ಗುರು ಅಷ್ಟಕಮ್: (ಗುರ್ವಷ್ಟಕಮ್)
(ಗುರುಭಕ್ತಿ ಸ್ತೋತ್ರಮ್)

ಹರೇರಾಮ.
ಶ್ರೀ ಗುರು ಅಷ್ಟಕಮ್  ಶ್ರೀ ಆದಿಶಂಕರಾಚಾರ್ಯರಿಂದ ರಚಿತವಾದ ಅಮೂಲ್ಯ ಕೃತಿ.
ಸರಳ ಶಬ್ಧಗಳನ್ನು  ಪ್ರಯೋಗಿಸಿ ಒಬ್ಬ ಗುರುವಿನ ಮಹತ್ವ ನಮ್ಮ ಜೀವನದಲ್ಲಿ ಎಷ್ಟಿದೆ ಎಂಬುದನ್ನು ವಿವರವಾಗಿ ತಿಳಿಸಿದ್ದಾರೆ. ಮನುಷ್ಯನಾಗಿ ಹುಟ್ಟಿ ನಾವು ಜೀವನಲ್ಲಿ ಯಾವುದೇ ರೀತಿಯಲ್ಲಿ ಸಾಧನೆ ಮಾಡಿ, ಮಹಾ ಮೇರುವಿನಷ್ಟು ಸಂಪತ್ತು ಗಳಿಸಿ, ಮನೆತನ, ಪತ್ನಿ, ಮಕ್ಕಳು, ಮೊಮ್ಮಕ್ಕಳು ಇತ್ಯಾದಿಗಳನ್ನು  ಪಡದರೂ, ವೇದ ಶಾಸ್ತ್ರಗಳನ್ನು ಓದಿ ಕವಿತ್ವವನ್ನು ಗಳಿಸಿ ಹಲವಾರು ಕೃತಿಗಳನ್ನು ರಚನೆ ಮಾಡಿದರೂ, ವಿದೇಶಲ್ಲಿ ಮಾನ್ಯತೆ ಗಳಿಸಿ, ಸ್ವದೇಶಲ್ಲಿ ಸಂಪತ್ತು ಗಳಿಸಿದ್ದರೂ, ರಾಜ ಮಹಾರಾಜರುಗಳು ಕಾಲಿಗೆ ಬೀಳುವಷ್ಟರ ಮಟ್ಟಿನ ವಿದ್ವತ್ತಿದ್ದರೂ, ಯಶಸ್ಸು ದಿಕ್ಕುಗಳಲ್ಲಿ ವ್ಯಾಪಿಸಿದ್ದರೂ, ಯಾವುದೇ ವಿಚಾರಲ್ಲಿ ಅಗ್ರಗಣ್ಯ ಆಗಿದ್ದರೂ ಕೂಡ ಒಬ್ಬ ಗುರುವಿನ ಪಾದಪದ್ಮಕ್ಕೆ ಶರಣು ಬಾರದಿದ್ದರೆ ಈ ಸೌಭಾಗ್ಯಗಳು ಯಾಕಾಗಿರುವವು ಎಂದು ಆಚಾರ್ಯರು ಕೇಳುತ್ತಾರೆ.

ಗುರುವಿನ ಆಳ, ವಿಸ್ತಾರವನ್ನು ನಮ್ಮೆದುರು ಬಿಡಿಸಿಡುವ ಈ ಸ್ತೋತ್ರದ ಪೂರ್ತಿ ವಿವರಣೆಯನ್ನು ವಿದ್ವಾನ್ ಜಗದೀಶ ಶರ್ಮಾರವರು ಬಹಳ ಸುಂದರವಾಗಿ ವಿವರಿಸಿಕೊಟ್ಟಿದ್ದಾರೆ. ಅವರಿಗೆ ನಮ್ಮ ಕೃತಜ್ಞತೆಗಳು.

ಈ ಸ್ತೋತ್ರ ಪಠಣದಿಂದ ಎಲ್ಲರ ಬಾಳಿನಲ್ಲಿ ಸದಾ ಗುರುಅನುಗ್ರಹರಕ್ಷೆ ಇರಲಿ..
ಹರೇರಾಮ.

~

Play here:
Guru Ashtakam (Guru Bhakti Stotram) : Adi Shankaracharya

Download: https://soundcloud.com/hareraama/guru-ashtakam/download

 ಗುರು ಅಷ್ಟಕಮ್:

ಶರೀರಂ ಸುರೂಪಂ ತಥಾ ವಾ ಕಲತ್ರಂ
ಯಶಶ್ಚಾರುಚಿತ್ರಂ ಧನಂ ಮೇರುತುಲ್ಯಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||1॥

ತಾನು ಸುರೂಪಿ; ತನ್ನ ಪತ್ನಿಯೂ ಸುಂದರಿ.
ಒಳ್ಳೆಯ ಯಶಸ್ಸೂ ಎಲ್ಲಕಡೆ ಹರಡಿದೆ;
ಸಂಪತ್ತು ಮೇರು ಪರ್ವತದಷ್ಟಿದೆ.
ಆದರೆ…!
ಮನಸ್ಸು ಗುರುಪದಕಮಲದಲ್ಲಿ ಶರಣಾಗದಿದ್ದರೆ ಏನು ಫಲ…? ಏನು ಫಲ…? ಏನು ಫಲ…?

ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ
ಗೃಹಂ ಬಾಂಧವಾಃ ಸರ್ವಮೇತದ್ಧಿಜಾತಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||2||

ಪತ್ನಿ ಸಿಕ್ಕಳು, ಸಂಪತ್ತು ದೊರೆಯಿತು,
ಮಕ್ಕಳು ಆದರು, ಮೊಮ್ಮಕ್ಕಳೂ ಆದರು,
ಮನೆ ಕಟ್ಟಿಯಾಯಿತು, ಬಾಂಧವರೂ ಇರುವರು…
ಆದರೆ…!
ಗುರುಪದಕಮಲದಲ್ಲಿ ಮನಸ್ಸು ಶರಣಾಗದಿದ್ದರೆ ಏನು ಫಲ…? ಏನು ಫಲ…? ಏನು ಫಲ…?

ಷಡಂಗಾದಿ ವೇದೋ ಮುಖೇ ಶಾಸ್ತ್ರವಿದ್ಯಾ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||3||

ವೇದ, ವೇದಾಂಗ, ಶಾಸ್ತ್ರ, ವಿದ್ಯೆಗಳೆಲ್ಲವೂ ಮುಖದಲ್ಲಿಯೇ ಇವೆ.
ಒಳ್ಳೆಯ ಪದ್ಯ, ಗದ್ಯಗಳನ್ನು ರಚಿಸುವ ಕವಿತ್ವವಿದೆ.
ಆದರೆ..!
ಗುರುಪಾದದಲ್ಲಿ ಮನಸ್ಸು ಶರಣಾಗದಿದ್ದರೆ ಏನು ಫಲ…? ಏನು ಫಲ…? ಏನು ಫಲ…?

ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ
ಸದಾಚಾರವೃತ್ತೇಷು ಮತ್ತೋ ನ ಚಾನ್ಯಃ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||4||

ವಿದೇಶಗಳಲ್ಲಿ ಗೌರವಸಂಪನ್ನ; ಸ್ವದೇಶದಲ್ಲಿ ನಿಶ್ಚಿಂತ;
ಆಚರಣೆಯ ಪಾಲನೆಯಲ್ಲಿ ಸಮಾನರಾದ ಮತ್ತೊಬ್ಬನಿಲ್ಲ.
ಇದ್ದರೇನು…!
ಮನಸ್ಸು ಗುರುಪಾದದಲ್ಲಿ ಶರಣಾಗದಿದ್ದರೆ ಏನು ಫಲ…? ಏನು ಫಲ…? ಏನು ಫಲ…?

ಕ್ಷಮಾಮಂಡಲೇ ಭೂಪಭೂಪಾಲವೃಂದೈಃ
ಸದಾಸೇವಿತಂ ಯಸ್ಯ ಪಾದಾರವಿಂದಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||5||

ಭೂಮಂಡಲದಲ್ಲಿ ಎಲ್ಲ ರಾಜನಿಂದ, ರಾಜಸಮೂಹದಿಂದ ಸೇವೆ ಮಾಡಿಸಿಕೊಳ್ಳಲ್ಪಡುವವ.
ಆದರೇನು…?
ಮನಸ್ಸು ಗುರುಪಾದದಲ್ಲಿ ಶರಣಾಗದಿದ್ದರೆ ಏನು ಫಲ…? ಏನು ಫಲ…? ಏನು ಫಲ…?

ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್
ಜಗದ್ವಸ್ತುಸರ್ವಂ ಕರೇ ಯತ್ಪ್ರಸಾದಾತ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||6||

ದಾನದಿಂದ ದಶ ದಿಕ್ಕುಗಳಲ್ಲಿಯೂ ಕೀರ್ತಿ ಹಬ್ಬಿದೆ.
ಜಗತ್ತಿನ ಎಲ್ಲ ವಸ್ತುಗಳೂ ತನ್ನ ಕೈಯಲ್ಲೇ ಇದೆ.
ಇದ್ದರೆ…?
ಗುರುಪಾದದಲ್ಲಿ ಮನಸ್ಸು ಶರಣಾಗದಿದ್ದರೆ ಏನು ಫಲ…? ಏನು ಫಲ…? ಏನು ಫಲ…?

ನ ಯೋಗೋ ನ ಭೋಗೋ ನ ವಾ ವಾಜಿರಾಜೌ
ನ ಕಾಂತಾಮುಖೇ ನೈವ ವಿತ್ತೇಷು ಚಿತ್ತಮ್ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||7||

ಯೋಗದಲ್ಲಿ ಮನಸ್ಸಿಲ್ಲ; ಭೋಗದಲ್ಲೂ ಮನಸ್ಸಿಲ್ಲ;
ಅಶ್ಚದ ಮೇಲೆ ಮನಸ್ಸಿಲ್ಲ; ರಾಜನಾಗುವ ಮನಸ್ಸಿಲ್ಲ;
ಪತ್ನಿಯ ಸಹವಾಸಕ್ಕೂ ಮನಸ್ಸಿಲ್ಲ; ಸಂಪತ್ತಿನಲ್ಲಂತೂ ಮನಸ್ಸಿಲ್ಲವೇ ಇಲ್ಲ.
ಇಲ್ಲವಾದರೇನು?
ಗುರುವಿನ ಚರಣಕ್ಕೆ ಮನಸ್ಸು ಶರಣಾಗದಿದ್ದರೆ ಏನು ಫಲ…? ಏನು ಫಲ…? ಏನು ಫಲ…?

ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ
ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ |
ಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ
ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ ||8||

ಅರಣ್ಯದಲ್ಲಿ ಮನಸ್ಸಿಲ್ಲ; ಮನೆಯಲ್ಲಿ ಮನಸ್ಸಿಲ್ಲ;
ಕಾರ್ಯದಲ್ಲಿ ಮನಸ್ಸಿಲ್ಲ; ದೇಹದ ಮೇಲೆ ಮನಸ್ಸಿಲ್ಲ.
ಸಂಪತ್ತಿನ ಮೇಲೂ ಮನಸ್ಸಿಲ್ಲ.
ಹಾಗಿದ್ದರೂ..?
ಗುರುಚರಣಕ್ಕೆ ಮನಸ್ಸು ಶರಣಾಗದಿದ್ದರೆ ಏನು ಫಲ…? ಏನು ಫಲ…? ಏನು ಫಲ…?

ಫಲಶ್ರುತಿ:
ಗುರೋರಷ್ಟಕಂ ಯಃ ಪಠೇತ್ಪುಣ್ಯದೇಹೀ
ಯತಿರ್ಭೂಪತಿರ್ಬ್ರಹ್ಮಚಾರೀ ಚ ಗೇಹೀ |
ಲಭೇದ್ವಾಂಚಿತಾರ್ಥಂ ಪದಂ ಬ್ರಹ್ಮಸಜ್ಞಂ
ಗುರೋರುಕ್ತವಾಕ್ಯೇ ಮನೋ ಯಸ್ಯ ಲಗ್ನಮ್ ||

ಗುರುವಿನ ಅಷ್ಟಕವನ್ನು ಪುಣ್ಯದೇಹಿಯಾದ, ಗುರುವಿನ ಮಾತಿನಲ್ಲಿ ಮನವಿಟ್ಟ ಯಾವ ಯತಿ; ಭೂಪತಿ; ಬ್ರಹ್ಮಚಾರೀ; ಗೃಹಸ್ಥರುಗಳು ಪಠಿಸುತ್ತಾರೋ ಅವರು ಇಷ್ಟಪಟ್ಟ ಬ್ರಹ್ಮಪದವನ್ನು ಪಡೆಯುತ್ತಾರೆ.

~*~*~

Facebook Comments