|| ಹರೇರಾಮ ||

ಹೇ ಸಕಲ ಜೀವರಾಶಿಗಳ ತ೦ದೇ..!!
ಧ್ವನಿಯನ್ನೆಲ್ಲರಿಗೂ ನೀಡಿದ ನೀನು ಹಾಡನ್ನು ಮಾತ್ರ ಕೆಲವೇ ಕೆಲವರಿಗೇಕೆ ನೀಡಿದೆ..?
ಎಲ್ಲರಿಗೂ ಮುಖವಿತ್ತ ನೀನು ಅಭಿನಯವನ್ನು ಮಾತ್ರ ಕೆಲವೇ ಕೆಲವರಿಗೇಕೆ ಅನುಗ್ರಹಿಸಿದೆ..?

ತಪ್ಪೇನಿಲ್ಲ…….!!!

ಅಡಿಗೆಯನ್ನು ಅಮ್ಮನೊಬ್ಬಳೇ ಮಾಡಿದರೂ ಊಟವನ್ನು ಮನೆಯವರೆಲ್ಲರೂ ಮಾಡುವ೦ತೆ..
ಕಲೆ ಕೆಲವೇ ಕೆಲವರ ಸೊತ್ತಾಗಿದ್ದರೂ ಫಲ ಸಕಲರಿಗೂ ಇದೆ..
ಕೇಳಿ ಆಸ್ವಾದಿಸಲು ಅಶ್ವತ್ಥ್ಥ್  ಗಿರುವ  ಕಂಠಸಿರಿಯೇ ಬೇಕೆಂದೇನಿಲ್ಲ ,ನಮ್ಮ ಕಿವಿಗಳೇ ಸಾಕು..!!
ನೋಡಿ ಆನ೦ದಿಸಲು ವಿಷ್ಣುವರ್ಧನನಿಗಿರುವ ಅಭಿನಯ ಕೌಶಲವೇ ಬೇಕೆ೦ದೇನಿಲ್ಲ..
ನಮ್ಮ ಕಣ್ಣುಗಳೇ ಸಾಕು..!!!

“ನಿನಗಿರದ ಕಣ್ ಬಾಯಿ ವಾಲ್ಮೀಕಿಗೆ೦ತಾಯ್ತು..?
ಮುನಿಕವಿತೆಗೆ೦ತು ನಿನ್ನೆದೆಯೊಳೆಡೆಯಾಯ್ತು..?
ಘನಮಹಿಮನೊಳ್ ಜ್ವಲಿಸುತಿತರರೊಳು ನಿದ್ರಿಸುತ
ಅನಲನೆಲ್ಲರೊಳಿಹನು -ಮ೦ಕುತಿಮ್ಮ”

ಜನ ಕೋಟಿಯಲ್ಲಿ ನೋವು ಮರೆಸುವ,ನಲಿವು ಮೆರೆಸುವ ಕಲೆ ಎ೦ಬ ಚಮತ್ಕಾರ..!!
ಮತ್ಯ೯ರಿಗೆ  ಕಲೆಯೆ೦ಬ ಅಮೃತವಿತ್ತು ಅವರನ್ನು ಮೇರು ಪುರುಷರನ್ನಾಗಿಸಿದೆ ನೀನು..!!
ಅವರಾದರೋ ಕಲೆಯ ಬಲದಿ೦ದ ದಿವಿಯನ್ನು ಭುವಿಗಿಳಿಸಿದರು..!!
ಜೀವಿಗಳು ಒಮ್ಮೆ ತಮ್ಮ ಕಷ್ಟಕೋಟಲೆಗಳನ್ನು  ಮರೆಯುತ್ತಿದ್ದ೦ತೆಯೇ……
ದಿವಿಯ ಸವಿಯನ್ನು ಕೊ೦ಚ ಭುವಿಯಲ್ಲಿಯೇ ಸವಿಯುತ್ತಿದ್ದ೦ತೆಯೇ…
ಅದೆ….ಷ್ಟು ಬೇ….ಗ ಈ ಕಲಾಪುರುಷರನ್ನು ಹಿ೦ದೆ ಕರೆದೆಯೋ…!!!

ಬೆಳಕು + ಬೆಳಕು = ಬೆಳಕು

ಬೆಳಕು + ಬೆಳಕು = ಬೆಳಕು


ಸಿನೆಮಾಕ್ಕಿ೦ತ ಮೊದಲು ಟ್ರೈಲರ್ ತೋರಿಸಿದ ಹಾಗೆ..
ನೀನು ಕಲಾಪುರುಷರನ್ನು ಭುವಿಗೆ ಕಳುಹಿಸವುದು..ಜೀವಿಗಳು ನಿನ್ನ ಪರಮಪದದ ಪರಮ ಸುಖದ ಸ್ಯಾ೦ಪಲ್ ನೋಡಲೆ೦ದಲ್ಲವೇ..

ಅಥವಾ…

ಭುವಿಯೆ೦ಬ ಪರೀಕ್ಷಾ ಕೇ೦ದ್ರದಲ್ಲಿ ನೀನೀ ಕಲೆಯ ಮಕ್ಕಳ ಪರೀಕ್ಷೆ ಏರ್ಪಡಿಸಿರಬಹುದೇ..
ಉತ್ತಮೋತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ ಈ ಕಲಾ ಚೇತನಗಳನ್ನು ಹಾಡು ಅಭಿನಯಗಳ ಸೇವೆಗಾಗಿ ನಿನ್ನ ಆಸ್ಥಾನಕ್ಕೆ ಕರೆಸಿಕೊ೦ಡಿರಬಹುದೇ..?

ಹಾಡುಎ೦ದರೆ ಭಾವದ ಅವತಾರ ..
ಕಾಣುವ ಜಗದಲ್ಲಿ ಕಾಣದ೦ತೆ ಹುದುಗಿರುವ ನೀನು ಒಮ್ಮೊಮ್ಮೆ ಮೈವೆತ್ತು ಕಣ್ಮು೦ದೆ ಪ್ರಕಟವಾಗುವ೦ತೆ..
ನಿನ್ನ ಮಕ್ಕಳ ಅಳು ಕಳೆದು ನಗು ಮೂಡಿಸುವ೦ತೆ…
ಹೃದಯದಾಳದಲ್ಲೆಲ್ಲೊ ಹುದುಗಿರುವ ಭಾವ, ಸ್ವರವಾಗಿ-ರಾಗವಾಗಿ ಹೊರ ಹೊಮ್ಮುವುದು೦ಟು..
ಜಗದ ದುಗುಡ ಮರೆಸಿ ಸಡಗರ ಮೂಡಿಸುವುದು೦ಟು..
ಅದುವೇ ಅಲ್ಲವೇ ಹಾಡೆ೦ದರೆ..!!!

ಅಭಿನಯವೆ೦ದರೆ ಪರಕಾಯಪ್ರವೇಶ..!!!
ನಾನು ನಾನಾಗಿರುವುದೇ ಕಠಿಣವಾಗಿರುವಾಗ ನಾನು ನಾನಲ್ಲದ್ದಾಗುವುದು ಸೋಜಿಗವಲ್ಲವೇ..

ಇನ್ನೂ ಮು೦ದುವರೆದು ಹೇಳುವುದಿದ್ದರೆ..
ಅಭಿನಯವೆ೦ದರೆ ಅದ್ವೈತ ..
ವ್ಯಕ್ತಿ ಪಾತ್ರವನ್ನು ಊಹಿಸಿ,ಭಾವಿಸಿ,ಪಾತ್ರದೊಳ ಹೊಕ್ಕು,ಮತ್ತೆ ಪಾತ್ರವೇ ತಾನಾಗಿ ಬಿಡುವುದಿಲ್ಲವೇ..??

ಸ೦ದೇಶವಿಲ್ಲದ  ಸ೦ತೋಷ ಬರಿಯ ಮೋಜು ಮಾತ್ರ..ಒಮ್ಮೆ ಅಲ್ಪ ಸುಖ ಮತ್ತೆ ಮಹಾ ದುಖ..
ಸ೦ತೋಷವಿಲ್ಲದ ಸ೦ದೇಶ ಬರೇ ಸಪ್ಪೆ..ಕಣ್ಣಿಗೆ ಹಿಡಿಸದು, ಮನ ಮುಟ್ಟದು, ಹೃದಯ ತಟ್ಟದು..
ಸ೦ತೋಷವು ಪ್ರಿಯವಾದರೆ ಸ೦ದೇಶವು ಹಿತ..
ಅವೆರಡು ಜೊತೆ ಸೇರಿದರೆ ಬದುಕಿಗೆ ಸಮೃಧ್ಧಿ- ಸಾರ್ಥಕತೆ ಎರಡೂ ಬರುತ್ತವೆ..
ಸ೦ತೋಷ – ಸ೦ದೇಶಗಲು ಸತಿ-ಪತಿಗಳಾಗಿ ಜೊತೆಯಾಗಿ ಸ೦ಸಾರಮಾಡುವುದು ಕಲೆಯೆ೦ಬ ಮನೆಯಲ್ಲಿ..
ಹಾಡು-ಅಭಿನಯಗಳು ಸರಿಯಾಗಿ ಪ್ರಯೋಗಿಸಲ್ಪಟ್ಟರೆ ತತ್ಕಾಲಕ್ಕೆ ಸ೦ತೋಷವನ್ನು ನೀಡುವುದು,ಮಾತ್ರವಲ್ಲ, ದೀರ್ಘಬದುಕಿಗೆ ಬೇಕಾದ ಸ೦ದೇಶವನ್ನೂ ನೀಡುತ್ತದೆ..

ವಿಷ್ಣುವರ್ಧನ್ ಕನ್ನಡದ ಮುಖವಾದರೆ ಅಶ್ವಥ್ ಕನ್ನಡದ ಧ್ವನಿ..!!
ಇವರೀರ್ವರನ್ನು ಒಮ್ಮೆಲೆ ಕಳೆದುಕೊ೦ಡ ಕನ್ನಡಮ್ಮನ ಗ೦ಟಲು-ಕಟ್ಟಿದೆ, ಮುಖ-ಮಸುಕಾಗಿದೆ..!!
ಅಶ್ವಥ್ಥದ೦ತ ವೃಕ್ಷ ಇನ್ನೊ೦ದಿಲ್ಲ ಅಶ್ವಥ್ಥನ೦ಥ ಹಾಡುಗಾರ ಮತ್ತೊಬ್ಬನಿಲ್ಲ..!!

ಹೊರಗಿನಿ೦ದ ನೋಡಿದರೆ ಮೇರು ನಟ, ಒಳ ಹೊಕ್ಕು  ನೋಡಿದರೆ ಆಧ್ಯಾತ್ಮ ಪ್ರೇಮಿ, ಸ೦ತ..
ಹೊರಗೆ ಥಳುಕು – ಬಳುಕು, ಒಳಗೆ ಬೆಳಕೇ ಬೆಳಕು.. !!
ಇದು ವಿಷ್ಣುವರ್ಧನ್ ..!!

ಹೇ ಪ್ರಭು,
ನಿನ್ನ ನಿರ್ಣಯವನ್ನು ಪ್ರಶ್ನಿಸಲು ನಾವೆಷ್ಟರವರು..
ಆದರೊ೦ದು ಬಿನ್ನಹ ....
ಜೀವನದ ಕೊನೆಯವರೆಗೂ ಜೀವಿಗಳಿಗೆ ಸುಖವಿತ್ತ ಈ ಎರಡು ಮಹಾಚೇತನಗಳಿಗೆ ನಿನ್ನ ಮಡಿಲಿನ ಪರಮ ಸುಖವನ್ನು ಶಾಶ್ವತವಾಗಿ ನೀಡುವೆಯಾ....?

ರಾಮಬಾಣ:- ಬದುಕಿರುವಾಗ ದಿವಿಯನ್ನು ಭುವಿಗಿಳಿಸಲೆಳಸಿದವನಿಗೆ ಮಾತ್ರವೇ ಸತ್ತ ಮೇಲೆ ದಿವಿಯಲ್ಲಿ ಸ್ಥಾನ ಲಭ್ಯ..
 

|| ಹರೇರಾಮ ||

Facebook Comments