೂ ಸ್ಮೃತಿಗೆ ಬಂದವು.ಗುರುಗಳಲ್ಲದೇ ಇನ್ನಾರೂ ನನ್ನನ್ನು ರಕ್ಷಿಸಲಾರರೆಂದು ಮನಸ್ಸಿಗೆ ದೃಢವಾಗಿ ತೋರಿತು.ಶ್ರೀಸಂಸ್ಥಾನದ ದಿವ್ಯಮಂಗಲ ಮೂರ್ತಿಯನ್ನೇ ನೆನೆದುಕೊಂಡು ಅವರೇ ಗತಿ ಎಂದು ಹೊಸನಗರ ಮಠಕ್ಕೆ ಹೋದೆ.
ಅದು ಚಾತುರ್ಮಾಸ್ಯದ ಸಂದರ್ಭ.

ಆ ದಿನ ನನಗೆ ಮರೆಯಲಾಗದಂತಹದ್ದು…
ಗೋಶಾಲೆಯ ಮಧ್ಯದಲ್ಲೊಂದು ಕುಟೀರ ಮಾದರಿಯ ಕೊಠಡಿಯಲ್ಲಿ ಸೀಮಾ ಸಭೆ ಸಂಪನ್ನವಾಗಿತ್ತು. ಅಲ್ಲಿ  ಶ್ರೀಸಂಸ್ಥಾನದ ದಿವ್ಯ ಉಪಸ್ಥಿತಿಯಿದೆಯೆಂದು ತಿಳಿದಾಗ ಕಾತರದಿಂದ ಅತ್ತ ದಾವಿಸಿದೆ.ಆ ಹಿರಿಯರ ಸಭೆಯಲ್ಲಿ ಮುಂಬರಿಯಲು ಸಂಕೋಚವಾಗಿ ಅಲ್ಲೇ ತುಸು ದೂರದಲ್ಲಿ ನಿಂತೆ.ಒಳಹೋಗಲು ಸಂಕೋಚದ ಜೊತೆಗೆ ಭಯವೂ ಇತ್ತು.ಈ ಗೊಂದಲಗಳ ಮಧ್ಯೆ ನಾನು ತಾಕಲಾಡುತ್ತಿದ್ದಾಗ ಶ್ರೀಸಂಸ್ಥಾನ ನನ್ನನ್ನು ನೋಡಿದರು; ನೋಡಿ ಪರಿಚಯದ ಮುಗುಳ್ನಗೆ ಬೀರಿದರು!

 ಆ ಮೃದು ಮಂದಹಾಸವು ಯಾರನ್ನು ತಾನೇ ಆಕರ್ಷಿಸದೇ ಬಿಟ್ಟಿದೆ??
ಏನನ್ನೂ ಅರಿಯದ ಮುಗ್ಧ ಮಗುವಿನಿಂದ ಹಿಡಿದು ಸಂತ-ಮಹಂತರನ್ನೂ ,ತುತ್ತನ್ನಕ್ಕಾಗಿ ಪರದಾಡುವ ಬಡವನಿಂದ ಹಿಡಿದು ಆಗರ್ಭ ಶ್ರೀಮಂತರನ್ನೂ,ಮಠದ ಪಾರಂಪರಿಕ ಭಕ್ತರಿಂದ ಹಿಡಿದು ಮಠದ ಹೆಸರೇ ಕೇಳದ ಭಿನ್ನ ಭಿನ್ನ ಮನೋವೃತ್ತಿಗಳ ಅಸಂಖ್ಯಾತ ವ್ಯಕ್ತಿಗಳನ್ನೂ ಅದು ಮೋಡಿಮಾಡಿದೆ.
ಆ ನಗುವನ್ನು ನೆನೆದಾಗಲೆಲ್ಲ ನನಗನ್ನಿಸುವುದು ಅದು ಬರೀ ನಗುವಲ್ಲ, ಜೀವಿಯ ಹೃದಯಾಲವಾಲಕ್ಕೆ ಪರೋಕ್ಷವಾಗಿ ಆಗುವ ಭಗವದಮೃತ ಸಿಂಚನ ಎಂದು.ಆ ಪರಿಚಯದ ನಗುವನ್ನು ಕಂಡು ನಾನು ವಿಸ್ಮಿತನಾದೆ!!ಅಷ್ಟು ದೊಡ್ಡ ಸಭೆಯಲ್ಲಿ ಅವರಿಗೆ ನಾನು ಕಂಡುದಾದರೂ ಹೇಗೆ?!ಕಂಡರೂ ಎಂದೋ ನೋಡಿದ ಪರಿಚಯ ನೆನಪಿರುವುದಾದರೂ ಹೇಗೆ?!.
ಕರೆದು ಆತ್ಮೀಯತೆಯಿಂದ ಮಾತನಾಡಿಸಿದರು. ಮನಸ್ಸು ಹಿರಿಹಿರಿ ಹಿಗ್ಗಿತು..!ನನ್ನನ್ನು ಮಾತ್ರಾ ಹಾಗೆ ಮಾತನಾಡಿಸಿದ್ದು ಎಂದುಕೊಂಡಿದ್ದೆ,ಆದರೆ ಮಂತ್ರಾಕ್ಷತೆ ಸಾಲಿನಲ್ಲಿ ನಿಂತಾಗ ಅವರು ಅಲ್ಲಿದ್ದವರ ಪ್ರತಿಯೊಬ್ಬರ ಹೆಸರನ್ನು ಕರೆದು ಪ್ರೀತಿಯಿಂದ ಆಡುತ್ತಿದ್ದ ಮಾತುಗಳನ್ನು ನೋಡಿ ಮೂಕವಿಸ್ಮಿತಳಾದೆ..!ಅವರ ಸ್ಮರಣಶಕ್ತಿಯ ಕುರಿತಾಗಿ ಕೇಳಿದ್ದೆ, ಅಂದು ಕಂಡೆ.ಅಂದು ನನಗರಿವಿಲ್ಲದೆಯೇ ಅವರ ಬಗ್ಗೆ ಗೌರವ ಪ್ರೀತಿಗಳು ಮೂಡಿದವು.ಶರಣಾದೆ… ನನ್ನೆಲ್ಲ ಕಷ್ಟವನ್ನೂ ತೋಡಿಕೊಂಡೆ.
ಅಂದು ಶ್ರೀಸಂಸ್ಥಾನದ ನುಡಿಗಳಿಂದ ನನಗಾದ ಸಮಾಧಾನ ಇಂದಿಗೂ ಸ್ಪಷ್ಟವಾಗಿ ನೆನಪಿದೆ.ಯಾವ ಸಮಸ್ಯೆಯ ಪರಿಹಾರವು ಅಸಾಧ್ಯವೆಂದೇ ತೋರಿತ್ತೋ ಅದು, ಯಾವಾಗ ಶ್ರೀ ಸಂಸ್ಥಾನ ನಿವಾರಿಸಲುಪಕ್ರಮಿಸಿದರೋ ಆಗ ಮಂಜಿನಂತೆ ಕರಗಿ ಹೋಯಿತು.
ಶ್ರೀಸಂಸ್ಥಾನ ಪ್ರತಿ ಹಂತದಲ್ಲೂ ಖುದ್ದಾಗಿ ತಾವೇ ನಿಂತು ಪರಿಹಾರದ ಎಲ್ಲಾ ಉಪಕ್ರಮಗಳನ್ನು ಜರುಗಿಸಿ ನನಗೆ ಅಕ್ಷರಶಃ ಮರುಜನ್ಮವನ್ನೇ ನೀಡಿದರು.

ಸಮಸ್ಯೆಯ ಪರಿಹಾರ ಸಂಪೂರ್ಣವಾಗಿ ದೊರೆತ ಅನಂತರವೂ ಶ್ರೀಸಂಸ್ಥಾನದ ಸಾನಿಧ್ಯದಿಂದ ಮನಸ್ಸಿಗಾಗುತ್ತಿದ್ದ ಅನಿರ್ವಚನೀಯ ಅನುಭೂತಿಯಿಂದ ನನಗೆ ಮತ್ತೆ ಮತ್ತೆ ಗುರುಗಳನ್ನು ಭೇಟಿ ಮಾಡಬೇಕೆಂದು ಸದಾ ಅನ್ನಿಸತೊಡಗಿತು. ಎಲ್ಲವನ್ನೂ ಅವರಲ್ಲಿ ತೋಡಿಕೊಂಡು ಖಾಲಿಯಾಗಿಬಿಡಬೇಕೆನಿಸುತ್ತಿತ್ತು.ಮತ್ತೆ ಮತ್ತೆ ಹೋಗತೊಡಗಿದೆ.ಹೇಳಬೇಕೆಂದುಕೊಂಡ, ಹೇಳಬಹುದೋ ಹೇಳಬಾರದೋ ಗೊತ್ತಿಲ್ಲದ ನನ್ನ ರೂಕ್ಷ ಭಾವನೆಗಳನ್ನು ಶ್ರೀಸಂಸ್ಥಾನದ ಸಮಯ, ಕೆಲಸದ ಒತ್ತಡ, ಮನಸ್ಥಿತಿ ಇದಾವುದನ್ನೂ ಗಣಿಸದೆ ಹೇಳಿಕೊಳ್ಳತೊಡಗಿದೆ. ಸಣ್ಣ ಸಣ್ಣ ಸಮಸ್ಯೆಗಳನ್ನು ಕೂಡ ಬದುಕಿನ ಅದಾವುದೋ ಮಹತ್ಸಂಕಟವೋ ಎಂಬಂತೆ  ತೋಡಿಕೊಂಡೆ.ಆ ಎಲ್ಲ ಚಿಕ್ಕ ಪುಟ್ಟ ಸಮಸ್ಯೆಗಳಿಗೂ ಕೊಡಲಿಯಿಂದಲೇ ಪರಿಹಾರವೇನೋ ಎಂದುಕೊಂಡು ಹೋಗುತ್ತಿದ ನನಗೆ.ಒಂದೆರಡು ಮಾತುಗಳಲ್ಲೇ ಬರೀ ಉಗುರಿನಿಂದ ಚಿವುಟಿ ಪರಿಹರಿಸುವ ಅವರ ಸಾಮರ್ಥ್ಯದ ಕುರಿತಾಗಿ ಅಚ್ಚರಿಯಾಗತೊಡಗಿತು…! ನನ್ನ ಗಳಹುಗಳನ್ನು ನನಗಿಂತ ಹೆಚ್ಚು ಶ್ರದ್ಧೆಯಿಂದ ಕೂತು ಕೇಳಿದರು.ಸಮಸ್ಯೆಯನ್ನು ಎದುರಿಸುವ, ಅದರೆಡೆಗಿನ ನ್ಯೇತ್ಯಾತ್ಮಕ ದೃಷ್ಟಿಯನ್ನು ಬದಲಿಸುವ ಹೊಸ ಪಾಠಗಳನ್ನು ಹೇಳಿಕೊಡತೊಡಗಿದರು.ಸದಾ ಪ್ರಾಪಂಚಿಕ ಆಸೆಗಳೊಂದಿಗೆ ತೊಳಲಾಡುತ್ತಿದ್ದ ನನ್ನನ್ನು ಭಗವಂತನೆಂಬ ಮಹದ್ಗುರಿಯೆಡೆಗೆ ಸರಳ ಮಾತುಗಳಲ್ಲಿ ಪ್ರೇರಿಸಿದರು.ಆ ಮಾತುಗಳು ಆಚರಣೆಯಲ್ಲಿ ಪರ್ಯಾವಸಾನವಾಗುವಲ್ಲಿ ಅತೀವ ಕಾಳಜಿ ತೋರಿದರು.ಅವರ ಸಣ್ಣ ಸಣ್ಣ ಸೂಚನೆಗಳನ್ನೂ ಕೂಡ ಆಚರಣೆಗೆ ತರುವಲ್ಲಿ ನಾನು ಎಡವಿದಾಗಲೆಲ್ಲ,ಎಂತಹಾ ತಪ್ಪುಗಳಿಗೂ ಅದೊಂದು ಸಹಜ ದೋಷವೆಂಬಂತೆ ಹೇಳಿ ;ನಾನು ನನಗೇ ಕೀಳಾಗಿ ತೋರದಂತೆಯೂ ಆದರೆ ಅಪೇಕ್ಷಿತ ಬದಲಾವಣೆಯು ನನ್ನಲ್ಲಿ ಆಗುವಂತೆಯೂ ಮಾಡಿದ ಅವರ ಜಾದೂವಿನ ಕುರಿತಾಗಿ ಎಷ್ಟು ಹೇಳಿದರೂ ಕಡಿಮೆಯೇ…
ಭಗವಂತನ ಈ ಸೃಷ್ಟಿಯ ಬಗ್ಗೆ, ಸೃಷ್ಟಿಯಲ್ಲಿರುವ ನಮ್ಮಗಳ ಆದ್ಯ ಕರ್ತವ್ಯದ ಬಗ್ಗೆ ಅದೆಷ್ಟು ಸೊಗಸಾಗಿ ಹೇಳುತ್ತಿದ್ದರೆಂದರೆ ನಿಧಾನವಾಗಿ ನನ್ನ ಇರುವಿಕೆಯಲ್ಲಿ , ಉಡುಗೆ ತೊಡುಗೆಗಳಲ್ಲಿ , ಚಿಂತನೆಗಳಲ್ಲಿ, ಮಾಡುವ ಕಾರ್ಯಗಳಲ್ಲಿ ಬದಲಾವಣೆ ಆರಂಭವಾಯಿತು.ಒಟ್ಟಿನಲ್ಲಿ ಕೊಂಚ ಕೊಂಚವಾಗಿ ನನ್ನ ಬಾಳ್ವಿಕೆಯು ರೂಕ್ಷತೆಯಿಂದ ದಿವ್ಯತೆಯನ್ನು ಕಾಣುವೆಡೆಗೆ ಮುಖಮಾಡಿತು.

ಶ್ರೀಸಂಸ್ಥಾನವನ್ನು ಕಾಣುವ ಪೂರ್ವದಲ್ಲಿ, ಸಂಸ್ಥಾನ ಹೇಳಿದಂತಹ ಆದರ್ಶಗಳನ್ನು ನನ್ನ ಅಪ್ಪ-ಅಮ್ಮ ಸೇರಿದಂತೆ ಬಹಳ ಜನ ಹೇಳಿದುದನ್ನು ಕೇಳಿದ್ದೆ.ಆಯಾ ಸನ್ನಿವೇಶಗಳನ್ನು ಆದರಿಸಿ, ಆ ಕ್ಷಣದಲ್ಲಿ, ಅದನ್ನು ಅನುಷ್ಠಾನಕ್ಕೆ ತರಬೇಕೆಂದು ಅನ್ನಿಸಿತ್ತು ಕೂಡಾ.ಆದರೆ ಕೆಲಕಾಲದಲ್ಲೇ ಅಂದುಕೊಂಡ ಆದರ್ಶವು ಮರವೆಯಾಗಿ ಬಾಳುವೆಯು ಯಾವತ್ತಿನ ಸ್ಥರಕ್ಕೆ ಇಳಿದುಬಿಡುತ್ತಿತ್ತು.ಆದರೆ ಶ್ರೀಸಂಸ್ಥಾನದ ಮಾತುಗಳು ಮಾತ್ರ ಅಂತರಂಗದಲ್ಲಿ ಗಟ್ಟಿಯಾಗಿ ನಿಂತು ಸದಾ ಆ ಕುರಿತಾಗಿ ಮನಸ್ಸು ಜಾಗೃತವಾಗಿರುವಂತೆ ಮಾಡುತ್ತದೆ.ಏಕೆಂದರೆ ಅವರ ಮಾತು ಬರೀ ಮಾತಾಗದೆ ಹೃದಯ-ಬುದ್ಧಿ-ಮನೋಮಯಕೋಶಗಳನ್ನು ಆದ್ಯಂತವಾಗಿ ಸ್ಪರ್ಷಿಸುವ,ತನ್ಮೂಲಕ ಸಂಪೂರ್ಣ ವ್ಯಕ್ತಿತ್ವದಲ್ಲೇ ಹೊಸ ಮಾರ್ಪಾಡುಗಳನ್ನು ಮಾಡಿಬಿಡುವ ಅಪೂರ್ವ ಶಕ್ತಿಯಳ್ಳದ್ದು.
ಅದೆಷ್ಟೋ ಕಾಲದಿಂದ ಭಾವಕೋಶಗಳ ಮೇಲಾದ ಕುಸಂಸ್ಕಾರಗಳನ್ನು ಅವರ ಒಂದು ಮಾತು, ಒಂದು ಸೂಚನೆ, ಒಂದು ನಗು ಒರೆಸಿಹಾಕಿಬಿಡುತ್ತದೆ ಎಂದಾದಲ್ಲಿ ಶ್ರೀಸಂಸ್ಥಾನ ಸೂಕ್ಷ್ಮಾತಿಸೂಕ್ಷ್ಮಭಾವಸಂರಚನಾ ಕೌಶಲವನ್ನು ಅರಿತವರೂ, ವ್ಯಕ್ತಿಯ ಮೂಲದಲ್ಲೇ ಅಡಗಿರುವ ದೋಷಗಳನ್ನು ತೊಡೆಯುವ ಪರಿಣಿತರೂ ಆಗಿದ್ದಾರೆಂಬುದಕ್ಕೆ ಇದಕ್ಕಿಂತ ಬೇರೆ ಸಾಬೀತು ಬೇಕಾಗಿಲ್ಲವಷ್ಟೆ… ಇಂತಹ ಪರಿಣಿತಿಯನ್ನೂ, ಕೌಶಲವನ್ನೂ ದೈವಾಂಶಸಂಭೂತರಲ್ಲದೆ ಕೇವಲ ಮನುಷ್ಯಮಾತ್ರರು  ತೋರಲಶಕ್ಯವೇಂದೇ ನನ್ನ ನಂಬುಗೆ…

ಆ ಪರಮಕರುಣಾಮಯಿಯಾದ ಭಗವಂತನು ಇಂತಹ ಮಹಾಮಹಿಮರ ಸಂಪರ್ಕವನ್ನು ನನಗೊದಗಿಸಿದ್ದಕ್ಕೆಆ ಭಗವಂತನಿಗೆ, ಗುರುಪೀಠಸ್ಥಿತ ಆತನ ಪ್ರತಿರೂಪಿಗೆ ಕೋಟಿ ಕೋಟಿ ಹೃದ್ಯ ನಮನಗಳು…

ಮಣಿಮಂತ್ರ ತಂತ್ರಸಿದ್ದಿಗಳ ಸಾಕ್ಷಗಳೇಕೆ
ಮನಗಾಣಿಸಲು ನಿನಗೆ ದೈವದದ್ಭುತವ?|
ಮನಜರೊಳಗಾಗ ತೋರ್ತ ಮಹನೀಯಗುಣ-
ವನುವಾದ ಬೊಮ್ಮನದು- ಮಂಕುತಿಮ್ಮ||
ಪರಿಚಯ:
ಕು. ಅಶ್ವಿನಿ, ಇವರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಹನ್ನಾರ ಸೀಮೆಯ ಉಡುಚೆ ಜನಾರ್ಧನ ಭಟ್ ಹಾಗೂ ವರದಾಂಬಿಕೆ ಇವರ ಸುಪುತ್ರಿ .
ಎಂ.ಸಿ.ಎ ಪದವೀಧರೆ.
ಪ್ರಸ್ತುತ  SAP ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.
ಇವರು ಅವಲಂಬನದ ಸಕ್ರಿಯ ಸದಸ್ಯರು ಹಾಗೂ ಶ್ರೀಮಠದ ನಿಷ್ಠಾವಂತ ಕಾರ್ಯಕರ್ತರು.

 

Facebook Comments