ಪರಮಪೂಜ್ಯ ಸದ್ಗುರುವಿನ ಪಾದಾರವಿಂದಗಳಿಗೆ ಶಿರಸಾ ನಮಿಸಿ, ಗೋಮಾತೆಗೂ ವಂದಿಸುವೆ.

“ಪ್ರತಿಯೊಂದು ವ್ಯಕ್ತಿಯಲ್ಲಿನ ಆತ್ಮಶಕ್ತಿಯನ್ನು ಜಾಗೃತಗೊಳಿಸುವ ಆತ್ಮೋದ್ಧಾರದ ಹೆದ್ದಾರಿಯಲ್ಲಿ ನಮ್ಮನ್ನೆಲ್ಲ ಮುನ್ನಡೆಸುತ್ತಾ ಬಂದಿರುವ ನಮ್ಮೆಲ್ಲರ ಶ್ರೇಷ್ಠ ಗುರು ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ ಚರಣಕಮಲಗಳಿಗೆ ಅನಂತ ಕೋಟಿ ಪ್ರಣಾಮಗಳು.

ಹದಿನೇಳು ವರ್ಷದ ಹಿಂದೆ ಶ್ರೀಗಳು ನಮ್ಮ ಗುರುಪೀಠಕ್ಕೆ ಆಯ್ಕೆಯಾಗಿ ಬೆಂಗಳೂರಿನ ಶ್ರೀ ಬಿ. ಕೃಷ್ಣ ಭಟ್ಟರ ಮನೆಯಲ್ಲಿ ಅವರ ಪೂರ್ವಾಶ್ರಮದ ಅಜ್ಜನೊಂದಿಗೆ ಇರುವಾಗ ಅವರುಗಳಿಗೆ ಫಲ ನೀಡಿ, ಶಾಲು ಹೊದಿಸಿ ಬೀಳ್ಕೊಟ್ಟ ಕ್ಷಣ. ಗಿರಿನಗರದಲ್ಲಿ ಶ್ರೀಗುರುಗಳು ಸಂನ್ಯಾಸದೀಕ್ಷೆ ಪಡೆದು, ಕಾವಿ ಧಾರಣೆ ಮಾಡಿ, “ಶಂಕರ”ರಾಗಿ ನಮ್ಮ ಸಮಾಜದ ಉದ್ಧಾರಕ್ಕಾಗಿ ಪಾದಾರ್ಪಣೆ ಮಾಡಿದ ಕ್ಷಣದಿಂದ ನಾನು ಅವರನ್ನು ತುಂಬ ಹತ್ತಿರದಿಂದ ನೋಡಿ ಆನಂದವನ್ನು ಅನುಭವಿಸಿರುವೆ. ಮೊಟ್ಟಮೊದಲ ಆಶೀರ್ವಚನದ ಸಂದರ್ಭ ಹತ್ತು ನಿಮಿಷ ಮೌನಮಾಡಿ, ಎಲ್ಲರೂ ಎಲ್ಲರೂ ಬೆರಗಾಗುವಂತೆ ಐವತ್ತು ನಿಮಿಷಗಳ ನಿರರ್ಗಳ ಆಶೀರ್ವಚನ ನೀಡಿದರು.

ಶ್ರೀಶ್ರೀಗಳವರಲ್ಲಿ ನಾನು ಕಂಡಿದ್ದು ಅವರ ಆತ್ಮೀಯ ನಗು, ಪ್ರೀತಿಯ ಮಾತು, ಪ್ರೀತಿ ಉಕ್ಕುವಂಥ ಆತ್ಮೀಯ ನೋಟ, ಮಾತೃವಾತ್ಸಲ್ಯ-ಕರುಣಾಮಯಿ. ಚಿಕ್ಕ ಮಕ್ಕಳಿಂದ-ವೃದ್ಧರವರೆಗೂ ಶ್ರೀಗಳೆಂದರೆ ಪ್ರೀತಿ. ಅವರ ಸರಳ ವ್ಯಕ್ತಿತ್ವ ಬಡವ-ಬಲ್ಲಿದ ಎನ್ನುವ ತಾರತಮ್ಯವಿಲ್ಲದೆ, ಪುರುಷ-ಮಹಿಳೆ ಎನ್ನುವ ಬೇಧವಿಲ್ಲದೆ ಎಲರನ್ನೂ ಸಮಾನ ದೃಷ್ಟಿಯಿಂದ ನೋಡುವ ರೀತಿ ಹಾಗೆಯೇ ಎಲ್ಲರಿಗೂ ಅರ್ಥವಾಗುವಂತೆ ನೀಡುವ ಆಶೀರ್ವಚನ-ಉಪಕಥೆಗಳು ನೆನೆಸಿದರೇ ಮನ ತುಂಬಿ ಬರುತ್ತದೆ. ಅವರು ಪ್ರೀತಿಯಿಂದ ಸುಶೀಲಕ್ಕ ಎಂದು ಕರೆದರೆ ತುಂಬ ಮುಜುಗರವಾಗುತ್ತಿತ್ತು. ಆದರೆ ಅವರು ಬಂದಾಗ ಒಮ್ಮೆ ಹೆಸರು ಕರೆದರೆ ಏನೋ ಒಂದು ತರಹದ ಆನಂದ ಸಿಗುತ್ತದೆ. ಒಮ್ಮೆ ಅವರ ದರ್ಶನ ಮಾಡಿದರೆ, ಶರಣಾಗಿ ಮತ್ತೆ ಮತ್ತೆ ನೋಡುವಂತಾಗುತ್ತದೆ.

ನನಗೆ ಶ್ರೀಗುರುಪೀಠದ ಮೊಟ್ಟಮೊದಲ ಸಂಪರ್ಕ ಆಗಿದ್ದು ೧೯೬೯ರಲ್ಲಿ, ಆಗಿನ್ನೂ ನನಗೆ ೧೦ವರ್ಷ. ನನ್ನ ಸೋದರಮಾವ ಮುಟುಗುಪ್ಪೆಯ ಅಡೇಮನೆ ಗೋಪಾಲಯ್ಯರವರ ಮನೆಯಲ್ಲಿ ಪರಮಪೂಜ್ಯ ಶ್ರೀ ಶ್ರೀ ರಾಘವೇಂದ್ರಭಾರತೀಮಹಾಸ್ವಾಮಿಗಳವರು ಒಂದು ವಾರ ಮೊಕ್ಕಾಂ ಹೂಡಿದ್ದರು. ಆಗ ನನ್ನ ತಂದೆ-ತಾಯಿಯರ ಜೊತೆ ಹೋಗಿ ಶ್ರೀಕರಾರ್ಚಿತ ಪೂಜೆ ನೋಡಿದ್ದು ಇನ್ನೂ ನೆನಪಿದೆ.

ಶ್ರೀಗುರುಗಳು ಮಾಡುವ ಶ್ರೀಕರಾರ್ಚಿತಪೂಜೆ ಎಲ್ಲರ ಕಣ್ಮನ ಸೆಳೆಯುವಂತಿದೆ. ಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಮಾಡಿದ ಮೊಟ್ಟಮೊದಲ ಪೂಜೆ ನೋಡುವ ಭಾಗ್ಯ ನನಗೆ ಲಭಿಸಿತ್ತು. ಅಲ್ಲಿಂದ ಇಲ್ಲಿಯವರೆಗೆ ಪೂಜ್ಯರು ಗಿರಿನಗರದ ಶಾಖಾಮಠಕ್ಕೆ ಬಂದಿರುವಾಗಲೆಲ್ಲಾ ಅಷ್ಟೂ ಬಾರಿ ಸ್ವಾಗತ ಮಾಡಲು, ಶ್ರೀಕರಾರ್ಚಿತ ಪೂಜೆ ನೋಡಿ ಆನಂದಿಸಲು ಅನುಕೂಲ ಒದಗಿ ಬಂದಿತ್ತು. ಆ ಸೌಭಾಗ್ಯ ನನ್ನದಾಗಿತ್ತು. ದೊಡ್ಡಗುರುಗಳು ಮುಕ್ತರಾದಂದಿನಿಂದ ವಿದ್ಯಾಮಂದಿರದಲ್ಲಿ ಅವರ ವಿಶ್ರಾಂತಿ ಕೊಠಡಿಯಲ್ಲಿ ಪ್ರತಿ ದಿನ ದೀಪ ಬೆಳಗುವ ಭಾಗ್ಯ ನನಗೆ ದೊರಕಿದ್ದು, ಹದಿನಾರು ವರ್ಷಗಳಿಂದ ನಿರಂತರ ಸೇವೆ ಮಾಡುವ ಯೋಗ ಶ್ರೀಗುರುಕೃಪೆಯಿಂದ ಒದಗಿ ಬಂದಿದೆ.

ಶ್ರೀಗುರುಗಳ ಸೇವೆಗೆ ತೊಡಗಿಕೊಳ್ಳುವ ಪೂರ್ವದ ಒಂದು ಸಂದರ್ಭ ಶ್ರೀ ಶ್ರೀಗಳಲ್ಲಿ ಕೇಳಿದ್ದು ‘ಒಂದು ರೂಪಾಯಿ ಕೊಡುವ ಶಕ್ತಿ ನನಗಿಲ್ಲ, ನಾನು ಬಂದು ಸೇವೆ ಮಾಡಬಹುದಾ’ ಇದಕ್ಕೆ ಪೀಠದಲ್ಲಿದ್ದ ಶ್ರೀಗಳು “ತಂಗೀ, ಧರ್ಮ ಮೇಲಿದ್ದು, ದುಡ್ಡು ಕೆಳಗಿದ್ದು ನೀನು ದಿನಾಲು ಮನೆಯಲ್ಲಿ ಬಿಟ್ಟ ಹೂ ತುಳಸಿ ತಂದುಕೊಡು. ಯಾವಾಗಲೂ ಸೇವೆ ಮಾಡು” ಎಂದು ಮಂತ್ರಾಕ್ಷತೆ ಕೊಟ್ಟು ಆಶೀರ್ವದಿಸಿದ್ದರು. ಅಂದಿನಿಂದ ಇಂದಿನವರೆಗೂ ಮನೆಯವರ ಮತ್ತು ಮಕ್ಕಳ ಸಹಕಾರದಿಂದ ಸೇವೆ ಮಾಡುತ್ತಾ ಬಂದಿರುವೆ. ಎಲ್ಲವೂ ಪ್ರಭು ಶ್ರೀರಾಮಚಂದ್ರನ ಹಾಗೂ ಗುರುವಿನ ಇಚ್ಛೆ.

ಶ್ರೀಗಳು ಪೀಠಾರೋಹಣ ಮಾಡಿ, ದಂತಸಿಂಹಾಸನಾರೂಢರಾಗಿ ತಮ್ಮ ಯೋಜನೆಗಳ ವಿವರಗಳನ್ನು ನೀಡಿದ ಕ್ಷಣ, ತಮ್ಮನ್ನೇ ಸಮಾಜಕ್ಕೆ ಅರ್ಪಿಸಿದ ಆ ಕ್ಷಣ ರೋಮಾಂಚನವಾಗಿತ್ತು. ಶ್ರೀಗಳ ೧೯ ಕಿರೀಟೋತ್ಸವ, ೧೪ ಚಾತುರ್ಮಾಸ್ಯ, ಮತ್ತು ಎಲ್ಲ ಪ್ರಮುಖ ಕಾರ್ಯಕ್ರಮಗಳಲ್ಲೂ ಕಾರ್ಯಕರ್ತೆಯಾಗಿ ಅಳಿಲುಸೇವೆ ಮಾಡುವ ಸುಯೋಗ ಆ ಗುರುದೇವತಾನುಗ್ರಹದಿಂದ ಪ್ರಾಪ್ತವಾಗಿದೆ.

ಮೊಟ್ಟಮೊದಲು ಶ್ರೀಮಠದ ಮುಷ್ಟಿಭಿಕ್ಷೆ ಯೋಜನೆಯಲ್ಲಿ ಭಾಗಿಯಾದಾಗ, ಶತಕೋಟಿ ಕುಂಕುಮಾರ್ಚನೆಯಲ್ಲಿ ಪಾಲ್ಗೊಳ್ಳುವಾಗ, ಎಲ್ಲ ಹಂತಗಳಲ್ಲೂ ಗುರುವಿನಿಚ್ಛೆಯಿದು, ನನ್ನಯ ಭಾಗ್ಯವಿದು ಎನ್ನುತ್ತಿತ್ತು ಮನಸ್ಸು.

ಶ್ರೀಗುರುಗಳು ವಿದ್ಯಾಮಂದಿರದಲ್ಲಿದ್ದಾಗ ಪರಿವಾರದ ಮಕ್ಕಳೊಂದಿಗೆ ಪಾಠಕ್ಕೂ ಹೋಗಿ ಕುಳಿತುಕೊಳುತ್ತಿದ್ದೆ. ಅವರು ನಮಗೆ ಅರ್ಥವಾಯಿತೆಂದು ಕೇಳಲು ‘ಮನಸ್ಸಿಗೆ ಬಂತಾ’ ಎಂದು ಕೇಳುತ್ತಿದ್ದರು. ಅದೆಷ್ಟು ಸುಂದರ ಕ್ಷಣಗಳು. ಒಮ್ಮೊಮ್ಮೆ ಮೊದಲಿನ ಆ ಗುರುಗಳೇ ಬೇಕಾಗಿತ್ತು ಎಂದು ಅನಿಸುತ್ತದೆ.

ಶ್ರೀರಾಮಾಯಣ ಮಹಾಸತ್ರದಲ್ಲಿ ಶ್ರೀರಾಮಪಟ್ಟಾಭಿಷೇಕ ಸಂದರ್ಭ ಶ್ರೀಗಳು ಶ್ರೀಮಠದ ಸಮಸ್ತವನ್ನು ಶ್ರೀರಾಮನಿಗೆ ಅರ್ಪಿಸಿ, ತಮ್ಮನ್ನೆ ತಾವು ಶ್ರೀರಾಮನಿಗೆ ಸಮರ್ಪಣೆ ಮಾಡುವ ಕ್ಷಣ. ನನಗೂ ನನ್ನನ್ನೇ ಶ್ರೀರಾಮನಾದ ಶ್ರೀಗುರುಗಳಿಗೆ “ಆತ್ಮಾರ್ಪಣೆ” ಮಾಡುವಂಥ ಸೌಭಾಗ್ಯ ಗೊತ್ತಿಲ್ಲದೆ ತಾನಾಗಿಯೇ ಆಯಿತು. ನನ್ನ ಸರ್ವಸ್ವವನ್ನು – ನನ್ನ ಸಂಸಾರವನ್ನು ಶ್ರೀರಾಮನಿಗೇ ಸಮರ್ಪಣೆ ಮಾಡಿರುವೆ ನನ್ನ ಭಕ್ತಿಯನ್ನು ಶ್ರೀಗುರುಗಳು ಒಪ್ಪಿಕೊಳ್ಳಬೇಕು.

ನಾವು ೨೧ ವರ್ಷಗಳ ಹಿಂದೆ ಯುಗಾದಿ ಹಬ್ಬದಿನ ಗಿರಿನಗರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ಬಂದು ನೆಲೆಸಿದೆವು. ಅದಾದ ಶ್ರೀರಾಮನವಮಿಯಲ್ಲಿ ಶ್ರೀಗುರುಪೀಠ-ದೊಡ್ಡಗುರುಗಳ ಮಾರ್ಗದರ್ಶನದ ಭಾಗ್ಯ ಹಾಗೆಯೇ ಅಂದಿನಿಂದ ಇಂದಿನವರೆಗೂ ಶ್ರೀಪೀಠದ ನಿರಂತರ ಸೇವೆ ಮಾಡುವ ಭಾಗ್ಯ ಲಭಿಸಿತು. ನನ್ನ ಮಕ್ಕಳ ಬಾಲ್ಯ, ವಿದ್ಯಾಭ್ಯಾಸ, ಉದ್ಯೋಗ ಎಲ್ಲ ಹಂತಗಳಲ್ಲೂ ಶ್ರೀಗುರು ಅನುಗ್ರಹ ನಮ್ಮ ಮೇಲಾಗಿದೆ ಎಂದು ನಂಬುತ್ತೇನೆ.

ನಮ್ಮ ಮನೆ ಶ್ರೀಮಠದ ಹತ್ತಿರವೇ ಇರಬೇಕೆಂಬ ಆಸೆ. ಅದರಂತೆ ಗಿರಿನಗರದ ಶಾಖಾಮಠದ ಸನಿಹದಲ್ಲೇ ಗೃಹ ನಿರ್ಮಾಣದ ಕನಸು ಸಾಕಾರವಾಗಿ ಶ್ರೀಗುರುಗಳು ಸವಾರಿ ಸಮೇತ ಬಂದು ಯುಗಾದಿಹಬ್ಬದ ದಿನ ಶ್ರೀಕರಾರ್ಚಿತಪೂಜೆ ಮಾಡಿದ ಕ್ಷಣಗಳು ಅವಿಸ್ಮರಣೀಯ. ನಮ್ಮನ್ನು ಉದ್ಧಾರಮಾಡಿ ಸಲಹಿದ ಜಗತ್ತಿನ ಅತ್ಯಮೂಲ್ಯರತ್ನ “ಶ್ರೇಷ್ಠ ಸದ್ಗುರು” ವಿಗೆ ಕೋಟಿ ಕೋಟಿ ನಮನಗಳು.

ನನಗೆ ದೊಡ್ಡಗುರುಗಳು ಒಮ್ಮೆ ಹೇಳಿದ ಮಾತು ನೆನಪಾಗುತ್ತದೆ. ನಾನು ಅವರ (ಕೆಕ್ಕಾರು ಮಠದಲ್ಲಿದ್ದಾಗ) ಹತ್ತಿರ ಈಗಿನ ನಮ್ಮ ಶ್ರೀಗಳು ವಯಸ್ಸಿನಲ್ಲಿ ತುಂಬ ಚಿಕ್ಕವರು. ನಿಮ್ಮ ಜೊತೆಯಲ್ಲೇ ಇಟ್ಟುಕೊಂಡು ಸಲಹೆ ನೀಡಿದರೆ ಒಳ್ಳೆಯದಲ್ಲವೇ ಎಂದು ಹೇಳಿದಾಗ ಅವರು ಮುಗುಳು ನಗೆ ಬೀರಿ, “ತಂಗೀ, ನೀನು ಚಿಂತೆ ಮಾಡಬೇಡ ನಮ್ಮ ಶ್ರೀಗಳು ತಮಗಿಂತ ಜ್ಞಾನಶಕ್ತಿಯಲ್ಲಿ ನಾಲ್ಕುಪಟ್ಟು ಮೇಲಿರುವರು. ಅವರು ಅನುಭವದಿಂದಲೇ ಮೇಲೆ ಬಂದು ಜಗತ್ತಿಗೇ ಗುರುಗಳಾಗಿ ರಾರಾಜಿಸವರು. ಅದನ್ನು ನೀನು ನೋಡುವೆ” ಎಂದು ಹೇಳಿದ್ದರು. ಅದು ಸತ್ಯವಾಯಿತು. ಬರೆಯುತ್ತಾ ಹೋದರೆ ಶ್ರೀಗಳ ಮಹಿಮೆ ಅತ್ಯದ್ಭುತ-ಅನಂತ-ವರ್ಣಿಸಲಸಾಧ್ಯ ಪ್ರತ್ಯಕ್ಷ ಪರಮಾತ್ಮ ಶ್ರೀಶ್ರೀರಾಮ. ಇಂತಹ ಮಹಾತ್ಮರು ನಮ್ಮ ಸಮಾಜದ – ದೇಶದ ಅತ್ಯಮೂಲ್ಯ ರತ್ನ. ತ್ರಿಕಾಲಜ್ಞಾನಿಗಳು, ಅಜ್ಞಾನವೆಂಬ ಕತ್ತಲೆಗೆ ಜ್ಯೋತಿ ಸ್ವರೂಪವಾದ ಜಗದ್ಗುರುವು.

ಶ್ರೀಗುರುಗಳು ಮೊಟ್ಟಮೊದಲು ಬೆಂಗಳೂರಿನಲ್ಲಿ ಸಂಘಟನೆ ಮಾಡಲು ಸಭೆ ಕರೆದಿದ್ದರು ಮೊದಲ ಎರಡು ಸಭೆಗಳಲ್ಲಿ ನಾನು, ಗಿರಿನಗರದ ಶ್ರೀ ರಾಮಚಂದ್ರ ಭಟ್ಟರು ಮತ್ತು ಡಾ|| ನರಹರಿ ರಾವ್ ಮೂರು ಜನರಿದ್ದೆವು. ಶ್ರೀಗಳು ಧೈರ್ಯಗೆಡದೆ “ಎಲ್ಲ ಮನೆಗಳಿಗೆ ಹೋಗಿ ಕರೆಯಿರಿ ಏನಾದರೂ ಹೇಳಿದರೆ ತಮಗೆ ಶ್ರೀರಾಮನಿಗೆಂದು ತಿಳಿದು ಕರೆದುಕೊಂಡು ಬನ್ನಿ. ನಿಮ್ಮ ಹೃದಯದಲ್ಲಿ ಸ್ವಲ್ಪ ಜಾಗಕೊಡಿ” ಎಂದು ಹೇಳುತ್ತಿದ್ದರು. ಅದರಂತೆ ಈಗ ನಾವುಗಳು ಶ್ರೀಗಳ ಹೃದಯದಲ್ಲಿ ನೆಲೆಸುವಂತಾಗಬೇಕು.
ಶ್ರೀಮಠದ ಇತಿಹಾಸದಲ್ಲೇ ಮಹಿಳೆಯರು ಶ್ರೀಗಳೊಂದಿಗೆ ಮುಕ್ತವಾಗಿ ಮಾತನಾಡಿ ಅವರವರ ಅರಿಕೆಗಳನ್ನು ಮಾಡಿಕೊಳ್ಳುವ ಅವಕಾಶ ಮಾಡಿಕೊಟ್ಟು ಪರಿಹಾರ ಕಂಡುಕೊಳ್ಳಲು ದಾರಿ ಮಾಡಿಕೊಟ್ಟಿರುತ್ತಾರೆ. ಶ್ರೀಗುರುಗಳನ್ನು ಒಮ್ಮೆ ದರ್ಶನ ಮಾಡಿ ಭಕ್ತಿಯಿಂದ ಮನದಲ್ಲೇ ಪ್ರಾರ್ಥನೆ ಮಾಡಿದರೆ ಸಾಕು ಎಲ್ಲವೂ ಒಳ್ಳೆಯದಾಗುತ್ತದೆ. ಶ್ರೀಕರಾರ್ಚಿತ ಪೂಜೆ ಸಮಯದಲ್ಲಿ ಸಂಕಲ್ಪಿಸಿದ ಯಾವುದೇ ಉತ್ತಮ ಪ್ರಾರ್ಥನೆಗಳು ಕೂಡಾ  ಫಲಿಸುತ್ತವೆ. ಕಷ್ಟಗಳು ನಿವಾರಣೆಯಾಗುತ್ತವೆ. ಎಲ್ಲರೂ ಬನ್ನಿ, ಅವರ ದಿವ್ಯದರ್ಶನ, ಮಾರ್ಗದರ್ಶನ ಹಾಗೂ ಅನುಗ್ರಹಕ್ಕೆ ಪಾತ್ರರಾಗೋಣ. ಶ್ರೀಗಳ ಎಲ್ಲ ಯೋಜನೆಗಳಲ್ಲೂ ಕೈಜೋಡಿಸಿ ತನು-ಮನ-ಧನ ಸೇವೆ ಮಾಡಿ ಈ ಬಾಳು ಸಾರ್ಥಕಪಡಿಸಿಕೊಳ್ಳೋಣ. ಶ್ರೀಗಳ ಜ್ಞಾನದ ರೈಲು ಅಯೋಧ್ಯೆಗೆ ಹೊರಟಿದೆ ನಾವೆಲ್ಲ ಹತ್ತಿಕೊಂಡು ಮುಕ್ತಿಮಾರ್ಗ ಪಡೆಯೋಣ.

ಜಗನ್ಮಾತೆಯ ಮಮತೆಯ ಮಡಿಲಿನಲ್ಲಿ ನಿರಂತರವೂ ಸೇವೆ ಮಾಡೋಣ. ಎಲ್ಲರೂ ಬನ್ನಿ. ಈ ಉಸಿರಿರುವವರೆಗೂ ಶ್ರೀರಾಮನಾಗಿ ರಾರಾಜಿಸುತ್ತಿರುವ ಶ್ರೀಗುರುಗಳಿಗೆ ನನ್ನ ಸಮರ್ಪಣೆ.

ಪರಿಚಯ

ಶಿವಮೊಗ್ಗ ಜಿಲ್ಲೆಯ ಕೆಳದಿ ಸೀಮೆ ಕಾನುಗೋಡು ಉದ್ರೆಮನೆಯ ಶ್ರೀಮತಿ ಸುಮಿತ್ರಮ್ಮ ಮತ್ತು ದಿ|| ಶ್ರೀ ರಾಮಕೃಷ್ಣಪ್ಪ ಇವರ ಪ್ರಥಮ ಪುತ್ರಿಯಾಗಿ

೧೯೫೯ರಲ್ಲಿ ಜನಿಸಿದ ಇವರು ಪ್ರಾಥಮಿಕ ವಿದ್ಯಾಭ್ಯಾಸವನ್ನು ಕಾನುಗೋಡು ಶಾಲೆಯಲ್ಲಿ ಪೂರೈಸಿ ಪ್ರೌಢ ಶಿಕ್ಷಣವನ್ನು ಬೆಳೆಯೂರಿನ ಭಾರತೀ ವಿದ್ಯಾಲಯದಲ್ಲಿ
ಪಡೆದಿರುತ್ತಾರೆ.೧೯೮೧ರಲ್ಲಿ ಕೆಳದಿ ಹಾರೇಕೊಪ್ಪ ವೆಂಕಟಗಿರಿಯವರ ಕೈಹಿಡಿದು ಗೃಹಸ್ಥಾಶ್ರಮಕ್ಕೆ ಕಾಲಿರಿಸಿದ ಇವರು ಸಂತೃಪ್ತ ಗೃಹಿಣಿಯಾಗಿ ಜೀವನ ನಡೆಸುತ್ತಿದ್ದಾರೆ.

ಬೆಂಗಳೂರು ಸೀಮಾ ಪರಿಷತ್ತು ಮಹಿಳಾ ವಿಭಾಗದ ಸಹಕಾರ್ಯದರ್ಶಿಯಾಗಿ ಮತ್ತು ಕುಂಕುಮಾರ್ಚನೆ ವಿಭಾಗದ ಸಂಚಾಲಕರಾಗಿ ೫ ವರ್ಷ ಸೇವೆ,

ಗಿರಿನಗರ ಮಹಿಳಾ ಪರಿಷತ್ತು ಕಾರ್ಯದರ್ಶಿಯಾಗಿ ೭ ವರ್ಷ ಸೇವೆ, ಹಾಗೂ  ಮುಷ್ಟಿ ಭಿಕ್ಷಾ ಯೋಜನೆಯಲ್ಲಿ ಸಂಚಾಲಕರಾಗಿ ಕೂಡಾ ದುಡಿದಿದ್ದು,

ಪ್ರಸ್ತುತ ಗಿರಿನಗರ ಶಾಖಾಮಠ ಶ್ರೀರಾಮಾಶ್ರಮದ ನಿರ್ವಹಣಾ ಸಮಿತಿ ಸದಸ್ಯರಾಗಿದ್ದು ನಿರಂತರ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.

ಇವರಿಗೂ ಕುಟುಂಬಕ್ಕೂ  ಶ್ರೀಗುರುದೇವತಾನುಗ್ರಹ ಸದಾ ಇರಲೆಂದು ಹಾರೈಸುತ್ತೇವೆ.

Facebook Comments