‘ಅಲ್ಲಾಹು ಅಕ್ಬರ್’ ಎಂಬ ಘೋಷಣೆಗಳ ನಡುವೆ ಮೂರ್ತಿಗಳು ಭಗ್ನಗೊಳ್ಳುವುದಕ್ಕೆ ಭಾರತವು ಶತ-ಶತಮಾನಗಳಿಂದಲೇ ಸಾಕ್ಷಿಯಾಗಿದೆ; ಆದರೆ ‘ಭಾರತ ಮಾತಾ ಕೀ ಜೈ’ ಎಂಬ ಘೋಷವು ಮೊಳಗುತ್ತಿರುವಂತೆ ಮೂರ್ತಿಯೊಂದು ಭಗ್ನಗೊಳ್ಳುವುದು ಭಾರತಕ್ಕೆ ತೀರಾ ಹೊಸದು. ಭಾರತದ ಚರಿತ್ರೆಯಲ್ಲಿ ಬಹುಶಃ ಎಂದೂ ನಡೆಯದ ಅಂಥದೊಂದು ಘಟನೆಯು ಮೊನ್ನೆ ತ್ರಿಪುರಾದಲ್ಲಿ ನಡೆಯಿತು; ಭಗ್ನಗೊಳ್ಳುವ ಯೋಗ ಬಂದಿದ್ದು ವಾಮ-ಸರ್ವಾಧಿಕಾರಿಗಳ ಪೈಕಿ ಮೊದಲಿಗನಾದ ಲೆನಿನ್`ನ ಮೂರ್ತಿಗೆ! 25 ವರ್ಷಗಳಿಂದ ತ್ರಿಪುರಾದಲ್ಲಿ ವಾಮಪಂಥೀಯರು ನಿರಂತರ ನಡೆಸುತ್ತಿದ್ದ ನಿರಂಕುಶ ಆಳ್ವಿಕೆಯು ಭಂಗಗೊಂಡ ಮರುದಿನವೇ ವಾಮಸಿದ್ಧಾಂತದ ಪಿತಾಮಹನ ಮೂರ್ತಿಯೂ ಭಗ್ನಗೊಂಡಿತೆಂಬುದು ಐತಿಹಾಸಿಕ ವ್ಯಂಗ್ಯ!
ಲೆನಿನ್ ಮೂರ್ತಿಯು ಭಗ್ನಗೊಂಡುದರಿಂದಾಗಿ ಜನಸಾಮಾನ್ಯರ ಜೀವನದಲ್ಲಿ ಸಣ್ಣದೊಂದು ವ್ಯತ್ಯಯವೂ ಏರ್ಪಡಲಿಲ್ಲ; ಏಕೆಂದರೆ ಲೆನಿನ್ ಯಾರೆಂದು ಎಷ್ಟು ಜನರಿಗೆ ಗೊತ್ತು? ಸಾಮಾನ್ಯ ಮನುಷ್ಯನ ನಿತ್ಯ ಜೀವನದಲ್ಲಿ ಲೆನಿನ್ ಪ್ರಸಕ್ತಿಯಾದರೂ ಎಲ್ಲಿ? ಆದರೆ ನಾಡಿನ ವಾಮಪಂಥೀಯರಲ್ಲಿ ಅದು ಎಲ್ಲಿಲ್ಲದ ಆತಂಕವನ್ನು ಹುಟ್ಟುಹಾಕಿದೆ; ಪರಿಣಾಮವಾಗಿ, ದೇಶಕ್ಕೆಲ್ಲ ಕೇಳುವಂತೆ ರಕ್ತವರ್ಣಾಂಕಿತರ ಕೂಗೆದ್ದಿದೆ!
ಕಮ್ಯೂನಿಸ್ಟರು ಮಾತ್ರವಲ್ಲ, ‘ಲೆನಿನ್ ಪ್ರತಿಮೆಯನ್ನು ಉರುಳಿಸಿದ್ದೇಕೆ?’ ಎಂಬ ಪ್ರಶ್ನೆಯನ್ನು ನಾವೂ ಕೇಳೋಣ; ಆದರೆ ಅದಕ್ಕಿಂತ ಮೊದಲು ಕೇಳಬೇಕಾದ ಪ್ರಶ್ನೆ ‘ಲೆನಿನ್ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಿದ್ದೇಕೆ?’ ಎಂಬುದು.
ಏಕೆಂದರೆ…
- ಲೆನಿನ್ ಭಾರತವನ್ನು ಕಟ್ಟಿದವನಲ್ಲ; ಸಂಕಟಗಳ ಸಮಯದಲ್ಲಿ ಭಾರತವನ್ನು ಕಾಪಾಡಿದವನಲ್ಲ; ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟವನಲ್ಲ; ಭಾರತದ ಬಡವರ ಬದುಕಿಗೆ ಬಂಗಾರವಾದವನಲ್ಲ. ಆದುದರಿಂದ ದೇಶದ ದೃಷ್ಟಿಯಿಂದ ಅವನ ಪ್ರಸ್ತುತತೆ ಸೊನ್ನೆಗಿಂತ ಹೆಚ್ಚಲ್ಲ; ಏಕೆಂದರೆ ಈ ದೇಶಕ್ಕೆ ಅವನ ಕೊಡುಗೆಯೂ ಸೊನ್ನೆಗಿಂತ ಹೆಚ್ಚಲ್ಲ!
- ಸಂಖ್ಯಾದೃಷ್ಟಿಯಿಂದ ಭಾರತದಲ್ಲಿ ಪ್ರಧಾನವಾಗಿರುವ ಪಂಥಗಳೆರಡು: ಮೂರ್ತಿಪೂಜಕರಾದ ಹಿಂದುಗಳು ಮತ್ತು ಮೂರ್ತಿಭಂಜಕರಾದ ಮುಸಲ್ಮಾನರು.
- ಅವರಲ್ಲಿ ಹಿಂದುಗಳು ಮೂರ್ತಿಪೂಜಕರು ಹೌದಾದರೂ, ಅವರು ಸ್ಥಾಪಿಸುವುದು-ಪೂಜಿಸುವುದು ದೇವರ ಮೂರ್ತಿಗಳನ್ನು ಅಥವಾ ಮಾನವನಾಗಿ ಧರೆಗಿಳಿದು ಬಂದ ದೇವರ ರೂಪಗಳನ್ನು; ದೇವರ, ಧರ್ಮದ ವಿರೋಧಿಗಳ ಪ್ರತಿಮೆಗಳನ್ನು ಅಲ್ಲವೇ ಅಲ್ಲ! ಲೆನಿನ್ ಮೂರ್ತಿಯ ಸ್ಥಾಪನೆಯು ಹಿಂದುತ್ವದ ಪರಿಧಿಯಲ್ಲಿ ಬರಲು ಸಾಧ್ಯವೇ ಇಲ್ಲ.
- ಮುಸಲ್ಮಾನರಂತೂ ಮೂರ್ತಿಯ ಪರಿಕಲ್ಪನೆಗೇ ವಿರೋಧವಾದವರು; ದೇವರ ಮೂರ್ತಿಗಳನ್ನೇ ಭಗ್ನಗೊಳಿಸಿ, ‘ಧರ್ಮಸಾಧನೆಯಾಯಿತು!’ ಎನ್ನುವವರು ಮನುಷ್ಯನ ಮೂರ್ತಿಯ ಸ್ಥಾಪನೆಯನ್ನು ಹೇಗೆ ಒಪ್ಪಲು ಸಾಧ್ಯ!?
- ಮೊದಲಿನೆರಡೂ ಪಂಥಗಳು ಸೇರಿದಂತೆ ಭಾರತದಲ್ಲಿ ಚಾಲ್ತಿಯಲ್ಲಿರುವ ಯಾವುದೇ ಮತ-ಪಂಥಗಳಿಗೆ ಲೆನಿನ್ ಮೂರ್ತಿಯು ಸ್ವೀಕಾರಾರ್ಹವಲ್ಲ; ಏಕೆಂದರೆ ಲೆನಿನ್ ಪ್ರತಿಪಾದಿಸಿದ “ಕಮ್ಯೂನಿಸಂ” ಧಾರ್ಮಿಕ ನಂಬಿಕೆ-ಆಚರಣೆಗಳೆಲ್ಲವನ್ನೂ ನಿರಾಕರಿಸುತ್ತದೆ.
- ಇನ್ನು ಉಳಿದವರು ದೇಶದ ಜನಕೋಟಿಯ ಚಿಕ್ಕ ತುಣುಕಾದ ಕಮ್ಯೂನಿಸ್ಟರು ಮಾತ್ರ; ಲೆನಿನ್ನನನ್ನು ಒಪ್ಪಿದರೂ ಅವರು ಲೆನಿನ್ನನ ಮೂರ್ತಿಯನ್ನು ಒಪ್ಪುವಂತಿಲ್ಲ! ಏಕೆಂದರೆ ಮೂರ್ತಿ ಸ್ಥಾಪನೆಯು ಕಮ್ಯೂನಿಸಂನ ಮೂಲ ತತ್ತ್ವಕ್ಕೇ ವಿರುದ್ಧವಾದುದು! ಎಲ್ಲರೂ ಸಮಾನರೆಂದ ಮೇಲೆ ಲೆನಿನ್-ಸ್ಟಾಲಿನ್`ಗಳಿಗೆ ಮಾತ್ರವೇ ಏಕೆ ಮೂರ್ತಿ!? Classless Societyಯನ್ನು ಕಟ್ಟಹೊರಟವರು ತಾವೇ Special Classಆಗಿ ನಿಲ್ಲುವುದು ತರವೇ!?
ವಾಮರು ಮಾನವ-ಭಂಜನವನ್ನೇ ಮಾಡಬಹುದು; ಇತರರು ಮೂರ್ತಿ-ಭಂಜನವನ್ನೂ ಮಾಡಕೂಡದು ಎಂಬುದು ಸಮಾನತೆಯೇ!?
ಮೂರ್ತಿಭಂಜನವು -ಅದು ಕಮ್ಯೂನಿಸ್ಟ್ ನಾಯಕರದೇ ಆಗಲಿ, ಯಾರದೇ ಆಗಲಿ- ಒಳಿತಲ್ಲವಾದರೂ, ಅದು ಜೀವಂತ ಮನುಷ್ಯ-ಭಂಜನದಷ್ಟು ಹಾಳಲ್ಲ! ಕಮ್ಯೂನಿಸಂನ ಹೆಸರಿನಲ್ಲಿ ವಾಮನಾಯಕರುಗಳು ನಡೆಸಿದ ಬರ್ಬರ ನರ-ಸಂಹಾರಗಳಿಗೆ ಲೆಕ್ಕವಿದೆಯೇ!?#LokaLekha by @SriSamsthana SriSri RaghaveshwaraBharati MahaSwamiji
- ಚೀನಾದ ಕಮ್ಯೂನಿಸ್ಟ್ ಸರ್ವಾಧಿಕಾರಿ ಮಾವೋ ತ್ಸೆ ತುಂಗನ ಅವಧಿಯಲ್ಲಿ, ಅಲ್ಲಿಯ ದಾಖಲೆಗಳ ಪ್ರಕಾರವೇ – ಸರಿಸುಮಾರು ಒಂದೂವರೆ ಕೋಟಿಯಷ್ಟು ನಿರಪರಾಧಿ ನೆಲದೊಡೆಯರ ಕ್ರೂರ ಸಂಹಾರ ನಡೆಯಿತು! ಅದು ಅಲ್ಲಿಗೇ ಮುಗಿಯಲಿಲ್ಲ; ಕಮ್ಯೂನಿಸ್ಟ್ ನಾಯಕತ್ವವನ್ನೊಪ್ಪದವರ ಚಿತ್ರಹಿಂಸೆ ಮತ್ತು ಕ್ರೂರವಧೆಗಳು ಚೀನಾದಲ್ಲಿ ಇಂದಿನವರೆಗೂ ನಡೆದುಕೊಂಡು ಬಂದಿವೆ; ತಿಯಾನ್ಮನ್ ಚೌಕದ ವಿದ್ಯಾರ್ಥಿಸಂಹಾರ ಕಾಂಡವನ್ನು ವಿಶ್ವವು ಮರೆಯುವುದಾದರೂ ಎಂತು!
- ಟಿಬೇಟಿನ ಬೌದ್ಧರ ಮೇಲೆ ಚೀನಾದ ಕಮ್ಯೂನಿಸ್ಟರು ನಡೆಸಿದ ದೈಹಿಕ-ಮಾನಸಿಕ-ಸಾಂಸ್ಕೃತಿಕ ಹತ್ಯಾಚಾರವು ಪಿಶಾಚಿಗಳ ಲೋಕದಲ್ಲಿ ಮಾತ್ರ ಸಲ್ಲುವಂತಹುದು!
- ಲೆನಿನ್ನನ ಉತ್ತರಾಧಿಕಾರಿ ಸ್ಟಾಲಿನ್ ನಡೆಸಿದ ಹತ್ಯಾಕಾಂಡವು ಇತಿಹಾಸ ತಜ್ಞರ ಅಧ್ಯಯನ-ಅಂದಾಜುಗಳನ್ನೇ ಮೀರಿದೆ! ಕಲಿಯುಗದ ಆ ಮಹಾಸುರನು ತೆಗೆದುಕೊಂಡಿರಬಹುದಾದ ಬಲಿಗಳ ಸಂಖ್ಯೆಯ ಕುರಿತು ಚರಿತ್ರಕಾರರಲ್ಲಿ ಒಂದೂವರೆ ಕೋಟಿಯಿಂದ ಐದು ಕೋಟಿಯವರೆಗೆ ಹಲವು ಅಭಿಪ್ರಾಯಗಳಿವೆ! ಆದರೆ ಸ್ಟಾಲಿನ್, ಕಮ್ಯೂನಿಸಂನ ಹೆಸರಿನಲ್ಲಿ- ಎರಡು ಕೋಟಿಗೆ ಕಡಿಮೆಯಿಲ್ಲದಷ್ಟು ಜೀವಗಳ ಮಾರಣಹೋಮಕ್ಕೆ ಕಾರಣನಾದನೆಂಬ ವಿಷಯದಲ್ಲಿ ಭಿನ್ನಾಭಿಪ್ರಾಯವೇ ಇಲ್ಲ!
- ಲೆನಿನ್ ಚರಿತ್ರೆಯೂ ನಿರಪರಾಧಿಗಳ ರಕ್ತದ ಕಲೆಗಳಿಂದ ಕಲಂಕಿತವೇ ಆಗಿದೆ!
- 1918 ರಲ್ಲಿ, ಲೆನಿನ್ ರಾಷ್ಟ್ರವನ್ನು ಆಳುತ್ತಿರುವಾಗಲೇ- ರಷಿಯಾದ ರಾಜಕುಟುಂಬವನ್ನು ವಂಚನೆಯಿಂದ ನೆಲಮಹಡಿಗೆ ಕರೆತಂದು, ಅಲ್ಲಿ ನಿರ್ದಯವಾಗಿ ಗುಂಡಿಟ್ಟು ಕೊಲ್ಲಲಾಯಿತು! ಕೊಲೆಗೀಡಾದವರಲ್ಲಿ ದೊರೆ ಮಾತ್ರವಲ್ಲದೇ, ನಿರಪರಾಧಿಗಳಾದ ಆತನ ಈರ್ವರು ಪತ್ನಿಯರು ಮತ್ತು ಐವರು ಮುಗ್ಧ ಮಕ್ಕಳು ಸೇರಿದ್ದರು. ಮೊನ್ನೆ ಉರುಳಿದ ಲೆನಿನ್ ಪ್ರತಿಮೆಯು ನಿರ್ಜೀವವಾದುದು; ಆದರೆ ಲೆನಿನ್ ಕೊಲ್ಲಿಸಿದ ಅಮಾಯಕ ಮಕ್ಕಳು-ಹೆಣ್ಣುಮಕ್ಕಳು ಜೀವವಿರುವವರಲ್ಲವೇ!? ನೋವು-ನರಳಿಕೆ ಉಳ್ಳವರಲ್ಲವೇ!?
- ಲೆನಿನ್ ಕಣ್ಗಾವಲಿನಲ್ಲಿಯೂ ಸಿದ್ಧಾಂತವನ್ನೊಪ್ಪದವರ ಸಂಹಾರವು ಬಹು ದೊಡ್ಡ ಸಂಖ್ಯೆಯಲ್ಲಿಯೇ ನಡೆಯಿತು!
- ಲೆನಿನ್ನನ ರಾಜ್ಯಭಾರದ ದುರ್ನೀತಿಗಳಿಂದಲಾಗಿ ಉಕ್ರೇನಿನಲ್ಲಿ 1918ರಿಂದ 1922ರ ವರೆಗೆ ತಲೆದೋರಿದ ಕೃತ್ರಿಮ ಕ್ಷಾಮಕ್ಕೆ ಬಲಿಯಾದವರ ಸಂಖ್ಯೆಯು 60 ಲಕ್ಷದಿಂದ 80 ಲಕ್ಷಗಳಷ್ಟು!
- ಉರುಳಿದ ಲೆನಿನ್ ಮೂರ್ತಿಯ ಕುರಿತು ಅನುಕಂಪವುಳ್ಳವರು, ಅಕಾರಣವಾಗಿ ಪ್ರಾಣಾಂತ್ಯಕ್ಕೆ ಒಳಪಟ್ಟ ಆ ಜೀವಗಳನ್ನು ಒಮ್ಮೆ ನೆನಪಿಸಿಕೊಳ್ಳುವುದು ಒಳಿತು!
- ವಾಮರದೇ ಮತ್ತೊಂದು ಅವತಾರ(ಅವಾಂತರ)ವಾದ ನಕ್ಸಲರು ನಡೆಸಿದ-ನಡೆಸುತ್ತಿರುವ ನರಮೇಧವು ಸಣ್ಣದೇ!?
- ನಮ್ಮದೇ ದೇಶದ- ಕೇರಳದ ರಸ್ತೆಗಳು ವಾಮಪಂಥೀಯರು ಹರಿಸಿದ, ಬಲಪಂಥೀಯರ ರಕ್ತದಲ್ಲಿ ತೊಯ್ದು ಹೋಗಿವೆ!
- ಇಂದು ಎಲ್ಲಿ ಲೆನಿನ್ ಪ್ರತಿಮೆಯನ್ನು ಉರುಳಿಸಿದ ಕುರಿತು ದೊಡ್ಡ ಕೂಗೆದ್ದಿದೆಯೋ ಆ ತ್ರಿಪುರಾದಲ್ಲಿಯೇ -CPI(M) ತ್ಯಜಿಸುವೆನೆಂದ ಮಾತ್ರಕ್ಕೆ- ಮಹಿಳೆಯೋರ್ವಳ ಸಾಮೂಹಿಕ ಮಾನಹರಣ ಮಾಡಲಾಯಿತು!
“ಭಾರತ್ ಮಾತಾ ಕೀ ಜೈ” ಎಂದು ತನ್ನ ದ್ವಿಚಕ್ರವಾಹನದಲ್ಲಿ ಬರಕೊಂಡ ಮಾತ್ರಕ್ಕೆ, ಬಾಯಿಯಿಂದ ಉಚ್ಚರಿಸಿದ ಮಾತ್ರಕ್ಕೆ ಈರ್ವರು ಯುವಕರ ಬಾಯೊಳಗೆ ಮೂತ್ರಗೈಯುವ ಮೂಲಕ ಶುದ್ಧೀಕರಣದ (!) ಪೈಶಾಚಿಕ ಪ್ರಕ್ರಿಯೆಯು ನಡೆದುದೂ ಇದೇ ತ್ರಿಪುರಾದಲ್ಲಿಯೇ!
ಜೀವಂತ ಮನುಷ್ಯರ ಜೀವ~ಜೀವನಗಳ ಮೇಲೆ ವಾಮರು ನಡೆಸಿದ-ನಡೆಸುತ್ತಿರುವ ಬರ್ಬರ ಹಲ್ಲೆಗಳೆದುರು ಜೀವವಿಲ್ಲದ, ಭಾವವಿಲ್ಲದ ಮೂರ್ತಿಯೊಂದನ್ನು ಉರುಳಿಸಿದುದು ಯಾವ ದೊಡ್ಡ ಮಾತು!?#LokaLekha by @SriSamsthana SriSri RaghaveshwaraBharati MahaSwamiji
“ವಾಮ-ವಾದವನ್ನು ಒಪ್ಪದವರನ್ನೆಲ್ಲ ವಧಿಸಿ!” ಎಂಬುದು ಯಾವ ಕಾಡಿನ ನ್ಯಾಯ!?
ವಾಮಪಂಥೀಯರಲ್ಲಿ ರಾಮಪಂಥೀಯರದೊಂದು ಮಾತು: ಕೇವಲ ಒಂದು ವಿಗ್ರಹವು ಭಗ್ನಗೊಂಡಿದುದಕ್ಕೆ ನಿಮ್ಮದು ಈ ಪರಿಯ ಪರಿತಾಪ! ಆದರೆ ಈ ದೇಶವಾಸಿಗಳ ಕಣ್ಮುಂದೆಯೇ- ಪರಕೀಯರ ದುರಾಕ್ರಮಣಗಳಲ್ಲಿ ಅನ್ಯಾಯವಾಗಿ, ಅಕಾರಣವಾಗಿ ಭಗ್ನಗೊಂಡ, ಭಾವಭಕ್ತಿಯ ಪ್ರತೀಕವಾದ ಮೂರ್ತಿಗಳು-ಮಂದಿರಗಳು ಲಕ್ಷೋಪಲಕ್ಷ! ಅವರೆದೆಯ ಪರಿತಾಪವೆಂಥದಿರಬಹುದು!? ಎಂದಾದರೂ ಚಿಂತಿಸಿರುವಿರೇ? ಅವುಗಳನ್ನು ನಿರ್ಮಿಸಿದ ಕಲಾ~ಕಾರ್ಮಿಕರಿಗಾಗಿ ಎಂದಾದರೂ ನಿಮ್ಮ ಹೃದಯ ಮಿಡಿದಿದೆಯೇ? ಒಂದೆರಡು ಹನಿಯಾದರೂ ಕಂಬನಿ ಸುರಿದಿದೆಯೇ?#LokaLekha by @SriSamsthana SriSri RaghaveshwaraBharati MahaSwamiji
“ರಾಮಮಂದಿರವನ್ನು ಎಂದೋ ಮುರಿದವರ ಜೊತೆಯಲ್ಲಿ ಇಂದೂ ನಾವಿದ್ದೇವೆ!’ ಎನ್ನುವವರ ಜೊತೆಯಲ್ಲಿ ದೇಶವು ಹೇಗಿರಲು ಸಾಧ್ಯ!?
ವಾಮಮಾರ್ಗಿಗಳೇ! ದುರ್ವಚನಗಳ ಸುತ್ತಿಗೆಯಿಂದ, ನಮ್ಮೆಲ್ಲರ ಎದೆಯ ಗುಡಿಯೊಳಗಿನ ದೇವಮೂರ್ತಿಗಳನ್ನು ಇಷ್ಟಾರು ವರ್ಷಗಳಿಂದಲೂ- ಈಗಲೂ ಬಡಿ-ಬಡಿದೊಡೆಯುತ್ತಲೇ ಬಂದವರು ನೀವು! ವಿಧಿಯು, ವಿಶ್ವದೆಲ್ಲೆಡೆ ವಿರೋಧದ ದನಿಯಾಗಿ ನಿಮಗಿಂದು ಸರಿದಾರಿಗೆ ಬರಲು ಸಂದೇಶವೊಂದನ್ನು ರವಾನಿಸುತ್ತಿದೆ. ಕಿವಿಗೊಟ್ಟು ಆಲಿಸಿ. ರಕ್ತಮಾರ್ಗದಿಂದ ಭಕ್ತಮಾರ್ಗಕ್ಕೆ ಬರುವುದರಲ್ಲಿ ನಿಮ್ಮ ನಿಜವಾದ ಹಿತವಿದೆ.
ಅದಲ್ಲವೆಂದರೆ ನಮ್ಮದೇನೂ ಅಡ್ಡಿಯಿಲ್ಲ; ನಮ್ಮ ನೆಮ್ಮದಿ ನಮಗೆ; ನಿಮ್ಮ ಗೊಂದಲ ನಿಮಗೆ! ನಿಮ್ಮ ಗೊಂದಲವನ್ನು ನಮ್ಮ ತಲೆಯೊಳಗಿಟ್ಟು ಇರುವ ನೆಮ್ಮದಿಯನ್ನು ಕಸಿಯದಿದ್ದರೆ ಸಾಕು, ಅನುಪದ್ರವದ ಮಹೋಪಕಾರಕ್ಕೆ ಸಜ್ಜನ-ಸಮುದಾಯವು ಸದಾ ನಿಮಗೆ ಕೃತಜ್ಞ!
~*~
ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.
ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.
March 13, 2018 at 11:18 AM
ಹರೇ ರಾಮ
March 13, 2018 at 11:19 AM
Psbjaya @ gmail.com
March 15, 2018 at 7:37 AM
ಹರೇ ರಾಮಾ