ಗುರುಗಳಿಗೆ ಸಾಷ್ಟಾಂಗ ನಮಸ್ಕಾರಗಳು, ಅವಕಾಶಕ್ಕಾಗಿ ವಂದಿಸುವೆ..

ಹೀಗೊಂದು ಘಟನೆ..
ವೇಗದೂತ ರೈಲೊಂದು ಅತ್ಯಂತ ವೇಗದಲ್ಲಿ  ಸಾಗುತ್ತಿತ್ತು.  ವೇಗದೂತ ರೈಲು ಆದ್ದರಿಂದ ಮದ್ಯದಲ್ಲಿ ಒಂದು ನಿಲ್ದಾಣಕ್ಕೆ ನಿಲುಗಡೆ ಇರಲಿಲ್ಲ. ನಿಲುಗಡೆ ಇಲ್ಲದ ನಿಲ್ದಾಣ ಸಮೀಪಿಸುತ್ತಿದ್ದಂತೆ ಚಾಲಕನಿಗೆ ಆ ನಿಲ್ದಾಣದಲ್ಲಿ ಅದೇ ಕಂಬಿಗಳ ಮೇಲೆಯೇ ಇನ್ನೊಂದು ರೈಲು ನಿಂತಿರುವುದು ಕಾಣಿಸಿತು! ಮುಂದೆ ಆಗುವ ಅನಾಹುತ ಒಂದು ಬಾರಿ ಅವನ ಮನಸ್ಸಿಗೆ ಬಂತು. ನಡೆಯಬಹುದಾದ ಭೀಕರ ದುರಂತ ಅವನ ಕಣ್ಣಿಗೆ ಕಟ್ಟಿತು. ಆದರೆ ದುರಂತವನ್ನಂತೂ ತಪ್ಪಿಸಲು ಸಾಧ್ಯವಿಲ್ಲವೆಂಬದು ಅವನಿಗೆ ತಿಳಿದಿತ್ತು. ಅಷ್ಟು ಕಡಿಮೆ ಸಮಯದಲ್ಲಿ ರೈಲನ್ನು ನಿಲ್ಲಿಸುವುದಂತೂ ಸಾಧ್ಯವೇ ಇರಲಿಲ್ಲ. ಹಾಗಾದರೆ ಏನು ಮಾಡುವುದು? ತಕ್ಷಣಕ್ಕೆ ತನ್ನ ಸಹಾಯಕ್ಕಾಗಿ ಇದ್ದ ವ್ಯಕ್ತಿಯನ್ನು ಕರೆದ. ರೈಲಿನಿಂದ ಈ ಕೂಡಲೇ ಹೊರಕ್ಕೆ ಹಾರಲು ಆದೇಶಿಸಿದ. ಅವನು ಹಿಂದುಮುಂದು ನೋಡತೊಡಗಿದೊಡನೆ ಅವನೇ ಸಹಾಯಕನನ್ನು ಹಿಡಿದು ರೈಲಿನಿಂದ ಹೊರಗೆ ತಳ್ಳಿದ. ಸ್ವತಃ ತಾನು ತನ್ನ ಸಂಪೂರ್ಣ ಶಕ್ತಿಯಿಂದ ಬ್ರೇಕ್ ಎಳೆದು ನಿಂತ, ರೈಲಿನ ವೇಗವನ್ನು ಆದಷ್ಟು ಕಡಿಮೆ ಮಾಡುವ ಸಲುವಾಗಿ. ಈ ಎಲ್ಲ ಕೆಲಸವನ್ನು ಅತ್ಯಂತ ತ್ವರಿತಗತಿಯಲ್ಲಿ ಮಾಡಿ ಅವನು ಒಂದೇ ಮನಸ್ಸಿನಿಂದ ಬ್ರೇಕ್‌ನ್ನು ಬಿಗಿಗೊಳಿಸುತ್ತ ನಿಂತ. ಕ್ಷಣ ಕ್ಷಣಕ್ಕೂ ತನ್ನ ಸಾವು ಸಮೀಪಿಸುತ್ತಿರುವುದು ಅವನಿಗೆ ಚೆನ್ನಾಗಿ ಗೊತ್ತಾಗುತ್ತಿತ್ತು. ಆದರೂ ಅವನ ಶರೀರ ಮನಸ್ಸು  ಸ್ವಲ್ಪವೂ ಅಲುಗಲಿಲ್ಲ . ಬಂತು, ಆ ಭಯಾನಕ ಕ್ಷಣವೂ ಬಂತು. ಅತ್ಯಂತ ಅಪಾಯಕಾರಿಯಾದ ಘರ್ಷಣೆಯೊಂದಿಗೆ ಎರಡೂ ರೈಲುಗಳು ನುಚ್ಚುನೂರಾದವು. ಸಾವಿರಾರು ಮನುಷ್ಯ ಶರೀರಗಳು ಲೆಕ್ಕವಿಲ್ಲದಷ್ಟು ತುಂಡು ತುಂಡಾಗಿ ದೂರದೂರಕ್ಕೆ ಸಿಡಿದು ಬಿದ್ದವು.
– ಆ ಕ್ಷಣದಲ್ಲಿ ರೈಲು ಚಾಲಕನ ಮನಸ್ಥಿತಿ ಹೇಗಿದ್ದಿರಬಹುದು ಎಂದು ನಮಗೆ ಊಹಿಸಲು ಸಾಧ್ಯವಿಲ್ಲ. ಆದರೆ ಅವನ ದೇಹದ ಸ್ಥಿತಿ ಮಾತ್ರ ಚಾಲಕನ ಕೋಣೆಯನ್ನು ಪರೀಕ್ಷಿಸಿದಾಗ ಗೋಚರವಾಯಿತು.  ಅವನ ದೇಹದ ಭಾಗಗಳೆಲ್ಲ  ಬೀಕರವಾಗಿ ಜಜ್ಜಿಹೋಗಿವೆ. ಕೈಗಳು ಮುರಿದು ಮುದ್ದೆಯಾಗಿವೆ. ಆದರೆ ಅಲ್ಲಿ ಮನಮುಟ್ಟುವ ದೃಶ್ಯವೊಂದು ಕಂಡಿತು. ಚಾಲಕನ ಬೆರಳುಗಳು ಮಾತ್ರ ಬ್ರೇಕ್‌ನ್ನು ಗಟ್ಟಿಯಾಗಿ ಹಿಡಿದ ಸ್ಥಿತಿಯಲ್ಲೇ, ಕರ್ತವ್ಯ ನಿರತವಾಗಿ ಇನ್ನು ಕಾರ್ಯಮಾಡುತ್ತಲೇ ಇದ್ದವು!
ಈ ಎಲ್ಲ ನಿರ್ಧಾರಗಳನ್ನು  ತನಗೆ ಬದುಕಲು ಉಳಿದಿದ್ದ ಕೆಲವೇ ಕ್ಷಣಗಳಲ್ಲಿ ಅವನು ತೆಗೆದುಕೊಂಡಿದ್ದ . ಮೊದಲು ತನ್ನ ಸಹಾಯಕನನ್ನು ಉಳಿಸಿದ. ಸ್ವತಃ ತಾನು ಮೃತ್ಯುವನ್ನು ಸ್ವಾಗತಿಸಲು ನಿಂತ. ಒಂದು ವೇಳೆ ಅವನು ಮನಸ್ಸು ಮಾಡಿದ್ದರೆ ತನ್ನ ಪ್ರಾಣವನ್ನು ಉಳಿಸಕೊಳ್ಳಬಹುದಾಗಿತ್ತು. ಆದರೆ ಅಂತಹ ವಿಚಾರ ಅವನಲ್ಲಿ ಸ್ವಲ್ಪವೂ ಸುಳಿಯಲಿಲ್ಲ. ಅವನ ಕರ್ತವ್ಯದ ಅರಿವಿದ್ದುಕೊಂಡು ತನ್ನನ್ನೇ ನಂಬಿ ಪ್ರಯಾಣಿಸುತ್ತಿರುವ ನೂರಾರು ಪ್ರಯಾಣಿಕರ ಪ್ರಾಣವನ್ನು ಉಳಿಸಬೇಕು. ಆ ಕಾರಣದಿಂದ ತನ್ನ ಪ್ರಾಣ ಬಲಿಕೊಟ್ಟರೂ ಚಿಂತೆ ಇಲ್ಲ . ಇದೆಲ್ಲವೂ ಅವನು ಅತ್ಯಂತ ಕಡಿಮೆ ಸಮಯದಲ್ಲಿ  ಮಿಂಚಿನ ವೇಗದಲ್ಲಿ  ಸ್ವಾಭಾವಿಕವಾಗಿ ತೆಗೆದುಕೊಂಡ ನಿರ್ಣಯ.
ಈ ಜಗತ್ತು ಬದುಕಿರುವುದು ಇಂತಹ ಸಾವಿರಾರು ಮಂದಿಯ ಬಲಿದಾನದಿಂದ.  ಮೇಲೆ ಉಲ್ಲೇಖಿಸಿದ ಚಾಲಕನಂತೆ ಸಾರ್ಥಕವಾಗಿ ಸಾಯಲು ಗೊತ್ತಿದ್ದವನೇ ಸಾರ್ಥಕವಾಗಿ ಬದುಕಲೂ ಬಲ್ಲ. ಅದೇ ರೀತಿ ಸಾರ್ಥಕವಾಗಿ ಬದುಕಲು , ಪ್ರಸಂಗ ಬಿದ್ದಾಗ ಜೀವಕೊಡಲು, ಆ ವ್ಯಕ್ತಿಗೆ, ‘ತನ್ನ ಬದುಕು ಸಾವುಗಳಿಗಿಂತ  ಹೆಚ್ಚಿನ ಮೌಲ್ಯವುಳ್ಳ ಸಂಗತಿಯೊಂದಿದೆ, ಅದಕ್ಕಾಗಿ ಈ ಜೀವನ’ ಎಂಬ ಒಂದು ಮಾತು ಗೊತ್ತಿರಬೇಕು. ನಮ್ಮೆಲ್ಲರ ಮನಸ್ಸು ಆ ರೀತಿಯ ಧ್ಯೇಯಕ್ಕೆ ಸಮರ್ಪಿತವಾದಾಗ ಮನುಷ್ಯ ಬದುಕಿರುವಾಗಲೂ ಸಂತೋಷದಿಂದ ಇರುತ್ತಾನೆ. ಕೊನೆಗಾಲದಲ್ಲೂ  ಸಂತೋಷದಿಂದ ಸಾವನ್ನು ಎದುರಿಸುತ್ತಾನೆ.

ಈ ಜೀವನ ಎಂಬುದು ಒಂದು ಆಟವಿದ್ದಂತೆ ಅವನಿಗೆ. ಈ ಆಟದಲ್ಲಿ ಉತ್ಸಾಹವಿದೆ, ಆನಂದವಿದೆ, ಗೆಲ್ಲುವ ಛಲವಿದೆ. ಆದರೆ ಆಟದಲ್ಲಿ ಸೋತಾಗ ದುಃಖವಿಲ್ಲ, ಕೋಪವಿಲ್ಲ, ತಾಪವಿಲ್ಲ. ಅಂತಹ ಮಾನಸಿಕತೆಯ ಆಟಗಾರರು ನಾವಾಗಬೇಕು. ಒಂದು ವೇಳೆ ಆಟದ ಆವೇಶದಲ್ಲಿ ಸಿಟ್ಟು , ದ್ವೇಷಗಳು ಎದುರಾದರೂ ಮರುಕ್ಷಣವೇ ಅವುಗಳು ಮಾಯವಾಗಬೇಕು. ಆ ರೀತಿಯ ಜೀವನ ಇನ್ನೊಬ್ಬರಿಗೆ ಮಾದರಿಯಾಗುತ್ತದೆ. ನಮ್ಮ ಹಿರಿಯರು ನಡೆದು ತೋರಿಸಿದ ದಾರಿಯೂ ಇದೇ ಅಲ್ಲವೇ? ಈ ಜೀವನವೆಂಬ ಆಟದ ಮೈದಾನಕ್ಕೆ ಇಳಿದ ಮೇಲೆ ಅತ್ಯಂತ ಸೊಗಸಾಗಿ, ಚಂದದಲ್ಲಿ , ಖುಷಿಯಲ್ಲಿ ಯಾಕೆ ಆಟವಾಡಬಾರದು? ಅವುಗಳನ್ನೇ ನಮ್ಮ ಬದುಕಲ್ಲಿ ಅಳವಡಿಸಿಕೊಂಡು ಉಳಿದವರಿಗೂ ಹಂಚಬಾರದೇಕೆ?  ಒಂದು ವೇಳೆ ನಾವು ಬದುಕೆಂಬ ಆಟದ ಹಿಂದಿರುವ ಭಾವವನ್ನು ಮರೆತರೆ ಬೇಡವಾದ ಗುಣಗಳೆಲ್ಲವೂ ನಮ್ಮ ಮೇಲೆ ಸವಾರಿ ಮಾಡುತ್ತವೆ.  ಆಗ ನಮ್ಮ ಮನಸ್ಸು ಕೂಡಾ ಹುಳಿ ಹಿಂಡಿದ ಹಾಲಿನಂತಾಗುತ್ತದೆ. ಇತರರಿಗೂ ಅದನ್ನೇ ಹಂಚುತ್ತೇವೆ.
ಬದುಕಲ್ಲಿ ನಮ್ಮ ಹತ್ತಿರದ ಅಥವಾ ಪ್ರೀತಿಯ ಜನರ ಸಾವನ್ನು ಕಂಡಾಗ ಅವರೊಂದಿಗೆ ನಾವು ಕೋಪದಿಂದ ವರ್ತಿಸಿದ ಸಂದರ್ಭಗಳು ನೆನಪಿಸಿಕೊಳ್ಳುತ್ತೇವೆ, ಅಯ್ಯೋ ಅನ್ಯಾಯವಾಗಿ ಅವರನ್ನು ನೋಯಿಸಿದೆನಲ್ಲಾ ಎಂದು ದುಃಖಪಡುತ್ತೇವೆ. ಅದಕ್ಕಾಗಿ ಪ್ರಾಯಶ್ಚಿತ ಮಾಡಿಕೊಳ್ಳುವ ಅವಕಾಶವೂ ಇನ್ನಿಲ್ಲವಲ್ಲಾ ಎಂದು ಚಡಪಡಿಸುತ್ತೇವೆ. ಸಾವಿನ ಎದುರು ನಾವು ಪ್ರಾಮಾಣಿಕರಾಗಿ ಬಿಡುತ್ತೇವೆ.

ಒಂದಲ್ಲ ಒಂದು ದಿನ ನಾವೆಲ್ಲರೂ ಹೋಗುವವರೇ ಎಂಬುದು ನಮಗೆ ಅರಿವಾಗಿದ್ದರೆ, ಆ ರೀತಿಯ ವಿಚಾರ ನಮ್ಮ ಮನಸ್ಸಿಗೆ ಬಂದಿದ್ದರೆ, ಆ ವರ್ತನೆಗಳು ಇರುತ್ತಿರಲಿಲ್ಲ. ಆಗ ನಮ್ಮ ಹತ್ತಿರದವರಿಗೆ ಅಥವಾ ನಮಗೇ ಸಾವು   ಬಂದರೂ ನಮ್ಮ ಮನಸ್ಸು ಮಾತ್ರ  ಸಮಾಧಾನವಾಗಿ ಇರುತ್ತಿತ್ತು. ಆ ರೀತಿಯ ಬದುಕೇ ನಿಜವಾದ ಬದುಕು. ನಾಲ್ಕು ಜನರಿಗೆ ಹಿತವಾಗಿ, ಸಂತೋಷದಿಂದ ಸಾರ್ಥಕ ಜೀವನ ನಡೆಸಬೇಕು. ಈ ವಿಚಾರಗಳೇ ಮನಸ್ಸಿಗೆ ಸಮಾಧಾನ ಕೊಡಬಲ್ಲದು. ಅಂತಹ ಜನರಿಗೆ ಬದುಕೂ ಆನಂದಮಯ, ಸಾವೂ ಆನಂದಮಯ.
ಆದ್ದರಿಂದಲೇ ನಾವು ಆ ದಿಕ್ಕಿನ ಕಡೆಗೆ ಸಾಗಿದಾಗ ನಮ್ಮ ಬದುಕು ಸಾರ್ಥಕವಾಗುತ್ತದೆ. ಕರ್ತವ್ಯದ ಕರೆಗೆ ಓಗೊಟ್ಟು ಹೊರಟು ಹೋದ ಪೂರ್ವಜರ  ಬದುಕು ಮತ್ತು ಸಾವುಗಳ ಒಟ್ಟು ಸಾರವೇ ಇದು.
ಕರ್ತವ್ಯ, ಮೌಲ್ಯಗಳಿಗೆ ಸಾರ್ಥಕವಾಗಿ ಸಾಯಲು ಗೊತ್ತಿದ್ದವನೇ, ಸಾರ್ಥಕವಾಗಿ ಬದುಕಲೂ ಬಲ್ಲ.

ಶ್ರೀಗುರುಗಳ ಮಾರ್ಗರ್ಶನದಂತೆ ನಾವೂ ಸುಶಿಕ್ಷಿತ ಸಮಾಜದ ಚಾಲಕರಾಗೋಣ. ಸಂಸ್ಕೃತಿ ಉಳಿಸಿ ಧೀರರಾಗಿ ಜನ್ಮಪಾವನಗೊಳಿಸೋಣ.

ಹರೇ ರಾಮ್.

ಸುನಿಲ್ ಕುಲಕರ್ಣಿ,
ಮಂಗಳೂರು
98805 43783

ಪರಿಚಯ:
ಶ್ರೀಯುತ ಸುನಿಲ್ ಕುಲಕರ್ಣಿ ಅವರು ಮಂಗಳೂರಿನ ಅಕ್ಷರೋದ್ಯಮಿ. ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ತಮ್ಮನ್ನು ಬಾಲ್ಯದಿಂದಲೇ ಸಕ್ರಿಯವಾಗಿ ತೊಡಗಿಸಿಕೊಂಡು, ಸುಂದರ ಸಮಾಜ ನಿರ್ಮಾಣದ ಕನಸನ್ನು ಹೊತ್ತುಕೊಂಡಿದ್ದಾರೆ. ಶ್ರೀಮಠದ ಸಮಾಜಮುಖಿ ಯೋಜನೆಗಳಿಂದ ಉತ್ತೇಜಿತರಾಗಿ ತಮ್ಮನ್ನು ತನುಮನಗಳಿಂದ ಸಮರ್ಪಿಸಿಕೊಂಡು ಶ್ರೀಮಠಕ್ಕೆ ಅಪ್ತರಾಗಿದ್ದಾರೆ. ಕಂಪ್ಯೂಟರ್ ಕ್ಷೇತ್ರದಲ್ಲಿ ಡಿಸೈನಿಂಗನ್ನು ತನ್ನ ಹವ್ಯಾಸವಾಗಿರಿಸಿದ ಶ್ರೀಯುತರು ಶ್ರೀಮಠದ ಧರ್ಮಭಾರತೀ ಮಾಸಪತ್ರಿಕೆಯ ಡಿಸೈನರ್ ಆಗಿದ್ದರು. ಶ್ರೀ ಕುಲಕರ್ಣಿಯವರ ಕುಟುಂಬಕ್ಕೆ ಶ್ರೀರಾಮಾನುಗ್ರಹ ನಿರಂತರವಾಗಿರಲಿ ಎಂಬುದೇ ನಮ್ಮ ಹಾರಯಿಕೆ.

Facebook Comments