|| ಹರೇರಾಮ ||

ಏನನ್ನು ಪಡೆಯಬೇಕಾದರೂ ಮತ್ತೇನಾದರೂ ತ್ಯಾಗ ಮಾಡಲೇ ಬೇಕು..!

ನಿಸರ್ಗ ನಿಯಮವಿದು..

ಆದರೆ ಯಾವುದನ್ನು ತೆತ್ತು ಯಾವುದನ್ನು ಪಡೆದುಕೊಳ್ಳಬೇಕು ಎನ್ನುವಕುರಿತು ಸರಿಯಾದ ವಿವೇಚನೆ ಇರಬೇಕು..!

ಕಿರಿದಾದುದನ್ನು ತೆತ್ತು ಹಿರಿದಾದುದನ್ನು ಪಡೆದುಕೊಳ್ಳಬೇಕು ಬದುಕನ್ನು ಸಂಪನ್ನಗೊಳಿಸುವ ಜಾಣ್ಮೆಯಿದು..

ಇದೇನಾದರೂ ಹಿಂದು – ಮುಂದಾದರೆ ಬರಡಾಗುವುದು ಬದುಕು..!

ಬದುಕಿನ ಮೂಲಸೂತ್ರವಿದು..

ದಟ್ಟದರಿದ್ರನೊಬ್ಬ ಕಠಿಣ ತಪಸ್ಸನ್ನು ಕೈಗೊಳ್ಳುತ್ತಾನೆ..

ಕನಿಕರಿಸಿದ ಶಿವ ಕಣ್ಮುಂದೆ ಪ್ರಕಟನಾಗಿ ಬೇಕಾದ ವರವನ್ನು ಕೇಳೆಂದು ನುಡಿಯುತ್ತಾನೆ..

ಆಗ ಆ ಬಡವ ಕೇಳಿದ ವರವೇನು ಗೊತ್ತೇ..?'ಆನೆ'

” ಆನೆ ಕೊಡು ”

ದೇವರೂ ದಂಗಾದ ಸಂದರ್ಭವದು..!

” ಹೊಟ್ಟೆಗೇ ಹಿಟ್ಟಿಲ್ಲದ ದಟ್ಟದರಿದ್ರ ನೀನು..!

ಆನೆಯನ್ನು ತೆಗೆದುಕೊಂಡು ಮಾಡುವುದಾದರೂ ಏನು..!?”

ಹಣದಿಂದ ಬಡವನಾದರೂ ಆತ ವಿವೇಕದಿಂದ ಅದೆಷ್ಟು ಶ್ರೀಮಂತನಾಗಿದ್ದನೆಂಬುದನ್ನು ಅವನಿತ್ತ ಉತ್ತರವೇ ಸಾರಿಹೇಳಿತು..

“ಪ್ರಭೂ..!

ನಾನು ಕೇಳಿದ್ದು ಆನೆಯೆಂಬ ಪ್ರಾಣಿಯನ್ನಲ್ಲ..!

‘ಆ’ ಎಂದರೆ ‘ಆರೋಗ್ಯ’..

‘ನೆ’ ಎಂದರೆ ‘ನೆಮ್ಮದಿ’..!!

ನಾನು ವರವಾಗಿ ಕೇಳಿದ್ದು ಶರೀರಕ್ಕೊಂದು ಆರೋಗ್ಯ ಮನಸ್ಸಿಗೊಂದು ನೆಮ್ಮದಿ ಮಾತ್ರ..!

ಇವೆರಡಿದ್ದರೆ ಇನ್ನೇನಿಲ್ಲದಿದ್ದರೂ ಚಿಂತೆಯಿಲ್ಲ..!

ಇವೆರಡಿಲ್ಲದಿದ್ದರೆ ಮತ್ತೇನಿದ್ದರೂ ಪ್ರಯೋಜನವಿಲ್ಲ..!!

ಅನುಗ್ರಹಿಸು ಪ್ರಭೂ..!!”

ಹತ್ತಲ್ಲ – ಹಲವಲ್ಲ, ಅನೆಕವಲ್ಲ – ಅನಂತವಲ್ಲ…!

ನಮ್ಮ ಬದುಕಿಗೆ ಕೇವಲ ಎರಡೇ ಎರಡು ಅಂಗಗಳು..!!

ತನುವೆಂಬ ಬಹಿರಂಗವೊಂದು, ಮನವೆಂಬ ಅಂತರಂಗವಿನ್ನೊಂದು..!!

ಆರೋಗ್ಯವೆಂದರೆ ತನು ಸುಖ..!

ನೆಮ್ಮದಿಯೆಂದರೆ ಮನಃಸುಖ..!

ಸುಖವಲ್ಲವೇ ಜೀವನ ಲಕ್ಷ್ಯ..!?

ಸುಖಕ್ಕಾಗಿಯಲ್ಲವೇ ಸಕಲಜೀವಿಗಳೂ ಪರಿಶ್ರಮಿಸುತ್ತಿರುವುದು – ಪರಿತಪಿಸುತ್ತಿರುವುದು..

ಅದನ್ನೇ ಕಳೆದುಕೊಂಡು ಮತ್ತೇನು  ಗಳಿಸಿದರೇನು ಫಲ..!!??

ಇಂದಿನ ನಮ್ಮ ಜೀವನ ಶೈಲಿಯಲ್ಲಿರುವ ಪ್ರಧಾನ ದೋಷವಿದು….!

ಹಿಂದಿನಕಾಲದಲ್ಲಿ ಆಡು – ಕುರಿಗಳನ್ನು ಬಲಿಕೊಡುತ್ತಿದ್ದುದನ್ನು ನಾವು ಕೇಳಿದ್ದೇವೆ..

ಇಂದಿನ ಕಾಲದ ಪ್ರಗತಿಯೆಂದರೆ ನಾವು ಆನೆಯನ್ನು(ಆನೆ = ಆರೋಗ್ಯ ನೆಮ್ಮದಿ) ಬಲಿ ಕೊಡಲು ಪಾರಂಭಿಸಿದ್ದೇವೆ.

ತನುವಿಗಿಂತ ಹಣ ಮುಖ್ಯವಾದರೆ ಹಾಳಾಗುವುದು ಆರೋಗ್ಯ..!

ಮನಃಸಾಕ್ಷಿಗಿಂತ ಹಣ ಮುಖ್ಯವಾದಾಗ ಹಾಳಾಯಿತು ನೆಮ್ಮದಿ..!!

ಹಣ – ಹೆಸರುಗಳ ಹಿಂದೆ ಹುಚ್ಚುಹಿಡಿದಂತೆ  ಓಡುತ್ತಿದೆ ಆಧುನಿಕ ಸಮಾಜ..

ಇವುಗಳನ್ನು ಗಳಿಸುವ ಭರದಲ್ಲಿ ಆರೋಗ್ಯ,ನೆಮ್ಮದಿಗಳನ್ನು ಬಲಿ ಕೊಡುತ್ತಿದೆ..

ಹಣ – ಹೆಸರುಗಳು ಬದುಕಿನಲ್ಲಿ ಬಂದು ಹೋಗುವ ಸಂಗತಿಗಳು..

ಆರೋಗ್ಯ – ನೆಮ್ಮದಿಗಳಾದರೋ ದೇವರು ನಮ್ಮನ್ನು ಹುಟ್ಟಿಸುವಾಗಲೇ ಬುತ್ತಿಯಹಾಗೆ ಜೊತೆಗಿತ್ತು ಕಳುಹಿಸಿದ ದಿವ್ಯ ವರಗಳು…!

ಸಾಮಾನ್ಯರೂ ಅನುಭವಿಸಬಹುದಾದ ನಮ್ಮೊಳಗೇ ಸಿಗುವ ಈಶ್ವರನ ರೂಪಗಳು..!!

ಪರಮಾನಂದವು ಪರಮಜ್ಞಾನಿಗಳಿಗೇ ಸರಿ..

ಪಾಮರರ ಪಾಡೇನು..!!??

ಆಗಸದ ಮೋಡ ಕರಗಿ ನೀರಾಗಿ ಇಳಿದು..ಹರಿದು ಹರಿದು ಬಡವನ ಮನೆಯ ಬಾವಿ ತುಂಬಿಸುವಂತೆ..

ಪಾಮರರ ಮೇಲಿನ ಕರುಣೆಯಿಂದಲ್ಲವೇ ಭಗವಂತ ಆರೋಗ್ಯ – ನೆಮ್ಮದಿಗಳ ರೂಪವನ್ನು ತಾಳಿ ಕೆಳಗಿಳಿದು ಬಂದು ,

ಹುಡುಕಾಡುವ – ತಡಕಾಡುವ ಅಗತ್ಯವೇ ಇಲ್ಲದಂತೆ…   ಹತ್ತಿರ-ಹತ್ತಿರ ಬಂದು ನಮ್ಮ ತನು – ಮನಗಳನ್ನೇ ಆಶ್ರಯಿಸಿದ್ದು..

ಅವುಗಳನ್ನೇ ಕಳೆದುಕೊಂಡಮೇಲೆ ಮತ್ತೇನಿದ್ದೇನು ಫಲ..!?

ಹಿರಿದನ್ನು ಪಡೆಯಲು ಕಿರಿದನ್ನು ತ್ಯಾಗ ಮಾಡಬೇಕೆಂಬುದು ಬದುಕಿನ ಸೂತ್ರವಾದರೆ..

ಆ ಸೂತ್ರ ಜೀವನಕ್ಕಿಳಿಯಲು ಹಿರಿದಾವುದು ಕಿರಿದಾವುದು ಎನ್ನುವುದರ ಪರಿಜ್ಞಾನವಿರಬೇಕು..

ಪರಮಾಣುವಿನಿಂದ ಪರಮಾಕಾಶದವರೆಗೆ ಹರಡಿರುವ ವಿಜ್ಞಾನಕ್ಕೆ ಈ ಜ್ಞಾನ ಬರುವುದೆಂದು..?

ಭೂಮಿಯಿಂದ ಲಕ್ಷಾಂತರ ಮೈಲು ದೂರದಲ್ಲಿರುವ ಆಕಾಶಕಾಯಗಳ ಬಗೆಗೆ ಅಧ್ಯಯನ ನಡೆಸುವ ಆಧುನಿಕತೆಗೆ

ನಮ್ಮೊಳಗೇ ಹುದುಗಿರುವ, ಕ್ಷಣ ಕ್ಷಣಕ್ಕೂ ಕ್ಷಯಿಸುತ್ತಿರುವ, ಎಲ್ಲರಿಗೂ ಬೇಕೇ ಬೇಕಾದ ಈ ‘ಆನೆ’ಯ ಕಡೆಗೆ ಗಮನ ಹೋಗುವುದೆಂದು..!?

ಬೆಲ್ಲದ ಗಣಪತಿಯನ್ನು ಪೂಜೆಮಾಡುವ ಸಮಯ…

ನೈವೇದ್ಯದ ಹೊತ್ತು ಬಂದಾಗ ಒಮ್ಮೆ ಅತ್ತಿತ್ತ ನೋಡಿದ ಪೂಜಾರಿ ಮೂರ್ತಿಯನ್ನೇ ಸ್ವಲ್ಪಮುರಿದು ಮುಂದಿಟ್ಟನಂತೆ..

ಹೀಗಿದೆ ನಮ್ಮ ಸ್ಥಿತಿ..!!!

ನಮ್ಮ ಜೀವನದ ಜೀವರೇಖೆಯೇ ತನು – ಮನಗಳ ಸ್ವಸ್ಥತೆ..!

ಅದನ್ನೇ ಕಳೆದುಕೊಂಡು ಗಳಿಸಿದ ಹಣ , ಹಣವಲ್ಲ.. ನಿಜಸುಖದ ಹೆಣ..!!

ಹೆಸರು ಹೆಸರಲ್ಲ ಮನದ ಕೆಸರು…!

ಹೇ ಪ್ರಭೋ..!

ಹತ್ತಾರು ಗುರುಗಳು, ನೂರಾರು ಮಾರ್ಗಗಳು, ಸಾವಿರಾರು ಗ್ರಂಥಗಳು ನಮಗೆ ಬೇಡವೇ ಬೇಡ..!

ಒಂದೇ ಒಂದು ಬಾರಿ ಬದುಕಿನಲ್ಲಿ ನಿಜಕ್ಕೂ ಹಿರಿದ್ಯಾವುದು ಎಂಬುದರ ಸತ್ಯ ದರ್ಶನ ಮಾಡಿಸು..

‘ಆನೆ’ ಕೊಡಿಸು..

ಅಂಬಾರಿಯೇರಿ,ಅಂಬರವನ್ನೇ ಮೀರಿ,ಅತಿಶಯ ಸುಖದಲ್ಲಿ ಅನಂತರಾಗುವೆವು……

|| ಹರೇರಾಮ ||

Facebook Comments Box