ವಿದ್ಯಾ ವಿವಾದಾಯ, ಧನಂ ಮದಾಯ, ಶಕ್ತಿಃ ಪರೇಷಾಂ ಪರಿಪೀಡನಾಯ |
ಖಲಸ್ಯ, ಸಾಧೋಃ ವಿಪರೀತಮೇತತ್, ಜ್ಞಾನಾಯ, ದಾನಾಯ ಚ ರಕ್ಷಣಾಯ || – (ಸುಭಾಷಿತ)

ಖಲನಿಗೆ ಲಭಿಸಿದ ವಿದ್ಯೆ ವಿವಾದಕ್ಕೆ ವಿನಿಯೋಗವಾಗುತ್ತದೆ, ಧನವು ಮದವಾಗಿ ಬದಲಾಗುತ್ತದೆ, ಶಕ್ತಿಯು ಪರಪೀಡನೆಯ ಸಾಧನವಾಗಿ ಪರಿಣಮಿಸುತ್ತದೆ. ಸತ್ಪುರುಷನಿಗೆ ಲಭಿಸಿದ ವಿದ್ಯೆಯು ಜ್ಞಾನಕ್ಕಾಗಿ, ಧನವು ದಾನಕ್ಕಾಗಿ, ಶಕ್ತಿಯು ಕಷ್ಟದಲ್ಲಿರುವವರ ರಕ್ಷಣೆಗಾಗಿ ವಿನಿಯೋಗವಾಗುತ್ತದೆ.

ಚೀನಾ ಎಂಬ ನವ ಲಂಕೆ!

ಚೀನಾ ನೆನಪಾದಾಗ ನಮಗೆ ಪಕ್ಕದಲ್ಲಿಯೇ ನೆನಪಾಗುವುದು ಲಂಕೆ! ತ್ರೇತಾಯುಗದಲ್ಲಿ ಲಂಕೆಯೆಂದರೆ ಬಲ ಮತ್ತು ಲಂಕೆಯೆಂದರೆ ಭಯ! ಈ ಯುಗದಲ್ಲಿ ಚೀನಾವೆಂದರೂ ಹಾಗೆಯೇ.
ಬಲವೆಂದರೆಲ್ಲ ಭಯವಲ್ಲ. ಸನ್ಮತಿಯೊಡನೆ ಸೇರಿದರಂತೂ ಬಲವು ಸುತ್ತಮುತ್ತಲಿನವರಿಗೆ ಅಭಯವಾಗಿ ಮಾರ್ಪಡುತ್ತದೆ. ಆದರೆ ಬಲದೊಡನೆ ಪರಪೀಡೆಯ ಪ್ರವೃತ್ತಿಯು ಸೇರಿತೋ, ಸುತ್ತಮುತ್ತಲಿನವರ ನೆಮ್ಮದಿ ಮುಗಿಯಿತು! ಕಲಹ-ಕದನಗಳ, ಕಪಟ-ಕ್ರೌರ್ಯಗಳ ನಿತ್ಯನರಕದ ಬದುಕು ಅಲ್ಲಿಂದಲೇ ಆರಂಭ. ಅಂದು ಲಂಕೆಯಿದ್ದುದು ಹಾಗೆ; ಇಂದು ಚೀನಾ ಇರುವುದೂ ಹಾಗೆಯೇ!

ರಾವಣನೇನು ದೊರೆಯ ಮಗನಲ್ಲ. ಲಂಕಾ ಸಾಮ್ರಾಜ್ಯವು ಅವನಿಗೆ ಬಳುವಳಿಯಾಗಿ ಬಂದುದಲ್ಲ. ಸೋತು ರಸಾತಲ ಸೇರಿದ, ಚದುರಿ ಚೆಲ್ಲಾಪಿಲ್ಲಿಯಾಗಿದ್ದ ರಾಕ್ಷಸರನ್ನು ತನ್ನ ಅದ್ಭುತ ಸಂಘಟನಾ ಚಾತುರ್ಯದಿಂದ ಒಂದುಗೂಡಿಸಿ, ಅತಿಬಲಿಷ್ಠವಾದ ಸಾಮ್ರಾಜ್ಯವೊಂದನ್ನು ಕಟ್ಟಿದವನವನು. ಸಾಟಿಯಿಲ್ಲದ ಸಂಪತ್ ಸಮೃದ್ಧಿ; ಸರಿಸಮರಿಲ್ಲದ ಸಮರಸಾಮರ್ಥ್ಯಗಳು ಅವನ ಲಂಕಾಸಾಮ್ರಾಜ್ಯದ ಹೆಗ್ಗುರುತುಗಳು.

ಚೀನಾದ ರಾವಣನೆಂದರೆ ಮಾವೋ ಝೆದಂಗ್! ಏಷ್ಯಾದ ಸಾಮಾನ್ಯ ರಾಷ್ಟ್ರವಾಗಿದ್ದ, ಜಪಾನಿನ ಕೈಯಲ್ಲಿ ಪೆಟ್ಟು ತಿಂದುಕೊಂಡಿದ್ದ ಚೀನಾ ಪ್ರಬಲ ರಾಷ್ಟ್ರವಾಗಿ ಬೆಳೆದಿದ್ದು ಮಾವೊ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾದ ಬಳಿಕವೇ! ಇಂದು ಆ ದೇಶವು ಜಗತ್ತಿನ ಬಹು ದೊಡ್ಡ ಅರ್ಥಶಕ್ತಿಯಾಗಿ, ಸೇನಾ ಶಕ್ತಿಯಾಗಿ ಹೊರಹೊಮ್ಮಿದ್ದರೆ ಅದರ ಹಿಂದಿರುವುದು ಈ ವ್ಯಕ್ತಿಯೇ!

ಲಂಕೆಯ ಭವ್ಯತೆ-ಭದ್ರತೆ ಮತ್ತು ರಾವಣನ ಮಹಾಸಾಮರ್ಥ್ಯಗಳು ಹನುಮನಂತಹ ಮಹಾಮನೀಷಿಯನ್ನೂ, ಲೋಕೈಕವೀರನನ್ನೂ ಬೆರಗುಗೊಳಿಸಿದ್ದವು. ಇಂದಿನ ಚೀನಾದ ಸಾಂಪತ್ತಿಕ ಶಕ್ತಿ ಮತ್ತು ಸಮರ ಶಕ್ತಿಗಳು ಯಾರನ್ನಾದರೂ ದಿಗಿಲುಗೊಳಿಸುವಂಥವು. ಅಲ್ಲಿಗೆ ಸಂಘಟನೆ, ಸಮೃದ್ಧಿ, ಸಮರಶಕ್ತಿಗಳಲ್ಲಿ ಇಂದಿನ ಚೀನಾ ಮತ್ತು ಅಂದಿನ ಲಂಕೆಯ ಹೋಲಿಕೆಯು ಪರಿಪೂರ್ಣವಾಯಿತು.

~~

ನಿಜ, ರಾವಣನೆಷ್ಟು ಶೂರನೋ ಅಷ್ಟೇ ಕ್ರೂರ! ರಕ್ತಸಾಗರದ ನಡುವಲ್ಲಿ, ಶವಗಳ ಪರ್ವತದ ನೆತ್ತಿಯಲ್ಲಿ ಅವನ ಲಂಕಾಸಾಮ್ರಾಜ್ಯವು ಸ್ಥಾಪಿತವಾದುದು! ಕ್ರೌರ್ಯ-ಕೊಲೆಗಳಲ್ಲಿ ಮಾವೋ ರಾವಣನಿಗಿಂತ ಏನೇನೂ ಹಿಂದಿಲ್ಲ! ತನ್ನ ಪ್ರಾರಂಭದ ದಿನಗಳಲ್ಲಿ ಅವನು ಮೆಟ್ಟದ, ಹಿಂಸಿಸದ, ಕೊಲೆಗೈಯದ ಜನವಿಭಾಗವಿಲ್ಲ. ಇಪ್ಪತ್ತನೆಯ ಶತಮಾನದ ಅತಿ ದೊಡ್ಡ ಮಾರಣಹೋಮದ ರೂವಾರಿ ಯಾರು ಗೊತ್ತೇ? ಹಿಟ್ಲರ್ ಅಲ್ಲ, ಸ್ಟಾಲಿನ್ ಅಲ್ಲ, ಅದು ಮಾವೋ!

“Black Book of Communism” ಎಂಬ ಪ್ರಾಮಾಣಿಕವೆಂದು ಮಾನ್ಯವಾದ ಪುಸ್ತಕದಲ್ಲಿ ಮಾವೋನಿಂದ ಹತರಾದವರ ಸಂಖ್ಯೆಯನ್ನು ೬.೫ ಕೋಟಿ ಎಂದು ಅಂದಾಜಿಸಲಾಗಿದೆ! ಮಾವೋ ವಿರುದ್ಧ ಯಾರೇ ಸೊಲ್ಲೆತ್ತಿದರೂ, ಅವರು ಚಿತ್ರಹಿಂಸೆಗೊಳಗಾದರು; ಅಥವಾ ಬಲಾತ್ಕಾರದಿಂದ ಅಂಟುರೋಗಗಳಿಗೆ ಗುರಿಯಾದರು; ಇಲ್ಲವೇ ಕೊಲೆಯಾದರು! ಮಾವೋ ಸ್ಥಾಪಿಸಿದ ಕ್ರೌರ್ಯಪರಂಪರೆ ಅವನ ಬಳಿಕವೂ ಮುಂದುವರಿಯುತ್ತಿರುವುದಕ್ಕೆ ೧೯೮೯ರ ಟಿಯಾನ್ ಮನ್ ಚೌಕದ ಘೋರ ಹತ್ಯಾಕಾಂಡವು ಸಾಕ್ಷಿ!

ಚೀನಾ ದೇಶದಲ್ಲಿರಲಿ, ನಮ್ಮ ಭಾರತದಲ್ಲೂ ಮಾವೋ ಸಂತಾನವು ನಕ್ಸಲರೆಂಬ ರಾಕ್ಷಸರ ರೂಪದಲ್ಲಿ ಇಂದಿಗೂ ರಕ್ತದೋಕುಳಿಯಾಡುತ್ತಿದೆ!

ಒಡಹುಟ್ಟಿದ ಅಣ್ಣನಿಗೆ ಸೇರಿದ್ದ ಲಂಕೆಯನ್ನು – ಅವನು ಉಟ್ಟ ಬಟ್ಟೆಯಲ್ಲಿ ಬಿಟ್ಟು ಹೋಗುವಂತೆ ಮಾಡಿ – ಕಬಳಿಸಿ, ಬದುಕನ್ನು ಪ್ರಾರಂಭಿಸಿದವನು ರಾವಣ. ತನಗೆ ತಾಗಿರುವ ಯಾವುದೇ ರಾಷ್ಟ್ರದ ಭೂಮಿಯನ್ನು ಕಬಳಿಸುವ ಪ್ರಯತ್ನವನ್ನು ಮಾಡದೇ ಬಿಟ್ಟಿಲ್ಲ ಚೀನಾ. ತನ್ನ ಸುತ್ತಮುತ್ತಲ ಹದಿನೆಂಟು ರಾಷ್ಟ್ರಗಳೊಂದಿಗೆ ಗಡಿವಿವಾದವನ್ನು ಹೊಂದಿರುವ ಹುಟ್ಟು ಜಗಳಗಂಟ ದೇಶವದು!

ಇದೋ ನೋಡಿ, ನೆರೆಹೊರೆಯವರಿಗೆ ಹೊರೆಯಾದ, ಚೀನಾದ ಜಗಳ-ಪುರಾಣ, ಖ್ಯಾತ ಬರಹಗಾರ ತಾರೆಖ್ ಫತಾರ ಲೇಖನಿಯಲ್ಲಿ: China’s border disputes with 18 countries | Imperialism or Expansionist Designs?

ಭಾರತದ ಧೋರಣೆಯು ಇದಕ್ಕಿಂತ ಸಂಪೂರ್ಣ ಭಿನ್ನವಾದುದು. ನಮ್ಮ ದೇಶಕ್ಕೆ ಆಕ್ರಮಣಕ್ಕೆ ತುತ್ತಾಗಿ ಗೊತ್ತು; ಸಮರ, ಸಾವು-ನೋವುಗಳನ್ನು ತಪ್ಪಿಸಲು ತನ್ನ ಭೂಖಂಡಗಳನ್ನು ತ್ಯಾಗ ಮಾಡಿ ಗೊತ್ತು‌; ಆಕ್ರಮಣಗಳನ್ನು ಎದುರಿಸಿ ಗೊತ್ತು; ಆದರೆ ಮತ್ತೊಂದು ದೇಶದ ಮೇಲೆ ತಾನಾಗಿ ಆಕ್ರಮಣಗೈದು ಗೊತ್ತೇ ಇಲ್ಲ!

ಆದರೆ ಚೀನಾ-ಪಾಕಿಸ್ಥಾನದಂತಹ ನೆರೆಯವರಿದ್ದರೆ, ಎಂಥ ಶಾಂತಿಪ್ರಿಯರಿಗೂ ಯುದ್ಧ ತಪ್ಪಿದ್ದಲ್ಲ. ೧೯೬೨ರಲ್ಲಿ ಅರುಣಾಚಲ ಪ್ರದೇಶಕ್ಕಾಗಿ ಚೀನಾ ಭಾರತದ ಮೇಲೆ ಯುದ್ಧವನ್ನು ಹೇರಿತು. ಯುದ್ಧದಲ್ಲಿ ಭಾರತಕ್ಕೆ ಸೋಲಾಯಿತು. ಸೋಲಿಗೆ ಕಾರಣ ಬಲದ ಕೊರತೆಯಲ್ಲ; ಮನೋಬಲದ ಕೊರತೆ! ಧೀರ ದೊರೆಯಿಲ್ಲದಿರೆ, ವೀರರ ದಂಡಿದ್ದೂ ವ್ಯರ್ಥವೆಂಬುದಕ್ಕೆ ಉದಾಹರಣೆಯಾಯಿತು ಆ ಯುದ್ಧ!

ಸೋಲು ಕಲಿಸುವ ಪಾಠವನ್ನು ಗೆಲುವು ಕಲಿಸದು. ಅಂದು ಸೋತ ಭಾರತ ಬಳಿಕ ತಿರುಗಿ ನೋಡಲಿಲ್ಲ!
೧೯೬೪ರಲ್ಲಿ ನೆಹರೂ ನಿಧನದ ಬಳಿಕ ಭಾರತಕ್ಕೆ ಗೆಲುವಿನ ಸರಮಾಲೆಯೇ! ೧೯೬೫ರಲ್ಲಿ ನಮ್ಮ ಹೆಮ್ಮೆಯ ಸೇನೆಯು ಪಾಕಿಸ್ಥಾನದ ಮೇಲೆ ವಿಜಯ ಸಾಧಿಸಿತು. ೧೯೬೭ರಲ್ಲಿ ನಾಥುಲಾದಲ್ಲಿ ಚೀನಾಪಡೆಯನ್ನು ಹಿಮ್ಮೆಟ್ಟಿಸಿತು. ೧೯೭೧ರಲ್ಲಿ ಮತ್ತೊಮ್ಮೆ ಪಾಕಿಸ್ಥಾನಕ್ಕೆ ಸೋಲುಣಿಸಿತು. ೧೯೭೪ರಲ್ಲಿ ಅಣುಬಾಂಬ್ ನಿರ್ಮಿಸಿತು. ೧೯೯೯ರ ಕಾರ್ಗಿಲ್ ಕದನದಲ್ಲಿ ಪಾಕಿಸ್ಥಾನವನ್ನು ಭಗ್ನಗೊಳಿಸಿತು! ಇದೀಗ ಮೊನ್ನೆ ಡೋಕ್ಲಾಂನಲ್ಲಿ ಚೀನಾವನ್ನು ಪುನಃ ಹಿಮ್ಮೆಟ್ಟಿಸಿತು!

ಡೋಕ್ಲಾಂನಲ್ಲಿ ನಡೆದದ್ದೇನು?

ಭೂತಾನ್ ಭಾರತದ ಮಿತ್ರರಾಷ್ಟ್ರ. ಉಭಯ ರಾಷ್ಟ್ರಗಳ ನಡುವಿನ ಒಪ್ಪಂದದ ಪ್ರಕಾರ ಅದರ ರಕ್ಷಣೆ ಭಾರತದ ಹೊಣೆ. ಹೀಗಿರುವಾಗ ಭೂತಾನಿಗೆ ಸೇರಿದ ಡೋಕ್ಲಾಂನಲ್ಲಿ ಅತಿಕ್ರಮ ಪ್ರವೇಶಗೈದ ಚೀನಾ, ರಸ್ತೆ ನಿರ್ಮಿಸುವ ಮೂಲಕ ಅದನ್ನು ಸ್ವಾಧೀನಗೈಯಲೆತ್ನಿಸಿತು. ಸಮರತಂತ್ರದ ದೃಷ್ಟಿಯಿಂದ ಅತಿಸೂಕ್ಷ್ಮವಾದ ಆಯಕಟ್ಟಿನ ಸ್ಥಳವಾದ ಡೋಕ್ಲಾಂ ಚೀನಾದ ವಶವಾದರೆ ಭಾರತದ ಭದ್ರತೆಗೇ ಆಪತ್ತಿತ್ತು! ಧೀರ ನಾಯಕತ್ವದ ಅಡಿಯಲ್ಲಿ ಹೊಸ ಹುರುಪು ಕಂಡುಕೊಂಡಿರುವ ಭಾರತದ ಸೇನೆ ಚೀನಾದ ಈ ದುಷ್ಟ ಪ್ರಯತ್ನವನ್ನು ತಡೆಯಲು ಮುನ್ನುಗ್ಗಿತು. ಉಭಯ ರಾಷ್ಟ್ರಗಳ ನಡುವೆ ಪೂರ್ಣಪ್ರಮಾಣದ ಯುದ್ಧ ನಡೆದೇಹೋಗುವುದೆನ್ನುವ ಕುದಿ ಕುದಿ ವಾತಾವರಣ ನಿರ್ಮಾಣವಾಯಿತು. ೭೨ ದಿನಗಳ ದೃಷ್ಟಿಯುದ್ಧದ ಬಳಿಕ ಚೀನಾದ ಸೇನೆಯು ಡೋಕ್ಲಾಂನಿಂದ ಕಾಲ್ಕಿತ್ತಿತು!

ಭಾರತದ ಪರಾಕ್ರಮ – ಚೀನಾ ಕಣ್ಣಲ್ಲಿ. (ಕೃಪೆ: ವಿಕಿಪೀಡಿಯಾ, ಚಿತ್ರ: ಚೀನಾ ಸೈನಿಕರು)

೧೯೬೨ಕ್ಕೂ ೨೦೧೭ಕ್ಕೂ ಇರುವ ಅತಿ ದೊಡ್ಡ ವ್ಯತ್ಯಾಸವೆಂದರೆ ಅಂದು ಭಾರತವು ಯುದ್ಧ ಮಾಡಿಯೂ ಸೋತಿತು; ಇಂದು ಯುದ್ಧ ಮಾಡದೆಯೇ ಗೆದ್ದಿತು! ಕಾರಣ – ಅಂದಿರದ, ಇಂದಿರುವ – ಆತ್ಮವಿಶ್ವಾಸವೆಂಬ ಅದ್ಭುತ ಬಲ!  ಅಂದು ರಾಮನು ರಾವಣನನ್ನು ಗೆದ್ದಿದ್ದೂ ಇದೇ ಆತ್ಮಬಲದಿಂದ:

ವಿಜೇತವ್ಯಾ ಲಂಕಾ ಚರಣತರಣೀಯೋ ಜಲನಿಧಿಃ
ವಿಪಕ್ಷಃ ಪೌಲಸ್ತ್ಯೋ ರಣಭುವಿ ಸಹಾಯಾಶ್ಚ ಕಪಯಃ |
ತಥಾಪ್ಯೇಕೋ ರಾಮಃ ಸಕಲಮವಧೀದ್ರಾಕ್ಷಸಕುಲಮ್
ಕ್ರಿಯಾಸಿದ್ಧಿಃ ಸತ್ತ್ವೇ ಭವತಿ ಮಹತಾಂ ನೋಪಕರಣೇ || -(ಸುಭಾಷಿತರತ್ನಭಾಂಡಾಗಾರ)
“ಗೆಲ್ಲಬೇಕಿರುವುದು ಅಭೇದ್ಯವಾದ, ಅಜೇಯವಾದ ಲಂಕೆಯನ್ನು. ಚರಣಗಳಿಂದಲೇ ತರಣ ಮಾಡಬೇಕಿರುವುದು ಶತ ಯೋಜನಗಳ ಸಾಗರವನ್ನು‌. ಎದುರಿಸಬೇಕಿರುವುದು ಮೂಜಗದಲ್ಲಣನಾದ ರಾವಣನನ್ನು. ಸಮರಸಹಾಯಿಗಳೋ ಚಾಂಚಲ್ಯಕ್ಕೇ ಮತ್ತೊಂದು ಹೆಸರಾದ ಕಪಿಗಳು. ಆದರೆ, ಅಂತಿಮವಾಗಿ ಆದದ್ದೇನು? ರಾಮನ ಭಾವಬಲವು ಸಕಲ ರಾಕ್ಷಸರ ಬಾಹ್ಯಬಲವನ್ನು ಧ್ವಂಸಗೊಳಿಸಿತು. ಕಾರ್ಯಸಿದ್ಧಿಯು ನೆಲೆಸಿರುವುದು ಉಪಕರಣಗಳಲ್ಲಲ್ಲ; ಅಂತಃಕರಣದಲ್ಲಿ!

ಅಂದಿನ ರಾಮನ ವಿಜಯ ಮತ್ತು ಇಂದಿನ ಡೊಕ್ಲಾಂ ವಿಜಯಗಳು ಕಲಿಸುವ ಪಾಠವೇನೆಂದರೆ – ಚೀನಾವೆಂಬ ನವಲಂಕೆಯನ್ನು ಬಗ್ಗು ಬಡಿಯಬೇಕಾದರೆ ಭಾರತ ~ ಭಾರತೀಯರಿಗೆ ಬೇಕು ಆತ್ಮಾಭಿಮಾನ~ಆತ್ಮವಿಶ್ವಾಸಗಳು!

~*~*~

Facebook Comments Box