||ಹರೇರಾಮ||

ಮಲಯಮಾರುತದ ರಥವೇರಿ ಬರುವನೊಬ್ಬ ಮಹಾವೀರ..!!

ಕೈಯಲ್ಲೋ, ಕಬ್ಬಿನ ಬಿಲ್ಲು..!!

ಆ ಬಿಲ್ಲಿಗಾದರೋ ದುಂಬಿಗಳ ಸಾಲೇ ಹೆದೆ…!!

ಹೂಡಿದ್ದು ಹೂಬಾಣಗಳು..!!

ಸುಮಬಾಣಗಳು ಸಾವಿರ ಸಾವಿರವೇನಿಲ್ಲ..!!

ಪ್ರಪಂಚ ಗೆಲ್ಲಲು ಕೇವಲ ಪಂಚಬಾಣಗಳು..!!

ಸಹಯೋಗಕ್ಕೆ ವಸಂತನೆಂಬ ಏಕೈಕ ಸೈನಿಕ…!!

 

ಸೃಷ್ಟಿಯ ಸುಕೋಮಲ ಸಂಗತಿಗಳನ್ನೆಲ್ಲ ಸಂಗಾತಿಗಳನ್ನಾಗಿ ಮಾಡಿಕೊಂಡು..

ಸಕಲ ಜೀವಗಳ ಮೇಲೆ ಸಮರಸಾರುವ ಸೋಲರಿಯದ ಸರದಾರ…!!

ಯಾರು ಆ ವೀರ…??

ಅವನೇ ಮಾರ..!!!

 

ಕಾಮನ ಯುಧ್ಧ ಸಾಮಗ್ರಿಗಳಲ್ಲಿ

ನೋಯಿಸುವಂಥದ್ದು- ಸಾಯಿಸುವಂಥದ್ದು ಯಾವುದಾದರೂ ಉಂಟೇ..??

ಮಲಯಮಾರುತವೋ,ವಸಂತವೋ,ಸುಮಗಳೋ-

ಮನಸ್ಸಿಗೆ ಮುದವೀಯುವಂಥವೇ ಆಗಿವೆ..!!!

ಆದರೆ ಅವುಗಳು ಕಾಮನ ಕೈಸೇರಿದರೆ..

ಮಾಡದ ಅನರ್ಥಗಳೇ ಇಲ್ಲ…!!

ಆಕ್ರಮಣಗಳು ಹೊರಗಿನಿಂದ ಬಂದರೆ ಎದುರಿಸಬಹುದು..

ಆದರೆ ಮಾರನೆಂಬ ಶೂರನ ಆಕ್ರಮಣ ನಡೆಯುವುದೇ ಅಂತರಂಗದಲ್ಲಿ..!!!

ಒಳಹೊಕ್ಕು ಹೊಡೆಯುವ ಕೂಟಯೋಧಿ ಆತ..!!!

ಕಣ್ಣಿಗೆ ಕಾಣುವ ಶತ್ರುಗಳನ್ನೆದುರಿಸಬಹುದು..

ಆದರೆ ಕಣ್ಣೊಳಗೆ – ಮನದೊಳಗೆ ನಿಂತು ಯುಧ್ಧಮಾಡುವವನನ್ನು

ಹೇಗೆ ಎದುರಿಸುವುದು..?

ಜಗಳಗಳನ್ನು ಗಂಟಿಕ್ಕುವುದರಲ್ಲಿ ನಾರದರಿಗಿಂತಲೂ ಕುಶಲ…!

ನಾರದರು ಜಗಳಗಂಟಿಕ್ಕಿದರೆ..

ಆತ್ಮಕಲ್ಯಾಣ- ಲೋಕಕಲ್ಯಾಣ..

ಕಾಮನೇನಾದರೂ ಜಗಳ ಗಂಟಿಕ್ಕಿದರೆ..

ಆತ್ಮಹಾನಿ – ಲೋಕಕ್ಷೋಭೆ..!!

ಈತನೊಮ್ಮೆ ಅಂತರಂಗವನ್ನು ಹೊಕ್ಕರೆಸಾಕು..

ಬಹಿರಂಗದಲ್ಲಿ ತಾನೇ ತಾನಾಗಿ ಶತ್ರುಗಳು ನಿರ್ಮಾಣವಾಗುತ್ತಾರೆ..

ಚತುರ್ದಶ ಭುವನದಲ್ಲಣನಾದ ರಾವಣನ ಸರ್ವನಾಶದಲ್ಲಿ

ರಾಮನಿಗಿಂತ ಮೊದಲು ಕಾಮನಲ್ಲವೇ ಪಾತ್ರ ವಹಿಸಿದ್ದು..?

ವಿಶ್ವವಿಜಯಿಯಾದ ರಾವಣನಿಗೆ,

ಆತನನ್ನು ಸದೆಬಡಿಯಬಲ್ಲ ಮಹಾವೀರನಾದ ರಾಮನೊಡನೆ

ಶತ್ರುತ್ವವನ್ನೇರ್ಪಡಿಸಿದ್ದಾರು..?

ಕಾಮನಲ್ಲವೇ..??

ಜಗತ್ತಿನಲ್ಲಿ ನಡೆಯುವ ಎಲ್ಲಾ ಯುಧ್ಧ್ದಗಳಿಗೆ ಕಾಮ ಕಾರಣ..

ಜಗತ್ತಿನಲ್ಲಿ ನಡೆಯುವ ಎಲ್ಲಾ ಅನರ್ಥಗಳಿಗೆ ಕಾಮ ಕಾರಣ..

ಜಗತ್ತಿನಲ್ಲಿ ನಡೆಯುವ ಎಲ್ಲಾ ನೋವುಗಳಿಗೆ ಕಾಮ ಕಾರಣ..

ಜಗತ್ತಿನಲ್ಲಿ ನಡೆಯುವ ಎಲ್ಲಾ ತಪ್ಪುಗಳಿಗೆ   ಕಾಮ ಕಾರಣ..

ಸಲ್ಲದ ಬಯಕೆಗಳೇ ತಾನೇ ಸಮಸ್ಯೆಗಳ ಮೂಲಸೆಲೆ..!!!

ಕಾಮನನ್ನು ಸೀಮಿತ ಅರ್ಥದಲ್ಲಿ ನೋಡಿ ನಾವು ಮೋಸಹೋಗಬಾರದು..!!

ಆತ ಬಹುರೂಪಿ..

ವಿಶ್ವರೂಪಿ..

ಬದುಕಿನ ಬಯಕೆಗಳೆಲ್ಲವೂ ಅವನ ರೂಪವೇ..

ಕಾಮದಿಂದಲೇ ಶುಭಾಶುಭ ಕರ್ಮಗಳುಂಟಾಗುವುದು..

ಶುಭಾಶುಭಕರ್ಮಗಳಿಂದಲೇ ಪಾಪ ಪುಣ್ಯಗಳು..

ಪಾಪ – ಪುಣ್ಯಗಳನ್ನು ಅನುಭವಿಸಿ ತೀರಿಸಲೆಂದೇ ಸುಖ – ದುಃಖಗಳು..

ಜೀವಿ ಸುಖ – ದುಃಖಗಳನ್ನು ಅನುಭವಿಸಲೆಂದೇ ಶರೀರಸೃಷ್ಟಿ – ಲೋಕಸೃಷ್ಟಿ..!!

ಹೀಗೆ ಭವಬಂಧನದ ಮೂಲಕಾರಣವೇ ಕಾಮ…

ಕರ್ಮಬಂಧನವೇ ಭವಬಂಧನ..

ಕರ್ಮಗಳನ್ನೇರ್ಪಡಿಸುವವನೇ ಕಾಮನೆಂದಮೇಲೆ ಹೇಳಲಿನ್ನೇನಿದೆ..???

ಕಾಮವೆಂದರೆ ಬಯಸುವುದು..

ಬಯಕೆ ನೆರವೇರದಿದ್ದರೆ ಬರುವುದೇ ಕ್ರೋಧ..

ನೆರವೇರಿದರೆ ಬರುವವು ಲೋಭ, ಮೋಹ, ಮದಗಳು..

ನಾವು ಬಯಸುವ ವಸ್ತು ಇನ್ನೊಬ್ಬನಲ್ಲಿದ್ದಾಗ ಉಂಟಾಗುವುದೇ ಮತ್ಸರ…

ಹೀಗೆ ಕ್ರೋಧ, ಲೋಭ, ಮೋಹ, ಮದ , ಮತ್ಸರಗಳ ಮೂಲಕಾರಣ ಕಾಮ..

ಕಾಮನನ್ನು ಗೆದ್ದವನು ಭೂಮಿಯನ್ನು ಗೆಲ್ಲುವನು..!

ಕಾಮನನ್ನು ಗೆದ್ದವನು ಸ್ವರ್ಗವನ್ನು ಗೆಲ್ಲುವನು..!

ಕಾಮವನ್ನು ಗೆದ್ದವನು ಮೋಕ್ಷವನ್ನು ಗೆಲ್ಲುವನು..!

ಕಾಮನನ್ನು ಗೆದ್ದವನು ಬದುಕನ್ನೇ ಗೆಲ್ಲುವನು..!!

ಕಾಮನ ದಾಸನಾದವನು ಲೋಕಕ್ಕೇ ದಾಸನಾಗುವನು..!

ವಿಶ್ವವನ್ನೇ ಗೆದ್ದು ಕಾಮನಿಗೆ ಸೋತವನು ಸರ್ವನಾಶವನ್ನೇ ಹೊಂದುವನು..! (ಉದಾ:- ರಾವಣ)..

ಕಾಮವಿಜಯವೆಂಬುದು ಜೀವನ ವಿಜಯದ ಸೂತ್ರ..

ಇದೊಂದು ಕೀಲಿಕೈ ಇದ್ದರೆ ತೆರೆಯಲಾರದ ಬೀಗಗಳೇ ಇಲ್ಲ..!!!

ಇದೆಲ್ಲಸರಿ, ಆದರೆ ಕಾಮನನ್ನು ಗೆಲ್ಲುವ ಬಗೆ ಎಂತು….???

ಆ ಮುಕ್ಕಣ್ಣನೇ ಬಲ್ಲ..!!

ಏಕೆಂದರೆ ಕಾಮನನ್ನು ಸುಡಲು ಸಾಧ್ಯವಿರುವುದು ಮೂರನೆಯ ಕಣ್ಣಿಗೆ ಮಾತ್ರ..!!

ದೇವತೆಗಳು ಮುಕ್ಕೋಟಿ ಇದ್ದರೂ ಮುಕ್ಕಣ್ಣನೊಬ್ಬನೇ ತಾನೇ…?

ಒಮ್ಮೆ,

ಜಗದ ಜೀವರುಗಳು ಮತ್ತು ದೇವರುಗಳನ್ನೆಲ್ಲ ಗೆದ್ದ ಕಾಮನಿಗೆ..

ಮಹಾದೇವನನ್ನು ಗೆಲ್ಲುವ ಕಾಮನೆ ಉಂಟಾಯಿತು..

ಶಿವ ಪಾರ್ವತಿಯರ ವಿವಾಹಕ್ಕಿಂತ ಪೂರ್ವದ ಸಮಯವದು..

ಪಾವನ ಹಿಮಪರ್ವತದಲ್ಲಿ

ಪರಮವಿರಾಗಿಯಾಗಿ ತಪೋಮಗ್ನನಾಗಿದ್ದ ಪರಮಶಿವನನ್ನು

ಪಾರ್ವತಿಯು ಪರಿಚರಿಸುತ್ತಿದ್ದ ಸಂದರ್ಭ..

ಕಾಮಕ್ಕೆ ಮದವೇರಿದರೆ ಆಗುವುದೇನು..?

ದೀಪಜ್ವಾಲೆಯೆಡೆಗೆ ಧಾವಿಸುವ ಪತಂಗದಂತೆ..

ದೇವದೇವನ ಮೇಲೆ ಕಾಮನು ಆಕ್ರಮಣ ನಡೆಸಿದ..

ಅತ ಪ್ರಯೋಗಿಸಿದ ಅರವಿಂದ,ಅಶೋಕ,

ಚೂತ ಮತ್ತು ನವಮಲ್ಲಿಕಾ ಎಂಬ ನಾಲ್ಕುಬಾಣಗಳು

ಶಿವನ ಮೇಲೆ ಯಾವ ಪರಿಣಾಮವನ್ನೂ ಉಂಟುಮಾಡಲಿಲ್ಲ..

ಕೊನೆಯದಾಗಿ ತನ್ನಲ್ಲುಳಿದಿದ್ದ ಕೊನೆಯ ಬಾಣವಾದ ನೀಲೋತ್ಪಲದಲ್ಲಿ

ತನ್ನ ಸರ್ವಶಕ್ತಿಯನ್ನೂ ಬೆರೆಸಿ ಶಿವನ ಮೇಲೆ ಪ್ರಯೋಗಿಸಿದ..

ಶಾಂತ – ಗಂಭೀರ ಮಹಾಸಾಗರದಲ್ಲಿಯಾದರೂ …
ಉದಯಚಂದ್ರನ ಮುಖ ನೋಡಿದಾಗ ತರಂಗಗಳೇರ್ಪಡುವಂತೆ..

ಒಂದೇ ಒಂದು ಕ್ಷಣ ಸದಾಶಿವನ ನಿರ್ವಿಕಾರವಾದ ಅಂತರಂಗದಲ್ಲಿಯೂ ಕೊಂಚ ಕದಲಿಕೆ ಉಂಟಾಯಿತು..

ಹರನ ಮನ-ನಯನಗಳು ಪಾರ್ವತಿಯೆಡೆಗೆ ಹರಿದವು..

ಪೂರ್ವೋತ್ತರ ಕ್ಷಣಗಳು ಅದೆಷ್ಟು ಭಿನ್ನವಾಗಬಹುದೆಂದರೆ,

ಪೂರ್ವಕ್ಷಣದಲ್ಲಿ ಪರಮೇಶ್ವರನ ಸೂರ್ಯ – ಚಂದ್ರ ನೇತ್ರಗಳಿಂದ ಪ್ರೇಮದ ಬೆಳಕು ಪಾರ್ವತಿಯೆಡೆಗೆ ಹರಿದರೆ ..

ಉತ್ತರ ಕ್ಷಣದಲ್ಲಿ ಹರನ ಅಗ್ನಿನೇತ್ರದಿಂದ ಹೊರಹೊಮ್ಮಿದ ಜ್ವಾಲೆ ಮಾರನನ್ನು ಸುಟ್ಟುರುಹಿತು..!!!!

ಶಿವನದು ಮಾತ್ರವಲ್ಲ ಪಾರ್ವತಿಯ ಮೂರನೆಯ ಕಣ್ಣೂ ಕೂಡ ತೆರೆಯಿತೆನ್ನಬೇಕು..!!

ಅಂದಿನವರೆಗೆ ತನ್ನ ಬಾಹ್ಯಸೌಂದರ್ಯದಿಂದಲೇ ಶಿವನನ್ನು ಒಲಿಸಿಕೊಳ್ಳುವೆನೆಂಬ

ಪಾರ್ವತಿಯ ಹಮ್ಮು ಕರಗಿತು…

ಶಿವನೊಲಿಯುವುದು ಅಂತರಂಗದ ಸೌಂದರ್ಯಕ್ಕೆ ಮಾತ್ರವೆಂಬುದು ನಿಶ್ಚಯವಾಯಿತು..

ಅಂತರಂಗ ಸುಂದರವಾಗುವುದು ತಪಸ್ಸಿನಿಂದ..

ಆದ್ದರಿಂದ ಶಿವನಿಗಿಂತಲೂ ಘೋರತರ ತಪಸ್ಸಿಗೆ ಪಾರ್ವತಿ ಮನ ಮಾಡಿದಳು..

ಶಿವನನ್ನು ಗೆದ್ದುಕೊಂಡಳು ಕೂಡ..

ಶಿವನ ಈ ಆಟದಲ್ಲಿ ಜೀವಿಗಳಿಗೊಂದು ಪಾಠವಿದೆ..

ಮೂರನೆಯ ಕಣ್ಣುತೆರೆದು ಕಾಮನನ್ನು ಗೆಲ್ಲು..

ಕಾಮನನ್ನು ಗೆದ್ದು ಜೀವನವನ್ನೇ ಗೆಲ್ಲು..

ಬ್ರಹ್ಮಾಂಡವನ್ನೇ ಗೆಲ್ಲು..

ಶಿವಕೊಟ್ಟ ಜೀವನ ಸೂತ್ರವಿದು..

जहां काम है वहां राम नही ||

जहां राम है वहां काम नही ||

(ಕಾಮನಿರುವಲ್ಲಿ ರಾಮನಿಲ್ಲ ರಾಮನಿರುವಲ್ಲಿ ಕಾಮನಿಲ್ಲ..!)

ಮೂರನೆಯಕಣ್ಣು ತೆರೆಯುವವರೆಗೆ ಕಾಮರಾಜ್ಯ ತೆರೆದರೆ ಮತ್ತೆ ರಾಮರಾಜ್ಯ..!

ಕಾಮನಿಗೆ ಎರಡು ರೂಪಗಳು..

ಕಾಮ,ಕ್ರೋಧ, ಲೋಭ,ಮೋಹ,ಮದ, ಮತ್ಸರಗಳೆಂಬ ಷಡ್ವೈರಿಗಳ ನಡುವೆ ಇರುವ ಕಾಮನ ರೂಪ ನಮಗೆ ಅಹಿತಕರವಾದದ್ದು..

ಧರ್ಮ ,ಅರ್ಥ ,ಕಾಮ, ಮೋಕ್ಷಗಳೆಂಬ ನಾಲ್ಕು ಪುರುಷಾರ್ಥಗಳನಡುವೆ ಇರುವ ಕಾಮನರೂಪ ಜೀವಕ್ಕೆ ಹಿತಕರವಾದದ್ದು..

ಮೂರನೆಯ ಕಣ್ಣುತೆರೆದರೆ ಕಾಮನಿಗೂ ಕೆಡುಕೇನೂ ಆಗುವುದಿಲ್ಲ..

ಷಡ್ವೈರಿಗಳನಡುವಿನ ಅವನ ದುಷ್ಟರೂಪ ಸುಟ್ಟು

ಪುರುಷಾರ್ಥಗಳ ನಡುವಿನ ಅವನ ಸಾತ್ವಿಕ ರೂಪ ಪ್ರಕಟವಾಗುತ್ತದೆ..!!

ಕಾಮವು ಸರ್ವಥಾ ತ್ಯಾಜ್ಯವೇನೂ ಅಲ್ಲ..

ಅದರ ವಿಕೃತರೂಪ ಮಾತ್ರವೇ ತ್ಯಾಜ್ಯ..

|| ಧರ್ಮಾವಿರುಧ್ಧೋ ಭೂತೇಷು ಕಾಮೋಸ್ಮಿ ಭರತರ್ಷಭ ||

ಧರ್ಮಕ್ಕೆ ವಿರುದ್ಧವಲ್ಲದ ಕಾಮವು ನನ್ನ ಸ್ವರೂಪವೆಂದೇ ತಿಳಿ – ಗೀತೆ

ಕಾಮಕ್ಕೆ ಧರ್ಮಕ್ಕೆ ವಿರುದ್ಧವಲ್ಲದ ಸ್ವರೂಪ ಬರಬೇಕೆಂದರೆ

ಮೂರನೆಯ ಕಣ್ಣು ತೆರೆಯಬೇಕು..

ಶಿವನ ಹಣೆಯಲ್ಲಿ ಮೂರನೆಯ ಕಣ್ಣು ಮತ್ತು ಭಸ್ಮ ಎರಡನ್ನೂ ಜೊತೆಯಲ್ಲಿ ಕಾಣುತ್ತೇವೆ..

|| ಜ್ಞಾನಾಗ್ನಿಃ ಸರ್ವ ಕರ್ಮಾಣಿ ಭಸ್ಮಸಾತ್ ಕುರುತೇ || – ಗೀತೆ

ಜ್ಞಾನವೆಂಬ ಅಗ್ನಿನೇತ್ರ ತೆರೆದುಕೊಳ್ಳುತ್ತಿದ್ದಂತೆಯೇ,
ಜನ್ಮ ಜನ್ಮಾಂತರದ ಕರ್ಮಗಳೆಲ್ಲವೂ ಭಸ್ಮವಾಗಿಬಿಡುತ್ತವೆ..!

ಭಸ್ಮವೆಂಬುದು ಶರೀರದ ಕೊನೆಯರೂಪ..

ಶರೀರಕ್ಕೆ ವಿಕಾರವಿದೆ.. ಅದು ಬದಲಾಗುತ್ತಿರುತ್ತದೆ..

ಆದರೆ ಭಸ್ಮಕ್ಕೆ ವಿಕಾರವಿಲ್ಲ..!

ಪರಮಶಿವ ತನ್ನ ಜ್ಞಾನ ನೇತ್ರದಿಂದ ವಿಕಾರಸಂಸಾರವನ್ನೆಲ್ಲ ಸುಟ್ಟು ನಿರ್ವಿಕಾರ ಭಸ್ಮವನ್ನು ಜ್ಞಾನರಾಜ್ಯವಾದ ಹಣೆಯಲ್ಲಿ ಬಳಿದುಕೊಂಡಿದ್ದಾನೆ..!!

ಶಿವನ ಹಣೆಯ ಮೇಲಿನ ಭಸ್ಮ ಕಾಮ ವಿಜಯದ ಪ್ರತೀಕ..

ನಮ್ಮ ಹಣೆಯ ಮೇಲಿನ ಭಸ್ಮ ಕಾಮನನ್ನು ಜಯಿಸಲು ನಾವು ಮಾಡಬೇಕಾಗಿರುವ ಪ್ರಯತ್ನದ ಪ್ರತೀಕ..

 
|| ಪ್ರಶ್ನೆ ||

ನಯನಯುಗದಿಂ ಜಗವ ಪೊರೆದು, ನಿಟಿಲಾಕ್ಷಿಯಿಂ |

ಲಯವಡಿಸುವುದದೇನು ಶಿವಯೋಗಲೀಲೆ..? ||

ಜಯಿಸಿಮದನನ ಬಳಿಕ ತನ್ನೊಡಲೊಳ್ ಉಮೆಯನ – |

ನ್ವಯಿಸಿಕೊಂಡಿಹುದೇನು..? – ಮಂಕುತಿಮ್ಮ ||

 
|| ಉತ್ತರ ||

ಮಾರನಂ ದಂಡಿಸಿರೆ ಗೌರಿಯಿಂ ಭಯವೇನು..? |

ಚಾರುಸಹಕಾರಿಯವಳೆಂದು ಶಿವನೊಲಿದನ್ ||

ಮೀರೆ ಮೋಹವನು ಸಂಸಾರದಿಂ ಭಯವೇನು..?

ದಾರಿಕೆಳೆಯದು ನಿನಗೆ ಮಂಕುತಿಮ್ಮ.. ||

ಕಾಮನನ್ನು ಗೆದ್ದಮೇಲೆ ಜಗದಲಿನ್ಯಾತರ ಭಯ..?

ವಿಶ್ವಬ್ರಹ್ಮಾಂಡವೇ ಅವನ ಮನೆ..

ಜೀವಕೋಟಿಗಳೆಲ್ಲರೂ ಅವನ ಮಿತ್ರರು..!

ವಿಶ್ವಾಮಿತ್ರನೆಂದರೆ ಅವನೇ ತಾನೆ…???!!!

ರಾಮಬಾಣ:- ಕಾಮನನ್ನು ಗೆಲ್ಲಬೇಕಾಗಿದೆಯೇ ಹೊರತು ಕೊಲ್ಲಬೇಕಾಗಿಲ್ಲ..!

||ಹರೇರಾಮ||

Facebook Comments