ಸಂನ್ಯಾಸದ ಸೊಬಗು

‘ಪೂಜ್ಯ’ ಎಂಬ ಶಬ್ದಕ್ಕೆ ಸಂಸ್ಕೃತದಲ್ಲಿ ‘ಪೂಜನೀಯ’ ಎಂಬ ಅರ್ಥವಿರುವಂತೆ ಕನ್ನಡದಲ್ಲಿ ‘ಶೂನ್ಯ’ ಎಂಬ ಅರ್ಥವೂ ಇದೆ. ಸೊನ್ನೆಯಾಗಲಾರದವನು ಪೂಜ್ಯನಾಗಲಾರ. ಗಳಿಸಿದುದೆಲ್ಲವನ್ನೂ ಕಳೆದು, ಕಡೆಗೆ ಕಳೆಯಲಾರದುದೊಂದನ್ನು ಉಳಿಸಿಕೊಂಡು ಸೊನ್ನೆಯಾಗುವ ಪ್ರಕ್ರಿಯೆಗೇ ‘ಸಂನ್ಯಾಸ’ವೆಂದು ಹೆಸರು.

ಕಳೆಯುವಷ್ಟು ಕಳೆದ ಮೇಲೆ ಉಳಿಯುವುದೇ ಸೊನ್ನೆ; ಏನು ಕಳೆದರೂ, ಎಷ್ಟು ಕಳೆದರೂ ಕಳೆಯದೇ ಉಳಿಯುವ ಸಂಖ್ಯೆಯೆಂದರೆ ಅದುವೇ; ಸಂನ್ಯಾಸವೂ ಹಾಗೆಯೇ! ಆವರೆಗಿನ ಬದುಕಿನ ಸಂಬಂಧ-ಸಂಪಾದನೆಗಳೆಲ್ಲವನ್ನೂ ಕಳೆಯುವುದೇ ಸಂನ್ಯಾಸ; ಬಳಿಕ ಉಳಿಯುವುದು ಕಳೆದೇನೆಂದರೂ ಕಳೆಯದ ಆತ್ಮವೊಂದೇ! ಆತ್ಮಪ್ರಜ್ಞೆಯೇ ಸಂನ್ಯಾಸ; ಆತ್ಮಸೌಖ್ಯವೇ ಸಂನ್ಯಾಸ.

ಸಂನ್ಯಾಸಪ್ರಕ್ರಿಯೆಯೆಂದರೆ ಅದೊಂದು ಹೋಲಿಕೆಯಿಲ್ಲದ ಅನುಭೂತಿ; ಅದು, ತಾನಿರುವಾಗಲೇ ತನ್ನ ನಾಶವಾಗಿ, ಪುನಃ -ಸೃಷ್ಟಿಯೆಲ್ಲವೂ ತಾನೇ ಆಗಿ- ಸೃಷ್ಟಿಯಾಗುವ ಅವರ್ಣನೀಯ ಅನುಭೂತಿ! ತುಂಡು ಭೂಮಿಯನ್ನು ತ್ಯಜಿಸಿ, ಭೂಮಂಡಲವೆಲ್ಲವನ್ನೂ ತನ್ನದೆಂದುಕೊಳ್ಳುವ, ಮನೆಯೊಂದನ್ನು ತ್ಯಾಗ ಮಾಡಿ, ‘ಜಗದ ಎಲ್ಲ ಮನೆಗಳೂ ತನ್ನ ಮನೆಗಳೇ’ ಎಂದು ಭಾವಿಸುವ, ಸಂಬಂಧಗಳೆಲ್ಲವನ್ನೂ ಹರಿದುಕೊಂಡು ‘ಜಗದ ಜನರೆಲ್ಲರೂ ತನ್ನ ಬಂಧುಗಳೇ’ ಎಂದು ಸ್ವೀಕರಿಸುವ, ಒಬ್ಬಾಕೆ ತಾಯಿಯಿಂದ ಬೀಳ್ಕೊಂಡು, ನಾರೀಜಾತಿಯೆಲ್ಲವನ್ನೂ ಮಾತೃತ್ವದ ಪೀಠದಲ್ಲಿಟ್ಟು ಪೂಜಿಸುವ ಭಾವೋತ್ತುಂಗಕ್ಕೆ ಸಾಟಿಯುಂಟೇ?

ಕಣ್ಣು ಬಂದಂದೇ ಕಂಡು ಬಂದವರು!
ಈ ಪರಿಯ ಸಂನ್ಯಾಸವು ನಮ್ಮನ್ನು ಆವರಿಸುವ ಹೊತ್ತಿನಲ್ಲಿಯೇ ನಾವು ಪೇಜಾವರಶ್ರೀಗಳನ್ನು ಮೊಟ್ಟಮೊದಲು ನೋಡಿದ್ದು. ನಮ್ಮ ಪೂಜ್ಯ ಗುರುಗಳಿಗೆ ಪೇಜಾವರಶ್ರೀಗಳೆಂದರೆ ಬಲು ಪ್ರೀತಿ; ‘ಶಿಷ್ಯಪರಿಗ್ರಹ ಸಮಾರಂಭಕ್ಕೆ ಯಾವುದಾರೂ ಮಠಾಧೀಶರನ್ನು ನಾವು ಕರೆಯುವುದಾದರೆ ಅದು ಪೇಜಾವರದವರನ್ನು ಮಾತ್ರ; ಅವರೊಬ್ಬರು ಬಂದರೆ ಸಾಕು’ ಎಂದು ಪೂಜ್ಯ ಗುರುಗಳು ಹೇಳುತ್ತಿದ್ದುದನ್ನು ನಾವು ಕಿವಿಯಾರೆ ಕೇಳಿದ್ದೇವೆ. ಹೀಗಾಗಿ ಸಂನ್ಯಾಸದ ಬದುಕಿನ ಬಾಗಿಲು ತೆರೆಯುತ್ತಿದ್ದಂತೆಯೇ ಪೇಜಾವರಶ್ರೀಗಳನ್ನು ಕಾಣುವ ಸುಯೋಗ ನಮಗೊದಗಿತು. ಹಾಗೆನ್ನುವುದಕ್ಕಿಂತ ‘ಸಂನ್ಯಾಸವಿತ್ತ ಬಳಿಕ, ತ್ಯಾಗದ ಬದುಕಿನ ಪರಮೋದಾಹರಣೆಯೆಂಬಂತೆ ದೊಡ್ಡ ಗುರುಗಳು ನಮಗೆ ಪೇಜಾವರಶ್ರೀಗಳನ್ನು ತೋರಿದರು’ ಎನ್ನುವುದೇ ಹೆಚ್ಚು ಸರಿ!

~

ಬಿಂದುವಿನ ಮುಂದೆ ಇದ್ದಕ್ಕಿದ್ದಂತೆ ಸಿಂಧುವು ಬಂದು ನಿಂತರೆ ಹೇಗಿರಬಹುದು? ಎಲ್ಲರಿಗೂ ನಮಸ್ಕಾರ ಮಾಡುವ ಸ್ಥಿತಿಯಿಂದ ಒಮ್ಮಿಂದೊಮ್ಮೆಗೇ ಎಲ್ಲರೂ ನಮಸ್ಕಾರ ಮಾಡುವ ಸ್ಥಿತಿಗೇರಿದಾಗಿನ ಮನಸ್ಸ್ಥಿತಿ ಏನಿರಬಹುದು? ಪೀಠಾಧಿಪತ್ಯದ ಸಂನ್ಯಾಸವನ್ನು ಜಗವರಿಯದ ಮಗುವು ಸ್ವೀಕರಿಸುವಾಗ ಇರಬಹುದಾದ ಸ್ಥಿತಿಯದು. ಪೇಜಾವರಶ್ರೀಗಳನ್ನು ಮೊದಲ ಬಾರಿ ಕಂಡಾಗ ನಾವಿದ್ದಿದ್ದು ಅಂಥಾ ಸನ್ನಿವೇಶದಲ್ಲಿ.

ಹುಟ್ಟಿದ್ದು ಪುಟ್ಟ ಹಳ್ಳಿಯಲ್ಲಿ; ಬಾಲ್ಯದ ವಿದ್ಯಾಭ್ಯಾಸವು ಕೊಂಚ ದೊಡ್ಡ ಹಳ್ಳಿಯಲ್ಲಿ; ಬಳಿಕ ಇತ್ತ ಪೇಟೆಯೂ ಅಲ್ಲದ, ಅತ್ತ ಹಳ್ಳಿಯೂ ಅಲ್ಲದ ಊರಿನಲ್ಲಿ ವೇದಾಧ್ಯಯನ; ಲೌಕಿಕ ವಿದ್ಯಾಭ್ಯಾಸ ಬಲು ಕಡಿಮೆ; ಪ್ರಪಂಚಜ್ಞಾನ ಮೊದಲೇ ಇಲ್ಲ. ಸಂಸ್ಥೆಗಳನ್ನು, ಸಂಘಟನೆಗಳನ್ನು ನಡೆಸಿ, ಸೂಕ್ಷ್ಮ ಸನ್ನಿವೇಶಗಳನ್ನು ನಿಭಾಯಿಸಿ ಯಾವ ಅನುಭವವೂ ಇಲ್ಲ. ಹೀಗಿರಲು ವಿಶ್ವವಂದ್ಯವಾದ ಪೀಠವೊಂದು ಒಮ್ಮಿಂದೊಮ್ಮೆಗೇ ನಮ್ಮನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. ಅಂದು ನಾವು ಪಾತಾಳದ ತಳದಿಂದ ಒಂದೇ ನೆಗೆತದಲ್ಲಿ ಆಗಸದ ಉತ್ತುಂಗವನ್ನೇರಿ ಕುಳಿತಿದ್ದೆವು.

ಅಂದಿನ ಸಂದರ್ಭ: ನಮ್ಮ ಸಂನ್ಯಾಸ-ಯೋಗಪಟ್ಟಾಭಿಷೇಕದ ಸಮಾರಂಭ; ಇದಿರಿನಲ್ಲಿ ಸಾಗರದ ತೆರನಾದ ಬೃಹತ್ ಸಭೆ; ಪಕ್ಕದಲ್ಲಿ ಸಮುದ್ರಗಾಂಭೀರ್ಯದ ಪೂರ್ವ ಗುರುಗಳು; ಮುಂದೆ ಸಂನ್ಯಾಸದ -ಅದ್ಭುತವಾದ ಆದರೆ ಅತಿಕ್ಲಿಷ್ಟವಾದ- ಬದುಕು; ಎಂಥಾ ಎಂಟೆದೆಯ ಬಂಟನದಾದರೂ ಜಂಘಾಬಲವೇ ಉಡುಗಿ, ದಿಗಿಲಾವರಿಸುವ ಸಂದರ್ಭ; ಆ ಹೊತ್ತಿನಲ್ಲಿ ಪೇಜಾವರಶ್ರೀಗಳು ಬಳಿ ಸಾರಿದರು; ಪ್ರೇಮವೇ ಕಣ್ಣಾಗಿ ನಮ್ಮನ್ನು ನೋಡಿದರು; ಜರತಾರಿಯ ಉತ್ತರೀಯವೊಂದನ್ನು ಮಮತೆದುಂಬಿ ಹೊದೆಸಿದರು; ತಮ್ಮ ಅಮೃತಹಸ್ತದಿಂದ ನಮ್ಮ ಕೆನ್ನೆಯನ್ನು ಸ್ಪರ್ಶಿಸಿದರು; ಮುಂದಿನ ಸವಾಲಿನ ಬದುಕನ್ನು ಎದುರಿಸಲು ಬೇಕಾದ ಸ್ಥೈರ್ಯವನ್ನು ತುಂಬಿದರು; ‘ಆ ಸಮಯದಲ್ಲಿ ನಮಗದರ ಅಗತ್ಯ ಬಹಳವಿತ್ತು’ ಎಂಬುದನ್ನು ಪ್ರತ್ಯೇಕ ಹೇಳಬೇಕಿಲ್ಲವಲ್ಲವೇ?

ನಮಗೆ ಉತ್ತರೀಯವನ್ನು ಹೊದೆಸುವಾಗ ಪೇಜಾವರಶ್ರೀಗಳು ನಿಂತೇ ಇದ್ದರು; ನಾವು ಕುಳಿತೇ ಇದ್ದೆವು; ಅನನುಭವ ಮತ್ತು ಸನ್ನಿವೇಶದ ಒತ್ತಡಗಳ ಪರಿಣಾಮ- ಪೇಜಾವರಶ್ರೀಗಳು ನಿಂತು ನಡೆಸಿದ ಪ್ರೇಮಸತ್ಕಾರವನ್ನು ನಿಂತೇ ಸ್ವೀಕರಿಸುವುದು ಉಚಿತವೆಂಬುದು ನಮ್ಮ ಮನಸ್ಸಿಗೆ ಬರಲಿಲ್ಲ; ವಿಶಾಲಹೃದಯದ ಪೇಜಾವರಶ್ರೀಗಳಲ್ಲಿ ಸ್ವಪ್ರತಿಷ್ಠೆಯ ಕ್ಷುಲ್ಲಕಭಾವಕ್ಕೆ ಎಡೆಯೇ ಇರಲಿಲ್ಲ!

ಸೌಜನ್ಯನಿಧಿ!
ಅಂದಿನ ಪ್ರಧಾನಮಂತ್ರಿಗಳಾಗಿದ್ದ ಅಟಲ ಬಿಹಾರಿ ವಾಜಪೇಯಿಯವರು ಕೃಷ್ಣನನ್ನು ಮತ್ತು ಕೃಷ್ಣನ ಚರಮೂರ್ತಿಯಂತಿದ್ದ ಪೇಜಾವರಶ್ರೀಗಳನ್ನು ಕಾಣಲು ಉಡುಪಿಗೆ ಬಂದಿದ್ದರು. ‘ಏಕಃ ಸ್ವಾದು ನ ಭುಂಜೀತ’ (ಸಿಹಿಯಾದುದನ್ನು ಒಬ್ಬನೇ ತಿನ್ನಬಾರದು) ಎಂಬಂತೆ ಪೇಜಾವರಶ್ರೀಗಳು ಆ ಸಮಯದಲ್ಲಿ ನಮ್ಮನ್ನೂ ಅಲ್ಲಿಗೆ ಬರಮಾಡಿಕೊಂಡಿದ್ದರು. ಪುಟ್ಟ, ಆದರೆ ಬದುಕಿಡೀ ನೆನಪಿಡಬಹುದಾದ ಸಂವಾದವೊಂದು ಉಡುಪಿಯಲ್ಲಿ ನಮ್ಮ ಮತ್ತು ವಾಜಪೇಯಿಯವರ ನಡುವೆ ಏರ್ಪಟ್ಟಿತು; ಭಾರತೀಯ ವಿದ್ಯೆ-ಕಲೆಗಳನ್ನು ಉಳಿಸಲು ವಿಶ್ವವಿದ್ಯಾಲಯವೊಂದನ್ನು ಸಂಸ್ಥಾಪಿಸುವ ನಮ್ಮ ಮಹಾಸ್ವಪ್ನವನ್ನು ಅಂದು ನಾವು ಆ ಮಹಾನಾಯಕನೊಡನೆ ಹಂಚಿಕೊಂಡೆವು; ವಾಜಪೇಯಿಯವರು ಹರ್ಷಿಸಿದರು, ಮಾತ್ರವಲ್ಲ, ‘ಭಾರತೀಯ ವಿದ್ಯೆ-ಕಲೆಗಳು ಅನೇಕಾನೇಕವಿರುವುದರಿಂದ ನೀವೇಕೆ ಅನ್ಯಾನ್ಯ ಸ್ಥಾನಗಳಲ್ಲಿ ಒಂದೊಂದು ವಿದ್ಯೆಯ ಕಲಿಕಾಕೇಂದ್ರಗಳನ್ನು ಸ್ಥಾಪಿಸಬಾರದು?’ ಎಂಬ ಸಲಹೆಯನ್ನೂ ನೀಡಿದರು.

ಭೇಟಿಯ ಬಳಿಕ ನಾವು ಮಿತ ಪರಿವಾರದೊಂದಿಗೆ ಕೃಷ್ಣಮಠದಿಂದ ನಿರ್ಗಮಿಸುತ್ತಿದ್ದೆವು; ಬೀಳ್ಕೊಡಲು ಕೃಷ್ಣಮಠದ ಕಡೆಯಿಂದ ಯಾರೂ ಇರಲಿಲ್ಲ; ಪ್ರಧಾನಮಂತ್ರಿಗಳ ಕಾರ್ಯಕ್ರಮದಲ್ಲಿ ಸರ್ವರೂ ವ್ಯಸ್ತರಾಗಿರುವುದು ಅನಿವಾರ್ಯವಾದುದರಿಂದ ನಮಗೆ ಆ ನಿರೀಕ್ಷೆಯೂ ಇರಲಿಲ್ಲ; ಆಗ, ಇದ್ದಕ್ಕಿದ್ದಂತೆ ಹಿಂದಿನಿಂದ ದ್ರುತಗತಿಯ ಪಾದುಕೆಗಳ ಸದ್ದು ಕೇಳಿ ಬಂತು; ಹಿಂದಿರುಗಿ ನೋಡಿದರೆ ಸ್ವಯಂ ಪೇಜಾವರಶ್ರೀಗಳು ನಮ್ಮನ್ನು ಬೀಳ್ಕೊಡುವ ಸಲುವಾಗಿ ಧಾವಿಸಿ ಬರುತ್ತಿದ್ದರು!!

ಗಮನಿಸಿ: ಆ ಸಮಯದಲ್ಲಿ ಪ್ರಧಾನಮಂತ್ರಿಗಳು ಕೃಷ್ಣಮಠದಲ್ಲಿ ಉಪಸ್ಥಿತರಿದ್ದರು ಮತ್ತು ಪೇಜಾವರಶ್ರೀಗಳೊಂದಿಗೆ ಪ್ರಧಾನಮಂತ್ರಿಗಳ ಸಮಾಲೋಚನೆ ನಡೆಯುತ್ತಿತ್ತು. ಪೇಜಾವರದವರ ಸೌಜನ್ಯ ಮತ್ತು ಶಿಷ್ಟಾಚಾರಪರಿಪಾಲನೆಯ ಬದ್ಧತೆಗಳು ಅದೆಷ್ಟು ಹಿರಿದು! ನಮ್ಮನ್ನು ಕಳುಹಿಸಿಕೊಡುವ ಸಂಪ್ರದಾಯ-ಸೌಜನ್ಯಗಳ ಪಾಲನೆಗಾಗಿ ಅವರು ಪ್ರಧಾನಮಂತ್ರಿಗಳ ಭೇಟಿಯ ನಡುವಿನಲ್ಲಿಯೇ ಎದ್ದು ಬಂದಿದ್ದರು.

ದೊಡ್ಡವರೆನಿಸಿಕೊಂಡವರು ಅವರಿಂದ ಕಲಿಯುವುದು ಬಹಳವಿದೆ.

ನಮ್ಮ ಪರಂಪರೆಯಲ್ಲಿ ನವ ಶಕೆಯೊಂದರ ಆರಂಭ ಮತ್ತು ಭವ್ಯವಾದ ಪೂರ್ವ ಶಕೆಯೊಂದರ ಪರ್ಯವಸಾನಗಳೆರಡಕ್ಕೂ ಸಾಕ್ಷಿಯಾಗಿದ್ದವರು ಪೇಜಾವರಶ್ರೀಗಳು ಮತ್ತು ಪೇಜಾವರಶ್ರೀಗಳು ಮಾತ್ರ! ನಮ್ಮ ಸಂನ್ಯಾಸವು ಅವರ ಸಾನ್ನಿಧ್ಯದಲ್ಲಿಯೇ ನಡೆಯಿತು; ಗುರುಗಳ ಸಮಾಧಿಯೂ ಅವರ ಉಪಸ್ಥಿತಿಯಲ್ಲಿಯೇ ನೆರವೇರಿತು. ‘ಕರೆದರೆ ಪೇಜಾವರದವರನ್ನು ಮಾತ್ರವೇ ಕರೆಯುವುದು’ ಎಂದ ಗುರುಗಳ ಧ್ವನಿ ನಮ್ಮ ಕಿವಿಯಲ್ಲಿಯೇ ಇತ್ತು. ಗುರುಗಳ ಇಚ್ಛೆಯಂತೆಯೇ ಅವರ ಮುಂದಿನ ಕಾರ್ಯಗಳನ್ನು ನೆರವೇರಿಸುತ್ತಿದ್ದ ನಾವು, ಗುರುಗಳ ಆರಾಧನೆಗೆ ಸಹಜವಾಗಿಯೇ ಪೇಜಾವರದವರನ್ನು ಆಮಂತ್ರಿಸಿದೆವು; ದೂರದ ದೆಹಲಿಯಲ್ಲಿದ್ದ ಪೇಜಾವರಶ್ರೀಗಳಿಗೆ ಬೆಂಗಳೂರಿಗೆ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಬಹಳ ತೊಂದರೆಗಳಿದ್ದವು; ಅದಾವುದನ್ನೂ ಲೆಕ್ಕಿಸದ ಅವರು ಗತಿಸಿದ ಗುರುಗಳ ಮತ್ತು ನಮ್ಮ ಕರೆಯನ್ನು ಮಾನಿಸಿ ಬಹಳ ಶ್ರಮದಿಂದ ಬಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಆ ಬಳಿಕ ಮಠದಲ್ಲಿ ಯಾವುದೇ ಮಹತ್ತ್ವದ ಕಾರ್ಯಕ್ರಮವಿದ್ದರೂ ಪೇಜಾವರಶ್ರೀಗಳನ್ನು ಕರೆಯುವುದು ಮತ್ತು ಅವರು ಬಂದು ಭಾಗವಹಿಸುವುದು ವಾಡಿಕೆಯೇ ಆಯಿತು.

ನಾ ಜಾಂಬವಂತನಾದರೆ ನೀ ಹನುಮಂತ…!

ಹೊಸನಗರದ ನಮ್ಮ ಮಠದಲ್ಲಿ ರಾಮೋತ್ಸವದ ಸಭೆ ನಡೆದಿತ್ತು; ವೇದಿಕೆಯಲ್ಲಿ ನಮ್ಮೊಂದಿಗೆ ಪೇಜಾವರಶ್ರೀಗಳಿದ್ದರು. ಸ್ವಾರಸ್ಯವೆಂದರೆ, ಆಗ ನಮಗೆ ೨೭ರ ಹರಯವಾದರೆ ಪೇಜಾವರದವರಿಗೆ ೭೨! ಅಂದು ಪೇಜಾವರದವರು ತಮ್ಮನ್ನು ಜಾಂಬವಂತನಿಗೂ ನಮ್ಮನ್ನು ಹನುಮಂತನಿಗೂ ಹೋಲಿಸಿದ್ದು ನಮಗೆ ಇಂದಿಗೂ, ಎಂದಿಗೂ ಅಚ್ಚಳಿಯದ ನೆನಪು. ಹನುಮನು ಹನುಮನಾದುದು ಜಾಂಬವಂತನಿಂದಲೇ ಅಲ್ಲವೇ? ಜಾಂಬವಂತನು ಹೇಳುವವರೆಗೆ ಹನುಮನಿಗೆ ತನ್ನ ಶಕ್ತಿಯ ಅರಿವೇ ಇರಲಿಲ್ಲವಲ್ಲವೇ?

ಒಂದಂತೂ ಸತ್ಯ: ಜಾಂಬವಂತನಂತೆ ಪೇಜಾವರದವರು ಅದೆಷ್ಟೋ ತರುಣಯತಿಗಳೆಂಬ ಹನುಮರನ್ನು ಹುರಿದುಂಬಿಸಿ, ಧರ್ಮರಕ್ಷಣೆಯ ಕಣಕ್ಕಿಳಿಸಿದರು.

ಅಂದು ಪೇಜಾವರದವರು ಆಡಿದ ಇನ್ನೊಂದು ಮಾತು: ‘ನಮಗೆ ವಯಸ್ಸಾಗುತ್ತಿದೆ; ಇನ್ನು ಯುವ ಯತಿಗಳಾದ ನೀವುಗಳು ಧರ್ಮಸಂಗ್ರಾಮದ ಹೊಣೆಯನ್ನು ಹೊತ್ತುಕೊಳ್ಳಬೇಕು.’ ಆದರೆ ಆ ಬಳಿಕ ಹದಿನೇಳು ವರ್ಷಗಳ ಕಾಲ ಅವರು ಧರ್ಮಯುದ್ಧದ ನೇತೃತ್ವವನ್ನು ವಹಿಸಿ, ಅವಿರತವಾಗಿ ಹೋರಾಡಿದರು.

ಕಷ್ಟದಲ್ಲಿ ಕೈಬಿಡದ ಬಂಧು!
ಸರ್ವನಾಶವೇ ಸಾಕ್ಷಾತ್ಕಾರಗೊಂಡ ಸನ್ನಿವೇಶವೊಂದರಲ್ಲಿ ನಾವಿದ್ದ ಕಾಲಘಟ್ಟ; ಶತ್ರುಗಳು ನಮ್ಮನ್ನು ನಾಲ್ಕೂ ದಿಕ್ಕಿನಿಂದ ಸುತ್ತುವರಿದಿದ್ದರು; ತಪ್ಪಿಸಿಕೊಳ್ಳಲಾರದ ವ್ಯೂಹವನ್ನು ರಚಿಸಿದ್ದರು; ವೈಭವದ ಸಮಯದಲ್ಲಿ ಜೊತೆಗಿದ್ದು, ಸಂಕಟ ಬಂದಾಗ ಓಡಿ ಹೋಗುವವರು ಅದಾಗಲೇ ಓಡಿಹೋಗಿಯಾಗಿತ್ತು. ಇನ್ನು, ಪ್ರೀತಿಯುಳ್ಳವರಲ್ಲಿಯೂ ಬಹು ಮಂದಿ ಪ್ರಕಟವಾಗಿ ನಮ್ಮೊಡನೆ ಬರಲು ಸಿದ್ಧರಿರಲಿಲ್ಲ; ‘ಯಾರು ನಮ್ಮ ಜೊತೆ ಗುರುತಿಸಿಕೊಳ್ಳುತ್ತಾರೋ ಅವರಿಗೆ ತೊಂದರೆ ತಪ್ಪಿದ್ದಲ್ಲ’ ಎಂಬ ವಾತಾವರಣ ನಿರ್ಮಾಣವಾಗಿತ್ತು. ಹೀಗೆ, ವಿರೋಧಿಗಳು ವಿಜೃಂಭಿಸುತ್ತಿದ್ದ, ಗೆದ್ದೆತ್ತಿನ ಬಾಲ ಹಿಡಿಯುವವರು ಕಾಣೆಯಾಗಿದ್ದ, ಹಿತೈಷಿಗಳೂ ಬಳಿ ಬರಲು ಹಿಂದೆ ಮುಂದೆ ನೋಡುತ್ತಿದ್ದ ವಿಕಟ ಕಾಲಘಟ್ಟದಲ್ಲಿ ಪೇಜಾವರಶ್ರೀಗಳು ನಮ್ಮನ್ನು ಸಂತೈಸಲು, ನಮ್ಮಲ್ಲಿ ಅಂತಸ್ಸ್ಥೈರ್ಯವನ್ನು ತುಂಬಲು ಬಂದೇ ಬಂದರು!

ಅದು ಹೊನ್ನಾವರದ ಸಮೀಪದ ನಮ್ಮ ಶಾಖೆಯೇ ಆದ ಕೆಕ್ಕಾರು ರಘೂತ್ತಮ ಮಠ; ನಡುರಾತ್ರಿಯ ಸಮಯ; ಕಾಳರಾತ್ರಿಯ ಕಗ್ಗತ್ತಲನ್ನು ಭೇದಿಸಿ ಉದಿಸುವ ಚಂದ್ರಮನಂತೆ ಪೇಜಾವರಶ್ರೀಗಳು ನಮ್ಮೆಡೆಗೆ ಬಂದರು; ಬೆಳದಿಂಗಳನ್ನೇ ತಂದರು! ಗಂಟೆಗಟ್ಟಲೇ ಜೊತೆಗಿದ್ದು ನಮ್ಮ ಕಡು ಕಷ್ಟದ ಕಥೆಯನ್ನು, ಕಟು ವಾಸ್ತವವನ್ನು ಕೇಳಿದರು; ನಮಗಾಗಿ ತಾನು ಮಾಡಿದ ಪ್ರಯತ್ನಗಳನ್ನು, ಎದುರಿಸಿದ ಸನ್ನಿವೇಶಗಳನ್ನು ವಿವರಿಸಿದರು; ಬೆಂಕಿಯನ್ನು ಹಾಯುತ್ತಿದ್ದ ನಮ್ಮ ಅಂತರಂಗಕ್ಕೆ ತಂಪೆರೆದರು.

ಅಂದಿನಿಂದ ಇಂದಿಗೆ ಶರಾವತಿಯಲ್ಲಿ ಬಹಳಷ್ಟು ನೀರು ಹರಿದಿದೆ; ಮಠವು ತಾನೆದುರಿಸಿದ ಸರ್ವಸ್ವಹರವಾದ, ಸರ್ವನಾಶಕರವಾದ ಸವಾಲುಗಳನ್ನು ಮೆಟ್ಟಿ ನಿಂತಿದೆ. ಅಂದಿಗಿಂತ ಹಲವು ಪಾಲು ಮಿಗಿಲಾದ ಸಂಖ್ಯೆಯಲ್ಲಿ ಸಂತರು, ಜನನಾಯಕರು, ಸಾಮಾನ್ಯ ಜನರು ಇಂದು ಮಠದೊಡನಿದ್ದಾರೆ; ಆದರೆ ಇಂದು ಜೊತೆಗಿರುವುದಕ್ಕೂ, ಅಂದು ಜೊತೆಗಿರುವದಕ್ಕೂ ಬಹಳ ಅಂತರವಿದೆ. ಇಂದು ಜೊತೆಗಿರುವುದೆಂದರೆ ಸಾವಿರಾರು ಜನರು ರಥವನ್ನು ಎಳೆಯುವಾಗ ಜೊತೆಯಲ್ಲಿ ನಾವೂ ಕೈಜೋಡಿಸಿದಂತೆ; ಅಂದು ಜೊತೆಗಿರುವುದೆಂದರೆ ಎಲ್ಲರೂ ಕೈಚೆಲ್ಲಿದಾಗ, ಕೃಷ್ಣನು ಏಕಾಂಗಿಯಾಗಿ ಗೋವರ್ಧನಗಿರಿಯನ್ನು ಎತ್ತಿದಂತೆ.”

ಅಳಿವು-ಉಳಿವುಗಳು ಪ್ರಶ್ನಚಿಹ್ನೆಯಾಗುವ ಪ್ರಾಣಸಂಕಟದ ಸಮಯದಲ್ಲಿ ಪೇಜಾವರಶ್ರೀಗಳ ತೆರನಾದ ಹಿರಿಯರೊಬ್ಬರ ಒಂದು ಸಾಂತ್ವನದ ಮಾತು ನೂರಾನೆಯ ಬಲವನ್ನು ತುಂಬಬಲ್ಲುದು. ಇಂಥ ಸಮಯಗಳಲ್ಲಿ ಅಂಥವರು ಸಿಕ್ಕಿದ್ದರೆ ಅದೆಷ್ಟೋ ಮಠಗಳು, ಮಹನೀಯರು ಅಥವಾ ಸಾಮಾನ್ಯ ಜನರು ಉಳಿದುಕೊಳ್ಳುತ್ತಿದ್ದರು.

ಯತಿವೇಷದ ಮಾತೆ..
ದೊಡ್ಡ ಮನುಷ್ಯರಿಗೆ ಸಾಮಾನ್ಯವಾಗಿ ತಮ್ಮ ತಮ್ಮ ಕಷ್ಟ-ಕಾರ್ಪಣ್ಯಗಳೇ ದೊಡ್ಡದಾಗಿರುತ್ತವೆ; ಮತ್ತೊಬ್ಬರ ಕಷ್ಟಕ್ಕೆ ಕರಗಲು ಅವರಿಗೆ ವ್ಯವಧಾನವೂ ಇರುವುದಿಲ್ಲ; ಕೆಲವೊಮ್ಮೆ ಅದಕ್ಕೆ ಅಗತ್ಯವಿರುವ ಮನೋಭಾವವೂ ಇರುವುದಿಲ್ಲ; ತಾನಾಗಿ ಹೋಗಿ ಪರರ ಕಷ್ಟವನ್ನು ಕೇಳುವುದಿರಲಿ, ಕಷ್ಟಕ್ಕೊಳಗಾದವರೇ ಬಳಿ ಬಂದಾಗಲೂ ಅವರ ಗೋಳನ್ನು ತಾಳ್ಮೆಯಿಂದ-ಕಕ್ಕುಲತೆಯಿಂದ ಆಲಿಸುವ ಮನಸ್ಸ್ಥಿತಿಯು ದೊಡ್ಡವರೆನ್ನಿಸಿಕೊಂಡ ಅನೇಕರಲ್ಲಿ ಇರುವುದೇ ಇಲ್ಲ; ಪೇಜಾವರಶ್ರೀಗಳು ಇದಕ್ಕೆ ಅಪವಾದವೆನ್ನುವುದಕ್ಕೆ ಉದಾಹರಣೆ ನಾವೇ.

೨೦೧೫ರ ಚಾತುರ್ಮಾಸ್ಯದ ಕೊನೆಯಲ್ಲಿ ಪೇಜಾವರಶ್ರೀಗಳು ಬೆಂಗಳೂರಿನ ಗಿರಿನಗರದ ನಮ್ಮ ಮಠಕ್ಕೆ ತಾವಾಗಿಯೇ ಭೇಟಿ ನೀಡಿದ್ದರು; ಕಾರಣ- ‘ರಾಮಚಂದ್ರಾಪುರಮಠದ ಶ್ರೀಗಳನ್ನು ಹೊರ ಬರಲಾರದಂತೆ ಕಾನೂನಿನ ಬಲೆಯಲ್ಲಿ ಸಿಲುಕಿಸಲು ಸಕಲ ಸಿದ್ಧತೆಗಳೂ ಆಗಿವೆ’ ಎಂಬ ಸುದ್ದಿಯು ಅವರ ಕಿವಿಯನ್ನು ತಲುಪಿತ್ತು; ಮಾತೃಹೃದಯದ ಆ ಮಹನೀಯ ಸಂತರ ಹೃದಯ ಆತಂಕಿತವಾಗಿತ್ತು; ‘ನಿಜವಾಗಿ ಏನಾಗಿದೆ’ ಎಂಬುದನ್ನು ನಮ್ಮ ಮುಖದಿಂದಲೇ ಅವರು ತಿಳಿದುಕೊಳ್ಳಬಯಸಿ ಗಿರಿನಗರದ ನಮ್ಮ ಮಠಕ್ಕೆ ಧಾವಿಸಿ ಬಂದಿದ್ದರು.

ಅಂದು ಅವರು ಆಗಮಿಸುವ ಸಮಯದಲ್ಲಿ ‘ಕರುವಿನ ಕಷ್ಟದಿಂದ ಕಳವಳಿಸುವ ತಾಯಿ ಹಸುವಿನ ಛಾಯೆ’ ಅವರಲ್ಲಿ ಗೋಚರಿಸಿದರೆ, ಸರಿಯಾದ ವಿವರಣೆಯನ್ನು ಪಡೆದು ‘ಮಠವು ಸುರಕ್ಷಿತ’ ಎಂಬುದು ಮನಸ್ಸಿಗೆ ಬಂದಾಗ, ಕಾರ್ಮೋಡವು ಕರಗಿದ ಬಳಿಕ ಶೋಭಿಸುವ ಚಂದ್ರನ ಕಳೆಯಲ್ಲಿ ಅವರ ಮೊಗವು ಬೆಳಗಿತ್ತು.

ಅವರೊಂದು ಮಾತು ಹೇಳಿ ಕಳುಹಿಸಿದ್ದರೆ ನಾವೇ ಹೋಗಿ ಅವರನ್ನು ಭೇಟಿಯಾಗುತ್ತಿದ್ದೆವು; ಆದರೆ ಹಾಗೆ ಮಾಡುವುದರ ಬದಲಾಗಿ, ತಾವೇ ನಾವಿರುವಲ್ಲಿಗೆ ಬಂದು ಕಷ್ಟ-ಸುಖ ವಿಚಾರಿಸಿದ ಪೇಜಾವರಶ್ರೀಗಳು ನಿಜಾರ್ಥದಲ್ಲಿ ದೊಡ್ಡವರೆನಿಸಿದರು.

ಷೋಡಶಗುಣ_ಪರಿಪೂರ್ಣಚಂದ್ರ..
ಉಡುಪಿಯಲ್ಲಿ ಪೇಜಾವರಶ್ರೀಗಳ ನೇತೃತ್ವದಲ್ಲಿ ನಡೆದ ಸಂತಸಮಾಗಮವೊಂದರಲ್ಲಿ ಮಾತನಾಡುವಾಗ ನಾವು- ಸಂತರು-ಪೇಜಾವರಶ್ರೀಗಳು ಮತ್ತು ಉಡುಪಿಯನ್ನು ಹೀಗೆ ಸಮನ್ವಯ ಮಾಡಿದ್ದೆವು.

  • ಉಡು ಎಂದರೆ ನಕ್ಷತ್ರಗಳು; ಅದು ಇಲ್ಲಿ ಸೇರಿದ ಸಂತರು.
  • ಉಡುಪ ಎಂದರೆ ನಕ್ಷತ್ರಗಳ ರಾಜ; ಅದು ಸಂತರೆಂಬ ತಾರೆಗಳ ನಡುವೆ ಚಂದ್ರನಂತೆ ಶೋಭಿಸುವ ಪೇಜಾವರಶ್ರೀಗಳು.
  • ಉಡುಪನು- ಚಂದ್ರನು(ಪ್ರಕೃತ ಪೇಜಾವರಶ್ರೀಗಳು) ನೆಲೆಸಿರುವ ಸ್ಥಳವೇ ಉಡುಪಿ!

ಚಂದ್ರನಲ್ಲಿ ಶೋಭಿಸುವ ಹದಿನಾರು ಕಲೆಗಳಂತೆ ಪೇಜಾವರಶ್ರೀಗಳಲ್ಲಿ ಸದಾ ಶೋಭಿಸುತ್ತಿದ್ದ ಹದಿನಾರು ಗುಣಗಳನ್ನು ಒಮ್ಮೆ ನೆನಪಿಸಿಕೊಂಡು, ಈ ಅನುಭವದ ಅಕ್ಷರಮಾಲಿಕೆಯನ್ನು ಶ್ರೀವಿಶ್ವೇಶತೀರ್ಥರ ಹೃದಯವಿಹಾರಿಯಾದ ಶ್ರೀವಿಶ್ವೇಶ-ವಿಷ್ಣುವಿನ ಚರಣಗಳಿಗೆ ಸಮರ್ಪಿಸುವೆವು.

  1. ಜೀವಲೋಕದೆಡೆಗೆ ಬದುಕಿಡೀ ತಡೆಯಿಲ್ಲದೇ ಹರಿದ ಪ್ರೀತಿ.
  2. ಪೊಡವಿಗೊಡೆಯ ಕೃಷ್ಣನ ಚರಣಗಳಲ್ಲಿ ಅವಿಚಲ ಭಕ್ತಿ.
  3. ಏಳಲಾಗದ ಸ್ಥಿತಿಯಲ್ಲಿಯೂ, ಮಲಗಿದಲ್ಲಿಂದಲೇ ಜಪ-ದೇವತಾರ್ಚನೆಗಳನ್ನು ಬಿಡದೆ ನಡೆಸುವ ನಿತ್ಯಾನುಷ್ಠಾನನಿಷ್ಠೆ.
  4. ಹೃದಯದ ಕದ ತೆರೆದು ಜೀವಲೋಕವನ್ನೇ ಒಳ ಬರಮಾಡಿಕೊಳ್ಳುವ ಪರಮೌದಾರ್ಯದ ನಡುವೆಯೂ ಕೆಡದ ಆಚಾರ.
  5. ತನ್ನ ಸಂಪರ್ಕ-ಸಂಪತ್ತು-ಅಂತಸ್ತುಗಳನ್ನೂ ಎಂದೂ, ಎಲ್ಲಿಯೂ ತೋರಗೊಡದ ನಿರಾಡಂಬರತೆ.
  6. ತಾನೊಬ್ಬ ಮಹಾವಿದ್ಯಾವಂತ, ಬಹು ದೊಡ್ಡ ಪೀಠಾಧಿಪತಿ, ಅನಂತವಾದ ಜನಮನ್ನಣೆಯುಳ್ಳವನು ಎಂಬುದನ್ನು ಮರೆತು, ಸಾಮಾನ್ಯರಲ್ಲಿ ಸಹಜವಾಗಿ ಬೆರೆತು ವ್ಯವಹರಿಸುವ ನಿರಹಂಕಾರತೆ.
  7. ಪುಟ್ಟ ಮಗುವನ್ನೂ ಮಾತನಾಡಿಸುವ/ಪುಟ್ಟ ಮಗುವೂ ಮಾತನಾಡಿಸಬಹುದಾದ ಸರಳತೆ.
  8. ಎಳೆಯ ಮಕ್ಕಳನ್ನೂ, ನವ ತರುಣರನ್ನೂ ನಾಚಿಸುವ ಪಾದರಸದ ಚುರುಕು.
  9. ಸಮಕಾಲದ ಘನಪಂಡಿತರೆಲ್ಲರನ್ನೂ ತಲೆದೂಗುವಂತೆ/ತಲೆ ಬಾಗುವಂತೆ ಮಾಡಿದ ಪ್ರಕಾಂಡ ಪಾಂಡಿತ್ಯ.
  10. ಕೊನೆಯ ದಿನಗಳವರೆಗೂ, ಹೆಚ್ಚೇನು, ಶರೀರದಲ್ಲಿ ಸಂಜ್ಞೆ ಉಳಿದಿರುವವರೆಗೂ ವಿದ್ಯಾರ್ಥಿಗಳಿಗೆ ಬಿಡದೆ ವಿದ್ಯಾಧಾರೆಯನ್ನೆರೆದ ಅಧ್ಯಾಪನಪ್ರೀತಿ.
  11. ಪಂಡಿತೋತ್ತಮರಿಂದ ಮೊದಲ್ಗೊಂಡು ಮುಗ್ಧ ಶಿಶುಗಳವರೆಗೆ ಸಕಲರಿಗೂ ಕಹಿ ಸತ್ಯಗಳನ್ನೂ-ಕಠಿಣ ತತ್ತ್ವಗಳನ್ನೂ ಸುಲಲಿತವಾಗಿ, ಸ್ವಾರಸ್ಯಕರವಾಗಿ ಮನವರಿಕೆ ಮಾಡಿಸಿಕೊಡುವ ವಾಗ್ಮಿತ್ವ.
  12. ಸಮಾಜದ ಸಕಲ ಆಗುಹೋಗುಗಳಿಗೆ, ಕಷ್ಟನಷ್ಟಗಳಿಗೆ ತಡವಿಲ್ಲದೆ ಮಾಡಿದ ಪ್ರತಿಸ್ಪಂದನ.
  13. ಬದಲಾದ ಸಮಕಾಲದ ಜಗತ್ತಿಗೆ ಸಲ್ಲುವಂತೆ ಬದಲಾದ ಶೈಲಿಯನ್ನು ಅಳವಡಿಸಿಕೊಳ್ಳುವ ಹೊಂದಾಣಿಕೆಯ ಗುಣ.
  14. ‘ಯಾವುದು ಏನಾದರೂ ತನ್ನ ನಿಷ್ಠೆಯು ಎಂದೆಂದೂ ಸನಾತನಧರ್ಮ-ಭಾರತೀಯಸಂಸ್ಕೃತಿಗಳಿಗೇ ಸರಿ’ ಎಂಬ ಸುದೃಢ ಬದ್ಧತೆ.
  15. ಸರಕಾರಗಳು-ಸುದ್ದಿಮಾಧ್ಯಮಗಳು-ಸಮಾಜದ ಸಂಪನ್ನ ಪುರುಷರು ಪ್ರತಿಕೂಲವಾಗಿರುವ ಕಾಲ-ದೇಶ-ಸನ್ನಿವೇಶಗಳಲ್ಲಿಯೂ ತಾನು ಕಂಡ ಸತ್ಯವನ್ನು-ತತ್ತ್ವವನ್ನು ಪ್ರಖರವಾಗಿ ಪ್ರತಿಪಾದಿಸುವ ನಿರ್ಭೀತತೆ.
  16. ಎರಡು ರೆಕ್ಕೆಗಳನ್ನೂ ಸಮವಾಗಿರಿಸಿಕೊಂಡು ನಭೋಮಂಡಲದಲ್ಲಿ ಹಾರಾಡುವ ಬಾನಾಡಿಯಂತೆ ಪರ-ವಿರೋಧದ ಪಕ್ಷಗಳೆರಡನ್ನೂ ಸಮನ್ವಯಗೊಳಿಸಿಕೊಂಡು ನುಡಿಯುವ-ನಡೆಯುವ ಸಮತೋಲನಚಾತುರೀ.
Facebook Comments Box