ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.
ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ ಶ್ರೀಗುರುಚರಣಕೆ....

ಶ್ರದ್ಧಾಸುಮ ಶ್ರೀಗುರುಚರಣಕೆ….

ಶ್ರದ್ಧಾಸುಮ 12:

ಬ್ರಹ್ಮ್ಯೆಕ್ಯ ಪೂಜ್ಯ ಗುರುವರ್ಯರು
 -ನಾನು ದರ್ಶನ ಮಾಡಿದಂತೆ   

ವೇ. ಲಕ್ಷ್ಮೀನಾರಾಯಣ ಭಟ್, ಹೆಗ್ಗಾರಳ್ಳಿ

ಅಖಂಡಮಂಡಲಾಕಾರಂ ವ್ಯಾಪ್ತಂ ಯೇನ ಚರಾಚರಂ
ತತ್ಪದಂ ಯೇನ ತಸ್ಮೈ ಶ್ರೀಗುರುವೇ ನಮಃ||

 ಪವಿತ್ರವಾದ ಭಾರತದಲ್ಲಿ ಯುಗಯುಗಾಂತರಗಳಿಂದಲೂ ಸಹ, ದೇವತಾ ಅವತಾರಗಳು ಆಗಿವೆ. ಸಾಧು ಸತ್ಪುರುಷರು ಜನ್ಮವೆತ್ತಿದ್ದಾರೆ. ಧರ್ಮವು ನಶಿಸುತ್ತಲಿರುವಾಗ, ಅಧರ್ಮ ಬೆಳೆಯುತ್ತಿರುವ ಕಾಲದಲ್ಲಿ ಧರ್ಮರಕ್ಷಣೆಗೆ ಈಶ್ವರಾಂಶಸಂಭೂತರಾಗಿ ಶ್ರೀ ಶಂಕರಾಚಾರ್ಯರು ಜನ್ಮ ತಳೆದರು. ಆ ಕಾಲದಲ್ಲಿದ್ದ, ನಾಸ್ತಿಕವಾದಿಗಳನೆಲ್ಲರನ್ನೂ ಖಂಡಿಸಿದರು. ಮತ್ತು ಧರ್ಮವನ್ನು ಎತ್ತಿ ಹಿಡಿದು ಅದರ ರಕ್ಷಣೆಗಾಗಿ ಶ್ರೀಗುರುಪೀಠಗಳನ್ನು ಸ್ಥಾಪಿಸಿದರು. ಹೀಗೆ, ಶ್ರೀ ಶಂಕರ ಭಗವತ್ಪಾದರು ಅದ್ವೈತಮತ ಪ್ರತಿಷ್ಠಾಪನಾಚಾರ್ಯ” ಎಂದು ಪ್ರಖ್ಯಾತಿ ಪಡೆದರು.

ಶ್ರೀ ಶಂಕರ ಭಗವತ್ಪಾದರು, ಪ್ರತಿಷ್ಟಾಪಿಸಿ, ಅವಿಚ್ಛಿನ್ನವಾಗಿಬಂದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ಗುರುಪರಂಪರೆಯಲ್ಲಿ ೩೫ನೆಯವರಾದ ಬ್ರಹ್ಮೆಕ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ರಾಘವೇಂದ್ರಭಾರತೀ ಮಹಾಸ್ವಾಮಿಗಳವರು “ಶ್ರೀ ಗುರು ಭಗವತ್ಪಾದರು” ಎಂದೇ ಪ್ರಸಿದ್ದರು. ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಕಾಶಿಯಲ್ಲಿ ಮತ್ತು ತಪಸ್ಸು ಅನುಷ್ಟಾನಾದಿಗಳನ್ನು ವಿಂಧ್ಯಾದ್ರಿವಾಸಿನಿಯ ಸನ್ನಿಧಿಯಲ್ಲಿ ಪೂರಸಿ, ಶ್ರೀಮಠಕ್ಕೆ ಬಂದ ಅವರು, ಶಿಷ್ಯಾನುಗ್ರಹ ನಿಮಿತ್ತ ಸಂಚಾರವನ್ನೂ ಕೈಗೊಂಡು ಶಿಷ್ಯರ ಸಂಕಟಗಳನ್ನು ಪರಿಹರಿಸಿದ ಮಹಾತ್ಮರು.

‘ಸಂಕಟ ಬಂದಾಗ ವೆಂಕಟರಮಣ’ ಎನ್ನುವುದು ಮನುಷ್ಯನ ಸ್ವಭಾವ. ನಾನು ಪಾಯಪ್ರಬುದ್ಧ ಒಬ್ಬ ಸೋದರನನ್ನು ಮತ್ತು ಒಬ್ಬ ಮಗಳನ್ನೂ ಕಳೆದುಕೊಂಡು ಪರಿತಪಿಸುತ್ತಲಿದ್ದೆನು. ಆಗಾಗ ತಲೆದೋರುವ ಕ್ಷುದ್ರ ಉಪದ್ರವಗಳು ಪರಿಹಾರಕ್ಕೆ ಜೋಯಿಸರನ್ನೂ ಹುಡುಕುತ್ತ ದ.ಕ ಜಿಲ್ಲೆಯ ಗಿರಕೆಮಠದ ಶ್ರೀ ವೆಂಕಟ್ರಮಣ ಅಡಿಗಳನ್ನು ಕಂಡೆನು. ಅವರು ಪ್ರಶ್ನೆಯಿಟ್ಟು ಕೂಲಂಕಷವಾಗಿ  ವಿಚಾರಮಾಡಿ- “ಜಗದ್ಗುರು ಪೀಠಾಧಿಪತಿಗಳು, ಅವಿಚ್ಛಿನ್ನ ಪರಂಪರೆಯವರು ಹಾಗೂ ಬಾಲಸನ್ಯಾಸಿಗಳು ಆದಂತಹ ಯತಿಪುಂಗವರಿಂದ ನಿಮ್ಮ ಸಂತಾಪ ಪರಿಹಾರ” ಎಂದು ಹೇಳಿದರು.

ನಾನು ನೇರವಾಗಿ ಶೃಂಗೇರಿಗೆ ಹೋಗಿ ಅಲ್ಲಿಯ ಜಗದ್ಗುರುಗಳವರನ್ನು ಕಂಡು ನನ್ನ ಸಮಸ್ಯೆಯನ್ನು ವಿವರಿಸಿ ಹೇಳಿ-‘ರಕ್ಷಿಸಬೇಕು’ ಎಂದು ಪ್ರಾರ್ಥನೆ ಮಾಡಿದೆನು. ಅವರು ಕ್ಷಣ ಕಾಲ ಯೋಚಿಸಿ, “ನೀವು ಇಲ್ಲಿಂದ ಶ್ರೀರಾಮಚಂದ್ರಪುರ ಮಠಕ್ಕೆ ಹೋಗಿ. ಅಲ್ಲಿ ನೀವು ಹೇಳಿದ ಲಕ್ಷಣಗಳುಳ್ಳ ಯತಿವರ್ಯರು ಇದ್ದಾರೆ. ನಿಮ್ಮ ಸಂತಾಪ ಪರಿಹಾರ ಅಲ್ಲಿಂದ” ಎಂದು ಹೇಳಿದರು. ಅಲ್ಲಿಂದ ಹೊರಟು ತೀರ್ಥಹಳ್ಳಿ ಮಠಕ್ಕೆ ಬಂದು ತಲುಪಿದಾಗ-ಅಲ್ಲಿ ಶ್ರೀ ಶ್ರೀಗಳವರಿಂದ ಪೂಜೆಯು ನೆರವೇರುತ್ತಿತ್ತು. ಅಲ್ಲಿ ವೈದಿಕ ಬ್ರಾಹ್ಮಣರ ಹಾಗೂ ಬ್ರಹ್ಮಚಾರೀ ವಟುಗಳ ವೇದಘೋಷ, ಶ್ರೀಶ್ರೀಗಳವರಿಂದ ಜಲಾಧಾರಭಿಷೇಕ, ಪುಷ್ಪಾರ್ಚನೆ, ಮಂಗಳಾರತಿ, ತದನಂತರ ಸಮರ್ಪಿಸಿದ ಪ್ರಾರ್ಥನಾಪುಷ್ಪಾಂಜಲಿ ಇವುಗಳನ್ನು ನೋಡಿದ ನನಗೆ ನನ್ನ ಸಂಕಷ್ಟ ಪರಿಹಾರ ಇಲ್ಲಿ ಆಗುತ್ತದೆ ಎಂಬ ವಿಶ್ವಾಸ ಮೂಡಿಬಂದಿತು.

ನಂತರ ನನಗೆ ಬಂದೊದಗಿದ ಎಲ್ಲ ಸಂಕಷ್ಟಗಳನ್ನು ಒಂದೊಂದಾಗಿ ಬಿಡಿಸಿ ಬಿಡಿಸಿ ಕೇಳಿ- ನೊಂದುಕೊಂಡರು. ‘ಜಗದ್ಗುರು ಪೀಠಾಧಿಪತಿಗಳೂ, ಬಾಲ ಸನ್ಯಾಸಿಗಳು ಹಾಗೂ ಅವಿಚ್ಛಿನ್ನ ಪರಂಪರೆಯವರೂ ಆದ ತಮ್ಮಿಂದಲೇ   ನನ್ನ ಕುಟುಂಬದ ಉದ್ಧಾರವಾಗಬೇಕು’ ಎಂದು ನಾನು ಕೈಜೋಡಿಸಿ ಪ್ರಾರ್ಥಿಸಿದೆನು. ಆಗ ಶ್ರೀ ಗುರುವರ್ಯರು, “ಸರಿ, ಶ್ರೀ ಸಂಸ್ಥಾನ ನಿಮ್ಮ ಮನೆಗೆ ಚಿತ್ತೈಸುತ್ತದೆ. ಯಾವುದೇ ನಿರ್ಬಂಧವಿಲ್ಲ. ತುಳಸೀ ದಳಗಳಿಂದ ಶ್ರೀಗುರುಪಾದಪೂಜೆಯನ್ನು ಮಾಡಿದರೂ ಸಾಕು. ಅಳುಕಬೇಡ, ನಾವು ಬರುವವರೆಗೂ ಯೋಗ್ಯವಾದ ವೈದಿಕರಿಂದ ರಕ್ಷೆಯನ್ನು ಮಾಡಿಸು” ಎಂದು ಅಪ್ಪಣೆ ಕೊಟ್ಟರು. ಧಾರ್ಮಿಕ ವಿನಿಯೋಗವೂ ಆಯಿತು. ಶ್ರೀಶ್ರೀ ಗುರುವರ್ಯರ ಪಾದ ಧೂಳಿಯು ನಮ್ಮ ಮನೆಯಲ್ಲಿಯೂ ಬಿತ್ತು. ಶ್ರೀ ಗುರುವರ್ಯರು ನಾವು ಮಾಡಿದ ಕಿಂಚಿತ್ ಸೇವೆಯನ್ನು ಯಥಾವತ್ತಾಗಿ ಸ್ವೀಕರಿಸಿ, ಪೂರ್ಣ ಮನಸ್ಸಿನಿಂದ ಅನುಗ್ರಹ ಮಾಡಿದರು. ಅಂದಿನಿಂದ ತಾಪತ್ರಯಗಳು ದೂರವಾಗಿ, ಸಂಕಟಗಳು ಪರಿಹಾರವಾಗಿ ದಾರಿದ್ರ್ಯಾದಿಗಳು ತೊಲಗಿ ಸರ್ವತೋಮುಖ ಅಭಿವೃಧ್ಧಿಯು ಎಲ್ಲಾ ವಿಧದಿಂದಲೂ ಆಗಿದೆ, ಆಗುತ್ತಿದೆ. ಈಗಲೂ ಸಹ ಬ್ರಹ್ಮೀಭಾವ ಹೊಂದಿದ ದಿವ್ಯತೇಜೋರೂಪಿಗಳಾದ ಶ್ರೀಗುರುಭಗವತ್ಪಾದರ ಶ್ರೀರಕ್ಷೆಯಲ್ಲಿ ನಾನು ಹಾಗೂ ನನ್ನ ಕುಟುಂಬ ಪರಿವಾರದವರೆಲ್ಲ ಬಾಳಿ ಬೆಳಗುತ್ತಿದ್ದೇವೆ.

ಶ್ರೀಶ್ರೀಗುರುವರ್ಯರ ಆದೇಶದಂತೆ ಏಕಾದಶೀ ಆಚರಣೆ, ಜಪ, ಉದಕಶಾಂತಿ, ಪಾರಾಯಣಗಳನ್ನು ನಾನು ಪ್ರತಿಪಕ್ಷದಲ್ಲಿಯೂ ಆಚರಿಸುತ್ತ ಬಂದಿದ್ದು, ಮನೆಯಲ್ಲಿ-ಮನದಲ್ಲಿ ಸಮೃದ್ಧಿ, ಶಾಂತಿ, ನೆಮ್ಮದಿಗಳು ನೆಲೆಸಿವೆ.

ಶ್ರೀಗುರುಚರಣಗಳಿಗೆ ನಮನಗಳು

~*~

Facebook Comments