ಬ್ರಹ್ಮೈಕ್ಯ ಪರಮಪೂಜ್ಯಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ“ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ 17:

             ಬ್ರಹೈಕ್ಯ ಪೂಜ್ಯಗುರುವರ್ಯರು
– ನಾನು ದರ್ಶನ ಮಾಡಿದಂತೆ

                           ವಿದ್ವಾನ್ ಎಂ.ಆರ್. ದತ್ತಾತ್ರೇಯ

     ರಾಮಚಂದ್ರಂ ಚಂದ್ರಮೌಳಿಂ ರಾಘವೇಂದ್ರಂ ಗುರೂತ್ತಮಂ |
     ಗುರೋರ್ಗುರೂನ್ನಮಸ್ಕೃತ್ಯ ಗೀಯತೇ ಗುರುಗೌರವಂ ||

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗೋಕರ್ಣ ಮಂಡಲಾಧಿಷ್ಠಿತ ಶ್ರೀರಾಮಚಂದ್ರಾಪುರ ಮಠದ ಭಾರತೀ ಸಂಪ್ರದಾಯದ ಶ್ರೀಗುರು ಪರಂಪರೆಯನ್ನು ಭಕ್ತಿ ಶ್ರದ್ಧಾಪೂರ್ವಕವಾಗಿ ವಂದಿಸಿ ಈ ಪರಂಪರೆಯಲ್ಲಿ ಮೂವತೈದನೆಯ ಪೀಠಾಧಿಪತಿಗಳಾಗಿ, ಸರ್ವತೋಮುಖವಾಗಿ ಅಭೂತಪೂರ್ವ ಸಾಧನೆಯನ್ನು ಮಾಡಿದ ಗುರುಗಳಾದ ಶ್ರೀಮದ್ ರಾಘವೇಂದ್ರ ಭಾರತೀ ಸ್ವಾಮಿಗಳ ವಿದ್ವತ್ತು ವಿದ್ಯಾದಾನಗಳ ವಿಷಯವಾಗಿ ಸಮುದ್ರದ ನೀರನ್ನು ಕೊಡದಲ್ಲಿ ಹಿಡಿದಿಡುವ ಪ್ರಯತ್ನವೆಂಬಂತೆ ಈ ಲೇಖನದಲ್ಲಿ ಅಲ್ಪ ಸ್ವಲ್ಪ ವಿವರಿಸಲು ಬಯಸುತ್ತೇನೆ.

ಶ್ರೀರಾಘವೇಂದ್ರಭಾರತೀ ಸ್ವಾಮಿಗಳು ಸುಮಾರು 70 ವರ್ಷಗಳ ಹಿಂದೆ ಸಾಗರ ತಾಲ್ಲೂಕು ಕರೂರು ಹೋಬಳಿ, ಬರುವೆ ಗ್ರಾಮದ “ಮಾಗಲು” ಎಂಬ ಚಿಕ್ಕಹಳ್ಳಿಯಲ್ಲಿ ವೇ||ಗಣಪತಿ ಭಟ್ಟ ಮತ್ತು ಮೂಕಾಂಬಿಕಮ್ಮನವರ ಜೇಷ್ಠಪುತ್ರರಾಗಿ ಜನ್ಮತಾಳಿದರು. ಗಣಪತಿ ಭಟ್ಟರು ವೇದ ವಿದ್ಯಾಸಂಪನ್ನರೂ, ಸಂಸ್ಕೃತಜ್ಞರೂ, ಆಯುರ್ವೇದ ಚಿಕಿತ್ಸಕರೂ ಮತ್ತು ಗಣ್ಯ ಪುರೋಹಿತರೂ ಅಗಿದ್ದರು. ಮೂಕಾಂಬಿಕಮ್ಮನವರು ಸಾಧ್ವೀಮಣಿ, ಪತಿಗೆ ತಕ್ಕ ಪತ್ನಿ.

ಶ್ರೀರಾಘವೇಂದ್ರಭಾರತೀಸ್ವಾಮಿಗಳ ಪ್ರಾಥಮಿಕ ವಿದ್ಯಾಭ್ಯಾಸ ಹಾಗೂ ಸಂಸ್ಕೃತ ವೇದ ವಿದ್ಯಾಭ್ಯಾಸಗಳು ತಂದೆಯ ಬಳಿಯಲ್ಲಿಯೇ ನೆರವೇರಿದವು. ವೇ|| ಗಣಪತಿಭಟ್ಟರು ಹೆಚ್ಚಿನ ಅಧ್ಯಯನಕ್ಕಾಗಿ ವೇದಾಧ್ಯಯನದ ತವರೂರಾದ ತಂಜಾವೂರಿಗೆ ತಮ್ಮ ಪುತ್ರರನ್ನು ಕಳಿಸಿದರು. ಅಲ್ಲಿ ಎರಡು ವರ್ಷ ವೇದಾಧ್ಯಯನ ಮಾಡಿದ ನಂತರ ಅಲ್ಲಿಂದ ಹಿಂದಿರುಗಿ ಬಂದು ನಂಜನಗೂಡಿನ ಶ್ರೀಶಂಕರ ಮಠದಲ್ಲಿ ವೇದಸಂಸ್ಕೃತಗಳ ಅಭ್ಯಾಸವನ್ನು ಮುಂದುವರಿಸಿದರು. ಈಗಾಗಲೇ ಶ್ರೀಗಳವರಲ್ಲಿ ಕಾಶಿಗೆ ಹೋಗಿ ಅಧ್ಯಯನ ಮಾಡಬೇಕೆಂಬ ಉತ್ಕಟ ಆಕಾಂಕ್ಷೆ ಒಡಮೂಡಿತ್ತು. ಇಷ್ಟರಲ್ಲಿಯೇ ಶ್ರೀರಾಮಚಂದ್ರಾಪುರ ಮಠದ ಪೀಠಾಧಿಪತಿಗಳಾದ ಶ್ರೀ ಶ್ರಿ ರಾಮಚಂದ್ರಭಾರತೀ ಸ್ವಾಮಿಗಳಿಂದ ಶಿಷ್ಯತ್ವ ಸ್ವೀಕಾರಕ್ಕಾಗಿ ಕರೆ ಬಂದಿತು. ವೈರಾಗ್ಯಪರರಾದ ಶ್ರೀಗಳವರು ಶ್ರೀರಾಮಚಂದ್ರಾಪುರ ಮಠದ ಉತ್ತರಾಧಿಕಾರಿಗಳಾಗಲು ಒಪ್ಪಿಕೊಂಡರು. ಇವರ ಯೋಗಪಟ್ಟಾಭಿಷೇಕದ ಕಾರ್ಯಕ್ರಮವು ಹೊಸನಗರ ಶ್ರೀರಾಮಚಂದ್ರಾಪುರ ಮಠದಲ್ಲಿ 18.5.1945 ರಿಂದ 21.5.1945ರವರೆಗೆ ನಾಲ್ಕು ದಿನಗಳು ಬಹು ವಿಜೃಂಭಣೆಯಿಂದ ನೆರವೇರಿತು. ಇವರಿಗೆ “ಶ್ರೀ ರಾಘವೇಂದ್ರಭಾರತೀ” ಎಂಬ ನಾಮಕರಣವಾಗಿ ಇವರು ಶ್ರೀ ಮಠದ ಉತ್ತರಾಧಿಕಾರಿಗಳಾದರು.

ಇದಾದ ಮೇಲೆ ಹಿರಿಯ ಗುರುಗಳಾದ ಶ್ರೀರಾಮಚಂದ್ರ ಭಾರತೀ ಸ್ವಾಮಿಗಳು ಕಾಶಿಗೆ ತೆರಳಿ ಅಲ್ಲಿನ ವಿದ್ಯಾಭ್ಯಾಸಪದ್ಧತಿಯನ್ನು ಮೆಚ್ಚಿಕೊಂಡರು. ಇದು ಅವರ ಶಿಷ್ಯರಾದ ಶ್ರೀರಾಘವೇಂದ್ರ ಭಾರತಿಗಳು ಕಾಶಿಗೆ ತೆರಳಲು ನಿಮಿತ್ತವಾಯಿತು. ಕಾಶಿಕ್ಷೇತ್ರದ ರಾಮಘಾಟಿನ ಸುಪ್ರಸಿದ್ಧ ಶ್ರೀ ವಲ್ಲಭರಾಮ ಶಾಲಿಗ್ರಾಮ ಸಾಂಗವೇದ ಮಹಾವಿದ್ಯಾಲಯದಲ್ಲಿ ನಮ್ಮ ಶ್ರೀಗಳ ವಿದ್ಯಾಭ್ಯಾಸ ಪ್ರಾರಂಭವಾಯಿತು. ಪಂಡಿತ ರಾಜೇಶ್ವರ ಶಾಸ್ತ್ರೀ ದ್ರವಿಡ ಇವರು ಈ ವಿದ್ಯಾಲಯದ ಕುಲಪತಿಗಳಾಗಿದ್ದರು. ಪಂಡಿತ ಗಣಪತಿ ಶಾಸ್ತ್ರಿ ಹೆಬ್ಬಾರ, ಪಂ.ಶ್ರೀ ಕೃಷ್ಣಶಾಸ್ತ್ರೀ ಮಡಿಕೇರಿ, ಪಂ. ರಾಮಚಂದ್ರ ಶಾಸ್ತ್ರೀ ಹೊಸಮನೆ-ಗೋಕರ್ಣ, ಶ್ರೀ ಉಪೇಂದ್ರ ರಾಜಹಂಸ ಮೈಥಿಲಿ, ಪಂ. ಹರಿರಾಮಶಾಸ್ತ್ರೀ ಶುಕ್ಲ ಮೊದಲಾದವರು ಶ್ರೀಗಳವರ ವಿದ್ಯಾಗುರುಗಳಾಗಿದ್ದವರು.

ಕಾಶಿಯಿಂದ ತಮ್ಮ ಶ್ರೀಮಠಕ್ಕೆ ಹಿಂದಿರುಗಿದ ಹಿರಿಯ ಸ್ವಾಮಿಗಳಾದ ಶ್ರೀರಾಮಚಂದ್ರ ಭಾರತೀ ಸ್ವಾಮಿಗಳು ಕೆಕ್ಕಾರಿಗೆ ಆಗಮಿಸಿ, ಅಲ್ಲಿಯೇ (ಸರ್ವಧಾರಿಸಂವತ್ಸರದ ಫಾಲ್ಗುಣಶುದ್ಧಪೂರ್ಣಿಮೆಯಂದು) ಬ್ರಹ್ಮೀಭೂತರಾದರು. ಈ ವಿಷಯವನ್ನು ತಿಳಿದ ಕಿರಿಯ ಶ್ರೀಗಳಾದ ಶ್ರೀ ರಾಘವೇಂದ್ರಭಾರತೀ ಸ್ವಾಮಿಗಳು ಕಾಶಿಯಿಂದ ಕೆಕ್ಕಾರಿಗೆ ಬಂದು ಹಿರಿಯ ಶ್ರೀಗಳ ಆರಾಧನಾ ಮಹೋತ್ಸವವನ್ನು ನೆರವೇರಿಸಿ ಗೋಕರ್ಣ, ರಾಮಚಂದ್ರಾಪುರಮಠ ಹೊಸನಗರ, ತೀರ್ಥಹಳ್ಳಿಗಳಿಗೆ ಭೇಟಿ ನೀಡಿ ಮಠಗಳ ವ್ಯವಸ್ಥೆ ಬಗ್ಗೆ ಸಮಿತಿಯನ್ನು ನೇಮಿಸಿ ಪುನಃ ವಿಶೇಷ ಉನ್ನತ ಶಾಸ್ತ್ರ ಅಧ್ಯಯನಕ್ಕಾಗಿ ಕಾಶಿಗೆ ಆಗಮಿಸಿದರು. ಇಲ್ಲಿ ಆರು ವರ್ಷಗಳವರೆಗೆ ತರ್ಕ, ವೇದಾಂತ, ಮೀಮಾಂಸ, ಸಾಂಖ್ಯ, ಯೋಗ, ಸಂಸ್ಕೃತ ಸಾಹಿತ್ಯ, ವ್ಯಾಕರಣ ಮೊದಲಾದ ಶಾಸ್ತ್ರಗಳನ್ನು ಆಮೂಲಾಗ್ರವಾಗಿ ಅಭ್ಯಾಸ ಮಾಡಿದರು. ನಂತರ ಖರ ಸಂವತ್ಸರದ ಪುಷ್ಯ ಶುದ್ಧದಲ್ಲಿ(ಜನವರಿ 1952) ಕಾಶಿಯಿಂದ ತೀರ್ಥಹಳ್ಳಿ ಮಠಕ್ಕೆ ಬಂದು ಸಮಿತಿಯಿಂದ ಶ್ರೀಸಂಸ್ಥಾನದ ಅಧಿಕಾರ ವಹಿಸಿಕೊಂಡು ತಮ್ಮ ಅಧ್ಯಯನದ ಜೊತೆಗೆ ವಿದ್ಯಾರ್ಥಿಗಳಿಗೆ ಅಧ್ಯಾಪನ, ಮಠಾಭಿವೃದ್ಧಿ, ಶಿಷ್ಯಸಂಘಟನೆ, ಪಾಠಶಾಲಾಸ್ಥಾಪನೆ ಮುಂತಾದ ಕಾರ್ಯಗಳನ್ನು ಕೈಗೊಂಡರು.

ಸ್ವತಃ ತಮ್ಮ ನೇತೃತ್ವದಲ್ಲಿಯೇ ಶ್ರಿಶ್ರೀಗಳವರು ಶ್ರೀರಾಘವೇಂದ್ರ ಭಾರತೀ-ವೇದ-ಸಂಸ್ಕೃತಪಾಠಶಾಲೆಯನ್ನು ಸ್ಥಾಪಿಸಿ ತಾವೇ ಶಾಸ್ತ್ರ-ಪಾಠಗಳನ್ನು ಹೇಳಿಕೊಡುತ್ತಿದ್ದುದಲ್ಲದೆ ವಿದ್ವಾಂಸರಿಂದ ವಿದ್ಯಾರ್ಥಿಗಳಿಗೆ ವೇದ ಸಂಸ್ಕೃತ ಪಾಠಗಳನ್ನು ಹೇಳಿಸುತ್ತಿದ್ದರು. ಇದಲ್ಲದೆ ಹೊಸಾಕುಳಿ (ಮುಗ್ವ) ಕೆಕ್ಕಾರು, ಭೀಮನಕೋಣೆ, ಸಿದ್ಧಾಪುರ, ಹಿರೇಮನೆ, ಮಾಣಿ ಮುಂತಾದ ಸ್ಥಳಗಳಲ್ಲಿಯ ವೇದ ಪಾಠಶಾಲೆಗಳನ್ನು ಸ್ಥಾಪಿಸಿದರು ಮತ್ತು ಪ್ರೋತ್ಸಾಹಿಸಿದರು.

ಹೀಗೆ ಸ್ವತಃ ಮಹಾವಿದ್ವಾಂಸರಾದ ಶ್ರೀರಾಘವೇಂದ್ರ ಭಾರತೀ ಸ್ವಾಮಿಗಳು ವಿದ್ಯಾದಾನವನ್ನು ಮಾಡಿಸಿದರು. ಆದ್ದರಿಂದ ಇವರು ವಿದ್ಯಾವಾರಿಧಿಯೂ ಹೌದು, ವಿದ್ಯಾವಿನೋದಿಯೂ ಹೌದು. ಇವರು ವಿದ್ವದ್ವಿಭೂತಿಪುರುಷರೂ ಆಗಿದ್ದರು.

ಶ್ರೀರಾಘವೇಂದ್ರ ಭಾರತೀ ಸ್ವಾಮಿಗಳು ಅತಿ ಕ್ಲಿಷ್ಟವಾದ ಗ್ರಂಥಗಳನ್ನು ಅಭ್ಯಾಸ ಮಾಡಿ ಶಿಷ್ಯರಿಗೆ ಭೋಧಿಸಿದ್ದಲ್ಲದೇ ಅವರೇ ಸ್ವತಃ ಅತ್ಯಮೂಲ್ಯವಾದ ಗ್ರಂಥಗಳನ್ನು ರಚಿಸಿದ್ದಾರೆ. ಇವುಗಳಲ್ಲಿ “ಆತ್ಮವಿದ್ಯಾ ಆಖ್ಯಾಯಿಕಾ” ಎಂಬುದೂ ಒಂದು. ಇದೊಂದು ವೇದಾಂತ ಸಾರವನ್ನೊಳಗೊಂಡ ಶ್ರೀಗಳವರ ಆತ್ಮ ವೃತ್ತಾಂತದೊಂದಿಗೆ ಅವರ ಆಳವಾದ ಶಾಸ್ತ್ರಾಧ್ಯಯನದ ರೀತಿಯನ್ನು ನಿರೂಪಿಸುವ ಕೃತಿ.   “ಸ್ತುತಿಮಂಜರೀ” ಎಂಬುದು ಶ್ರೀಗಳವರು ಧ್ಯಾನಾಸಕ್ತರಾಗಿದ್ದಾಗ  ಸ್ವಯಂಪ್ರಕಟವಾದ ಸ್ತುತಿಗಳ ಅಪೂರ್ವಸಂಗ್ರಹದ ಮತ್ತೊಂದು ಕೃತಿ. ಇವರ ಪ್ರವಚನಗಳು ಹಾಗೂ ಮುಕ್ತಕಗಳು ಅಸಂಖ್ಯಾತವಾದವು.

ಇಂಥ ಮಹಾ ಮಹಿಮರಾದ ಶ್ರೀ ರಾಘವೇಂದ್ರ ಭಾರತೀ ಸ್ವಾಮಿಗಳ ಮಹಿಮೆಯನ್ನು ಹಿರಿಮೆಗರಿಮೆಗಳನ್ನು ವಿವರಿಸಲು ಅನೇಕ ಗ್ರಂಥಗಳು ವಿದ್ವಾಂಸರಿಂದ ರಚಿತವಾಗಿದೆ.

                   ಬಹುಧ್ಯಾನ್ಯೇ ಮಾರ್ಗಶೀರ್ಷೇ ಸೀತೇsಷ್ಟಮ್ಯಾಂ ಗುರೋರ್ದಿನೇ|
                   ಬ್ರಹ್ಮೀಭೂತೋ ರಾಘವೇಂದ್ರಃ ಸ್ಮರ್ಯತೇ ಚ ಪುನಃ ಪುನಃ||

                                           || ಇತಿ ಶಂ ||

                        ||ದಿವ್ಯಜ್ಯೋತಿಯ ಬೆಳಕು ಎಲ್ಲೆಡೆಗೆ ಹರಡಲಿ||

~*~

Facebook Comments