ತಾಯೀ……………!
ಝಾನ್ಸಿಯ ರಾಣಿ ಲಕ್ಷ್ಮೀಬಾಯೀ……………!

ನಿನ್ನನ್ನು ಈಗ ಕರೆದರೆ ‘ಓ’ ಎನ್ನುವುದು ದೇವರೇ! ಏಕೆಂದರೆ ನೀನೀಗ ದೇವರೂಪಿಣಿಯಾಗಿರುವೆ; ಜೀವವೊಂದಕ್ಕೆ ದೇವರು ಕೊಡುವ ಅತಿ ದೊಡ್ಡ ಬಹುಮಾನವಾದ ಮುಕ್ತಿಯನ್ನು ಪಡೆದು, ಪರಮೇಶ್ವರನಲ್ಲಿ ಒಂದಾಗಿರುವೆ.

ಅದು ಬಲಿದಾನದ ಬಹುಮಾನ!

ದ್ವಾವಿಮೌ ಪುರುಷೌ ಲೋಕೇ ಸೂರ್ಯಮಂಡಲಭೇದಿನೌ |
ಪರಿವ್ರಾಟ್ ಯೋಗಯುಕ್ತಶ್ಚ ರಣೇ ಚ ಅಭಿಮುಖೋ ಹತಃ || (ಭ.ಗೀ ೧೫/೧೫)
ಸೂರ್ಯಮಂಡಲವನ್ನು ಭೇದಿಸಿ, ಅದರಾಚೆಗಿನ ಪರಮಪದವನ್ನು ತಲುಪಲು ಕೇವಲ ಎರಡು ಬಗೆಯ ಜೀವಗಳಿಗೆ ಮಾತ್ರವೇ ಸಾಧ್ಯ; ಯೋಗಯುಕ್ತನಾಗಿ ದೇಹಮುಕ್ತನಾಗುವ ಪರಿವ್ರಾಜಕನೊಬ್ಬ; ಪ್ರಾಣಸಂಕಟದ ನಡುವೆಯೂ- ಧರ್ಮಕ್ಕಾಗಿ, ಹಿಮ್ಮೆಟ್ಟದೇ ಹೋರಾಡುತ್ತಾ ರಣ~ಮರಣವನ್ನು ಕಾಣುವ ವೀರನು ಮತ್ತೊಬ್ಬ! ಹೀಗೆ ಯೋಗಿಗಳು ಸಾಧನೆಯಿಂದ ಸಾಧಿಸುವುದನ್ನು ಯೋಧರು ಸಾವಿನಿಂದ ಸಾಧಿಸುವರು!

ಹೇ ವೀರವನಿತೆ! ನೀನು ಸಾವಿನಲ್ಲಿಯೂ ಸಾಧನೆಗೈದವಳು; ಬಿಳಿ ತೊಗಲಿನ- ಕರಿಮನಸಿನ ಜನರ ಆಕ್ರಮಣದಿಂದ ಭವ್ಯ ಭಾರತದೇಶವನ್ನು ರಕ್ಷಿಸಲು ನಡೆದ ಧರ್ಮಯುದ್ಧದಲ್ಲಿ- ಮೃತ್ಯುವೇ ಸುತ್ತುವರಿದಿದ್ದರೂ ಹೆಜ್ಜೆ ಹಿಂದಿಡದೇ ಹೋರಾಡಿದವಳು; ಕೊನೆಗೆ ದೇವನಿತ್ತ ದೇಹವನ್ನು ದೇವನ ದೇಶಕ್ಕಾಗಿ ಸಮರ್ಪಿಸಿದವಳು! ಧರ್ಮಸಮರದಲ್ಲಿ ವೈರಿಗಳಿಗೆ ಬೆನ್ನು ತೋರದ ನಿನಗೆ ಕೊನೆಯಲ್ಲಿ ಪರವಾಸುದೇವನು ತನ್ನನ್ನೇ ತೋರಿದನಲ್ಲವೇ!?

“ಕೊನೆಯ ಕ್ಷಣದಲ್ಲಿ ಯಾವುದನ್ನು ಸ್ಮರಿಸುತ್ತಾ ನರನು ದೇಹವನ್ನು ತ್ಯಜಿಸುವನೋ, ಅದನ್ನೇ ಸೇರಿ- ಅದೇ ತಾನಾಗುವನು.”
~ ಭಗವದ್ಗೀತೆ

ಈ ನುಡಿಗಳನ್ನಾಡಿದ ನರರೂಪದ ನಾರಾಯಣನ- ಪರವಾಸುದೇವನ ಸ್ಮರಣೆಯಲ್ಲಿಯೇ ನಿನ್ನ ಮರಣವಾಯಿತಂತೆ;  ಉತ್ಕ್ರಮಣದ ಆ ಉತ್ಕಟ ಕ್ಷಣದಲ್ಲಿ ನಿನ್ನ ಮುಖದಿಂದ ‘ಓಂ ನಮೋ ಭಗವತೇ ವಾಸುದೇವಾಯ’ ಎಂಬ ದ್ವಾದಶಾಕ್ಷರೀ ಮಂತ್ರವು ಹೊರಹೊಮ್ಮಿತಂತೆ! ‘ಶರಣರ ಮಹತಿಯನ್ನು ಮರಣದಲ್ಲಿ ಕಾಣು’ ಎನ್ನುವರು; ನಮ್ಮ ನಡುವೆ- ನಮ್ಮೆಲ್ಲರೊಡನೆ ಬಾಳಿದರೂ ನಮ್ಮೆಲ್ಲರಿಗಿಂತ ಬಲು ಎತ್ತರದವಳು ನೀನೆಂಬುದಕ್ಕೆ ನಿನ್ನ ಮರಣವೇ ಸಾಕ್ಷಿ!

ಪರಮೋಚ್ಚ ಕೋಟಿಯ ಜೀವಗಳು ಮಾತ್ರವೇ ಆ ಬಗೆಯ ಮರಣವನ್ನು ಕಾಣುವವು!

ಹೇ ಗಂಗಾನಿರ್ಮಲೇ! ಗಂಗಾತಟದಲ್ಲಿ- ಶ್ರೀಕಾಶಿಯಲ್ಲಿ ನೀನು ಜನಿಸಿದೆ; ತಾಯ್ತಂದೆಯರು ನಿನ್ನನ್ನು‘ಮಣಿಕರ್ಣಿಕೆ’ಯೆಂದು ಕರೆದರು; ಹಾಗೆಂದರೂ ಗಂಗೆಯೇ! ನಿನ್ನ ಕೊನೆಯಾದುದು ಗಂಗಾದಾಸರ ಮಠದಲ್ಲಿ; ಕೊನೆಯ ಕ್ಷಣದಲ್ಲಿ ನಿನ್ನ ಬಾಯಲ್ಲಿ ಬಿದ್ದಿದ್ದು ಗಂಗಾಜಲವೇ! ನಿನ್ನ ಜನನಸಮಯದಲ್ಲಿ ಪಕ್ಕದಲ್ಲಿಯೇ ಹರಿಯುತ್ತಿದ್ದ ಭಾಗೀರಥಿಯು ಮರಣಸಮಯದಲ್ಲಿ ನಿನ್ನೊಳಗೇ ಇಳಿಯುತ್ತಿದ್ದಳು; ಇತ್ತ, ಗಂಗೆಯು ನಿನ್ನೊಳಗೆ ಇಳಿಯುತ್ತಿರಲು, ಅತ್ತ, ನೀನು ಪರಮಪದವನ್ನು ಏರಿದೆ; ಗಂಗೆಯು ಉದ್ಭವಿಪ ಪರಮಪುರುಷನ ಪದವನ್ನೇ ಸೇರಿದೆ; ಗಂಗೆ ನಿನ್ನ ಬದುಕಿನ ಆದಿಮಂಗಲವೂ ಅಹುದು; ಮೋಕ್ಷಮಂಗಲವೂ ಅಹುದು!

ನಿಜವಾಗಿಯೂ ಹೇಳು: ಯಾರು ನೀನು?

ಭಾರತದ ವರಪುತ್ರರ ದುರವಸ್ಥೆಯನ್ನು ಕಂಡು ಕರುಣೆಗೊಂಡು, ಮೈವೆತ್ತು ಬಂದ ಮಣಿಕರ್ಣಿಕೆಯೇ ನೀನಲ್ಲವೇ?

ಮುಕ್ತಿಯ ಮೂರು ಕುರುಹುಗಳು:

  • ಸಮರಧಾರಿಣಿಯಲ್ಲಿ ಅಭಿಮುಖನಾಗಿ ಹೋರಾಡುತ್ತಾ, ಶತ್ರುಶಸ್ತ್ರ-ಪೂತನಾಗಿ ಶರೀರವನ್ನು ತೊರೆದರೆ ಅದು ಮುಕ್ತಿ.
  • ಮರಣಕ್ಷಣದಲ್ಲಿ ಮಣಿಕರ್ಣಿಕೆಯ ಮಂಗಲಜಲವು ಮುಖವನ್ನು ಪ್ರವೇಶಿಸಿದರೆ ಅದು ಮುಕ್ತಿ.
  • ದೇವನ ಸ್ಮರಣೆಯಲ್ಲಿ ದೇಹವನ್ನು ತೊರೆದರೆ ಅದು ಮುಕ್ತಿ.

ಕೊನೆಯಲ್ಲಿ ನೀನೆಲ್ಲಿ ಸೇರಿದೆಯೆಂಬುದಕ್ಕೆ ಇನ್ನೆಲ್ಲಿಯ ಸಂಶಯ!? ದೇಶದ ದಾಸ್ಯಮುಕ್ತಿಗಾಗಿ ಹೋರಾಡಿ ಮಡಿದ ನಿನ್ನ ಬಲಿದಾನಕ್ಕೆ ಮುಕ್ತಿಯು ದೇವರಿತ್ತ ಪ್ರೀತಿದಾನ!

ವೀರಮರಣವನಪ್ಪಿ ನೀನು ಶವವಾದೆಯೇ ಹೊರತು ವೈರಿಗಳ ವಶವಾಗಲಿಲ್ಲ! ನಿನ್ನ ಪುಟ್ಟ ರಾಜ್ಯವು ಬಿಳಿಯರ ಕೈಸೇರಿತು; ಆದರೆ ನೀನು ಅಖಂಡ-ಮುಕ್ತಿಸಾಮ್ರಾಜ್ಯವನ್ನೇ ಸೂರೆಗೊಂಡೆ! ಶತ್ರುಸೇನಾಸಾಗರಸಂತರಣದ ಪರಮಪ್ರಯತ್ನದಲ್ಲಿ ಭವಸಾಗರವನ್ನೇ ದಾಟಿ ಅಮರತ್ವವ ಪಡೆದೆ! ಕೋಟಿ ಕೋಟಿ ದೇಶಭಕ್ತರೆದೆಯ ಶಾಶ್ವತ ಸ್ಫೂರ್ತಿಯಾಗಿ, ಇಲ್ಲಿಯೂ ಅಮರತ್ವವನ್ನೇ ಪಡೆದೆ.

ಸನಾತನ ಧರ್ಮ-ಭಾರತೀಯ ಸಂಸ್ಕೃತಿಗಳ ಪುನರುತ್ಥಾನಗೈದ ಆಚಾರ್ಯ ಶಂಕರರು ಭುವಿಯನ್ನಲಂಕರಿಸಿದುದು 32 ವರುಷ; ಭಾರತಮಾತೆಯ ಮಹತಿಯನ್ನು ಭೂಮಂಡಲದಲ್ಲೆಲ್ಲ ಸಾರಿದ ವೀರ ಸಂನ್ಯಾಸಿಯೆನಿಸಿದ ವಿವೇಕಾನಂದರ ಆಯುಸ್ಸು 38 ವರುಷ; ನಿನ್ನದು ಕೇವಲ 29 ವರುಷ! ಸಾವಿಗಿಂತಲೂ ಕಡೆಯಾದ ಸ್ವಾರ್ಥದ ಬಾಳನ್ನು 92 ವರುಷ ಬಾಳುವುದಕ್ಕಿಂತ ನಿನ್ನ ಹಾಗೆ ಧರ್ಮಕ್ಕಾಗಿ ತುಡಿಯುವ- ದೇಶಕ್ಕಾಗಿ ದುಡಿಯುವ- ಕೊನೆಗೆ ಅದಕ್ಕಾಗಿಯೇ ಮಡಿಯುವ, ಮಡಿಯಾದ ಬಾಳನ್ನು 29 ವರುಷವೇ ಬಾಳಿದರೂ ಅದು ನಿಜವಾಗಿ ಬಾಳಿದಂತೆ!

“ಮೈ ಅಪನೀ ಝಾನ್ಸೀ ನಹೀ ದೂಂಗೀ” – “ಮಾತೃಮೃತ್ತಿಕೆಯನ್ನು ಎಂದೂ ಪರರ ಪಾಲು ಮಾಡೆ!”
ವಿದೇಶಿಯೋಂಕೀ ಗುಲಾಮೀ ಮೇ ರಹಿಬೋ ಅಛ್ಛೋ ನಹೀ ಹೈ, ಉನ ಸೇ ಲಡಕೋ ಅಛ್ಛೋ ಹೈ!“ಬಿಳಿನರಿಗಳ ಊಳಿಗಕ್ಕಿಂತ ಅರಿಗಳೊಡನೆ ಹೋರಾಡಿ ಹರಿಚರಣ ಸೇರುವುದು ಲೇಸು!”

ನಿನ್ನ ಮೇಲಿನೆರಡು ಮಾತುಗಳು ದೇಶಭಕ್ತಿಯ ವೀರವೇದವಾಕ್ಯಗಳು!

‘ನ ಸ ಪುನರಾವರ್ತತೇ’ – ಮುಕ್ತಿಯನ್ನು ಪಡೆದವರು ಮತ್ತೆ ಮಣ್ಣಿಗೆ ಮರಳಲಾರರು ಎಂದು ವೇದಗಳು ಸಾರುವವು;
ಆದರೆ, ಹನ್ನೆರಡು ವರ್ಷದ ಮಗನನ್ನು ಬೆನ್ನಿಗೆ ಕಟ್ಟಿಕೊಂಡು, ಕುದುರೆಯ ಮೇಲೇರಿ ಕುಳಿತು, ಕೋಟೆಯ ಕೊನೆಯಿಂದ ದೇಶಕ್ಕಾಗಿ ಧುಮುಕಬಲ್ಲ ಗಂಡೆದೆಯ ಹೆಂಗಳೆಯರು ಭಾರತಭೂಮಿಗೆ ಇಂದೂ ಬೇಕು, ಎಂದೂ ಬೇಕು!
ತನ್ನ ಜಲಧಾರೆಯಿಂದ ಜನರ ಪಾಪವ ಪರಿಹರಿಸುವ ಗಂಗೆಯಂತೆ, ನಿಶಿತ ಖಡ್ಗಧಾರೆಯಿಂದ ದೇಶದೊಳಗಿನ\ಹೊರಗಿನ ಪಾಪಿಗಳನ್ನು ಸಂಹರಿಸಬಲ್ಲ ಮಣಿಕರ್ಣಿಕೆಯರು ಭಾರತಭೂಮಿಗೆ ಇಂದೂ ಬೇಕು, ಎಂದೂ ಬೇಕು!

ಶರೀರವು ಶತ್ರುಶಸ್ತ್ರಗಳಿಂದ ಕ್ಷತ-ವಿಕ್ಷತವಾಗಿದ್ದರೂ, ರಕ್ತವು ಗಂಗೆಯ ಮಹಾಪೂರದಂತೆ ಹೊರ ಚಿಮ್ಮಿ, ಹರಿದು ಹೋಗುತ್ತಿದ್ದರೂ, ಮನವನ್ನು ಮಹಾಮಂತ್ರದಲ್ಲಿ ಮಗ್ನಗೊಳಿಸಿ, ಮುಕ್ತಿ ಸಾಧಿಸಬಲ್ಲ ಮಹಾಮಂಗಲೆಯರ ಚರಣಧೂಲೀಕಣವು ಭಾರತವಾಸಿಗಳ ಶಿರದ ಶೃಂಗಾರವಾಗಿ ಇಂದೂ ಬೇಕು, ಎಂದೂ ಬೇಕು!

ಭಾರತ ಜನನಿಯ ವರ ವೀರಪುತ್ರಿಯೇ..
ಭವ್ಯ ಭಾರತವು ಮತ್ತೊಮ್ಮೆ ಮೈಕೊಡವಿ ಮೇಲೇಳಲು ಇಳಿದು ಬಾ; ಭಾರತೀಯರ ಜಾಡ್ಯದ ಕಳೆಯ ಕಳೆದು ಬಾ; ವಿದೇಶಗಳ ವೈರಿಗಳು ಈ ದೇಶದಲ್ಲಿ ತಂದು ತುಂಬಿದ ಸಹಸ್ರವತ್ಸರಗಳ ಕೊಳೆಯ ತೊಳೆದು ಬಾ…

ಏಕೆಂದರೆ, ಭಾರತ ಮಾತೆಗೆ ಇಂಥಾ ಮಾತೆಯರು ಇಂದೂ ಬೇಕಂತೆ, ಎಂದೆಂದೂ ಬೇಕಂತೆ..!

~*~

ಕ್ಲಿಷ್ಟ-ಸ್ಪಷ್ಟ:

  • ಉತ್ಕ್ರಮಣ = (ಪ್ರಾಣವು) ಮೇಲಕ್ಕೇರುವ, ಮೃತ್ಯುವಿನ ಸಂದರ್ಭ
  • ಸಮರಧಾರಿಣಿ = ಯುದ್ಧಭೂಮಿ
  • ಶತ್ರುಶಸ್ತ್ರಪೂತ = ಶತ್ರುಗಳ ಶಸ್ತ್ರನಿಂತ ಪವಿತ್ರನಾಗುವುದು, ಎಂದರೆ ಶತ್ರುಗಳ ಶಸ್ತ್ರಗಳಿಂದಾದ ಗಾಯದಿಂದ ಸಿಗುವ ಮರಣ

ಇದು, ಜಗದ್ಗುರುಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾಮಾಜಿಕ ಕಾಳಜಿಯ ಬ್ಲಾಗ್ ಬರಹಗಳ – #ಲೋಕಲೇಖ ದ ಸಂಚಿಕೆ.

ಈವರೆಗಿನ ಎಲ್ಲಾ ಲೋಕ~ಲೇಖಗಳನ್ನು ಓದಲು : ಇಲ್ಲಿದೆ ಕೊಂಡಿ.

Facebook Comments Box