ಹಣವೊಂದು ಮಹಾ ವಿಚಿತ್ರ ವಸ್ತು..!

ಅದು ಹೆಚ್ಚಾದರೂ ಸುಖವಿಲ್ಲ..!!

ಕಡಿಮೆಯಾದರಂತೂ ಹೇಗೂ ಇಲ್ಲ..!

ಕಡಿಮೆಯಾದರೆ ಹಾಹಾಕಾರ..ಹೆಚ್ಚಾದರೆ ಅಹಂಕಾರ..!!!!

ಸುಖವಿರುವುದು ಸಮತೋಲನದಲ್ಲಿ..!

ಹಣ ಕಡಿಮೆಯಾಗದಿರಲು ಚೆನ್ನಾಗಿ ದುಡಿಯಬೇಕು..!

ಹಣ ಹೆಚ್ಚಾಗದಿರಲು ಕೈಬಿಚ್ಚಿ ದಾನ ಮಾಡಬೇಕು..!

ದುಡಿದದ್ದರಿಂದ ಹೊಟ್ಟೆ ತುಂಬಿತು, ದಾನ ಮಾಡಿದ್ದರಿಂದ ಹೃದಯವೂ ತುಂಬಿತು..!

ನಮ್ಮ ಬದುಕಿಗೆ ಎಷ್ಟು ಹಣದ ಅಗತ್ಯವಿದೆಯೋ, ಅಷ್ಟು ಮಾತ್ರವೇ ನಮ್ಮದು..!!

ಮಿಕ್ಕಿದ್ದು ನಮ್ಮ ಬಳಿ ಇದ್ದರೂ ಪ್ರಯೋಜನವೇನೂ ಇಲ್ಲ..!

ಅನ್ನದ ರಾಶಿಯೇ ಇದ್ದರೂ ಹೊಟ್ಟೆಗೆ ಹಿಡಿಯುವಷ್ಟೇ ತಾನೆ ಉಣ್ಣಲು ಸಾಧ್ಯ..!

ಚಿನ್ನದ ರಾಶಿಯೇ ಇದ್ದರೂ ಮೈಯಿರುವಷ್ಟು ತಾನೆ ತೊಡಲು ಸಾಧ್ಯ..!!

ಆದರೆ ಹೆಚ್ಚಾದ ಹಣಕ್ಕಿರುವ ಒಂದು ಪ್ರಯೋಜನವನ್ನು ಅಲ್ಲಗಳೆಯಲಾಗದು..

ಅದೆಂದರೆ  “ಉಳಿತಾಯ”..!!!

ಇಂದು ಹೆಚ್ಚಾಗಿರುವ ಹಣ, ಒಂದೊಮ್ಮೆ ಕಡಿಮೆಯಾದಾಗ ಉಪಯೋಗಕ್ಕೆ ಬಂದೀತು..!

ಅಲ್ಲದಿದ್ದರೆ ,ಮಕ್ಕಳು- ಮೊಮ್ಮಕ್ಕಳಿಗೆ ಉಪಯೋಗವಾದೀತು..!!

ತನ್ನಲ್ಲಿ, ತನ್ನವರಲ್ಲಿ,ತಾನಿರುವ ಜಗದ ಜೀವಗಳಲ್ಲಿ, ನಾನಾ ಬಗೆಯ ಕಷ್ಟ -ಕಾರ್ಪಣ್ಯಗಳನ್ನು ಕಂಡ ಮನುಷ್ಯ,

ಹೀಗೊಮ್ಮೆ ಮುಂದಾಲೋಚನೆ ಮಾಡಿದರೆ ತಪ್ಪೇನಿಲ್ಲ..!

ಆದರೆ ,

ನಾವು ಅಷ್ಟಾಗಿ ಗಮನಿಸದ ಒಂದು ಸಂಗತಿ ಎಂದರೆ..

ದಾನವೆಂಬುದು ದೊಡ್ಡ ಮುಂದಾಲೋಚನೆ,

ಅದೊಂದು ವಿಶಿಷ್ಠ ರೀತಿಯ ಉಳಿತಾಯವೇ ಆಗಿದೆ ಎಂಬುದು..!!

ಭಾರತದ ರೂಪಾಯಿಗೆ ಅಮೇರಿಕಾದಲ್ಲಿ ಯಾವ ಉಪಯೋಗವೂ ಇಲ್ಲ ..!

ರೂಪಾಯಿಯನ್ನು ಡಾಲರಾಗಿ ಪರಿವರ್ತಿಸಿದರೆ ಮಾತ್ರವೇ ಅದು ಅಲ್ಲಿ ಉಪಯೋಗಕ್ಕೆ ಬರಲು ಸಾಧ್ಯ..!

ಹಾಗೆಯೇ ಭೂಮಿಯ ರೂಪಾಯಿಗೆ ಪರಲೋಕದಲ್ಲಿ ಯಾವ ಉಪಯೋಗವೂ ಇಲ್ಲ..!

ಸೂಜಿಮೊನೆಯಷ್ಟಾದರೂ ಸಂಪತ್ತನ್ನು ಇಲ್ಲಿಂದ ತೆಗೆದುಕೊಂಡು ಹೋಗುವಂತಿಲ್ಲ..!!

ಮುರಿಯಲಾರದ ವಿಧಿನಿಯಮವದು..!

ನಾವೆಷ್ಟು ದುಡಿದರೂ, ಮತ್ತೆಷ್ಟು ಕೂಡಿಟ್ಟರೂ ಈ ಲೋಕವನ್ನು ಬಿಟ್ಟು ಹೋಗುವಾಗ ಅವೆಲ್ಲವೂ ಇಲ್ಲಿಯೇ ಉಳಿದು ಬಿಡುವುದಲ್ಲವೇ..?

ಒಂದು ಚಿಕ್ಕಾಸನ್ನೂ ಜೊತೆಗೊಯ್ಯುವಂತಿಲ್ಲವೆಂದರೆ ಆಘಾತವೆನಿಸುವುದಿಲ್ಲವೇ..?

ಈ ಸಮಸ್ಯೆಗೆ ಮನೀಷಿಗಳು ಕಂಡುಕೊಂಡ ಪರಿಹಾರವೇ ದಾನ..!!

ದಾನ ಮಾಡಿದ ಸಂಪತ್ತು ಪುಣ್ಯದರೂಪ ತಾಳುತ್ತದೆ..!

ಪುಣ್ಯವು ಸಮಯ ಬಂದಾಗ ತಾನೇ ತಾನಾಗಿ ಸುಖದ ರೂಪವನ್ನು ತಾಳುತ್ತದೆ..!

ಹೀಗೆ ಹಣವನ್ನು  ಸುಖವನ್ನಾಗಿ ಪರಿವರ್ತಿಸುವ ಆಶ್ಚರ್ಯಕರ ವಿಧಾನವೇ ದಾನ..!!

ಪುಣ್ಯದ ರೂಪದಲ್ಲಿ ಪರಿವರ್ತಿತವಾದ ಹಣ ಪರಲೋಕದಲ್ಲಿಯೂ ಉಪಯೋಗಕ್ಕೆ ಬರಬಲ್ಲದು..!

ಆದುದರಿಂದ, ಬದುಕಿನ ನಂತರ ಮುಂದೇನು..? ಎನ್ನುವ ಬಹುದೊಡ್ಡ ಮುಂದಾಲೋಚನೆಯೇ ದಾನ..!!

ಬದುಕಿನ ಸಂಪತ್ತುಗಳನ್ನು ಬದುಕಿನ ನಂತರಕ್ಕೂ ಉಳಿಸಿಕೊಳ್ಳುವ ಅತಿ ವಿಶಿಷ್ಡ  ಉಳಿತಾಯ ವಿಧಾನವೇ ದಾನ..!!

ವಿಚಿತ್ರವೆಂದರೆ ದಾನಪ್ರಕ್ರಿಯೆಯಲ್ಲಿ ಕೊಡುವಾತ ತೆಗೆದುಕೊಳ್ಳುವಾತನಿಗೆ ನಮಸ್ಕರಿಸುವ ಪದ್ಧತಿಯಿದೆ..!

ಏಕೆಂದರೆ ಕೊಡುವವನು ತೆಗೆದುಕೊಳ್ಳುವವನಿಗೆ ಕೊಡುವುದು ನಶ್ವರ ಸಂಪತ್ತನ್ನು..!!!

ಬದಲಾಗಿ ಪಡೆದುಕೊಳ್ಳುವುದು ಪುಣ್ಯದ ರಾಶಿಯನ್ನು ..!!

ಹಣವನ್ನು ನಾವು ರಕ್ಷಿಸಬೇಕಾಗುತ್ತದೆ..!

ಆದರೆ ಪುಣ್ಯವು ತಾನೇ ನಮ್ಮನ್ನು ರಕ್ಷಿಸುತ್ತ

ಹಣಕ್ಕೆ ಇಲ್ಲಿ ಮಾತ್ರವೇ ಉಪಯೋಗ.. ಪುಣ್ಯಕ್ಕೆ ಎಲ್ಲೆಲ್ಲಿಯೂ ಉಪಯೋಗ..!!!

ಹಣಕ್ಕೆ ಕಳ್ಳರ ಭೀತಿಯಿದೆ..ಪುಣ್ಯಕ್ಕೆ ಯಾವ ಭೀತಿಯೂ ಇಲ್ಲ..!

ಹಣದಂತೆ ಪುಣ್ಯವನ್ನು ಹೊತ್ತುಕೊಂಡೊಯ್ಯಬೇಕಾಗಿಲ್ಲ

ಅದು ನಮ್ಮೊಳಗೆ, ನಮ್ಮೊಡನೆ ಸೇರಿಕೊಂಡು ನಮ್ಮ ನಿರಂತರ ಸಂಗಾತಿಯಾಗಿರುವುದಲ್ಲದೇ, ಸಮಯ ಬಂದಾಗ ನಮ್ಮನ್ನೇ ಕೊಂಡೊಯ್ಯುವುದು ..!

ಹಣದಂತೆ ಪುಣ್ಯವನ್ನುದು ಹುಡುಕಬೇಕಾಗಿಲ್ಲ..!!

ನಮಗೆ ಅಗತ್ಯವಿದ್ದಾಗ ಅದು ತಾನಾಗಿಯೇ ನಮ್ಮ ನೆರವಿಗೆ ಧಾವಿಸಿ ಬರುವುದು

ಆದುದರಿಂದ ,ಯಾಚಕ – ದಾನಿಗಳಲ್ಲಿ  ಯಾಚಕನೇ ದೊಡ್ಡ ದಾನಿಯೆನ್ನಬಹುದು..!

ದಾನಂ ಭೋಗೋ ನಾಶಃ ತಿಸ್ರೋ ಗತಯೋ  ಭವಂತಿ ವಿತ್ತಸ್ಯ |

ಯೋ ನ ದದಾತಿ ನ ಭುಂಕ್ತೇ ತಸ್ಯ  ತೃತೀಯಾ ಗತಿಃ ಭವತಿ   ||

ಹಣಕ್ಕೆ ಮೂರುವಿಧವಾದ ಗತಿಗಳು..

ಒಂದು ದಾನ..

ಎರಡು ಭೋಗ..

ಮೂರು ನಾಶ..

ತಾನೂ ಅನುಭವಿಸದ, ಬೇರೆಯವರಿಗೂ ನೀಡದ ಹಣಕ್ಕೆ ಆಗುವುದು ಮೂರನೆಯ ಗತಿ..!

ಹಣವಿರುವುದೇ ಅನುಭವಿಸಲೆಂದು..!

ಒಂದೋ ನಾವು ಅನುಭವಿಸಬೇಕು ,ಅಥವಾ ಬೇರೆಯವರು ಅನುಭವಿಸಬೇಕು..

ನಾವು ಅನುಭವಿಸಿ ಮಿಗುವುದನ್ನು ಬೇರೆಯವರಿಗೆ ನೀಡಿದರೆ ಅದು ಇಬ್ಬರಿಗೂ ಲಾಭಕರ..!!

ತೆಗೆದುಕೊಂಡವನಿಗೆ ಹಣವಾಗಿ ಅದು ಉಪಯೋಗಕ್ಕೆ ಬಂದರೆ, ಕೊಟ್ಟವನಿಗೆ

ಪುಣ್ಯವಾಗಿ – ಆತ್ಮತೃಪ್ತಿಯಾಗಿ ಉಪಯೋಗಕ್ಕೆ ಬರುತ್ತದೆ..!

ಹರಿಯುವುದು ಹಣದ ಸ್ವಭಾವ (ದುಡ್ಡು – ಬ್ಲಡ್ಡು ಹರಿದರೇ ಒಳಿತು – ಗಾದೆ)..!

ನಾವಾಗಿ  ಹರಿಸದಿದ್ದರೆ ಅದು ತಾನಾಗಿಯೇ ಹರಿಯುತ್ತದೆ..!!!!

ಆಗ ನಮಗೆ ಉಳಿಯುವುದು ದುಃಖ ಮಾತ್ರ..!

ಜಿಪುಣತನದಿಂದಾಗಿ ನೀರನ್ನು ಉಪಯೋಗಿಸದ ಮಾತ್ರಕ್ಕೆ ಬಾವಿಯೇನೂ ತುಂಬಿಬಿಡುವುದಿಲ್ಲ..!

ಬದಲಿಗೆ ಇರುವ ನೀರೂ ಕಲುಷಿತಗೊಳ್ಳುತ್ತದೆ..!!

ಲಾಭವಾಗುವುದು ನೀರನ್ನು ಬಳಸಿದಾಗ..!!!

ನೀರೆತ್ತಿದಷ್ಟೂ ಬಾವಿಯಲ್ಲಿ ಹೊಸನೀರು ಬರುತ್ತಿರುತ್ತದೆ..ಮಾತ್ರವಲ್ಲ ನೀರು ನಿರ್ಮಲವಾಗಿರುತ್ತದೆ..!!

ಸಂಪತ್ತು ಸಂತೋಷವಾಗಿ ಪರಿವರ್ತಿತವಾಗಬೇಕಾದರೆ ಈ ತತ್ವ ಮನಸ್ಸಿಗೆ ಬರಬೇಕು..!

ಕೊಟ್ಟದು ಸದ್ವಿನಿಯೋಗವಾಗುತ್ತಿದರೆ ಕೊಡುವವನು (ದೇವರು) ಮತ್ತೆ ಮತ್ತೆ ಕೊಡುತ್ತಿರುತ್ತಾನೆ..!

ಹಾಗಾಗದಿದ್ದಾಗ ಕೊಟ್ಟದ್ದನ್ನೂ ಕಿತ್ತುಕೊಳ್ಳುತ್ತಾನೆ..!!

ದನ ಕಾಯುವವರನ್ನು ನಾವು ನೋಡಿದ್ದೇವೆ

ಕಾಯುವುದು ಮಾತ್ರ ಅವರ ಕೆಲಸ ,

ಫಲ ಉಣ್ಣುವಂತಿಲ್ಲ..ಅಂದರೆ ಹಾಲು ಕುಡಿಯುವಂತಿಲ್ಲ..!

ಅದು ಅವರ ವೃತ್ತಿಧರ್ಮ..

ಹಾಗೆಯೇ ಧನ ಕಾಯುವವರೂ ಕೂಡ..!!

ಹಾವಿನ ಹಾಗೆ ಹಣವನ್ನು ಕಾಯುತ್ತಿರುತ್ತಾರೆ..

ಅನುಭವಿಸುವುದು ಅವರ ಹಣೆಯಲ್ಲಿ ಬರೆದಿಲ್ಲ..

ಇದು ಯಾವ ಧರ್ಮವೂ ಅಲ್ಲ..!

ಇಂಥ “ಧನಪಾಲ”ರಾಗುವುದಕ್ಕಿಂತ ಅಂಥ  “ದನಪಾಲ”ರಾಗುವುದು ಎಷ್ಟುಮಾತ್ರಕ್ಕೂ ಒಳಿತು..!!

ಹಣವನ್ನು ನಾವು ಅನುಭವಿಸದೇ ಬ್ಯಾಂಕಿನಲ್ಲಿಟ್ಟು  ಅದು ನಮ್ಮ ಹಣವೆಂಬ ಭಾವನೆಯಲ್ಲಿಯೇ ಸಂತೋಷಪಡುವುದಿದ್ದರೆ..

ಜಗತ್ತಿನ ಎಲ್ಲಾ ಬ್ಯಾಂಕುಗಳ,ಎಲ್ಲಾ ಹಣವೂ ನಮ್ಮದೇ ಎಂದುಕೊಂಡು ಇನ್ನೂ ಹೆಚ್ಚು ಸಂತೋಷವನ್ನೇಕೆ ಪಡಬಾರದು..???

Facebook Comments