ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.
ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ ಶ್ರೀಗುರುಚರಣಕೆ....

ಶ್ರದ್ಧಾಸುಮ ಶ್ರೀಗುರುಚರಣಕೆ….

ಶ್ರದ್ಧಾಸುಮ 11:

ಬ್ರಹ್ಮೈಕ್ಯ  ಪೂಜ್ಯಗುರುವರ್ಯರು
-ನಾನು ದರ್ಶನಮಾಡಿದಂತೆ

                               ವಿದ್ವಾನ್ ರಾಮಕೃಷ್ಣ ಅಡ್ಕೋಳಿ

“ವಿದ್ಯಯಾ ಪರಯಾ ಯುಕ್ತಂ ತಪಸಾ ಧೂತಕಲ್ಮಷಂ |
ಗುರೂಣಾಂ ತಂ ಗುರುಂ ವಂದೇ ರಾಘವೇಂದ್ರಂ ಮನಸ್ವಿನಂ ||”

“ಸದಾಚಾರದಿಂದ ಪ್ರಭವಿಸಿದ ಭಾರತೀಯ ಸನಾತನ ಧರ್ಮದ ಪ್ರಭು ಚ್ಯುತಿಯಿಲ್ಲದ-ಅಚ್ಯುತ. ಅಂತವಿಲ್ಲದ ಅನಂತ. ಕಲ್ಯಾಣಕರವಾದ ಅಂತಹ ಧರ್ಮಕರ್ಮವನ್ನು ಆಚರಿಸಿದವನು ಎಂದೆಂದಿಗೂ ಖಂಡಿತವಾಗಿಯೂ ದುರ್ಗತಿಯನ್ನು ಹೊಂದಲಾರ” ಎಂದು ದೃಢವಾಗಿ ನಂಬಿ ಅದರಂತೆ ನಡೆದು ಸಮಾಜವನ್ನು ಮುನ್ನಡೆಯಿಸಿ, ತಮ್ಮ ಪೂರ್ಣಜೀವನವನ್ನು ಉತ್ಕೃಷ್ಟವಾದ ಸನಾತನ ಧರ್ಮದ ಆಚರಣ ಹಾಗೂ ಪ್ರಚಾರಣಕ್ಕಾಗಿಯೇ ಮುಡುಪಿಟ್ಟ ಧರ್ಮಾಚಾರ್ಯರು- ಬ್ರಹ್ಮೈಕ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀಮಹಾಸ್ವಾಮಿಗಳವರು. ಅವರು ನಮ್ಮ ಪೂಜ್ಯಗುರುವರ್ಯರು. ವೇದ (ಕೃಷ್ಣಯಜುರ್ವೇದ) ವೇದಾಂಗ, ವೇದಾಂತಾದಿ ಶಾಸ್ತ್ರಗಳ ಆಳವಾದ ಅಧ್ಯಯನ, ಅಧ್ಯಾಪನಗಳಿಂದ ವಿದ್ಯಾವೃದ್ಧರೂ, ಅಚಂಚಲವಾದ ಧಾರ್ಮಿಕ ನಿಷ್ಠೆಯಿಂದ ಆಚರಿಸಿದ ತಪಸ್ಸು, ಅನುಷ್ಠಾನಾದಿಗಳಿಂದ ತಪೋವೃದ್ಧರೂ, ಸಂಕಲ್ಪಿಸಿ ನಿಯಮಾನುಸಾರವಾಗಿ ಐವತ್ತುನಾಲ್ಕು ಚಾತುರ್ಮಾಸ್ಯ ವ್ರತಗಳನ್ನು ಪೂರ್ಣಗೊಳಿಸಿ ವಯೋವೃದ್ಧರೂ ಆಗಿ ವಿಬುಧಜನ ಸಮ್ಮಾನಿತರಾದವರು- ಪೂಜ್ಯಗುರುವರ್ಯರು. ಸುಮಾರು ಐದುದಶಕಗಳಿಗೂ ಮಿಕ್ಕಿದ ಸುದೀರ್ಘಕಾಲ ಶ್ರೀಸಂಸ್ಥಾನ ಗೋಕರ್ಣ ಶ್ರೀರಾಮಚಂದ್ರಾಪುರಮಠ-ಮಹಾಸಂಸ್ಥಾನದ ಆಡಳಿತ ಸೂತ್ರಧಾರಿಗಳಾಗಿ ಆಚಾರ್ಯ ಪೀಠದ ದಿವ್ಯತೆಭವ್ಯತೆಗಳನ್ನು ತಮ್ಮ ಪರಿಶುದ್ಧವಾದ ಆಚರಣೆಯಿಂದ ಮತ್ತು ವ್ಯಾವಹಾರಿಕ ಚಾತುರ್ಯದಿಂದ ಸಂವರ್ಧನಗೊಳಿಸಿ, ಅಪಾರ ಜನಸ್ತೋಮದಿಂದ ಸಂಸ್ತುತರಾದವರು-ಪರಮಪೂಜ್ಯ ಗುರುವರ್ಯರು.

       ಶ್ರೀರಾಮಚಂದ್ರಾಪುರ ಮಠದ ಧರ್ಮಾಚಾರ್ಯ ಪೀಠದಲ್ಲಿ ವಿರಾಜಮಾನರಾದ ಯತಿಪುಂಗವರು, ತಪೋನುಷ್ಠಾನ ನಿಷ್ಠರು, ವಿದ್ಯಾವೈಭವ ಸಂಪನ್ನರು. ಆಧ್ಯಾತ್ಮಿಕ-ದೈವಿಕ ಶಕ್ತಿಸಂಯುತರಾಗಿ, ಶಿಷ್ಯಕೋಟಿಯನ್ನು ಅನುಗ್ರಹಿಸಿದವರು. ತಮ್ಮ ಅವಿಚ್ಛಿನ್ನವಾದ ಗುರುಪರಂಪರೆಯ ಹಿಂದಿನ ಗುರುವರ್ಯರಲ್ಲಿಯ ಎಲ್ಲಗುಣ- ಗಣಗಳನ್ನು ತಮ್ಮಲ್ಲಿ ಮೇಳೈಸಿಕೊಂಡು “ಆತ್ಮವಿದ್ಯಾ ಆಖ್ಯಾಯಿಕಾ” ಮತ್ತು ‘ಸ್ತುತಿಮಂಜರೀ’ ಗ್ರಂಥಗಳ ಸ್ವಯಂ ನಿರ್ಮಾತೃಗಳಾಗಿ, ಸಂಸ್ಕೃತ ವಾಘ್ಮಯವನ್ನು ಸಮೃದ್ಧಗೊಳಿಸುವುದರ ಮೂಲಕ ಹಿಂದಿನ ಪೀಠಾಧಿಪತಿಗಳಿಗಿಂತ ಇನ್ನೊಂದು ಹೆಜ್ಜೆಯನ್ನು ಮುಂದಕ್ಕೆ ಇಟ್ಟವರು ನಮ್ಮ ಪರಮಪೂಜ್ಯ ಗುರುವರ್ಯರು.

ಧಾರ್ಮಿಕ ತಾತ್ತ್ವಿಕ ವಿಷಯ ಸಂಪನ್ನ ಗ್ರಂಥರಚನೆ, ಉಪನ್ಯಾಸ, ಧರ್ಮಪ್ರವಚನಗಳ ಮುಖಾಂತರ ಭಾರತೀಯ ಸನಾತನ ಧರ್ಮ ಸಂಸ್ಕೃತಿ ಸದಾಚಾರ ಪರಂಪರೆಯ ಪ್ರಚಾರ ಕಾರ್ಯವನ್ನು ತಾವು ಸ್ವತಃ ನೆರವೇರಿಸಿದ್ದಲ್ಲದೇ, ವಿದ್ವಾಂಸರಿಗೆ, ಲೇಖಕರಿಗೆ, ಭಾರತ ಪ್ರಕಾಶನದಂತಹ ಧರ್ಮಪ್ರಚಾರದ ಹಲವಾರು ಸಂಘ ಸಂಸ್ಥೆಗಳಿಗೆ, ಆರ್ಥಿಕವಾಗಿ ನೆರವು ನೀಡಿ, ಪ್ರೋತ್ಸಾಹಿಸಿ, ಆಶೀರ್ವದಿಸಿ, ಸನಾತನ ಧರ್ಮವನ್ನು ಪೋಷಿಸಿ ಸಂವರ್ಧನೆಗೊಳಿಸಿದವರು-ನಮ್ಮ ಪೂಜ್ಯಗುರುವರ್ಯರು.

    ಕೇವಲ ಕರ್ತವ್ಯಭಾವನೆಯಿಂದ ಕಾರ್ಯೋನ್ಮುಖರಾಗಿ, ಮಠಕಟ್ಟಡಗಳ ಜೀರ್ಣೋದ್ಧಾರ ಕಾರ್ಯಗಳಿಂದ ಪ್ರಾರಂಭಿಸಿ, ವ್ಯವಸಾಯಾದಿ ಎಲ್ಲ ಕ್ಷೇತ್ರಗಳಲ್ಲಿ, ಸರ್ವತೋಮುಖ ಪ್ರಗತಿಗೆ ಕಾರ್ಯಯೋಜನೆಯನ್ನು ರೂಪಿಸಿ, ಯೋಜಿತ ಕಾರ್ಯವನ್ನು ಸಾಧಿಸಿ, ಶ್ರೀ ಸಂಸ್ಥಾನವನ್ನು ಸರ್ವಸಂಪದ್ಭರಿತವನ್ನಾಗಿಸಿ, ತದನಂತರ ಕಮಲದ ಎಲೆಯ ಮೇಲಿನ ಜಲಬಿಂದುವಿನಂತೆ ಇವೆಲ್ಲವುಗಳಿಂದ ನಿರ್ಲಿಪ್ತರಾಗಿ, ಸರ್ವಸಂಗ ಪರಿತ್ಯಾಗಿಗಳಾಗಿ, ಗಿರಿನಗರದ (ಬೆಂಗಳೂರು) ವಿದ್ಯಾಮಂದಿರದಲ್ಲಿ ಸ್ವಾತ್ಮಧ್ಯಾನಪರಾಯಣರಾದವರು – ನಮ್ಮ ಪೂಜ್ಯಗುರುವರ್ಯರು. “ತಮ್ಮದು ಅವಿಚ್ಛಿನ್ನವಾದ ಗುರುಪರಂಪರೆ. ಅಸಾಧಾರಣ ವೈಶಿಷ್ಟ್ಯ ಪೂರ್ಣ ಈ ಗುರುಪರಂಪರೆಯು ತಮ್ಮ ನಂತರವೂ ನಿರ್ಬಾಧವಾಗಿ ಮುಂದುವರಿದು ಸಮಸ್ತ ಜನತೆಗೆ ಸನ್ಮಾರ್ಗವನ್ನು ಪ್ರದರ್ಶಿಸಬೇಕು” ಎಂಬುದು ಪೂಜ್ಯ ಗುರುವರ್ಯರ ಸತ್ ಸಂಕಲ್ಪ. ಇದಕ್ಕಾಗಿ ಕ್ರಮಾಂತ ಕೃಷ್ಣ ಯಜುರ್ವೇದ, ಸಂಸ್ಕೃತ ಸಾಹಿತ್ಯ ವ್ಯಾಕರಣಾದಿಗಳನ್ನು ಅಭ್ಯಸಿಸಿದ ಯೋಗ್ಯ ವಟುವನ್ನು, ಸಮಾಜದ ಶಿಷ್ಯ ಜನತೆಯ ಸಹಾಯದಿಂದ ಆಯ್ಕೆಮಾಡಿ, ಆ ವಟುವಿಗೆ ತುರೀಯಾಶ್ರಮವನ್ನು ನೀಡಿ, ಮಹಾಸಭೆಯಲ್ಲಿ ತಮ್ಮ ಉತ್ತರಾಧಿಕಾರಿಗಳನ್ನಾಗಿ ಘೋಷಿಸಿ, ತದನಂತರ ತಮ್ಮ ಶಾರೀರಿಕ ಆರೋಗ್ಯವು ಹದಗೆಡುತ್ತ ಬಂದಾಗ, ಉನ್ನತ ಶಾಸ್ತ್ರಾಧ್ಯಯನ ನಿರತರೂ ತಮ್ಮ ಉತ್ತರಾಧಿಕಾರಿಗಳೂ ಆಗಿರುವ ಅವರನ್ನು, ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀರಾಘವೇಶ್ವರಭಾರತೀಸ್ವಾಮಿಗಳನ್ನು ಶ್ರೀಸಂಸ್ಥಾನದ ಆರಾಧ್ಯ ದೈವತಗಳೊಂದಿಗೆ ವಿಧ್ಯುಕ್ತವಾಗಿ ಶ್ರೀಮಠ ಪ್ರವೇಶ ಮಾಡಿಸಿ, ತಮ್ಮ ಸತ್ ಸಂಕಲ್ಪವನ್ನು ಈಡೇರಿಸಿಕೊಂಡವರು-ಪೂಜ್ಯಗುರುವರ್ಯರು.

ಕಳೆದ ಬಹುಧಾನ್ಯಸಂ|ದ ಮಾರ್ಗಶೀರ್ಷ ಶುದ್ಧ ಸಪ್ತಮೀ / ಅಷ್ಟಮೀ ಗುರುವಾರ (ದಿನಾಂಕ 26-11-1998) ಸಂಜೆಯ ಸಮಯದಲ್ಲಿ ಬ್ರಹ್ಮೀಭಾವ ಹೊಂದಿ, ಗಿರಿನಗರದ ವಿದ್ಯಾಮಂದಿರದ ಪಾರ್ಶ್ವದಲ್ಲಿ ಭವ್ಯವಾಗಿ ನಿರ್ಮಿತವಾದ ಶಿಲಾಮಂದಿರದಲ್ಲಿ ದಿವ್ಯಾತ್ಮಜ್ಯೋತಿ ಸ್ವರೂಪದಿಂದ ಬೆಳಗುತ್ತಲಿರುವವರು ನಮ್ಮ ಬ್ರಹ್ಮೈಕ್ಯ-ಪೂಜ್ಯಗುರುವರ್ಯರು.

 ಇಂತಹ ದಿವ್ಯಾಂಶ ಸಂಭೂತರಾದ ವಿಭೂತಿ ಪುರುಷರ ದಿವ್ಯಸನ್ನಿಧಿಯಲ್ಲಿ ಇದ್ದು ಅಧ್ಯಯನ ಮಾಡುವ ಅವಕಾಶ ನನಗೆ ದೊರಕಿತ್ತು. ಸಂಸ್ಕೃತ ಸಾಹಿತ್ಯ-ಶಾಸ್ತ್ರಗ್ರಂಥಗಳ ಅಧ್ಯಾಪನವನ್ನು ನನಗೆ ಸ್ವತಃಮಾಡಿ, ವಿದ್ಯಾದಾನದೊಂದಿಗೆ ಮಾತು ಬರಹಗಳಲ್ಲಿ ಅಭಿವ್ಯಕ್ತಿಯ ಶಕ್ತಿಯನ್ನು ಅನುಗ್ರಹಿಸಿರುವರು ಪೂಜ್ಯಗುರುವರ್ಯರು.

ಸತಿ, ಸುತ, ಪರಿವಾರ  ಸಹಿತನಾದ ನನ್ನ ಎಲ್ಲ ವಿವಿಧ ಏಳಿಗೆಗೆ ಕಾರಣಕರ್ತರಾಗಿದ್ದ ಪೂಜ್ಯಗುರುವರ್ಯರ ದಿವ್ಯ ಶ್ರೀಚರಣಗಳಿಗೆ, ಅವರೇ ಅನುಗ್ರಹಿಸಿದ ಅಭಿವ್ಯಕ್ತಿ ಶಕ್ತಿಯಿಂದ ಪೋಣಿಸಿದ ಈ ವಾಕ್ ಸುಮ ಮಾಲಿಕೆಯನ್ನು ಭಕ್ತಿಪೂರ್ವಕವಾಗಿ ಸಮರ್ಪಿಸುತ್ತೇನೆ.

           ಕಂಠೇ ಶ್ರುತಿಸ್ಮೃತೀ ಯಸ್ಯ
           ಕೃತಿಸ್ತ್ವಾಮ್ನಾಯಬೋಧಿನೀ |
           ಬ್ರಹ್ಮೀಭೂತಂ ಬ್ರಹ್ಮವಿದಂ
           ರಾಘವೇಂದ್ರಂ ತಮಾಶ್ರಯೇ ||

 ~*~

Facebook Comments