ಬ್ರಹ್ಮೈಕ್ಯ ಪರಮಪೂಜ್ಯಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ“ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ 16:   

                       ಬ್ರಹ್ಮೈಕ್ಯ ಪೂಜ್ಯ ಗುರುವರ್ಯರು 

                  -ನಾನು ದರ್ಶನ ಮಾಡಿದಂತೆ

                                                               ಎಂ.ಸಿ. ಮೃತ್ಯುಂಜಯ ಕರ್ಕಿಕೊಪ್ಪ

     ಭವ್ಯವಾದ ಇತಿಹಾಸ, ಉಜ್ವಲ ಪರಂಪರೆ, ಉನ್ನತ ಸಂಸ್ಕೃತಿಯನ್ನು ಹೊಂದಿದ ಹವ್ಯಕಮಠ ಈಗಲೂ ಉಜ್ವಲವಾಗಿಯೇ ಪ್ರಜ್ವಲಿಸುತ್ತಿದೆ.  ಶ್ರೀ ಶಂಕರಾಚಾರ್ಯರಿಂದ ಸ್ಥಾಪಿತವಾಗಿ ಈ ವರೆಗೂ ಅವಿಚ್ಚಿನ್ನ ಪರಂಪರೆಯನ್ನು ಹೊಂದಿದ್ದು, ಈ ಮಠದ ಮೂವತ್ತೈದನೇ ಗುರುಗಳಾದ ಶ್ರೀಶ್ರೀಶ್ರೀರಾಘವೇಂದ್ರಭಾರತೀಸ್ವಾಮಿಗಳವರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಶ್ರೀರಾಮಚಂದ್ರಾಪುರ ಮಠದ ಶಿಷ್ಯಕೋಟಿಗೆ ಸೂಕ್ತಮಾರ್ಗದರ್ಶನವನ್ನು ಮಾಡುತ್ತಾ ಹವ್ಯಕ ಮಠದ ಅಭಿವೃದ್ಧಿಗೆ ಬಹುವಾಗಿ ಶ್ರಮಿಸಿರುತ್ತಾರೆ. ಶಿವಮೊಗ್ಗ ಜಿಲ್ಲೆ ಹೊಸನಗರ  ತಾಲ್ಲೂಕಿನ ಶ್ರೀರಾಮಚಂದ್ರಾಪುರದಲ್ಲಿ ಕರ್ನಾಟಕದ ವಿಧಾನಸೌಧದಂತೆ ಹವ್ಯಕರ ಪ್ರಧಾನ ಮಠವಾಗಿ ಶ್ರೀರಾಮಚಂದ್ರಪುರ ಮಠ ಕಂಗೊಳಿಸುತ್ತಿದೆ. ಅಲ್ಲದೆ ಇದರ ಶಾಖಾಮಠಗಳು ಅನೇಕ. ಹಾಗೂ ಎಲ್ಲಾ ಮಠಗಳು ಸುವ್ಯವಸ್ಥಿತವಾಗಿರುತ್ತದೆ.

ಹವ್ಯಕ ಮಠಗಳ ಶಾಖೆ ಕರ್ನಾಟಕದ ರಾಜಧಾನಿಯಿಂದ ಬೆಂಗಳೂರಿನ ಗಿರಿನಗರದಲ್ಲಿಯೂ ಒಂದು ಇದೆ. ಹಿರಿಯ ಸ್ವಾಮಿಗಳಾದ ಶ್ರೀಶ್ರೀಶ್ರೀ ರಾಘವೇಂದ್ರಭಾರತೀಸ್ವಾಮಿಗಳವರು ತಮ್ಮ ವಯೋಮಾನ ಮತ್ತು ಅನಾರೋಗ್ಯದ ಕಾರಣ ಕಳೆದ ಕೆಲವು ವರ್ಷಗಳಿಂದ ಅಲ್ಲಿ ವಾಸ್ತವ್ಯ ಮಾಡಿರುವುದು ಸಮಸ್ತ ಹವ್ಯಕರಿಗೂ ತಿಳಿದಿದೆ.  ಅಲ್ಲದೆ ಹವ್ಯಕ ಮಠದ ಅವಿಚ್ಛಿನ್ನ ಗುರುಪರಂಪರೆಯನ್ನು ಉಳಿಸಿಕೊಳ್ಳುವ ಸಲುವಾಗಿ ಕಳೆದ ಐದು ವರ್ಷಗಳ ಹಿಂದೆ ಯೋಗ್ಯಶಿಷ್ಯರನ್ನು ಆಯ್ಕೆ ಮಾಡಿ ಸಮಸ್ತ ಹವ್ಯಕ ಸಮಾಜದವರ ಮತ್ತು ಉಡುಪಿ ಪೇಜಾವರ ಮಠದ ಶ್ರೀಗಳವರ ಸಮ್ಮುಖದಲ್ಲಿ ಶಿಷ್ಯಪರಿಗ್ರಹ ಮಾಡಿ ಅವರಿಗೆ ಶ್ರೀಶ್ರೀಶ್ರಿರಾಘವೇಶ್ವರಭಾರತೀಸ್ವಾಮಿಗಳು ಎಂಬ ನಾಮಕರಣ ಮಾಡಿ, ಕೆಲವು ವರ್ಷಗಳ ಕಾಲ ಸಕಲಶಾಸ್ತ್ರ್ರಗಳನ್ನು ಕಲಿಸಿ, ಕಳೆದ ವರ್ಷ ಪ್ರಧಾನ ಮಠವಾದ ಶ್ರೀರಾಮಚಂದ್ರಾಪುರಮಠಕ್ಕೆ ಕಳುಹಿಸಿರುತ್ತಾರೆ.  ಅವರು ಶ್ರೀರಾಮಚಂದ್ರಾಪುರಮಠದಲ್ಲಿ ವಾಸ್ತವ್ಯ ಮಾಡಿ, ಮಠದ ನಿಯಮದಂತೆ ಶ್ರೀಸೀತಾರಾಮಚಂದ್ರಮೌಳೀಶ್ವರ ದೇವರಿಗೆ ಪೂಜೆ ಸಲ್ಲಿಸುವುದಲ್ಲದೆ ಶಿಷ್ಯರಿಗೆ ಸಂದರ್ಶನ ನೀಡುತ್ತಾ ಹವ್ಯಕ ಗುರುಪೀಠದ ಮಹಾಸ್ವಾಮಿಗಳಾಗಿ ರಾರಾಜಿಸುತ್ತಿದ್ದಾರೆ.

ಹೆಮ್ಮೆ ಪಡುವ ರೀತಿಯಲ್ಲಿ ಬೆಳೆದುಕೊಂಡು ಬಂದಿರುವ ಹವ್ಯಕ ಗುರುಪರಂಪರೆ ನಮ್ಮದಾಗಿದೆ. ಈ ಪರಂಪರೆಯಲ್ಲಿ ಬಂದ ಮಹಾಜ್ಞಾನಿಗಳೂ, ಮೇಧಾವಿಗಳೂ, ಸಮರ್ಥರೂ ಮತ್ತು ಮಠಗಳ ಏಳಿಗೆಗೆ ಬಹಳಷ್ಟು ಸಾಧನೆಯನ್ನು ಮಾಡಿದ ಶ್ರೀಶ್ರೀಶ್ರೀ ರಾಘವೇಂದ್ರಭಾರತೀ ಸ್ವಾಮಿಗಳವರು ಬೆಂಗಳೂರಿನ ವಿದ್ಯಾಮಂದಿರದಲ್ಲಿ ವಾಸ್ತವ್ಯ ಮಾಡಿದ್ದಾಗ್ಯೂ ಶ್ರೀಮಠದ ಶ್ರೇಯಸ್ಸಿಗೆ ಸೂಕ್ತವಾದುದನ್ನು ಅವರು ಮಾಡಿದ್ದಾರೆ.

ಪೂಜ್ಯ ಗುರುವರ್ಯರು ಕಳೆದ ವರ್ಷಬ್ರಹ್ಮೀಭೂತರಾಗಿ, ಬೆಂಗಳೂರಿನ ಗಿರಿನಗರದಲ್ಲಿ ಅವರ ವಾಸ್ತವ್ಯವಾಗಿದ್ದ ವಿದ್ಯಾಮಂದಿರದ ಪಕ್ಕದಲ್ಲಿ ನಿರ್ಮಿತವಾದ ಶ್ರೀಗುರುಮಂದಿರದಲ್ಲಿ ಶ್ರೀಗುರುಮೂರ್ತಿಗಳಾಗಿ ಈಗ ವಿರಾಜಿಸುತ್ತಿದ್ದಾರೆ. ಶ್ರೀಸಂಸ್ಥಾನದ ಒಳಿತಿಗೆ ಹಿತವಾದುದನ್ನೇ ಮಾಡಿದ್ದ ಹಿಂದಿನ ಹಿರಿಯ ಶ್ರೀಶ್ರೀಗಳವರ ಬಗೆಗೆ ಸಮಗ್ರ ಜನತೆ ಚಿರಋಣಿಯಾಗಿರಬೇಕು.

~*~

Facebook Comments