ಶ್ರೀ ಗುರುಭ್ಯೋ ನಮಃ
ದಿನಾಂಕ 15 – 12 – 2019ರಂದು ಇಕ್ಷ್ವಾಕು ಕುಲದೇವನಾದ ಸೂರ್ಯನ ಆಧಿಪತ್ಯದ ದಿನ, ಭಾನುವಾರ. ಮಹಾರಾಜ ದಶರಥನೇ ಶ್ರೀರಾಮನ ಪಟ್ಟಾಭಿಷೇಕಕ್ಕೆಂದು ಉದ್ದೇಶಿಸಿ ನಿಶ್ಚಯಿಸಿದ್ದ ಮುಹೂರ್ತವಾದ ಪುಷ್ಯಾ ನಕ್ಷತ್ರವಿದ್ದ ದಿನ, ದುಷ್ಟರನ್ನು ಸಂಹಾರ ಮಾಡಿ ವನವಾಸವನ್ನು ಮುಗಿಸಿ ಸೀತಾಸಮೇತನಾಗಿ ತನ್ನ ಎಲ್ಲ ಪರಿವಾರಸಮೇತನಾಗಿ ಅಯೋಧ್ಯೆಗೆ ಹಿಂತಿರುಗಿದ ಪುಷ್ಯಾ ನಕ್ಷತ್ರವಿದ್ದ ದಿನ. ಈ ದಿನ ಜಗದ್ಗುರು ಶ್ರೀ ಶಂಕರಾಚಾರ್ಯ ಸ್ಥಾಪಿತ ಪೀಠವಾದ ಗೋಕರ್ಣ ಮಂಡಲಾಚಾರ್ಯ ಶ್ರೀರಾಮಚಂದ್ರಾಪುರ ಶ್ರೀಮಠದ ಶಾಖಾಮಠವಾದ ಬೆಂಗಳೂರಿನ ಗಿರಿನಗರದ ರಾಮಾಶ್ರಮದಲ್ಲಿ ಪುಷ್ಪಕವಿಮಾನದಲ್ಲಿ ಸಪರಿವಾರ ಸಮೇತರಾಗಿ ಶ್ರೀಸೀತಾರಾಮಲಕ್ಷ್ಮಣರು ಬಂದಿಳಿದ್ದಾರೆ. ಧಾರಾರಾಮಾಯಣ ಅಯನದ ಕಡೆಯ ಹಂತ. ಶ್ರೀ ಸೀತಾರಾಮಚಂದ್ರರ ವೈಭವೋಪೇತ ರಾಜ್ಯಪಟ್ಟಾಭಿಷೇಕ. ತಮ್ಮ ಅಪೂರ್ವ ಪರಿವಾರದೊಡನೆ ನಂದಿಗ್ರಾಮದಿಂದ ಅಯೋಧ್ಯೆಗೆ ವೈಭವೋಪೇತ ಮೆರವಣಿಗೆಯಲ್ಲಿ ಚಿತ್ತೈಸಿದ ನಮ್ಮ ಸೀತಾರಾಮರಿಗೆ ರಾಮಪ್ರಿಯನಾದ ಸಾಕ್ಷಾತ್ ಶಂಕರನೇ ಶಂಕರಾಚಾರ್ಯರಾಗಿ ಅವತಾರವೆತ್ತಿ ಸ್ಥಾಪಿಸಿದ ಗೋಕರ್ಣ ಮಂಡಲಾಧೀಶರಾದ ಶ್ರೀರಘೂತ್ತಮಮಠದ ಅವಿಚ್ಛಿನ್ನ ಗುರುಪರಂಪರೆಯ ಪರಮಪೂಜ್ಯ ಶ್ರೀ ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀರಾಘವೇಶ್ವರ ಭಾರತೀ ಮಹಾಸನ್ನಿಧಾನಂಗಳ ಕರಕಮಲಗಳಿಂದಲೇ ಶ್ರೀ ಸೀತಾರಾಮರ ಪಟ್ಟಾಭಿಷೇಕ ! ಅದನ್ನು ತನಗಾಗಿಯೇ ಸ್ಥಾಪಿಸಿದ್ದ ಘನಪೀಠದಲ್ಲಿ ಕುಳಿತು ಭಾಷ್ಪವಾರಿಪರಿಪೂರ್ಣಲೋಚನನಾಗಿ ಕಣ್ತುಂಬಿಕೊಂಡ ಹನುಮಂತ! ಇದಕ್ಕೆಲ್ಲ ಸಾಕ್ಷಿಯಾದ ನಾವೂ ಶ್ರೀ ರಾಮಪರಿವಾರದವರೇ ಆಗಿ ಭಾಗ್ಯವಂತರಾದೆವು. ಇಂತಹ ವೈಭವದ, ಸಂತಸದ, ಮಹೋತ್ಸವದ ಶುಭಾವಸರದಲ್ಲಿಯೂ ನನ್ನಂತಹ ಅನೇಕರ ಕಣ್ಣಲ್ಲಿ ಧಾರಾರಾಮಾಯಣದ ನಮ್ಮ ಯಾನವು ಕೊನೆಗೊಂಡಿದೆಂಬ ಭಾವಾಶ್ರುವೂ ಧಾಧಾರೆಯಾಗಿ ಹರಿಯಿತು. ರಾಮನ ಪಟ್ಟಾಭಿಷೇಕದೊಂದಿಗೆ ಈ ಆರು ತಿಂಗಳ ಕಾಲವೂ ದಿನ ದಿನವೂ ಸಂಜೆಯಲ್ಲಿ ಸಂಭ್ರಮಿಸುತ್ತಿದ್ದ ನಮ್ಮ ಸುಖವೂ ಕೊನೆಗೊಂಡಿತು.
ಲೋಕೋನ್ನತಿಗೆಂದೂ, ಭಾರತದಲ್ಲಿ ಭಾರತೀಯತೆಯೇ ಉಳಿಯಬೇಕೆಂದೂ, ದೇಶಭಕ್ತ ವಿದ್ಯಾವಂತರು ಉದಯಿಸಬೇಕೆಂದೂ, ನಶಿಸಿಹೋಗುತ್ತಿರುವ ಭಾರತೀಯ ವಿದ್ಯೆಗಳನ್ನೂ, ಜೀವನ ಮೌಲ್ಯಗಳನ್ನೂ ಉತ್ಕರ್ಷಿಸಿ ಸುಸಂಸ್ಕಾರಗಳನ್ನು ನೀಡುವಂತಾಗಬೇಕು ಎಂಬ ಮಹೋನ್ನತ ಧ್ಯೇಯೋದ್ದೇಶಗಳ ಸಫಲತೆಯ ಸಲುವಾಗಿ ಗೋಕರ್ಣ ಮಹಾಕ್ಷೇತ್ರದಲ್ಲಿ ಪ್ರಾಚೀನ ತಕ್ಷಶಿಲಾ ಮಾದರಿಯಂತಹುದೇ ವಿಷ್ಣುಗುಪ್ತ ವಿಶ್ವವಿದ್ಯಾಪೀಠವನ್ನು ಸ್ಥಾಪಿಸುವ ಮುನ್ನ ಮಹಾವ್ರತವಾಗಿ, ಮಹಾತಪಸ್ಸಾಗಿ ದಿನಾಂಕ 20 – 6- 2019 ರಂದು ಗೋಕರ್ಣ ಮಂಡಲಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಚರಣರು ವಾಲ್ಮೀಕಿರಾಮಾಯಣದ ಪ್ರವಚನಾಮೃತಧಾರೆಯನ್ನು ಆರಂಭಿಸಿದ್ದರು. ಈ ಮಹಾವ್ರತವು ಸುಮಾರು ಆರು ತಿಂಗಳುಗಳ ಕಾಲ ನಡೆದು ದಿನಾಂಕ 15 – 12 – 2019ರಂದು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿತು. ಬರೇ ರಾಮಾಯಣವನ್ನು ಇನ್ನಿತರ ಮೂಲಗಳಿಂದ ಓದಿಕೊಂಡು ಅನೇಕ ಸಂಶಯಗಳೂ, ಪ್ರಶ್ನೆಗಳೂ ಇದ್ದಂತಹ ನನಗೂ ಈ ಧಾರಾರಾಮಾಯಣದೊಂದಿಗಿನ ನಮ್ಮ ಯಾನದಲ್ಲಿ ಹೃದಯಂಗಮವಾಗಿ, ತರ್ಕಬದ್ಧವಾಗಿ, ಅತ್ಯಂತ ಚೆಂದದಲ್ಲಿ ಮನೋಹರವಾಗಿ ಉತ್ತರಗಳು ಶ್ರೀಮುಖದಿಂದ ದಯಪಾಲಿತವಾಗಿ ಇದ್ದ ಸಂಶಯಗಳೆಲ್ಲ ಪರಿಹಾರವಾದವು. ಆದರೆ ಸೀತೆಯು ಅನುಭವಿಸಿದ ದುಃಖವಿದೆಯಲ್ಲ, ಅದು ಎಂದಿಗೂ ಬಾಧಿಸುತ್ತಲೇ ಇರುತ್ತದೆ. ರಾಮ, ಲಕ್ಷ್ಮಣ, ಭರತ, ಕೌಸಲ್ಯೆಯರದೂ ಸಹ. ಬಲಾತ್ಕಾರಕ್ಕೀಡಾಗಿದ್ದ ದುಷ್ಟ ರಾವಣನ 7000 ಪತ್ನಿಯರ ಅವಸ್ಥೆಯೂ ಕರುಣಾಜನಕವೇ.
ಲೋಕಕಲ್ಯಾಣಾರ್ಥ ಉದ್ದೇಶವಾಗಿ ಸರ್ವಸ್ವವನ್ನೂ ತ್ಯಾಗ ಮಾಡಲೆಂದೇ ಜನಿಸುವ ಮಹಾತ್ಮರೆಲ್ಲರನ್ನೂ, ಅಂದಿಗೂ – ಇಂದಿಗೂ – ಎಂದಿಗೂ ಹಿಂಸಿಸುವುದು, ದೂಷಿಸುವುದೇ ಈ ಲೋಕದ ಪರಿಯೇ? ಇದು ನನ್ನಂತಹವರಿಗೆ ಎಂದಿಗೂ ಅರ್ಥವಾಗದ್ದು. ಈ ವಾಲ್ಮೀಕಿ ರಾಮಾಯಣ ಯಾನದಲ್ಲಿ ನಾವೆಲ್ಲ ಎಷ್ಟೋ ವಿದ್ಯೆಗಳ ಅರಿವನ್ನು ಮಾಡಿಕೊಂಡೆವು. ವಾಲ್ಮೀಕಿ ರಾಯಾಯಣದಲ್ಲಿ ಇಷ್ಟೆಲ್ಲ ವಿದ್ಯೆಗಳಿವೆಯೇ ಎಂದು ಅಚ್ಚರಿ ಪಟ್ಟೆವು. ನಾನೂ ನನ್ನ ಸಹಪಾಠಿಗಳೂ ಅನೇಕ ವಿಚಾರಗಳ ವಿನಿಮಯಗಳನ್ನು ಮಾಡಿಕೊಂಡೆವು. ವಾಲ್ಮೀಕಿ ಮಹರ್ಷಿಗಳ fan ಗಳಾದೆವು. ದಿನವೂ ಶ್ರೀಕರಗಳಿಂದ ಪೂಜೆಗೊಳ್ಳುತ್ತಿದ್ದ ವಾಲ್ಮೀಕಿ ರಾಮಾಯಣಗ್ರಂಥವಿದ್ದ ಪೀಠ ಹಾಗೂ ಹನುಮಾನ್ ಪೀಠವನ್ನು ಅನೇಕ ಮಹಿಳಾಮಣಿಯರು ಶ್ರದ್ಧಾಭಕ್ತಿಗಳಿಂದ ಎಷ್ಟು ಚೆಂದವಾಗಿ, ಕಲೆಗಾರಿಕೆಯಿಂದ ಪುಷ್ಪಗಳಿಂದ ರಂಗೋಲಿಗಳಿಂದ ಚುರುಕಾಗಿ ಅಲಂಕಾರ ಮಾಡುತ್ತಿದ್ದರು! ಎಷ್ಟು ಸುಂದರವಾದ ಪುಷ್ಪಮಾಲೆಗಳನ್ನು ಕಟ್ಟುತ್ತಿದ್ದರು! ನೋಡಲು ಎರಡು ಕಣ್ಗಳು ಸಾಲದು.
ನಿಮಗೆ ಗೊತ್ತೇ? ವಾಲ್ಮೀಕಿ ರಾಮಾಯಣದಲ್ಲಿ ಶೂರ್ಪನಖಿಯು ತನ್ನ ಘೋರರೂಪದಲ್ಲಿಯೇ ರಾಮ ಲಕ್ಷ್ಮಣರನ್ನು ಕಂಡದ್ದು, ಆಕೆ ವೇಷಧರಿಸಿ ಬರಲಿಲ್ಲ! ಲಕ್ಷ್ಮಣ ರೇಖೆಯ ಪ್ರಸ್ತಾಪವಿಲ್ಲ! ಹನುಮಂತನಿಗೆ ಗದೆಯೇ ಇಲ್ಲ! ಆ ಮಹಾಮಹಿಮ ಎರಡೆರಡು ಬಾರಿ ಓಷಧ ಪರ್ವತವನ್ನು ಹೊತ್ತು ತಂದು ವಾಪಸ್ ಅಲ್ಲಿಗೇ ಮರಳಿಸಿದ್ದಾನೆ! ಆ ಪರ್ವತದ ಹೆಸರು ಸಂಜೀವನಿ ಅಲ್ಲ, ಓಷಧ ಪರ್ವತವೆಂದೇ ಹೆಸರು! ವಾನರರು ಕಟ್ಟಿದ್ದು ರಾಮಸೇತು ಅಲ್ಲ, ಅದು ನಲಸೇತು! ಹೀಗೇ ಇನ್ನೆಷ್ಟೋ ಮತ್ತೆಷ್ಟೋ ರಾಮಾಯಣದ ಸತ್ಯವಿಷಯಗಳ ಅನಾವರಣವು ನಮಗಾಯಿತು. ಗೋಕರ್ಣ ಋಷ್ಯಮೂಕ ಪರ್ವತದಲ್ಲಿಯೇ ತನ್ನ ಜನನವೆಂಬ ವೃತ್ತಾಂತವನ್ನು ಹನುಮನೇ ಸ್ವತಃ ರಾಮನಿಗೂ, ಸೀತೆಗೂ ವಿವರಿಸಿದರೂ ಈಗ ಜನಪದರು ಬೇರೆ ಬೇರೆ ಸ್ಥಳಗಳನ್ನು ಹನುಮನ ಜನ್ಮಸ್ಥಾನವೆಂದು ಹೇಳುವುದು ಆಶ್ಚರ್ಯವೆನ್ನಿಸುತ್ತದೆ! ಶ್ರೀರಾಮನ ವಾನರ ಸೈನ್ಯದ ಪಯಣದ ಹಾದಿಯೂ ಅಷ್ಟೇ. ಆ ಹಾದಿಯೆಲ್ಲವೂ ಈಗಲೂ ಪರ್ವತಗಳೂ ಕಾಡುಗಳೂ ಇದ್ದು ನೀರಿನ, ಹಣ್ಣು ಹಂಪಲುಗಳು ಸಮೃದ್ಧವಾಗಿದ್ದ ಪ್ರದೇಶಗಳೇ! ಎಷ್ಟು ತರ್ಕಬದ್ಧವಾಗಿದೆ! ವಾಲಿಯ ಸಂಹಾರದ ಸಂದರ್ಭದ ಪ್ರಶ್ನೆಗೆ ಶ್ರೀಮುಖದಿಂದ ಅನುಗ್ರಹವಾದ ಪರಿಹಾರಗಳು ನಮ್ಮ ಮನಸ್ಸು, ಬುದ್ಧಿ, ಅಂತರಾತ್ಮಗಳನ್ನು ತೊಳಗಿ ಬೆಳಗಿದವು. ಅಗ್ನಿಪರೀಕ್ಷೆಯ ಸಂದರ್ಭಗಳಂತೂ ಅಗ್ನಿಗೇ ಪರೀಕ್ಷೆ! ಪಂಚಭೂತಗಳಲ್ಲೊಂದಾದ ಆ ದೇವತೆ ಪರಮಪವಿತ್ರಳಾದ ಸೀತೆಗಾಗಿ ತನ್ನ ಸ್ವಭಾವ ಲಕ್ಷಣವಾದ ಸುಡುವ ಗುಣವನ್ನೇ ಬಿಟ್ಟು ಮೂರು ಬಾರಿ ಶೀತಲವಾಗಿ ವರ್ತಿಸಬೇಕಾಯಿತು! ಸೀತೆಯೇ ಮಾಡಿದ ಅಗ್ನಿಪ್ರವೇಶದ ಸಮಯದಲ್ಲಿ ರಾಮನೇ ಹೇಳಿಬಿಟ್ಟನಲ್ಲ, ತನಗಿದು ಸಜ್ಜನಪದದಲ್ಲಿ ಕೆಟ್ಟಹೆಸರನ್ನೇ ಶಾಶ್ವತವಾಗಿ ತರುತ್ತದೆ, ಪ್ರಜಾಪದರಲ್ಲಿ ದುರ್ಜನರು ನಡತೆಯಲ್ಲಿ ಸಡಿಲರಾಗಬಾರದೆಂದು ತಾನು ಕಠಿಣತಮ ನಿರ್ಧಾರವನ್ನು ಕೈಗೊಳ್ಳಲೇ ಬೇಕಾಗಿದೆಯೆಂದು! ಪ್ರಾಣಪ್ರದಳಾದ ಸೀತೆಯಲ್ಲಿಯೂ ಆತ ತನ್ನ ಧರ್ಮ, ನಿಯಮಗಳನ್ನು ಸಡಿಲಗೊಳಿಸಲಿಲ್ಲವಲ್ಲ ! ನಮ್ಮ ಜೀವನದಲ್ಲಿಯೂ ಅನೇಕ ಬಾರಿ ಸತ್ಯ ಧರ್ಮಗಳ ಪರವಾಗಿ ನಿಂತು ವಿಧಿಯಿಲ್ಲದೆ ನಮ್ಮ ಆಪ್ತಜನರಲ್ಲಿಯೇ ನಾವು ಕಠಿಣವಾಗಿ ವರ್ತಿಸಬೇಕಾಗಿ ಬಂದಿದ್ದ ಸಂದರ್ಭಗಳನ್ನು ನೆನೆಸುವಾಗ ಇಡೀ ಭೂಮಂಡಲದೊಡೆಯ, ಧರ್ಮಾತ್ಮ, ಆ ರಾಜಾರಾಮನು ತನ್ನ ಪ್ರಜಾಹಿತಕ್ಕಾಗಿ ಪರಿಶುದ್ಧ ರಾಜಕಾರಣಕ್ಕಾಗಿ ತನ್ನ ಸ್ವಹಿತವನ್ನು, ಸುಖವನ್ನು ಬಲಿಗೊಟ್ಟು ಸೀತೆಯನ್ನು ಕುರಿತಾಗಿ ಕಠಿಣ ನಿರ್ಧಾರವನ್ನು ಕೈಗೊಂಡದ್ದರಲ್ಲಿ ಆಶ್ಚರ್ಯವೇನು? ಇನ್ನು, ರಾವಣನನ್ನು ಹೊಗಳುತ್ತಾರಲ್ಲ, ಅವರೆಲ್ಲರೂ ಸರಿಯಾಗಿ ವಾಲ್ಮೀಕಿ ರಾಮಾಯಣವನ್ನು ಓದಲೇ ಬೇಕಾದದ್ದು. ಸರಿಯಾಗಿ ಓದಿದ್ದೇ ಆದಲ್ಲಿ ಕುತರ್ಕಗಳಿಗೂ, ಅವಿಚಾರರಮಣೀಯ ವಾದ – ವಿವಾದಗಳಿಗೂ ಶಾಶ್ವತ ಬೀಗ ಜಡಿದುಬಿಡುತ್ತದೆ. ರಾವಣನು ಶಿವಭಕ್ತನಾಗಿದ್ದನು ಎಂದು ಹೇಳುವವರು ಸೀತಾ ಅಗ್ನಿಪ್ರವೇಶದ ನಂತರ ಸಾಕ್ಷಾತ್ ಶಿವನೇ ರಾಮನಿಗೆ ಪ್ರತ್ಯಕ್ಷವಾಗಿ ರಾವಣಾಸುರನನ್ನು ಕುರಿತು ಹೇಳಿದ ಮಾತುಗಳನ್ನು ಕೇಳಲೇಬೇಕು!
ಶ್ರೀಮುಖದಿಂದ ಪ್ರವಚನಾಮೃತವು ಅನುಗ್ರಹವಾಗುವಾಗ ಕಥಾಸಂದರ್ಭಾನುಸಾರವಾಗಿ ನಾವೆಲ್ಲ ನಕ್ಕಿದ್ದೆಷ್ಟೋ, ಅತ್ತಿದ್ದೆಷ್ಟೋ! ನಾವೆಲ್ಲ ರಾಮಾಯಣದ ಆ ಪಾತ್ರಗಳಲ್ಲಿ ತನ್ಮಯರಾಗಿ ನಮ್ಮನ್ನು ನಾವೇ ಅವುಗಳಲ್ಲಿ ಆವಾಹಿಸಿಕೊಂಡಿದ್ದೆವು. ಕ್ವಚಿತ್ ಅಧ್ಯಾಯದಲ್ಲಿ ರಾಮನು ಭರತನಿಗೆ ರಾಜಕಾರಣವನ್ನು ಬೋಧಿಸಿದ ಸಂದರ್ಭವಾಗಲೀ, ಪ್ರತಿಯೊಂದು ಕಥಾಸನ್ನಿವೇಶಗಳಲ್ಲಿಯಾಗಲೀ ಮಹರ್ಷಿಗಳು ಚಿತ್ರಿಸಿದ ಚಿತ್ತಾರಗಳನ್ನಾಗಲೀ, ಕಾವ್ಯಸಮಯವನ್ನಾಗಲೀ ಬಿಡದೆ ಯಥಾವತ್ತಾಗಿ ಸಾರವತ್ತಾಗಿ, ರಸವತ್ತಾಗಿ, ಅತಿ ಮನೋಜ್ಞವಾಗಿ ನಮ್ಮ ಗುರುಗಳು ಉಚಿತವಾಗಿ ಹೇಳಿದ ಪರಿ ಇದೆಯಲ್ಲ, ಅದು ಬೇರಾರಿಗೂ ಇದುವರೆಗೂ ಸಿದ್ಧಿಸಲೇ ಇಲ್ಲವೆಂಬ ಭಾವನೆ ನಮಗುಂಟಾಯಿತು. ಶ್ರೀವಾಲ್ಮೀಕಿ ಮಹರ್ಷಿಗಳ ಆತ್ಮವು ಬಹುಶಃ ಬಹಳ ತಪಸ್ಸು ಮಾಡಿ ‘ ಅಯ್ಯಾ ಶ್ರೀರಾಮ, ಲೋಕದಲ್ಲಿ ನಾರದ ಮುನಿಗಳು ಹೇಳಿ ನಾನು ರಚಿಸಿದ ನಿನ್ನ ಜೀವನವನ್ನು ಕುರಿತಾದ ಕಾವ್ಯವನ್ನು ಈಗ ಲೋಕದಲ್ಲಿ ಒಂದೋ ವಿಕೃತಿಗೊಳಿಸಿದ್ದಾರೆ ಅಥವಾ ವಿಪರೀತ ಕಲ್ಪನೆಗಳಲ್ಲಿ ಸತ್ಯಗಳನ್ನು ಮರೆಮಾಚಿಸಿಬಿಟ್ಟಿದ್ದಾರೆ! ನಿನ್ನ ನಿಜವಾದ ಜೀವನವು ಹೇಗಿತ್ತೋ ಅಂತೆಯೇ ಸರಿಯಾಗಿ ರಚಿಸಲ್ಪಟ್ಟ ನನ್ನ ಕಾವ್ಯವನ್ನು ನಿಜರೀತಿಯಲ್ಲಿ ಜನಮಾನಸವು ಅರ್ಥ ಮಾಡಿಕೊಳ್ಳುವಂತೆ ಬೋಧಿಸುವವರನ್ನು ಲೋಕದಲ್ಲಿ ಅನುಗ್ರಹಿಸಬೇಕು’ ಎಂದು ರಾಮನಲ್ಲಿ ವರವನ್ನು ಪಡೆದಿರಬೇಕು! ತಥಾಸ್ತು, ಶ್ರೀರಘೂತ್ತಮಮಠದ ಅವಿಚ್ಛಿನ್ನ ಪರಂಪರೆಯ ಯತಿಗಳಿಂದಲೇ ಈ ಪುಣ್ಯಕಾರ್ಯವನ್ನು ಮಾಡಿಸುತ್ತೇನೆಂದು ಶ್ರೀರಾಮನೂ ವರವನ್ನು ಅನುಗ್ರಹಿಸಿದ್ದಿರಬೇಕು! ಈ ಆರುತಿಂಗಳು ಧಾರಾರಾಮಾಯಣವನ್ನು ಆಲಿಸಿದ ನಮ್ಮೆಲ್ಲರ ಮನಸ್ಸು – ಅಂತರಂಗಗಳಲ್ಲಿ, ಬುದ್ಧಿ – ಚಿಂತನೆಗಳಲ್ಲಿ, ಸಂತೋಷದ ಪೂರ್ಣಜ್ಯೋತ್ಸ್ನಾ ಅವತರಣ, ಆವರಣದ ಅನಾವರಣ. ಈ ಸತ್ಯಸುಖಾನುಭವ ನಮ್ಮ ಜೀವಿತಾವಧಿಯಷ್ಟು ಕಾಲವೂ ಶಾಶ್ವತ.
ಭೂಗೋಳ, ಭೂಮಿ, ಸಸ್ಯ, ತೌರ್ಯತ್ರಿಕ, ಜ್ಯೋತಿಷ, ಮನಃಶಾಸ್ತ್ರ, ಕಾವ್ಯಲಕ್ಷಣ, ದಶರೂಪಕ, ಪಾತ್ರಚಿತ್ರಣ ತಂತ್ರ, ಆಯುಧಗಳು, ಯುದ್ಧಚಾರೀ, ಮಾತೃದೇವತಾರಾಧನೆ, ಶ್ರೀವಿದ್ಯೆಯ ಕಾದಿವಿದ್ಯಾಭಾಗ, ನಾಟ್ಯಶಾಸ್ತ್ರದಲ್ಲಿ ಹೇಳಿದ ಹಲವಾರು ಸಂಗತಿಗಳು, ಅಷ್ಟನಾಯಿಕಾ -ನಾಯಕ ಲಕ್ಷಣಗಳು, ರಾಜನೀತಿ, ರಾಜಕಾರಣ ಇತ್ಯಾದಿ ಅನೇಕ ಸಂಗತಿಗಳನ್ನು ಅರಿತೆವು.
ಈ ಸುಖಮಾತ್ರದಲ್ಲಿಯೇ ಮುಳುಗಿ ನಾವು, ನಾವೇನು ಇಡೀ ಲೋಕವೇ ನಮ್ಮ ಕರ್ತವ್ಯವನ್ನು ಮರೆಯಲಾಗದು. ಶ್ರೀಗುರುಮುಖದಿಂದ ಲಭ್ಯವಾದ ಬೋಧನೆಗಳನ್ನು ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ. ಜಗದ್ಗುರುಗಳಾದ ಶ್ರೀ ಶ್ರೀ ಮಹಾಸನ್ನಿಧಾನಂಗಳು ಲೋಕಹಿತಕ್ಕಾಗಿ ಜ್ಞಾನರಾಮರಾಜ್ಯವು ವಿಜೃಂಭಿಸಲೆಂದೂ ಅಜ್ಞಾನ ರಾವಣರಾಜ್ಯವು ಅಳಿಯಲೆಂದೂ ಏಕಾಗಿ ಇಷ್ಟು ಶ್ರಮಿಸುತ್ತಿದ್ದಾರೋ ಆ ಉದ್ದೇಶಗಳೆಲ್ಲವೂ ಸಫಲವಾಗಬೇಕೆಂದು ನಾವೂ ಕಂಕಣಬದ್ಧರಾಗೋಣ. ದೇಶವು ಬದಲಾಗಿ ಸುಮುಖವಾಗಲೆಂದು ನಮ್ಮ ಸಂತಾನದ ಸ್ವಹಿತಕ್ಕಾಗಿಯೇ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಸಂಪೂರ್ಣ ಯಶಸ್ಸಿಗಾಗಿ ನಾವೆಲ್ಲರೂ ಸತ್ಯಧರ್ಮಋತರಾಗಿ ಪ್ರಾಮಾಣಿಕವಾಗಿ ತನು ಮನ ಧನ ಸಮಯದಾನಪೂರ್ವಕವಾಗಿ ಶ್ರಮಿಸಲೇಬೇಕಾಗಿದೆ, ಶ್ರಮಿಸೋಣ. ಮುಂದೆ ಇದೇ ರೀತಿಯಾಗಿ ಇನ್ನೂ ಅನೇಕ ಪ್ರವಚನಾಮೃತಗಳ ಧಾರೆಯು ಶ್ರೀಮುಖದಿಂದ ನಮಗೆ ಅನುಗ್ರಹವಾಗಲಿ, ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ಲೋಕಕ್ಕೇ ಬೆಳಕಾಗಲಿ ಎಂದು ಒಮ್ಮನಸ್ಸಿನಿಂದ ಪ್ರಾರ್ಥಿಸೋಣ,
ಹರೇರಾಮ
– ಶ್ರೀಮತಿ ರೋಹಿಣಿ ಕಾಂಚನ ಸುಬ್ಬರತ್ನಂ
Leave a Reply