ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.
ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ ಶ್ರೀಗುರುಚರಣಕೆ....

ಶ್ರದ್ಧಾಸುಮ ಶ್ರೀಗುರುಚರಣಕೆ….

ಶ್ರದ್ಧಾಸುಮ 3:

ಶ್ರೀಮಠ ಮತ್ತು ಪೂಜ್ಯ ಶ್ರೀಶ್ರೀಗಳವರು  

ಹೊಸಬಾಳೆ ಶ್ರೀನಿವಾಸರಾವ್

1945 ರಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದಲ್ಲಿ ನಡೆದ ಶ್ರೀಮದ್ರಾಘವೇಂದ್ರ ಭಾರತೀ ಸ್ವಾಮಿಗಳವರ ಶಿಷ್ಯ ಪರಿಗ್ರಹ-ಯೋಗ ಪಟ್ಟಾಭಿಷೇಕ ಸಮಾರಂಭಗಳಲ್ಲಿ ನನ್ನ ಪೂಜ್ಯ ತಂದೆಯವರಾದ ಹೊಸಬಾಳೆ ಸುಬ್ಬರಾಯರ ಜೊತೆ ನಾನೂ ಭಾಗವಹಿಸಿದ್ದೆ. ಆಗಿನ್ನೂ ಹುಡುಗನಾಗಿದ್ದೆ. ಅಂದಿನ ಸಮಾರಂಭದ ಸವಿನೆನಪು ಮರೆಯಲಾರೆ. ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಮದ್ರಾಮಚಂದ್ರ ಭಾರತೀ ಸ್ವಾಮಿಗಳವರ ತೇಜಸ್ಸು ನೋಡಿದಾಗ  ನಮಗರಿವಿಲ್ಲದಂತೆಯೇ ಭಕ್ತಿಭಾವ ಮೂಡುತ್ತಿತ್ತು. ನನ್ನ ದೊಡ್ಡಪ್ಪನವರ ಸೇವಾದಿನದಲ್ಲಿ ಮಠದಲ್ಲಿದ್ದ ಹಸ್ತಿದಂತದಲ್ಲಿ ನುರಿತ ಕಲಾವಿದರಿಂದ ಸಿಂಹಾಸನವನ್ನು ಮಾಡಿಸಿಕೊಡುವ ಪ್ರಸ್ತಾಪವನ್ನು ಶ್ರೀಶ್ರೀಮದ್ ರಾಮಚಂದ್ರ ಭಾರತೀಸ್ವಾಮಿಗಳವರಲ್ಲಿ ಬಿನ್ನವಿಸಿ-ಅದಕ್ಕೆ ಸಮ್ಮತಿಸಿದ್ದು, ಸೊರಬದ ನಮ್ಮ ಮನೆಯಲ್ಲಿ ಗುಡಿಗಾರ ಮೂ| ಹಿರಿಯಣ್ಣಪ್ಪನವರ ನೇತೃತ್ವದಲ್ಲಿ ಸುಮಾರು ಹದಿನಾರು ವರ್ಷಗಳಲ್ಲಿ ಶ್ರೀ ರಾಮಾಯಣ- ಮಹಾಭಾರತ ದೃಶ್ಯದ-ಅಪೂರ್ವ ಕಲಾಕೃತಿಯಲ್ಲಿ ರಚಿಸಿದ್ದು, ಅಷ್ಟರಲ್ಲಿ ದೊಡ್ಡಪ್ಪನವರು ನಿಧನರಾಗಿದ್ದು, ನನ್ನ ತಂದೆಯವರು ಸದರಿ ಪೂರ್ಣಗೊಂಡ ಹಸ್ತಿದಂತ ಸಿಂಹಾಸನವನ್ನು ಶ್ರೀಮದ್ರಾಮಚಂದ್ರ ಭಾರತೀ ಸ್ವಾಮಿಗಳವರಿಗೆ 1936 ರಲ್ಲಿ ಅರ್ಪಿಸಿ, ಮಂತ್ರಾಕ್ಷತೆ ಪಡೆದರು. 1946 ರಲ್ಲಿ ಶ್ರೀಮದ್ರಾಮಚಂದ್ರ ಭಾರತೀ ಸ್ವಾಮಿಗಳವರ ನಿರ್ದೇಶನದಂತೆ ಶ್ರೀಮದ್ರಾಘವೇಂದ್ರ ಭಾರತೀ ಸ್ವಾಮಿಗಳವರ ಉನ್ನತ ವಿದ್ಯಾಭ್ಯಾಸಕ್ಕೋಸ್ಕರ ಶ್ರೀಕ್ಷೇತ್ರ ಕಾಶಿಗೆ ನನ್ನ ತಂದೆಯವರು ಶ್ರೀಶ್ರೀಗಳವರನ್ನು ವ್ಯವಸ್ಥಿತ ರೀತಿಯಲ್ಲಿ ಕರೆದುಕೊಂಡು ಹೋಗಿ ಬಿಟ್ಟು ಬಂದರು. 1949 ರಲ್ಲಿ ಶ್ರೀಮದ್ರಾಮಚಂದ್ರ ಭಾರತೀ ಸ್ವಾಮಿಗಳವರು ಕೆಕ್ಕಾರಿನಲ್ಲಿ ಬ್ರಹ್ಮೈಕ್ಯರಾದೊಡನೆ ಪೂಜ್ಯ ಗುರುವರ್ಯರು ಕಾಶಿಯಿಂದ ಕೆಕ್ಕಾರಿಗೆ ಬಂದು ಗುರುಪರಂಪರೆಗೆ ಅನುಗುಣವಾಗಿ ಕರ್ತವ್ಯವನ್ನು ಪೂರೈಸಿ, ಎಲ್ಲಾ ಮಠಗಳ ಆಡಳಿತ ನಡೆಸಲು ನನ್ನ ತಂದೆಯವರಿಗೆ ಸರ್ವಾಧಿಕಾರವನ್ನೂ, ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನೂ ರಚಿಸಿ, ಪುನಃ ವಿದ್ಯಾಭ್ಯಾಸ ಮುಂದುವರಿಸಲು ಕಾಶಿಗೆ ತೆರಳಿದರು. ಶ್ರೀ ಪೂಜ್ಯರ ವಿದ್ಯಾಭ್ಯಾಸದ ಅವಧಿಯಲ್ಲಿ ಕಾಶಿಯಿಂದ ಪ್ರತಿ ತಿಂಗಳು ವಿದ್ಯಾಭ್ಯಾಸದ ಪ್ರಗತಿ,ಆಡಳಿತದ ಬಗ್ಗೆ ವಿಚಾರಿಸುವ ಪತ್ರಗಳು ಬರುತ್ತಿದ್ದವು. 1952 ರಲ್ಲಿ  ಪರಮಪೂಜ್ಯರು  ವಿದ್ಯಾಭ್ಯಾಸ ಪೂರೈಸಿ ಕಾಶಿಯಿಂದ ತೀರ್ಥಹಳ್ಳಿ ಮಠಕ್ಕೆ ಆಗಮಿಸಿದಾಗ, ನಾನು ಅನಂತ ಭಟ್ಟರು ಕೊಡ್ಲಕೆರೆ, ಹಂದೆ ಶ್ಯಾನುಭೋಗರು, ಪೂರ್ಣಕುಂಭದೊಡನೆ ಸ್ವಾಗತಿಸಿದೆವು. ಆಗ 2-3 ತಿಂಗಳು ಪೂಜ್ಯ ಗುರುವರ್ಯರ ಸೇವೆ ಮಾಡುವ ಭಾಗ್ಯ ನನ್ನದಾಗಿತ್ತು. ಶ್ರೀಶ್ರೀಗಳವರು ಕಾಶಿಯಿಂದ ಹೊರಡುವಾಗ ಅವರು ವಿದ್ಯಾಭ್ಯಾಸ ಮಾಡುತ್ತಿದ್ದ ಶ್ರೀ ಸಾಂಗವೇದ ವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದ ಮಹಾಪಂಡಿತೋತ್ತಮರು ಹೃದಯಸ್ಪರ್ಶಿ ಬೀಳ್ಕೊಡುವಿಕೆ ಮಾಡಿರುವರು.
ಶ್ರೀಶ್ರೀಶ್ರೀಗಳವರು ಮಠಕ್ಕೆ ಆಗಮಿಸಿದ ನಂತರ ತಮ್ಮ ಅನುಷ್ಠಾನ-ಯೋಗಾಭ್ಯಾಸ-ಶ್ರೀ ಸೀತಾರಾಮಚಂದ್ರ – ಚಂದ್ರ ಮೌಳೀಶ್ವರ, ರಾಜರಾಜೇಶ್ವರಿ ಪೂಜೆ, ವಿದ್ಯಾರ್ಜನೆ ಜೊತೆಗೆ ನನ್ನ ತಂದೆಯವರ ಮತ್ತು ಅನಂತ ಭಟ್ಟರವರ ಜೊತೆ ಶ್ರೀಮಠಕ್ಕೆ ಸಂಬಂಧಪಟ್ಟ ಕಾಗದಪತ್ರಗಳು, ಆಡಳಿತ ವ್ಯವಹಾರಗಳ ಪರಿಶೀಲನೆಗಳನ್ನು ಸತತವಾಗಿ 1-2 ವರ್ಷ ಮಠದಲ್ಲಿದ್ದು ಅಭ್ಯಸಿಸಿದರು. ನಂತರ 1955 ರಲ್ಲಿ ನನ್ನ ತಂದೆಯವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿ,ಅಖಿಲ ಹವ್ಯಕ ಮಹಾಸಮ್ಮೇಳನವನ್ನು ತೀರ್ಥಹಳ್ಳಿಯಲ್ಲಿ ಯಶಸ್ವಿಯಾಗಿ ನಡೆಸಿ, ಸಮಾಜದ ಸಂಘಟನೆ-ಶ್ರೇಯೋಭಿವೃದ್ಧಿಗೆ ಬುನಾದಿ ಹಾಕಿದರು. ನಂತರದ ವರ್ಷದಲ್ಲಿ ಹವ್ಯಕ ಸಮಾಜದ ಎಲ್ಲಾ ಪ್ರಾಂತ್ಯಗಳಲ್ಲೂ ಸಂಚರಿಸುತ್ತಾ, ಧರ್ಮಪ್ರಚಾರ, ಮಠ, ಅದರ ಜಮೀನುಗಳ ಅಭಿವೃದ್ಧಿಗಾಗಿ ಕಾರ್ಯಪ್ರವೃತ್ತರಾದರು. ಗೋಕರ್ಣಮಠ, ಕೆಕ್ಕಾರು ಮಠ, ರಾಮಚಂದ್ರಾಪುರ ಮಠ, ತೀರ್ಥಹಳ್ಳಿ ಮಠ, ಭಾನ್ಕುಳಿ ಮಠ ಈ ಎಲ್ಲಾ ಮಠಗಳ ಕಟ್ಟಡಗಳೂ ಜೀರ್ಣಾವಸ್ಥೆಯಲ್ಲಿದ್ದವು. ಹಾಗೆಯೇ ಅವುಗಳ ಜಮೀನುಗಳೂ ಹಾಳಾಗಿದ್ದು, ಆರ್ಥಿಕ ಸ್ಥಿತಿಗಳು ಏನೂ ಇರಲಿಲ್ಲ. ಅದಕ್ಕಾಗಿ ಆಯಾ ಮಠಗಳನ್ನು ಹೊಸದಾಗಿ ನಿರ್ಮಿಸಲು, ಅದರ ಜಮೀನುಗಳನ್ನು ಅಭಿವೃದ್ಧಿಪಡಿಸಲು ಆಯಾ ಪ್ರಾಂತ್ಯದಲ್ಲಿ ಸಮಿತಿಗಳನ್ನು ರಚಿಸಿ, ಹಣ ಸಂಗ್ರಹಣೆ ಮಾಡಿಸಿ, ಪ್ರತಿ ಮಠದಲ್ಲೂ ಕ್ರಮವಾಗಿ ಲೆಕ್ಕ-ಪತ್ರ ಇಡಲು ವ್ಯವಸ್ಥೆ ಮಾಡಿದರು. ಆಗಾಗ್ಗೆ ಎಲ್ಲಾ ಮಠಗಳ ಲೆಕ್ಕಗಳನ್ನೂ ಖುದ್ದು ಪರಿಶೀಲನೆ ನಡೆಸುತ್ತಿದ್ದರು. ಈಗ ಎಲ್ಲಾ ಮಠಗಳ ಕಟ್ಟಡಗಳೂ,ಭವ್ಯವಾಗಿ ಸುಭದ್ರವಾಗಿದ್ದು, ಅದಕ್ಕೆ ಸಂಬಂಧಪಟ್ಟ ಅಡಿಕೆ, ತೆಂಗು, ತರಿ, ಖುಷ್ಕಿ ಜಮೀನುಗಳು ಉತ್ತಮ ಪ್ರತಿಫಲ ಕೊಡುತ್ತಿದ್ದು, ಆರ್ಥಿಕವಾಗಿ ಸುಭದ್ರವಾಗಿವೆ. ಇದಲ್ಲದೇ ಶ್ರೀ ಪೂಜ್ಯ ಗುರುವರ್ಯರ ಕಾಲದಲ್ಲಿ ಮಂಗಳೂರು ಪ್ರಾಂತ್ಯದ ಪೆರಾಜೆಯಲ್ಲಿ ರಾಮಚಂದ್ರಾಪುರದ ಶಾಖಾ ಮಠ ಸ್ಥಾಪನೆ, ಅದಕ್ಕೆ ಸಂಪನ್ಮೂಲಕ್ಕಾಗಿ ಅಡಿಕೆ, ತೆಂಗು, ತರಿ, ಖುಷ್ಕಿ ಜಮೀನುಗಳನ್ನೂ ಮಾಡಿಸಿ ಅದರ ಆಡಳಿತ, ಲೆಕ್ಕ-ಪತ್ರಗಳು ವ್ಯವಸ್ಥಿತವಾಗಿರುವಂತೆ ನೋಡಿಕೊಳ್ಳಲು ಅಲ್ಲಿಗೆ ಪ್ರತ್ಯೇಕ ಸಮಿತಿಯನ್ನು ರಚಿಸಿದ್ದಾರೆ. ಹಾಗೆಯೇ ಬೆಂಗಳೂರು ನಗರದಲ್ಲಿ ಅತ್ಯುತ್ತಮವಾದ ನಿವೇಶನ – ಗಿರಿನಗರದಲ್ಲಿ ಭವ್ಯವಾದ ವಿದ್ಯಾಮಂದಿರ, ಸಾಗರದಲ್ಲಿ ಭವ್ಯವಾಗಿ ಮಠ – ಮಂದಿರ ನಿರ್ಮಿಸಲು ಅನುಕೂಲವಾದ ನಿವೇಶನಗಳನ್ನೂ ಪರಿಶ್ರಮಪಟ್ಟು ಮಾಡಿಸಿದ್ದಾರೆ.  ಅಲ್ಲಲ್ಲಿ ವೇದ-ಪಾಠಶಾಲೆಗಳ ಸ್ಥಾಪನೆ, ಶಾಲಾ ಕಾಲೇಜುಗಳಿಗೆ ಪ್ರೋತ್ಸಾಹ, ದೇವಮಂದಿರಗಳಿಗೆ ಆರ್ಥಿಕ ಸಹಾಯಗಳನ್ನು ನೀಡಿ ಆಶೀರ್ವದಿಸಿದ್ದಾರೆ. ಪರಮಪೂಜ್ಯ ಶ್ರೀಶ್ರೀಗಳವರು  ಆರು ಶಾಸ್ತ್ರಗಳಲ್ಲಿ  ಗಳಿಸಿರುವ ಪಾಂಡಿತ್ಯ ಯಾವ ಮಠಾಧಿಪತಿಗಳವರಿಗೂ ಇರಲಿಲ್ಲವೆಂತ ಪಂಡಿತ ವಿದ್ವಾಂಸರುಗಳೇ ಹೇಳುತ್ತಿದ್ದರು. ಇದಕ್ಕೆ ಪೂಜ್ಯರು ರಚಿಸಿದ “ಆತ್ಮವಿದ್ಯಾ ಆಖ್ಯಾಯಿಕಾ” “ಸ್ತುತಿ ಮಂಜರಿ” ಕೃತಿ ಗ್ರಂಥಗಳೇ ಸಾಕ್ಷಿ. ಶ್ರೀಶ್ರೀಶ್ರೀಗಳವರ ಜ್ಞಾಪಕಶಕ್ತಿ ಅಗಾಧವಾದುದಾಗಿತ್ತು. ಸದಾಕಾಲವೂ ಸಮಾಜದ ಸರ್ವತೋಮುಖ ಅಭಿವೃದ್ಧಿ – ಶ್ರೇಯಸ್ಸಿಗಾಗಿ ಚಿಂತಿಸುತ್ತಿದ್ದರು. “ಸರ್ವೇ ಜನಾಃ ಸುಖಿನೋ ಭವಂತು” ಎಂಬುದು ಅವರ ಧ್ಯೇಯವಾಗಿತ್ತು. ಶ್ರೀಮಠದ ಸಂಪ್ರದಾಯ, ಆಚಾರ -ವಿಚಾರ ಪರಂಪರೆಗೆ ಕಿಂಚಿತ್ತೂ ಚ್ಯುತಿ (ಲೋಪ) ಬರದಂತೆ ಕರ್ತವ್ಯನಿರತರಾಗಿದ್ದು, ಅವಿಚ್ಛಿನ್ನ ಪರಂಪರೆಗೆ ಅನುಗುಣವಾಗಿ 1994 ರಲ್ಲಿ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ಶಿಷ್ಯ ಪರಿಗ್ರಹ-ಯೋಗಪಟ್ಟಾಭಿಷೇಕ ಸಮಾರಂಭವನ್ನು ವಿಜೃಂಭಣೆಯಿಂದ ಬೆಂಗಳೂರು ಗಿರಿನಗರದಲ್ಲಿ ಯಶಸ್ವಿ ಯಾಗಿ ನೆರವೇರಿಸಿದರು. ಆ ಸಮಾರಂಭದ ಸಮಿತಿಯಲ್ಲಿ ನಾನೂ ಒಬ್ಬ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುವ ಸದವಕಾಶವನ್ನು ಒದಗಿಸಿಕೊಟ್ಟಿದ್ದರು.

ಶ್ರೀಮದ್ ಜಗದ್ಗುರು ಶ್ರೀ ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರ ಅಖಂಡ ಅನುಷ್ಠಾನ, ತಪೋನಿಷ್ಠೆ, ಯೋಗಾಭ್ಯಾಸ, ಶ್ರೀ ಸೀತಾರಾಮಚಂದ್ರ, ಚಂದ್ರಮೌಳೀಶ್ವರ, ರಾಜರಾಜೇಶ್ವರೀ, ಶ್ರೀಚಕ್ರ ಪೂಜೆಯ ಫಲವಾಗಿ ಕಳೆದ ಐವತ್ಮೂರು ವರ್ಷಗಳಲ್ಲಿ ನಮ್ಮ ಹವ್ಯಕ ಸಮಾಜವು ಧಾರ್ಮಿಕ, ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಮೃದ್ಧಿಯನ್ನು ಹೊಂದಿದೆಯೆಂದು ನಿಸ್ಸಂಶಯವಾಗಿ ಹೇಳಬಹುದು. ಪರಮಪೂಜ್ಯ ಶ್ರೀ ಶ್ರೀಗಳವರ ಕಾಲವನ್ನು ಶ್ರೀಮಠದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥದ್ದಾಗಿದೆ.

      ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಶ್ರೀಗಳವರ ಕೃಪಾಶೀರ್ವಾದಗಳು ಸದಾ ನಮ್ಮ ಹವ್ಯಕ ಸಮಾಜಕ್ಕೆ ನಿರಂತರವಾಗಿ ಲಭಿಸುತ್ತಿರಲಿ ಎಂತ ಅನನ್ಯ ಪ್ರಾರ್ಥನೆ.

                             ************

Facebook Comments