ರಾಮನಿಗೆ ದಶರಥನು ಹೇಗೆ ತಂದೆಯೋ, ಹಾಗೆಯೇ ದಶರಥರಾಜ್ಯವೂ ರಾಮರಾಜ್ಯಕ್ಕೆ ತಂದೆಯಂತಿತ್ತು! ಒಂದು ಮಹಾಶುಭವು ಇದ್ದಕ್ಕಿದ್ದಂತೆ ಬಂದು ಬಿಡುವುದಿಲ್ಲ; ಇದ್ದಕ್ಕಿದ್ದಂತೆ ಮರದಲ್ಲಿ ಹಣ್ಣು ಪ್ರತ್ಯಕ್ಷವಾಗಿ ಬಿಡುವುದಿಲ್ಲ. ಹಣ್ಣಿನ ಹಿಂದೆ ಕಾಯಿ ಇರಬೇಕು. ಕಾಯಿಯ ಹಿಂದೆ ಮಿಡಿ ಇರಬೇಕು. ಅದರ ಹಿಂದೆ ಹೂವು, ಎಲೆ, ಕೊಂಬೆ, ಕಾಂಡ, ಬೇರುಗಳಿರಬೇಕು. ಅಂತೆಯೇ ಮಹಾಶುಭದ ಹಿಂದೆ ಮಹಾಪೀಠಿಕೆಯೂ ಇರಲೇಬೇಕು. ರಾಮರಾಜ್ಯವೆಂಬ ಮಹಾಶುಭಕ್ಕೆ ದಶರಥರಾಜ್ಯವು ಪೀಠಿಕೆಯಾಗಿತ್ತು.

ಯಾವುದೇ ಮಹಾಶುಭಕ್ಕೆ ಕಾರಣಪುರುಷರು ಒಬ್ಬರೇ ಆಗಿರುವುದಿಲ್ಲ; ತೆರೆಯ ಮುಂದೆ ಕೆಲವರು, ತೆರೆಯ ಹಿಂದೆ ಹಲವರು, ಹೀಗೆ ಅನೇಕಾನೇಕ ಶುಭಜೀವಗಳ ಪ್ರಾಮಾಣಿಕ ಪ್ರಯತ್ನಗಳ ಸಮಾಹಾರವಾಗಿಯೇ ಮಹಾಶುಭವೊಂದು ಮೂಡಿಬರುವುದು! ದಶರಥನ ರಾಜ್ಯವೂ ಇದಕ್ಕೆ ಹೊರತಲ್ಲ. ಸಿಂಹಾಸನದ ಮೇಲೆ ದಶರಥನೋರ್ವನೇ ವಿರಾಜಿಸುತ್ತಿದ್ದರೂ, ಅವನ ಅಷ್ಟ ಮಂತ್ರಿಗಳು ಸಿಂಹಾಸನದ ಕಾಲುಗಳಂತೆ ರಾಜ್ಯವನ್ನೂ, ರಾಜನನ್ನೂ ಎತ್ತಿ ಹಿಡಿದಿದ್ದರು. ಎಲೆಮರೆಯ ಕಾಯಿಗಳಾಗಿ ತಮ್ಮ ಜೀವದ, ಜಾಣಿನ, ದೇಹದ ಸರ್ವಸ್ವವನ್ನೂ ರಾಜ್ಯಕ್ಕಾಗಿ ಧಾರೆಯೆರೆದಿದ್ದರು. ರಾಮರಾಜ್ಯದ ಹಿಂದೆ ದಶರಥರಾಜ್ಯವಿದ್ದರೆ, ದಶರಥರಾಜ್ಯದ ಹಿಂದೆ ಕಾಣದ ಕಾರಣಪುರುಷರಾಗಿ ಅವನ ಅಷ್ಟ ಮಂತ್ರಿಗಳಿದ್ದರು.

ವಾಲ್ಮೀಕಿಗಳು ದಶರಥನ ಮಂತ್ರಿಗಳನ್ನು ‘ಮಂತ್ರಜ್ಞಾಃ – ಮಂತ್ರ ಬಲ್ಲವರು’ ಎಂದು ಕರೆದಿದ್ದಾರೆ.‌
‘ಮಂತ್ರಿ’ ಪದವು ‘ಮಂತ್ರ’ಪದದಿಂದ ಬಂದಿದೆ.

ಮಂತ್ರಪದವು ಎರಡು ಅರ್ಥಗಳಲ್ಲಿ ಬಳಕೆಯಲ್ಲಿದೆ.

  • ದೇವನನ್ನೊಲಿಸಿ ಆತ್ಮಕಲ್ಯಾಣ~ಲೋಕಕಲ್ಯಾಣಗಳನ್ನು ಸಾಧಿಸಲು ಸಾಧನವಾಗುವ ಅಕ್ಷರಗುಚ್ಛಕ್ಕೆ ಮಂತ್ರವೆನ್ನುವರು. ಉದಾಹರಣೆಗೆ ಗಾಯತ್ರೀ ಮಂತ್ರ.
  • ಹಾಗೆಯೇ ಸರಿಯಾದ ನಿರ್ಣಯವನ್ನು ಕೈಗೊಳ್ಳಲು ಬಲ್ಲವರೊಡನೆ ನಡೆಸುವ ಸಮಾಲೋಚನೆಯನ್ನೂ ಮಂತ್ರವೆಂದೇ ಕರೆಯುವರು. ಮಥನದಿಂದ ನವನೀತ; ಮಂತ್ರಾಲೋಚನೆಯಿಂದ ಸಮರ್ಪಕ ನಿರ್ಣಯ. ಮೊದಲನೆಯ ಮಂತ್ರವು ದಿವ್ಯತೆ ತುಂಬಿದ ಅಕ್ಷರಗಳ ಗುಚ್ಛವಾದರೆ, ಮಂತ್ರಾಲೋಚನೆಯ ರೂಪದ ಎರಡನೆಯ ಮಂತ್ರವು ಕಳಕಳಿ ತುಂಬಿದ ಚಿಂತನೆಗಳ ಗುಚ್ಛ. ಅಲ್ಲಿ ಒದಗಿ ಬಂದು ರಾಜನ ಬುದ್ಧಿಯಾಗುವನು ಮಂತ್ರಿ.

ಮಂತ್ರಾಲೋಚನೆಗೆ ಮಂತ್ರದಷ್ಟೇ ಮಹತ್ತ್ವವಿದೆ. ಏಕೆಂದರೆ ಬದುಕು ನಿರ್ಣಯಗಳನ್ನು ಅವಲಂಬಿಸಿದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಣಯಗಳನ್ನು ಮಾಡುವವನು ಜೀವನದಲ್ಲಿ ಸೋಲುವುದೇ ಇಲ್ಲ! ತಪ್ಪು ನಿರ್ಣಯಗಳು ಬದುಕನ್ನು ಅಸ್ತವ್ಯಸ್ತಗೊಳಿಸುವವು. ಒಮ್ಮೊಮ್ಮೆ ಬದುಕನ್ನೇ ನಾಶಗೊಳಿಸುವವು! ಸರಿಯಾದ ನಿರ್ಣಯಗಳು ಬದುಕಿನಲ್ಲಿ ಮೇಲೇರುವ ಏಣಿಗಳಾಗುವವು. ಸಮರ್ಪಕ ಸಮಾಲೋಚನೆಗಳು ಸೂಕ್ತ ನಿರ್ಣಯಗಳಿಗೆ ದ್ವಾರವಾಗುವವು. Discussion ಎಂಬ ಗಿಡದಲ್ಲಿಯೇ Decision ಎಂಬ ಹಣ್ಣು ಬಿಡುವುದು. ಒಳ್ಳೆಯ ಗಿಡವಾದರೆ ಒಳ್ಳೆಯ ಹಣ್ಣು! ಸೂಕ್ತ ಮಂತ್ರಾಲೋಚನೆಯು ಬದುಕಿನ ಸಫಲತೆಯ ಮೂಲ ಮಂತ್ರ.

ಇದು ವೈಯಕ್ತಿಕ ಜೀವನದ ವಿಷಯವಾಯಿತು. ಒಂದು ರಾಜ್ಯದ ರಾಜನೊಬ್ಬ ಕೈಗೊಳ್ಳುವ ನಿರ್ಣಯಗಳು ರಾಜ್ಯದ ಲಕ್ಷ-ಲಕ್ಷ, ಕೋಟಿ-ಕೋಟಿ ಜನರ ಬದುಕಿನ ಮೇಲೆ ಪರಿಣಾಮ ಬೀರುವವು! ಆದುದರಿಂದಲೇ ಮಹಾನಿರ್ಣಯಗಳನ್ನು ಸಮಾಲೋಚನೆಗಳಿಲ್ಲದೆ ರಾಜನೊಬ್ಬನೇ ಮಾಡಬಾರದು. ಸಮಾಲೋಚನೆಗಳನ್ನು ಬಹಳ ಮಂದಿಯೊಂದಿಗೂ ಮಾಡಬಾರದು. ದುಡುಕಿಯೂ ಮಾಡಬಾರದು! ಮಂತ್ರಜ್ಞರಾದ, ಆಯ್ದ ಕೆಲವೇ ಮಂದಿಯೊಂದಿಗೆ ಸಮಾಲೋಚನೆಗಳನ್ನು ಮಾಡಿಯೇ ನಿರ್ಣಯಗಳನ್ನು ಮಾಡಬೇಕು. ರಾಮನು ಭರತನಿಗೆ ರಾಜನೀತಿಯನ್ನು ಉಪದೇಶಿಸುವಾಗ ‘ಕಚ್ಚಿನ್ಮಂತ್ರಯಸೇ ನೈಕಃ ಕಚ್ಚಿನ್ನ ಬಹುಭಿಃ ಸಹ – ಏಕಾಂಗಿಯಾಗಿ ನಿರ್ಣಯಗಳನ್ನು ಮಾಡದಿರು; ಸಮಾಲೋಚನೆಗಳನ್ನು ಮಾಡಿಯೇ ನಿರ್ಣಯಗಳನ್ನು ಮಾಡು. ಆದರೆ ಸಮಾಲೋಚನೆಗಳನ್ನು ಬಹು ಜನರೊಂದಿಗೂ ಮಾಡದಿರು’ ಎಂದು ಹೇಳುವುದು ಇದೇ ತಾತ್ಪರ್ಯದಲ್ಲಿ. ಆದುದರಿಂದಲೇ ರಾಜ್ಯಶಾಸ್ತ್ರಜ್ಞರು “ರಾಜ್ಯವು ಮಂತ್ರಮೂಲ”ವೆನ್ನುವರು. ಮಂತ್ರವು ಮಂತ್ರಿಮೂಲ! ಎಲ್ಲವನ್ನೂ ಮಾಡುವವನು ರಾಜನೇ ಆದರೂ ಏನು ಮಾಡಬೇಕೆಂದು ಹೇಳುವವನು ಮಂತ್ರಿ. ರಾಜ್ಯಭಾರದ ಭಾರವು ನಿಜವಾಗಿಯೂ ಅವನ ಮೇಲಿದೆ!

ಇಲ್ಲಿ ನಮ್ಮೆಲ್ಲರಿಗೊಂದು ಸಂದೇಶವಿದೆ. ಬದುಕಿನಲ್ಲಿ ಆಪ್ತರು ಬೇಕು. ಏಕೆಂದರೆ ಬದುಕು ದಾರಿ ತಪ್ಪದಿರಲು ಆಪ್ತ ಸಲಹೆಗಳು ಬೇಕು. ಆಪ್ತರಿಲ್ಲದ ಬದುಕೂ ಆಪ್ತವಲ್ಲ! ಪರ್ಯಾಪ್ತವೂ ಅಲ್ಲ!

ಸ್ವಾರಸ್ಯವೆಂದರೆ ದಶರಥನ ಪ್ರಧಾನ ಮಂತ್ರಿಯ ಹೆಸರೇ ಸುಮಂತ್ರ! ಹಾಗೆಂದರೆ ಅತ್ಯಂತ ಸಮುಚಿತವಾದ ಸಲಹೆಗಳನ್ನು ನೀಡುವವನು. ಮತ್ತುಳಿದ ಮಂತ್ರಿಗಳಿಗೆ ಬೇರೆ ಹೆಸರುಗಳಿದ್ದರೂ ಅವರೂ ‘ಸುಮಂತ್ರ’ರೇ ಆಗಿದ್ದರು! ರಾಮನಂತಹ ಸತ್ಪುತ್ರನನ್ನು ದಶರಥನು ಪಡೆದುದು ಹೇಗೆ ಪರಮ ಪುಣ್ಯದ ಫಲವೋ, ಹಾಗೆಯೇ ಸುಮಂತ್ರನ ತೆರನಾದ ಎಂಟು ಮಂತ್ರಿಗಳನ್ನು ಪಡೆದುದೂ ಮಹಾಪುಣ್ಯದ ಫಲವೇ ಸರಿ!

~*~*~

(ಸಶೇಷ…)

Facebook Comments