ಬ್ರಹ್ಮೈಕ್ಯ ಪರಮಪೂಜ್ಯಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ 19:

ಬ್ರಹ್ಮೈಕ ಪೂಜ್ಯಗುರುವರ್ಯರು
-ನಾನು ದರ್ಶನ ಮಾಡಿದಂತೆ

                       ಬಾಬು ಎನ್. ಭಟ್ಟ

       “ಶಿಷ್ಟಾನಾಂ ಹೃದಯಾವಾಸಃ ಕಷ್ಟಹಾರೀಷ್ಟದಾಯಕಃ|
        ರಾಘವೇಂದ್ರಪದೋಪೇತ ಭಾರತೀ ಸುವಿರಾಜತೇ”||

ವ್ಯಕ್ತಿಯೊಬ್ಬನಿಗೆ ಗುರುವಿನ ಅನುಗ್ರಹ ಆಶೀರ್ವಾದ ಅಥವಾ ಗುರುಸೇವಾ ಕೈಂಕರ್ಯ ಮಾಡುವ ಯೋಗ ಒದಗಿ ಬರಬೇಕಾದರೆ ಕಾಲವು ಹಾಗೂ ದೈವೀಸಂಕಲ್ಪವು ಕೂಡಿಬರಬೇಕಾಗುತ್ತದೆ ಎಂಬುವುದು ಸರ್ವವೇದ್ಯವಷ್ಟೆ. ಪ್ರಕೃತ ನನಗೂ ಸಹ ಶ್ರೀಗುರುದೃಷ್ಟಿ ಅಥವಾ ಗುರುಸೇವಾ ಕಾರ್ಯ ಈ ಒಂದು ದೈವೀಸಂಕಲ್ಪದ ಮೂಲಕ ಒದಗಿಬಂತೆಂಬುದರಲ್ಲಿ ಎರಡು ಮಾತಿಲ್ಲ. ಹಾಗೂ ಪೂರ್ವಜನ್ಮದ ಸುಕೃತವೇ ಸರಿ ಎಂದು ಭಾವಿಸಿರುವೆ. ನಮ್ಮ ಕುಟುಂಬದ ಪೂರ್ವಜರು ಸಹ ಗುರುಸೇವಾಕಾರ್ಯದಲ್ಲಿ ತೊಡಗಿಸಿಕೊಂಡು ಅನುಗ್ರಹಪಡೆದುದರ ಫಲವೇ ನನಗೂ ಆ ಒಂದು ಗುರುದರ್ಶನ ಭಾಗ್ಯದ ಜೊತೆಗೆ  ಸೇವಾಕಾರ್ಯ ಒದಗಿ ಬಂದುದು ಸೌಭಾಗ್ಯವೇ ಸರಿ.

ಶ್ರೀ ಶಂಕರಭಗವತ್ಪಾದ ಪ್ರತಿಷ್ಠಾಪಿತ ಅವಿಚ್ಛಿನ್ನ ಪರಂಪರೆಯ ಶ್ರೀಗುರುಪೀಠದ ಮೂವತ್ತೈದನೆಯ ಯತಿವರ್ಯರಾದ ನಮ್ಮ ಕುಲಗುರುವರ್ಯರಾದ ಬ್ರಹ್ಮೀಭೂತ ಶ್ರೀಮದ್ರಾಘವೇಂದ್ರ ಭಾರತೀ ಮಹಾಸ್ವಾಮಿಗಳವರನ್ನು ಪ್ರಪ್ರಥಮ ಬಾರಿಗೆ ದರ್ಶನ ಮಾಡಿದಾಗಲೇ ಆಚಾರ್ಯರ ಆವಾತಾರವೆಂದೇ ಪರಿಗ್ರಹಿಸಿ ಗುರುತ್ವವನ್ನು ಕಂಡುಕೊಂಡಿರುವೆನು. ವಿಚ್ಛೇದರಾಹಿತ್ಯ ವೈಶಿಷ್ಯದ ಆಚಾರ್ಯಪೀಠವನ್ನು ಆರೋಹಣ  ಮಾಡಿದ ಪೂಜ್ಯಗುರುಪುಂಗವರು ಹಲವು ಶಾಸ್ತ್ರಗಳ ಆಳ ಅಧ್ಯಯನ ಸ್ವತಃ ಆಚರಣೆ, ಭಕ್ತಾದಿಗಳು ಆಚರಿಸುವಂತೆ ಪ್ರೇರಣೆ ನೀಡುತ್ತ, ಶ್ರೀಗುರುಪೀಠದ ಪಾವಿತ್ರ್ಯವನ್ನು ಉಳಿಸಿಕೊಂಡು, ಅದನ್ನು ಸಮಕಾಲೀನ ಸಂದರ್ಭಕ್ಕೆ ಪ್ರಸ್ತುತವಾಗುವಂತೆ ಮಾಡಿರುವುದು ಅಭಿಮಾನದ ಹಾಗೂ ಪ್ರಶಂಸಾರ್ಹ ಸಂಗತಿಯಾಗಿದೆ. ಅವಿಚ್ಛಿನ್ನ ಈ ಶ್ರೀಗುರುಪರಂಪರೆಯ ಪೀಠಾಧಿಷ್ಠಿತರಾದ ಮೇಲೆ 54 ಚಾತುರ್ಮಾಸ್ಯಗಳನ್ನು ಆಚರಿಸಿ ಮುನ್ನೆಡೆದಿರುವ ಬ್ರಹ್ಮೀಭೂತ ಶ್ರೀಗುರುವರ್ಯರು ಅದ್ವಿತೀಯ ಅದ್ವೈತ ಪರಮಾಚಾರ್ಯರೆಂಬುದರಲ್ಲಿ ಸಂಶಯವಿಲ್ಲ ಹಾಗೂ ಈ ಮಾಹಿಮಾತಿಶಯ ಶಕ್ತಿಯೇ ಅವರ ಬಗೆಗೆ ಭಕ್ತಿ-ಗೌರವ ಹೆಚ್ಚಲು ಕಾರಣವಾಗಿದೆ. ಎಪ್ಪತ್ತು ವಸಂತಗಳನ್ನು ಕಂಡ ವಯೋವೃದ್ಧ,ಜ್ಞಾನವೃದ್ಧ ಮತ್ತು ಆಧ್ಯಾತ್ಮಿಕ ತೇಜಸ್ವಿನ ಬ್ರಹ್ಮಿಭೂತ ಶ್ರೀಗಳನ್ನು ದರ್ಶನ ಮಾಡಿದಾಗಲೆಲ್ಲ ದಿವ್ಯಾನುಭವವಾಗುತ್ತದೆ. ಈ ತೆರನಾದ ಅನುಭವಗಳನ್ನುಂಡ ಶಿಷ್ಯಾನುಕೋಟಿಗಳಲ್ಲಿ ನಾನೂ ಓರ್ವನಾಗಿರುವೆ. ದರ್ಶನದ ಸವಿಯ ಜೊತೆಗೆ ಒಂದು ದಶಕದ ಕಾಲ ಹತ್ತಿರದಲ್ಲಿದ್ದು ಸೇವಾನಿರತನಾಗಿ, ವ್ಯಾವಹಾರಿಕ, ದೈವಿಕ, ಧಾರ್ಮಿಕವೇ ಮುಂತಾದ ಜ್ಞಾನಾಮೃತವನ್ನುಂಡ  “ಸೌಭಾಗ್ಯವಂತ” ಎನ್ನುವ ಹೆಮ್ಮೆ ಸಹ ನನಗಿದೆ. ಯಾಕೆಂದರೆ ಅಸಾಧಾರಣ ವಾಕ್ ಪಟುತ್ವ, ವ್ಯಾವಹಾರಿಕ ಚತುರತೆ ಅಖಂಡ ಪ್ರಕಾಂಡ ಪಾಂಡಿತ್ಯವನ್ನು ಹೊಂದಿರುವ ಬ್ರಹ್ಮೀಭೂತ ಶ್ರೀಗಳ ಸಾಂನಿಧ್ಯ-ಅಜ್ಞಾನಿಯನ್ನು ಜ್ಞಾನಿಯನ್ನಾಗಿ, ದಡ್ಡನನ್ನು ಬುದ್ಧಿವಂತನನ್ನಾಗಿ, ನಾಸ್ತಿಕನನ್ನಾಗಿ ಮಾಡುವಂತಿತ್ತೆಂಬುದು ನಿಸ್ಸಂಶಯವಾದ ಸಂಗತಿ.

ಸನಾತನಧರ್ಮದ ಪೋಷಣೆ ಸಮಾಜದ ಸಮಾಜದ ಏಳ್ಗೆ, ಅವಿಚ್ಥಿನ್ನ ಶ್ರೀಗುರುಪರಂಪರೆಯ ಐತಿಹಾಸಿಕ ಮಹಿಮೋನ್ನತಿಯೇ ಮುಂತಾದ ಮಹತ್ವದ ಸಾಧನೆಗಳನ್ನುಗೈದು ಅನುದಿನವೂ ಸಮಾಜದ, ಶಿಷ್ಯಾಭಿಮಾನಿಗಳ ಕ್ಷೇಮಾಭಿವೃದ್ಧಿಗೆ ಆರಾಧ್ಯ ದೇವತಾಸನ್ನಿಧಿಯಲ್ಲಿ ಸಂಪ್ರಾರ್ಥಿಸಿ ತಪಃಶಕ್ತಿಯನ್ನು ಧಾರೆಯೆರೆದು ಆಜೀವಪರ್ಯಂತ ಶ್ರಮಿಸಿರುವ, ತಪಸ್ವಿಗಳು, ಯೋಗಿಗಳು ಆದ ಬ್ರಹ್ಮೀಭೂತಶ್ರೀಗಳ ಮಹತಿ-ಮಹಿಮೆ ಅಪಾರವಾದದ್ದು. ಮಠೀಯ ಆಡಳಿತಾಧಿಕಾರವನ್ನು ನಿರ್ವಹಿಸಿಕೊಳ್ಳುವ ಆಕಾಲದಲ್ಲಿ ಜೀರ್ಣಾವಸ್ಥೆಯಲ್ಲಿರುವ ಮಠದ ಹಾಗೂ ಶಾಖಾಮಠಗಳ ಜೀರ್ಣೋದ್ಧಾರ ಹಾಗೂ ವ್ಯಾವಹಾರಿಕ ಬುದ್ಧಿ ಮತ್ತೆಯ ಮೂಲಕ ಕೃಷಿಭೂಮಿಗಳ ಅಭಿವೃದ್ಧಿ ಮತ್ತು ನಿತ್ಯನೈಮಿತ್ತಿಕಗಳ  ಸುವ್ಯವಸ್ಥೆಗಳನ್ನು ಮಾಡಿ ತನ್ಮೂಲಕ ಸಮಾಜದ ಸಂಘಟನೆ ಹಾಗೂ ಅಭಿವೃದ್ಧಿ ಕೊನೆ ಉಸಿರಿನ ತನಕ ಶ್ರಮಿಸಿದ ಧೀಮಂತರು ಹಾಗೂ ಯೋಗಿಗಳು, ಬ್ರಹ್ಮೀಭೂತ ಪರಮಪೂಜ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳ ಕೇವಲ ದರ್ಶನಮಾಡಿ ಅನುಗ್ರಹ, ಆಶೀರ್ವಾದ ಪಡೆದ ಶಿಷ್ಯರುಗಳ ಸಾಲಿನಲ್ಲಿ ಸೇರದೆ ಸಾಂನ್ನಿಧ್ಯಾವಕಾಶವನ್ನು ಪಡೆದ ಅದೃಷ್ಟವಂತರಲ್ಲಿ ನಾನೂ ಒಬ್ಬನು.

ಶಂಕರೋ ಭಗವತ್ಪಾದಃ ರಾಘವೇಂದ್ರಾಖ್ಯಭಾರತೀ |
                 ಭಜಕಾನಾಂ ಕಲ್ಪತರುಃ ರಾಜತಾಂ ಸುವಿರಾಜತಾಂ ||

ಎಂಬಂತೆ ಭಗವತ್ಪಾದ ಸ್ವರೂಪಿಗಳಾದ ಬ್ರಹ್ಮೀಭೂತ ಶ್ರೀಗಳು ಭಜಕರ ಶಿಷ್ಯರಪಾಲಿಗೆ ಕಲ್ಪತರುವಾಗಿದ್ದಾರೆ. ಜ್ಞಾನ ಹಾಗೂ ತಪಃಶಕ್ತಿಯ ಅನುಗ್ರಹವನ್ನಿತ್ತು ಅಮೃತ ಸುಧೆಯನ್ನು ಶಾಶ್ವತವಾಗಿ ನೀಡುವಂತ ಮಹಿಮಾನ್ವಿತರು. ಒಂದು ದಶಕದ ಸಮಯ ಶ್ರೀಸನ್ನಿಧಿಯಲ್ಲಿದ್ದ ನಾನು ಅವರ ವ್ಯವಹಾರಿಕ ಚತುರತೆ, ತಪಃಶಕ್ತಿಯ ಮಹಿಮೆ ಹಾಗೂ ಪಾರಂಪರಿಕ ನೇಮನಿಷ್ಠೆಯಲ್ಲಿಯ ಜಾಗೃತೆ ಮತ್ತು ಪೀಠದ ಪರಂಪರೆಯ ಬಗ್ಗೆ ಗೌರವ ಇವುಗಳನ್ನು ಕಂಡು ಮನಸೋತು ಎಷ್ಟೋ ಸಮಯ ಈಗಿನ ವ್ಯಾವಹಾರಿಕ ಪರಿಸರವನ್ನೇ ಮರೆತವನಾಗಿದ್ದೆ. ಪ್ರತಿ ಮನೆ-ಮನೆ ಪರಿಚಯವಿರುವ ಅವರು, ಅದೆಷ್ಟೋ ಮನೆಯ ವ್ಯಾವಹಾರಿಕ ಸಮಸ್ಯೆಯನ್ನು ಬಗೆಹರಿಸುವುದರ ಮುಖೇನ ಹಲವಾರು ಕುಟುಂಬಗಳ ಉದ್ಧಾರಕ್ಕೂ ಕಾರಣೀಭೂತರಾಗಿದ್ದಾರೆ.

ಸ್ವತಃ ಗ್ರಂಥ ರಚನಾಕಾರರಾಗಿದ್ದಲ್ಲದೆ ಸನಾತನ ಸಂಸ್ಕೃತಿಗೊಳಪಟ್ಟ ಸಂಸ್ಕೃತ ಪಾಠಶಾಲಾ, ಕಾಲೇಜುಗಳ ಸ್ಥಾಪಕರೂ, ವಿದ್ವಾಂಸರ, ಆಚಾರವಂತ ವೇದಾಧ್ಯಯನ ಸಂಪನ್ನರಲ್ಲಿ ಅಭಿಮಾನ ಉಳ್ಳವರೂ ಆಗಿದ್ದರು. ಆಡಳಿತದಲ್ಲಿದ್ದ ಹಲವು ಮಠಗಳ ಸ್ಥಿತಿಗತಿಗಳನ್ನು ಅವಲೋಕಿಸಿ ಜಮೀನು, ತೋಟಪಟ್ಟಿಗಳ ಕುರಿತು ಅಡಳಿತಾತ್ಮಕ ಅನುಭವ ಪಡೆದು ಸರಿಪಡಿಸಿ ಧರ್ಮಸಾಮ್ರಾಜ್ಯದ ನೇತಾರರಾಗಿರುವರು. ಸಮಾಜದ ಸಂಘಟನಾ ಚತುರರು, ಧರ್ಮಪ್ರಚಾರ ಕಾರ್ಯನಿರತ ಧರ್ಮಾಚಾರ್ಯರಾಗಿ, ದೇವಾಲಯಗಳ ಪುನರುಜ್ಜೀವನ ಅಷ್ಟಬಂಧ ಶಿಖರ-ಕಲಶಸ್ಥಾಪನೆ ಯಾಗ-ಹವನ, ದೇವರಾಜೋಪಚಾರ ಸೇವಾಸ್ವೀಕಾರ ಮುಂತಾದವುಗಳಿಂದಾಗಿ ಸಮಾಜದ ಗುರುಶ್ರೇಷ್ಠರಾಗಿದ್ದರು ಹಾಗೂ ಸೌಹಾರ್ದಭಾವ ಸಂವರ್ಧಕರಾಗಿದ್ದರು.

1945ರಲ್ಲಿ ಬ್ರಹ್ಮೀಭೂತ ಶ್ರೀಮದ್ರಾಮಚಂದ್ರಭಾರತೀ ಸ್ವಾಮಿಗಳ ಉತ್ತರಾಧಿಕಾರಿಗಳಾಗಿ ಪೀಠಾಧಿಕಾರಿಗಳಾಗಿ ಬಂದ ಬ್ರಹ್ಮೀಭೂತ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳು ಸುಮಾರು ಐದುದಶಕ ಪರಿಯಂತ ಈ ಅವಿಚ್ಛಿನ ಪರಂಪರಯ ಪೀಠಾಧಿಕಾರವನ್ನು ನಿರ್ವಹಿಸಿ ಪೀಠದ ಮಹಿಮೆಯನ್ನು ಸಮಾಜದ ಅಭಿವೃದ್ಧಿಯನ್ನು,ವೇದಸಂಸ್ಕೃತಿಯ ಪುನರುಜ್ಜೀವನಗೊಳಿಸಿ, ವೈಭವೀಕರಿಸಿ, ಬುದ್ಧಿಮತ್ತೆಯುಳ್ಳ ಈ ಸಮಾಜದಲ್ಲಿ ಧೀಶಕ್ತಿಯುಳ್ಳವರನ್ನು ಗುರುತಿಸಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಖಂಡರನ್ನಾಗಿಸಿ ಸಮಾಜದ ಸರ್ವರಿಗೂ, ದೇವತಾಸಂಭೂತ ಗುರುಪುಂಗವರಾಗಿ ಈ ಭೂಮಿಯನ್ನು ತ್ಯಜಿಸುವ ತನಕ ಸರ್ವಸಾಮ್ರಾಟರಾಗಿ, ಛಲದಂಕಮಲ್ಲರಾಗಿ,ಧರ್ಮಾಚಾರ್ಯ ಪೀಠದ ಅಧಿಕಾರವನ್ನು ಸಮೃದ್ಧಗೊಳಿಸಿ ಶ್ರೀರಾಮಚಂದ್ರಾಪುರ ಮಠದ ಮಹತಿಯನ್ನು ವಿಶ್ವಮಾನ್ಯಗೊಳಿಸಿ ಅವರಿಗೆ ಅವರೇ ಸಾಟಿ ಎಂಬಂತೆ ಐತಿಹಾಸಿಕವಾಗಿ ಬ್ರಹ್ಮೀಭೂತರಾದರು. ಈಗಲೂ ಸಹ ನಮ್ಮ ಕಣ್ಮುಂದೆ ನಿಂತಂತಿರುವ ಬ್ರಹ್ಮೀಭೂತ ಶ್ರೀಗಳ ಮಾರ್ಗದರ್ಶನ ಸರ್ವರಿಗೂ, ವಿಹಿತವೂ, ಸಕಾಲಕವೂ ಆದುದಾಗಿದೆ. ಅಂತಹ ಮಹಾಮಹಿಮರ ಆತ್ಮಾವಲೋಕನದ ನುಡಿಮುತ್ತುಗಳು ಸಮಾಜದ ಉದ್ದಾರಕ್ಕೂ ತನ್ಮೂಲಕ ಆತ್ಮೋದ್ಧಾರಕ್ಕೂ ಹೇತುವಾಗಿದೆ. ಇಂತಹ ತಪಃಶಕ್ತಿಯುಳ್ಳ ಗುರುಪುಂಗವರು ನಮ್ಮನ್ನಗಲಿ ಹೋದುದು ಸಮಾಜದ ದೌರ್ಭಾಗ್ಯ ಒಂದೆಡೆಯಾದರೆ, ಇನ್ನೊಂದೆಡೆ ಈ ಅವಿಚ್ಛಿನ್ನ ಪರಂಪರೆಗೆ ಅಮೃತಕಲಶದಂತಿರುವ ಕರಕಮಲಸಂಜಾತರನ್ನು ನಮಗೆಲ್ಲ  ಪೀಠಾಧಿಷ್ಠಿತ ಗುರುವರ್ಯರನ್ನಾಗಿ ಧಾರೆ ಎರೆದು ಹೋಗಿರುವುದು ಸಮಾಜದ ಸೌಭಾಗ್ಯ. ಗುರುಸಾರ್ವಭೌಮರಾಗಿ ಮೆರೆದ ಶ್ರೀಗಳು, ನಮ್ಮೆಲ್ಲರಿಂದ ಈ ಲೋಕದಿಂದ ಅಗಲಿದರು. ಸರ್ವರ ಮನೆಮನೆಗಳಲ್ಲಿ ಮನಮನಗಳಲ್ಲಿ ಅಮರವಾಗಿ ಬೆಳಗುತ್ತಲಿರುವರು. ಇಂತಹ ಮಹಿಮಾನ್ವಿತರನ್ನು ದರ್ಶನಮಾಡಿ ಒಂದು ದಶಕ ಪರಿಯಂತ ಸೇವಾ ಭಾಗ್ಯವನ್ನು ಹೊಂದಿದ ನಾನೇ ಧನ್ಯನು.

                      ಗುರುವರ್ಯ ಸುಸಂಪೂತ ಧರ್ಮಪೀಠ ವಿಭೂಷಣಂ|
                      ಗುರುರತ್ನಂ ರಾಘವೇಂದ್ರಭಾರತೀ ಸುವಿರಾಜತೇ ||

                     ತಸ್ಮೈ ಶ್ರೀ ಗುರವೇ ನಮಃ

 ~*~

Facebook Comments