||ಹರೇರಾಮ||

ಸೋಮುವಿಗೆ ಆಕಸ್ಮಿಕವಾಗಿ ಯಮದೂತನ ಪರಿಚಯವಾಯಿತು….
ಮಾತನಾಡಿ ಮಾತನಾಡಿ ಅವರೀರ್ವರಲ್ಲಿ ಗಾಢವಾದ ಸ್ನೇಹ ಬೆಳೆಯಿತು..
ಬೀಳ್ಕೊಡುವ ಹೊತ್ತು ಬಂದಾಗ ಯಮದೂತ ಸೋಮುವಿಗೆ ಹೇಳಿದ..

“ಗೆಳೆಯಾ,ನನ್ನಿಂದ ಏನಾದರೂ ಸಹಾಯವಾಗಬೇಕಿದ್ದರೆ ಹೇಳು”..

“ನನಗೆ ಸಾವೇ ಇಲ್ಲದಂತೆ ಮಾಡುವೆಯಾ?” – ಸೋಮು ಕೇಳಿದ..!

“ಅದಾಗದು,ನನ್ನ ಕೈಮೀರಿದ ವಿಷಯವದು. ಬೇರೇನಾದರೂ ಕೇಳು”.

“ಹಾಗಿದ್ದರೆ ಕೊನೆಯಪಕ್ಷ ವರುಷಗಳ ಮೊದಲೇ ಸಾವಿನ ಮುನ್ಸೂಚನೆಯನ್ನಾದರೂ ನನಗೆ ನೀನು ಕೊಡಬೇಕು;
ಮತ್ತು ಕರೆದುಕೊಂಡು ಹೋಗಲು ನೀನೇ ಬರಬೇಕು…!!!”

“ತಥಾಸ್ತು…”
ಯಮದೂತ ತನ್ನ ಲೋಕಕ್ಕೆ ಪ್ರಯಾಣ ಬೆಳೆಸಿದ. . .

ಬಹಳ ಕಾಲ ಕಳೆಯಿತು.
ಸೋಮು ಈಗ ಮುಪ್ಪಿನ ಮುದುಕ..!
ಅದೊಂದು ದಿನ ಮತ್ತೆ ಯಮಲೋಕದ ಗೆಳೆಯನ ಆಗಮನವಾಯಿತು….!!

“ಏನು ಬಂದೆ ಗೆಳೆಯಾ ಬಹಳ ಕಾಲದ ನಂತರ…?”

“ಮಾತು ಕೊಟ್ಟಿದ್ದೆನಲ್ಲವೇ? ನಿನಗೆ ಸಾವು ಸನ್ನಿಹಿತವಾಗಿದೆ. ಕರೆದೊಯ್ಯಲು ನಾನೇ ಬಂದೆ..”

ಸೋಮುವಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದ ಅನುಭವ…!!
ವರುಷಗಳ ಮೊದಲೇ ತನಗೆ ಸಾವಿನ ಸೂಚನೆ ಸಿಗುವುದೆಂದೂ,ಮತ್ತುಳಿದ ಸಮಯದಲ್ಲಿ ಮತ್ತುಳಿದ ಆಸೆಗಳೆಲ್ಲವನ್ನೂ (ತಿನ್ನುವ,ತಿರುಗುವ,ಕುಡಿಯುವ,..ಇತ್ಯಾದಿ ಇತ್ಯಾದಿ . . .!) ಪೂರೈಸಿಕೊಳ್ಳಬಹುದೆಂದು ಆತ ಭಾವಿಸಿಕೊಂಡಿದ್ದ..
ಆದರೀಗ ಏಕಾಏಕಿ ಸಾವೇ ಎದುರು ಬಂದು ನಿಂತಾಗ ಗೆಳೆಯನ ಮೇಲೆ ಆಕ್ರೋಶವೇ ಉಂಟಾಯಿತು…

“ಹೀಗೂ ಮಿತ್ರದ್ರೋಹ ಮಾಡುವುದುಂಟೆ..!? ಮೇಲಿನ ಲೋಕದವರೂ ಮಾತಿಗೆ ತಪ್ಪಬಹುದೆ?
ಕೊಟ್ಟ ಮಾತಿನಂತೆ ಸಾವಿನ ಮುನ್ಸೂಚನೆಯನ್ನು ನನಗೆ ನೀನು ಕೊಡಬೇಕಿತ್ತಲ್ಲವೇ…?”

ಯಮದೂತನಿತ್ತ ಉತ್ತರ ಸೋಮುವಿನ ಮಾತ್ರವಲ್ಲ, ಸಕಲ ಮಾನವಕೋಟಿಯ ಕಣ್ತೆರೆಸುವ ಹಾಗಿತ್ತು…!!
ಮುಪ್ಪಿನ ಬಗ್ಗೆ ಅಪೂರ್ವವಾದ ,ಅತ್ಯಾಶ್ಚರ್ಯಕರವಾದ ವಿವರಣೆಯೊಂದನ್ನು ಅದು ಒಳಗೊಂಡಿತ್ತು…

“ಗೆಳೆಯಾ, ಅದೆಷ್ಟೋ ಬಾರಿ ಸಾವಿನ ಸೂಚನೆಗಳನ್ನು ನಿನಗೆ ನಾನು ಕೊಟ್ಟೆ. ಆದರೆ ಅವುಗಳನ್ನು ನೀನು ಅರ್ಥ ಮಾಡಿಕೊಳ್ಳಲಿಲ್ಲ.
ಮಾತ್ರವಲ್ಲ, ಕೃತ್ರಿಮ ವಿಧಾನಗಳಿಂದ ಆ ಸೂಚನೆಗಳನ್ನೇ ಮರೆಮಾಡಿ ಸುಳ್ಳು ವಿಶ್ವಾಸದಲ್ಲಿ ನೀನು ಬದುಕಿದರೆ ನಾನೇನು ಮಾಡಲಿ..?

ಮೊಟ್ಟಮೊದಲು ನಾನು ನಿನ್ನ ಕೂದಲನ್ನು ಬಿಳಿಯಾಗಿಸಿದೆ – ಆದರೆ ಅವುಗಳಿಗೆ ನೀನು ಕರಿಬಣ್ಣ ಹಚ್ಚಿದೆ…!!

ಮತ್ತೆ ನಿನ್ನ ಕಣ್ಣಿನ ಶಕ್ತಿಯನ್ನು ಕುಂದಿಸಿದೆ – ಆದರೆ ನೀನು ಕನ್ನಡಕ ಹಾಕಿಕೊಂಡೆ…!!

ಆಮೇಲೆ ನಿನ್ನ ಶ್ರವಣಶಕ್ತಿಯನ್ನು ಶಿಥಿಲಗೊಳಿಸಿದೆ – ಆದರೆ ನೀನು ಶ್ರವಣಸಾಧನವನ್ನು ಬಳಸಿದೆಯೇ ಹೊರತು, ನನ್ನ ಸೂಚನೆಯನ್ನರಿಯಲಿಲ್ಲ..!!

ನಂತರ ನಿನ್ನ ಹಲ್ಲುಗಳನ್ನು ಬೀಳಿಸಿದೆ – ನಿನ್ನ ಬಾಯಲ್ಲಿ ಕೃತಕ ಹಲ್ಲುಗಳು ಪ್ರತ್ಯಕ್ಷವಾದವು…!!

ನಾ ನಿನ್ನ ಚರ್ಮವನ್ನು ಸುಕ್ಕಾಗಿಸಿ ಸೌಂದರ್ಯ ಕೆಡಿಸಿದೆ – ಆದರೆ ನೀನು ‘ಮೇಕಪ್’ ಎಂಬ ಚಮತ್ಕಾರದ ಮೂಲಕ ನಾನಿನ್ನೂ ಯುವಕನೆಂಬ ಭ್ರಮೆಯನ್ನು ನೋಡುಗರಲ್ಲಿ ಮೂಡಿಸಲು ಯತ್ನಿಸಿದೆ…!!

ಸೂಚನೆಯ ಸಂದೇಶವನ್ನು ನೀನರಿಯದಿದ್ದರೆ ಅದಕ್ಕೆ ಬೇರೆ ಯಾರು ಹೊಣೆಯಾಗಲು ಸಾಧ್ಯ..?”

ಸೋಮುವಿನ ಬಳಿ ಉತ್ತರವಿರಲಿಲ್ಲ…!!
ಸತ್ಯ ಅರ್ಥವಾಗಿತ್ತು…!
ಆದರೆ ಸಮಯ ಮಿಂಚಿತ್ತು….!!

ನಮಗೆ ಇಷ್ಟವೇ ಇರದ, ಆದರೆ ಬದುಕಿನಲ್ಲಿ ಬಂದೇ ಬರುವ ಒಂದು ಅವಸ್ಥೆಯೆಂದರೆ ..ಮುಪ್ಪು..!!
ಮುಪ್ಪು ಕೆಡುಕಲ್ಲ.. ಮುಕ್ತಾಯದ ಮುನ್ಸೂಚನೆಯದು…!!
ಬದುಕು ಮೃತ್ಯುವಿನಲ್ಲಿ ಮುಕ್ತಾಯವಾಗಬಾರದು. . . .  ಮುಕ್ತಿಯಲ್ಲಿ ಮುಕ್ತಾಯವಾಗಬೇಕು…..!
‘ಮುಕ್ತಿ ಸಿದ್ಧತೆಯ ಸಮಯ ಮೀರುತ್ತಿದೆ’ ಎಂಬ ಎಚ್ಚರಿಕೆಯ ಘಂಟೆಯಿದು….!!
ಹಣವೆಂಬ ಸಂಪತ್ತು ಹೋದರೆ ಮತ್ತೆ ಬರಬಹುದು – ಆದರೆ ಸಮಯವೆಂಬ ಸಂಪತ್ತು ಮತ್ತೆ ಬರಲಾರದು…!!
ಮುಪ್ಪೆಂಬುದು ಈಶ್ವರನ ಭಾಷೆ

ರೈಲು ಪ್ರಯಾಣದಲ್ಲಿ ಇಳಿಯುವ ಸ್ಥಳ ಸಮೀಪಿಸುತ್ತ್ತಿದ್ದರೂ ಇನ್ನೂ ಮಲಗಿರುವ ಮಗುವನ್ನು ತಾಯಿ ತಟ್ಟಿ ಎಬ್ಬಿಸುವುದಿಲ್ಲವೇ..?
ಜೀವನವಾಹನವಾದ ದೇಹವನ್ನೇ ನಾವು ಬಿಟ್ಟು ಹೋಗುವ ಸಮಯ ಹತ್ತಿರ ಬರುವಾಗ ಸಿದ್ಧತೆಗಳಿಗಾಗಿ ಈಶ್ವರನು ನಮ್ಮನ್ನು ಬಡಿದೆಬ್ಬಿಸುವ ರೀತಿಯದು…!

ರಾತ್ರಿ ಮಲಗುವಾಗ ಅಲಾರ್ಮ್ ಇಟ್ಟುಕೊಳ್ಳುವುದುಂಟು..
ಅದು ಬೆಳಿಗ್ಗೆ ಕೂಗಿ ನಮ್ಮನ್ನೆಚ್ಚರಿಸುವಾಗ ಕಿರಿಕಿರಿಯೆನ್ನಿಸುವುದುಂಟು…
ಅಲಾರ್ಮ್ ಕೆಟ್ಟದಲ್ಲ…!!
‘ನಿದ್ದೆಯ ಸಮಯ ಮುಗಿಯಿತು,ಎಚ್ಚರದ ಸಮಯ ಆರಂಭವಾಯಿತು’ ಎನ್ನುವ ಸೂಚನೆಯದು..!!
ಮುಪ್ಪೆಂಬುದು ನಮಗಾಗಿ ಈಶ್ವರನಿಟ್ಟ ಅಲಾರ್ಮ್….!!

ಬಾಲ್ಯ ಆಟದಲ್ಲಿ ಮುಗಿಯಿತು…..
ಯೌವನ ಹುಡುಗಾಟದಲ್ಲಿ…..
ಇಲ್ಲಿ ನಿಜದ ಹುಡುಕಾಟಕ್ಕೆ ಎಡೆಯೆಲ್ಲಿ…?!!

ನಮ್ಮ ಮೈಮರೆವಿನ ನಿದ್ದೆಯನ್ನು ಕಳೆಯಲು…
ಬದುಕಿನ ಸಾರ್ಥಕತೆಯ ಹುಡುಕಾಟಕ್ಕೆ ತೊಡಗಿಸಲು,
ಪ್ರತಿಯೊಂದು ಜೀವಿಯ ಶರೀರದಲ್ಲಿಯೂ ದೇವರು ಮುಪ್ಪೆಂಬ ಎಚ್ಚರಿಕೆ ಗಂಟೆಯನ್ನು ಅಳವಡಿಸಿದ್ದಾನೆ…!!

ಮುಪ್ಪೆಂಬುದು ನಮ್ಮ ಕುರಿತು ಈಶ್ವರನಿಗಿರುವ ಕಾಳಜಿಯ ಪ್ರತೀಕ..!
ಅಡುಗೆ ಮಾಡುವಾಗ ಎದ್ದು, ಕುಳಿತು, ಓಡಾಡಿ, ಗಡಿಬಿಡಿಯಲ್ಲಿ ದುಡಿಯುತ್ತಾನೆ ಮನುಷ್ಯ…!
ಆದರೆ ಊಟ ಮಾಡುವಾಗ ಶಾಂತವಾಗಿ ಕುಳಿತು ಅಡುಗೆಯನ್ನು ಆಸ್ವಾದಿಸುತ್ತಾನೆ…!!
ಬಾಲ್ಯ-ಯೌವನಗಳು ಜೀವನದ ಅಡುಗೆಯಿದ್ದಂತೆ. . !
ಅಲ್ಲಿ ಗಡಿಬಿಡಿ ದುಡಿಮೆಗಳಿವೆ..!!
ಮುಪ್ಪಿರುವುದು ಶಾಂತವಾಗಿ ಬದುಕನ್ನು ಆಸ್ವಾದಿಸಲು…!

ಮುಪ್ಪಿನಲ್ಲಿ ಕಣ್ಣು ಮಂಜಾಗುತ್ತದೆ…
ಕಿವಿ ಮಂದವಾಗುತ್ತದೆ…
ಹಲ್ಲುಗಳು ಶಿಥಿಲವಾಗುತ್ತವೆ…
ದೇಹ ದುರ್ಬಲವಾಗುತ್ತದೆ…
ಹೀಗೆ ಬಾಹ್ಯಶರೀರ ಮತ್ತು ಬಹಿರಿಂದ್ರಿಯಗಳೆಲ್ಲವೂ ಕ್ಷೀಣಿಸುತ್ತವೆ…
ಆದರೆ ಅಂತರಂಗ ಕ್ಷೀಣಿಸುವುದಿಲ್ಲ…..!
ಅದು ಅನುಭವದಿಂದ ಇನ್ನಷ್ಟು ಪಕ್ವವಾಗುತ್ತದೆ…!!
ಅನಗತ್ಯ ವೇಗ ಕಳೆದು ಮನಸ್ಸಿಗೊಂದು ಸಮತೋಲನ ಬರಬೇಕಾದ ಕಾಲವದು…

ಬಗೆದು ನೋಡಿದರೆ ಇದರ ಅರ್ಥ “ಅಂತರ್ಮುಖಿಯಾಗು ಎಂದೇ ಅಲ್ಲವೇ…?
ಹೊರಜಗತ್ತಿನೆಡೆಗೆ ಇಂದ್ರಿಯಗಳು ಹರಿಯುವುದು ಅಲ್ಲಿಯ ಸೌಂದರ್ಯವನ್ನು ಸವಿಯಲು – ಆನಂದವನ್ನು ಮೊಗೆಯಲು . . !!
ಆದರೆ, ಅದಕ್ಕಿಂತ ಅದೆಷ್ಟೋ ಮಿಗಿಲಾದ ಆನಂದ-ಸೌಂದರ್ಯಗಳ ನಿಧಿ ನಮ್ಮೊಳಗೇ ಇದೆ!

ಮಾಯೆಯ ಮೋಸವಿದು. . !!

ಆನಂದ-ಸೌಂದರ್ಯಗಳ ತುಣುಕುಗಳನ್ನು ತೋರಿಸಿ ಹೊರಪ್ರಪಂಚದೆಡೆಗೆ ನಮ್ಮನ್ನು ಸೆಳೆದು, ನಮ್ಮೊಳಗೇ ಇರುವ ಆನಂದ ಸೌಂದರ್ಯಗಳ ರಾಶಿಯಿಂದ ನಮ್ಮನ್ನು ವಂಚಿತರನ್ನಾಗಿ ಮಾಡುವುದು…!!

ಈಶ್ವರನ ಕರುಣೆಯಿದು…!!

ಮುಪ್ಪಿನ ಮೂಲಕ ನಮ್ಮ ಬಹಿರಿಂದ್ರಿಯಗಳೆಲ್ಲವನ್ನೂ ಶಿಥಿಲಗೊಳಿಸಿ,
ಅಂತರ್ಮುಖಿಯಾಗಲು ಬೇಕಾದ ಸಕಲ ಸೌಲಭ್ಯಗಳನ್ನೂ ಕಲ್ಪಿಸುವುದು..?

ನಮ್ಮ ಮೂರ್ಖತೆಯಿದು….!!!

ಸೂಚನೆಯ ಸಂದೇಶವನ್ನರಿಯದೆಯೇ – ಭ್ರಮೆಯಲ್ಲಿಯೇ ವಿಹರಿಸಲೆಳಸುವುದು. . . !!

ಜಾನಪದ ಪದ್ಯವೊಂದು ನೆನಪಾಗುತ್ತಿದೆ…..

>ಮಕ್ಕಳಾಟಿಕೆ ಚಂದ….
ಮತ್ತೆ ಯೌವನ ಚಂದ……
ಮುಪ್ಪಿನಲಿ ಚಂದ ನರೆಗಡ್ಡ…..!!

ಈ ಪದ್ಯದಲ್ಲಿರುವಂತೆ ಯಾವುದೂ ಇಂದು ನಡೆಯುತ್ತಿಲ್ಲವೆನ್ನುವುದೇ ನಮ್ಮ ವಿಷಾದದ ವಿಷಯ…

ಮಕ್ಕಳಾಟಿಕೆ ಚಂದ….

ಮಕ್ಕಳು ಸ್ವತಂತ್ರ ಹಕ್ಕಿಗಳಂತೆ,ತಾಯಿಯ ಹಾಲ್ಕುಡಿದ ಪುಟ್ಟ ಕರುಗಳಂತೆ ನಲಿಯುತ್ತಿದ್ದರೇ ಚೆನ್ನ…!
ಆದರೆ ತಂದೆ-ತಾಯಂದಿರಿಗೆ ಮಕ್ಕಳು ಆಟವಾಡಿದರೆ ಕೋಪವೇ ಬರುತ್ತದೆ…!!
ಮಕ್ಕಳು ಗಂಭೀರವಾಗಿರಬೇಕೆಂದೂ,ದೊಡ್ಡವರ ಹಾಗೆ ಜವಾಬ್ಧಾರಿಯುತರಾಗಿರಬೇಕೆಂದೂ, ದಿನವಿಡೀ ಓದಬೇಕೆಂದೂ ಕಂಡಕಂಡ ದೇವರಲ್ಲಿ ಹರಕೆ ಹೊರುತ್ತಾರೆ…!!
ಆದರೆ ಒಮ್ಮೆ ಕಳೆದುಹೋದ ಆಟದ ವಯಸ್ಸು ಮತ್ತೆ ಬರುವುದೇ…?
ಮಕ್ಕಳು ಮುದುಕರಾದ ಮೇಲೆ ಆಟವಾಡಬೇಕೆ..? (ಅಲ್ಲಿಯವರೆಗೂ ಆಟವಾಡಲು ಬಿಡುವೆಲ್ಲಿ…?!!)

ಮತ್ತೆ ಯೌವನ ಚಂದ…

ಯೌವನ ಚಂದ….ಆದರೆ ಅದು ಬರುವಾಗ ಬರಬೇಕು…!
ತಿನ್ನುವ ಅನ್ನವೇ ನಮ್ಮ ಮನಸ್ಸಾಗುತ್ತದೆ..ನಮ್ಮ ಸ್ವಭಾವವಾಗುತ್ತದೆ ಎನ್ನುತ್ತಾರೆ ಪ್ರಾಜ್ಞರು…
ನಮ್ಮ ಆಹಾರದಲ್ಲಿ ಹೈಬ್ರೀಡಿನದ್ದೇ ಸಿಂಹಪಾಲು…!!
ಹೈಬ್ರೀಡೆಂದರೆ ಅನೈಸರ್ಗಿಕವಾಗಿ – ಸಮಯಕ್ಕೆ ಮೊದಲೇ ಬರುವ ಬೆಳೆಯಲ್ಲವೇ…?
ಅದನ್ನೇ ತಿಂದರೆ ಮತ್ತೇನಾಗಬೇಕು…?
ಜೊತೆಗೆ ವಾತಾವರಣದ ಕುಮ್ಮಕ್ಕು ಬೇರೆ….!!
ಹೀಗಾಗಿ…….
ಐದು ವರ್ಷಕ್ಕೇ ಯೌವನ …….
ಇಪ್ಪತ್ತೈದು ವರ್ಷಕ್ಕೇ ವೃದ್ಧಾಪ್ಯ….
ಮುವತ್ತೈದು ವರ್ಷಕ್ಕೇ ಸತ್ತು, ಮತ್ತೆ ಜೀವನವಿಡೀ ಜೀವಚ್ಛವವಾಗಿ ಬದುಕಿರುತ್ತಾರೆ….!!!
ಅವಸ್ಥೆ ಯಾವುದಾದರೂ – ಬರುವ ಸಮಯಕ್ಕೆ ಬಂದರೆ; ಇರುವ ಹಾಗೇ ಇದ್ದರೇ – ಚಂದ ಅಲ್ಲವೇ….?

ಮುಪ್ಪಿನಲಿ ಚಂದ ನರೆ ಗಡ್ಡ….
ಕಾಯಿ ಹಣ್ಣಾಗುವಾಗ ಬಣ್ಣ ಬೇರಾಗುತ್ತದೆ…
ಭಿನ್ನ ಪರಿಮಳ ಬರುತ್ತದೆ…
ಮೃದುತ್ವವೇರ್ಪಡುತ್ತದೆ….
ಅಂತರಂಗ ಮಧುರವಾಗುತ್ತದೆ…!!!

ಇದೆಲ್ಲವೂ ಪಕ್ವತೆಯ ಲಕ್ಷಣಗಳು….
ಮನೆಗೆ ತರುವಾಗ, ಸವಿದು ತಿನ್ನುವಾಗ, ಕಾಯಿಗಳನ್ನು ಪಕ್ಕಕ್ಕಿಟ್ಟು ಹಣ್ಣುಗಳನ್ನೇ ಇಷ್ಟಪಟ್ಟು ಆರಿಸುವ ನಮಗೆ…
ನಮ್ಮದೇ ಜೀವನದಲ್ಲಿ ಪಕ್ವತೆ ಏರ್ಪಡುವಾಗ ಅದೇಕೆ ಜಿಗುಪ್ಸೆಯೋ…..?!!
ಮನುಷ್ಯನೂ ಹಣ್ಣಾಗುವಾಗ ಆತನ “ಬಣ್ಣ“ಬೇರಾಗಬೇಕು..!!
ಅನುಭವದ ಸುಗಂಧ ಸೂಸಬೇಕು…!!

ಅಂತರಂಗ ಮೃದು-ಮಧುರವಾಗಬೇಕು….!!!
ಅದೇಕೆ ಮುಚ್ಚಬೇಕೋ ಮುಪ್ಪನ್ನು…?
ಕಪ್ಪೆಂದರೆ ತಮೋಗುಣ…ಬಿಳಿ ಎಂದರೆ ಸತ್ವಗುಣ….
ಮಸ್ತಿಷ್ಕ ತಮಸ್ಸಿನಿಂದ ಸತ್ವದೆಡೆಗೆ ಸಾಗಬೇಕಿರುವುದನ್ನು ತೋರಿಸಲು, ಕೂದಲಿನ ಕಪ್ಪು ಹೋಗಿ ಬಿಳಿ ಬರುತ್ತದೆ . . .!!
ಬಿಳಿ ತಲೆಗೆ ಕರಿವಿಷ ಹಾಕಿ ಕಪ್ಪು ಮಾಡಿದರೆ…..ಆಗುವ ಲಾಭ ಬರಿಯ ಭ್ರಮೆ ಮಾತ್ರ . . .!
ತಲೆಯೊಳಗಿಳಿಯುವುದು ವಿಷ – ಆತ್ಮಕ್ಕಾಗುವುದು ವಂಚನೆ…
ನೋಡುಗನಲ್ಲುಂಟಾಗುವುದು ಭ್ರಮೆ…!!!

ಸಹಜತೆಯಷ್ಟು ಚಂದ ಈ ಜಗತ್ತಿನಲ್ಲಿ ಬೇರಾವುದೂ ಇಲ್ಲ….!!

ಸೃಷ್ಟಿಯನ್ನು ನೋಡಿ….!!

ಸೂರ್ಯನ ಬೆಳಕು . .
ಚಂದ್ರನ ತಂಪು . . .
ಅಗ್ನಿಯ ಬಿಸಿ . . .
ಆಕಾಶದ ಅನಂತತೆ. . .
ಹಿಮಾಲಯದ ಔನ್ನತ್ಯ . . .
ಸಾಗರದ ಆಳ……
ಇವುಗಳೆಲ್ಲವೂ ಸಹಜತೆಯ ಸೊಗಸುಗಳು….!!!!

ಕಾಡು ನೋಡಿ….!!

ಕೋತಿಯ ಬಾಲ…
ಆನೆಯ ಸೊಂಡಿಲು…
ಘೇಂಡಾಮೃಗದ ಕೊಂಬು…
ಸಿಂಹದ ಕೇಸರ…..
ನವಿಲಿನ ಗರಿ……
ಹಾವಿನ ಹೆಡೆ…….
ಇವೆಲ್ಲವೂ ಸಹಜತೆಯ ಸೊಗಸುಗಳು….!!!

ನಾಡು ನೋಡಿದರೆ…….?

…….!?
…… !?
……!?
…..!?

ಮೆರೆಯೋಣ ಸಹಜತೆಯ…..
ಮರೆಯೋಣ ಕೃತಕತೆಯ…..
ಅರಿಯೋಣ “ಜರೆ”ಯ ಸಾರ-ಸಂದೇಶಗಳ….
ಕಳೆಯಿತೈ ಬಹುಕಾಲ…
ಕದ ತಟ್ಟುತಿಹ “ಕಾಲ”….!
ಕಳವಳವ ಬಿಟ್ಟೇಳು…
ನಡೆ ಸತ್ಯದೆಡೆಗೆ….!!

||ಹರೇರಾಮ||

Facebook Comments