ಒಂದಾನೊಂದು ಊರಿನಲ್ಲಿ ಧನಪಾಲ ಮತ್ತು ದಾನಶೀಲ ಎಂಬ ಶ್ರೀಮಂತರಿದ್ದರು..
ಇಬ್ಬರದೂ ಒಂದೇ ಊರಾದರೂ ಸ್ವಭಾವದಲ್ಲಿ ಆಕಾಶ ಭೂಮಿಗಳ ಅಂತರವಿದ್ದಿತು..
ಹೆಸರಿಗೆ ತಕ್ಕಂತೆ ಹಣಕೂಡಿಡುವುದರಲ್ಲಿ ಧನಪಾಲ ಸುಖಕಂಡರೆ, ದಾನಶೀಲನಿಗೆ ಹಂಚಿ ತಿನ್ನುವುದರಲ್ಲಿ ಪರಮಾನಂದ..!

ಹೊಟ್ಟೆ – ಬಟ್ಟೆ ಕಟ್ಟಿ, ಹೆಂಡತಿ ಮಕ್ಕಳನ್ನು ಉಪವಾಸ ಕೆಡವಿ ಧನಪಾಲ ಹಣ ಕೂಡಿಸುತ್ತಿದ್ದ.
ಹಾಗೆ ಕೂಡಿಸಿದ ಹಣವನ್ನು ಆಗಾಗ ಚಿನ್ನದರೂಪದಲ್ಲಿ ಪರಿವರ್ತಿಸಿ ಊರ ಹೊರಗಿನ ಕಾಡಿನಲ್ಲಿ ಮರವೊಂದರ ಬುಡದಲ್ಲಿ ಹೂತಿಡುತ್ತಿದ್ದ..

ಹೀಗೆ ಹೂತಿಟ್ಟ ಹಣವನ್ನುಆಗಾಗ ನೋಡಿ ಸಂತೋಷಪಡುವುದು ಅವನಿಗೆ ಅಭ್ಯಾಸವಾಗಿತ್ತು..
ಅತ್ತ ದಾನಶೀಲನಿಗಾದರೋ “ಉಣ್ಣು, ಉಡು, ಕೊಡು” ಎನ್ನುವುದೇ ಜೀವನ ಮಂತ್ರವಾಗಿತ್ತು..


ಸಮಯ ಸರಿಯಿತು..
ಧನಪಾಲನಲ್ಲಿ ಧನರಾಶಿಯೇ ಕೂಡಿತು..!
ದಾನಶೀಲನ ಸಂಪತ್ತೆಲ್ಲವೂ ಕರಗಿ ಹೋಯಿತು..!
ಒಂದು ದಿನ…ಮಳೆಸುರಿಸಿ ಬರಿದಾಗುವ ಮೋಡದಂತೆ,
ತನ್ನದೆಂಬುದೆಲ್ಲವನ್ನೂ ವಿತರಿಸಿ, ವಿನಿಯೋಗಿಸಿ, ಕೈ ಬರಿದಾದಾಗ, ನೀಡಲೇನೂ ಉಳಿಯದಾಗ.. ದಾನಶೀಲನಿಗೆ ಬದುಕು ನಿರರ್ಥಕವೆನಿಸಿತು..
ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿತು..
ಊರ ಹೊರಗಿನ ಕಾಡಿನೆಡೆಗೆ ಹೆಜ್ಜೆಹಾಕಿದ..
ಮರವೊಂದನ್ನು ಏರಿ, ಕೊಂಬೆಗೆ ಹಗ್ಗ ಬಿಗಿದು, ಕೊರಳಲ್ಲಿ ಕುಣಿಕೆಯನ್ನು ಧರಿಸಿ, ಜೀವನವಿಡೀ ನಂಬಿದ ಸತ್ಯವನ್ನು ನೆನೆಯುತ್ತಾ ಧುಮುಕಿದ..
ಏನಾಶ್ಚರ್ಯ..!!

Money Pot

ಬೆಳೆದವೋ - ಕೊಳೆದವೋ?!

ಗೋಣು ಮುರಿಯುವುದರ ಬದಲು ನೇಣಿನ ಕೊಂಬೆಯೇ ಮುರಿಯಿತು..!!!
ಮರದಿಂದ ಧರೆಗುರುಳುತ್ತಿದ್ದಂತೆಯೇ ಇನ್ನೊಂದು ಆಶ್ಚರ್ಯ ಕಾದಿತ್ತು..!
ಆತ ಬಿದ್ದ ಸ್ಥಳ ಟೊಳ್ಳಾಗಿತ್ತು..!
ಒಳಗೆ ನಿಧಿಯಿತ್ತು..!


ಧನಪಾಲನ ನಿಧಿಯದು..!!!


ಜೀವ – ಜಗದ ಮಿತ್ರನಾಗಿ ಬದುಕುವವನನ್ನು ಬದುಕು ಬದುಕೆಂದು ಬ್ರಹ್ಮಾಂಡವೇ ಹರಸುತ್ತದೆ..
ದಾನ ಶೀಲ ಸಾವಿಗೆಂದು ಆರಿಸಿಕೊಂಡ ಮರ ಅಮರನಾಗೆಂದು ಹರಸಿದರೆ..
ಬಿದ್ದ ನೆಲ ಬದುಕಿನಲ್ಲಿ ಆತ ಮತ್ತೊಮ್ಮೆ ಎದ್ದು ನಿಲ್ಲಲು ಆಶೀರ್ವದಿಸಿತು..!
ಆತನ ಪಾಲಿಗೆ  ಮಸಣವಾಗಬೇಕಿದ್ದ ಧರೆ – ವಸುಂಧರೆಯಾಯಿತು…!!
ವಿತರಣೆಗಾಗಿ ಶ್ರೀಮನ್ನಾರಾಯಣನೇ ಅನುಗ್ರಹಿಸಿದ ಲಕ್ಷ್ಮಿ ಇದು ಎಂಬ ಭಾವದಲ್ಲಿ ಸಂಪತ್ತಿನೊಡನೆ ದಾನಶೀಲ ಮರಳಿದ ಮೇಲೆ….
ಎಂದಿನಂತೆ ತಾನು ಹೂತಿಟ್ಟ ಹಣವನ್ನು ನೋಡಿ ಸಂತೋಷಪಡಲು ಬಂದ ಧನಪಾಲನನ್ನು ಶೂನ್ಯ ಸ್ವಾಗತಿಸಿತು..!!

ಲಕ್ಷ್ಮಿ ಕೈ ಬಿಟ್ಟು ಹೋಗಿದ್ದಳು..!
ನೇಣುಹಗ್ಗ ಕೈಬೀಸಿ ಕರೆಯುತ್ತಿತ್ತು..!!
ಧನಪಾಲನ ಎದೆ ಬಿರಿಯಿತು..!!
ಬದುಕು ಬೇಡವೆನಿಸಿತು..!
ದಾನ ಶೀಲ ಬಿಟ್ಟುಹೋದ ನೇಣುಹಗ್ಗದಿಂದಲೇ ಅದೇ ಮರದ ಇನ್ನೊಂದು ಕೊಂಬೆಗೆ ನೇಣು ಹಾಕಿಕೊಂಡನಾತ..!
ವಿಧಿ ಅದೆಷ್ಟು ವಿಚಿತ್ರವೋ..?

ಈ ಬಾರಿ ಕೊಂಬೆ ಮುರಿಯಲೇ ಇಲ್ಲ……!!!!!


ರಾಮಬಾಣಸಂಪತ್ತು ಹರಿದರೆ ಬೆಳೆಯುತ್ತದೆ – ನಿಂತರೆ ಕೊಳೆಯುತ್ತದೆ..

ವಿವರಣೆ ಈಗ ನಿಮ್ಮಿಂದ, ಮುಂದಿನವಾರ ನಮ್ಮಿಂದ…!

Facebook Comments