ಓ ಮನಸ್ಸೇ,

ನೀನ್ಯಾಕೆ ಗುಣಾತ್ಮಕವಾಗಿ ಯೋಚಿಸಲಾರೆ ? ಬೆಳಕಿದ್ದೂ ಕಾಣಲಾರೆನೆಂದಾದರೆ, ಅದು ಬೆಳಕಿನ ತಪ್ಪಲ್ಲ, ಕಾಣುವ ಕಣ್ಣಿನದು ತಾನೇ ?

ಮೇಲೆ ಹೇಳಿದೆ – “ಹರೇರಾಮ” ನಿಜ ಹೇಳು, ಕೆಲವು ವರ್ಷಗಳ ಹಿಂದಕ್ಕೆ ಪಯಣಿಸು, ಸಿಂಹಾವಲೋಕಿಸು. ಹೊಸತನ್ನು ಮಾಡುವ, ಪರರನ್ನು ಸಂಧಿಸುವ ಕ್ಷಣಗಳಲ್ಲಿ ಈ ಮಾತು ನೆನಪಾಗುತ್ತಿತ್ತೇ? “ನಿಜ” ಚೇತನ, ಪರಮಾತ್ಮನನ್ನೇ ನೀನು ಮರೆತಿದ್ದೆ. ಈಗ ಈ “ಮಂತ್ರ” ಎಲ್ಲಿಂದ ಕಲಿತೆ ಹೇಳು ?

“ಗೋವು” ಎಂದರೆ ಹಟ್ಟಿಯಲ್ಲಿ ಬಂಧಿಸಿ, ಗೊಬ್ಬರ ತಯಾರಿಸುವ ಯಂತ್ರವಾಗಿತ್ತು. ಹಾಲು ಹಿಂಡಲು, ಒಂದು ಉಪಕರಣವಾಗಿತ್ತು. ಅದೂ ಹೇಗೆಂದರೆ ಕೆಲವೊಮ್ಮೆ ಕೈಗಳಿಂದ, ಹಲವೊಮ್ಮೆ ಯಂತ್ರಮುಖೇನ. ಕರು, ತಾಯಿಯ ಸನಿಹ ಬಂದರೆ, ತನ್ನ ಪಾಲಿಗೆಲ್ಲಿ ಹಾಲು ಕೊರತೆಯಾಗುವುದೋ ಎಂಬ ಸ್ವಾರ್ಥದ ಪರಾಕಾಷ್ಠೆ; ಕರುವನ್ನೂ ಗೋವಿನ ಸನಿಹ ಸೇರಿಸಲು ನಿನಗೆ ಮುಜುಗರವಾಗುತ್ತಿತ್ತು. ಸೃಷ್ಟಿ ಸಹಜತೆಗೆ ನಿಷೇಧವೆಸಗುತ್ತಿದ್ದೆ. ಗಂಡು ಕರುವಾದರೋ, ಉಪಯೋಗ ಶೂನ್ಯವೆಂದು, ನಿನ್ನನ್ನು ಹೊತ್ತ ಮುಖ ಸಿಂಡರಿಸುತ್ತಿತ್ತು. ಇನ್ನೇನು ಹಾಲು ಕೊಡುತ್ತಿಲ್ಲ ಎಂದಾಕ್ಷಣ ಗೋವನ್ನು ಕಟುಕರಿಗೆ ನಿರ್ದಾಕ್ಷಿಣ್ಯವಾಗಿ ಕೊಡುತ್ತಿದ್ದೆ. ಸಿಕ್ಕಿದ ಚಿಲ್ಲರೆಯಿಂದ, ಸುಖವೆಂಬ ಕಾಮನಬಿಲ್ಲು, ನಿನ್ನ ಮುಖೇನ ಹಾದು ಹೋಗುತ್ತಿತ್ತು. ನೀನೇ ಸಾಕಿದ, ಅಲ್ಲಲ್ಲ, ನಿನ್ನನ್ನು ಸಾಕಿದ ನಿನ್ನ ಹಟ್ಟಿಯ ಗೋಮಾತೆಯನ್ನೇ ಉಳಿಸಿಕೊಳ್ಳಲು ತೋಚದ ನಿನಗೆ, ಗೋ ಸಾಮ್ರಾಜ್ಯದ ಕತೆ, ವ್ಯಥೆ ಅದು ಹೇಗೆ ಮನವರಿಕೆಯಾಗಬೇಕಿತ್ತು ? ಗೋವಿನಿಂದ ಹಾಲನ್ನಷ್ಟೇ ಬಯಸುತ್ತಿದ್ದ ನೀನು, ಇಂದು ಬದಲಾಗಿದ್ದೀಯ. ಗೋಮಾತೆಯೆಂದರೆ ಯಾವ ದೇವರಿಗೂ ಕಮ್ಮಿಯಿಲ್ಲ; ಹೆತ್ತ ತಾಯಿಗೂ. ಪರಶಿವನೇ ತನ್ನ ಸಾನ್ನಿಧ್ಯ ಕರುಣಿಸಿರಬೇಕಾದರೆ ಗೋವಿನ ಮಹತ್ತ್ವ, ಪಾವಿತ್ರ್ಯ ಏನಿರಬಹುದು ? ಎಷ್ಟಿರಬಹುದು ? ಚಿಂತಿಸುವ ಹಂತಕ್ಕೆ ಏರಿದ್ದೀಯಾ. ನಿನ್ನ ಹಿಂದಿನ ಒರಟುತನ ಮೆದುವಾಗಿ, ದೃಷ್ಟಿ ಬದಲಾಗಿದೆ. ಗೋವಿನ ಬಹುಮುಖ ಉಪಯುಕ್ತತೆ, ಅಲ್ಪ ಸ್ವಲ್ಪವಾದರೂ ತಿಳಿದಿದ್ದೀಯಾ ? ಗೋವಿನ ಕರುಣಾಜನಕ ಸ್ಥಿತಿ, ಅಳಿಸಿ ಹೋಗುತ್ತಿರುವ ದುರವಸ್ಥೆ, ಗೋವಂಶ ಅಳಿದರೆ, ಮನುವಂಶ ಅನುಸರಿಸುವುದೇ ವಿನಃ ಬೇರೇನೂ ಇಲ್ಲವೆಂಬ ಸತ್ಯವನ್ನು ಅರಿತಿರುವೆ ತಾನೇ ? ಗೋವಿನ ಉಳಿವಿಗಾಗಿ ಹೋರಾಡಬೇಕೆಂಬ ಕಿರುಸ್ಪಂದನವಾದರೂ ನಿನ್ನಲ್ಲಿ ಆಗುತ್ತಿದೆಯಲ್ಲ? ಹೇಗಾಯಿತು ? ಈ ಪರಿವರ್ತನೆಯ ಹಿಂದಿನ ಚೇತನವದಾವುದು ?

ಹೇಳಿಕೇಳಿ “ಸಂಘಟನೆ” ಎಂದರೆ ನಿಘಂಟಿನಲ್ಲಿ ಸೇರಿಕೊಂಡಿರುವ ಒಂದು ಶಬ್ದ ಮಾತ್ರವೆಂದು ತಿಳಿದಿದ್ದೆ. ಸಮಾಜದಲ್ಲಿ ಕಾಲೆಳೆಯುವುದರಲ್ಲಿ, ಪರರ ಉಚ್ಛ್ರಾಯ ಕಂಡು ಹಲುಬುವ, ಕನಿಷ್ಠತನ ಕಂಡು ಕೇಕೆಹಾಕುವುದರಲ್ಲೇ ಸವೆದು ಹೋಗುತ್ತಿದ್ದೆ. “ಸಂಘಟನೆ’ಯ ಪರಿಚಯ, ಶಿಸ್ತಿನ ಪಾಠ ನಿನಗರಿವಿಲ್ಲದೇ  ಆಗುತ್ತಿದೆಯಲ್ಲ, ಏನಿದರ ಹಿಂದಿನ ಶಕ್ತಿ ?
ಮಹಿಳೆಯರನ್ನೂ, ಮಾತೆಯರನ್ನೂ ಸಮಾಜದಲ್ಲಿ ಮನೆಗೆಲಸಕ್ಕಷ್ಟೇ ಸೀಮಿತವಾಗಿಡುತ್ತಿದ್ದ ಕಾಲವಿತ್ತಲ್ಲ. ಅವರನ್ನು ಹೇಗೆ ಸಂಘಟಿಸಬಹುದು, ತನ್ಮೂಲಕ ಸಮಾಜದಲ್ಲಿ ಹೇಗೆ ಬೆಳವಣಿಗೆಗೆ ಪೂರಕವಾದ ಬದಲಾವಣೆ ತರಬಹುದು ಎಂಬುದನ್ನು ಪರಿಚಯಿಸಿದವರ್ಯಾರು ?

ನೀನು ಓದಿದ್ದೀಯಾ, ಕೇಳಿದ್ದೀಯಾ “ಗುರು” ವೆಂದರೆ “ಮಾತೆ”ಯೆಂದು. ಪುಟಾಣಿಗಳಿಂದ ಹಿಡಿದು ವೃದ್ಧರವರೆಗೆ ಆಸರೆ ಬಯಸುವುದನ್ನು ನೀನು ಕಂಡಿಲ್ಲವೇ ? ಅವರು ಯಾರಿಗೆ ಬೇಡ ಹೇಳು. ಅವರ ಮಮತೆ, ಕ್ಷಮೆ, ತಾಳ್ಮೆ ನೀನು ಹೆತ್ತ ತಾಯಲ್ಲಿಯೂ ಕಂಡಿಲ್ಲ ತಾನೇ ? ಯೋಚಿಸು. ಇದು ಉತ್ಪ್ರೇಕ್ಷೆಯಲ್ಲ. ತಾಯಿಯಾದರೂ ತಪ್ಪೆಸಗಿದಾಗ ಬೈದಿರಬಹುದು, ಹೊಡೆದಿರಬಹುದು. ಆ ಮಹಾತ್ಮ ಬೈಯ್ಯುವುದು, ಸಿಟ್ಟಾಗುವುದು ಎಂದಾದರು ಕಂಡಿದ್ದೀಯಾ ? ಅದೆಷ್ಟು ಬಾರಿ ಗಮನಿಸಿದ್ದಿಯಾ, ಮಕ್ಕಳು “ಹರೇರಾಮ” ಎಂದು ಕೀಟಲೆಗೋಸ್ಕರವೇ ಹೇಳಿದರೂ, ಪ್ರಾಮಾಣಿಕ ಪ್ರತಿಧ್ವನಿಯನ್ನು ಕೇಳಲಿಲ್ಲವೇ ? ಅದಾವುದೇ ತುರ್ತು ಸಂದರ್ಭವಾದರೂ, ಅವರ ಅಕ್ಕರೆ ಮಕ್ಕಳಿಗೆ ಖಾತರಿ ತಾನೇ ? ಈ ತಾಯ್ತನಕ್ಕೆ, ಹಿರಿತನಕ್ಕೆ ತಲೆಬಾಗದಿರಲು ಹೇಗೆ ಸಾಧ್ಯ ? ಪುಟಾಣಿಗಳಿಗೆ ಫಲಪ್ರಸಾದ ಕರುಣಿಸುವಾಗ ಅವರು ಅನುಭವಿಸಿದ ಸಂತಸ, ಮಂದಹಾಸವೆಂಬ ಮಮತೆಯ ಮಳೆಯಿಂದ ನೀನೂ ತೋಯ್ದು ಹೋಗಿದ್ದೀಯಾ.

“ವಿಶ್ವಗೋಸಮ್ಮೇಳನ” “ರಾಮಾಯಣ ಮಹಾಸತ್ರ” ಗಳೆಂಬ ಅದ್ಭುತ ಘಟನೆಗಳಲ್ಲಿಯೂ ಜನ “ಸಾಗರ”ವೇ ಆಗಿದ್ದರೂ, ಮಂತ್ರಾಕ್ಷತೆ ಇತ್ತೇ ಈಯುವೆನೆಂಬ ದೃಢತೆಯನ್ನು, ಕಾರ್ಯತತ್ಪರತೆಯನ್ನು ನೊಡಿಲ್ಲವೇ ? ಯಾರೂ ಮಂತ್ರಾಕ್ಷತೆಯಿಂದ ವಂಚಿತರಾಗಬಾರದೆಂಬ ಕಳಕಳಿಯಲ್ಲವೇ ಇದು. ಮಂತ್ರಾಕ್ಷತೆ ದೊರೆಯದಿದ್ದರೆ, ಅದಕ್ಕೆ ಪಡೆವವನೇ ಕಾರಣ ಹೊರತು, ಕರುಣಿಸುವ ಕರಗಳಲ್ಲ. ಹಿಂದೊಮ್ಮೆ ನಮ್ಮಲ್ಲೇ ಒಬ್ಬರು, ಮಂತ್ರಾಕ್ಷತೆಗೆಂದು ಸಾಲಿನಲ್ಲಿದ್ದರೂ, ಸ್ವಲ್ಪವೇ ಹೊತ್ತಿನಲ್ಲಿ ತಾಳ್ಮೆ ಬರಿದಾಗಿ, ಕಾಯುವ “ರಗಳೆ” ಬೇಡವೆಂದು – “ತುಂಬ ಜನ ಇದ್ದವು. ಇನ್ನೊಂದ್ಸರ್ತಿ ತಕ್ಕೊಂಬೊ, ಆನು ಹೋವ್ತೆ”  ಎಂದು ಹೇಳಿ ಕಾಲ್ಕಿತ್ತಿರುವುದು ನೆನಪಿದೆ ತಾನೇ ? ಅದಕ್ಕೆ ನೀನೆ ಪ್ರತಿಕ್ರಯಿಸಿದ್ದೆ  – “ನಿಮಗೆ ಮಂತ್ರಾಕ್ಷತೆ ಪಡೆಯುವ ತಾಳ್ಮೆಯ ಕೊರತೆ ಇರಬಹುದು, ಆದರೆ ಅವರಿಗೆ ಕೊಡುವ ತಾಳ್ಮೆ ಎಂದೂ ಬರಿದಾಗುವುದಿಲ್ಲ್ಲ” ಎಂದು. ಇರಲಿ, ಈಗ ಹೇಳು, ಇಷ್ಟೆಲ್ಲ ಇದ್ದೂ ಯಾಕೆ ಪ್ರಶ್ನಿಸುತ್ತಲೇ ಇರುವೆ ? ನೀರಿಗಿಳಿಯದೇ ಈಜಲರಿಯೇ. ಆಂಗ್ಲಭಾಷೆಯಲ್ಲಿ ಹೇಳುವಂತೆ “Fence Sitters” ಆಗಿ ಜೀವನ ಪೂರ್ತಿ ಇರಬೇಡ. ಕಗ್ಗದ ಕವಿಯ ನೇರ ನುಡಿ ನೆನಪಿಸಿಕೋ –

ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ
ನಂಬಿಯೂ ನಂಬದಿರುವಿಬ್ಬಂದಿ ನೀನು |
ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು
ಸಿಂಬಳದಿ ನೊಣ ನೀನು – ಮಂಕುತಿಮ್ಮ ||

ದೇವರೆಂದರೆ ಸಂಶಯದಿಂದಲೇ ಪ್ರತಿಕ್ರಿಯಿಸುತ್ತಿದ್ದೆ. ನಾಸ್ತಿಕತೆಯ ಆಸುಪಾಸಿನಲ್ಲೇ ವ್ಯವಹರಿಸುತ್ತಿದ್ದ ನಿನಗೆ ಆಸ್ತಿಕತೆ, ಅಂದರೆ “ನಿಜ”ದ ಪರಿಚಯವನ್ನು ನಿನಗರಿವಿಲ್ಲದೆ ಮಾಡಿಸುತ್ತಿದ್ದಾರಲ್ಲ ಹೇಗಂತಿಯಾ ? ಮಕ್ಕಳಿಂದ ಹಿಡಿದು ವೃದ್ಧರಾದಿಯಾಗಿ ಎಲ್ಲರೂ ಕಣ್ಣು, ಬಾಯಿಯನ್ನು ಅಕ್ಷರಶಃ ಬಿಟ್ಟು, ಸೂಜಿ ಬಿದ್ದರೂ ಕೇಳಿಸುವಷ್ಟು ನಿಶ್ಶಬ್ದತೆ ತಾನಾಗಿಯೇ ವ್ಯಾಪಿಸುವಂತೆ, ಪರಿಸರವನ್ನೇ ಬದಲಾಯಿಸುವ ಮಾಯಾವಿಯಂತೆ, ಪ್ರವಚನ ಮಾಲಿಕೆಗಳ ಮೂಲಕ, ತೊಡಗದವರನ್ನೂ ಓಲೈಸಿ, ಕರೆದೊಯ್ದು ಮಾಡಿಸುವ ರುದ್ರಪಾರಾಯಣಗಳು, ರಾಮತಾರಕ ಜಪಗಳು, ಹವನಗಳು, ರಾಮಾಯಣ ಪಾರಾಯಣಗಳು ಯಾಕಿವೆಲ್ಲ ? “ಗುರು” ತನ್ನೊಂದಿಗೆ ತನ್ನವರನ್ನೂ ಮೋಕ್ಷಗಾಮಿಯಾಗಿಸಬೇಕೆಂದು ಅದೆಲ್ಲೋ ಓದಿಯೋ ಕೇಳಿಯೋ ತಿಳಿದಿದ್ದೀಯಲ್ಲ ಇವೆಲ್ಲವಕ್ಕೂ ಬೇರೇನೂ ಅರ್ಥ ನನಗಂತೂ ಹೊಳೆಯುವುದಿಲ್ಲ. ಇದೆಲ್ಲ ನಿನಗಾಗಿ, ಹೆತ್ತಮ್ಮ ಕೈಯಾಸರೆಯಿತ್ತು ಮಗುವನ್ನು ಗುರಿ ಸೇರಿಸುವಂತೆ.

ಕಷ್ಟ ಕಾರ್ಪಣ್ಯಗಳು, ಸಮಸ್ಯೆಗಳದೆಷ್ಟೋ ಎದುರಾದರೂ, ಗಂಭೀರವಾಗಿ, ಮೆಟ್ಟಿ ನಿಲ್ಲುವ, ಎದುರಿಸುವ ಸ್ಥೈರ್ಯ, ಧೈರ್ಯವನ್ನು ನೋಡಿ ಕಲಿ. ಇದು ನಿನಗೊಂದು ಪಾಠ ತಿಳಿ. ಸಾಕ್ಷಾತ್ ಶ್ರೀರಾಮನನ್ನು ಏಕದೃಷ್ಟಿಯಿಂದ ನೋಡಿ ವಿಮರ್ಶಿಸಿದವರಿದ್ದರು. ಆ ವಂಶಸ್ಥರು ಈಗಲೂ ಅಲ್ಲೊಮ್ಮೆ ಇಲ್ಲೊಮ್ಮೆ ಧ್ವನಿ ಎತ್ತುವುದನ್ನು ನೊಡಿದ್ದೀಯಾ. ಶ್ರೀಶಂಕರರಿಗೂ ಎಡರು ತೊಡರುಗಳು ಸಾಕಷ್ಟಿದ್ದವು. ಇವನ್ನೆಲ್ಲವನ್ನು ದಾಟಿಯೇ ಆ ಮಹಾಪುರುಷ “ಆಚಾರ್ಯ”ರಾದರು; ಅಮರರಾದರು. ಇಂದೂ ಅಷ್ಟೆ ಆಗೀಗ ಹೊರ ಹೊಮ್ಮುವ ವಿಮರ್ಶೆಗಳು, ಆರೋಪಗಳು ಬಂಗಾರಕ್ಕೆ ಮೆರುಗೀಯುವ ಪ್ರಕ್ರಿಯೆಗಳೆಂಬ ಸತ್ಯವನ್ನು ತಿಳಿ. ನಂಬು, ಕೇವಲ ವಿಶ್ವಾಸವಿಡು.

ರಾಮನಿರ್ದಂದು ರಾವಣನೊಬ್ಬನಿರ್ದನಲ
ಭೀಮನಿರ್ದಂದು ದುಶ್ಶಾಸನನದೋರ್ವನ್ |
ಈ ಮಹಿಯೊಳನ್ಯಾಯಕಾರಿಯಿಲ್ಲದುದೆಂದು ?
ರಾಮಭಟನಾಗು ನೀಂ – ಮಂಕುತಿಮ್ಮ ||

ಕೆಲಸವಾವುದಾದರೂ ಸರಿ, ಅದಕ್ಕೊಂದು ಕ್ರಮ, ಮಾಡುವ ಶ್ರದ್ಧೆ ಇರಬೇಕು ಎಂಬುದನ್ನು ನೋಡಿ ಕಲಿಯಬೇಕು. ಅವರ ನಡೆಯೇ ಈ “ಅಧ್ಯಾಯ”ಕ್ಕೊಂದು ಪಾಠ. ಎಷ್ಟೇ ಸಾಧಾರಣ ಕೆಲಸ ಇರಬಹುದು, ಹಾಗೆಂದು ಕ್ರಮ, ಶ್ರದ್ಧೆ ಎಂದೂ ಗೌಣವಾಗುವುದಿಲ್ಲ ಅದು ಅಸಾಮಾನ್ಯವೇ. ಸಣ್ಣ ಪುಟ್ಟ ವಿಚಾರಗಳನ್ನೇ ಗಮನಿಸು. ಶಿಷ್ಯಭಕ್ತರಾಗಲೀ, ಭೇಟಿಯಾಗುವ ಪ್ರಮುಖ ವ್ಯಕ್ತಿಗಳಾಗಲೀ, ಅವರಿಗೆ ಯೋಗ್ಯವಾದ ಸನ್ಮಾನ, ಶಾಲು ಹೊದೆಸುವುದರಿಂದ ಹಿಡಿದು, ಮಾತಾಡಲು ಉಪಕ್ರಮಿಸುವಾಗ ಮೈಕ್ ಸರಿ ಮಾಡಿ ಹೊಂದಿಸಿಕೊಳ್ಳುವುದು, ಪ್ರತಿಯೊಂದು ಅಷ್ಟೆ. ಎಲ್ಲವೂ ಹೇಗಿರಬೇಕೋ ಹಾಗೆಯೇ ಇರಬೇಕೆಂಬ ಶಿಸ್ತು. “ಏ ಸಾಕು ಬಿಡು” ಎಂಬ ತಾತ್ಸಾರ ಎಲ್ಲೂ ಕಾಣುವುದಿಲ್ಲ ಹೀಗೆ ಹೆಜ್ಜೆ ಹೆಜ್ಜೆಗೂ ನಮಗವರು “ಗುರು”.

ಶಿಷ್ಯರಾರೇ ಇರಲಿ, ನಮಗೆ ಅದು ಬೇಕು ಇದು ಕೊಡಿ ಎಂದು ಕೇಳಿಕೊಂಡಾಗ, ಉದಾಹರಣೆಗೆ : ಹುಟ್ಟಿದ ಮಗುವಿಗೋ, ಇನ್ನೇತಕ್ಕೋ ಒಂದು ‘ಹೆಸರು’ ಸೂಚಿಸಿ ಎಂದು ಪ್ರಾರ್ಥಿಸಿದಾಗ ನಿಮಿಷದಲ್ಲೇ ಪೂರೈಸಬಹುದು. ಅವರ ಶಬ್ಧಭಂಡಾರದಲ್ಲೇನೂ ಕೊರತೆಯಿಲ್ಲ.  ಅದು ಒರತೆಯೇ,  ಆದರೆ ಕೊಡುವ ಹೆಸರೂ ಸೂಕ್ತವಿರಬೇಕೆಂಬ ಕಾಳಜಿ, ದಿನವೆಲ್ಲ ಯೋಚಿಸಿ, ನಾಲ್ಕಾರು ಹೆಸರುಗಳನ್ನು “ಕ್ರೋಢೀಕರಣ” ಮಾಡಿ ಅದರಲ್ಲಿ ಅತ್ಯಂತ ಯೋಗ್ಯವೆನಿಸುವ ಹೆಸರನ್ನು “ಸನ್ಮತಿ”ಯಿಂದ ಪ್ರಸಾದ ರೂಪವಾಗಿ ಕರುಣಿಸುತ್ತಾರೆ. ಪಡೆದವರಲ್ಲಿ ನೀನು (ನಾನು) ಒಬ್ಬ, ನೆನಪಿಸಿಕೊ…..

ಮಕ್ಕಳೇಕೆ, ಹಿರಿಯರೂ (ವಯಸ್ಸಿನಿಂದ) ಪ್ರಾತಃಕಾಲ ಎದ್ದೇಳುವರು, ಅದೂ ನಗರಗಳಲ್ಲಿ ಬಹಳ ಕಷ್ಟವೆನಿಸಿಕೊಂಡ ವಿಚಾರ. ಮಕ್ಕಳನ್ನು  ಎಬ್ಬಿಸಿ, ತಯಾರುಮಾಡಿ, ಶಾಲೆಗೆ ಕಳುಹಿಸಬೇಕೆಂದರೆ ಪ್ರತಿಯೊಬ್ಬ ತಾಯಿ ಎಷ್ಟು ಗೋಗರೆಯಬೇಕು. ಏನೇನು ಮಾಡಬೇಕು. ಎಂಬುದು ತಿಳಿದೇ ಇರುವ ವಿಚಾರ. ಸಾಮ, ದಾನ, ಭೇದ ಕೊನೆಗೆ ದಂಡ ಪ್ರಯೋಗವಾಗಬೇಕಾದ ಸಂದರ್ಭಗಳೂ ಇಲ್ಲದಿಲ್ಲ. ಶಾಲೆಗೆ ಹೋಗುವುದು ವಿದ್ಯಾರ್ಜನೆಗೆ ಜ್ಞಾನಾರ್ಜನೆಗೆ ತಾನೇ? ನಾವೆಲ್ಲ ಆ “ತಾಯಿ”ಗೆ ಮಕ್ಕಳು. ನಮ್ಮನ್ನು ನಿದ್ದೆಯಿಂದೆಬ್ಬಿಸಿ “ಜ್ಞಾನ” ಧಾರೆಯೆರೆಯಲು ಆ ತಾಯಿ ಏನೆಲ್ಲ ಮಾಡುತ್ತಿಲ್ಲ! ಇಷ್ಟಾಗಿಯೂ “ನಿದ್ದೆ”ಯಿಂದಾಚೆ ಬರಲು, ಎದ್ದೇಳಲು, “ಗುರಿ”/ “ಗುರು”ವೆಡೆಗೆ ಸಾಗಲು ನಮಗೆ ನೂರೆಂಟು ಸಮಸ್ಯೆಗಳು.

“ಏಳು, ಎದ್ದೇಳು – – – – – “ ಎಂಬ ವಿವೇಕಾನಂದರ ಕರೆಯನ್ನೊಮ್ಮೆ  ನೆನಪಿಸಿಕೋ,

ಇನ್ನೇನು ಹೇಳಲಿ. ಸದ್ಯ ತೋಚಿದ್ದಿಷ್ಟು. ನಾನೆಷ್ಟೇ ಹೇಳಿದರೂ ಅದು ಚಂದ್ರನನ್ನು ಅಂಗೈಯಲ್ಲಿ ಹಿಡಿವ ಮೂರ್ಖತನವಾದೀತು. ಪ್ರಭೆಯೇ ತಾನಾಗಿರುವ ಸೂರ್ಯನಿಗೆ ದೀವಟಿಗೆ ಏಕೆ ? ನೀನಿರುವ ದಿನ ನೀನಿರುವ ಕಾಲ ಪುಣ್ಯಕಾಲ. ನೀನು ಭಾಗ್ಯಶಾಲಿ, ಅದಕ್ಕೆ ಪಡೆದೆ ಪುಣ್ಯಾತ್ಮನಾದ ಶ್ರೀಗುರುವನು

ತರಣಿ ದರ್ಶನಕ್ಕಿಂತ ಕಿರಣಾನುಭವ ಸುಲಭ
ಪರಮ ಶಾಸ್ತ್ರಕ್ಕಿಂತ ಸರಿಯುದಾಹರಣೆ |
ಪರಮತತ್ತ್ವವ ಕಂಡ ಗುರುವನರಸುವುದೆಲ್ಲಿ ?
ದೊರೆತಂದು ನೀಂ ಧನ್ಯ – ಮಂಕುತಿಮ್ಮ ||

ಅದೇ ಇದು. ಆ ದಿನವೇ ಈ ದಿನ. ನೀನೇ ಆ ಧನ್ಯ.

ಆ ಗುರುವಿಗಿದೋ ಈ ಕುಸುಮದ ಅರ್ಚನೆ.

ಪರಿಚಯ:

ಶ್ರೀಮತಿ ಸತ್ಯಭಾಮಾ ಮತ್ತು ಶ್ರೀ ಕೆ. ಜಿ. ವಂಕಟ್ರಮಣ ಭಟ್ಟ ಕೋರಿಕ್ಕಾರು ಇವರ ಪ್ರಥಮ ಪುತ್ರರಾಗಿ ೧೯೬೭ರಲ್ಲಿ ಜನಿಸಿದ ಶ್ರೀಯುತರು ಪ್ರಾಥಮಿಕ

ವಿದ್ಯಾಭ್ಯಾಸವನ್ನು ಪಳ್ಳತ್ತಡ್ಕ ಅನುದಾನಿತ ಶಾಲೆಯಲ್ಲಿ ಪೂರೈಸಿ, ಪ್ರೌಢ ಶಿಕ್ಷಣವನ್ನು ಪೆರ್ಲದ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಪಡೆದರು.

ಪುತ್ತೂರಿನ ವಿವೇಕಾನಂದ ವಿದ್ಯಾಲಯದಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಪಡೆದ ಇವರು  ಮಂಗಳೂರಿನಲ್ಲಿರುವ

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿಯನ್ನು ಪಡೆದಿರುತ್ತಾರೆ.

೧೯೯೦ರಿಂದ ನ್ಯಾಯವಾದಿಯಾಗಿ ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು ಇಲ್ಲಿ ವೃತ್ತಿ ನಿರತರಾಗಿರುತ್ತಾರೆ.

೧೯೯೯ರಲ್ಲಿ ಈಶ್ವರಮಂಗಲ ಸೀಮೆಯ ಸಾಮೆತ್ತಡ್ಕದ ಜ್ಯೋತಿ ಇವರನ್ನು ವಿವಾಹವಾಗಿ ಗೃಹಸ್ಥಾಶ್ರಮವನ್ನು ಪ್ರವೇಶಿಸಿದ ಶ್ರೀಯುತರು

ಶ್ರೀಮಠದ ವಿವಿಧ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರಾಗಿ ದುಡಿಯುತ್ತಿದ್ದು, ಪ್ರಸ್ತುತ ಬೆಂಗಳೂರು ಮಂಡಲದ

ವಿಜಯನಗರ ವಲಯ ಕೋಶಾಧ್ಯಕ್ಷರಾಗಿ ಶ್ರೀಗುರುಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೂ ಕುಟುಂಬಕ್ಕೂ ಶ್ರೀಗುರುದೇವತಾನುಗ್ರಹ ಸದಾ ಇರಲೆಂದು ಹಾರೈಕೆ


Facebook Comments