ಪ್ರಿಯ ಗೋಬಂಧು,

ಗೋಸ್ವರ್ಗದ ಕುರಿತು ಮಾತನಾಡಬೇಕೆಂದುಕೊಂಡೆವು; ಆದರೆ ಅದಕ್ಕೆ ಮೊದಲು ಗೋವುಗಳು ಇಂದು ನಿತ್ಯವೇದನೆಯಲ್ಲಿ ಬಾಳುತ್ತಿರುವ ರೀತಿಯ ಕುರಿತು ಮಾತನಾಡಬೇಕೆನಿಸುತ್ತಿದೆ; ಏಕೆಂದರೆ ಆ ನರಕ ಅರ್ಥವಾಗದೆ, ಈ ನಾಕ ಅರ್ಥವಾಗದು!

ಕಸಾಯಿಖಾನೆಯ ಮಾತು ಅಂತಿರಲಿ, ರೈತನ ಮನೆಯಲ್ಲಿಯೂ ಗೋವಿಗೆ ಸುಖವಿಲ್ಲ! ಎಲ್ಲರೂ ನೋಡಿಯೇ ಇರುವ, ಆದರೆ ನೋಡಿಯೂ ನೋಡದಂತಿರುವ ಕೆಳಕಂಡ ಸಂಗತಿಗಳನ್ನೊಮ್ಮೆ ಅವಲೋಕಿಸಿ:

*ಬದುಕಲ್ಲ, ಬವಣೆಯಿದು!

 1. ಜನನದೊಡನೆಯೇ ಮುಗಿಯಿತು ಜನನೀಸೌಖ್ಯ!
 • ಜನ್ಮ ತಾಳಿ ಅತ್ಯಲ್ಪ ಸಮಯದಲ್ಲಿಯೇ ಕರುವಿಗೆ ಮಾತೃವಿಯೋಗದ ಯೋಗ; ಪಾಪ! ಹೆತ್ತಮ್ಮ ಇದ್ದರೂ, ಉಕ್ಕಿ ಹರಿವ ಪ್ರೀತಿ ಇದ್ದರೂ ಒಡಗೂಡಿ ಅನುಭವಿಸುವ ಯೋಗ ಇಲ್ಲ!
 • ದೇವರು ಕರುವಿಗೆಂದೇ ಕೊಡಮಾಡಿದ ತಾಯ ಹಾಲು ಮತ್ತಾರದೋ ಪಾಲು!

      2. ಬಾಲ್ಯದಿಂದಲೇ ಬಳ್ಳಿ; ಬಂಧನವೇ ಬದುಕು!

 • ‘ಸ್ವಚ್ಛಂದವಾಗಿ ಸಂಚರಿಸು’ ಎಂದು ದೇವರು ನಾಲ್ಕು ಕಾಲುಗಳನ್ನಿತ್ತರೆ, ಎರಡು ಕಾಲಿನವರಿಂದ ಅದಕ್ಕೂ ಅಡ್ಡಿ!
 • ‘ಗಚ್ಛತಿ ಇತಿ ಗೌಃ’- ‘ಗೋ’ ಎಂಬ ಶಬ್ದಕ್ಕೇ ಗತಿಶೀಲವೆಂದು ಅರ್ಥ; ಮತಿಹೀನ ಮನುಷ್ಯರ ಹಸ್ತಕ್ಷೇಪದಿಂದ ಅದು ನಿರರ್ಥ!
 • ಯಾವ ಅಪರಾಧವೂ ಇಲ್ಲದೆ ನಮ್ಮನ್ನೇನಾದರೂ ಹೀಗೆ ಬದುಕಿಡೀ ಬಂಧನದಲ್ಲಿರಿಸಿದರೆ ಹೇಗನಿಸೀತು?
 • ಸಂಚಾರ-ನಿರ್ಬಂಧದ ವಿಪರಿಣಾಮ ಗೋವುಗಳ ಆರೋಗ್ಯದ ಮೇಲೆ! ದೈವದತ್ತವಾದ ದಿವ್ಯ ಶರೀರವು ಸ್ವಸ್ಥವಾಗಿ ಉಳಿಯಲು ತಕ್ಕಷ್ಟು ವ್ಯಾಯಾಮವೇ ಇಲ್ಲ!

     3. ‘ಗೋ’ ಶಬ್ದಕ್ಕೆ ‘ಸೂರ್ಯಕಿರಣ’ವೆಂದೂ ಅರ್ಥವಿದೆ; ಗೋವು ಚೆನ್ನಾಗಿರಲು ಮೇವು-ನೀರುಗಳು ಹೇಗೆ ಅತ್ಯಗತ್ಯವೋ, ಹಾಗೆಯೇ ಸೂರ್ಯ-ಸಂಪರ್ಕವೂ ಗೋವುಗಳಿಗೆ ಅತ್ಯಾವಶ್ಯಕ; ಸೂರ್ಯಕಿರಣಗಳು ಗೋವಿನಲ್ಲಿರುವ ಸೂರ್ಯಕೇತು ನಾಡಿಯ ದ್ವಾರಾ ಗೋವಿನ ಶರೀರವನ್ನು ಪ್ರವೇಶಿಸಿ, ಗೋಕ್ಷೀರ~ಗೋಮೂತ್ರ~ಗೋಮಯಗಳನ್ನು ಸೇರುತ್ತವೆ; ಗವ್ಯಗಳ ಮೂಲಕವಾಗಿ, ಅಂತಿಮವಾಗಿ ನಮ್ಮ ಬಾಳನ್ನೇ ಬೆಳಗುತ್ತವೆ! ಆದರೆ ಅನವರತ ಒಳಗೇ ಕಟ್ಟಿ ಸಾಕುವುದರಿಂದ ಗೋವು ಸೂರ್ಯಕಿರಣಗಳಿಂದಲೇ ವಂಚಿತ!

    4. ತಿನ್ನಲು ಬೇಕಾದ ಮೇವಿಲ್ಲ; ಇರುವ ಮೇವೂ ಬೇಕಾದಷ್ಟಿಲ್ಲ; ಅದೂ ಬೇಕೆನಿಸಿದಾಗ ಇಲ್ಲ!

 • ಮನುಷ್ಯರು ಕೊಟ್ಟ ಮೇವನ್ನು, ಕೊಟ್ಟಾಗ- ಕೊಟ್ಟಷ್ಟು ತಿಂದು ಬದುಕುವ ಬದುಕು ಬವಣೆಯೇ ಅಲ್ಲವೇ?

    5. ಸೇವಿಸುವ ಆಹಾರವು ವಿಷದೂಷಿತ!

 • ಮಾನವನ ಮನದೊಳಗಿನ ದುರಾಸೆಯ ವಿಷವು ರಾಸಾಯನಿಕಗಳ ರೂಪ ತಾಳಿ, ಬೆಳೆಗಳ ಮೇಲೆ ಮಳೆಯಂತೆ ಸುರಿದುದರ ನೇರ ಪರಿಣಾಮ ಗೋವುಗಳ ಮೇವಿನ ಮೇಲೆ! 

   6. ನೀರಿಗೆ ಸಂಸ್ಕೃತದಲ್ಲಿ ‘ಜೀವನ’ವೆನ್ನುವರು; ಜೀವಿಸಿರಲು ಜೀವಿಗಳಿಗಿರುವ ಪ್ರಾಥಮಿಕ ಆವಶ್ಯಕತೆ ಅದು! ಗೋವೂ ಜೀವವಲ್ಲವೇ? ‘ಬಾಯಾರಿದಾಗ ಅಲ್ಲ, ಯಜಮಾನ ಕೊಟ್ಟಾಗ ನೀರು’ ಎಂಬುದು ಕ್ರೂರವಲ್ಲವೇ?

 •     ಯಾವಾಗಲೋ ಸಿಗುವ ನೀರೂ ಕೂಡಾ ಪ್ರಾಕೃತಿಕವಲ್ಲ, ಅದೆಷ್ಟೋ ಬಾರಿ ಪರಿಶುದ್ಧವೂ ಅಲ್ಲ!

   7. ಅತಿಯಾದ ದುಡಿತ; ಮಿತಿ ಮೀರಿದ ಬಡಿತ!

 • ಹಸುವಾದರೆ ಅದು ತಿಂದ ಮೇವು, ಕುಡಿದ ನೀರೆಲ್ಲವೂ -ಒಂದು ಕಣ ಬಿಡದಂತೆ- ಹಾಲಾಗಿ, ಮನುಷ್ಯನ ಹೊಟ್ಟೆ ಸೇರಬೇಕು!
 • ಹೋರಿಯಾದರೆ ಅದರ ಕಸುವೆಲ್ಲವೂ ಕರಗಿ, ಬೆವರಾಗಿ ಹರಿದು ಹೊಲ ಸೇರಬೇಕು, ಬಳಿಕ ಹಣವಾಗಿ ಮಾಲೀಕನ ಕಿಸೆ ಸೇರಬೇಕು!
 • ಬೆನ್ನು ಬಾಗುವಷ್ಟು ದುಡಿತದ ಬಳಿಕ ಬೆನ್ನು ಮುರಿಯುವಷ್ಟು ಬಡಿತ!
 • ಆ ನಿರಪರಾಧಿ ಜೀವದ ಮೇಲಿನ ದೌರ್ಜನ್ಯವೆಷ್ಟೆಂದರೆ- ‘ದನಕ್ಕೆ ಬಡಿದಂತೆ ಬಡಿದರು’ ಎಂದು ಗಾದೆ ಹುಟ್ಟಿಕೊಳ್ಳುವಷ್ಟು!

    8. ಸಹಜ ಸುಖಗಳಿಂದ ಗೋವಂಶವು ವಂಚಿತ!

 • ಕೃತಕ ಗರ್ಭಧಾರಣೆಯು ನಂದಿ~ನಂದಿನಿಯರ ಸಂಗಮ-ಸೌಖ್ಯದ ಸರ್ವನಾಶಗೈದರೆ, ಮನುಷ್ಯನ ಹಾಲಿನ ಹಪಹಪಿಯು ಕರುಳಕುಡಿಯ ಸಾಮೀಪ್ಯ-ಸೌಖ್ಯಕ್ಕೂ ಸಂಚಕಾರ ತಂದಿದೆ!

   9. ಇದೆಲ್ಲದರ ಬಳಿಕ, ನಮಗಾಗಿ ತನ್ನ ಆಯುಸ್ಸಿನ ಕ್ಷಣ-ಕ್ಷಣವನ್ನು- ಶರೀರದ ಕಣ-ಕಣವನ್ನು ಸವೆಸಿದ ಹಸುವನ್ನು ಕಿಲುಬು-ಕಾಸಿಗಾಗಿ ಕಸಾಯಿಗಳಿಗೆ ಮಾರಿದಲ್ಲಿಗೆ ಆ ದೇವರಂಥ ಜೀವದ –            ನರಕದಂಥ ಜೀವನಪರ್ವ ಮುಗಿದು, ನರಕವನ್ನೂ ನಾಚಿಸುವ ಮರಣಪರ್ವದ ಆರಂಭ!

 

*ಗೋವುಗಳ ನರಕ ನೀಗಲು ಗೋಸ್ವರ್ಗದ ಕನಸು!

ಈ ಎಲ್ಲ ಸಂಕಟ-ಕಂಟಕಗಳಿಂದ ಮುಕ್ತವಾದ, ಗೋವುಗಳ ಪಾಲಿಗೆ ಅತ್ಯಂತ ಸುಖಪ್ರದವಾದ ಸ್ಥಾನವೊಂದನ್ನು ಭೂಲೋಕದಲ್ಲಿ ಕಲ್ಪಿಸಲು ನಮ್ಮ ಹೃದಯವು ಕಾತರಿಸಿತು; ಆಗಲೇ ಗೋಸ್ವರ್ಗವೆಂಬ ಭೂಸ್ವರ್ಗವು ಪರಿಕಲ್ಪನೆಯಾಗಿ, ಕಮನೀಯವಾದ ಕನಸಾಗಿ ನಮ್ಮೊಳಗೆ ಅವತರಿಸಿದುದು!

*ನನಸಿನೆಡೆ ಕನಸು..
ನನಸಾಗದ ಕನಸುಗಳು ಹಣ್ಣಾಗದ ಹೂವುಗಳು; ಮನಸ್ಸಿನಲ್ಲಿಯೇ ತಿಂದ ಮಂಡಿಗೆ ಮೈಗೆ ಹಿಡಿಯುವುದೇ? ಗುಡುಗು ಗುಡುಗಿ, ಮಿಂಚು ಮಿಂಚಿ, ಮಳೆ ಬಾರದಿದ್ದರೆ ಫಲವೇನು?
ಅಂತೆಯೇ, ನಮ್ಮ ಕನಸನ್ನು ಯಾರೋ ನನಸು ಮಾಡಲೆಂದು ಆಶಿಸುವುದು ಹೇಡಿತನ, ಬುದ್ಧಿಗೇಡಿತನ! ‘ಶಿವಾಜಿ ಹುಟ್ಟಲೇಬೇಕು; ಆದರೆ ನಮ್ಮ ಮನೆಯಲ್ಲಲ್ಲ, ಪಕ್ಕದ ಮನೆಯಲ್ಲಿ!’ ಎನ್ನುವ ಭಾವ ಜನರಲ್ಲಿ ಇರುವವರೆಗೆ ದೇಶ ಉದ್ಧಾರವಾಗದು! ಆದುದರಿಂದ “ಗೋಸ್ವರ್ಗದ ಕಮನೀಯ ಕನಸನ್ನು ನಾವೇ ನನಸುಗೊಳಿಸಬೇಕು; ನಮ್ಮದೇ ನೆಲದಲ್ಲಿ ನನಸುಗೊಳಿಸಬೇಕು; ಮತ್ತು ಕಾಲವಿಳಂಬವಿಲ್ಲದೆಯೇ ನನಸುಗೊಳಿಸಬೇಕು” ಎಂಬ ಭಾವತ್ರಯವು ಅಂತರಂಗದಲ್ಲಿ ಮೂಡುತ್ತಿರಲು, ತತ್ಕ್ಷಣದಲ್ಲಿಯೇ ಕಾರ್ಯೋನ್ಮುಖರಾದೆವು.

*ಭಾನ್ಕುಳಿಯೆಂಬ ಭೂಸ್ವರ್ಗ!
ಆಗ ನಮ್ಮ ಕಣ್ಮುಂದೆ ಬಂದಿದ್ದು ನಮ್ಮದೇ ಭಾನ್ಕುಳಿ ಮಠ; ಉತ್ತರಕನ್ನಡದ ಸಿದ್ದಾಪುರದ ಸನಿಹದ, ಸಹ್ಯಾದ್ರಿಯ ಶೃಂಗೋತ್ತುಂಗದಲ್ಲಿ ವಿರಾಜಿಸುವ ಈ ಸ್ಥಳವು ನಿಸರ್ಗದ ಸ್ವರ್ಗ!
ಭಾನ್ಕುಳಿಯೆಂದರೆ ಹಸಿರು ಹೊದ್ದ ಊರು; ತಂಪಿನ ತವರು; ಪುಟ್ಟ ಪುಟ್ಟ ಬೆಟ್ಟಗಳ ನಟ್ಟ ನಡುವೆ ಅಲ್ಲೊಂದು ಭತ್ತದ ಬಹು ದೊಡ್ಡ ಬಯಲು; ಅಲ್ಲಿ ನಮ್ಮ ಪೂರ್ವಾಚಾರ್ಯರು ನಿರ್ಮಿಸಿದ ಪುಟ್ಟ ಪುಷ್ಕರಿಣೀ; ಗದ್ದೆಯಂಚಿನಲ್ಲಿ ಹರಿವ, ಮಧುರ- ನಿರ್ಮಲ- ಶೀತಲ ಜಲದ ಕಿರುತೊರೆ..

* ಭತ್ತದ ನೆಲದಲ್ಲಿ ಬತ್ತದ ಜಲದ ಸೆಲೆ; ಅಲ್ಲಿ ಸರ್ವದೇವತೆಗಳ ನೆಲೆ!

ಆ ಭತ್ತದ ಬಯಲಿನ ಮಧ್ಯದಲ್ಲಿ- ಬತ್ತದ ಅಂತರ್ಜಲದ ಸೆಲೆಯೊಂದನ್ನು ಕಂಡೆವು; ಆ ಜಲದಲ್ಲಿ ನಾವು ನಿತ್ಯ ಆರಾಧಿಸುವ ದೇವರುಗಳ ನೆಲೆಯನ್ನೂ ಗಮನಿಸಿಕೊಂಡೆವು. ಶ್ರೀಮಠದ ಅಧಿದೈವತಗಳಾದ ಶ್ರೀಸೀತಾರಾಮಚಂದ್ರ, ಶ್ರೀಚಂದ್ರಮೌಳೀಶ್ವರ, ಶ್ರೀರಾಜರಾಜೇಶ್ವರಿ, ಶ್ರೀಆಂಜನೇಯ, ನಮ್ಮ ಅವಿಚ್ಛಿನ್ನವಾದ ಶ್ರೀಗುರುಪರಂಪರೆ, ಮಾತ್ರವಲ್ಲದೆ ಆ ಸೀಮೆಯ ಅಧಿದೈವತಗಳಾದ ಇಟಗಿಯ ಶ್ರೀರಾಮೇಶ್ವರ, ಭುವನಗಿರಿಯ ಶ್ರೀಭುವನೇಶ್ವರಿ; ಈರೇಳು ಲೋಕಗಳನ್ನೇ ಬೆಳಗುವ ಈ ಏಳು ಮಹಾಸನ್ನಿಧಾನಗಳು ಮುಂಬರುವ ಮಹತ್ಕಾರ್ಯವೊಂದನ್ನು ಅನುಗ್ರಹಿಸಲೆಂಬಂತೆಯೇ ಅಲ್ಲಿ- ಜಲರೂಪದಲ್ಲಿ ನೆಲೆಸಿರುವುದನ್ನು ಕಂಡುಕೊಂಡು, ಅಲ್ಲಿಯೇ ಗೋಸ್ವರ್ಗವನ್ನು ನಿರ್ಮಿಸುವ ನಿಶ್ಚಯವನ್ನು ಕೈಗೊಂಡೆವು. ನಾಕನಿರ್ಮಿತಿಯ ಆ ನಿಶ್ಚಯವು ನಾಲಿಗೆಗೆ ಬರಲು, ಬಳಿಕ ನೆಲಕ್ಕಿಳಿಯತೊಡಗಲು ತಡವಾಗಲಿಲ್ಲ! ಇದೀಗ ಭಾನ್ಕುಳಿಯ ಭೂಸ್ವರ್ಗದಲ್ಲಿ ಜಗತ್ತಿನ ಏಕೈಕ ಮತ್ತು ಪ್ರಥಮ ಗೋಸ್ವರ್ಗವು ಶರವೇಗದಲ್ಲಿ ಮೇಲೆದ್ದುಬರುತ್ತಿದೆ!

 

ಗೋಸ್ವರ್ಗ ನೀಲನಕ್ಷೆ : ಪರಿಕಲ್ಪನೆ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು |ಚಿತ್ರರೂಪ: ನೀರ್ನಳ್ಳಿ ಗಣಪತಿ

ಗೋಸ್ವರ್ಗ ನೀಲನಕ್ಷೆ || ಪರಿಕಲ್ಪನೆ: ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು |ಚಿತ್ರರೂಪ: ನೀರ್ನಳ್ಳಿ ಗಣಪತಿ

ಗೋಸ್ವರ್ಗದಲ್ಲಿ ಏನೇನಿದೆ?

ಗೋತೀರ್ಥ: ಗೋಸ್ವರ್ಗದ ಮಧ್ಯಕೇಂದ್ರದಲ್ಲಿ ನೂರಡಿಯ ಚತುರಶ್ರದ ಸ್ಫಟಿಕನಿರ್ಮಲ ಸುವಿಶಾಲ ಸರೋವರ.

ಸಪ್ತಸನ್ನಿಧಿ: ಸರೋವರದ ಮಧ್ಯದಲ್ಲಿ- ಕಲಾಮಯವಾದ ಶಿಲಾಮಯ ಮಂಟಪದಲ್ಲಿ- ಜಲರೂಪದಲ್ಲಿ ನೆಲೆಸಿರುವ, ಶ್ರೀರಾಮನೇ ಮೊದಲಾದ ಏಳು ಮಹಾದೇವತೆಗಳ ದಿವ್ಯಸನ್ನಿಧಿ.

ಸಪ್ತ ಸನ್ನಿಧಿ || ಪರಿಕಲ್ಪನೆ: ಶ್ರೀಶ್ರೀಗಳವರು. ಚಿತ್ರರೂಪ: ನೀರ್ನಳ್ಳಿ ಗಣಪತಿ

ಸಪ್ತ ಸನ್ನಿಧಿ || ಪರಿಕಲ್ಪನೆ: ಶ್ರೀಶ್ರೀಗಳವರು. ಚಿತ್ರರೂಪ: ನೀರ್ನಳ್ಳಿ ಗಣಪತಿ

ಗೋಪದ: ಸರೋವರದ ನಾಲ್ಕೂ ದಿಕ್ಕುಗಳಲ್ಲಿ ಗೋವುಗಳ ಶ್ರವಣಸುಖಕ್ಕಾಗಿಯೇ ಮೀಸಲಿರುವ ನಾಲ್ಕು ಸತ್ಸಂಗ ವೇದಿಕೆಗಳು.
ಸರೋವರದ ತಂಪಿನಲ್ಲಿ, ಸಪ್ತ ದೇವತೆಗಳ ಸನ್ನಿಧಿಯಲ್ಲಿ, ಸ್ವತಂತ್ರವಾಗಿ ವಿಹರಿಸುವ ಸಹಸ್ರ ಗೋವುಗಳ ಆವಾಸ.

ಗೋವಿರಾಮ: ಗೋವುಗಳು ನೆರಳಿನಲ್ಲಿ ವಿಶ್ರಾಂತಿಸುಖವನ್ನು ಪಡೆಯಲೆಂದು, ಸುಮಾರು 30,000 ಚದರಡಿಗಳ ವಿಸ್ತಾರದಲ್ಲಿ ನಿರ್ಮಿಸಲ್ಪಡುತ್ತಿರುವ ಗೋಶಾಲೆ.

ಗೋವಿಹಾರ: ಗೋವುಗಳಿಗೆ, ಸೂರ್ಯಕಿರಣಗಳಲ್ಲಿ ಮೀಯುತ್ತ, ಸ್ವಚ್ಛಂದವಾಗಿ ವಿಹರಿಸುವ ಸೌಖ್ಯವು ಲಭಿಸಲೆಂದು, ಸುಮಾರು 70,000 ಚದರಡಿಗಳ ವೈಶಾಲ್ಯದಲ್ಲಿ ನಿರ್ಮಿತಗೊಳ್ಳುತ್ತಿರುವ ವಿಹಾರಧಾಮ.

ಸದಾತೃಪ್ತಿ: ಗೋವುಗಳಿಗೆ ಸದಾಕಾಲವೂ ಮೇವು ಲಭ್ಯಗೊಳ್ಳುವ ಸ್ಥಾನ.

ಸುಧಾಸಲಿಲ: ಗೋವುಗಳ ಜಲಪಾನಕ್ಕಾಗಿ ಅಲ್ಲಲ್ಲಿ ಇರಿಸಲ್ಪಟ್ಟ ಶಿಲಾಮಯ ಜಲಾಶ್ರಯಗಳು.

ಪ್ರೇಕ್ಷಾಪಥ: ವೀಕ್ಷಕ ಜನತೆಗೆ, ಒಂದೂವರೆ ಲಕ್ಷ ಚದರಡಿಗಳ ವಿಸ್ತೀರ್ಣದಲ್ಲಿ ಹರಡಿರುವ- ಸಂಪೂರ್ಣ ಗೋಸ್ವರ್ಗದ ಪ್ರದಕ್ಷಿಣೆ-ವೀಕ್ಷಣೆಗಳಿಗೆ ಅನುವು ಮಾಡಿಕೊಡುವ ಮಹಾಮಾರ್ಗ.

ರಥಪಥ: ಪ್ರತ್ಯಕ್ಷ ಗೋಮಾತೆಯೇ ರಥವೇರಿ ನಡೆಸಿಕೊಡುವ ಗೋರಥೋತ್ಸವಕ್ಕೆ ಸಾಧನವಾದ ರಥಬೀದಿ.

ತೀರ್ಥಪಥ: ಯಾತ್ರಿಗಳನ್ನು ಪ್ರೇಕ್ಷಾಪಥದಿಂದ ಸರೋವರಮಧ್ಯದ ಸಪ್ತಸನ್ನಿಧಿಗೆ, ಗೋವುಗಳ ನಡುವಿನಿಂದಲೇ ಕರೆದೊಯ್ಯುವ ಅಂತರ್ಮಾರ್ಗ.
ಪ್ರೇಕ್ಷಾಪಥ-ತೀರ್ಥಪಥಗಳ ಮೂಲಕ ನಾಲ್ಕಾಗಿ ವಿಭಕ್ತಗೊಂಡಿರುವ ವಿರಾಟ್ ಗೋನಿವಾಸದಲ್ಲಿ ನಂದಿಶಾಲೆ- ಧೇನುಶಾಲೆ- ವತ್ಸಶಾಲೆ ಮೊದಲಾದ ಅಂತರ್ವಿಭಾಗಗಳು.

ಗೋಗಂಗಾ: ಗೋಸ್ವರ್ಗದ ಉತ್ತರದಲ್ಲಿ, ಬೃಹತ್ ಗೋಮುಖದಡಿಯಲ್ಲಿ ತೀರ್ಥಸ್ನಾನದ ಘಟ್ಟ.

ಗೋಗಂಗಾ || ಪರಿಕಲ್ಪನೆ: ಶ್ರೀಶ್ರೀಗಳವರು. ಚಿತ್ರರೂಪ: ನೀರ್ನಳ್ಳಿ ಗಣಪತಿ

ಗೋಗಂಗಾ || ಪರಿಕಲ್ಪನೆ: ಶ್ರೀಶ್ರೀಗಳವರು. ಚಿತ್ರರೂಪ: ನೀರ್ನಳ್ಳಿ ಗಣಪತಿ

ಗೋಪಾಲಭವನ: ಈಶಾನ್ಯದಲ್ಲಿ, ಗೋಪಾಲಕೃಷ್ಣನನ್ನು ನೆನಪಿಸುವಂತೆ ವಿನ್ಯಾಸಗೊಂಡ ಗೋಪಾಲಕರ ವಸತಿ.

ಪೂರ್ವದಲ್ಲಿ, ಶಿಷ್ಯಾನುಗ್ರಹದ ಮಹಾಕೇಂದ್ರವಾದ ಶ್ರೀರಾಮದೇವ-ಭಾನ್ಕುಳಿ ಮಠ.
ಪಶ್ಚಿಮದ ಅಂಚಿನಲ್ಲಿ ಹರಿಯುವ ಕಿರು ತೊರೆ- ಗೋಧಾರಾ.
ತೊರೆಯ ತೀರದಲ್ಲಿ ತಲೆಯೆತ್ತಿ ನಿಂತ ಗೋವರ್ಧನ ಗಿರಿ.
ಅಲ್ಲಿ ನಂದನವನವನ್ನು ಹೋಲುವ ಚಂದದ ಉದ್ಯಾನ- ಗೋನಂದನ.
ಗೋವರ್ಧನ ಗಿರಿಯ ನೆತ್ತಿಯಲ್ಲಿ, ಸಮಸ್ತ ಗೋಸ್ವರ್ಗದ ವಿಹಂಗಮ ನೋಟ ನೀಡುವ ವೀಕ್ಷಾಗೋಪುರ.
ಗೋಸ್ವರ್ಗದ ಮೇವಿನ ಅಗತ್ಯವೆಷ್ಟೆಂದರೆ- ಹುಲುಸಾಗಿ ಬೆಳೆದ ಹಸಿರು ಮೇವನ್ನು ದಿನಕ್ಕೊಂದು ಎಕರೆಯಂತೆ ಕಟಾವು ಮಾಡುವಷ್ಟು! ಈ ಹಿನ್ನೆಲೆಯಲ್ಲಿ, ಗೋಸ್ವರ್ಗಕ್ಕೆ ಬೇಕಾದ, ವಿಷಮುಕ್ತ-ಸತ್ವಯುಕ್ತ ಮೇವನ್ನು ನಾವೇ ಬೆಳೆಯಲು ರೂಪುಗೊಂಡ ಮಹಾಯೋಜನೆ- ಸುಗ್ರಾಸ.

 

ಗೋಸ್ವರ್ಗ; ಇದು ಸಂಪೂರ್ಣ ಗೋಸೌಖ್ಯ-ಕೇಂದ್ರಿತ!

ಗೋಸ್ವರ್ಗವು ಏಕೆ ಗೋವುಗಳ ಪಾಲಿಗೆ ಸ್ವರ್ಗವೆಂದರೆ:-

 • ಇಲ್ಲಿ ಗೋವುಗಳಿಗೆ ಬಂಧನದ ಬವಣೆಯಿಲ್ಲ; ವಿಶಾಲ-ನಿರ್ಮಲ-ರಮಣೀಯ ಆವರಣದಲ್ಲಿ ಅವು ಸ್ವೇಚ್ಛೆಯಾಗಿ ವಿಹರಿಸಬಹುದು.
 • ನೆರಳು-ಬಿಸಿಲು ಅವುಗಳ ಇಚ್ಛೆ; ಒಂದು ಲಕ್ಷ ಚದರಡಿಯ ಗೋನಿವಾಸದಲ್ಲಿ 70%ದಷ್ಟು ಪ್ರದೇಶವು ಸೂರ್ಯರಶ್ಮಿಗಳಿಗೆ ತೆರೆದುಕೊಂಡಿದ್ದರೆ, ಇನ್ನುಳಿದ 30%ದಷ್ಟು ಭಾಗದಲ್ಲಿ ಛಾವಣಿಯಿದೆ; ಎಲ್ಲಿಯೂ ಗೋಡೆಯಿಲ್ಲ! ತಮಗೆ ಹಿತವೆನಿಸಿದಲ್ಲಿ ಗೋವುಗಳು ಇರಬಹುದು.
 • ಗೋವುಗಳು ಇಷ್ಟ ಪಡುವ, ಅವುಗಳಿಗೆ ಪುಷ್ಟಿ ನೀಡುವ ಮೇವನ್ನು ಸುಗ್ರಾಸ ಯೋಜನೆಯಡಿಯಲ್ಲಿ, ವಿಷಮುಕ್ತ ಕೃಷಿಪದ್ಧತಿಯಲ್ಲಿ ಬೆಳೆಸಲಾಗುವುದು. ಗೋವುಗಳಿಗೆ ಆ ಮೇವು ಸದಾಕಾಲವೂ ಲಭ್ಯ; ಬೇಕಾದ ಮೇವನ್ನು, ಬೇಕಾದಾಗ, ಬೇಕಾದಷ್ಟು ಸೇವಿಸಲು ಗೋವುಗಳಿಗೆ ಪೂರ್ಣ-ಸ್ವಾತಂತ್ರ್ಯ!
 • ಪರಿಶುದ್ಧ ಪ್ರಾಕೃತಿಕ ಜಲವು ಶಿಲಾಮಯವಾದ ಮಹಾಪಾತ್ರಗಳಲ್ಲಿ ಗೋವುಗಳಿಗೆ ಸರ್ವಸಮಯಗಳಲ್ಲಿಯೂ ಲಭ್ಯ!
 • ಸದಾಕಾಲವೂ ಕರುವು ತಾಯಿಯ ಕಣ್ಮುಂದೆ ಕುಣಿದಾಡುತ್ತಿರಲು ಅವಕಾಶ ಕಲ್ಪಿಸುವಂತಿರುವ ಧೇನುಶಾಲೆಯ ವಿನ್ಯಾಸ.
 • ತಾಯಿಯ ಹಾಲು ಕರುವಿಗೆ ಲಭ್ಯ; ಒಂದೊಮ್ಮೆ ತಾಯಿಯ ಹಾಲು ಕೊರತೆಯಾದರೆ ಪರ್ಯಾಯ ವ್ಯವಸ್ಥೆಯ ಕಲ್ಪನೆ.
 • ರೋಗಭಯವಿಲ್ಲ; ಒಂದೆಡೆ ರೋಗಮುಕ್ತವಾದ ಪರ್ಯಾವರಣ, ಇನ್ನೊಂದೆಡೆ ಸರ್ವಸಜ್ಜಿತವಾದ ಗೋಚಿಕಿತ್ಸಾಲಯ.
 • ಗೋವುಗಳಿಗೆ ಸಹಜ ಜನನ~ಸಹಜ ಜೀವನ~ ಸಹಜ ಮರಣದ ಅವಕಾಶ:
 • ಕೃತ್ರಿಮ ಗರ್ಭಾದಾನವಿಲ್ಲ; ಇಲ್ಲಿ ತಳಿಗೆಟ್ಟ ವಿದೇಶೀ ರಾಸುಗಳ ಸುಳಿವಿಲ್ಲ.
 • ಕೃತ್ರಿಮ ಜೀವನ ವಿಧಾನವಿಲ್ಲ.
 • ಗೋಪ್ರೇಮಿಗಳ ಭದ್ರಬಾಹುಗಳ ನಡುವೆ ನಿರ್ಭಯ ವಸತಿ; ಕಟುಕರ ಪಾಲಾಗುವ ಯಾವುದೇ ಸಾಧ್ಯತೆಯಿಲ್ಲ!

 

ಒಲವಿನ ಗೋಬಂಧುಗಳೇ! ನಮ್ಮ ಹೃದಯಬಂಧುಗಳೇ! ಗೋಸ್ವರ್ಗವನ್ನು ನಿರ್ಮಿಸುವಷ್ಟೇ ಹಿರಿದಾದ ನಮ್ಮ ಮತ್ತೊಂದು ಅಭಿಲಾಷೆಯಿದೆ; ಅದು ಗೋಸ್ವರ್ಗಸೌಖ್ಯವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವುದು. ‘ಏಕಃ ಸ್ವಾದು ನ ಭುಂಜೀತ’- ‘ಸವಿಯೂಟವನ್ನು ಒಬ್ಬನೇ ಉಣ್ಣಬಾರದು’ ಎಂಬುದು ಆರ್ಯೋಕ್ತಿ. ಗೋಸ್ವರ್ಗಕ್ಕಿಂತ ಸವಿಯಾದ ಇನ್ನೊಂದು ಸಂಗತಿ ಈ ಲೋಕದಲ್ಲಿರಬಹುದೆಂದು ನಮಗನ್ನಿಸುವುದಿಲ್ಲ. ಬನ್ನಿ, ಗೋಸ್ವರ್ಗವನ್ನು ಒಡಗೂಡಿ ನಿರ್ಮಿಸೋಣ; ಬದುಕಿರುವಾಗಲೇ ಸ್ವರ್ಗವನ್ನು ಕಾಣೋಣವೆಂದರೆ ಅದು ಕಡಿಮೆಯಾದೀತು; ಬದುಕಿರುವಾಗಲೇ- ಭುವಿಯಲ್ಲಿಯೇ ಆ ಸ್ವರ್ಗಕ್ಕಿಂತ ಮಿಗಿಲಾದ ಗೋಸ್ವರ್ಗವನ್ನು ಕಟ್ಟೋಣ! ಈ ಲೋಕವನ್ನೇ ಸುಂದರ ಸ್ವರ್ಗವಾಗಿಸೋಣ!

~*~*~

ಗೋಸ್ವರ್ಗ ಯೋಜನೆ ಕುರಿತಾದ ಪ್ರಸ್ತುತಿ:

 

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.

ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box