ಬ್ರಹ್ಮೈಕ್ಯ ಪರಮಪೂಜ್ಯಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀ ಮಹಾಸ್ವಾಮಿಗಳವರ ಆರಾಧನಾ ಸಂಸ್ಮರಣ ಗ್ರಂಥ“ಶ್ರೀ ಗುರು ಭಾರತೀ”. ವಿದ್ವಾನ್ ಗಜಾನನ ಜೋಶೀ, ಗೋಕರ್ಣ ಇವರ ಪ್ರಧಾನ ಸಂಪಾದಕತ್ವದಲ್ಲಿ, ವಿದ್ವಾನ್ ಶ್ರೀ ಶೇಷಾಚಲ ಶರ್ಮಾ, ಎಂ.ಎ, ನಿವೃತ್ತ ಸಂಸ್ಕೃತ ಪ್ರಾಧ್ಯಾಪಕರು, ಬೆಂಗಳೂರು ಇವರ ಸಂಪಾದಕತ್ವದಲ್ಲಿ, ವಿದ್ವಾನ್ ರಾಮಕೃಷ್ಣ ಅಡ್ಕೋಳಿ, ಸಾಗರ ಇವರ ಕಾರ್ಯನಿರ್ವಾಹತ್ವದಲ್ಲಿ, ಶ್ರೀ ಭಗವತ್ಪಾದ ಶ್ರೀ ರಾಘವೇಂದ್ರ ಭಾರತೀ ಸನಾತನ ಧರ್ಮ ಪೋಷಿಣೀ(ರಿ) ಪ್ರತಿಷ್ಠಾನಂ, ವಿದ್ಯಾಮಂದಿರ, 2 ಎ, ಜೆ.ಪಿ ರಸ್ತೆ, 1ನೆಯ ಹಂತ, ಗಿರಿನಗರ, ಬೆಂಗಳೂರು- 560 085 ಇವರಿಂದಪ್ರಮಾಥೀ ಸಂ| ಮಾರ್ಗಶೀರ್ಷ 1999 ರಲ್ಲಿ ಪ್ರಕಾಶಿತಗೊಂಡು, ಗುರುಜ್ಯೋತಿಯ ದೀಪ್ತಿಯನ್ನು ಶಿಷ್ಯಕೋಟಿಗೆ ಪರಿಚಯಿಸಿದ ಗ್ರಂಥ.ಈ ಕೃತಿರತ್ನದಲ್ಲಿ ಪ್ರಕಾಶಗೊಂಡ ಲೇಖನಗಳಲ್ಲಿ ಶ್ರದ್ಧಾಸುಮ ಅಧ್ಯಾಯದಲ್ಲಿ ಪ್ರಕಟಗೊಂಡ ನಮ್ಮ ಸಮಾಜದ ಮಹಾನ್ ವಿದ್ವಾಂಸರ ವಿದ್ವತ್ಪೂರ್ಣ ಲೇಖನಗಳ ಗುಚ್ಛವನ್ನು ಹರೇರಾಮದ ಓದುಗರಿಗೆ ಕೊಡುತ್ತಿದ್ದೇವೆ.

ಹರೇರಾಮ

~

ಶ್ರದ್ಧಾಸುಮ 15:

ಬ್ರಹೈಕ್ಯಪೂಜ್ಯಗುರುವರ್ಯರು
ನಾನುದರ್ಶನ ಮಾಡಿದಂತೆ

ಯು.ಎಂ.ಸತ್ಯನಾರಾಯಣ

ಪೂಜನೀಯ ಜಗದ್ಗುರು ಶ್ರೀಶಂಕರ ಭಗವತ್ಪಾದರು ವೈದಿಕ ಧರ್ಮದ ಪುನರುತ್ಥಾನಕ್ಕೆ ಮಠಾನ್ವಯವನ್ನು ಸ್ಥಾಪಿಸಿ, ಆಚಾರ್ಯಶ್ರೇಷ್ಠರನ್ನು ನಿಯಮಿಸಿದರು.

ಶ್ರೀಶಂಕರರ ಪರಂಪರೆಯಿಂದ ಸ್ಥಾಪಿತಗೊಂಡು ಮಠಗಳಲ್ಲಿ ನಮ್ಮ ಸಮಾಜದ ಶ್ರೀರಘೂತ್ತಮಮಠವೂ ಒಂದಾಗಿದೆ. ಶ್ರೀಮಠದ ಆರಾಧ್ಯದೇವರು ಪ್ರಭು ಶ್ರೀರಾಮಚಂದ್ರನಾಗಿದ್ದರಿಂದ ಇದು ಶ್ರೀರಘೂತ್ತಮಮಠವಾಗಿ ಪ್ರತಿಬಿಂಬಿತವಾಗಿದೆ.

ಶ್ರೀಮಠದ ಅವಿಚ್ಛಿನ್ನ ಪರಂಪರೆಯ ೩೫ನೇ ಯತಿವರೇಣ್ಯರಾದ ಪರಮಪೂಜ್ಯ ಶ್ರೀಜಗದ್ಗುರು ಶಂಕರಾಚಾರ್ಯ ಶ್ರೀಮದ್ರಾಘವೇಂದ್ರಭಾರತೀಸ್ವಾಮಿಗಳವರು ಶ್ರೀಶಂಕರರ ಸೂಕ್ಷ್ಮತೆಯನ್ನು ಸಮರ್ಪಕವಾಗಿ ನಿರ್ವಹಿಸಿದ ಪರಮಹಂಸ ಅಚಾರ್ಯಶ್ರೇಷ್ಥರಾಗಿದ್ದರು.

ಬ್ರಹ್ಮೀಭೂತ ಪರಮಪೂಜ್ಯ ಶ್ರೀಗಳವರು ಸಕಲ ವಿದ್ಯಾಪಂಡಿತರಾಗಿದ್ದರು. ತರ್ಕ, ಮೀಮಾಂಸೆ, ವೇದಾಂತ, ನ್ಯಾಯಶಾಸ್ತ್ರ ಇನ್ನಿತರ ವಿಷಯಗಳು, ಜ್ಞಾನಭಂಡಾರವಾದ ಅವರ ಮಸ್ತಕದಲ್ಲಿ ನಿರಂತರ ನೆಲೆಸಿದ್ದವು.

ನಿರಂತರ ಪೂಜೆ ಅನುಷ್ಠಾನ ತಪಸ್ಸು ಅಧ್ಯಯನಗಳು ಅವರ ಅಂತಃಶಕ್ತಿಯನ್ನು ಹೆಚ್ಚಿಸಿದ್ದರಿಂದ ಭಗವಾನ್  ಶಂಕರರಂತೆ ಶೋಭಿಸುತ್ತಿದ್ದರು. ಶ್ರೀಗಳವರ ಬಗ್ಗೆ ಶಿಷ್ಯಸಮೂಹದಲ್ಲಿ ಗೌರವ ಭಯ ತನ್ನಿಂದ ತಾನೇ ಅಂಕುರವಾಯಿತು.

ಯೋಗಸಂನ್ಯಾಸ ಮತ್ತು ರಾಜಸಂನ್ಯಾಸ ಎಂಬ ಎರಡು ಪ್ರಮುಖ ಪ್ರಕಾರಗಳಿದ್ದು, ಅದರಲ್ಲಿ ನಮ್ಮ ಮಠದ ಪರಂಪರೆಯು ರಾಜಸನ್ಯಾಸದ್ದಾಗಿದೆ. ಆದ್ದರಿಂದ  ಆ ಪರಂಪರೆಗೆ ಅನುಗುಣವಾಗಿ ಧಾರ್ಮಿಕ, ಸಾಮಾಜಿಕ, ಆರ್ಥಿಕ, ವ್ಯಾವಹಾರಿಕ ಈ ಎಲ್ಲ ಅಂಶಗಳು ಆಡಳಿತದಲ್ಲಿ ಒಳಪಟ್ಟಿವೆ.

ಪರಮಪೂಜ್ಯ ಬ್ರಹ್ಮೀಭೂತ ಶ್ರೀ ಗಳವರು ಶ್ರೀಮಠದ ಅಭಿವೃದ್ಧಿ ಶಿಷ್ಯಸಮುದಾಯದ ಸಂಘಟನೆಯಲ್ಲಿ ಮಹತ್ತರ ಪಾತ್ರವಹಿಸಿದ್ದು ಸಮಾಜಕ್ಕೆ ಮಾರ್ಗದರ್ಶಕರಾಗಿದ್ದರು. ಅಸಂಘಟಿತವಾಗಿದ್ದ ನಮ್ಮ ಸಮಾಜವನ್ನು ಸಂಘಟಿಸಿ ೧೯೫೬ ರಲ್ಲಿ ಪ್ರಪ್ರಥಮ ಹವ್ಯಕ ಸಮಾವೇಶವನ್ನು ತೀರ್ಥಹಳ್ಳಿಯಲ್ಲಿ ನಡೆಸಿ ಸಮಾಜದಲ್ಲಿ ಜಾಗೃತಿಯನ್ನು ಉಂಟುಮಾಡಿದರು. ಶ್ರೀಗಳವರು ಹವ್ಯಕ ಸಮಾಜದಲ್ಲಿರುವ ಎಲ್ಲಾ ಪ್ರಾಂತಸೀಮೆಗಳಲ್ಲಿ  ಪ್ರವಾಸ ಮಾಡಿ ಧಾರ್ಮಿಕ ಜಾಗೃತಿಯನ್ನುಂಟು ಮಾಡಿದರು. ಅವರು ಶಿಷ್ಯ ಸಮುದಾಯದ ಆರ್ಥಿಕ ಅಂತಃಸತ್ವವನ್ನು ತಿಳಿದುಕೊಂಡಿದ್ದರು.

ಅತ್ಯಂತ ಜೀರ್ಣಸ್ಥಿತಿಯಲ್ಲಿದ್ದ ಎಲ್ಲಾ ಮಠಗಳನ್ನು ಪುನರುಜ್ಜೀವನಗೊಳಿಸಿ ಆರ್ಥಿಕ ನೆಲೆಗಟ್ಟನ್ನು ನಿರ್ಮಿಸಿದರು.  ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿದ್ದಲ್ಲದೆ ಅದನ್ನು ಯಶಸ್ವಿಯಾಗಿ ನಿರ್ವಹಿಸಿದ ಉದಾಹರಣೆ ಸಾಕಷ್ಟಿದೆ. ಪರಮಪೂಜ್ಯರಾದ ಶ್ರೀಗಳವರ ಸಾಧನೆಯನ್ನು ಅವಲೋಕಿಸಿದಾಗ ಸೂಕ್ತ ಸಂದರ್ಭಗಳಲ್ಲಿ ಕ್ಲಿಷ್ಟಕರವಾದ ಸಮಸ್ಯೆಗಳನ್ನು ವಿಮರ್ಶಿಸಿದ ಅವರು ತೆಗೆದುಕೊಂಡ ನಿರ್ಧಾರಗಳನ್ನು ಪುನಃಪರಿಶೀಲಿಸಿದ ದಾಖಲೆಗಳು ಇಲ್ಲ.

ಪರಮಹಂಸ ಶ್ರೀಗಳವರು ಸುಮಾರು ೫೩ ವರ್ಷಗಳ ಸತತ ಶ್ರಮ ಪ್ರಯತ್ನಗಳಿಂದ ಹಲವು ಸಾಧನೆಗಳನ್ನು ಮಾಡಿರುವುದೂ ಅಲ್ಲದೇ ಮಂಗಳೂರಿನಲ್ಲಿ ಹೊಸ ಮಠದ ನಿರ್ಮಾಣ, ಬೆಂಗಳೂರಿನಲ್ಲಿ ನಮ್ಮದೇ ಆದ ನೆಲೆಯನ್ನು ನಿರ್ಮಿಸಿ ಹವ್ಯಕಸಮಾಜವು ಉಳಿದ ಸಮಾಜದಂತೆ ಒಂದು ಸಮರ್ಥ ಸಮಾಜ ಎಂಬುದನ್ನು ತೋರಿಸಿಕೊಟ್ಟರು. ಶಿಷ್ಯ ಸಮುದಾಯದ ಜೊತೆಗೆ ೧೦೦ ಕ್ಕೆ ೧೦೦ ರಷ್ಟು ನೇರ ಸಂಪರ್ಕ ಹೊಂದಿದ್ದ ಶ್ರೀಗಳವರು ಅವರ ಆರ್ಥಿಕ ನೆಲೆಯನ್ನು ತಿಳಿದುಕೊಂಡಿದ್ದರಲ್ಲದೇ ಮಾರ್ಗದರ್ಶನ ಮಾಡಿದ ಉದಾಹರಣೆಗಳು ಸಾಕಷ್ಟಿವೆ.

ಶ್ರೀಮಠದ ವ್ಯವಹಾರಗಳು ಮುಷ್ಟಿಯ ಒಳಗಿರಬೇಕೆಂಬುದು ಶ್ರೀಗಳವರ ದೃಢನಿರ್ಧಾರವಾಗಿತ್ತು. ಈ ಅಂಶವನ್ನು ನಿರಂತರವಾಗಿ ಕಾದುಕೊಂದು ಬಂದಿದ್ದರು. ಶ್ರೀಗಳವರು ಆರ್ಥಿಕ ವ್ಯವಹಾರಗಳನ್ನು ನೇರವಾಗಿ ನಿರ್ವಹಿಸುತ್ತಿದ್ದರು ಅಲ್ಲದೆ ಎಲ್ಲೂ ಹಣ ನಷ್ಟ ಆಗದಂತೆ ಜಾಗ್ರತೆ ವಹಿಸುತ್ತಲಿದ್ದುದು ಶಿಷ್ಯಸಮುದಾಯಕ್ಕೆ ತಿಳಿದ ವಿಷಯವೇ ಆಗಿದೆ.

೫೪ ಚಾತುರ್ಮಾಸ್ಯಗಳನ್ನು ಮುಗಿಸಿ ಶ್ರೀಮಠವು ಅತ್ಯಂತ ಉಚ್ಛ್ರಾಯಸ್ಥಿತಿಗೆ ತಲುಪುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದವರು. ಪರಮಪೂಜ್ಯ ಶ್ರೀಗಳವರು ಸಹಸ್ರಾರು ವರ್ಷಗಳ ಐತಿಹಾಸಿಕ ಮಹತ್ವ ಹೊಂದಿರುವ ಶ್ರೀಮಠದ ಬಗ್ಗೆ ಶ್ರೀಶಂಕರರ ಪರಂಪರೆಯಿಂದ ಬಂದ ಶ್ರೀಪೀಠದಲ್ಲಿ ಮಹಾನ್ ಜ್ಞಾನಶಕ್ತಿಯಾಗಿ ತಪೋಮೂರ್ತಿಯಾಗಿ ಬೆಳಗಿದ ಶ್ರೀಗುರುವರೇಣ್ಯರ ಭೋಧನೆಯಂತೆ ಕಾರ್ಯತತ್ಪರರಾಗುವುದು ಶಿಷ್ಯಸಮುದಾಯದ ಕರ್ತವ್ಯವಾಗಿದೆ. ಈ ನಿರಂತರ ನಿಷ್ಠೆ ಸಮಾಜದ ಶ್ರೇಯೋಭಿವೃದ್ಧಿಗೆ ಕಾರಣವಾಗುತ್ತದೆ.

~*~

Facebook Comments