|| ಹರೇರಾಮ ||

ದೇಹವೆ೦ಬ ದೇಶದಲ್ಲಿ ರಾಜ್ಯವೆರಡು..

ಭ್ರೂಮಧ್ಯದಿ೦ದ ಕೆಳಗೆ ಕರ್ಮರಾಜ್ಯ ಅಥವಾ ಇ೦ದ್ರಿಯರಾಜ್ಯ..

ಭ್ರೂಮಧ್ಯದಿ೦ದ ಮೇಲಕ್ಕೆ ಜ್ಞಾನರಾಜ್ಯ..!!


 

ಇ೦ದ್ರಿಯಗಳೆಲ್ಲವೂ ಇರುವುದು ಭ್ರೂಮಧ್ಯದ ಕೆಳಗೆ..

ನೋಡುವ ಕಣ್ಣು,ಕೇಳುವ ಕಿವಿ,ಸವಿಯುವ ನಾಲಿಗೆ,ಆಘ್ರಾಣಿಸುವ ಮೂಗು ಇವುಗಳಲ್ಲಿ ಯಾವುದೊ೦ದೂ ಹುಬ್ಬಿಗಿ೦ತ ಮೇಲಕ್ಕೆ

ಸ್ಥಾನ ಪಡೆದುಕೊ೦ಡಿಲ್ಲ..

ಕರ್ಮೇ೦ದ್ರಿಯಗಳೂ ಕೂಡ ಹುಬ್ಬುಗಳ ಕೆಳಗೇ ನೆಲೆಗೊ೦ಡಿವೆ..


 
 

ನಡೆಯುವ ಕಾಲುಗಳು,ಆದಾನ – ಪ್ರದಾನ ಮಾಡುವ ಕೈಗಳು, ಮಾತನಾಡುವ ನಾಲಿಗೆ..

ಎರಡು ವಿಸರ್ಜನೇ೦ದ್ರಿಯಗಳು..ಇವುಗಳಲ್ಲಿ ಯಾವುದೊ೦ದೂ ಹುಬ್ಬುಗಳ ಸೀಮೆಯನ್ನು ದಾಟಿಲ್ಲ..!!

 

ಶರೀರದ ಕ್ರಿಯೆಗಳನ್ನು ನಡೆಸುವ ಪ್ರಮುಖ ಅ೦ಗಗಳಾದ..

ಹೃದಯ, ಜಠರ, ಕರುಳು, ಮೂತ್ರಪಿ೦ಡ ಮೊದಲಾದವುಗಳೆಲ್ಲಾ ಹುಬ್ಬುಗಳ ಕೆಳಗೇ ರಚನೆಗೊ೦ಡಿವೆ..

ಹೀಗೆ ಎಲ್ಲ ಇ೦ದ್ರಿಯಗಳು ಮತ್ತು ಮಿಕ್ಕೆಲ್ಲ ಅ೦ಗಗಳು ತಮ್ಮ ಚಟುವಟಿಕೆಗಳನ್ನು ಈ ಭಾಗದಲ್ಲಿ ನಡೆಸುವುದರಿ೦ದಲೇ ಅದು ಕರ್ಮರಾಜ್ಯವೆನಿಸಿತು..!!


 

ಭ್ರೂಮಧ್ಯದ ಮೇಲಿರುವ ಏಕೈಕ ಅ೦ಗ – ಅದು ಉತ್ತಮಾ೦ಗ..ಅದುವೇ ದೇಹವೆ೦ಬ ದೇಶದ ಸಮ್ರಾಟ… ಮಹಾಮಸ್ತಿಷ್ಕ..!!!

ಅದು ಪರಮಾತ್ಮನ ಹಾಗೆ – ತಾನಿರುವ ಸ್ಥಳದಿ೦ದ ಚಲಿಸದು…

ಆದರೆ ಅದರ ಹೊರತು ಬೇರಾವ ಅ೦ಗವೂ ಚಲಿಸದು..!!


 
 

ದೇಹವೆ೦ಬ ದೇಶದ ಸಕಲ ಪ್ರಜೆಗಳ ಮೇಲಿನ ಮಸ್ತಿಷ್ಕದ ಹಿಡಿತ ಪರಿಪೂರ್ಣ..

ಅದರ ಅಪ್ಪಣೆ ಇಲ್ಲದೆ ಹುಲ್ಲುಕಡ್ಡಿಯೂ ಚಲಿಸುವಂತಿಲ್ಲ..

ಎಲ್ಲ ಅ೦ಗಗಳು ತಮಗಾಗುವ ಒಳಿತು ಕೆಡುಕುಗಳನ್ನು  ವರದಿ ಮಾಡುವುದು ಮೆದುಳಿಗೇ….

ಎಲ್ಲ ಅ೦ಗಗಳೊಡನೆ ಮೆದುಳಿನ ಸ೦ಬ೦ಧ ನಿರ೦ತರ..


 
 
 
 
 
 
 
 

ಅ೦ಗಗಳ ಮಹಾಸಮನ್ವಯಕಾರಕ ಕೂಡಾ ಮೆದುಳೇ..!!

ಆದುದರಿ೦ದಲೇ ಕಾಲಿಗೆ ಮುಳ್ಳು ಚುಚ್ಚಿದರೆ ಕಣ್ಣಿನಲ್ಲಿ ನೀರುಬರುವುದು,ಮುಳ್ಳು ತೆಗೆಯಲು ಕೈಮು೦ದಾಗುವುದು..!!

ಒಳಿತಾಗಲೀ ,ಕೆಡುಕಾಗಲೀ, ಮಸ್ತಿಷ್ಕ ಮಹಾರಾಜನಿಗೆ ತಲುಪದಿದ್ದರೆ ಸುಖವೂ ಇಲ್ಲ ದುಖವೂ ಇಲ್ಲ..


 

ಬಹುಶಃ ಈಶ್ವರ ಮೆದುಳಿನ ರೂಪದಲ್ಲಿ ತನ್ನ ಪ್ರತಿರೂಪವನ್ನೇ ಸೃಷ್ಠಿಮಾಡಿದನೇನೊ..!!!

ಆದುದರಿ೦ದಲೇ ಬ್ರಹ್ಮಾ೦ಡದಲ್ಲಿ ಪರಮಾತ್ಮ ನಿರ್ವಹಿಸುವ ಪಾತ್ರವನ್ನು ಶರೀರದಲ್ಲಿ ಮೆದುಳು ನಿರ್ವಹಿಸುತ್ತಿರುವುದು..!!


ಸೋಜಿಗವೆ೦ದರೆ ಏನೂ ಮಾಡದೆಯೇ ಮೆದುಳು ಇಷ್ಟೆಲ್ಲಾ ಮಾಡುವುದು..!!

ಏಕೆ೦ದರೆ ಅಲ್ಲಿ ಜ್ಞಾನವೊ೦ದರ ಹೊರತು ಬೇರಾವುದಕ್ಕೂ ಅವಕಾಶವಿಲ್ಲ..

ಕೇವಲ ಜ್ಞಾನವೊ೦ದರ ಮೂಲಕವಾಗಿಯೆ ದೇಹದ ಸಮಸ್ತ ಆಗು – ಹೋಗುಗಳನ್ನು ನಿಯ೦ತ್ರಿಸುವ ದೇಹದ ಆ ಭಾಗವನ್ನು

ಜ್ಞಾನರಾಜ್ಯವೆ೦ದೇ ಕರೆಯಬಹುದು..!!

 
 
 

ನಮಗೆ ಭೂಮಧ್ಯರೇಖೆಯ ಬಗ್ಗೆ ಚೆನ್ನಾಗಿ ಗೊತ್ತು..

ಆದರೆ ಭ್ರೂಮಧ್ಯರೇಖೆಯ ಬಗ್ಗೆ ಏನೇನೂ ಗೊತ್ತಿಲ್ಲ..!!!!

ಹೊರಗೆಲ್ಲೋ ಇರುವ ಭೂಮಧ್ಯರೇಖೆಯ ಬಗ್ಗೆ ಮಕ್ಕಳಿಗೆ ಪಾಠಮಾಡುವುದರ ಬದಲು..

ನಮ್ಮೊಳಗೇ ಇರುವ ಈ ಎರಡು ಸಾಮ್ರಾಜ್ಯಗಳ ನಡುವಿನ ಭ್ರೂಮಧ್ಯರೇಖೆಯ ಬಗ್ಗೆ ತಿಳಿಸಿ ಹೇಳುವುದೊಳಿತು..!

ಏಕೆ೦ದರೆ ಯಾವುದಕ್ಕಾಗಿ ನಾವು ಜೀವನವೆಲ್ಲಾ ತಹತಹಿಸುತ್ತೇವೆಯೊ,

ಪರಿಶ್ರಮಿಸುತ್ತೇವೆಯೋ, ಅದು ಪ್ರಾಪ್ತವಾಗುವುದು ಭ್ರೂಮಧ್ಯರೇಖೆಯನ್ನು ಮೀರಿದರೆ ಮಾತ್ರ..!!


 
 
 
 
 
 
 

ರ್ಮರಾಜ್ಯದಲ್ಲಿ ಎಲ್ಲವೂ ದ್ವ೦ದ್ವವೇ..!!

ಹುಬ್ಬುಗಳೆರಡು..ಮತ್ತೆ ಕಣ್ಣುಗಳೆರಡು..

ಮೂಗೊ೦ದೇ..ಆದರೆ ಹೊಳ್ಳೆಗಳೆರಡು..

ಬಾಯೊ೦ದೇ ಆದರೆ ತುಟಿಗಳೆರಡು..

ನಾಲಿಗೆಯೊ೦ದೇ ಆದರೂ ಸವಿಯುವ- ಮಾತನಾಡುವ ಇ೦ದ್ರಿಯಗಳೆರಡು..

ಕೈಗಳೆರಡು..ಕಾಲುಗಳೆರಡು….!!


 
 
 

ಕರ್ಮರಾಜ್ಯದ ಬದುಕೂ ದ್ವ೦ದ್ವಮಯವೇ ಆಗಿದೆ..

ಸುಖವಿದೆ – ಜೊತೆಯಲ್ಲಿ ದುಃಖವೂ ಇದೆ..

ಬೆಳಕಿದೆ – ಜೊತೆಯಲ್ಲಿ ಕತ್ತಲೆಯೂ ಇದೆ..

ಬದುಕಿದೆ – ಒಡನೆ ಸಾವೂ ಇದೆ ..

ಜ್ಞಾನವಿದೆ – ಜೊತೆಜೊತೆಯಲ್ಲಿ ಅಜ್ಞಾನವೂ…!!!!

ಪ್ರೀತಿಯಿದೆ – ದ್ವೇಷವೂ ಇದೆ..


 
 

ನಮಗೆ ಬೇಕಾದದ್ದು ದುಃಖವಿಲ್ಲದ ಸುಖ..

ಕತ್ತಲಿಲ್ಲದ ಬೆಳಕು..

ಸಾವಿಲ್ಲದ ಬದುಕು..

ಅಜ್ಞಾನದ ಸೋ೦ಕಿಲ್ಲದ ಜ್ಞಾನ..

ದ್ವೇಷರಹಿತ ಪ್ರೀತಿ..


 
 

ಅದು ಪ್ರಾಪ್ತವಾಗಬೇಕೆ೦ದರೆ, ನಾವು ಕರ್ಮರಾಜ್ಯವನ್ನು ದಾಟಿ ಜ್ಞಾನರಾಜ್ಯವನ್ನು ಪ್ರವೇಶಿಸಲೇಬೇಕು..

ಮೂರನೆಯ ಕಣ್ಣಿರುವುದು ಅಲ್ಲಿಯೇ..!!!


 
 

ಭ್ರೂಮಧ್ಯದಾಚೆ ಮೊತ್ತಮೊದಲು ಸಿಗುವುದೇ ಮೂರನೆಯ ಕಣ್ಣಿನ ಸ್ಥಾನ..

ಮೋಕ್ಷರಾಜ್ಯದ ಮಹಾದ್ವಾರವದು..!!

ಮಹಾಮಸ್ತಿಷ್ಕವನ್ನು ನೇರವಾಗಿ ಪ್ರತಿನಿಧಿಸುವ ಏಕೈಕ ಅ೦ಗವದು..!!!


 
 

ಮಹಾಮಸ್ತಿಷ್ಕವೆಂದರೆ ಅನಂತಶಕ್ತಿ ಸಾಗರ..!!

ಅದರ ಶಕ್ತಿಯಲ್ಲಿ..ಈಗ ಉಪಯೋಗವಾಗುತ್ತಿರುವುದು ಕೋಟಿಯಲ್ಲೊ೦ದು ಪಾಲು ಕೂಡ ಅಲ್ಲ..!!


 
 
 

ಈಶ್ವರನ ಪ್ರತಿರೂಪದ೦ತಿರುವ ಮಹಾಮಸ್ತಿಷ್ಕ ಈಶ್ವರನನ್ನೇ ನೋಡಬಲ್ಲದು..!!

ಜೀವವನ್ನು ಈಶ್ವರಭಾವಕ್ಕೆತ್ತಬಲ್ಲುದು..!!

ಆದರೆ ಈಶ್ವರನನ್ನು ನೋಡಬೇಕಾದರೆ ಮೂರನೇಯಕಣ್ಣು ತೆರೆಯಲೇಬೇಕು..!!


 
 

ದ್ವ೦ದ್ವಲೋಚನಗಳು ದ್ವ೦ದ್ವವನ್ನು ಮಾತ್ರವೇ ಕಾಣಬಲ್ಲವು, ಅದ್ವೈತವನ್ನಲ್ಲ..

ಎಲ್ಲಿ ..!!ಒಮ್ಮೆ ಗಮನಿಸಿ ನೋಡಿ…!!!

ಅವುಗಳ ಗತಿ ಇರುವುದೇ ಕೆಳಮುಖವಾಗಿ..

ಹೆಚ್ಚೆ೦ದರೆ ಸಮಾನಾ೦ತರೆವಾಗಿ..

ಮೇಲ್ಮುಖವಾಗಿ ನೋಡಬೇಕೆ೦ದರೆ ಮುಖವನ್ನೇ ಮೇಲೆತ್ತಬೇಕಾಗುತ್ತದೆ..

ಭುವಿಗೆ ಸೀಮಿತವಾದ ದೃಷ್ಠಿಗಳವು..

 
 
 
 
 

ಅಸೀಮಿತವಾದ ಮೂರನೆಯ ಕಣ್ಣುಮಾತ್ರವೇ ದಿವಿಯನ್ನು ನೋಡಬಲ್ಲುದು..


 
ಆ ಕಣ್ಣು ತೆರೆದರೆ………..

ಅಬ್ಬಾ..!! ಚಮತ್ಕಾರ..!!!
ಮಾಯೆ ಮಾಯ..!!
ಬದುಕು ನಿರಾಮಯ..
ಮತ್ತೆ ಉಳಿಯುವುದು….
 

 
ಮೊಗೆದಷ್ಟೂ ಮುಗಿಯದ ಅನಂತ ಆನಂದಸಾಗರ…….!!!!

 

 

(ಸಶೇಷ..)

|| ಹರೇರಾಮ ||

Facebook Comments