ಕಾರಿರುಳೊಳಾಗಸದಿ ತಾರೆ ನೂರಿದ್ದೇನು
ದಾರಿಗನ ಕಣ್ಗೆ ಬೇಕೊಂದು ಮನೆಬೆಳಕು
ದೂರದಾ ದೈವವಂತಿರಲಿ, ಮಾನುಷಸಖನ
ಕೋರುವುದು ಬಡ ಜೀವ – ಮಂಕುತಿಮ್ಮ
ಪ್ರಪಂಚವು ಪ್ರೇಮದ ಮೇಲೆ ನಿಂತಿದೆ. ಪ್ರೇಮ ನಿರ್ಮಿತವಾದ ಅದ್ವೈತದ ಮೇಲೆ ನಿಂತಿದೆ. ತಾಯಿ~ಮಕ್ಕಳು, ಸತಿ~ಪತಿಯರು, ಸಹೋದರರು, ಸ್ನೇಹಿತರು, ಬಂಧುಗಳ ನಡುವಿನ ಪರಸ್ಪರ ಬಂಧವು ಕಳಚಿದರೆ ಪ್ರಪಂಚವು ಒಂದು ಕ್ಷಣವೂ ನಡೆಯದು!
ನಾರದರೊಮ್ಮೆ ದೇವರಲ್ಲಿ ಪ್ರಾರ್ಥಿಸಿದರಂತೆ. “ಜೀವಗಳ ನಡುವಿನ ಮೋಹವನ್ನು ಇಲ್ಲವಾಗಿಸಿಬಿಡು ದೇವನೇ, ಎಲ್ಲ ದುಃಖಗಳಿಗೆ ಇದುವೇ ಮೂಲ.” ದೇವರು “ತಥಾಸ್ತು” ಎಂದ ಬಳಿಕ ತನ್ನ ವರದ ಪರಿಣಾಮವನ್ನು ವೀಕ್ಷಿಸಲು ನಾರದರು ಭುವಿಗೆ ಬಂದರು. ಅಲ್ಲಿ ಅವರಿಗೆ ಆಘಾತವೇ ಕಾದಿತ್ತು! ನವಜಾತ ಶಿಶುವಿಗೆ ತಾಯಿ ಹಾಲೂಡಿಸುತ್ತಿಲ್ಲ! ತಂದೆಯು ಮಕ್ಕಳ ಅಶನ-ವಸನ-ವಿದ್ಯೆಗಳ ಹೊಣೆಯನ್ನೇ ಹೊರುತ್ತಿಲ್ಲ! ಕಾಯಿಲೆ ಬಿದ್ದ ಕುಟುಂಬದ ಸದಸ್ಯರನ್ನು ಆಸ್ಪತ್ರೆಗೆ ಕರೆದೊಯ್ಯಲು ಯಾರಿಲ್ಲ! ಯಾರೂ ಯಾರಿಗೂ ಒಳಿತು ಮಾಡುತ್ತಿಲ್ಲ! ನಗು-ನಲಿವುಗಳೇ ಜೀವಲೋಕದಿಂದ ಮಾಯವಾಗಿವೆ! ಜೀವಗಳ ನಡುವಿನ ಅನುಬಂಧಗಳು ಕಳಚಿದುದರ ಪರಿಣಾಮವಿದು!! ನಾರದರು ದೇವರ ಬಳಿ ಧಾವಿಸಿದರು, ವರವನ್ನು ಕೊಟ್ಟವನಿಗೇ ಮರಳಿಸಲು!
ಜೀವ~ದೇವರ ಅದ್ವೈತವು ಮುಕ್ತಿಗೆ ಹೇಗೆ ಮುಖ್ಯವೋ, ಜೀವ~ಜೀವರ ಅದ್ವೈತವು ಜೀವನಕ್ಕೆ ಅಷ್ಟೇ ಮುಖ್ಯವಾದುದು. ಪರಸ್ಪರ ಪ್ರೇಮವಶದಿಂದಲಾಗಿ ಜೀವಗಳು ಒಂದಕ್ಕೊಂದು ಒಳಿತು ಮಾಡಿಯೇ ಜೀವನ ನಡೆಯುತ್ತಿರುವುದು. ಯುಗಕ್ಕೊಬ್ಬ, ಜಗಕ್ಕೊಬ್ಬ, ಸಂಬಂಧಗಳನ್ನು ಮೀರಿ ಮುಕ್ತಿಪಥದಲ್ಲಿ ಮೇಲೇರುವುದು ಬೇರೆ; ಮತ್ತುಳಿದ ಪ್ರಪಂಚವೆಲ್ಲವೂ ಸರ್ವಾತ್ಮನಾ ಜೀವಗಳ ಪರಸ್ಪರ ಸಂಬಂಧವನ್ನೇ ಆಶ್ರಯಿಸಿದೆ.
ಹೀಗಿರುವಾಗ ಆಚರಣೆಯೊಂದು ಸತಿ~ಪತಿಯರ ಅಭೇದ್ಯವಾದ ಬಂಧವನ್ನು ಕ್ಷಣಮಾತ್ರದಲ್ಲಿ ಒಡೆದು ಹಾಕಲು ಅನುವು ಮಾಡಿದರೆ ಹೇಗೆ? ಶಾಸನವೂ ಅದಕ್ಕೇ ತಲೆದೂಗಿದರೆ ಏನು ಗತಿ!? ನಾವು ತಲಾಖಿನ ಕುರಿತು ಸರ್ವೋಚ್ಚ ನ್ಯಾಯಾಲಯವು ಮೊನ್ನೆ ನೀಡಿದ ತೀರ್ಪಿಗೆ ಮಹತ್ತ್ವ ನೀಡುವುದು ಈ ಹಿನ್ನೆಲೆಯಲ್ಲಿ. ಒಡೆದು ಚೂರಾಗುವುದನ್ನು ತಡೆದು, ಕೂಡಿ ಬಾಳುವುದನ್ನು ಪ್ರೋತ್ಸಾಹಿಸುತ್ತದೆ ಆ ತೀರ್ಪು.
ವಿವಾಹ: ಭಾರತೀಯ ದೃಷ್ಟಿ.
ವಿವಾಹಕ್ಕೆ ಇನ್ನೊಂದು ಅಭಿಧಾನ ‘ಲಗ್ನ’. ಲಗ್ನವೆಂದರೆ ಬೆಸುಗೆ. ಬಿಡಲಾರದ, ಬಿಡಬಾರದ ಬೆಸುಗೆ.
- ಬೆಸುಗೆಯು ದೇಹಗಳ ನಡುವೆ ಮಾತ್ರವಿದ್ದರೆ ಅದರ ಆಯುಸ್ಸು ಯೌವನವಿರುವವರೆಗೆ ಮಾತ್ರ.
- ಒಂದು ಸ್ತರ ಮುಂದೆ ಹೋಗಿ, ಬೆಸುಗೆಯು ಮನಸ್ಸುಗಳ ನಡುವೆಯಾದರೆ ಬದುಕಿರುವವರೆಗೂ ಎರಡು ಜೀವಗಳು ಒಂದಾಗಿ ಬಾಳುವವು. ಏಕೆಂದರೆ ರೂಪವು ಯೌವನವಿರುವನಕ, ಮನಸ್ಸು ಕೊನೆ ತನಕ.
- ಬೆಸುಗೆಯು ಆತ್ಮಗಳ ನಡುವೆಯಾದರೆ ನಾವು ಸತ್ತರೂ ಅದು ಸಾಯದು! ಏಕೆಂದರೆ ಆತ್ಮಕ್ಕೆ ಸಾವಿಲ್ಲ! ಸತಿ~ಪತಿಗಳ ನಡುವೆ ಯಾರೊಬ್ಬರು ಮೊದಲು ಹೋದರೂ ಪರಲೋಕದಲ್ಲಿ ಮತ್ತೊಬ್ಬರ ಪ್ರತೀಕ್ಷೆ ಮಾಡುವರು. ಕನ್ಯೆಯೊಬ್ಬಳನ್ನು ಧಾರೆಯೆರೆದು ನೀಡಿದ ಮೇಲೆ ಸಾವಿನ ಬಳಿಕವೂ, ಪರಲೋಕದಲ್ಲಿಯೂ, ಆಕೆಯು ಅವನ ಸತಿಯೇ ಆಗಿ ಉಳಿಯುವಳೆಂದು ಶ್ರೀರಾಮಾಯಣವು ಉದ್ಘೋಷಿಸುತ್ತದೆ.
ಇಹ ಲೋಕೇ ಚ ಪಿತೃಭಿಃ ಯಾ ಸ್ತ್ರೀ ಯಸ್ಯ ಮಹಾಮತೇ |
ಅದ್ಭಿರ್ದತ್ತಾ ಸ್ವಧರ್ಮೇಣ ಪ್ರೇತ್ಯಭಾವೇಪಿ ತಸ್ಯ ಸಾ ||
~ ಶ್ರೀರಾಮಾಯಣ ಅಯೋಧ್ಯಾ/೨೯/ ೧೭-೧೮
ದೇಹವಳಿದರೂ ಅಳಿಯದ ನಿತ್ಯಶಾಶ್ವತವಾದ ಬಂಧವೆಲ್ಲಿ? ಮೂರು ಬಾರಿ ‘ತಲಾಖ್’ ಎಂದು ಉಚ್ಚರಿಸಿದ ಮಾತ್ರಕ್ಕೇ ಮುರಿದು ಬೀಳುವ ಕ್ಷಣಭಂಗುರ ಬಂಧವೆಲ್ಲಿ?
ಕ್ಷಣಿಕ ಆವೇಶ; ಬದುಕು ಸರ್ವನಾಶ!
ಕ್ಷಣಿಕ ಆವೇಶಗಳು ನಮ್ಮ ಬದುಕಿನಲ್ಲಿ ಮಾಡುವ ಅನಾಹುತಗಳಿಗೆ ಸಂಖ್ಯೆಯಿಲ್ಲ! ಸಂಯಮ-ವಿವೇಚನೆಗಳ ಆಣೆಕಟ್ಟನ್ನು ಒಡೆದು, ಕ್ಷಣಮಾತ್ರದ ಕ್ರೋಧ-ಆವೇಗಗಳು ಮುನ್ನುಗ್ಗಿದಾಗ ಮನುಷ್ಯನು ಆಡಬಾರದುದನ್ನು ಆಡುತ್ತಾನೆ. ಮಾಡಬಾರದುದನ್ನು ಮಾಡುತ್ತಾನೆ. ಕ್ರೋಧಾವೇಗವು ನಮ್ಮನ್ನು ಆಳುತ್ತಿರುವ ಹೊತ್ತಿನಲ್ಲಿ ಏನನ್ನೂ ಆಡಬಾರದು, ಮಾಡಬಾರದು ಎಂಬುದೇ ವಿವೇಕಿಗಳ ನಿರ್ಣಯ. ಹೀಗಿರುವಾಗ ಕ್ಷಣಕ್ರೋಧದಲ್ಲಿ ಶಾಶ್ವತವಾದ ಬಾಂಧವ್ಯವನ್ನೇ ಹಾಳುಗೈಯಲು ಆಚರಣೆ-ಕಾನೂನುಗಳು ಪ್ರೋತ್ಸಾಹ ನೀಡುವುದನ್ನು ಎಂದೆಂದೂ ಒಪ್ಪಲಾಗದು!
ಸುಲಭವಾಗಿ ಬಿಡಗೊಡದ Marriage Act..
* ಸತಿಪತಿಯರನ್ನು ಒಂದುಗೂಡಿಸಲು ಸಕಲ ಪ್ರಯತ್ನಗಳನ್ನೂ ಕೈಗೊಳ್ಳಬೇಕೆಂದು ನ್ಯಾಯಾಲಯಕ್ಕೆ ಕಾನೂನು ಸುಸ್ಪಷ್ಟ ನಿರ್ದೇಶನ ನೀಡುವ ಪರಿ..
ಹಿಂದೂ ವಿವಾಹ ಕಾಯ್ದೆ,ಕಲಂ 23(2): Before proceeding to grant any relief under this Act, it shall be the duty of the Court in the first instance, in every case where it is possible so to do consistently with the nature and circumstances of the case, to make endeavor to bring about a reconciliation between the parties:
* ವಿವಾಹವಾಗಿ ಒಂದು ವರ್ಷದವರೆಗೆ ವಿಚ್ಛೇದನಕ್ಕೆ ಅರ್ಜಿ ಹಾಕುವಂತೆಯೇ ಇಲ್ಲ!
ಕಲಂ 14(1): Notwithstanding anything contained in this Act, it shall not be competent for any Court to entertain any petition for dissolution of Marriage by a decree of divorce , unless at the date of the presentation of the petition one year has elapsed since the date of the marriage.
* ಇದಲ್ಲದೆ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರೆ ಆರು ತಿಂಗಳೊಳಗೆ ಒಂದು ಹೆಜ್ಜೆಯೂ ಮುಂದುವರೆಯಲಾಗದಂತಿದೆ ಕಾನೂನು. ಕ್ಷಣಿಕ ಆವೇಗದ ಅನಾಹುತಗಳನ್ನು ತಡೆಯುವುದು, ಆರು ತಿಂಗಳಲ್ಲಿ ಮನಃಪರಿವರ್ತನೆಯಾಗಿ ಮತ್ತೆ ಜೊತೆಯಾಗಿ ಬಾಳುವುದಿದ್ದರೆ ಬಾಳಲಿ ಎಂಬ ಭಾವವು ಭಾವಶೂನ್ಯವೆನಿಸುವ ಕಾನೂನಿನ ಹೃದಯದಲ್ಲಿಯೂ ಇದೆ!
ಇನ್ನೊಂದು ಮಾತು. ಪತ್ನಿಯನ್ನು ಮನ ಬಂದಂತೆ, ಬಲು ಸುಲಭವಾಗಿ ಬದಲಾಯಿಸಲು ಅವಕಾಶ ನೀಡುವುದು ಸಮಾಜ ಸ್ವಾಸ್ಥ್ಯಕ್ಕೆ ಅತ್ಯಂತ ಅಪಾಯಕಾರಿ! ‘ಇಂದು ನನ್ನ ಪತ್ನಿಯಾಗಿರುವಳು ನಾಳೆ ಯಾರದೋ ಪತ್ನಿಯಾಗಬಹುದು, ಯಾರದೋ ಪತ್ನಿ ನಾಳೆ ನನ್ನ ಪತ್ನಿಯಾಗಬಹುದು’ ಎಂಬ ಮಾನಸಿಕತೆ ರಾಕ್ಷಸರಿಗೆ ಮಾತ್ರ ಸಲ್ಲುವಂತಹುದು! ಇದನ್ನು ‘ಅಸ್ತವ್ಯಸ್ತತೆ’ ಎಂದು ಕರೆಯಬಹುದು. ವ್ಯವಸ್ಥೆ ಎಂದು ಕರೆಯಲು ಸಾಧ್ಯವಾಗದು. ಎಂದೆಂದೂ ಜೊತೆಗಿರುವ ಒಂದು ಜೀವಕ್ಕೇ ‘ಸತಿ’ ಎಂಬ ಅಭಿಧಾನ!
ಕೊನೆ ಮಾತು: ಒಮ್ಮೆ ಜನಿಸಿದ ಮೇಲೆ ಹೇಗೆ ತಾಯಿಯನ್ನು ಬದಲಿಸಲು ಸಾಧ್ಯವಾಗದೋ ಹಾಗೆಯೇ ಒಮ್ಮೆ ವರಿಸಿದ ಮೇಲೆ ಎಂದೂ ಪತ್ನಿಯನ್ನು ಬದಲಿಸಲು ಸಾಧ್ಯವಾಗದು!
ಇದು ಧರ್ಮ! ಇದು ಆಚಾರ! ಇದು ಹೃದಯಬಂಧ! ಇದೇ ನ್ಯಾಯಬಂಧವಾಗುವುದಿದ್ದರೆ ಮುಕ್ತಿಮಾತ್ರವಲ್ಲ, ಬದುಕೂ ಅದ್ವೈತವಾದೀತು!
ಜೀವ~ದೇವಾದ್ವೈತವು ಮುಕ್ತಿ, ಜೀವ-ಜೀವಾದ್ವೈತವೇ ಜೀವನ!
~*~*~
August 28, 2017 at 6:48 AM
ಹರೇ ರಾಮ
August 28, 2017 at 7:11 AM
ಈ ಒಂದು ಅಂಕಣವು ಒಂದೇ ಸಂದೇಶಕ್ಕೆ ಸೀಮಿತವಾಗಿಲ್ಲ!
ತ್ರಿವಳಿ ತಲಾಕ್ ಅನ್ನು ಬೇಡವೆಂದು ಎತ್ತಿ ಹಿಡಿದ ಕಾನೂನಿನ ಅಭಿನಂದನೆಯೇನೋ ಇದ್ದೇ ಇದೆ.. ಜೊತೆಜೊತೆಗೆ ಈಗಿನ ಯುಗದ ಸತಿ-ಪತಿಯರಿಗೆ ಸಾಕು ಬೇಕಿನಿಸುವಷ್ಟು ಕಿವಿಮಾತಿದೆ! ವಿವಾಹವನ್ನು ಅದೇಕೋ ಬೇರೆಯೇ ದೃಷ್ಟಿಕೋನದಿಂದ ನೋಡುತ್ತಿರುವ ಈಗಿನ ಸಮಾಜಕ್ಕೆ ನಿಜ ಅರ್ಥದ ವಿವಾಹದ ಪರಿಚಯವಿದೆ. ಯಾಕಾಗಿ ವಿವಾಹವಾಗಬೇಕು, ವಿವಾಹವಾದರೆ ಎಂತಹವರನ್ನು ಆಗಬೇಕು ಎಂಬ ಕಿವಿಮಾತು ಅವಿವಾಹಿತರಿಗೂ ಸೇರಿಕೊಂಡಂತಿದೆ..
ಇವೆಲ್ಲ ವಿವಾಹದ, ವಿಚ್ಛೇದನದ ಕುರಿತಾದರೆ, ಕ್ರೋಧವನ್ನು, ಕೋಪವನ್ನು ತಡೆಹಿಡಿಯಲೇ ಬೇಕು, ಒಂದುವೇಳೆ ಅದುಂಟಾದರೆ ಆ ಸಮಯದಲ್ಲಿ ದುಡುಕಬೇಡಿ ಎನ್ನವ ಮಹತ್ತರವಾದ ಸಂದೇಶವಿದೆ.. ನಾವೆಲ್ಲರೂ ಹೆಚ್ಚಿನವರು ಈ ಕೋಪಕ್ಕೆ ಒಳಪಟ್ಟು ಒಂದಿಲ್ಲೊಂದು ಅಮೂಲ್ಯ ಸಂಬಂಧವನ್ನು ಕಳೆದುಕೊಂಡವರೇ ಆಗಿದ್ದೇವೆ.. ಇನ್ನಾದರೂ ಇದರ ಮೇಲೆ ಹಿಡಿತವನ್ನು ಸಾಧಿಸೋಣ..
ಅದ್ಭುತ ಬರಹ! ಹರೇ ರಾಮ..
August 28, 2017 at 7:13 AM
ಮೊದಲ ಲೋಕಲೇಖ! ಜೀವಪ್ರೇಮಲೋಕ-ಪರಮಹಂಸಲೇಖ !!
ಆತ್ಮಬಂಧವಾದ ಸಂಬಂಧವನ್ನು ಮತ್ತಷ್ಟು ಬಿಗಿಗೊಳಿಸಿದೆ. ಭಾರತೀಯರು ಬದುಕನ್ನು ನೋಡುವ ದೃಷ್ಟಿಕೋನ ಜಗತ್ತಿಗೇ ಒಳಿತನ್ನುಂಟು ಮಾಡುವುದು. ಅನ್ಯರ ದೃಷಿಯ ಬದುಕು ಸೃಷ್ಟಿಯನ್ನೇ ನಾಶಗೈವಂಥದ್ದು.
ಹಸೆಗೇರಿದ ಬೆಸುಗೆ ಕ್ಷಣಭಂಗುರವಾಗದಿರಲೆಂಬ ಆಶಯದ ಈ ಬರಹ ಅದ್ವೈತದಾನಂದನ್ನು ಸಾರಿ ಜಗವನ್ನು ಭಗವಂತನೆಡೆಗೆ ನಡೆಸುವುದು..
August 28, 2017 at 7:28 AM
ಜೀವನತತ್ವದ ತಿರುಳು,ಸಂಬಂಧಗಳ ಅನುಬಂಧಗಳನ್ನು ಕಾಯ್ದುಕೊಳ್ಳುವ ಎಚ್ಚರಿಕೆ ಮನಮುಟ್ಟುವಂತಿದ್ದು ಡೈವರ್ಸ್ ಗಳನ್ನು ತಡೆಯುವಲ್ಲಿ ಸಹಕಾರಿ. ಹರೇರಾಮ
August 28, 2017 at 7:33 AM
ಹರೇರಾಮ
August 28, 2017 at 7:45 AM
ಹಳೆ ಬೇರಿನಿಂದ ಹೊಸ ಚಿಗುರಿನ ವರೇಗೆಲ್ಲಾ ಆವರಿಸಿ , ಎಲ್ಲೆ ವಿಸ್ತರಿಸಿ ಮೇರೆ ಮೀರಿದ ಅತಿ ವಿಶೇಷ ಲೇಖನಕ್ಕೆ ಲೋಕದ ಲೇಖಕ್ಕೆ ನಮನ
August 28, 2017 at 8:00 AM
ಅದ್ಭುತ ಬರಹ , ಹರೇರಾಮ
August 28, 2017 at 8:47 AM
BEAUTIFUL !
August 28, 2017 at 9:47 AM
ಹರೇ ರಾಮ
ಬಾಳದಾರಿಯಲಿ ಅಹಂ ಎಂಬ ತಡೆಗೋಡೆ ಬಾರದಿರಲಿ.. ಇಬ್ಬರಲ್ಲೊಬ್ಬರು ಎಡವಿದರೂ ಮುಳುಗುವುದು ಸಂಸಾರ ನೌಕೆ!
ನಿಮಿಷದ ಆವೇಶಕ್ಕೆ ವಿವಾಹಬಂಧವು ಕುಸಿದುಬೀಳದಿರಲಿ!
ಸತಿಪತಿಯರು ನಾವಿಬ್ಬರೂ ಒಂದೇ ಎನ್ನುವುದನ್ನು ಅರ್ಥ ಮಾಡಿದರೆ ಬಾಳು ಸಿಹಿ ಇಲ್ಲವಾದಲ್ಲಿ ಕಹಿ..
ಪ್ರತಿಯೊಬ್ಬರೂ ಓದಿ ಅರ್ಥೈಸಿ ಬೇಕಾದ ಸುಂದರ ಬರಹ
August 28, 2017 at 9:53 AM
ಒಡೆದ ಕನ್ನಡಿಯನ್ನು ಹೇಗೆ ಒಂದುಗೂಡಿಸಲು ಸಾಧ್ಯವಿಲ್ಲವೋ ಅಂತೆಯೇ ಕೋಪದಲ್ಲಾಡಿದ ಮಾತು ಎದುರಿರುವವರ ಹೃದಯವನ್ನು ನುಚ್ಚುನೂರು ಮಾಡಬಹುದು! ಕ್ಷಣಮಾತ್ರದ ದುಡುಕಿನ ನಿರ್ಧಾರ ಎಷ್ಟು ಕಾದರೂ ಸರಿಯಾಗುವುದಿಲ್ಲ,
ಅಂತೆಯೇ ತಲಾಖ್ ಎಂಬೊಂದು ಪದದಿಂದ ಬಂಧುವು ನಮ್ಮೊಡನೆ ಒಂದೇ ಆಗದೇ ಬಂದು-ಹೋಗುವಂತಾದರೆ?? ಅದಲ್ಲ, ಬಂಧವೇರ್ಪಟ್ಟ ನಂತರ ಬೇರ್ಪಡಿಸುವುದು ಅಸಾಧ್ಯ, ಅದು ಕೇವಲ ಪದದಿಂದೆನ್ನುವುದು!! ಜೊತೆಯಲ್ಲಿ ಬಂದವಳಿಗೆ ಪದವೊಂದರ ಉಚ್ಛಾರದಿ ಬಿಡುವುದೆಂದರೆ ಅದೊಂದು ಜೋಕು!
ಇಂತಹ ಆಚರಣೆಗೆ ಪೂರ್ಣವಿರಾಮವಿಟ್ಟ ನ್ಯಾಯಾಲಯದ ತೀರ್ಪು ಒತ್ತಿ ಹೇಳುತ್ತಿರುವುದು “ಅದ್ವೈತ” ಎಂದು ಈ ಲೋಕಲೇಖವು ನಮಗೆ ಸ್ಪಷ್ಟ ಸಂದೇಶ ನೀಡುತ್ತಿದೆ..
“ಅದ್ಭುತ-ಅದ್ವೈತ”
ಹರೇರಾಮ
August 28, 2017 at 10:25 AM
ಹರೇ ರಾಮ
ಶ್ರೀ ಗುರುಭ್ಯೋನಮಃ
August 28, 2017 at 10:27 AM
ಜೀವನ ಧರ್ಮದ ಬಗ್ಗೆ ತಿಳಿಸುವ ಅರ್ಥಪೂರ್ಣ ಲೇಖನ. ದಾ೦ಪತ್ಯದ ಬಗ್ಗೆ ಭಾರತೀಯರು ಯಾವರೀತಿ ಬಾಳಬೇಕು, ಮತ್ತು ಸ೦ವಿಧಾನದಲ್ಲಿ ನೀಡಿದ ಮಹತ್ವ ಎರಡನ್ನು ಜೊತೆಯಾಗಿ ತಿಳಿಸಿದೆ.
August 28, 2017 at 11:16 AM
ಆಗಸದಲ್ಲಿ ಆವರಿಸಿದ ಕಾರ್ಮೋಡವು ಘರ್ಷಣೆಗೊಂಡು ಒಂದು ಕ್ಷಣ ಮಿಂಚಿ ಬೆಳಕೀಯಬಹುದು. ಆದರೆ ಆ ಮಿಂಚು ಸಿಡಿಲಾಗಿ ಭುವಿಯೊಳಗೆ ಶಾಶ್ವತ ಕಂದರವನ್ನು ಸೃಷ್ಟಿಸಬಹುದು.
ಅದೇ ಮೋಡವು ಕರಗಿ ಹೊಳೆವ ಸೂರ್ಯನ ಪ್ರಭೆಯು ಭುವಿಯೊಳಗೆ ನಂದನವ ಸೃಷ್ಟಿಸುವುದು.
ತತ್ಕಾಲ ಚಿತ್ತವನು ಆವರಿಸುವ ಅಸಮಧಾನದ ಕಾರ್ಮೋಡವೂ ಅಷ್ಟೇ..ತಲಾಕ್ ಎಂಬ ಮಿಂಚನ್ನು ಸೃಷ್ಟಿಸಿ ಬಾಳ ನೆಲೆಯೊಳಗೆ ಶಾಶ್ವತ ಕಂದರವನ್ನು ಸೃಷ್ಟಿಸಬಹುದು. ಆ ಕಾರ್ಮೋಡವು ಕರಗಿ ತಾಳ್ಮೆಯ ಬೆಳಕು ಹರಿದಲ್ಲಿ ಬಾಳು ನಂದನವಾಗುವುದು ನಿಸ್ಸಂಶಯ!
ಹಿಂದು ಮುಂದಿನ ಯೋಚನೆಯಿಲ್ಲದ ತತ್ಕಾಲ ಜೀವನವು ಸೃಷ್ಟಿಸುವ ಕಂದರಕ್ಕೆ ತಲಾಕ್ ಎಂದು ಹೆಸರು.
ಗಂಡ ಹೆಂಡಿರ ಸಂಬಂಧವು ತತ್ಕಾಲ ಸುಖವನ್ನು ಮೀರಿ, ಅಲ್ಲಿ ಸಹಜ ಪ್ರೇಮದ ಬೆಸುಗೆಯಿದ್ದಾಗ ಅದು ಜನ್ಮ ಜನ್ಮಾಂತರಗಳ ಆತ್ಮಬಂಧವೆನಿಸುತ್ತದೆ!
August 28, 2017 at 1:24 PM
ಜೀವ ಜೀವದಲ್ಲೇ ಅದ್ವೈತನಾಗದವ ದೇವನಲ್ಲಿ ಅದ್ವೈತನಾಗಲು ಹೇಗೆ ಸಾಧ್ಯ?
ತ್ರಿವಳಿ ತಲಾಖ್ ಕಟ್ಟಿದ ಮೂರು ಗಂಟನ್ನು ಬಿಚ್ಚ ಬಹುದಾದರೆ, ನಂಟಿಗೆ ಅರ್ಥವೆಲ್ಲಿ?
ವಂದೇ ವಾಂಛಿತಲಾಭಾಯ ಕರ್ಮ ಕಿಂ ತನ್ನ ಕಥ್ಯತೇ |
ಕಿಂ ದಂಪತಿಮಿತಿ ಬ್ರೂಯಾತ್ ಉತಾಹೋ ದಂಪತೀ ಇತಿ ||
ಎಂಬ ನೀಲಕಂಠದೀಕ್ಷಿತನ ವಕ್ರೋಕ್ತಿ ಕೂಡ ಶಿವ ಶಿವೆಯರ ದಾಂಪತ್ಯದ ಅದ್ವೈತವನ್ನು ಹೇಳುತ್ತದೆ. ಆದರೆ ತಲಾಖ್ ಎಂಬ ವಕ್ರೋಕ್ತಿ ದಾಂಪತ್ಯದ ಸಂಬಂಧದ ಆಳವನ್ನು ಅಪಹಾಸ್ಯ ಮಾಡುತ್ತದೆ.
August 28, 2017 at 3:28 PM
ಬಂದು ಹೋದವರೆಲ್ಲ ‘ಬಂಧು’ವಲ್ಲ, ಬಂಧ ಬೆಳೆಯದೆ ‘ಸಂಬಂಧ’ವಿಲ್ಲ. ಬೆಳೆದ ‘ಬಂಧ’ವು ಹೃದಯಬಂಧವಾಗಿ, ಆತ್ಮ ಪ್ರತಿಕ್ಷೆ ಮಾಡುವಂತಹ ಪರಮ ‘ದಿವ್ಯಬಂಧ’ವು ಕ್ಷಣಮಾತ್ರದಿ ಕಳೆದು ಹೋಗುವಂತದ್ದಲ್ಲ.
“ಆ ಬಂಧವು ಕಳೆದರೆ ಒಂದು ಕ್ಷಣವು ನಡೆಯದು
ಒಡೆದು ಚೂರಾಗುವುದನ್ನು ತಡೆಯಬೇಕು, ಕೂಡಿ ಬಾಳುವುದುನ್ನು ಪ್ರೋತ್ಸಾಹಿಸಬೇಕು. ”
ಇದು “ಧ್ಯೇಯ’! ಇದು “ಪರಂಪರೆ’! ಇದು ‘ಸನಾತನ!ಇದು ‘ಧರ್ಮ’!
December 6, 2017 at 2:05 PM
Hare ramaa, Sanathana Dharamadalli adwaitha haagoo sambhandagala baggina mahatvada bagge tilisuva adhubuta lekhana.. Jai Sri Rama