ಬ್ರಹ್ಮೈಕ್ಯ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ “ಶ್ರೀ ಗುರು ಭಾರತೀ”.
ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ,
ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ,  ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ,
ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ,
ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದ
ಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.
ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ ಶ್ರೀಗುರುಚರಣಕೆ....

ಶ್ರದ್ಧಾಸುಮ ಶ್ರೀಗುರುಚರಣಕೆ….

ಶ್ರದ್ಧಾಸುಮ 9:

ಬ್ರಹ್ಮೈಕ್ಯ ಪೂಜ್ಯಗುರುವರ್ಯರು
-ನಾನು ದರ್ಶನ ಮಾಡಿದಂತೆ  

ಬಿ.ಕೃಷ್ಣ ಭಟ್, ಗಿರಿನಗರ, ಬೆಂಗಳೂರು

ಶ್ರೀಗುರುಗಳು ಮುಕ್ತರಾದರು; ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು ಬ್ರಹ್ಮೈಕ್ಯರಾದರು!!  ಅದೂ ನನ್ನ ಕೈಹಿಡಿದುಕೊಂಡೇ !!! ನಂಬುವುದಕ್ಕೆ ಸಾಧ್ಯವಿಲ್ಲವಾದರೂ ಅದು ಸತ್ಯವಾಗಿತ್ತು. ಕಣ್ಣುಗಳಿಗೆ ಕತ್ತಲೆ ಆವರಿಸಿತ್ತು. ಆದರೂ ಕ್ಷಣಾರ್ಧದಲ್ಲಿ ಸುಧಾರಿಸಿಕೊಂಡೆ. ನನ್ನ ಸ್ಮೃತಿಪಟಲದಲ್ಲಿಯ ನೆನಪಿನ ಸುರುಳಿ, ಸಾವಕಾಶವಾಗಿ ಸಡಿಲವಾಗತೊಡಗಿತು.

ಅಂದಿನ ಮದ್ರಾಸ್ ರಾಜ್ಯಕ್ಕೆ ಸೇರಿದ ದಕ್ಷಿಣ ಕನ್ನಡ ಜಿಲ್ಲೆಯ ಕಾಸರಗೋಡು ತಾಲ್ಲೂಕಿನ ಕಾಟುಕುಕ್ಕೆ ಗ್ರಾಮದ ಬೋಳುಬೈಲಿನಲ್ಲಿ ಜನಿಸಿದ (1932) ನಾನು, ಎಳೆ ವಯಸ್ಸಿನಲ್ಲಿಯೇ (11 ವರ್ಷ) ತಂದೆಯವರನ್ನೂ, ಪಿತ್ರಾರ್ಜಿತ ಆಸ್ತಿಯನ್ನೂ ಕಳೆದುಕೊಂಡು ಓರ್ವ ನಿರ್ಗತಿಕನಾದುದು, ಆಮೇಲೆ ಧರ್ಮಸ್ಥಳದ ಶ್ರೀ ಮಂಜಯ್ಯ ಹೆಗ್ಗಡೆಯವರ ಮತ್ತು ಉಡುಪಿಯ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಕೃಪಾಶ್ರಯ ಪಡೆದು ವಿದ್ಯಾಭ್ಯಾಸ ಮಾಡಿ, ಪದವೀಧರನಾದುದು, ಕಾನೂನು ಮಹಾವಿದ್ಯಾಲಯ ಸೇರಿ, ಓದು ಮುಂದುವರಿಸಲು ಬೆಂಗಳೂರು ನಗರಕ್ಕೆ ಬಂದ (1956) ನಾನು, ಭಾರತ ಸೇವಕ ಸಮಾಜದ ಸಕ್ರಿಯ ಸದಸ್ಯನಾಗಿ, ಅಂದಿನ ಪ್ರಮುಖ ವ್ಯಕ್ತಿಗಳಾದ ಶ್ರೀ ಬಾಬೂ ರಾಜೇಂದ್ರ ಪ್ರಸಾದ್, ಪಂಡಿತ ಜವಾಹರಲಾಲ್ ನೆಹರೂ, ಗುರ್ಜಾರಿ ಲಾಲ್ ನಂದಾ, ವಿನೋಬಾ ಭಾವೆ ಹಾಗೂ ಜಯಪ್ರಕಾಶ ನಾರಾಯಣ ಮೊದಲಾದ ಗಣ್ಯ ನಿಷ್ಠಾವಂತ ರಾಷ್ಟ್ರನಾಯಕರೊಂದಿಗೆ ಸಂಪರ್ಕಬಂದು ಪರಿವರ್ತಿತನಾದುದು- ಇವೆಲ್ಲ ಸ್ಮೃತಿಪಟಲದ ಮೇಲೆ ಒಮ್ಮೆ ಹಾದುಹೋದವು.

  ಸುಮಾರು ಇಪ್ಪತ್ತೈದು ವರ್ಷಗಳಿಗೂ ಹಿಂದೆ ಬಹುಶಃ 1973 ನೇ ಇಸವಿ ಇರಬಹುದು, ಅದೊಂದು ಶುಭ ಶುಕ್ರವಾರ, ನಾನು ಕುಟುಂಬದವರೊಂದಿಗೆ ಬೆಂಗಳೂರಿನಲ್ಲಿಯೇ ವಸತಿ ಮಾಡಿದ್ದ ಶ್ರೀ ಗುರುಗಳವರ ದರ್ಶನಕ್ಕೆ ಹೋಗಿದ್ದೆ. ರಾತ್ರಿ ಪೂಜೆಯಲ್ಲಿ ಭಾಗಿಗಳಾಗಿ ಪ್ರಸಾದ ಸ್ವೀಕರಿಸಿದೆವು. ತದನಂತರ ನಮಗೆ ಶ್ರೀಗುರುಗಳ ದರ್ಶನಭಾಗ್ಯ ಲಭಿಸಿತು.

  ದೇದೀಪ್ಯಮಾನವಾದ ಅವರ ಅಂತಶ್ಚಕ್ಷುಗಳಿಗೆ ನಾನು ಮಾರುಹೋದೆ. ಅವರು ಪ್ರತ್ಯಕ್ಷ ಪರಬ್ರಹ್ಮನಂತೆಯೇ ಕಂಡರು. ಅವರ ಪ್ರಥಮ ದರ್ಶನದ ಆ ದಿವಸ ಮುಗುಳುನಗೆಯೊಂದಿಗೆ ಶ್ರೀಗುರುಗಳು ನನ್ನನ್ನು ಆಶೀರ್ವದಿಸಿದ್ದು ಇಂದೂ ಹಸಿರಾಗಿಯೇ ಉಳಿದಿದೆ. ಪ್ರಭು ಶ್ರೀರಾಮಚಂದ್ರನ ದರ್ಶನ ಭಾಗ್ಯ ಪಡೆದ ಆಂಜನೇಯ ಮುಂದೆಂದೂ ಅವನನ್ನು ಬಿಟ್ಟಿರಲಿಲ್ಲ. ಅಂತೆಯೇ ಅಂದಿನಿಂದ ನಾನು ಶ್ರೀಗುರುಗಳ ವಿನಮ್ರ ಸೇವಕನಾಗಿ ಮುಂದುವರಿದೆ.

      ನಾನು ಅದೇ ವೇಳೆಗೆ ಬೆಂಗಳೂರು ನಗರದಲ್ಲಿ ಹೊಸ ನಿವೇಶನಗಳನ್ನು ನಿರ್ಮಿಸುವ ಒಂದು ಬಡಾವಣೆಯನ್ನು ಪ್ರಾರಂಭಿಸಿದ್ದೆ. ಅಂದಿನ ರಾಷ್ಟ್ರಾಧ್ಯಕ್ಷರಾದ ಸನ್ಮಾನ್ಯ ವಿ.ವಿ. ಗಿರಿಯವರ ಪ್ರೋತ್ಸಾಹದಿಂದ ಈ ಬಡಾವಣೆಯ ಕಾರ್ಯ ನೆರವೇರುತ್ತಲಿದ್ದುದರಿಂದ ಇದಕ್ಕೆ ‘ಗಿರಿನಗರ’ ಎಂದೇ ನಾಮಕರಣ ಮಾಡಿದೆ. ಶ್ರೀಗುರುಗಳು ಬೆಂಗಳೂರಿಗೆ ಬಂದಾಗ ಮೊಕ್ಕಾಂ ಮಾಡಲು ಸಮರ್ಪಕವಾದ ವಾಸಸ್ಥಳದ ಅವಶ್ಯಕತೆಯನ್ನು ನಾನು ಮನಗಂಡು ಒಂದು ವಿಶಾಲವಾದ ನಿವೇಶನವನ್ನು ಶ್ರೀಗುರುಗಳಿಗೆ ಭಕ್ತಿಪೂರ್ವಕವಾಗಿ ಸಮರ್ಪಿಸಿದೆ.

   ಶ್ರೀಗುರುಗಳ ಬಗ್ಗೆ ಮೊದಲು ವಿರಚಿತವಾದ ಗ್ರಂಥ “ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರು “. ವಿದ್ವಾನ್ ರಾಮಕೃಷ್ಣ ಅಡ್ಕೋಳಿಯವರು ರಚಿಸಿದ ಈ ಗ್ರಂಥವನ್ನು ಮುದ್ರಿಸಿ ಶ್ರೀ ಗುರುಸೇವೆಯಲ್ಲಿ ಭಾಗಿಯಾದ ನನಗೆ, ಅದೇ ಗ್ರಂಥದ ಪರಿವರ್ಧಿತ ಪರಿಷ್ಕೃತ ದ್ವಿತೀಯ ಆವೃತ್ತಿಯನ್ನು ಮುದ್ರಣಮಾಡಿ ನೀಡುವ ಸದವಕಾಶ ದೊರೆಯಿತು.

ಶ್ರೀಗುರುಗಳು ನಮ್ಮ ಮನೆಗೆ ಬಂದು ಅವರ ಪಾದಪೂಜೆಯನ್ನು ಮಾಡುವ ಸೌಭಾಗ್ಯ ನನಗೆ ದೊರೆತರೂ, ತೀರ್ಥಹಳ್ಳಿಯ ಶ್ರೀಮಠಕ್ಕೆ ತೆರಳಿ, ಅಲ್ಲಿ ವಿರಾಜಿಸುತ್ತಿದ್ದ ಶ್ರೀಗಳವರ ದರ್ಶನ ಪಡೆಯಲು ನನಗೆ ಸಾಧ್ಯವಾಗಿರಲಿಲ್ಲ. ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾದಾಗ, ಸರಕಾರದ ದೃಷ್ಟಿಗೆ ನಾನೊಬ್ಬ ದೇಶದ್ರೋಹಿಯಾಗಿ ಕಂಡು ಕಾರಾಗೃಹಕ್ಕೆ ಸೇರಬೇಕಾಯಿತು. ಸೆರೆಮನೆಯಿಂದ ಹೊರಬಂದಾಗ ಇಡೀ ಸಮಾಜವೇ ನನ್ನನ್ನು ಸಂಶಯ ದೃಷ್ಟಿಯಿಂದ ನೋಡುತ್ತಿದ್ದಾಗ, ನನ್ನ ರಕ್ಷಣೆಗೆ ಬಂದದ್ದು ಶ್ರೀ ಗುರುಗಳ ದಿವ್ಯಶ್ರೀರಕ್ಷೆ ಮಾತ್ರ. ತೀರ್ಥಹಳ್ಳಿಯ ಶ್ರೀಮಠಕ್ಕೆ ಹೋಗಿ ಶ್ರೀಶ್ರೀಗಳವರ ದರ್ಶನ ಭಾಗ್ಯ ಪಡೆದೆ. ಶ್ರೀಗುರುಗಳ ಪರಮಾನುಗ್ರಹವು ಅಂದು ನನ್ನ ಮೇಲೆ ಆಯಿತು. ಅಂದಿನಿಂದ ಇಂದಿನವರೆಗೂ ಶ್ರೀಗುರು ಸೇವೆಯೊಂದಿಗೆ ಸಮಾಜಸೇವೆಯಲ್ಲಿ ನನ್ನನ್ನು ನಾನು ತೊಡಗಿಸಿಕೊಂಡೆ. ಶ್ರೀಗುರುಮಠ, ದೇವಾಲಯ ಮತ್ತು ನ್ಯಾಯಾಲಯಗಳು ನನಗೆ ರಕ್ಷಣೆಯನ್ನೊದಗಿಸಿವೆ.

ಶ್ರೀಗುರುಗಳು ಬೆಂಗಳೂರಿಗೆ ಬಂದಾಗ ವಾಸ್ತವ್ಯ ಮಾಡಲು ಅನುಕೂಲವಾಗುವಂತೆ ಗಿರಿನಗರದಲ್ಲಿ “ವಿದ್ಯಾಮಂದಿರ”ವನ್ನು ನಿರ್ಮಾಣ ಮಾಡಿ, ಶ್ರೀಗುರುಗಳ ಚರಣಾರವಿಂದಗಳಿಗೆ ಸಮರ್ಪಿಸುವ ಸುಯೋಗ ನನಗೆ ದೊರೆತದ್ದು ನನ್ನ ಹಾಗೂ ನನ್ನ ಕುಟುಂಬದವರ ಪರಮ ಸೌಭಾಗ್ಯ (12-12-1984).

    ಇದರಿಂದಾಗಿ ಶ್ರೀಗುರುಗಳ ದಿವ್ಯ ಸಾಮೀಪ್ಯ ನಮಗೆ ದೊರೆತು, ಗಿರಿನಗರ ಪ್ರದೇಶ ಪಾವನವಾಯಿತು. ಅವರ ಮಾರ್ಗದರ್ಶನದಲ್ಲಿ ಶ್ರೀ ಮಹಾಗಣಪತಿ ದೇವಸ್ಥಾನ ನಿರ್ಮಾಣ, ಶ್ರೀ ಗಣಪತಿ ಮೂರ್ತಿ ಸ್ಥಾಪನೆಗಳು ನೆರವೇರಿ ಭಕ್ತ ಮಹಾಜನತೆ ಸಂತಸಪಡುವಂತಾದುದು ನಮ್ಮ ಸುದೈವ.

 ಪೂಜ್ಯ ಗುರುವರ್ಯರು ವಿರಚಿಸಿದ ಅಮೂಲ್ಯ ಗ್ರಂಥ “ಆತ್ಮವಿದ್ಯಾ ಆಖ್ಯಾಯಿಕಾ” ಹಾಗೂ “ಸ್ತುತಿಮಂಜರೀ” ಗ್ರಂಥಗಳ ಬಿಡುಗಡೆ ಸಮಾರಂಭ ಮತ್ತು ಗುರುಗಳ ಜೀವನದ ಸಮಗ್ರ ಚಿತ್ರಣದಿಂದ ಕೂಡಿದ, ವಿದ್ವಾನ್ ರಾಮಕೃಷ್ಣ ಅಡ್ಕೋಳಿಯವರ ಕೃತಿ “ಶ್ರೀಗುರುಭಗವತ್ಪಾದ ವೈಭವಂ” ಗ್ರಂಥವನ್ನು ಜನತೆಗೆ ನೀಡುವ ಸಮಾರಂಭಗಳನ್ನು ಶ್ರೀಸಂಸ್ಥಾನದ ಘನತೆಗೆ ತಕ್ಕಂತೆ ನೆರವೇರಿಸಿ ಶ್ರೀಗುರುಸೇವಾಭಾಗಿಯಾಗಲು ನನಗೆ ಸದವಕಾಶವು ಪ್ರಾಪ್ತವಾಯಿತು.

ಶ್ರೀಗುರುಗಳವರ ಶಾರೀರಿಕ ಆರೋಗ್ಯ ಹದಗೆಟ್ಟಿತ್ತು. ವಿದ್ಯಾಮಂದಿರದಲ್ಲಿ ವಾಸ್ತವ್ಯ ಮಾಡಿದ್ದ ಶ್ರೀಗಳವರ ಆರೋಗ್ಯ ಸುಧಾರಣೆಯ ಹೊಣೆಯನ್ನು ಅವರ ಅಪೇಕ್ಷೆಯ ಮೇರೆಗೆ ನಾನು ವಹಿಸಿಕೊಂಡೆ. ದಿನದಿನಕ್ಕೂ ಅವರ ಆರೋಗ್ಯ ಕ್ಷೀಣಿಸುತ್ತಿತ್ತು. ಅಂತಹ ಸಂದರ್ಭದಲ್ಲಿಯೇ ಅವಿಚ್ಛಿನ್ನ ಶ್ರೀಗುರು ಪರಂಪರೆಯ ನಮ್ಮ ಮಠದ ಶಿಷ್ಯ ಸ್ವೀಕಾರ ಸಮಾರಂಭವೂ ಶ್ರೀಶ್ರೀಗಳವರ ಸನ್ನಿಧಿಯಲ್ಲಿಯೇ, ಶಾಸ್ತ್ರೋಕ್ತವಾಗಿ ಅದ್ಧೂರಿಯಾಗಿ ನೆರವೇರಿತು. ಅನೇಕ ಧಾರ್ಮಿಕ ವಿನಿಯೋಗಗಳು, ಧರ್ಮಪರ ಕಾರ್ಯಗಳು, ಶ್ರೀ ಗುರುಗಳ ಚಾತುರ್ಮಾಸ್ಯ ವ್ರತಗಳು ಇಲ್ಲಿ ಕ್ರಮಬದ್ಧವಾಗಿ ಜರುಗಿದವು. ಈ ಎಲ್ಲ ಸಂದರ್ಭಗಳಲ್ಲಿ ವಿನೀತ ಶಿಷ್ಯನಾಗಿ ಸೇವೆಯನ್ನು ಶ್ರೀ ಗುರುಗಳಿಗೆ ಸಲ್ಲಿಸುವ ಸೌಭಾಗ್ಯ ನನಗೆ ಹಾಗೂ ನನ್ನ ಕುಟುಂಬದವರಿಗೆ ದೊರಕಿತ್ತು.

ಬಹುಧಾನ್ಯ ಸಂವತ್ಸರದ ಮಾರ್ಗಶೀರ್ಷ ಮಾಸದ ಪಂಚಮಿ, ಪೂಜ್ಯ ಪರಮಗುರುಗಳ ಆರಾಧಾನೆ ಮುಗಿದ ಎರಡನೇ ದಿವಸ, ಬೆಳಗಿನಿಂದಲೇ ಮಾರ್ಗಶೀರ್ಷ ಶುದ್ಧ ಸಪ್ತಮೀ/ಅಷ್ಟಮೀ ಗುರುವಾರ ಶ್ರೀಗುರುಗಳ ಆರೋಗ್ಯ ತೀವ್ರವಾಗಿ ಹದಗೆಡತೊಡಗಿತು. ಕ್ಷಣಕ್ಷಣಕ್ಕೂ ಶ್ರೀಗುರುಗಳ ದಿವ್ಯದೃಷ್ಟಿ ಕ್ಷೀಣಿಸುತ್ತಿತ್ತು. ಪ್ರಖರ ಕಿರಣಗಳಿಂದ ಪ್ರಜ್ವಲಿಸುತ್ತಿದ್ದ ಸೂರ್ಯ ಭಗವಾನನು ತನ್ನ ತೀಕ್ಷ್ಣತೆಯನ್ನು ಕಡಿಮೆಗೊಳಿಸುತ್ತಾ ಕೊನೆಗೊಮ್ಮೆ ಚಂದ್ರೋದಯಕ್ಕೆ ಅನುವು ಮಾಡಿಕೊಟ್ಟು ತಾನು ಕಣ್ಮರೆಯಾದ ಶ್ರೀಗುರುಗಳು ಬ್ರಹ್ಮೀಭಾವ ಹೊಂದಿದರು.

  ಅವಿಚ್ಛಿನ್ನ ಶ್ರೀಗುರು ಪರಂಪರೆಯುಳ್ಳ ಶ್ರೀ ರಾಮಚಂದ್ರಾಪುರ ಮಠದ ಪರಮಪೂಜ್ಯ ಗುರುವರ್ಯರು ನನ್ನ ಕೈಹಿಡಿದುಕೊಂಡೇ ಕಣ್ಮರೆಯಾದರು. ನನ್ನ ಜೀವನಕ್ಕೊಂದು ದಿಕ್ಕು ದೆಸೆಯನ್ನಿತ್ತು, ಅನುಗ್ರಹಿಸಿದ ಅನರ್ಘ್ಯ ರತ್ನವೊಂದು ಕೈಯಿಂದ ಜಾರಿತು. ತದನಂತರ ಆರಾಧನಾದಿ ಕಾರ್ಯಗಳಲ್ಲಿಯೂ ನಾವೆಲ್ಲ ಭಕ್ತಿಯಿಂದ ಭಾಗಿಗಳಾದೆವು.

ಶ್ರೀಗುರುಗಳು ಬ್ರಹ್ಮೀಭಾವ ಹೊಂದಿದ ನಂತರವೂ ಆಗಾಗ ಕನಸಿನಲ್ಲಿ ದರ್ಶನ ಕೊಟ್ಟು ನನ್ನನ್ನು ಮುನ್ನಡೆಸಿದ್ದಾರೆ. ಸ್ವಪ್ನದಲ್ಲಿ ಅವರೇ ಸಾಕ್ಷಾತ್ತಾಗಿ ಬಂದು ಅಪ್ಪಣೆ ಮಾಡಿದಂತೆ ಶ್ರೀಗುರುಮೂರ್ತಿಯ ಶಿಲಾಮಯ ಮಂದಿರವನ್ನು ನಿರ್ಮಾಣಮಾಡಿಸಿ, ನಾನು ಮತ್ತು ಕುಟುಂಬದವರು ಶ್ರೀಗುರುಗಳ ದಿವ್ಯ ಚರಣಗಳಿಗೆ ಸಮರ್ಪಿಸಿದ್ದೇವೆ. ಶ್ರೀಗುರುಗಳ ದಿವ್ಯಸಾನ್ನಿಧ್ಯ ಇಲ್ಲಿಯೇ ಇದೆ ಎನ್ನುವುದಕ್ಕೆ ಅನೇಕ ದೃಷ್ಟಾಂತಗಳಿವೆ. ಅದಕ್ಕೆ ಈ ಶಿಲಾಮಯ ಕಟ್ಟಡದ ಭೂಮಿ ಪೂಜೆಯು ನೆರವೇರಿದಂದು ಇಲ್ಲಿ ಎಂದೆಂದೂ ಕಣ್ಣಿಗೆ ಕಾಣಿಸದೇ ಇದ್ದ ಗರುಡ ಪಕ್ಷಿಯೊಂದು ಗೋಚರಿಸಿ ಸಮಾಧಿಗೆ ಪ್ರದಕ್ಷಿಣೆ ಹಾಕಿ ಮಾಯವಾದ ಘಟನೆಯೊಂದೇ ಸಾಕು.

        ಈ ರೀತಿ ಶ್ರೀಗುರುಸೇವೆ, ದೇವತಾಸೇವೆ ಹಾಗೂ ಸಮಾಜ ಸೇವೆಯಲ್ಲಿ ಸಕ್ರಿಯವಾಗಿ ಭಾಗಿಯಾದ ನಾನು ಇಂದು ರಾಷ್ಟ್ರೀಯರತ್ನ, ‘ಭಾರತದ ಹೆಮ್ಮೆ’ ಅಂತರ ರಾಷ್ಟ್ರೀಯ ಪ್ರತಿಷ್ಠಿತ ವ್ಯಕ್ತಿ, ‘ಭಾರತ-ನೇಪಾಳ ಮೈತ್ರಿ’ ಪ್ರಶಸ್ತಿ, ‘ಕರ್ಮಯೋಗಿ’, ‘ಶ್ರೀಗುರುಸೇವಾ ನಿರತ’, ‘ಶ್ರೀಗುರುಸೇವಾ ಧುರಂಧರ’, ‘ಸಮಾಜ ಭೂಷಣ’,  ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಪ್ರಶಸ್ತಿ-ಬಿರುದುಗಳಿಂದ ವಿಭೂಷಿತನಾಗಲು ಶ್ರೀಗುರು-ದೇವತಾ ಪ್ರಸಾದ, ಮಠಮಾನ್ಯಗಳ ಆಶೀರ್ವಾದಗಳೇ ಕಾರಣ ಎಂದು ದೃಢವಾಗಿ ನಂಬಿ ನಡೆಯುತ್ತಿದ್ದೇನೆ.

   “ಸರ್ವೇಜನಾಃ ಸುಖಿನೋ ಭವಂತು” ಎಂಬ ಉದಾರ ಮನೋಭಾವವನ್ನು ಹೊಂದಿದ್ದ ಬ್ರಹ್ಮೈಕ್ಯ ಶ್ರೀಗಳವರ ಕೃಪಾಕಟಾಕ್ಷವು ನಮ್ಮೆಲ್ಲರ ಮೇಲೆ ಇರಲಿ ಎಂದು ಮನಃಪೂರ್ವಕ ಪ್ರಾರ್ಥಿಸುತ್ತೇನೆ.

      *~*

Facebook Comments