|| ಹರೇರಾಮ ||

ಬೇಕೇ ಈ ಕೆಲಸ ?

ನಿರಂತರ ಪರಿಭ್ರಮಣ..
ದಿನಕ್ಕೊಂದು ಊರು..
ಹೊತ್ತಿಗೊಂದು ಸೂರು..
ಹತ್ತಾರು ಬಗೆಯ ನೀರು..!
ನಿನ್ನೆ ಇಲ್ಲಿರಲಿಲ್ಲ; ನಾಳೆ ಇನ್ನೆಲ್ಲಿಯೋ?….
ಇಂದು ಬಯಲುಸೀಮೆಯೆಡೆ..ನಾಳೆ ಮಲೆನಾಡ ಕಡೆ.
ಇಂದು ಆಗಸ ಹರಿದು ಬೀಳುವಂತೆ ಮಳೆ.. ನಾಳೆ ಮೈಯೆಲ್ಲ ಬೆವರ ಹೊಳೆ..

ಮಾನವನ ಮೊದಲ ಬೇಕುಗಳು ಊಟ-ನಿದ್ರೆಗಳು..
ಇವರ ಪಾಲಿಗೆ ಊಟವೋ ಅದೃಷ್ಟದಾಟ..!
ಒಮ್ಮೊಮ್ಮೆ ಇಲ್ಲವೇ ಇಲ್ಲ..
ಇದ್ದರೂ ಬೇಕಾದಷ್ಟು ಇಲ್ಲದಿರಬಹುದು..
ಬೇಕಾದ ಬಗೆಯಲ್ಲಿ ಇಲ್ಲದಿರಬಹುದು..ಇದ್ದರೂ ಪ್ರೀತಿಪೂರ್ವಕವಲ್ಲದಿರಬಹುದು..
ತಲುಪುವಾಗ ತಿನ್ನಲು ಸಮಯವೇ ಇಲ್ಲದಿರಬಹುದು..
ಇಂದು ಸೊಗಸಿಲ್ಲದ ಸಪ್ಪೆ.. ನಾಳೆ ಕಿವಿಯಲ್ಲಿ ಹೊಗೆಯೇಳುವ ಖಾರ..!

ಇನ್ನು ನಿದ್ರೆಯ ಕಥೆ ಇದಕ್ಕಿಂತ ಭಿನ್ನವೇನಲ್ಲ..
ಪ್ರಯಾಣ ತರುವ ಬಳಲಿಕೆ..
ಕಾಲು ಚಾಚಿ ಕೆಲಹೊತ್ತು ಮಲಗುವಂತಿಲ್ಲ..
ಒಂದೆಡೆ ಕರ್ತವ್ಯದ ಕರೆ..
ಇನ್ನೊಂದೆಡೆ, ಸಂತೆಯಂತಿರುವಲ್ಲಿ ಮಲಗಲು ಎಡೆಯೆಲ್ಲಿ..?
ರಾತ್ರಿ…
ಒಮ್ಮೊಮ್ಮೆ ಹಾಸಲು ಹಾಸಿಗೆ.. ಹೊದೆಯಲು ಹೊದಿಕೆ…ವ್ಯವಸ್ಥಿತವಾಗಿ ಸಿಗುವ ಭರವಸೆಯಿಲ್ಲ…
ನಿದ್ರೆಗೆ ಸಮಯವೂ ಇಲ್ಲ – ಸ್ಥಳವೂ ಇಲ್ಲ!
ಯಾವುದೋ ಹೊತ್ತಿಗೆ ಇನ್ಯಾವುದೋ ಮೂಲೆಯನ್ನು ಹುಡುಕಿಕೊಂಡು ಹೋಗುವ ಪರಿಸ್ಥಿತಿ..!

ಅನಾರೋಗ್ಯ ಕಾಡಿದರೆ?…
ನೋಡಿಕೊಳ್ಳಲು ಅಮ್ಮ- ಅಕ್ಕರಿಲ್ಲ..ಔಷಧಿ ತರಲು ಅಪ್ಪ- ಅಣ್ಣರಿಲ್ಲ..
ಹಣೆಯ ಮೇಲೆ ಸಾಂತ್ವನದ ಕೈಯಿಡುವ ತಮ್ಮ-ತಂಗಿಯರಿಲ್ಲ..
ನೋಡುವ ಮನವಿದ್ದರೂ ಒಡೆಯರಿಗೆ ನೋಡಲು ಸಮಯವಿಲ್ಲ..!

ಹೇಳಿ ಕೇಳಿ ಹದಿಹರೆಯದ ಸಮಯ..ಆದರೆ, ಓರಗೆಯ ಪೋರರಿಗೆ ಸಿಗುವ ಸುಖ-ಸಾಧನಗಳು ಇವರಿಗೆ ಕನಸು ಮಾತ್ರ..!
ಗರಿ ಬಿಚ್ಚಿ ಹಾರುವ ವಯಸ್ಸು.. ಸ್ವತಂತ್ರವಲ್ಲದ ಮನಸ್ಸು..ನವನವೀನ ಉಡುಗೆ ತೊಡುಗೆಗಳಿಲ್ಲ..ವಾರಾಂತ್ಯಕ್ಕೊಂದು ರಜೆಯೂ ಇಲ್ಲ..!
ಸಿನೆಮಾ-ಹೋಟೆಲ್ ಇಲ್ಲವೇ ಇಲ್ಲ..!

ಹಬ್ಬ ಬಂದಿತೇ?
ಆತ್ಮೀಯರೊಂದಿಗಿನ ಸಂಭ್ರಮವಿಲ್ಲ..
ಗೆಳೆಯರೊಂದಿಗಿನ ಒಡನಾಟ ಸಿಗದು..
ಮನೆಯವರ ಒಡನಾಟ ಎಲ್ಲೋ ವರ್ಷದಲ್ಲೊಮ್ಮೆ..!
ಈಡೇರದ ಅಪೇಕ್ಷೆಗಳು..ಬಗೆಬಗೆಯ ಉಪೇಕ್ಷೆಗಳು..

ಇದು ಮುನಿಜೀವನವೇ..!
ಹಾಗೆಂದು ಇಂದಿನ ಜಗತ್ತಿನಲ್ಲಿ ಮುನಿಯಂತೆ ಬದುಕುವ ವಾತಾರವಣವಿಲ್ಲ..
ಎತ್ತಲೋ ಸೆಳೆಯುವ ವಯಸ್ಸು ಬೇರೆ ..
ಮುನಿಜೀವನವನ್ನೇ ನಡೆಸಬೇಕು; ಆದರೆ ಮುನಿಜೀವನಕ್ಕೆ ಸಲ್ಲಬೇಕಾದ ಗೌರವ ಮಾತ್ರ ಸಲ್ಲುವುದಿಲ್ಲ..!

ಹೊಟ್ಟೆ ಪಾಡಿಗಾಗಿ ಹೀಗೆ ದುಡಿಯುವವರುಂಟು..
ಆದರೆ ಇವರೊಂದು ವಿಚಿತ್ರ ..!
ಏಕೆಂದರೆ ಇವರಲ್ಲಿ ಅನೇಕರಿಗೆ ಸಂಪತ್ತಿನ ಕೊರತೆಯೇನಿಲ್ಲ..ಕೊರತೆ ಇರುವವರಿಗೂ ಹೊಟ್ಟೆ ಪಾಡಿನ ನಿರ್ವಹಣೆಗೆ ಬೇರೆ ಪ್ರಶಸ್ತ ಆಯ್ಕೆಗಳುಂಟು..

ಹೊಟ್ಟೆ ಪಾಡಿನ ನಂತರವೂ ಹೆಚ್ಚು ಹಣ ಸಂಪಾದನೆಗಾಗಿ ಹೀಗೆ ದುಡಿಯುವವರುಂಟು..ಆದರಿಲ್ಲಿ ವೇತನದ ಮಾತುಕತೆಯೇ ನಡೆಯದು !

ಹಲವರು ಹೆಸರ ಹಪಹಪಿಯಲ್ಲಿ ದುಡಿಯುವುದಿದೆ..
ಇವರೋ ಎಲೆಮರೆಯ ಕಾಯಿಗಳು..

ಜೀವನ ಸಂಗಾತಿಗಳ ಮೆಚ್ಚಿಸಲೋ.. ಪಡೆಯಲೋ.. ರಕ್ಷಿಸಲೋ ಹೀಗೆ ಮಾಡುವರು..
ಇಲ್ಲಿಯೋ ವೈರಾಗ್ಯದ ವಾತಾವರಣ!

ಕೆಲಸ ಬಹು ಸಂಕೀರ್ಣ..ದೊಡ್ಡದೊಡ್ಡವರನ್ನು ನಿಭಾಯಿಸಬೇಕು; ಸಾಮಾನ್ಯರನ್ನೂ ಸುಧಾರಿಸಬೇಕು..!
ಎಲ್ಲವೂ ಸರಿಯಾಗಿ ಒಂದು ತಪ್ಪಾದರೂ ಸಾಕು..ಸರ್ವರ ಕೆಂಗಣ್ಣು ನಿಶ್ಚಿತ..

ಸಾಮರ್ಥ್ಯ- ವಯಸ್ಸುಗಳಿಗೆ ಮೀರಿದ ಕೆಲಸ..
ಸಮಯ ಸೀಮಿತ…
ಅನುಭವ ಪರಿಣತಿಗಳು ಅಲ್ಪ..
ತರಬೇತಿ ತಾನಾಗಿಯೇ ಆಗಬೇಕು..
ಫಲಿತಾಂಶ ಮಾತ್ರ ನೂರಕ್ಕೆ ನೂರು ಬರಲೇ ಬೇಕು..!

ಇದು ನಮ್ಮ ನಿಮ್ಮ ನಡುವೆ ಸೇತುವೆ ಕಟ್ಟುವ ಪರಿವಾರದ ಬದುಕಿನ ಪರಿ!!!

ವೆಲ್ಲವೂ ಮನಸ್ಸಿನಲ್ಲಿ ಸುಳಿದಿದ್ದು ಮೊನ್ನೆ ಮೊನ್ನೆ ಪರಿವಾರದ ಹಿರಿಯ, ಚಿಪ್ಳಿ ರಮೇಶ ‘ಐವತ್ತಾಯಿತು’ ಎಂದು ಆಶೀರ್ವಾದ ಬೇಡಿದಾಗ..
ಆ ಜೀವನ.. ಅದು ರಾಮಾರ್ಪಣ..
ಆತ ಪರಿವಾರವನ್ನು ಪ್ರವೇಶಿಸಿದ್ದು ಹದಿನಾಲ್ಕರ ಹರಯದಲ್ಲಿ..
ಅಂದಿನಿಂದ ಇಂದಿಗೆ ಮೂವತ್ತಾರು ಸುದೀರ್ಘ ಸಂವತ್ಸರಗಳೇ ಸಂದಿವೆ..
ಬದುಕಿನ ಬಹುಮುಖ್ಯ ಭಾಗವೇ ಮಠದಲ್ಲಿ ಕಳೆದಿದೆ..
ಮಠದಲ್ಲಿ ಇಂದು ಎಲ್ಲವೂ ಬದಲಾವಣೆಯಾಗಿದೆ, ಆದರೆ ಬದಲಾಗದಿರುವುದು ರಮೇಶ ಮಾತ್ರ..
ಅಂದಿನ ನಾಯಕರು ಇಂದಿಲ್ಲ, ಅಂದಿನ ಸೇವಕರೂ ಇಂದಿಲ್ಲ..

ಅಷ್ಟೇ ಏಕೆ, ಪೀಠ ಪರಂಪರೆಯಲ್ಲಿಯೇ ಮೂವತ್ತೈದು ತಲೆಮಾರು ಕಳೆದು ಮೂವತ್ತಾರನೆಯ ತಲೆಮಾರು ನಡೆಯುತ್ತಿದೆ..
ಶಕ ಪರಿವರ್ತನೆಯೆಂಬುದು ಸಣ್ಣ ಪ್ರಳಯವಿದ್ದಂತೆ, ಅದನ್ನು ದಾಟಿ ಮುಂದುವರಿಯುವುದು ಸಾಮಾನ್ಯ ಸಂಗತಿಯಲ್ಲ..
ಆದರೆ ಅಂದು ಯಾವ ಮಹತ್ವ ರಮೇಶನಿಗಿದ್ದಿತೋ, ಯಾವ ವಿಶ್ವಾಸ ಪೀಠಕ್ಕೆ ಆತನಲ್ಲಿದ್ದಿತೋ ಅದು ಇಂದಿಗೂ ಹಾಗೆಯೇ ಇದೆ,
ಇನ್ನಷ್ಟು ದೃಢವಾಗಿದೆ..

ರಮೇಶನೆಂದರೆ ನಮಗೆ ನೆನಪಾಗುವುದು ಆ ದಿನ.. ಆ ಸಮಯ…ಆ ಅಮೃತಘಳಿಗೆ…
ಭಾವ ಸಂ||ದ ಚೈತ್ರ ಶುದ್ಧ ಚತುರ್ಥಿ, ೧೯೯೪ರ ಏಪ್ರಿಲ್ ೧೫..
ಬದುಕೇ ಬದಲಾದ ದಿನವದು..ವ್ಯಷ್ಟಿ ಬದುಕಿನಿಂದ ಸಮಷ್ಟಿ ಬದುಕಿಗೆ..
ಭೋಗದ ಬದುಕಿನಿಂದ ತ್ಯಾಗದ ಬದುಕಿಗೆ..
ಸುಖದ ಬದುಕಿನಿಂದ ಸೇವೆಯ ಬದುಕಿಗೆ..
ಪ್ರಥಮ ಆಶ್ರಮದಿಂದ ತುರೀಯ ಆಶ್ರಮಕ್ಕೆ  ನಾವು ಕಾಲಿರಿಸಿದ

ದಂಡ ಕಮಂಡಲುಗಳ ನೀಡಿದವ

ಮಂಗಲ ಮಹಾ ಮುಹೂರ್ತವದು..

ಹಳೆಯದೆಲ್ಲವು ಕಳೆಯಬೇಕು..
ಹುಟ್ಟು ಹೆಸರು, ಹಿಂದೆ ಸಂಪಾದಿಸಿದ ಹಣ, ಸಿಹಿ ಕಹಿ ಸಂಬಂಧಗಳು, ಹೆಚ್ಚೇಕೆ ಉಟ್ಟಬಟ್ಟೆಯನ್ನೂ ಪರಿತ್ಯಜಿಸಬೇಕು..
ಧರಿಸಿದ ಯಜ್ಞಸೂತ್ರವನ್ನೂ, ಶಿಖೆಯನ್ನೂ ಕಿತ್ತೆಸೆಯಬೇಕು..
ಪಾತ್ರೆಯನ್ನೊಮ್ಮೆ ಸಂಪೂರ್ಣ ಬರಿದು ಮಾಡಿ ತೊಳೆದಿರಿಸಿದ ಮೇಲಲ್ಲವೇ ಅದರಲ್ಲಿ ಹೊಸತನ್ನು ತುಂಬುವುದು ..
ಹಾಗೆಯೇ ಒಳಗಿನ ಹಳತೆಲ್ಲವೂ ಕಳೆದು ಶೂನ್ಯವಾದ ಮೇಲೆ, ಗುರು ಅಲ್ಲಿ ನಿತ್ಯ ನೂತನ ಪೂರ್ಣವನ್ನು ತುಂಬತೊಡಗುವುದು..
ಹೊಸ ಬದುಕಿನ ನಿತ್ಯ ಸತ್ಯ ಸಂಗತಿಗಳಾದ ಕಾಷಾಯ ವಸ್ತ್ರ, ದಂಡ-ಕಮಂಡಲುಗಳು ಗುರುವಿನಿಂದ ಪ್ರಾಪ್ತವಾಗಬೇಕು..

ಸಲಿಲ ಸನಿಹದಲ್ಲಿ ಸಂನ್ಯಾಸ ವಿಧಿಗಳು…
ಆ ಸಮಯದಲ್ಲಿ ಗುರುಗಳಿರುವುದು ಮಠದಲ್ಲಿ.. ಉಪದೇಶ ನಡೆಯುವುದು ಅಲ್ಲಿಯೇ…
ಗುರುವಿನ ಪ್ರತಿನಿಧಿಯೊಬ್ಬ ಗುರುಕರಗಳಿಂದ ಕಾಷಾಯ ವಸ್ತ್ರ, ದಂಡ-ಕಮಂಡಲುಗಳನ್ನು ತೆಗೆದುಕೊಂಡು ಸಂನ್ಯಾಸ ಸ್ಥಳಕ್ಕೆ ಆಗಮಿಸಿ ಗುರುಗಳ ಪರವಾಗಿ ಅವುಗಳನ್ನು ನೂತನ ಪೀಠಾಧಿಪತಿಗಳಿಗೆ ನೀಡಬೇಕು, ಇದು ಸಂಪ್ರದಾಯ..
ಇಲ್ಲೊಂದು ತಾದಾತ್ಮ್ಯವಿದೆ..
ಚಿಂತನೆಯೊಂದು ಕಾರ್ಯರೂಪಕ್ಕೆ ಬರುವಾಗ ಮೆದುಳಿಗೂ ಮತ್ತು ಕಾರ್ಯವೆಸಗುವ ಕರಗಳಿಗೂ ಒಂದು ಬಗೆಯ ತಾದಾತ್ಮ್ಯವಿರುವುದಲ್ಲವೇ..?
ಹಾಗೆಯೇ ಗುರುವಿನ ಮನದಲ್ಲಿ ಮನವನ್ನು ಬೆರೆಸಿ ಗುರುವಿನ ಕರಕಮಲವೇ ತಾನಾಗಿ ನಡೆಸಬೇಕಾದ ಮಹತ್ಕಾರ್ಯವದು..
ತಲೆಮಾರಿಗೊಂದು ಬಾರಿ ಒಬ್ಬರಿಗೆ ಮಾತ್ರವೇ ಸಿಗುವ ಈ ಯೋಗ ಯಾರದಾಗಬಹುದೆಂದು ಎಲ್ಲರೂ ಕುತೂಹಲದಿಂದ ಕಾಯುತ್ತಿರುವಾಗಲೇ………ಅದು ರಮೇಶನನ್ನರಸಿ ಬಂತು..!

ಯುಗ ಪರಿವರ್ತನೆಯ ಈ ಮಹತ್ಕಾರ್ಯವನ್ನು ನೀನೇ ಮಾಡಬೇಕು” ಎಂದು ರಮೇಶನಿಗೆ ‘ದೊಡ್ಡ ಗುರುಗಳ’ ಅಪ್ಪಣೆಯಾಗಿತ್ತು..
ಪರಿವಾರಕ್ಕೆ ಸಂದ ಪರಮೋಚ್ಚ ಗೌರವವಿದು!
ಆದರೆ ಇತ್ತ ಸಂನ್ಯಾಸದ ಕ್ಷಣಗಣನೆಗಳು ಆರಂಭವಾಗುತ್ತಿದ್ದಂತೆಯೇ ಅತ್ತ ರುಗ್ಣಶಯ್ಯೆಯಲ್ಲಿದ್ದ ರಮೇಶನ ತಂದೆಯ ಮರಣದ ಕ್ಷಣಗಣನೆಯೂ ಆರಂಭವಾಗಿತ್ತು.
ಆಶೌಚ ಬಂದರೆ ಅವಕಾಶವಿರದು…
“ಹೇ ಭಗವಂತ…! ಕೃತಕೃತ್ಯತೆಯ ಆ ಅಮೃತ ಕ್ಷಣಗಳು ಕೈ ಜಾರದಿರಲಿ” ಎಂದು ನೆರೆನಂಬಿದ ರಾಮನಲ್ಲಿ ಮೊರೆಯಿಟ್ಟನಾತ..
ಆ ದಿನ ಬಂದೇ ಬಂದಿತು..
ಮೃತ್ಯುವಿನ ಮುಹೂರ್ತವನ್ನು ಬದಲಿಸಲು ಸಾಧ್ಯವೇ?
ಕತ್ತಲೆ-ಬೆಳಕುಗಳು ರಮೇಶನ ಬಾಳಿನಲ್ಲಿ ಆ ದಿನ ಕೂಡಿ ಆಡಿದವು..
ಅದೇನು ರಾಮನ ದಯೆಯೋ, ಸೇವೆಯ ಫಲವೋ, ತಂದೆಯ ಮೃತ್ಯುವಾರ್ತೆ ತಲುಪುವ ಮೊದಲೇ ಅಮೃತತ್ವದ ಸಂನ್ಯಾಸ ವಿಧಿಗಳು ಪೂರೈಸಿದ್ದವು..
ಗುರುಪೀಠದ ಎರಡು ತಲೆಮಾರುಗಳನ್ನು ಬೆಸೆಯುವ ಬೆಸುಗೆಯಾಗಿ ರಮೇಶನ ಜೀವನ ಸಾರ್ಥಕಗೊಂಡಿತ್ತು..
ವಿಪರ್ಯಾಸವೆಂದರೆ ಸಂನ್ಯಾಸ ದೀಕ್ಷೆಯಲ್ಲಿ ಅತ್ಯಂತ ಮುಖ್ಯಪಾತ್ರ ವಹಿಸಿದ ರಮೇಶನಿಗೆ, ಅದರ ವಾರ್ಷಿಕೋತ್ಸವದಲ್ಲೆಂದೂ ಭಾಗವಹಿಸಲು ಸಾಧ್ಯವಿಲ್ಲ, ಕಾರಣ ವಾರ್ಷಿಕವಾಗಿ ತಂದೆ ಬರುವ ದಿನವದು…

ಅಹೋ..!
ಧನ್ಯಸೇವಕ ರಮೇಶ..!

ರಮೇಶನದು ಉದಾಹರಣೆ ಮಾತ್ರ. ಪರಿವಾರದಲ್ಲಿ ಸೇವೆ ಸಲ್ಲಿಸಿದ ಒಬ್ಬೊಬ್ಬರ ಬಗ್ಗೆ ಹೇಳಹೊರಟರೆ ಅದು ತುದಿಮೊದಲಿಲ್ಲದ ಸೇವಾಕಾವ್ಯವೇ ಆದೀತು..

ನಮ್ಮ ಪರಂಪರೆಯ ಸಂಪ್ರದಾಯವೆಂದರೆ, ಗುರುಸ್ಥಾನವನ್ನಲಂಕರಿಸಿರುವವರು ತಾವಾಗಿ ಏನನ್ನೂ ಮಾಡುವಂತಿಲ್ಲ..
ಲೋಕದ ಕಾರ್ಯವನ್ನು ಗುರು ಮಾಡಿದರೆ ಗುರು ಕಾರ್ಯವೆಲ್ಲವೂ ಇವರದೇ..
ಅಕ್ಷರಶಃ ಗುರುವಿನ ಅಂಗ-ಪ್ರತ್ಯಂಗಗಳಂತೆ ಪರಿವಾರದವರು..

ಸ್ನಾನ, ಭೋಜನ, ಶಯನಗಳಲ್ಲಿ ಅವರು ತಾಯಿ ಪಾತ್ರ ವಹಿಸಿದರೆ ನಾವು ವಹಿಸುವುದು ಮಗುವಿನ ಪಾತ್ರ..
ಸಲಹೆ ನೀಡುವಾಗ ಇವರು ಮಂತ್ರಿಗಳು..
ಚರಣಸೇವೆಯಲ್ಲಿ ದಾಸರು..
ಬದುಕಿಗೆ ಮಾರ್ಗದರ್ಶನ ಕೇಳುವಾಗ ಮಕ್ಕಳು..
ಮಂತ್ರಾಕ್ಷತೆಯ ಪಡೆಯುವಾಗ ಶಿಷ್ಯರು..
ಗುರು-ಶಿಷ್ಯರನ್ನು ಬೆಸೆಯುವಲ್ಲಿ ಬೆಸುಗೆಗಳು…
ಸಂಕಟಗಳು ಬರುವಾಗ ಸೇನಾನಿಗಳು..

ಒಮ್ಮೊಮ್ಮೆ ಪರಿವಾರದಲ್ಲಿ ನಮಗೆ ಲಕ್ಷ್ಮಣ ಕಾಣಿಸುತ್ತಾನೆ..
ಅಯೋಧ್ಯೆಯಲ್ಲಿ ಸೀತಾರಾಮರಿಗೆ ಸಾವಿರ ಸೇವಕರು ಮಾಡುತ್ತಿದ್ದ ಸೇವೆಯನ್ನು ಅಡವಿಯಲ್ಲಿ ಆತನೊಬ್ಬನೇ ಗೈದನಲ್ಲವೇ!

ಒಮ್ಮೊಮ್ಮೆ ಪರಿವಾರದವರಲ್ಲಿ ನಮಗೆ ಭರತ ತೋರುತ್ತಾನೆ..
ಮಠದಲ್ಲಿರಬಹುದಾದ ಸಕಲ ಸಂಪತ್ತುಗಳನ್ನೂ ಸಂರಕ್ಷಿಸುವ, ಸಧ್ವಿನಿಯೋಗ ಮಾಡುವ ಭಾರ ಅವರದ್ದೇ..

ಆದರೆ ಅದ್ಯಾವುದೂ ಅವರದಲ್ಲ…

ಒಡರಿಸುವನೆಲ್ಲವನ್ ಅದಾವುದುಂ ತನದಲ್ಲ,
ಬಿಡನೊಂದನುಂ ರಾಜ್ಯ ತನದಲ್ಲವೆಂದು|
ನಡೆವಂ ಸ್ವತಂತ್ರದಲಿ ಸಲಿಸುತೆ ವಿಧೇಯತೆಯ,
ಕಡುಯೋಗಿ ಭರತನಲ – ಮಂಕುತಿಮ್ಮ||

ಶಿಲೆಯನ್ನು ಶಿಲ್ಪವನ್ನಾಗಿಸುವಾಗ ಶಿಲ್ಪಿ ತನ್ನ ಚಾಣದ ಅದೆಷ್ಟು ಪೆಟ್ಟುಗಳನ್ನು ನೀಡುವುದಿಲ್ಲ?
ಹಾಗೆಂದು ಶಿಲ್ಪಿಗೆ ಶಿಲೆಯ ಮೇಲೆ ಮಮತೆಯಿಲ್ಲವೆಂದೇನಲ್ಲ..
ಹೆಜ್ಜೆ-ಹೆಜ್ಜೆಗೆ ಪರಿವಾರದವರನ್ನು ದಂಡಿಸುವಾಗ ನಾವೆದುರಿಸುವ ಸಂದಿಗ್ಧವಿ
ದು..

ಒಂದೆಡೆ ಸಮಾಜವೆಂಬ ಬೆಂಕಿ… ಇನ್ನೊಂದೆಡೆ ಗುರುವೆಂಬ ಅಗ್ನಿ-
ಎರಡು ಮಹಾಶಕ್ತಿಗಳ ನಡುವೆ ಪರಿವಾರದವರ ಪರಿ ‘ಅತ್ತ ಪುಲಿ ಇತ್ತ ದರಿ’..

ಇದು ಇದೇನು ಮೊದಲಲ್ಲ..
ಹಿಂದಿನವರ ಅನುಭವವನ್ನು ಈ ಶ್ಲೋಕದಲ್ಲಿ ಗಮನಿಸಿ..

ಮೌನಾನ್ಮೂಕಃ ಪ್ರವಚನಪಟುಃ ಚಾಟುಲೋ ಜಲ್ಪಕೋ ವಾ
ದ್ಷ್ಧಷ್ಟಃ ಪಾರ್ಶ್ವೇ ಭವತಿ ಚ ವಸನ್ ದೂರತೋಪಿ ಪ್ರಗಲ್ಬಃ |
ಶಾಂತ್ಯಾ ಭೀರುಃ ಯದಿ ನ ಸಹತೇ ಪ್ರಾಯಶೋ ನಾಭಿಜಾತಃ
ಸೇವಾಧರ್ಮಃ ಪರಮಗಹನೋ ಯೋಗಿನಾಮಪ್ಯಗಮ್ಯಃ ||

ಮಿತಿಯಲ್ಲಿ ಮಾತನಾಡಿದರೆ  “ಮೂಕ
ಧಾರಾಳ ಮಾತನಾಡಿದರೆ    “
‘ಪ್ರವಚನ ಪಟು ಅಥವಾ ಹಲುಬುವವನು
ಪಕ್ಕದಲ್ಲೇ ನಿಂತರೆ               “
ಎಲ್ಲವೂ ಇವನದ್ದೇ ಆಯಿತು
ಎಲ್ಲೋ ಮರೆಯಲ್ಲಿದ್ದರೆ         “
ಊಟಕ್ಕೆ ಮಾತ್ರ ಬರುವವನು
ವಿನೀತನಾಗಿದ್ದರೆ                 “
ಪುಕ್ಕಲ
ಗಟ್ಟಿ ನಿಂತರೆ                       “
ಅಧಿಕ ಪ್ರಸಂಗಿ
ಸೇವಾಧರ್ಮವದೆಷ್ಟು ಗಹನವೆಂದರೆ ಯೋಗಿಗಳಿಗೂ ದುಸ್ಸಾಧ್ಯವಾದುದು (ನಮಗೂ ಹೀಗೆಯೇ ಅನಿಸಿದೆ.)

ಗುರುವೆಂದರೆ ರಾಮಕಿಂಕರ..
ಪರಿವಾರದವರು ಗುರುಕಿಂಕರರು..
ಅಂತವರ ಕುರಿತು ಸಮಾಜದ ಭಾವವೇನಿರಬೇಕೆಂಬುದನ್ನು ರಾಜಾ ಕುಲಶೇಖರನ ಮಾತುಗಳಲ್ಲಿ ಗಮನಿಸಿ..

ತ್ವದ್ಭೃತ್ಯ- ಭೃತ್ಯ- ಪರಿಚಾರಕ- ಭೃತ್ಯ-  ಭೃತ್ಯ-  ಭೃತ್ಯಸ್ಯ-  ಭೃತ್ಯ ಇತಿ ಮಾಂ ಸ್ಮರ ಲೋಕನಾಥ ||

” ಹೇ ಭಗವಂತ.. ನಿನ್ನ ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕನ-ಸೇವಕ ನಾನು ಎಂದೊಮ್ಮೆ ನೆನೆಸಿಕೊಂಡರೂ ಬದುಕು ಸಫಲ..”

ಹಿಂದೆಲ್ಲ ಹಿರಿಯರು ಮಠದಲ್ಲಿ ಓಡಿಯಾಡುವ ನಾಯಿಗಳನ್ನು ತೋರಿಸಿ “ಮಠದ ಹಳೆಯ ಸೇವಕರು” ಎಂದು ಪರಿಚಯಿಸುತ್ತಿದ್ದುದುಂಟು.
“ಹಾಗೆಂದರೆ” ಎಂಬ ಪ್ರಶ್ನೆಗೆ ” ಹಿಂದಿನ ಜನ್ಮದಲ್ಲಿ ಮಠದಲ್ಲಿ ಪರಿವಾರದವರೋ ಅಧಿಕಾರಿಗಳೋ ಆಗಿದ್ದು ಮಾಡಿದ ತಪ್ಪುಗಳ-
ಭಾರವನ್ನಿಳಿಸಲು ಈ ಜನ್ಮದಲ್ಲಿ ನಾಯಿಗಳಾಗಿ ಇಲ್ಲಿಗೆ ಬಂದಿರುವವರು” ಎಂದು ಉತ್ತರಿಸಿದುದುಂಟು..!

ಪರಿವಾರದಲ್ಲಿ ತಪ್ಪುಗಳೇ ನಡೆಯುವುದಿಲ್ಲವೆಂದಲ್ಲ,
ಅವರೂ ಮನುಷ್ಯರೇ ಅಲ್ಲವೆ?
ತಪ್ಪುಗಳೇ ಇಲ್ಲದುದೆಲ್ಲಿ?
ಸಂತರು ತಪ್ಪು ಮಾಡುವುದಿಲ್ಲವೇ?
ರಾಜರು ತಪ್ಪು ಮಾಡುವುದಿಲ್ಲವೇ?
ಸಾಮಾಜಿಕರು ತಪ್ಪು ಮಾಡುವುದಿಲ್ಲವೇ?
ನಮ್ಮ ಶರೀರದಲ್ಲಿಯೇ ಎಲ್ಲೋ ಒಂದೆಡೆ ರೋಗ  ಉಂಟಾದರೆ ಹೀಗಳೆಯುವುದುಂಟೇ… ಬಿಟ್ಟುಬಿಡುವುದಂಟೇ…?

ಬಾಹ್ಯ ಜಗತ್ತಿನ ಸಕಲ ಸುಖಸಾಧನಗಳ ಸೆಳೆತಗಳನ್ನು ಮೀರಿ, ಭೋಗಪರರಿಗೆ ಹೇಗೆ ನೋಡಿದರೂ ಶುಷ್ಕವೆನಿಸುವ ಮಠದ ವಾತಾವರಣದಲ್ಲಿ-
ಸೇವೆಗೈಯ್ಯಲು ಧಾವಿಸಿ ಬರುವ ಈ ಜೀವಿಗಳನ್ನು ಅದಾವುದು ಸೆಳೆಯಿತು..!?

ನಾಲ್ಕು ದಿನಕ್ಕೆಂದು ಬಂದು ಜೀವನವಿಡೀ ನಿಂತವರುಂಟು..
ಭೇಟಿ ಮಾಡಲು ಬಂದು ಭೇಟಿ ಮಾಡಿಸಲು ನಿಂದವರುಂಟು..
ಅದ್ಯಾವ ಬಗೆಯ ಸೆಳೆತವೋ!!

ಯಾವ ವೃಂದಾವನವು ಸೆಳೆಯಿತೊ ನಿನ್ನ ಮಣ್ಣಿನ ಕಣ್ಣನು..
ಯಾವ ವೃಂದಾವನವು ಚಾಚಿತೊ ತನ್ನ ಮಿಂಚಿನ ಕೈಯ್ಯನು
..
ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ..

ಪರಿವಾರವೆ೦ದರೆ ಗುರುದ್ವಾರ..
ಮುಚ್ಚಿದ್ದು ಮರೆಯದು…ತೆರದದ್ದು ನೆನಪೇ ಇರದು…

ಪರಿವಾರವೆ೦ದರೆ ಗುರುವಿನ ದಾರಿ..
ಗುರಿ ತಲುಪಿದ ಮೇಲೆ ದಾರಿಯ ಪರಿವೆ ಇಲ್ಲ..

ಪರಿವಾರವೆಂದರೆ ಗುರುವಿನ ಮೆಟ್ಟಿಲು..
ಮೆಟ್ಟಿಲು ಇರುವುದು ಮೂರ್ತಿಯ ಮುಟ್ಟಲು..
ಆದರೆ ಹಲವರ ಭಾವನೆ… ಮೆಟ್ಟಿಲು ಇರುವುದೇ
ಮೆಟ್ಟಲು..!

ಶಿವಾಜಿ ಹುಟ್ಟಿ ಬರಲೇ ಬೇಕು, ಆದರೆ ನಮ್ಮ ಮನೆಯಲ್ಲಲ್ಲವೆಂದರೆ ಹೇಗೆ?
ಆದಿಶಂಕರರು ಅವತಾರ ತಾಳಲೇ ಬೇಕು, ಆದರೆ ಪಕ್ಕದ ಮನೆಯಲ್ಲಿ ಎಂದರೆ ಸರಿಯೇ?
ನಮಗೆ ಮಠ ಬೇಕು, ಗುರು ಬೇಕು ಎಂದ ಮೇಲೆ ಪರಿವಾರವೂ ಬೇಕೇ ಬೇಕು..
ಒಮ್ಮೆ ಯೋಚಿಸಿ, ನಿಂತಲ್ಲಿ ಕುಳಿತಲ್ಲಿ ಪರಿವಾರವನ್ನು ವಿಮರ್ಶಿಸುವ ನಾವು ಆ ಕಾರ್ಯಕ್ಕೆ ನಮ್ಮ ಮಕ್ಕಳನ್ನು ಕಳುಹಿಸಿಕೊಡಲು ಸಿದ್ಧರಿದ್ದೇವೆಯೇ?

ರಾಮಬಾಣ:
ನಿ
ಮ್ಮ ಮುಂದೆ ಎರಡು ಆಯ್ಕೆಗಳು.
ನಿಮ್ಮ ಮಕ್ಕಳನ್ನು ಪರಿವಾರಕ್ಕೆ ಕಳುಹಿಸಿಕೊಡಿ.
ಅದು ಸಾಧ್ಯವಾಗದಿದ್ದರೆ..
ಪರಿವಾರದವರನ್ನು ನಿಮ್ಮ ಮಕ್ಕಳಂತೆ ನೋಡಿ..!

|| ಹರೇರಾಮ ||

Facebook Comments Box